Wednesday, October 20, 2010

ಮನದ ಅ೦ಗಳದಿ.......13 ನೀನೇ ನಾನು

ಒಮ್ಮೆ ಮೂರು ಜನ ಪಯಣಿಗರು ದಾರಿಯಲ್ಲಿ ನಡೆಯುತ್ತಿದ್ದರು. ರಸ್ತೆಯಲ್ಲಿ ಅವರಿಗೊಂದು ನಾಣ್ಯ ಸಿಕ್ಕಿತು. ಒಬ್ಬ ಹೇಳಿದ, 'ಈ ಹಣದಿಂದ ನಾವೇನಾದರೂ ಸಿಹಿ ತಿನಿಸನ್ನು ತಿನ್ನೋಣ.?' ಮತ್ತೊಬ್ಬ ಹೇಳಿದ, 'ಸಿಹಿ ತಿನಿಸು ಬೇಡ. ಹಣ್ಣನ್ನು ಕೊಂಡು ತಿನ್ನೋಣ'. ಮೂರನೆಯವನು ಹೇಳಿದ, 'ಏನೂ ತಿನಿಸು ಬೇಡ. ಪಾನೀಯವನ್ನು ಕುಡಿಯೋಣ.'
ಮೂವರ ನಡುವೆ ಭಾರೀ ಚರ್ಚೆ ನಡೆಯಿತು. ಎದುರಿಗೆ ಒಬ್ಬ ಅಪರಿಚಿತ ವ್ಯಕ್ತಿ ಬಂದ. ಇವರ ಸಮಸ್ಯೆಯನ್ನು ಕೇಳಿ ತಿಳಿದು ಮೂವರನ್ನೂ ಹತ್ತಿರದ ಹಣ್ಣಿನ ಅಂಗಡಿಗೆ ಕರೆದೊಯ್ದ. ದ್ರಾಕ್ಷಿಯ ಗೊಂಚಲುಗಳನ್ನು ಕೊಡಿಸಿದ.
ಮೊದಲನೆಯವ ಹೇಳಿದ, 'ಅರೆ ಇದೊಂದು ಸಿಹಿ ತಿನಿಸು!'
ಎರಡನೆಯವ ಹೇಳಿದ, 'ಇದೊಂದು ಹಣ್ಣು!'
ಮೂರನೆಯವ ಹೇಳಿದ, 'ಈ ದ್ರಾಕ್ಷಿಯಿಂದ ನನ್ನ ಬಾಯಾರಿಕೆ ಇಂಗಿತು.'
ಎಲ್ಲಾ ಆಧ್ಯಾತ್ಮಿಕ ಪಥಿಕರ ಗುರಿ ಒಂದೇ, ಪಥಗಳು ಬೇರೆ ಬೇರೆ.
ಇದೊಂದು ಸೂಫಿ ಕಥೆ. ಕ್ರಿ.ಶ.ಎಂಟರಿಂದ ಹದಿನೈದನೆಯ ಶತಮಾನಗಳ ಅವಧಿಯಲ್ಲಿ ಜಗತ್ತು ನೂರಾರು ಸೂಫಿಗಳನ್ನು ಕಂಡಿತು. ಇವರು ಇಸ್ಲಾಂ ಮತದಲ್ಲಿ ನಂಬಿಕೆ ಉಳ್ಳವರಾಗಿದ್ದರು. ಬಡತನದ ಕುಟುಂಬಗಳಿಂದ ಹೆಚ್ಚಾಗಿ ಬರುತ್ತಿದ್ದ ಇವರು ಮಸೀದಿಗಳಲ್ಲಿ 'ಸುಪ್ಪಾ' ಎಂದರೆ ಮಾಳಿಗೆಗಳಲ್ಲಿ ಕಾಲ ಕಳೆಯುತ್ತಿದ್ದುದರಿಂದ ಇವರನ್ನು 'ಸೂಫಿ'ಗಳೆಂದು ಕರೆದರು. ಹೆಚ್ಚಿನ ಕಾಲ ತಪಸ್ಸಿನಲ್ಲಿ ಮಗ್ನರಾಗುತ್ತಿದ್ದ ಸೂಫಿಗಳ ಅನುಕ್ಷಣದ ಬದುಕಿನಲ್ಲೂ ಧರ್ಮವು ಮಿಳಿತವಾಗಿತ್ತು. ಹಲವು ಸಲ ಮೆಕ್ಕಾ ಯಾತ್ರೆ ಮಾಡುತ್ತಿದ್ದ ಇವರು ಹಳ್ಳಿ ಹಳ್ಳಿಗಳಲ್ಲಿ ಧರ್ಮ ಬೋಧನೆ ಮಾಡುತ್ತಿದ್ದರು. ಆದರೆ ಜನರಿಂದ ದೂರವಾಗಿ ಊರ ಹೊರಗೆ ವಾಸಿಸುತ್ತಿದ್ದರು.
ಸೂಫಿಗಳು ಬರೆದಿರಬಹುದಾದ ಲಿಖಿತ ಸಾಹಿತ್ಯ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿಲ್ಲ. ಆದರೆ ಅವರ ಹೇಳಿಕೆಗಳು, ಗೀತೆಗಳು, ಪ್ರವಚನಗಳು, ಮತ್ತು ಕಥೆಗಳು ಒಬ್ಬರಿಂದ ಒಬ್ಬರಿಗೆ ತಿಳಿದು ಇಲ್ಲಿಯವರೆಗೂ ಉಳಿದು ಬಂದಿವೆ. ಸೂಫಿ ಮತದ ಉದ್ದೇಶವನ್ನು ಬಾಯ್ಸೀದ್ ಬಹಳ ಚೆನ್ನಾಗಿ ತಿಳಿಸಿದ್ದಾರೆ, 'ಒಂದೆಡೆಯಿಂದ ಮತ್ತೊಂದೆಡೆಗೆ ದೇವರನ್ನು ಅರಸುತ್ತಾ ಹೋದೆ. ಅಂತರಂಗದ ದನಿ ಹೇಳಿತು, ನೀನೇ ನಾನು'.
ರೂಮಿ ಎಂಬ ಸೂಫಿಯು ತನ್ನ ಎಲ್ಲಾ ಶಿಷ್ಯರೂ ಈ ಪದ್ಯವನ್ನು ಬಾಯಿ ಪಾಠ ಮಾಡುವಂತೆಹೇಳುತ್ತಿದ್ದರು.
ಆಧ್ಯಾತ್ಮದ ಔಷಧಗಳ
ಮಾರಾಟಗಾರರ ಈ ಮಾರುಕಟ್ಟೆಯಲ್ಲಿ
ಅತ್ತಿಂದ ಇತ್ತ, ಅಂಗಡಿಯಿಂದ ಅಂಗಡಿಗೆ ಓಡದಿರು,
ಬದಲಿಗೆ,
ನಿಜವಾದ ಔಷಧ ಸಿಗುವ
ಒಂದೇ ಅಂಗಡಿಯಲಿ ಕುಳಿತುಕೊ.
ಮೂಲತಃ ಇಸ್ಲಾಂ ಮತದ ಅನುಯಾಯಿಗಳಾಗಿದ್ದ ಸೂಫಿಗಳ ಮೇಲೆ ಕ್ರೈಸ್ತ ಮತ್ತು ಬೌದ್ಧ ಧರ್ಮದ ಪ್ರಭಾವವೂ ಆಗಿದೆ. ಭಾರತದಲ್ಲಿ ದಾರಾ ಶುಕೊ ಸೂಫಿಮತದ ಬೆಳವಣಿಗೆಗೆ ಬಹಳ ನೆರವು ನೀಡಿದರು. ಹಲವು ಮತಧರ್ಮಗಳನ್ನು ಸಾಕಷ್ಟು ಅಧ್ಯಯನ ಮಾಡಿ ವೇದಾಂತವನ್ನು ಚೆನ್ನಾಗಿ ಅರಿತಿದ್ದ ಇವರು ಸೂಫಿ ಮತದ ಮತ್ತು ವೇದಾಂತದ ನಡುವೆ ಇರುವ ಸಾಮ್ಯಗಳನ್ನು ಕುರಿತು ಎಲ್ಲರಿಗೂ ಹೇಳುತ್ತಿದ್ದರು.
ಈ ಕುರಿತು ಬರೆಯುವಾಗ ನನಗೆ ಸದಾ ನನ್ನೊಳಗೇ ಅನುರಣಿಸುವ ಆಕೆಯ ದನಿ ನೆನಪಾಗುತ್ತದೆ.
ಆಕೆ ಸುತ್ತಿನ ಊರುಗಳಲ್ಲಿ ತಿರುಗುತ್ತಾ ಕೌದಿಯನ್ನು ಹೊಲಿದು ಕೊಡುವುದು, ಬಟ್ಟೆಗಳನ್ನು ರಿಪೇರಿ ಮಾಡಿಕೊಡುವುದು ಮುಂತಾದ ಕೆಲಸಗಳನ್ನು ಮಾಡಿ ರೈತರು ಕೊಡುತ್ತಿದ್ದ ಧವಸ, ಧಾನ್ಯಗಳನ್ನು ಸಂಪಾದಿಸಿಕೊಂಡು ಬಂದು ಗಂಡನ ಅಲ್ಪಸ್ವಲ್ಪ ಗಳಿಕೆಯೊಂದಿಗೆ ಮನೆಯಲ್ಲಿದ್ದ ೮-೯ ಮಕ್ಕಳ ಹೊಟ್ಟೆಯನ್ನು ತುಂಬಬೇಕಾಗಿತ್ತು. ಅದರಲ್ಲಿಯೂ ಬಿಡುವು ಮಾಡಿಕೊಂಡು ನಮ್ಮ ಮನೆಗೆ ಬಂದು ಕೆಲವು ಹಾಡುಗಳನ್ನು ತಮ್ಮ ಉಚ್ಛ ಕಂಠದಲ್ಲಿ ಹಾಡುತ್ತಿದ್ದರು. ಅದರ ಅರ್ಥವನ್ನು ವಿವರಿಸಿ ಹೇಳುತ್ತಿದ್ದರು. ನಮ್ಮ ತಂದೆ ಅದಕ್ಕೆ ಸಮೀಕರಿಸುವಂಥಾ ಶ್ಲೋಕಗಳನ್ನು ಹೇಳಿ ತಾತ್ಪರ್ಯವನ್ನು ತಿಳಿಸುತ್ತಿದ್ದರು. ಅವುಗಳಲ್ಲಿರುವ ಸಾಮ್ಯತೆಯ ಬಗ್ಗೆ ಮಾತನಾಡುತ್ತಿದ್ದರು. ಕೆಲವೊಮ್ಮೆ ನಮ್ಮ ಅತ್ತೆಯೂ (ತಂದೆಯ ತಂಗಿ) ಅದಕ್ಕೆ ಸಂಬಂಧಿಸಿದ ಯಾವುದಾದರೊಂದು ಕೀರ್ತನೆಯನ್ನು ಹಾಡುತ್ತಾ ಜೊತೆಗೂಡುತ್ತಿದ್ದರು. ಅವರು ಏನು ಮಾತನಾಡುತ್ತಿದ್ದಾರೆ ಎನ್ನುವುದರ ಅರ್ಥ ಆಗ ನನಗೆ ಆಗದಿದ್ದರೂ ತನ್ನತ್ತ ಸೆಳೆಯುತ್ತಿತ್ತು.
ಎಲ್ಲ ಧರ್ಮಗಳ ಮೂಲಸಾರವೂ ಅಂತರಂಗದ ಅರಿವಿನಿಂದಲೇ ಆಗಿದೆ. ಅದೇ ಅವುಗಳ ಸಾಮ್ಯತೆಗೆ ಕಾರಣವೆನಿಸುತ್ತದೆ. ಅರಿವಿನ ಸಂಪಾದನೆ ಒಂದು ಆಂತರಿಕ ಅಭೀಪ್ಸೆ. ಅದಕ್ಕಾಗಿ ವ್ಯಕ್ತಿಗಳು ಸಮಾನಾಸಕ್ತರನ್ನು ಹುಡುಕಿಕೊಂಡು ಹೋಗುತ್ತಾರೆ. ತಾವು ಸತ್ಯವೆಂದು ಕಂಡದ್ದನ್ನು ಮತ್ತೊಬ್ಬರಲ್ಲಿ ಹಂಚಿಕೊಳ್ಳಲು ಕಾತರಿಸುತ್ತಾರೆ ಎನಿಸುತ್ತದೆ. ಈ ಮಾತನ್ನು ಪುಷ್ಟೀಕರಿಸುವಂತಿರುವ ಒಂದು ಚೀನೀ ಗಾದೆಯು ಈ ರೀತಿ ಇದೆ, ‘If you have something valuable with you, you have a moral obligation to share it with 0thers.’
ನಮ್ಮ ಅರಿವನ್ನು ಆಳಗೊಳಿಸುವ ಒಂದು ಸೂಫಿ ಕಥೆ ಈರೀತಿ ಇದೆ:
ಒಬ್ಬ ಹೋಗಿ ಬಾಗಿಲು ತಟ್ಟಿದ. ಒಳಗಿನಿಂದ ದನಿ ಕೇಳಿತು, 'ಯಾರದು?' ಈತ ಹೇಳಿದ, 'ನಾನು'. ಬಾಗಿಲು ತೆರೆಯಲೇ ಇಲ್ಲ. ಈತ ಬಹಳ ಸಮಯದ ನಂತರ ಮತ್ತೊಮ್ಮೆ ಬಂದು ಬಾಗಿಲು ತಟ್ಟಿದ. ಒಳಗಿನಿಂದ ಮತ್ತೆ ಕೇಳಿತು, 'ಯಾರದು?'ಈತ ಹೇಳಿದ, 'ನೀನು'. ಬಾಗಿಲು ತೆರೆಯಿತು.
ಜಲಾಲುದ್ದೀನ್ ರೂಮಿ ಹೇಳಿದ ಈ ಕಥೆಗೂ, ಸೂಫಿ ಮತದ ಉದ್ದೇಶವನ್ನು ತಿಳಿಸಿದ ಬಾಯ್ಸೀದ್ ಹೇಳಿಕೆಗೂ ಎಂಥಾ ಹೋಲಿಕೆ ಇದೆ ಅಲ್ಲವೇ?
********************************************************

12 comments:

 1. .’‘If you have something valuable with you, you have a moral obligation to share it with 0thers.’ ನಿಜ ಒಳ್ಳೆಯ ನುಡಿ. ನದಿಗಳು ಎಲ್ಲೋ ಹುಟ್ಟಿ ಎಲ್ಲೆಲ್ಲೋ ಹರಿದು ಸಾಗರವನ್ನು ಸೇರುವಂತೆ ವಿವಿಧ ದರ್ಮಗಳು ತಮ್ಮದೇ ಕಂಪು ಬೀರಿವೆ.ಆದರೆ ನಿಜವನ್ನು ಅರಿಯದ ನಾವು ಪರಸ್ಪರ ಕಿತ್ತಾಟ ನಡೆಸಿದ್ದೇವೆ.ಲೇಖನ ಅರ್ಥ ಪೂರ್ಣವಾಗಿದೆ.ಗುಡ್

  ReplyDelete
 2. ಪ್ರಭಾಮಣಿ ಯವರೇ ನಿಮ್ಮ ಲೇಖನದ ಅಂತರಂಗ ಚಿಂತನಾತ್ಮಕ ವಾಗಿದೆ.ಮೌಲ್ಯಯುತವಾದದ್ದನ್ನ ಹಂಚಿಕೊಂಡಾಗ ಸಿಗುವ ಆನಂದ ಅನನ್ಯ ಅಲ್ಲವೇ .ಧನ್ಯವಾದಗಳು.

