Saturday, October 30, 2010

ಮನದ ಅ೦ಗಳದಿ.................೧೫.`ಅನ್ನ'

ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯೂ ಬದುಕುಳಿಯಲು ಬೇಕಾದ ಪ್ರಾಥಮಿಕ ಅಗತ್ಯಗಳಲ್ಲಿ ’ಅನ್ನ’ ಎಂದರೆ ಆಹಾರವೂ ಒಂದು. ಸಾಮಾನ್ಯವಾಗಿ ಸಸ್ಯಗಳಾದರೆ ಪ್ರಕೃತಿಯಲ್ಲಿನ ಅಜೈವಿಕಗಳನ್ನೇ ಬಳಸಿಕೊಂಡು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ. ಸಸ್ಯಗಳನ್ನೋ ಅಥವಾ ತಮಗಿಂತಾ ದುರ್ಬಲ ಪ್ರಾಣಿಗಳನ್ನೋ ಅವಲಂಭಿಸಬೇಕಾದದ್ದು ಪ್ರಾಣಿಜಗತ್ತಿನ ಅನಿವಾರ್ಯವಾಗಿದೆ. ಎಷ್ಟೋಸಾರಿ ನಾವೂ ಸಸ್ಯಗಳಂತೆಯೇ ಸ್ವಪರಿಪೋಷಕಗಳಾಗಿದ್ದರೆ ಆಹಾರಕ್ಕಾಗಿ ಇತರ ಜೀವಿಗಳನ್ನು ಹಿಂಸಿಸುವುದು ತಪ್ಪುತ್ತಿತ್ತಲ್ಲಾ ಎನಿಸುವುದೂ ಇದೆ. ಸುಪ್ರಸಿದ್ಧ ಸಾಹಿತಿಯಾದ ಖಲೀಲ್ ಗಿಬ್ರಾನ್ ಅವರ ‘ಪ್ರವಾದಿ’ಯಲ್ಲಿ ‘ಮಹಾ ಪ್ರಸ್ಥಾನ’ಕ್ಕೆ ಹೊರಟ ಪ್ರವಾದಿಯಾದ ಆಲ್ ಮುಸ್ತಾಫಾನನ್ನು ಆರ್ಸಿಲಿಸ್ ಜನಗಳು ಜನನ-ಮರಣದ ನಡುವಿನ ಈ ಜೀವನದ ದರ್ಶನದ ಬಗ್ಗೆ ನಿನ್ನ ಅನುಭವವನ್ನುನಮಗೆ ತಿಳಿಸು ಎಂದು ಕೇಳುತ್ತಾರೆ......
‘ಅನ್ನಪಾನ’ದ ಬಗ್ಗೆ ಹೇಳಿ ಎಂದು ಊಟದ ಮನೆಯನ್ನು ಇಟ್ಟಂಥ ಒಬ್ಬ ವೃದ್ದ ಕೇಳಿದಾಗ ಹೀಗೆ ಹೇಳುತ್ತಾನೆ,
‘ವಾಯು ಜೀವಿಲತೆಯಂತೆ ನಿಮಗೂ ಭೂಗಂಧವನ್ನೀಂಟಿ ಮತ್ತು ಬೆಳಕ ಕದಿರುಗಳನ್ನು ಸೇವಿಸಿ ಬದುಕ ಬರುವಂತಿದ್ದರೆ ಎಷ್ಟು ಚೆನ್ನಾಗುತ್ತಿತ್ತು.
ಆದರೆ ತಿನ್ನಲು ಹಿಂಸೆ ಮಾಡುವ ಹೊರತು ಮತ್ತು ಕುಡಿಯಲು ಎಳೆಗರುವನ್ನು ತಾಯ ಮೊಲೆ ಬಿಡಿಸಿ ಹಿಂಡಿಕೊಳ್ಳುವ ಹೊರತು ಗತ್ಯಂತರವಿಲ್ಲ. ಆದುದರಿಂದ ನಿಮ್ಮ ಅನ್ನಪಾನಗಳು ಯಜ್ಞಾರ್ಥವಾಗಿ ಆಗಲಿ.
ನಿಮ್ಮ ಅಡುಗೆ ಮನೆ ಯಜ್ಞವೇದಿಕೆಯಾಗಲಿ. ಗಿರಿವನಗಳ ಶುದ್ಧ ಹಾಗೂ ನಿಷ್ಪಾಪ ಪ್ರಾಣಿಗಳ ಹವನವು ಮಾನವನಲ್ಲಿಯ ಇನ್ನೂ ಹೆಚ್ಚಿನ ಶುದ್ಧ ಮತ್ತು ಹೆಚ್ಚಿನ ನಿಷ್ಪಾಪ ತತ್ವದ ಬಗ್ಗೆ ಮಾತ್ರ ಹವನಿಸಲಿ.....
ಒಂದು ಹಣ್ಣನ್ನು ನೀವು ಬಾಯಿಯಲ್ಲಿ ಕಚ್ಚಿ ರಸ ಹೀರುತ್ತಿರುವಾಗ ನಿಮ್ಮ ಮನದಲ್ಲಿಯೇ ಅದಕ್ಕೆ ಹೀಗೆನ್ನಿರಿ;
ನಿನ್ನ ಬೀಜವು ನನ್ನ ದೇಹದಲ್ಲಿ ಜೀವಿಸುವುದು,
ನಿನ್ನ ನಾಳಿನ ಮೊಗ್ಗುಗಳು ನನ್ನ ಹೃದಯದಲ್ಲಿ ಅರಳುವುವು.
ನಿನ್ನ ಸುಗಂಧವು ನನ್ನ ಉಸಿರಾಗುವುದು,
ಹಾಗೂ ಎಲ್ಲ ಋತುಗಳಲ್ಲಿಯೂ ನಾವಿಬ್ಬರೂ ಕೂಡಿಯೇ ಆನಂದಿಸುವೆವು........
ಶರತ್ಕಾಲದಲ್ಲಿ ನಿಮ್ಮ ದ್ರಾಕ್ಷಾವನದಿಂದ ದ್ರಾಕ್ಷಿಹಣ್ಣುಗಳನ್ನು ಮಧುಚಕ್ರದಲ್ಲಿ ಹಾಕಿ ಹಿಂಡಬೇಕಾದಾಗ ನಿಮ್ಮ ಮನದಲ್ಲಿಯೇ ಅದಕ್ಕೆ ಹೀಗೆನ್ನಿರಿ;
ನಾನೂ ಒಂದು ದ್ರಾಕ್ಷಾವನವೇ, ನನ್ನ ಫಲಗಳೂ ಮಧುಚಕ್ರಕ್ಕಾಗಿ ಶೇಕರಿಸಲ್ಪಡುವುವು. ಹೊಸ ಮಧುವಿನಂತೆ ನಾನೂ ಚಿರಂತನ ಪಾತ್ರೆಗಳಲ್ಲಿ ಇಡಲ್ಪಡುವೆನು. ಛಳಿಗಾಲದಲ್ಲಿ ಮಧುಪಾತ್ರೆಯನ್ನು ಬಗ್ಗಿಸಿ ನೀವು ಮಧುವನ್ನುತುಂಬಿಕೊಳ್ಳುತ್ತಿರುವಾಗ ಪ್ರತಿಯೊಂದು ಬಟ್ಟಲು ಮಧುವಿಗೂ ನಿಮ್ಮ ಹೃದಯದಲ್ಲಿ ಒಂದೊಂದು ಹಾಡು ಇರಲಿ. ಆ ಹಾಡಿನಲ್ಲಿ ಶಿಶಿರ ಋತುವಿನ ದಿನಗಳ, ದ್ರಾಕ್ಷಾವನದ ಹಾಗೂ ದ್ರಾಕ್ಷಾರಸ ಚಕ್ರದ ನೆನಹು ನಿನದಿಸುತ್ತಿರಲಿ.’
ಮಾನವರಾದ ನಾವೂ ಇತರ ಜೈವಿಕ ಅಜೈವಿಕಗಳಂತೆಯೇ ಪ್ರಕೃತಿಯ ಒಂದು ಅಂಶವಾಗಿದ್ದೇವೆ. ಆದರೆ ಅದನ್ನು ಮರೆತು ಪ್ರಕೃತಿಯಲ್ಲಿರುವ ಎಲ್ಲವೂ ನಮಗಾಗೇ ಸೃಷ್ಟಿಸಲ್ಪಟ್ಟಿದ್ದು ಎಂಬ ಧೋರಣೆಯಲ್ಲಿ ನಮ್ಮ ಸಹ ಅಂಶಗಳ ಮೇಲೇ ದುರಾಕ್ರಮಣ ನಡೆಸುತ್ತಿದ್ದೇವೆ. ವಿಶೇಷವಾಗಿ ‘ಆಹಾರ’ಕ್ಕಾಗಿ ಎನ್ನುವುದಕ್ಕಿಂತ ಹೆಚ್ಚಾಗಿ ‘ಬಾಯಿಚಪಲ’ಕ್ಕಾಗಿ ಇತರ ಜೀವಿಗಳನ್ನು ನಿಷ್ಕರುಣೆಯಿಂದ, ನಿರ್ದಾಕ್ಷಿಣ್ಯವಾಗಿ, ನಿರ್ನಾಮಗೈಯುತ್ತಿದ್ದೇವೆ. ಒಮ್ಮೆ ನೆನಪುಮಾಡಿಕೊಂಡರೆ ನಮ್ಮ ಹಿರಿಯರು ಪ್ರಕೃತಿಯ ಬಗ್ಗೆ ಎಂಥಾ ಗೌರವವನ್ನು ಹೊಂದಿದ್ದರು ಎನ್ನುವುದು ಅರ್ಥವಾಗುತ್ತದೆ. ಧಾನ್ಯಗಳನ್ನು ಕೊಡುವ ಸಸ್ಯಗಳನ್ನು, ಹಣ್ಣುಕೊಡುವ ಮರಗಳನ್ನು, ಹಾಲುಕೊಡುವ ಗೋವನ್ನು...ಎಲ್ಲವನ್ನೂ ಪೂಜಿಸಿ ತಮ್ಮ ಕೃತಜ್ಞತೆಯನ್ನು ತೋರಿಸುತ್ತಿದ್ದರು. ಈಗ ಮರಗಳನ್ನು ಅನಿಯಂತ್ರಿತವಾಗಿ ಉರುಳಿಸುತ್ತಿದ್ದೇವೆ, ಗೋವನ್ನು ಹಾಲುಕೊಡುವ ಯಂತ್ರವಾಗಿಸಿಕೊಂಡು ಸಾಲದು ಎಂಬಂತೆ ಅದೇ ಅನಿವಾರ್ಯ ಆಹಾರವೆನ್ನುವಂತೆ ಬಿಂಬಿಸಹೊರಟಿದ್ದೇವೆ! ‘ರುಚಿ’ಯ ಬೆನ್ನು ಹಿಡಿದಿರುವ ನಾವು ಮನುಷ್ಯ ಮನುಷ್ಯನನ್ನೇತಿನ್ನುವ ಮಟ್ಟವನ್ನೂ ತಲುಪುವ ಕಾಲವೇನೂ ದೂರವಿಲ್ಲವೆನಿಸುತ್ತದೆ. ಈಗ ಪರೋಕ್ಷವಾಗಿ ಮತ್ತೊಬ್ಬರ ಅನ್ನವನ್ನು ಕಸಿದು ತಿನ್ನುವುದು ನಡೆಯುತ್ತಲೇ ಇದೆ.
‘ಅನ್ನವನ್ನು ಉಣ್ಣುವಾಗ ಕೇಳ್, ಅದನ್ನು ಬೇಯಿಸಿದ ನೀರು ನಿನ್ನ ಶ್ರಮದ ಬೆವರೊ ಅಥವಾ ಅನ್ಯರ ಕಣ್ಣೀರೊ?’
ಈ ಸೂಕ್ತಿಯನ್ನು ಗಮನಿಸಿದಾಗ ಇದು ಪ್ರಸ್ತುತ ಸನ್ನಿವೇಶದಲ್ಲಿ ಎಲ್ಲರೂ ತಮ್ಮನ್ನು ತಾವು ಕೇಳಿಕೊಳ್ಳಬೇಕಾದ ಪ್ರಶ್ನೆ ಎನಿಸುತ್ತದೆ. ತನ್ನ ಪ್ರಾಮಾಣಿಕ ದುಡಿಮೆಯಿಂದ ಗಳಿಸಿದ ‘ಅನ್ನ’ಕ್ಕಿರುವ ಮೌಲ್ಯ ಅಪಾರವಾದುದು. ಹಿಂದಿನ ಕೆಲವು ವ್ಯಕ್ತಿಗಳು ಪರಾನ್ನ ಭೋಜನವನ್ನು ಸೇವಿಸದೇ ಇರುತ್ತಿದ್ದುದಕ್ಕೆ ಇದೂ ಒಂದು ಕಾರಣವಾಗಿರಲೂ ಬಹುದು.
‘ಅನ್ನ ಪರಬ್ರಹ್ಮ ಸ್ವರೂಪ’ ಎಂದು ನಮ್ಮ ತಂದೆ ಹೇಳುತ್ತಿದ್ದರು. ‘ತುತ್ತು ಅನ್ನ ತೂಕ ಕೆಡಿಸಿತು’ ಎಂದು ನಮ್ಮ ಅವಿಭಕ್ತ ಕುಟುಂಬದ ಸದಸ್ಯರಾದ ಸೋದರತ್ತೆ ಪದೇಪದೇ ಹೇಳುತ್ತಿದ್ದರು. ಆಗ ನನಗೆ ಆ ಮಾತುಗಳ ಅಂತರಾರ್ಥದ ಅರಿವಾಗುತ್ತಲಿರಲಿಲ್ಲ. ಅನಗತ್ಯವಾಗಿ ಮತ್ತೊಬ್ಬರ ಮನೆಗೆ ಹೋಗಿ ತೊಂದರೆ ಕೊಡಬಾರದು ಎಂದಷ್ಟೇ ತಿಳಿದಿದ್ದೆ. ಪ್ರತಿಯೊಂದು ಜೀವಿಗೂ ತನ್ನದೇ ಆದ ಪಥವಿದೆ. ಅದು ಪ್ರಕೃತಿಯ ನಿಯಮದಂತೆ ತನ್ನ ಪಾಲಿನ ಆಹಾರವನ್ನು ಸೇವಿಸಿಕೊಂಡು ತನ್ನ ಪಾಡಿಗೆ ತಾನಿರುತ್ತದೆ. ಅದಕ್ಕೇ ಇರಬಹುದು, ‘ಹುಲಿ ಹುಲ್ಲು ತಿನ್ನಲ್ಲ’, ಎನ್ನುತ್ತಾರೆ. ಆಹಾರ ಸರಪಳಿಯಂತೆ ಒಂದು ಜೀವಿಯನ್ನು ಮತ್ತೊಂದು ತಿಂದು ಬದುಕುತ್ತಿದ್ದರೂ ಪ್ರಕೃತ್ತಿ ತನ್ನ ಸಮತೋಲನವನ್ನು ತಾನು ಕಾಯ್ದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಮಾನವರಾದ ನಾವು ನಮ್ಮ ಪಥದಲ್ಲಿರುವ ಆಹಾರ ಕ್ರಮವನ್ನು ಮೀರಿ ಇತರ ಎಲ್ಲಾ ಜೀವಿಗಳ ಪಥಗಳಿಗೂ ಅತಿಕ್ರಮಣ ಪ್ರವೇಶ ಮಾಡಿ ನಮ್ಮ ಚಪಲ ಹಾಗೂ ವೈಭೋಗಕ್ಕಾಗಿ ಅವುಗಳನ್ನು ನಿರ್ನಾಮ ಮಾಡುತ್ತಿದ್ದೇವೆ. ಈಗಿನ ಪರಿಸ್ಥಿತಿಯಲ್ಲಿ ‘ಮಾನವರಾದ ನಾವು’ ಎನ್ನುವುದನ್ನು ಒತ್ತಿ ಹೇಳಬೇಕಿದೆ. ಏಕೆಂದರೆ ‘ಮಾನವತ್ವ ಇನ್ನೂ ನಮ್ಮಲ್ಲಿ ಉಳಿದಿದೆಯೇ?’ ಎಂದು ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳುವಂತಾಗಿದೆ.
ಅನ್ನವನು ಇಕ್ಕುವುದು, ನನ್ನಿಯನು ನುಡಿಯುವುದು
ತನ್ನಂತೆ ಪರರ ಬಗೆದೊಡೆ ಕೈಲಾಸ
ಬಿನ್ನಾಣವಕ್ಕು ಸರ್ವಜ್ಞ.
ಸರ್ವಜ್ಞರ ಈ ವಚನ ಎಷ್ಟೊಂದು ಅರ್ಥಪೂರ್ಣವಾಗಿದೆ. ಹೃದಯ ಪೂರ್ವಕವಾಗಿ ಕರೆದು ಆದರಿಸಿ ಉಣ್ಣಲಿಟ್ಟಾಗ ಆ ಆತಿಥ್ಯ ಸ್ವೀಕಾರ ಯೋಗ್ಯವಾಗಿರುತ್ತದೆ. ಆದರೆ ಒತ್ತಾಯದಿಂದಲೋ, ಅನಿವಾರ್ಯವಾಗಿಯೋ ನೊಂದುಕೊಂಡು ಊಟವಿಕ್ಕುವ ಸ್ಥಿತಿಯನ್ನು ಉಂಟುಮಾಡಬಾರದಲ್ಲವೆ?

8 comments:

 1. ಅನ್ನವನ್ನು ಅನ್ನಬ್ರಹ್ಮ ಎಂದೇ ಭಾವಿಸಬೇಕು ಎನ್ನುವ ಸಂದೇಶವನ್ನು ನಿಮ್ಮ ಲೇಖನ ಸೊಗಸಾಗಿ ತಿಳಿಸುತ್ತದೆ.

  ReplyDelete
 2. ಅನ್ನಕ್ಕೆ ಇರುವ ಹಿರಿದಾದ ಅರ್ಥದ ಸುಂದರ ಚಿತ್ರಣ ಇಲ್ಲಿದೆ.ನಾವು ಮನುಷ್ಯರೂ ಜೀವ ಜಾಲದ ಒಂದು ಭಾಗ ಎಂದು ತಿಳಿದಾಗ, ಬದುಕುವುದಕ್ಕೆ ಮಾತ್ರ ಆಹಾರ,ಭೋಗಕ್ಕಾಗಿ ಅಲ್ಲ ಎಂದು ತಿಳಿದಾಗ ಆಹಾರ ಸೇವನೆ ನೀವು ತಿಳಿಸಿದ ಹಾಗೇ ಯಜ್ಞ್ಯ ವಾಗುತ್ತದೆ.ಅನ್ನ ನನ್ನಲ್ಲಿರುವ ಪರಬ್ರಹ್ಮ್ಮ ಸ್ವರೂಪನಿಗೆ ಅರ್ಪಿತ ಎಂಬ ಅರಿವು ಉಂಟಾದಾಗ ಅದಕ್ಕೆ ಹಿರಿದಾದ ಅರ್ಥ ಬರುತ್ತದೆ.ಇಲ್ಲಿ ಎಲ್ಲವೂ ಒಂದಕ್ಕೊಂದು ಪೂರಕವಾಗಿರಬೇಕೇ ಹೊರತು ಮಾರಕವಾಗಿರಬಾರದು.Life should support life.But unfortunately we are doing just the contrary! Regards.

  ReplyDelete
 3. ಉತ್ತಮ ಬರಹ. ಹಂಸಲೇಖರವರ ಒಂದು ಚಿತ್ರಗೀತೆಯಲ್ಲಿ ಮನುಷ್ಯ ತುಳಿವ ಭೂಮಿ ಮೇಲೆ ಹುಲ್ಲೂ ಬೆಳೆಯೊಲ್ಲ ಅಂತ ಬರೆದಿದ್ದಾರೆ.

  ನಿಮಗೆ ರಾಜ್ಯೋತ್ಸವ ಶುಭಾಶಯಗಳು...

  ReplyDelete
 4. @ ಸುನಾಥ್ ರವರೆ,
  ನಿಮಗೆ ರಾಜ್ಯೋತ್ಸವ ಶುಭಾಶಯಗಳು... `ಅನ್ನ'ವನ್ನು ಸೇವಿಸುವ ಮೊದಲು ನಮ್ಮ ತ೦ದೆಯವರು ಅದಕ್ಕೆ ನಮಸ್ಕರಿಸುತ್ತಿದ್ದರು. ಆ ರೀತಿಯ ಗೌರವ ನಮ್ಮ ವ್ಯಕ್ತಿತ್ವವನ್ನೇ ಉನ್ನತೀಕರಿಸುತ್ತದೆ ಎನ್ನುವುದು ನನ್ನ ಭಾವನೆ. ತಮ್ಮ ಅಮೂಲ್ಯವಾದ ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 5. @ ಕೃಷ್ಣಮೂರ್ತಿಯವರೆ,
  ನಿಮಗೆ ರಾಜ್ಯೋತ್ಸವ ಶುಭಾಶಯಗಳು... `ಅನ್ನ'ದ ಬಗ್ಗೆ ಉನ್ನತವಾದ ವಿಚಾರವನ್ನು ತಿಳಿಸಿದ್ದೀರಿ. ತಮ್ಮ ಮೌಲ್ಯಯುತವಾದ ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 6. @ ಬದರಿನಾಥ್ ರವರೆ,
  ನಿಮಗೂ ಸಹ ರಾಜ್ಯೋತ್ಸವದ ಶುಭಾಶಯಗಳು... `ಚಲನ ಚಿತ್ರಗಳಲ್ಲೂ ಕೆಲವು
  ಉತ್ತಮವಾದ ವಿಚಾರಗಳನ್ನು ತಿಳಿಸುತ್ತಾರೆ. ತಮ್ಮ ಅಭಿಮಾನಪೂರ್ವಕವಾದ ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 7. ಅನ್ನದ ಮಹತ್ವವನ್ನ ಸುಕ್ತವಾಗಿ ವಿವರಿಸಿದ್ದಿರಾ..

  ReplyDelete
 8. @ ಸೀತಾರಾಂ ರವರೆ,
  ತಮ್ಮಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete