Monday, July 6, 2015

ಹಗ್ಗ

ಹೊಸೆಯುತ್ತಿದ್ದಾನೆ ಈತ ಹಗ್ಗವ
ಹೊಸೆದ ಭಾಗವ ಕಾಲಿನಿಂದ ಮೆಟ್ಟಿ
ಆಗಾಗ ಪರೀಕ್ಷಿಸುತ್ತಾ ಗಟ್ಟಿತನವ

ಉಡಿಯುತ್ತಲೇ ಮಧ್ಯೆ ಮಧ್ಯೆ
ಸೇರಿಸುವ ಸೆಣಬು
ಎಂದೋ ಕತ್ತಾಳೆ ಕೊಳೆಯಿಸಿ
ಸಿದ್ಧಗೊಳಿಸಿದ ಕಸುಬು

ಅಲ್ಲಲ್ಲಿ ತೆಂಗಿನ ಜುಂಗು
ಈಗೀಗ ಸಂಶ್ಲೇಶಿತ ನಾರು
ಎಂದೂ ಮುಗಿಯದ
ಕಾರುಬಾರು

ಆದಿಯಿಲ್ಲದ ಈ ಹಗ್ಗ
ಚಾಚುತಿದೆ ಅನಂತಕೆ
ಜೀಗುವುದಷ್ಟೇ
ಕಸುಬುಗಾರಿಕೆ!

ಅಂದು
ತೂಗುತೊಟ್ಟಿಲಾಗಿದ್ದು
ಜೀವಜಂತುಗಳಿಗೆ
ಉರುಲೂ ಆಗಿದೆ ಇಂದು
ಅಪರಾಧಿ ನಿರಪರಾಧಿಗಳಿಗೆಲ್ಲಾ

ಆಕಾಶಕ್ಕೇರಿಸುವ
ನೂಲು ಏಣಿ
ಪ್ರಪಾತದತ್ತ
ಹಾರಲೂ ಅಣಿ!

ಸುತ್ತ ಸೆಳೆಯುತಿದೆ
ಎಲ್ಲರನೂ ತನ್ನತ್ತ
ಅಲ್ಲಲ್ಲೆ ನಿರ್ಮಿತ
ದಾಟಲಾರದ ವೃತ್ತ

ಸ್ಪೋಟಗೊಳ್ಳುತಲೇ ಇದೆ
ಅತೃಪ್ತಿ
ಹಗ್ಗಕಿದರ ಎಗ್ಗೇ ಇಲ್ಲ
ಉದ್ದುದ್ದ ಬೆಳೆಯುತ್ತಲೇ ಇದೆ
`ಕೊಳೆ’ಯನೇ ಮೆತ್ತಿಕೊಳ್ಳುತ್ತಾ...
ಆಸ್ವಾದಿಸುತ್ತಾ...

No comments:

Post a Comment