Sunday, June 5, 2011

ಮನದ ಅಂಗಳದಿ.........೪೨. ಪುಸ್ತಕಗಳು

ಪುಸ್ತಕಗಳು ಮನುಷ್ಯನ ಅಚ್ಚುಮೆಚ್ಚಿನ ಸ್ನೇಹಿತನಿದ್ದಂತೆ. 'ಪುಸ್ತಕಗಳು ಕಿಸೆಯ ಕೈತೋಟವಿದ್ದಂತೆ,'ಎನ್ನುವ ಒಂದು ಉಕ್ತಿ ಇದೆ. ಮಹಾನ್ ಪುಸ್ತಕ ಪ್ರೇಮಿಯಾದ ನಮ್ಮ ತಂದೆಯವರು ಧರಿಸುತ್ತಿದ್ದ ವಿಶೇಷವಾದ ಅಂಗಿಯಲ್ಲಿ ತೋಳಿನ ಕೆಳಗೆ ಇರುತ್ತಿದ್ದ ಒಳ ಜೇಬಿನಲ್ಲಿ ಯಾವಾಗಲೂ ಎರಡು-ಮೂರು ಸಣ್ಣ ಪುಸ್ತಕಗಳಿರುತ್ತಿದ್ದವು! ಅವರು ಯಾವಾಗಲೂ, 'ಪುಸ್ತಕಂ ಹಸ್ತ ಭೂಷಣಂ,' ಎನ್ನುತ್ತಿದ್ದರು. ಅದರ ಪ್ರಭಾವದಿಂದಲೋ ಏನೋ ನಾನು ಎಲ್ಲೇ ಹೊರಟರೂ ತೆಗೆದುಕೊಂಡು ಹೋಗಬೇಕಾದ ಉಡುಪುಗಳನ್ನು ಆಯ್ಕೆ ಮಾಡುವ ಮೊದಲು ೨-೩ ಪುಸ್ತಕಗಳನ್ನು ಜೋಡಿಸಿಕೊಂಡು ಇಟ್ಟುಕೊಳ್ಳುತ್ತೇನೆ. ನಾನು ಓದುವ ವೇಗಕ್ಕೆ(ದಿನಕ್ಕೆ ೧೫ರಿಂದ ೫೦ಪುಟಗಳು!) ಅವು ಅನೇಕ ದಿನಗಳು ನನ್ನ ಸಂಗಾತಿಯಾಗಿಯೇ ಇರುತ್ತವೆ! ನಮ್ಮ ಮನೆಯಲ್ಲೊಂದು ದೊಡ್ಡ ಮರದ ಪೆಟ್ಟಿಗೆ ಇತ್ತು. ಅದನ್ನು `ಪೆಟಾರಿ' ಎನ್ನುತ್ತಿದ್ದೆವು. ಅದರ ತುಂಬೆಲ್ಲಾ ಕನ್ನಡ, ಸಂಸ್ಕೃತ , ಮತ್ತು ತೆಲುಗು ಪುಸ್ತಕಗಳು, ಓಲೆಗರಿ ಗ್ರಂಥಗಳು ಇದ್ದವು. ನಮ್ಮ ತಂದೆ 'ಪೆಟಾರಿ'ಯನ್ನು ತೆರೆದು ಅದರ ಮುಂದೆ ಕುಳಿತುಬಿಟ್ಟರೆ (ಪುಸ್ತಕಗಳ ಜೊತೆಯಲ್ಲಿದ್ದಾಗ) ಅವರಿಗೆ ಸಮಯದ ಪರಿವೆಯೇ ಇರುತ್ತಿರಲಿಲ್ಲ! ನಮ್ಮ ಮನೆಯಲ್ಲಿ ಒಂದು ವ್ಯಾಸ ಪೀಠವಿತ್ತು. ಅದರ ಮೇಲೆ ದಪ್ಪದಪ್ಪ ಪುಸ್ತಕಗಳನ್ನು ಇಟ್ಟುಕೊಂಡು, ಕೃಷ್ಣಾಜಿನದ ಮೇಲೆ ಕುಳಿತು ತಮ್ಮ ತಂದೆಯಿಂದ ಬಂದ ಚಿನ್ನದ ಕಟ್ಟಿನ ಕನ್ನಡಕವನ್ನು ಹಾಕಿಕೊಂಡು ಅವರು ಓದುತ್ತಿದ್ದ ದೃಶ್ಯ ಕಣ್ಣಿಗೆ ಕಟ್ಟಿದಂತಿದೆ. ನಮ್ಮ ಮನೆಯಲ್ಲಿ ಅಮ್ಮ, ಅತ್ತೆ, ಅಕ್ಕ, ತಮ್ಮ ಎಲ್ಲರೂ ಪುಸ್ತಕ ಪ್ರೇಮಿಗಳಾಗಿದ್ದರು. 'ಭಕ್ತ ವಿಜಯ' ಎನ್ನುವ ಒಂದು ಪುಸ್ತಕದಲ್ಲಿದ್ದ ಮಹಾನ್ ಭಕ್ತರ ಕಥೆಗಳು ಎಲ್ಲರಿಗೂ ಬಾಯಿಪಾಠವಾದಂತಿತ್ತು. ನಮ್ಮ ಅಕ್ಕಪಕ್ಕದ ಊರುಗಳ ಕೆಲವರು ಬಂದು ಆ ಪುಸ್ತಕವನ್ನು ತೆಗೆದುಕೊಂಡು ಹೋಗಿ ಓದಿ ತಂದು ಅದರ ಬಗ್ಗೆ ಮಾತನಾಡುತ್ತಿದ್ದರು.

ರಾಬಿನ್ ಶರ್ಮ ಅವರ ‘The Monk Who Sold His Ferrary’ ಯಲ್ಲಿ ತನ್ನ ಪೂರ್ವಾಶ್ರಮದಲ್ಲಿ ಲಾಯರ್ ಆಗಿದ್ದ ಜೂಲಿಯನ್ ತನ್ನದೇ ಕಂಪನಿಯಲ್ಲಿ ಕೆಲಸ ಮಾಡುತ್ತಲಿದ್ದ ಲಾಯರ್ ಜಾನ್‌ಗೆ ಪುಸ್ತಕಗಳ ಬಗ್ಗೆ ಹೀಗೆ ತಿಳಿಸುತ್ತಾನೆ:

‘ಯಾವುದೇ ಪುಸ್ತಕದಿಂದ ಅತ್ಯುತ್ತಮ ಪ್ರಯೋಜನ ಪಡದುಕೊಳ್ಳಬೇಕಾದರೆ ಅದನ್ನು ಸುಮ್ಮನೆ ಒಮ್ಮೆ ಓದಿದರೆ ಸಾಲದು. ಚೆನ್ನಾಗಿ ಅಧ್ಯಯನ ಮಾಡಬೇಕು. ನಿನ್ನ ಕಕ್ಷಿಗಾರರು ತರುವ ಕಾನೂನಿನ ದಾಖಲೆಗಳನ್ನು ಓದುವಂತೆ ಪುಸ್ತಕಗಳನ್ನೂ ಓದು. ಅದನ್ನು ಆಳವಾಗಿ ಅರ್ಥೈಸಿಕೊಂಡು, ಅದರೊಂದಿಗೆ ಒಂದಾಗಬೇಕು. ಸಾಧುಗಳು ಅವರ ಗ್ರಂಥಾಲಯದಲ್ಲಿದ್ದ ಪುಸ್ತಕಗಳನ್ನು ಹತ್ತು ಹದಿನೈದು ಸಲವಾದರೂ ಓದಿರಬಹುದು. ಅವರ ದೃಷ್ಟಿಯಲ್ಲಿ ಅವು ದೈವಿಕ ಗ್ರಂಥಗಳು.

ಶಿವನ ಸಾಧುಗಳು ತಮ್ಮ ಪೂರ್ವಿಕರ ಪ್ರಾಚೀನ ತತ್ವಜ್ಞಾನದ ಗ್ರಂಥಗಳನ್ನು ಅಧ್ಯಯನ ಮಾಡುತ್ತ ಅನೇಕ ವರ್ಷಗಳನ್ನು ಕಳೆದವರು. ಬಿದಿರಿನ ಆಸನಗಳ ಮೇಲೆ ಕುಳಿತುಕೊಂಡು, ಓಲೆಗರಿಯ ವಿಚಿತ್ರ ಗ್ರಂಥಗಳನ್ನು ಓದುತ್ತಾ, ಆಗಾಗ ಅದರ ಅರ್ಥ ಹೊಳೆದಾಗ ಮುಗುಳ್ನಗುತ್ತಾ ಇದ್ದ ದೃಶ್ಯ ನೆನಪಾಗುತ್ತದೆ. ಪುಸ್ತಕದ ಶಕ್ತಿಯನ್ನೂ, ಪುಸ್ತಕ ಮನುಷ್ಯನ ಅತ್ಯುತ್ತಮ ಸ್ನೇಹಿತ ಎನ್ನುವ ಸತ್ಯವನ್ನು ನಾನು ಅರಿತುಕೊಂಡದ್ದು ಶಿವನದಲ್ಲಿಯೇ.

ಪ್ರತಿ ದಿನ ಮೂವತ್ತು ನಿಮಿಷ ಒಳ್ಳೆಯ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡರೆ, ಜ್ಞಾನಸಾಗರದ ವಿಸ್ತಾರದ ದರ್ಶನ ದೊರೆತು, ಜೀವನ ಶೈಲಿಯಲ್ಲಿ ಪರಿವರ್ತನೆವುಂಟಾಗಲು ಸಾಧ್ಯವಿದೆ. ಎಲ್ಲಾ ಪ್ರಶ್ನೆಗಳಿಗೂ ಪುಸ್ತಕಗಳಲ್ಲಿ ಉತ್ತರಗಳಿರುತ್ತವೆ. ನೀನು ಒಳ್ಳೆಯ ಲಾಯರ್ ಆಗಬೇಕಾದರೆ, ಒಳ್ಳೆಯ ತಂದೆ, ಪತಿ ಅಥವಾ ಪ್ರೇಮಿಯಾಗಬೇಕಾದರೂ ಅದನ್ನು ಸಾಧಿಸಲು ಪ್ರೇರಿಸುವ ಅನೇಕ ಗ್ರಂಥಗಳಿವೆ. ನೀನು ನಿನ್ನ ಜೀವನದಲ್ಲಿ ಯಾವ ತಪ್ಪು ಮಾಡಿರುವೆಯೋ ಅದನ್ನು ಹಿಂದಿನವರೂ ಮಾಡಿದ್ದರು.... ಮನುಷ್ಯರು ಇಡೀ ಜೀವನದಲ್ಲಿ ಈವರೆಗೆ ಎದುರಿಸಿದ ಹಾಗೂ ಮುಂದೆ ಎದುರಿಸಲಿರುವ ಎಲ್ಲ ಸಮಸ್ಯೆಗಳಿಗೂ ದಾಖಲೆಗಳಿವೆ. ಅದಕ್ಕಿಂತಲೂ ಮುಖ್ಯವಾದ ವಿಷಯವೆಂದರೆ ಅವುಗಳಿಗೆ ಉತ್ತರಗಳೂ, ಪರಿಹಾರಗಳೂ ಪುಸ್ತಕಗಳಲ್ಲಿ ದಾಖಲಾಗಿವೆ. ಒಳ್ಳೆಯ ಪುಸ್ತಕಗಳನ್ನು ಓದು. ನೀನು ಇಂದು ಎದುರಿಸುತ್ತಿರುವ ಸಮಸ್ಯೆಗಳನ್ನು ಹಿಂದಿನವರು ಹೇಗೆ ಎದುರಿಸಿದ್ದರು ಎನ್ನುವುದನ್ನು ಅರಿತುಕೊ. ಅವರು ಕಂಡುಕೊಂಡ ಉತ್ತರಗಳನ್ನೂ, ಉಪಾಯಗಳನ್ನೂ ಪರಿಶೀಲಿಸಿ ನಿನಗೆ ಅನ್ವಯಿಸುವಂಥವುಗಳನ್ನು ಗುರುತಿಸಿ ಪ್ರಯೋಗಿಸಿ ನೋಡು. ಇದರ ಪರಿಣಾಮಗಳು ನಿನಗೇ ಆಶ್ಚರ್ಯವನ್ನುಂಟುಮಾಡಬಹುದು.

ಪುಸ್ತಕಗಳಿಂದ ನೀನೇನು ಪಡೆದುಕೊಳ್ಳುವೆಯೋ ಅದು ಮುಖ್ಯವಲ್ಲ. ಅವು ನಿನ್ನೊಳಗಿನಿಂದ ಏನನ್ನು ತೆಗೆದು ಹಾಕುವುದೋ ಅದರಿಂದ ನಿನ್ನ ಬದುಕು ಬದಲಾಗುತ್ತದೆ...... ನಿನ್ನಲ್ಲಿ ಏನಿದೆಯೋ ಅದನ್ನು ನಿನಗೆ ತೋರಿಸುವುದರಲ್ಲಿ ನೆರವಾಗುವುದೇ ಪುಸ್ತಕ ಮಾಡುವ ಕೆಲಸ. ಜ್ಞಾನ ಸಾಕ್ಷಾತ್ಕಾರವೆಂದರೆ ಅದೇ.......'

ಕೆಲವು ಒಳ್ಳೆಯ ಪುಸ್ತಕಗಳನ್ನು ಈ ರೀತಿ ಹೆಸರಿಸುತ್ತಾರೆ:

ಶ್ರೇಷ್ಟ ಅಮೇರಿಕನ್ನರಲ್ಲೊಬ್ಬನಾದ ಬೆಂಜಮಿನ್ ಪ್ರಾಂಕ್ಲಿನ್‌ನ ಜೀವನ ಚರಿತ್ರೆ, ಮಹಾತ್ಮ ಗಾಂಧಿಯ ‘My Experiments With Truth’,ಹ್ಯೂಸೆಯ 'ಸಿದ್ಧಾರ್ಥ', ಮಾರ್ಕಸ್ ಅರೇಲಿಯಸ್ ನ ಪ್ರಾಯೋಗಿಕ ತತ್ವಜ್ಞಾನ, ಸೆನೇಕಾನ ಕೃತಿ, ನೆಪೋಲಿಯನ್ ಹಿಲ್ ಬರೆದ ‘Think and Grow Rich’

‘The Monk Who Sold His Ferrary’ಪುಸ್ತಕದ ಬಗ್ಗೆ ‘The Alchemist’ ನ ಲೇಖಕ ಪಾಲ್ ಕೊಯಿಲೊ, 'ಓದುಗರ ಗಮನ ಸೆರೆಹಿಡಿಯುವ ಹಾಗೂ ತುಂಬಾ ಖುಷಿ ನೀಡುವ ಪುಸ್ತಕ' ಎಂದು ಹೇಳುತ್ತಾರೆ. ‘Speak And Grow Rich’ ನ ಲೇಖಕ ಡಾಟಿ ವಾಲ್ಟರ್‍ಸ್, 'ಅದ್ಭುತವಾದ ಪುಸ್ತಕ' ಎನ್ನುತ್ತಾರೆ.

ಒಳ್ಳೆಯ ಪುಸ್ತಕಗಳನ್ನು ಅರಸುತ್ತಾ ಹೋದರೆ ನಮ್ಮನ್ನು ಧನಾತ್ಮಕ ಗೊಳಿಸುವಂತಹವು ಅನೇಕವಿವೆ. ಅವುಗಳನ್ನು ಮೊದಲು ಹಣ ಕೊಟ್ಟು ನಮ್ಮದಾಗಿಸಿಕೊಂಡು, ನಂತರ ಅವುಗಳ ಸಾರಸತ್ವಗಳನ್ನು ನಮ್ಮದಾಗಿಸಿಕೊಳ್ಳುವ ಪ್ರಯತ್ನವನ್ನು ನಡೆಸುವುದು ಒಳಿತು.

'ನಮ್ಮ ಮತ್ತು ಪ್ರಪಂಚದ ನಡುವೆ ಪುಸ್ತಕದ ಅಡ್ಡಗೋಡೆ ಇರಬೇಕು.'ಎಂಬ ಹೇಳಿಕೆಯು ನಮ್ಮ ಸುತ್ತಮುತ್ತಲಿನ ಜಗತ್ತನ್ನು ಅರ್ಥಮಾಡಿಕೊಳ್ಳುವಲ್ಲಿ ಪುಸ್ತಕಗಳ ಮಹತ್ವವನ್ನು ತಿಳಿಸುತ್ತದೆ.

ನಮ್ಮ ನಮ್ಮ ಅಭಿರುಚಿಗೆ ತಕ್ಕಂತೆ ನಾವು ಪುಸ್ತಕಗಳನ್ನು ಓದಲು ಆಯ್ಕೆ ಮಾಡಿಕೊಂಡರೂ ಆ ಓದು ನಮ್ಮಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವಂತಿರಬೇಕು. ನಮ್ಮ ಮನಸ್ಸಿಗೆ ಆನಂದವನ್ನು ನೀಡುವಂತಿದ್ದರೆ ಒಳ್ಳೆಯದು.

ಇತ್ತೀಚಿನ ದಿನಗಳಲ್ಲಿ ಪಠ್ಯಪುಸ್ತಕಗಳನ್ನು ಹೊರತುಪಡಿಸಿ ಬೇರೆ ಪುಸ್ತಕಗಳನ್ನು ಓದುವತ್ತ ಮಕ್ಕಳ ಒಲವು ಕಡಿಮೆಯಾಗುತ್ತಿದೆಯೇನೋ ಎನಿಸುತ್ತದೆ. ಟಿ.ವಿ., ಕಂಪ್ಯೂಟರ್‌ಗಳ ಆಕರ್ಷಣೆಯಲ್ಲಿ ಪುಸ್ತಕ ನೀರಸವೆನಿಸುತ್ತಿರಲೂ ಬಹುದು. ಆದರೆ ಪುಸ್ತಕವನ್ನು ಓದುವಲ್ಲಿ ದೊರೆಯುವ ಆನಂದವನ್ನು ಬೇರೆಲ್ಲಿಯೂ ಪಡೆಯಲು ಸಾಧ್ಯವಿಲ್ಲ ಎನ್ನುವುದು ಒಮ್ಮೆ ನಮ್ಮ ಅನುಭವಕ್ಕೆ ಬಂದರೆ ಸಾಕು, ಪುಸ್ತಕಗಳು ನಮ್ಮ ಆತ್ಮಸಂಗಾತಿಗಳಾಗಿ ನಮ್ಮನ್ನು ಕೈಹಿಡಿದು ನಡೆಸುತ್ತವೆ.

12 comments:

  1. Excellent! ಪುಸ್ತಕಗಳ ಬಗ್ಗೆ ಬಹಳ ಚೆನ್ನಾಗಿ ಬರೆದಿದ್ದೀರ! ಬಹಳ ಸತ್ಯದ ಸಾಲುಗಳು. ಓದಿ ತುಂಬಾ ಖುಶಿಪಟ್ಟೆನು. ನಮ್ಮ ಮನೆಯಲ್ಲಿ ನಮ್ಮ ತಂದೆಯವರಿಗೆ ಆಧ್ಯಾತ್ಮಿಕ ಪುಸ್ತಕಗಳ ಮೇಲೆ ಅಪಾರ ಒಲವು. ನಮ್ಮ ಮನೆಯಲ್ಲಿ ಸುಮಾರು ೨೦೦೦ ಆಧ್ಯಾತ್ಮಿಕ ಪುಸ್ತಕಗಳ ಸಂಗ್ರಹವಿದೆ. ಅವನೆಲ್ಲ ಓದಲು ನನಗೆ ಸಮಯವಿಲ್ಲವಲ್ಲಾ ಎಂಬುದೇ ನನ್ನ ಅನುದಿನದ ಕೊರಗು. "ಪುಸ್ತಕವನ್ನು ಓದುವಲ್ಲಿ ದೊರೆಯುವ ಆನಂದವನ್ನು ಬೇರೆಲ್ಲಿಯೂ ಪಡೆಯಲು ಸಾಧ್ಯವಿಲ್ಲ" ಎಂಬುದು ನನಗೆ ಬಹಳ ಸಲ ಅನುಭವಕ್ಕೆ ಬಂದಿರುವ ವಿಷಯ.

    ReplyDelete
  2. "ಹರಿದ ಬಟ್ಟೆ ಉಟ್ಟರೂ ಪರವಾಗಿಲ್ಲ, ಕೈಯಲ್ಲೊಂದು ಪುಸ್ತಕವಿರಲಿ" ಎಂಬ ಬಂಕಿಮ ಚಟರ್ಜಿಯವರ ಮಾತು ನೆನಪಿಗೆ ಬಂತು.

    ReplyDelete
  3. ಪುಸ್ತಕದ ಬಗ್ಗೆ ನನಗೂ ವಿಪರೀತ ಒಲವು.ಪಾಂಡವಪುರದ ,ಹರಳ ಹಳ್ಳಿ ಎಂಬಲ್ಲಿ ಅಂಕೇಗೌಡ ಎನ್ನುವ ಪುಸ್ತಕಪ್ರೇಮಿಯೊಬ್ಬರ ಪುಸ್ತಕ ಸಂಗ್ರಹ ಅಚ್ಚರಿ ಮೂಡಿಸುತ್ತದೆ.ಒಬ್ಬರೇ ಸುಮಾರು ಎರಡೂವರೆ ಲಕ್ಷ ಪುಸ್ತಕಗಳನ್ನು ಸಗ್ರಹಿಸಿದ್ದಾರೆ.ಪ್ರತಿ ಪುಸ್ತಕಪ್ರೇಮಿಯೂ ನೋಡಲೇ ಬೇಕಾದ ಸಂಗ್ರಹವದು.

    ReplyDelete
  4. ಪ್ರಭಾಮಣಿಯವರೆ,
    ಪುಸ್ತಕಗಳ ಮಹತ್ವವನ್ನು ಚೆನ್ನಾಗಿ ವಿವರಿಸಿರುವಿರಿ. ಈಗೀಗ ಟೀವಿ ಹಾವಳಿಯಿಂದಾಗಿ ಹುಡುಗರಲ್ಲಿ ಓದುವ ಅಭ್ಯಾಸವೇ ಹೋಗಿದ್ದು ನಿಜ! ಬೇಂದ್ರೆಯವರು ಬಡತನದಲ್ಲಿಯೇ ಬೆಂದರೂ ಸಹ, ಅವರ ಬಳಿಯಲ್ಲಿ ೫೦೦೦ ಗ್ರಂಥಗಳ ಸಂಗ್ರಹವಿದ್ದಿತು ಎನ್ನುವದು ಅದ್ಭುತವಾದ ಸಂಗತಿಯಾಗಿದೆ.

    ReplyDelete
  5. ನಿಜ. ಪುಸ್ತಕ ಓದುವಾಗಿನ ಆನಂದ ಇನ್ನೆಲ್ಲೂ ಸಿಗಲಾರದು.
    ಪರೀಕ್ಷೆಗೆ ಇರುವಂತೆ ರಾತ್ರಿ ಹಗಲು ಕೂತು ಪುಸ್ತಕ ಓದುತ್ತಿದ್ದ ಹುಳು ನಾನು. ಕೆಲಸ ಮತ್ತು ಹಲವಾರು ಒತ್ತಡಗಳು ಈಗ ಹಾಗೆ ಓದಲು ಬಿಡುವುದಿಲ್ಲ. ಆದರೂ ಓದುವ ಮಜವೇ ಬೇರೆ. :)

    ReplyDelete
  6. nice one article - reading makes people enriched. baalyadalli -chandamama, putaani, bombemane, baalamitra, amar chitra kathe mattu bhaala bhaarati pustakagalinda praarambhavaagiddu-sudha, prajamata, karmaveera, raaga sangamagalige tirugi, amele pattedaari, samaajika-kaadambari, aheege munde kathe kavanagalige nanna olavu tirugitu. ee nanna odina havyasa nanna blog-nalli haakidde.
    kannadakke anuvaadita "my experiement with truth" nanna mechchina pustaka.
    odu manusyana manavanna mattu vichaaravanna pakva maaduvalli uttama kelasa maaduttave. ee odina mahatvada tamma lekhana odi khushiyaayitu

    ReplyDelete
  7. ನಿಜವಾಗಲು ಪುಸ್ತಕ ಓದುವ ಹವ್ಯಾಸ ತುಂಬಾ ಒಳ್ಳೆಯದು.. ನಮ್ಮ ಜೀವನ ಶೈಲಿಯನ್ನು ಇನ್ನಷ್ಟು ಉತ್ತಮಗೊಳಿಸುವ ಸಾಮರ್ಥ್ಯ ಪುಸ್ತಕಕ್ಕಿದೆ...
    ನನಗಂತೂ ಪುಸ್ತಕಗಳು ಎಷ್ಟೋ ನೋವುಗಳನ್ನು ಮರೆಸಿವೆ,ಕುಗ್ಗಿದಾಗ ಧೈರ್ಯ ತಂದುಕೊಟ್ಟಿದೆ,ಗೆದ್ದಾಗ ಇನ್ನಷ್ಟು ಹುರಿದುಮ್ಬಿಸಿವೆ,ಆದರೆ ಹಿಗ್ಗಿಸಿಲ್ಲ,ಎಷ್ಟೋ ವಿಚಾರಗಳನ್ನು ತಿಳಿದು ಕೊಂಡಿದ್ದೇನೆ,
    ಪ್ರಯಾಣಿಸುವಾಗ ಒಳ್ಳೆಯ ಸಾಥ್ ನೀಡಿದೆ..

    ReplyDelete
  8. *wear a old coat and buy a new book* anno maatu nenapaayitu. prabha nanna blog odi pratikrisidakke dhanyavaadagalu!! matte matte odi!

    ReplyDelete
  9. wow....sogasaada baraha....pustaka prema huttisalu takka maatugalu...

    ReplyDelete
  10. ಮೇಡಂ,
    ಭಕ್ತ ವಿಜಯದ ಬಗ್ಗೆ ತುಂಬಾ ಕೇಳಿದ್ದೇನೆ.
    ಬಹಳ ಜನ ಸಂತರ ಬಗ್ಗೆ ಮಾಹಿತಿ ಇದೆ ಅಂತ
    ಓದಿದ ನೆನಪು.
    ಆ ಪುಸ್ತಕ ಈಗ ಲಭ್ಯವಿದೆಯೇ?
    ಇಲ್ಲವಾದಲ್ಲಿ, ಅದರಲ್ಲಿರುವ ಸಂತರ ಬಗ್ಗೆ ಆಗಾಗ
    ಬರೆಯುತ್ತಿರಾ, ಪ್ಲೀಸ್?
    ವಂದನೆಗಳೊಂದಿಗೆ
    ಸ್ವರ್ಣ

    ReplyDelete
  11. ನಿಮ್ಮ ಬ್ಲಾಗ್ ಓದುತಿದ್ದರೆ .... ನಿಮ್ಮ ಮನೇಲಿರೋ ಗ್ರಂಥಾಲಯ (ಪೆಟಾರಿ) ನೋಡಿದ ಹಗೆ ಬಾಸವಗುತ್ತೆ .
    ಸುಂದರ ಲೇಖನ , ಪುಸ್ತಕ ಪರಿಚಯಕ್ಕೆ ದನ್ಯವಾಧಗಳು

    ReplyDelete