Friday, December 21, 2012

ಈ ಗೋವು......


ಪುರಾತನ ಕಾಲದಿಂದಲೂ ಗೋವು ಸಂಪತ್ತಿನ ಸಂಕೇತವಾಗಿದೆ ಹಾಗೂ ಹಿಂದೂಗಳಿಗೆ ಪೂಜನೀಯವಾಗಿದೆ. ಸಾಮಾನ್ಯವಾಗಿ ಮೊದಲಿನಿಂದಲೂ ತನ್ನ ಉಳಿವಿಗೆ ಕಾರಣವಾಗುವ ಎಲ್ಲವಕ್ಕೂ ಮಾನವ ದೈವತ್ವದ ಸ್ಥಾನವನ್ನು ನೀಡಿ ಪೂಜಿಸುತ್ತಲೇ ಬಂದಿದ್ದಾನೆ. ನಾವು ಉಸಿರಾಡುವ ಗಾಳಿ, ಜೀವನದ ಎಲ್ಲ ಕ್ರಿಯೆಗಳಿಗೂ ಅತ್ಯಗತ್ಯವಾದ ನೀರು, ಆಹಾರವನ್ನು ತಯಾರಿಸಲು ಬೇಕಾದ ಬೆಂಕಿ, .... ಎಲ್ಲವುಗಳಿಗೂ ಪೂಜನೀಯ ಸ್ಥಾನ ದೊರೆತಿದೆ. ಹಾಗೆಯೇ ಹಾಲನ್ನು ನೀಡುವ, ಉಳುಮೆ ಮಾಡಿ ಆಹಾರಧಾನ್ಯಗಳನ್ನು ಬೆಳೆಯಲು ಸಹಕರಿಸುವ, ಬೆರಣಿ, ಗೊಬ್ಬರವಾಗುವ..... ಹೀಗೆ ಜೀವನದ ಪ್ರತಿ ಹಂತದಲ್ಲೂ ಅತ್ಯುಪಯುಕ್ತವಾದ ದನಗಳು ಮನುಷ್ಯನಿಗೆ ಪೂಜ್ಯವೆನಿಸಿವೆ. ಹಸುವಿನ ಬಹು ಉಪಯುಕ್ತತೆಯನ್ನು

‘ಇಟ್ಟರೆ ಸಗಣಿಯಾದೆ

ತಟ್ಟಿದರೆ ಕುರುಳಾದೆ

ಸುಟ್ಟರೆ ನೊಸಲಿಗೆ ವಿಭೂತಿಯಾದೆ

.....’ ಎಂಬ ಕವನದಲ್ಲಿ ಬಹಳ ಚೆನ್ನಾಗಿ ವರ್ಣಿಸಿದ್ದಾರೆ ಅಲ್ಲದೇ ‘ನೀನಾರಿಗಾದೆಯೋ ಎಲೆ ಮಾನವ?’ ಎಂದು ಪ್ರತಿ ಹಂತದಲ್ಲಿಯೂ ಪ್ರಶ್ನಿಸುತ್ತಾ ಮಾನವರೆನಿಸಿಕೊಂಡಿರುವ ನಮ್ಮ ಪ್ರಯೋಜನವೇನು? ಎಂದು ನಮ್ಮನ್ನೇ ನಾವು ಸ್ವವಿಮರ್ಷೆ ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ. ಹಾಲನ್ನು ನೀಡಿ ಕಂದಗಳನ್ನು ಪೋಷಿಸುವ ಹಸುವನ್ನು ‘ಗೋಮಾತೆ’ ಎಂದು ಆರಾಧಿಸಿದರು. ಹಸುವಿನ ಹಾಲು ಸಾತ್ವಿಕ ಗುಣವನ್ನು ಉಂಟುಮಾಡುತ್ತದೆ ಎಂದು ನಂಬಲಾಗಿದೆ.

ತ್ಯಾಗಕ್ಕೆ ಪ್ರಸಿದ್ಧಿಯಾದ ‘ಪುಣ್ಯಕೋಟಿ’ಯ ಕಥನಕವನ ನಮ್ಮಲ್ಲಿ ಮನೆಮಾತಾಗಿದೆ. ನಮ್ಮ ಸುಪ್ರಸಿದ್ಧ ಕಾದಂಬರಿಕಾರರಾದ ಎಸ್.ಎಲ್. ಭೈರಪ್ಪನವರು ಈ ಕವನವನ್ನು ಆಧರಿಸಿಯೇ ಬರೆದಿರುವ ಕಾದಂಬರಿ, ‘ತಬ್ಬಲಿಯು ನೀನಾದೆ ಮಗನೆ’ ಗೋವುಗಳ ಬಗ್ಗೆ ಬದಲಾದ ಭಾವನೆಗಳು, ಅಧೋಮುಖವಾಗಿ ಸಾಗಿದ ಅವುಗಳ ಸ್ಥಿತಿಗತಿಗಳ ಬಗ್ಗೆ ಒಂದು ಸ್ಪಷ್ಟ ಚಿತ್ರಣವನ್ನೇ ನೀಡಿದೆ.

‘ಸ್ಮ್ರುತಿ’ಯಲ್ಲಿ ಹಸುವನ್ನು ಮಾನವನ ತಾಯಿ ಮತ್ತು ಎತ್ತನ್ನು ತಂದೆ ಎಂದು ತಿಳಿಸಿದ್ದಾರೆ. ಹಸುವಿನ ಹಾಲನ್ನೂ ತಾಯಿಯ ಹಾಲಿನಂತೆಯೇ ಪರಿಗಣಿಸಿರುವುದರಿಂದ ಹಾಗೂ ಅದು ಮಾನವ ಸಮಾಜಕ್ಕೆ ಅತ್ಯಗತ್ಯವಾದ್ದರಿಂದ ಹಸು ತಾಯಿಯೆನಿಸಿದೆ. ತಂದೆಯ ಕರ್ತವ್ಯ ದುಡಿದು ತನ್ನ ಮಕ್ಕಳನ್ನು ಸಾಕುವುದು. ಹಾಗೆಯೇ ಎತ್ತು ಭೂಮಿಯನ್ನು ಉಳುಮೆ ಮಾಡಿ ಆಹಾರ ಧಾನ್ಯಗಳನ್ನು ಬೆಳೆಯಲು ಸಹಕರಿಸುತ್ತದೆ.

ಸ್ವರ್ಗದಲ್ಲಿರುವ ‘ಸುರಭಿ’ಯು ಭೂಮಿಯ ಮೇಲಿನ ಎಲ್ಲಾ ಗೋವುಗಳ ಮೂಲ ಎಂದು ಭಾಗವತ ಪುರಾಣವು ತಿಳಿಸುತ್ತದೆ. ‘ಹರಿವಂಶ’ದಲ್ಲಿ ಕೃಷ್ಣನನ್ನು ದನಗಳನ್ನು ಕಾಯುವ ಗೊಲ್ಲನನ್ನಾಗಿ ಚಿತ್ರಿಸಿದ್ದಾರೆ. ಅವನನ್ನು ‘ಬಾಲ ಗೋಪಾಲ’ ಎಂದರೆ ಗೋವುಗಳನ್ನು ರಕ್ಷಿಸುವ ಬಾಲಕ ಎಂದಿದ್ದಾರೆ. ಅವನ ಮತ್ತೊಂದು ಹೆಸರು ‘ಗೋವಿಂದ? ಎಂದು. ಅದರ ಅರ್ಥ ಗೋವುಗಳಿಗೆ ತೃಪ್ತಿಯನ್ನು ಉಂಟುಮಾಡುವವನು ಎಂದಾಗಿದೆ.

ಪುರಾಣಗಳು ತಿಳಿಸುವಂತೆ ‘ಕಾಮಧೇನು' ಇಷ್ಟಾರ್ಥಗಳನ್ನೆಲ್ಲಾ ನೀಡುವ ಹಸುವಾಗಿದ್ದು ಇದು ಎಲ್ಲಾ ಗೋವುಗಳ ಮಾತೆಯಾಗಿದೆ. ಹಿಂದೂ ಧರ್ಮಶಾಸ್ತ್ರಗಳ ಪ್ರಕಾರ ಇದು ಅತ್ಯಂತ ಪವಿತ್ರವಾದ ಗೋವು ಹಾಗೂ ಎಲ್ಲ ದೇವತೆಗಳೂ ಇದರ ದೇಹದಲ್ಲಿ ವಾಸಿಸುತ್ತಾರೆ ಎಂಬ ನಂಬಿಕೆಯಿದೆ.

ಗೋವುಗಳ ಬಗ್ಗೆ ಇದ್ದಂಥಾ ಭಕ್ತಿಭಾವವು ಸ್ವಾತಂತ್ರ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿ ಸಿಪಾಯಿದಂಗೆಗೆ ಕಾರಣವಾಯಿತು. ಮಹಾಭಾರತದಲ್ಲಿಯೂ ಗೋಗ್ರಹಣದಿಂದಾಗಿಯೇ ಅಜ್ಞಾತವಾಸದಲ್ಲಿದ್ದ ಪಾಂಡವರು ಯುದ್ಧಕ್ಕೆ ಬರಬೇಕಾದ ಸನ್ನಿವೇಶವುಂಟಾಗುತ್ತದೆ.

ಗೋವುಗಳ ಬಗ್ಗೆ ಗಾಂಧೀಜಿಯವರ ಅಭಿಪ್ರಾಯ ಹೀಗಿದೆ, ‘ನಾನು ಗೋವುಗಳನ್ನು ಪೂಜಿಸುತ್ತೇನೆ ಮತ್ತು ಇದನ್ನು ಇಡೀ ಜಗತ್ತಿನ ಎದುರೇ ಸಮರ್ಥಿಸುತ್ತೇನೆ. ಹಿಂದೂತ್ವದ ಮೂಲ ತತ್ವವೇ ಗೋಸಂರಕ್ಷಣೆಯಾಗಿದೆ. ಗೋಮಾತೆಯು ಈ ಭೂಮಿಯ ಮೇಲಿನ ಎಲ್ಲಾ ಮಾತೆಯರಿಗಿಂತಲೂ ಶ್ರೇಷ್ಟಳಾಗಿದ್ದಾಳೆ. ಅವಳು ಮಾನವತ್ವದ ಮಾತೆಯಾಗಿದ್ದಾಳೆ. ನಮ್ಮ ತಾಯಿ ಸತ್ತಾಗ ಅವಳಿಗೆ ಅಂತ್ಯಸಂಸ್ಕಾರ ಮಾಡುವ ಖರ್ಚು ಇರುತ್ತದೆ. ಆದರೆ ಗೋಮಾತೆಯ ಸಾವಿನ ನಂತರವೂ ಬದುಕಿದ್ದಾಗ ಇದ್ದಷ್ಟೇ ಉಪಯೋಗವು ಇರುತ್ತದೆ. ಆಕೆಯ ದೇಹದ ಪ್ರತಿಯೊಂದು ಭಾಗವೂ ಉಪಯುಕ್ತವಾಗಿದೆ....... ಒಂದು ರಾಷ್ಟ್ರದ ಹಿರಿತನ ಹಾಗೂ ಮೌಲ್ಯಗಳ ಅಭಿವೃದ್ಧಿಯನ್ನು ಆ ರಾಷ್ಟ್ರವು ತನ್ನಲ್ಲಿರುವ ಪ್ರಾಣಿವರ್ಗವನ್ನು ಹೇಗೆ ರಕ್ಷಿಸುತ್ತಿದೆ ಎನ್ನುವುದರ ಮೂಲಕ ಮಾಪನ ಮಾಡಬಹುದು. ಗೋಸಂರಕ್ಷಣೆಯು ನನಗೆ ಕೇವಲ ಗೋವುಗಳನ್ನು ಸಂರಕ್ಷಿಸುವುದಾಗಿ ಗೋಚರಿಸುತ್ತಿಲ್ಲ. ಅದು ಈ ಭೂಮಿಯ ಮೇಲಿರುವ ಎಲ್ಲಾ ಅಸಹಾಯಕ, ದುರ್ಬಲ ಜೀವಿಗಳನ್ನು ಸಂರಕ್ಷಿಸುವುದಾಗಿದೆ. ಗೋವುಗಳೆಂದರೆ ಇಡೀ ಉಪಮಾನವ(ssubhuman) ವಿಶ್ವವೇ ಆಗಿದೆ. ‘



ನಮ್ಮದು ಹಳ್ಳಿಯ ಜೀವನವಾದ್ದರಿಂದ ಚಿಕ್ಕಂದಿನಿಂದಲೂ ಬೆಳೆದದ್ದು ದನಕರುಗಳ ಒಡನಾಟದಲ್ಲಿಯೇ........                                                                                                                              (ಮು೦ದುವರೆಯುವುದು)

2 comments:

  1. ಉತ್ತಮ ಲೇಖನ. ಮುಂದುವರೆಸಿ.

    ReplyDelete
  2. ಚೆನ್ನಾಗಿದೆ ಮೇಡಂ

    ReplyDelete