Wednesday, April 8, 2015

ಮತ್ತೊ೦ದು ಹಿ೦ದಿನ ಬರಹ : ಲಸನ್ ಮಂದಹಾಸ.....

                                            ಲಸನ್ ಮಂದಹಾಸ.....
       
                                 `............ಮಂದಹಾಸ ಪ್ರಭಾ ವಕ್ರ ತುಂಡ
                                  ಚಲತ್ ಚಂಚಲ...............................’
          ನಿದ್ದೆಯ ಮಂಪರಿನಲ್ಲೇ ದಿನದ ಪ್ರಾರಂಭಕ್ಕಾಗಿ ಮನಸ್ಸನ್ನು ಅಣಿಗೊಳಿಸಿಕೊಳ್ಳುವ ವೇಳೆಯಲ್ಲಿ ಆಕಾಶವಾಣಿಯಿಂದ ತೇಲಿಬರುತ್ತಿದ್ದ ಈ ಸಾಲುಗಳು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿಬಿಟ್ಟಿದ್ದವು. ಬೆಳಗಾದದ್ದನ್ನು ಸಾರುತ್ತಿದ್ದುದೇ ಅಮ್ಮ ಪ್ರತಿದಿನ ತಪ್ಪದಂತೆ ಹಾಕುತ್ತಿದ್ದ ಆಕಾಶವಾಣಿಯ ಗೀತಾರಾಧನಾ ಕಾರ್ಯಕ್ರಮ. ಅಮ್ಮ ವೇಳೆ ತಿಳಿಯಲು ಗಡಿಯಾರ ನೋಡುತ್ತಿದ್ದುದೇ ಅಪರೂಪ.  `ಆಗಲೇ ಚಿಂತನ ಬರ್‍ತಿದೆ ಇನ್ನೂ ಎಲ್ಲರಿಗೂ ಕಾಫಿ ಆಗಿಲ್ಲ’, `ವಾರ್ತೆ ಬರೋ ಹೊತ್ತಿಗಾದರೂ ಹಾಲು ಕರೆದಿರಬೇಕು’,, ಎಂದು ಸ್ವಗತ ಸಂಭಾಷಣೆಗಳಲ್ಲಿ ಕಾರ್ಯಪ್ರವೃತ್ತರಾಗುತ್ತಿದ್ದರು. ಈ ಶಾರದಾ ಭುಜಂಗ ಸ್ತೋತ್ರದಲ್ಲಿ `ಪಿ.ಬಿ’(ಅಮ್ಮ ತನ್ನ ಮೆಚ್ಚಿನ ಗಾಯಕರನ್ನು `ಪಿ.ಬಿ’., `ಎಸ್.ಪಿ’, ಎಂದೇ ಹ್ರಸ್ವವಾಗಿ ಕರೆಯುತ್ತಿದ್ದುದು ನಮಗೂ ರೂಢಿಯಾಗಿತ್ತು.) `ಪ್ರಭಾಎಂದು ಉಚ್ಛರಿಸುತ್ತಿದ್ದ ಘನ ಘಂಭೀರ ಧನಿಗೆ ನಾನು ಬಹಳವಾಗಿ ಮನಸೋತಿದ್ದೆ! ಇದೇ ಗುಂಗಿನಲ್ಲಿ ಬೆಳೆದ ನಾನು ಮುಂದೆ ಇಂತಹದೇ ಕರೆಯನ್ನು ನನ್ನ ಪತಿಯಿಂದ ನಿರೀಕ್ಷಿಸಿದ್ದು ನನಗೆ ಕಿರಿಕಿರಿಯೇ ಆಗುವಂತಾಯ್ತು. ಅವರಿಗೆ ಈ ರೀತಿ ಸಂಭೋದನಾ ಚತುರತೆಯೇ ಸಿದ್ಧಿಸಿರಲಿಲ್ಲ. ಅವರ `ಮೆಗಾಕುಟುಂಬದಲ್ಲಿ ಎಲ್ಲರೂ ಈ ಎಲ್ಲಾ ಚಾತುರ್ಯವನ್ನೂ ತಮ್ಮ ಹಿರಿಯಣ್ಣನಿಗೇ ಮೀಸಲಿಟ್ಟಂತಿದ್ದರು. ಮೊದಲ ಸಾರಿ ಅವರ ಮನೆಗೆ ಹೋದಾಗ ಪೂಜೆಗೆ ಕುಳಿತಿದ್ದ `ಹಿರಿಯಣ್ಣನಿಮಿಷಕ್ಕೊಮ್ಮೆ `ಲಲಿತಾ..., ಲಲಿತಾ...ಎಂದು ಕೂಗುವುದನ್ನು ಕೇಳಿ ನಮ್ಮ ಸಂಬಂಧಿಯೊಬ್ಬರು `ಇದೇನು ಲಲಿತಾ ಸಹಸ್ರನಾಮ ಮಾಡುತ್ತಿದ್ದಾರೆಯೇ?’ ಎಂದು ಕೇಳಿದ್ದರು!
           ಮೊದಲ ಭಾರಿಗೆ ಇವರೊಡನೆ ಹೊಟೆಲ್‌ಗೆ ಹೋದದ್ದನ್ನು ಮರೆಯುವಂತೆಯೇ ಇಲ್ಲ. ಕುಳಿತ ತಕ್ಷಣವೇ ಇವರು `ಮಾಣಿಪ್ರವರ ಒಪ್ಪಿಸುವುದನ್ನೂ ಕಾಯದೇ ಅಥವಾ ಮುಖ್ಯವಾಗಿ ನನ್ನನ್ನೂ ಕೇಳದೇ ಮಸಾಲೆ ದೋಸೆಗೆ ಆರ್ಡರ್ ಮಾಡಿದಾಗ ಇವರು ಪರ(ಪರಸ್ತ್ರೀ)ಇಂಗಿತ ಪ್ರಜ್ಞರಂತೆಯೇ ಕಂಡಿದ್ದರು. ತಟ್ಟೆಗಳಲ್ಲಿ ಹಾಯಾಗಿ ಪವಡಿಸಿದ ದೋಸೆಯುಕ್ತ ಪ್ಲೇಟ್‌ಗಳು ಟೇಬಲ್ ಮೇಲೆ ಹಾಜರಾದ ತಕ್ಷಣವೇ ಗರಿಗರಿ ದೋಸೆಯ ಅಂತರಂಗವನ್ನು ಬಗೆದ (ಹಿರಣ್ಯಕಷ್ಯಪನ ಉದರವನ್ನು ಸೀಳಿದ ಸಾಕ್ಷಾತ್  ನರಸಿಂಹಾವತಾರವೇ ಮೂರ್ತಿವೆತ್ತಂತೆ!) ಇವರು ಹೇಳದೇ ಕೇಳದೇ ಎದ್ದು ಹೊರನಡೆದೇ ಬಿಟ್ಟರು. ಇನ್ನೇನು ಬರಬಹುದು ಎಂದು ಮುರಿದ ದೋಸೆಯ ತುಂಡನ್ನು ಕೈಯಲ್ಲಿ ಹಿಡಿದಿದ್ದ ನಾನು `ಕೈಯೊಳಗೇತಕೆ ಬಾಯೊಳಗಿದ್ದರೆ ಆಗದೆ ಮರಿಕಪಿಯೊಂದಾಗ `ಎಂದ ಮನದ ಮಾತನ್ನು ಪುಷ್ಠೀಕರಿಸಿ ಮೆಲ್ಲ ಮೆಲ್ಲನೆ ಮೆಲ್ಲುತ್ತಾ ಹಿಂತಿರುಗಿ ನೋಡಿದಾಗ ಕೌಂಟರ್‌ನಲ್ಲಿ ಹಣ ನೀಡಿ ಹೊರನಡೆಯುತ್ತಿದ್ದ ಇವರನ್ನು ಕಂಡು ರಸಭಂಗವಾದಂತೆ ತಿನ್ನುವುದನ್ನು ಅಷ್ಟಕ್ಕೇ ಬಿಟ್ಟು ಒಲ್ಲದ ಮನಸ್ಸಿನಿಂದಲೇ ಹೊರ ಬಂದಿದ್ದೆ. ನಂತರವೇ ತಿಳಿದದ್ದು ಆ ದೋಸೆಗೆ ಬಳಿದಿದ್ದ ಕೆಂಪು ಚಟ್ನಿಗೆ ಬೆಳ್ಳುಳ್ಳಿ ಹಾಕಿದ್ದರು ಎಂದು.
            ಈರುಳ್ಳಿಗೇ ವಾರದಲ್ಲಿ ಮೂರುದಿನ ನಿಷಿದ್ಧವಿದ್ದ ನಮ್ಮ ಮನೆಯಲ್ಲಿ ಅಡುಗೆಯ ಮನೆಯ ಸಾಮ್ರಾಜ್ಞಿ ಅಮ್ಮ ಬೆಳ್ಳುಳ್ಳಿಯನ್ನು ಬಳಸುತ್ತಲೇ ಇರಲಿಲ್ಲ. ಆದರೂ ಆ ವಿಶಿಷ್ಟ ಘಾಟು ವಾಸನಾಯುಕ್ತ ತೀವ್ರ ರುಚಿಯ ಬಗ್ಗೆ ನಮಗೆ ಏನೋ ವಿಚಿತ್ರ ಮೋಹ. ಅಟ್ಟಲು ಗದ್ದೆ ಸಮಯದಲ್ಲಿ ಆಳುಮಕ್ಕಳಿಗೆ ಮಾಡುತ್ತಿದ್ದ `ಮೆಣಸು ಬೆಳ್ಳುಳ್ಳಿ’ ಕಾರವನ್ನು ನಾವೂ ಕಣ್ಣು ಮೂಗಲ್ಲೆಲ್ಲಾ ನೀರು ಸುರಿಸಿಕೊಂಡು `ಹಾ...ಹಾ...’ ಎನ್ನುತ್ತಾ ತಿನ್ನುತ್ತಿದ್ದೆವು! ಇವರಿಗೆ ಬೆಳ್ಳುಳ್ಳಿಯ ಬಗ್ಗೆ ಇರುವ ಈ ಬಗೆಯ ಆದರವನ್ನು ನೋಡಿ ನನಗಂತೂ ತೀವ್ರ ನಿರಾಸೆಯೇ ಆಯ್ತು. ನನ್ನ ಆಸೆಯ ಈ ಘಾಟನ್ನು ಆಘ್ರಾಣಿಸಿದವರಂತೆ `ಈಗ ಸಾಮಾನ್ಯವಾಗಿ ಎಲ್ಲಾ ಹೊಟೆಲ್‌ಗಳಲ್ಲೂ ಬೆಳ್ಳುಳ್ಳಿಯನ್ನ ಉಪಯೋಗಿಸ್ತಾರೆ...’ಎಂದುಕೊಂಡು ಅನಿವಾರ್ಯವೆನಿಸಿದರೂ ಹೊಟೆಲ್‌ಗೆ ಹೋಗುವುದನ್ನೇ ನಿಲ್ಲಿಸಿ ಉಳಿತಾಯ ಯೋಜನೆ ಪ್ರಾರಂಭಿಸಿಬಿಟ್ಟರು. ನಮ್ಮ ಮನೆಗಂತೂ ಯಾವ ಕಾರಣಕ್ಕೂ ಬೆಳ್ಳುಳ್ಳಿಗೆ ಪ್ರವೇಶವೇ ಇಲ್ಲ ಎನ್ನುವುದಂತೂ ಖಚಿತವಾಗಿಹೋಯ್ತು. `ಬಾಣಂತಿ’ಊಟವಾಗಿ ಬರುತ್ತಿದ್ದ ಬೆಳ್ಳುಳ್ಳಿಗೂ ಬಹಿಷ್ಕಾರವಾಯ್ತು. ಹೀಗೆ ಒಂದು ದಿವ್ಯೌಷಧ, ರಾಮಬಾಣವೆನಿಸಿದ ಬೆಳ್ಳುಳ್ಳಿಯ ನಿಷಿದ್ಧ ಪ್ರದೇಶವಾಗಿ ನಮ್ಮ ಮನೆ ರೂಪುಗೊಂಡಿತು.
             ಇವರು ಇಷ್ಟೆಲ್ಲಾ ವರ್ಜಿಸಿದ್ದರೂ ಒಮ್ಮೆಯಂತೂ ಈ ದಿವ್ಯೌಷಧಿಯೇ ಇವರ ಕೆಳಗಿಳಿದ ರಕ್ತದೊತ್ತಡವನ್ನು ಮೇಲೇರಿಸುವುದರಲ್ಲಿ ಸಹಕಾರಿಯಾಗಿದ್ದನ್ನು ನೆನಪಿಸಿಕೊಳ್ಳಲೇ ಬೇಕು. ಇವರಿಗೆ ಒಮ್ಮೆ ಅನಾರೋಗ್ಯವಾಗಿ ತೀವ್ರನಿಗಾಘಟಕದಲ್ಲಿ ಇಟ್ಟಿದ್ದಾಗ ಇದ್ದಕ್ಕಿದ್ದಂತೆಯೇ ರಕ್ತದೊತ್ತಡ ಇಳಿಯಲಾರಂಭಿಸಿತು. ಡಾಕ್ಟರ್‌ಗಳೆಲ್ಲಾ ತರಾತುರಿಯಲ್ಲಿ ಚಿಕಿತ್ಸೆ ನೀಡಿ ಸಹಜಸ್ಥಿತಿಗೆ ತರುವ ಸನ್ನಾಹದಲ್ಲಿದ್ದರು. ಅಷ್ಟರಲ್ಲಿ ಪೇಷೆಂಟ್ ಊಟ ಬಂದಿದ್ದರಿಂದ ಕ್ರಮೇಣ ಸರಿಹೋಗುವುದಾಗಿ ತಿಳಿಸಿ ಊಟ ಕೊಡಲು ಹೇಳಿದರು. ತಿಳಿಸಾರು ಅನ್ನ ಕಲೆಸಿ ಸ್ಪೂನ್‌ನಲ್ಲಿ ಇನ್ನೇನು ಬಾಯಿಗಿಡಬೇಕು ಆ ಕ್ಷಣವೇ ಬಿ.ಪಿ. ನಾರ್‍ಮಲ್ ಬಿಟ್ಟು ಮೇಲೇರಲಾರಂಭಿಸಿತು! ಇವರಂತೂ ಬಾಯಿ ಬಿಡದೇ ಎಳೇ ಮಗುವಿನಂತೆ ಹಠ ಹಿಡಿದು ಊಟ ಬೇಡವೆಂದು ಸನ್ನೆ ಮಾಡಲಾರಂಭಿಸಿದರು. ಮೊದಲೇ ಗಾಭರಿಗೊಂಡಿದ್ದ ನಾನು ಆಗ ಗಮನಿಸಿದೆ ಸಾರಿಗೆ ಬೆಳ್ಳುಳ್ಳಿ ಹಾಕಿದ್ದಾರೆಂಬುದನ್ನು! ಆದರೂ ..., ಹೃದಯಕ್ಕೆ ಒಳ್ಳೆಯದು ಎಂದು ಯಾವ ಡಯಟೀಷಿಯನ್ ಏನೇ ಹೇಳಿದರೂ ಇವರ ವ್ರತಭಂಗ ಮಾಡಲಾಗಲಿಲ್ಲ!
              ಕುಟುಂಬದವರೆಲ್ಲಾ ಒಮ್ಮೆ ಶಿರಡಿಯಾತ್ರೆ ಕೈಗೊಂಡರು. ಈ ಮೊದಲೇ ಎಂದರೆ ಮದುವೆಯಾದ ಹೊಸತರಲ್ಲೇ ದಕ್ಷಿಣ ಕರ್ನಾಟಕದ ಪ್ರಮುಖ ಯಾತ್ರಾಸ್ಥಳಗಳಿಗೆಲ್ಲಾ ಇವರ ಹರಕೆಗಳನ್ನು ತೀರಿಸಲು(!) ಹೋಗಿದ್ದ ಹಾಗೂ ಹೋಗುತ್ತಿದ್ದ ನನಗೆ ಯಾತ್ರಗಳೇನೂ ಹೊಸತಾಗಿರಲಿಲ್ಲ! ಆಗಲೇ ನಿಂತರೂ ಕುಳಿತರೂ ಭಗವನ್ನಾಮ ಸ್ಮರಣೆಯನ್ನು ಜಪಿಸಲಾರಂಭಿಸಿದ್ದ (ಸಧ್ಯ ನನ್ನ ಹೆಸರನ್ನು ಕರೆಯದೇ ಇದ್ದುದು ಒಳ್ಳೆಯದೇ ಆಯ್ತು. ಇಲ್ಲದಿದ್ದರೆ `ಸ್ಥಾನಪಲ್ಲಟ’ವಾದ ನೋವನ್ನು ಅನುಭವಿಸುವಂತಾಗುತ್ತಿತ್ತು!)ಇವರೂ ಇಷ್ಟ ದೈವದರ್ಶನದ ಆನಂದ ಸ್ಥಿತಿಯಲ್ಲಿ ಪ್ರಸಾದ ಸೇವನೆಗೆ ಕುಳಿತಾಗ ಊಟದ ಎಲ್ಲಾ ಐಟಂಗಳಲ್ಲಿಯೂ ಬೆಳ್ಳುಳ್ಳಿಯೇ ರಾರಾಜಿಸುತ್ತಿದ್ದುದನ್ನು ನೋಡಿ (ಆಘ್ರಾಣಿಸಿ) ಎದ್ದು ಹೊರ ನಡೆದೇ ಬಿಟ್ಟರು. ಅದುವರೆಗೂ `ಬೆಳ್ಳುಳಿ’ ಎಂದರೇನೆಂದೇ ಅರಿಯದ ಮಕ್ಕಳೂ ಆ ವಿಶೇಷ ಕಟುವಾಸನೆಗೆ ಬೆದರಿ ಅಪ್ಪನ ಹಿಂದೇ ಓಟ ಕಿತ್ತರು (ಬಸವನ ಹಿಂದೆ ಬಾಲದಂತೆ!) ನಾನೂ ಸಿಕ್ಕ ಒಂದು ವಿಶೇಷಾವಕಾಶ ವಂಚಿತಳಾಗಿ ಅವರನ್ನು ಹಿಂಬಾಲಿಸಿದೆ. ಹಸಿದ ಹೊಟ್ಟೆಯನ್ನು ತುಂಬಲು ಪ್ರತಿ ಹೊಟೆಲ್ ಮುಂದೂ ನಿಂತು `ಅಮ್ಮಾ..., ತಾಯೀ...,’ ಎನ್ನುವಂತೆ , `ಅಡುಗೆಗೆ ಬೆಳ್ಳುಳ್ಳಿ ಹಾಕಿದೀರಾ...?’ಎಂದು ಹರುಕು ಮುರುಕು ಹಿಂದಿಯಲ್ಲಿ ವಿಚಾರಿಸುತ್ತಾ ಅಲೆದಲೆದು ಕಡೆಗೆ `ಆಂದ್ರ ಸ್ಪೆಷಲ್’ ಎಂಬ ಹೊಟೆಲ್‌ನಲ್ಲಿ ಒಂದಕ್ಕೆರಡರಷ್ಟು ಬೆಲೆತೆತ್ತು ಅಲ್ಲಿದ್ದಷ್ಟು ದಿನವೂ ಊಟ ಮಾಡಿದ್ದಾಯ್ತು!
                ನಾವು ಸೈಟನ್ನು ತೆಗೆದುಕೊಂಡು ಬಹಳದಿನ ( ಏಕೆ ವರ್ಷಗಳೇ)ಆ ಕಡೆಗೆ ತಲೆ ಹಾಕದೇ ಕಟ್ಟಿದ ಮನೆಯನ್ನೇ ಕೊಳ್ಳುವ ಯೋಜನೆಯಲ್ಲಿ ಸಾಕಷ್ಟು ಅಲೆದಲೆದು ಯಾವುದೂ ಸರಿಬರದಿದ್ದಾಗ (ನಮ್ಮ ಆರ್ಥಿಕ ಮಿತಿಗೆ ಹೊಂದದಿದ್ದಾಗ!) ಸ್ವತ: ಕಟ್ಟುವ ತೀರ್ಮಾನಕ್ಕೆ ಬಂದು ಸೈಟನ್ನು ನೋಡಲು ಹೋದೆವು. ದೂರದಿಂದಲೇ ನಮ್ಮ ಸೈಟಿನಲ್ಲಿ ಧವಳಾಚ್ಛಾದಿತ ರಾಶಿಯನ್ನು ನೋಡಿ ಏನಿರಬಹುದೆಂಬ ಕುತೂಹಲದಲ್ಲಿ ಹತ್ತಿರ ಸಾರುವ ಮೊದಲೇ ನಮ್ಮ ಬಳಿಗೇ ತನ್ನ ಇರವನ್ನು ವಾಸನಾ ರೂಪದಲ್ಲಿ ಸಾರಿಬಿಟ್ಟಿತು! ಆಗಲೇ ಗೊತ್ತಾಗಿದ್ದು ಅಲ್ಲಿ ಸುತ್ತೆಲ್ಲಾ ತಲೆ ಎತ್ತಿರುವ ಗೃಹಗಳ ನಿವಾಸಿಗಳು ಬೆಳ್ಳುಳ್ಳಿ ವ್ಯಾಪಾರ ಮಾಡುವವರು ಎಂದು. ಕ್ಲೀನ್ ಮಾಡಬೇಕಾದ ಬೆಳ್ಳುಳ್ಳಿಯನ್ನು ರಾಶಿರಾಶಿಯಾಗಿ ಖಾಲಿ ಸೈಟ್‌ಗಳಲ್ಲಿ ಸುರಿದಿರುತ್ತಿದ್ದರು. ಈಗಾಗಲೇ ಮನೆ ಹುಡುಕಿ ಹುಡುಕಿ ದಣಿದಿದ್ದ ಇವರು ಈ `ಲಸನ್’ ವಾಸನಾಸ್ತ್ರದಿಂದ ಹಿಮ್ಮೆಟ್ಟದೇ ಮನೆ ಕಟ್ಟಲು ನಿರ್ಧರಿಸೇಬಿಟ್ಟರು. ಗೃಹ ಪ್ರವೇಶವಾದನಂತರ ಸುತ್ತಿನ ವಾಸನಾ ಜಗತ್ತಿನ ಬಲದಿಂದ `ಬೆಳ್ಳು’ಗೆ ಮನೆಯ ಗುಪ್ತ ಸ್ಥಳವೊಂದರಲ್ಲಿ ವಾಸ ಪರವಾನಗಿ ನೀಡಿದೆ. ಇವರು ಪರ ಊರುಗಳಿಗೆ ಪ್ರಯಾಣ ಬೆಳೆಸಿದಾಗ ಅಡುಗೆಯ ವಿಶೇಷ `ಬೆಳ್ಳು’ವಿನಿಂದೊಡಗೂಡಿರುವುದು ಮಕ್ಕಳಿಗೆ ಸರ್ವೇ ಸಾಮಾನ್ಯವಾಯಿತು. ಅಂತೂ ಈ ಮೂಲಕ ಮಕ್ಕಳನ್ನು ಒಂದು ವಿಶಿಷ್ಟ ಆರೋಗ್ಯಕರ ರುಚಿಗೆ ಪರಿಚಯಿಸಿದ ಹಾಗೂ ಯಾವುದೇ ಶಾಕಾಹಾರೀ ಹೊಟೆಲ್‌ಗಳಲ್ಲಿಯೂ ಊಟಮಾಡಬಹುದಾದ ಸಾಮರ್ಥ್ಯವನ್ನು ದಯಪಾಲಿಸಿದ ಭಾಗ್ಯ ನನ್ನದಾಯಿತು!
                   ಬೆಳ್ಳುಳ್ಳಿ ಮತ್ತು ಇವರ ನಡುವಿನ ವಿಕರ್ಷಣಾ ಸಂಬಂಧ ಎಷ್ಟೊಂದು ಗಾಢವಾಗಿದೆಯೆಂದರೆ (ಆಕರ್ಷಣೆಗಿಂತ ವಿಕರ್ಷಣೆಯೇ ಅತ್ಯಂತ ಪ್ರಭಲವಾದ ಶಕ್ತಿ ಎಂದು ನಂಬಲು ನನಗೆ ಇದಕ್ಕಿಂತಾ ಪುರಾವೆ ಬೇಕು ಎನಿಸುವುದಿಲ್ಲ!) ಇವರ ಬಗ್ಗೆ ಹೇಳದೇ ಬೆಳ್ಳುಳ್ಳಿಯ ಬಗ್ಗೆ ಹೇಳಲು ಸಾಧ್ಯವಾಗುತ್ತಲೇ ಇಲ್ಲ. ಆದರೂ ಒಮ್ಮೆ ಬೆಳ್ಳುಳ್ಳಿಯ ಅರ್ಥ ಲೋಕವನ್ನು ಪ್ರವೇಶಿಸಿದಾಗ ಎಂದರೆ ನಿಘಂಟುಗಳನ್ನು ತೆರೆದಾಗ ನನಗೆ ತೀವ್ರ ಆಘಾತವೇ ಕಾದಿತ್ತು! ಎಲ್ಲಾ ಮನುಜ ನಿರ್ಮಿತ ವರ್ಗಗಳಲ್ಲೂ ಭೇದ ಭಾವವಿರುವಂತೆ ಸಹೋದರ ರೂಪಿಗಳಾದ ಈರುಳ್ಳಿ ಬೆಳ್ಳುಳ್ಳಿಗಳಲ್ಲಿಯೂ ತಾರತಮ್ಯ ಎದ್ದು ಕಾಣುವಂತಿತ್ತು. `ಈರುಳ್ಳಿ’ ಎಂದರೆ ಉಳ್ಳೇಗೆಡ್ಡೆ, ನೀರುಳ್ಳೆ ಎಂದಿದ್ದರೆ `ಬೆಳ್ಳುಳ್ಳಿ’ ಎನ್ನುವ ಪದವೇ ಕಾಣಲಿಲ್ಲ! ಇರಲಿ ಎಂದು ಆಂಗ್ಲ ಪದ GARLIC ( ಗಾರ್ಲಿಕ್) ಅನ್ನು ನೋಡಿದೆ. `A plant with bulbous strong smelling root—ಬೆಳ್ಳುಳ್ಳಿಎಂದಿತ್ತು. ಅಯ್ಯೋ ನಮ್ಮ ಬೆಳ್ಳುಳ್ಳಿಯ ಸ್ಥತಿಯೇ ಎಂದುಕೊಂಡು ಛಲ ಬಿಡದಂತೆ ಹಿಂದಿಯಲ್ಲಿ `ಲಸನ್ಎನ್ನುತ್ತಾರೆ ಎಂದು ತಿಳಿದು ಆ ಪದವನ್ನೇನಾದರೂ ಕೊಟ್ಟಿದ್ದಾರೆಯೋ ನೋಡೋಣ ನಮ್ಮ ಸರ್ವಭಾಷಾ ಸಮನ್ವಯ ಭಾವಾಪ್ರಿಯ ಪಂಡಿತರು ಎನ್ನುವ ಕುತೂಹಲದಿಂದ ಹಾಳೆಗಳನ್ನು ಮಗುಚಿದೆ. ಓಹೋ ಸಿಕ್ಕೇ ಬಿಟ್ಟಿತು! ಲಸನ್ ಅಲ್ಲ `ಲಶುನಎಂದರೆ ಬೆಳ್ಳುಳ್ಳಿ ಎಂದು! ನಮ್ಮ ಹಿಂದೂ ಸಂಪ್ರದಾಯದ ಮದುವೆಯಲ್ಲಿ ಭೂಮದ ಊಟದಲ್ಲಿ ವರನು ವಧುವಿನ ( ವಧು ಬಲಭಾಗದಲ್ಲಿ ಕೂರುವ ಅನಾನುಕೂಲದಿಂದಲೋ ಏನೋ!) ಕತ್ತನ್ನು ಬಳಸಿ ಬಾಯಿಗೆ ತುತ್ತನ್ನು ಇಟ್ಟಂತೆ! ಬಿಳಿಯ ಬಣ್ಣದಿಂದಲೇ ಈ ಹೆಸರು ಬಂದಿದೆ ಎಂದು ತರ್ಕಿಸಿ `ಬೆಳ್’ (ಬೆಳ್ಳುಳ್ಳಮ್ಮ ಬೆಳ್ಳುಳ್ಳಿ ಬೆಳ್ಳಿ ಬೆಳಕಿನ ಬೆಳ್ಳುಳ್ಳಿ..!) ಎನ್ನುವ ಪದದ ಅರ್ಥ ಶೋಧನೆಗೆ ಹೊರಟೆ. `ಬೆಳ್ಎಂದರೆ ಬಿಳುಪಾದ , ದಡ್ಡತನ(!)ದಿಂದ ಕೂಡಿದ ಎನ್ನುವುದರ ಜೊತೆಗೇ `ಉಳ್ಳಿಸೇರಿಸಿದಾಗ ಅಡುಗೆಗೆ ಉಪಯೋಗಿಸುವ ಕಟು ವಾಸನೆ ಮತ್ತು ರುಚಿಯುಳ್ಳ ಒಂದು ಜಾತಿಯ ಗೆಡ್ಡೆ ಎಂದಿತ್ತು. ಅದರ ರುಚಿ, ವಾಸನೆಯೇ ಮುಖ್ಯವಾಯಿತೇ ಹೊರತು ಅದರ ವೈದ್ಯಕೀಯ ಪ್ರಾಮುಖ್ಯತೆಯ ಬಗ್ಗೆ ಸೂಚಿಸಿಲ್ಲವಲ್ಲಾ ಎನ್ನುವ ತವಕದಲ್ಲೇ `ಉಳ್ಳಿಅರ್ಥಾನ್ವೇಷಿಯಾದೆ. ನೀರುಳ್ಳಿ, ಉರುಳುಗೆಡ್ಡೆ ಎಂದು ಒಂದು ಕಡೆ ಇದ್ದರೆ ಈರುಳ್ಳಿ, ಬೆಳ್ಳುಳ್ಳಿ ಎಂದು ಮತ್ತೊಂದು ಕಡೆ ಸಿಕ್ಕಿತು. `ಉಳ್ಳಿಎಂದರೆ ಹುರುಳಿಕಾಳು ಎಂದು ಮಾತ್ರ ತಿಳಿದಿದ್ದೆ. `ಉಳ್ಳಿ ತಿಂದಮ್ಮನಿಗೆ ಉಳುಕಿತು. ಬೆಳ್ಳುಳ್ಳಿ ತಿಂದಮ್ಮನಿಗೆ ನಾರ್‍ತು.’  ಎನ್ನುವುದು ನಮ್ಮ ಕಡೆಯ ಸಾಮಾನ್ಯ ಮಾತಾಗಿತ್ತು.     
                  ನನ್ನ ದೃಷ್ಟಿಯಲ್ಲಿ ಇವರ ಮತ್ತು ಬೆಳ್ಳುಳ್ಳಿಯ ನಡುವೆ ಹೇಗೆ ಅವಿನಾಭಾವ ಸಂಬಂಧ ಏರ್ಪಟ್ಟಿದೆಯೋ ಅದೇ ರೀತಿ ಆಂತರಿಕವಾಗಿ ಬೆಳ್ಳುಳ್ಳಿ ನನ್ನೊಳಗಿನ ವಿಕಟಕವಿಯನ್ನು ಬಡಿದೆಬ್ಬಿಸಿ ಮೊಗದ ಮೇಲಿನ ನಗೆಯಾಗಿ ಮಾರ್ಪಟ್ಟು ನನ್ನಲ್ಲಿ ಲಸನ್ ಮಂದಹಾಸವಾಗಿ (`ಲಸನ್ ಮಂದಹಾಸ ಪ್ರಭಾ ವಕ್ರ ತುಂಡ...!)ಮೂಡಿ ಮೆರೆಯುತ್ತಿದೆ! ಈಗ ಅಕ್ಕಪಕ್ಕದಲ್ಲಿ ಮನೆಗಳಾಗಿ ಅವರ ಮನೆಗಳಲ್ಲಿ ಅಟ್ಟುವ ಅಡುಗೆಯ ಪರಿಮಳ ನಮ್ಮ ಮನೆಯನ್ನೂ ತುಂಬುವುದರಿಂದ ಆ ಲಶುನ ವಾಸನಾ ತೆರೆಯ ಮರೆಯಲ್ಲಿಯೇ ನಮ್ಮ ಮನೆಯಲ್ಲಿಯೂ ಬೆಳ್ಳುಳ್ಳಿಯನ್ನು ಅಡುಗೆಯ ಒಂದು ಭಾಗವನ್ನಾಗಿಸುವ ಪ್ರಯತ್ನವನ್ನು ಮುಂದುವರಿಸೇ ಇದ್ದೇನೆ. ಈ ಸೂಕ್ಷ್ಮವನ್ನು ಮನಗಂಡ ಇವರು ಹುರಿಯುವ, ಅರೆಯುವ,...ಒಗ್ಗರಣೆಹಾಕುವಂತಹ ಪ್ರಮುಖ ಕಾರ್ಯಭಾರಗಳನ್ನು ತಮ್ಮದಾಗಿಸಿಕೊಂಡು ನನಗೆ ಅಡುಗೆಮನೆಗೆ ಪ್ರವೇಶ ನಿಶಿದ್ಧ ಮಾಡುವ ಸನ್ನಾಹದಲ್ಲಿದ್ದಾರೆ! ಆದರೂ..... ಫಲಕಾರಿಯಾಗುವ ಆಶಾಭಾವನೆಯಲ್ಲಿ ಕೋಲಿನ ತುದಿಗೆ ಕಟ್ಟಿದ ಹುಲ್ಲಿನ ಆಸೆಗೆ ಮುನ್ನುಗ್ಗುತ್ತಿರುವ ಕುದುರೆಯಂತೆ ಬದುಕ ಬಂಡಿಯನ್ನು ಓಡಿಸುತ್ತಿದ್ದೇನೆ!       



No comments:

Post a Comment