  ReplyDelete
 3. ಮೇಡಮ್,
  ತುಂಬ ಒಳ್ಳೆಯ ನಿದರ್ಶನಗಳನ್ನು ಕೊಟ್ಟಿರುವಿರಿ. ಎಲ್ಲ ಧರ್ಮಗಳ ಸಾರ ಒಂದೇ ಆಗಿದೆ. ಅದೆಂದರೆ ತನ್ನಲ್ಲಿರುವ ದೇವರನ್ನು ಹುಡುಕುವದು. ತನಗೂ ಪರರಿಗೂ ಭೇದ ಇಲ್ಲವೆಂದು ಅರಿಯುವದು.

  ReplyDelete
 4. @ ಬಾಲು ಅವರೆ,
  'If you have ................'ಈ ಚೀನೀ ಗಾದೆ ಎಷ್ಟು ಅರ್ಥಪೂರ್ಣವಾಗಿದೆ, ಅಲ್ಲವೇ? ನಿಮ್ಮ ಪ್ರೋತ್ಸಾಹಕರ ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 5. @ ಕಲಾವತಿ ಯವರೆ ,
  ನಿಮ್ಮ ಮೌಲ್ಯಯುತ ಪ್ರತಿಕ್ರಿಯೆಗೆ ಧನ್ಯವಾದಗಳು. ಪರಸ್ಪರ ಹ೦ಚಿಕೊಳ್ಳುವುದೇ ಆನ೦ದಕರ. ಬ್ಲಾಗ್ ಬರಹದಲ್ಲಿ ನಾವು ಮಾಡುತ್ತಿರುವುದು ಅದನ್ನೇ ಅಲ್ಲವೇ!

  ReplyDelete
 6. @ ಸುನಾಥ್ ರವರೆ ,
  ಲೇಖನದ ಸಾರವನ್ನು ಬಹಳ ಉತ್ತಮವಾಗಿ ಸಾ೦ದ್ರೀಕರಿಸಿ ನೀಡಿರುವ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 7. ತು೦ಬಾ ಉತ್ತಮ ಲೇಖನ.

  ReplyDelete
 8. ಪ್ರಭಾಮಣಿ ಯವರೇ ನಿಮ್ಮ ಬ್ಲಾಗ್ ಗೆ ಮೊದಲ ಭೇಟಿ.ಉತ್ತಮ ವೈಚಾರಿಕ ಲೇಖನ ಬರೆದಿದ್ದೀರಿ ಅಭಿನ೦ದನೆಗಳು.ಸರ್ವ ಧರ್ಮ ಸಮನ್ವಯತೆಯನ್ನು ತಿಳಿಸಿದ್ದೀರಿ.ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊ೦ಡಾಗ,ಸರ್ವ ತತ್ವಗಲೂ ಸಮತತ್ವಗಳಾಗಿಯೇ ಕಾಣುತ್ತದೆಯಲ್ಲವೇ..?

  ReplyDelete
 9. @ ಮನಮುಕ್ತಾ ಅವರೇ,
  'ಉತ್ತಮ ಲೇಖನ' ಎ೦ದು ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ್ದಕ್ಕಾಗಿ ಧನ್ಯವಾದಗಳು.

  ReplyDelete
 10. @ ಕುಮಾರ್ ಅವರೇ,
  ನನ್ನ ಬ್ಲಾಗ್ ಗೆ ಸ್ವಾಗತ. 'ಧರ್ಮ' ಎನ್ನುವುದೇ ಅ೦ತರಾಳದ ಅಭಿವ್ಯಕ್ತಿ. ಮೂಲ ಒ೦ದೇ ಆದ್ದರಿ೦ದ ಸಾರವೂ ಒ೦ದೇ. ಇದನ್ನು ಅರಿತು ನಡೆದರೆ ಗೊ೦ದಲವೇ ಇಲ್ಲ. ಅಲ್ಲವೇ? ಧನ್ಯವಾದಗಳು. ಬರುತ್ತಿರಿ.

  ReplyDelete
 11. ಉತ್ತಮವಾದ ಲೇಖನ ಮತ್ತು ಒಳ್ಳೆಯ ಸಂದೇಶ

  ReplyDelete
 12. @ ಮ೦ಜುರವರೆ,
  ತಮ್ಮ ಅಭಿಮಾನಪೂರ್ವಕವಾದ ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete