Sunday, June 19, 2011

ಮನದ ಅಂಗಳದಿ.........೪೫. 'ಸು''ಸಂಸ್ಕೃತ’

ನಾನು ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ಪ್ರಥಮ ಭಾಷೆಯಾಗಿ 'ಸಂಸ್ಕೃತ’ವನ್ನು ತೆಗೆದುಕೊಂಡಿದ್ದೆ. 'ತೆಗೆದುಕೊಂಡಿದ್ದೆ' ಎನ್ನುವುದಕ್ಕಿಂತಲೂ ನಮ್ಮ ತಂದೆ ಅವರಿಗೆ ಅತ್ಯಂತ ಪ್ರಿಯವಾದ 'ಸಂಸ್ಕೃತ’ವನ್ನು ನಾವೂ ಕಲಿಯಲಿ ಎಂದು ನಮ್ಮೆಲ್ಲರಿಗೂ ಕೊಡಿಸಿದ್ದರು. ಮನೆಯಲ್ಲಿಯೇ ಆ ಮೊದಲೇ ಸಾಕಷ್ಟು 'ಸಂಸ್ಕೃತ’ ಶ್ಲೋಕಗಳನ್ನು ಕಲಿತಿದ್ದರಿಂದ ಹಾಗೂ ಅದಕ್ಕೆ ಸಂಬಂಧಿಸಿದ ಅನೇಕ ಕಥೆ-ಉಪಕಥೆಗಳು ಪ್ರಚಲಿತವಿದ್ದುದರಿಂದ 'ಸಂಸ್ಕೃತ’ ನನ್ನನ್ನು ಬಹಳವಾಗಿ ಆಕರ್ಷಿಸಿತ್ತು. ಅಕ್ಕನಂತೆ ನಾನೂ ಸರಾಗವಾಗಿ 'ಸಂಸ್ಕೃತ’ ಪಾಠಗಳನ್ನು ಓದಬೇಕು ಎನ್ನುವುದು ನನ್ನ ಕನಸಾಗಿತ್ತು! ನಮ್ಮ ಶಾಲೆಯಲ್ಲಿ ಇದ್ದ 'ಸಂಸ್ಕೃತ’ ಪಂಡಿತರು ಶ್ಲೋಕಗಳಿಗೆ ಸಂಬಂಧಿಸಿದ ಕಥೆಗಳನ್ನು ಬಹಳ ಆಕರ್ಷಕವಾಗಿ ಹೇಳುತ್ತಿದ್ದರು. ಆಗ ಕೇಳಿದ ಆ ಶ್ಲೋಕಗಳು ಹಾಗೂ ಅದರ ಕಥೆಗಳು ಈಗಲೂ ಅಚ್ಚಳಿಯದಂತೆ ಮನದ ಮೂಲೆಯಲ್ಲಿ ಹುದುಗಿವೆ. ಒಬ್ಬಳೇ ನಡೆಯುತ್ತಿರುವಾಗ ಆಗಾಗ ನೆನಪಿಗೆ ಬಂದು ತಮ್ಮ ಇರುವನ್ನು ಸಾರುತ್ತವೆ. ಅವುಗಳಲ್ಲಿ ಎರಡನ್ನು ನಿಮ್ಮೊಡನೆ ಹಂಚಿಕೊಳ್ಳುತ್ತೇನೆ:

ಅಂಬಾ ಕುಪ್ಯತಿ ನ ಮಯಾ ನ ತಯಾ

ಸಾಪಿ ಕುಪ್ಯತಿ ನ ಅಂಬಾ ನ ಮಯಾ|

ಅಹಮಪಿ ಕುಪ್ಯಾಮಿ ನ ತಯಾ ನ ತಯಾ

ವದಾ ರಾಜನ್ ಕಸ್ಯ ದೋಷೋಯಂ||

ಒಮ್ಮೆ ಎಂದಿನಂತಯೇ ರಾಜನು ರಾತ್ರಿ ವೇಳೆಯಲ್ಲಿ ಮಾರುವೇಶದಲ್ಲಿ ನಗರ ಪರ್ಯಟನೆ ಮಾಡುತ್ತಿರುತ್ತಾನೆ. ಒಂದು ಮನೆಯಿಂದ ಜೋರಾದ ಜಗಳದ ಶಬ್ದ ಕೇಳುತ್ತದೆ. ಆ ಮನೆಯ ಬಳಿ ಹೋಗಿ ಗಮನಿಸಿದಾಗ ಒಬ್ಬ ವೃದ್ದೆ, ಓರ್ವ ಹೆಂಗಸು ಹಾಗೂ ಗಂಡಸೊಬ್ಬನ ಕಿರುಚಾಟ ಕೇಳುತ್ತಿರುತ್ತದೆ. ಒಬ್ಬರು ಮತ್ತೊಬ್ಬರ ಮಾತನ್ನು ಲೆಕ್ಕಿಸದೇ ತಮ್ಮದೇ ರೀತಿಯಲ್ಲಿ ಕೂಗಾಡುತ್ತಿರುತ್ತಾರೆ. ಏನೊಂದೂ ಅರ್ಥವಾಗದೆ ಹಿಂತಿರುಗಿದ ರಾಜ ಹಗಲಾದ ನಂತರ ತನ್ನ ಭಟರನ್ನು ಕಳುಹಿಸಿ ಆ ಮನೆಯ ಯಜಮಾನನ್ನು ಕರೆಸುತ್ತಾನೆ. ಆ ಮನೆಯ ಸ್ಥಿತಿಯ ಬಗ್ಗೆ ವಿಚಾರಿಸಿದಾಗ ಆತ ಮೇಲಿನ ಶ್ಲೋಕದಂತೆ ಈ ರೀತಿಯಾಗಿ ಹೇಳುತ್ತಾನೆ:

'ಅಮ್ಮ ಕೋಪಿಸಿಕೊಳ್ಳುವಳು

ನಾ ಕಾರಣವಲ್ಲ, 'ಅವಳು' ಅಲ್ಲ

'ಅವಳು' ಕೋಪಿಸಿಕೊಳ್ಳುವಳು

ಕಾರಣ ಅಮ್ಮನಲ್ಲ, ನಾನೂ ಅಲ್ಲ

ನಾನೂ ಕೋಪಿಸಿಕೊಳ್ಳುವೆನು

ಅವರಿಬ್ಬರೂ ಕಾರಣರಲ್ಲ

ಹೇಳು ರಾಜನೇ, ಯಾರ ದೋಷವಿದು?'

ರಾಜನು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಅವರ ಬಡತನವನ್ನು ನೀಗುವ ವ್ಯವಸ್ಥೆಯನ್ನು ಮಾಡುತ್ತಾನೆ.

ಈ ಕಥೆಯಲ್ಲಿ ರಾಜನು ಮಾರುವೇಶದಲ್ಲಿ ಹೋಗಿ ತನ್ನ ಪ್ರಜೆಗಳ ಸ್ಥಿತಿಗತಿಗಳನ್ನು ತಿಳಿದುಕೊಳ್ಳುವ ರೀತಿ ನನಗೆ ಬಹಳ ಪ್ರಿಯವೆನಿಸುತ್ತಿತ್ತು!

ಮತ್ತೊಂದು ಶ್ಲೋಕ ಹೀಗಿದೆ:

ಭಟ್ಟಿರ್ನಷ್ಟಃ ಭಾರವೀಯೋಪಿ ನಷ್ಟಃ

ಭಿಕ್ಷುರ್ನಷ್ಟಃ ಭೀಮಸೇನೋಪಿ ನಷ್ಟಃ|

ಭಭಾವಳ್ಯಾಮಂತಕಃ ಸನ್ನಿವಿಷ್ಟಃ

ಭುಕ್ಕುಂಡೋಹಂ ಭೂಪತಿಃ ತ್ವಂ ಹಿ ರಾಜನ್||

ಒಂದುಸಾರಿ ಒಬ್ಬ ಕಳ್ಳನನ್ನು ರಾಜಾಸ್ಥಾನಕ್ಕೆ ಹಿಡಿದು ತರುತ್ತಾರೆ. ಅವನು ಮಾಡಿದ ಅಪರಾಧಗಳನ್ನು ಪರಿಶೀಲಿಸಿ ಅವನಿಗೆ ಮರಣದಂಡನೆಯನ್ನು ವಿಧಿಸಲಾಗುತ್ತದೆ. ಕಳ್ಳನು ತನ್ನ ಕಡೆಯ ಆಸೆಯಾಗಿ ರಾಜನಲ್ಲಿ ಈ ರೀತಿಯಾಗಿ ಅರಿಕೆ ಮಾಡಿಕೊಳ್ಳುತ್ತಾನೆ.

'ಭಟ್ಟಿ ಸತ್ತನು, ಭಾರವಿಯೂ ಸತ್ತನು

ಭಿಕ್ಷು ಸತ್ತನು ಭೀಮಸೇನನೂ ಸತ್ತನು

ಭ ಭಾ ....ಸರದಿಯಂತೆ ಯಮನು ಕೊಂಡೊಯ್ಯುತಿರುವನು

ರಾಜನೇ, ಭುಕ್ಕುಂಡ ನಾನು, ಭೂಪತಿ ನೀನು !'

ಇದರಲ್ಲಿರುವ ಚಮತ್ಕಾರವನ್ನು ಗಮನಿಸಬೇಕು. ಯಮನು ಭ ಭಾ ಭಿ ಭೀ...ರೀತಿಯಲ್ಲಿ ಸೆಳೆದೊಯ್ಯುತ್ತಿದ್ದಾನೆ. ಕಳ್ಳನ ಹೆಸರು 'ಭುಕ್ಕುಂಡ', ಎಂದರೆ 'ಭು' ನಿಂದ ಪ್ರಾರಂಭವಾಗುತ್ತದೆ. ಅವನ ಸಾವಿನ ನಂತರದ ಸರದಿ 'ಭೂ'-ಭೂಪತಿ, ಎಂದರೆ ರಾಜನೇ ಆಗುತ್ತಾನೆ!

ಕಳ್ಳನ ಚತುರತೆಯನ್ನು ಅರ್ಥಮಾಡಿಕೊಂಡ ರಾಜ, 'ಆತ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಕಳ್ಳತನಕ್ಕೆ ಇಳಿದಿದ್ದಾನೆ,' ಎಂದು ವಿಶ್ಲೇಷಿಸಿ ಅವನಿಗೆ ಜೀವದಾನಮಾಡಿ ಉದ್ಯೋಗವನ್ನು ನೀಡುತ್ತಾನೆ.

ಆಗಿನ ರಾಜರು ಗುಣಗ್ರಾಹಿಗಳಾಗಿದ್ದರು ಎನ್ನುವುದನ್ನು ಇವುಗಳಿಂದ ನಾವು ತಿಳಿದಿದ್ದೆವು. ಒಬ್ಬ ಸಾಮಾನ್ಯ ಪ್ರಜೆಯೇ ಆಗಲೀ, ಕಳ್ಳನೇ ಆಗಲೀ ಅವರಲ್ಲಿರುವ ವಿಶೇಷತೆಯನ್ನು ಅರ್ಥಮಾಡಿಕೊಂಡು ಅವರ ಕಷ್ಟಗಳಿಗೆ ಸ್ಪಂದಿಸುವ ಹಾಗು ಮನಃ ಪರಿವರ್ತನೆಯನ್ನು ಮಾಡುವ ದೊಡ್ಡತನವನ್ನು ಆ ರಾಜರು ಹೊಂದಿದ್ದರು. ಆಳುವ ವರ್ಗದಲ್ಲಿ ಇಂಥಾ ಗುಣ ವಿಶೇಷಗಳಿದ್ದರೆ ಯಾವುದೇ ಸಂದರ್ಭವನ್ನು ಸಮರ್ಥವಾಗಿ ನಿರ್ವಹಿಸಬಲ್ಲವರಾಗಿರುತ್ತಾರೆ.

ಪಿ.ಯು.ಸಿ.ಯ ನಂತರ 'ಸಂಸ್ಕೃತ’ವನ್ನು ಓದಲಾಗಲಿಲ್ಲವಲ್ಲ ಎನ್ನುವ ಕೊರಗು ಬಹಳ ದಿನ ಬಾಧಿಸಿತು. ಆದರೆ ಆಗ ಕಲಿತ ಸುಭಾಷಿತಗಳು ಈಗಲೂ ದಾರಿದೀಪವಾಗಿವೆ.

9 comments:

 1. ಪ್ರಭಾಮಣಿಯವರೆ,
  ಸಂಸ್ಕೃತದ ಸುಭಾಷಿತಗಳು ಮನಸ್ಸಿಗೆ ಉಲ್ಲಾಸವನ್ನು ತರುತ್ತವೆ. ಅಂತಹ ಎರಡನ್ನು ವಿವರಣೆಯೊಂದಿಗೆ ಉಣಬಡಿಸಿದ ನಿಮಗೆ ಧನ್ಯವಾದಗಳು.

  ReplyDelete
 2. ಒಂದು ವಿಷಯ ನನಗೆ ಇಷ್ಟವಾಗಲಿಲ್ಲ. ’ಸಂಸ್ಕೃತ’ ಮೂಲ ಶಬ್ದದಲ್ಲೇ ಚಂದಕಾಣುತ್ತದೆ. ಕನ್ನಡವೆಂಬ ಅಭಿಮಾನ ಸರಿಯೇ, ಆದರೆ ಕನ್ನಡಕ್ಕಾಗಿ ಅದನ್ನು ’ಸಂಸ್ಕ್ರುತ’ ಮಾಡುವುದು ಸರಿಯಲ್ಲ. ಸಂಸ್ಕೃತಿಯನ್ನು ಕಲಿಸುವ ಸಂಸ್ಕೃತ ಆ ರೂಪದಲ್ಲೇ ಚಂದ. ಆ ಭಾಷೆಯ ಅಲಂಕಾರ, ವ್ಯಾಕರಣ, ಛಂದಸ್ಸು, ನುಡಿಗಟ್ಟು, ಸುಭಾಷಿತ ಪ್ರತಿಯೊಂದೂ ಪರಿಪೂರ್ಣ. ಭಾಷೆಗಳ ತಾಯಿ ಎಂದು ಹೇಳುವುದರಲ್ಲಿ ಅರ್ಥವಿದೆ ಎನಿಸುತ್ತದೆ. ದೇವನಾಗರಿಯ ಬಗ್ಗೆ ನಿಮ್ಮ ಅನಿಸಿಕೆ ಇಷ್ಟವಾಯಿತು.

  ReplyDelete
 3. ಭಟ್ ಸರ್,
  Google Transliteration ನಲ್ಲಿ 'ಸಂಸ್ಕೃತ’ ದ 'ಸ್ಕೃ'ಎ೦ದು ಟೈಪ್ ಮಾಡಲು ಬಹಳ ಪ್ರಯತ್ನಿಸಿದೆ. ಸಾಧ್ಯವಾಗದೆ ಕಡೆಗೆ 'ಸ್ಕ್ರು' ಎ೦ದೆ ಬರೆಯಬೇಕಾಯಿತು. ಕ್ಷಮಿಸಿ. ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು.

  ReplyDelete
 4. ಸುನಾಥ್ ಸರ್,
  ಸಂಸ್ಕೃತದ ಸುಭಾಷಿತಗಳನ್ನು ಓದುವುದೇ ಒ೦ದು ಆನ೦ದ. ಶೀಘ್ರವಾಗಿ ಪ್ರತಿಕ್ರಿಯಿಸಿದ್ದಕ್ಕಾಗಿ ವ೦ದನೆಗಳು.

  ReplyDelete
 5. ಮೇಡಂ;ಸಂಸ್ಕೃತದ ಸುಭಾಷಿತಗಳ ಸೊಗಡೆ ಬೇರೆ!ಸುಮಾರು ನಲವತ್ತೈದು ವರ್ಷಗಳ ಹಿಂದೆ ಕಲಿತ ಸುಭಾಷಿತವೊಂದು ನನಗಿನ್ನೂ ನೆನಪಿದೆ!

  ReplyDelete
 6. ಸುಭಾಷಿತ ರಸಸ್ಯಾಗ್ರೇ ಸುಧಾ ಭೀತಾ ದಿವ೦ಗತಾ| ನೆನಪಾಯ್ತು..
  ಉತ್ತಮ ವಿವರಣೆಯನ್ನು ಕೊಟ್ಟಿದ್ದೀರಿ. ಅಭಿನ೦ದನೆಗಳು ಮೇಡ೦.

  ಅನ೦ತ್

  ReplyDelete
 7. ಭ ಭಾ ಭಿ ಭೀ ಸರದಿಯ ಪದ್ಯ ತುಂಬಾ ಇಷ್ಟವಾಯಿತು. ಸಂಸ್ಕೃತ ಶ್ಲೋಕಗಳಲ್ಲಿರುವ ಅದ್ಭುತ ಅರ್ಥಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು!

  ReplyDelete
 8. ಬರಹ ಅದ್ಬುತವಾಗಿದೆ .ಮನಸ್ಸಿಗೆ ಬಹಳ ಇಷ್ಟವಾಯಿತು.

  ReplyDelete
 9. ಕಥೆ ಬಹಳ ಚೆನ್ನಾಗಿದೆ.. ಸು ಸಂಸ್ಕೃತ ವಿಷ್ಲೇಷಣೆಗೆ ಧನ್ಯವಾದಗಳು

  ReplyDelete