Monday, February 14, 2011

ಮನದ ಅಂಗಳದಿ..................೨೮. ರುಚಿ-ಅಭಿರುಚಿ

ಭಗವಾನ್ ಬುದ್ಧರು ಹೇಳಿದ ಕಥೆ ಇದು:

ಒಬ್ಬ ವ್ಯಕ್ತಿ ನಡೆಯುತ್ತಿದ್ದಾಗ ಎದುರಿಗೆ ಒಂದು ಹುಲಿ ಕಂಡಿತು. ಆತ ಹೆದರಿ ಓಡಿದ. ಹುಲಿ ಅವನನ್ನು ಅಟ್ಟಿಸಿಕೊಂಡು ಹೋಯಿತು. ಓಡುತ್ತ, ಓಡುತ್ತ ಆತ ಒಂದು ಕೊರಕಲಿನಲ್ಲಿ ಬಿದ್ದ. ಬೀಳುವಾಗ ಯಾವುದೋ ಕಾಡುಸಸ್ಯದ ಬೇರೊಂದನ್ನು ಫಕ್ಕನೆ ಹಿಡಿದುಕೊಂಡ. ಆ ಬೇರಿನ ಆಧಾರದಿಂದಲೇ ನೇತಾಡುತ್ತಾ ಮೇಲೆ ನೋಡಿದ. ಅಲ್ಲಿ ಹುಲಿ ಪ್ರಪಾತದ ಅಂಚಿನಲ್ಲಿ ಕುಳಿತು ಅವನ ಕಡೆಯೇ ನೋಡುತ್ತಾ ಗಾಳಿಯನ್ನು ಮೂಸುತ್ತಿತ್ತು. ಅವನು ಕಾಲ ಕೆಳಗೆ ನೋಡಿದ. ಕೆಳಗೆ ಪ್ರಪಾತದಲ್ಲಿ ಇನ್ನೊ೦ದು ಹುಲಿ ಮೇಲಕ್ಕೆ ಇವನ ಕಡೆಯೇ ನೋಡುತ್ತಾ ನಾಲಿಗೆಯಿಂದ ಬಾಯನ್ನು ನೆಕ್ಕಿಕೊಳ್ಳುತ್ತಿತ್ತು. ಮೇಲೆ ಹುಲಿ, ಕೆಳಗೆ ಹುಲಿ. ಕೇವಲ ಗಿಡವೊಂದರ ಆಧಾರದ ಮೇಲೆ ಈತ ನೇತಾಡುತ್ತಿರುವಾಗ ಒಂದು ಬಿಳಿಯ ಇಲಿ , ಒಂದು ಕಪ್ಪು ಇಲಿ ಅವನು ಹಿಡಿದಿದ್ದ ಬೇರನ್ನು ಮೆಲ್ಲಗೆ ಕಡಿಯತೊಡಗಿದವು. ಆ ಕ್ಷಣ ಅವನಿಗೆ ಅಲ್ಲೊಂದು ಬಳ್ಳಿ ಕಂಡಿತು. ಬಳ್ಳಿಯಲ್ಲಿ ಒಂದು ದ್ರಾಕ್ಷಿಯ ಗೊಂಚಲು. ಹಣ್ಣು ಕಿತ್ತು ಬಾಯಿಗೆ ಹಾಕಿಕೊಂಡ. ಹಣ್ಣು ಎಷ್ಟೊಂದು ರುಚಿಕರವಾಗಿತ್ತು!

ವಿಶಿಷ್ಟ ಅಂತರಾರ್ಥವನ್ನು ಹೊಂದಿರುವ ಈ ಕಥೆಯು ಜೀವಕ್ಕೇ ಆಪತ್ತು ಒದಗಿರುವಂಥಾ ಸಂದರ್ಭದಲ್ಲಿಯೂ ನಾವು ‘ರುಚಿ’ಗೆ ಎಷ್ಟು ಪ್ರಾಮುಖ್ಯತೆಯನ್ನು ನೀಡುತ್ತೇವೆ ಎನ್ನುವುದಕ್ಕೆ ಒಂದು ನಿದರ್ಶನವೂ ಆಗಿದೆ.

ಲೇಖಕಿ ಸುನಂದಾ ಬೆಳಗಾವಕರ ಅವರು ಬರೆದಿರುವ ‘ರುಚಿ’ ಪ್ರಬಂಧದಲ್ಲಿ ತಮ್ಮ ತಂದೆಯವರ ಮಾತು ರುಚಿಯ ಲೇಖನಕ್ಕೆ ಸಾಹಿತ್ಯ ಒದಗಿಸಿತ್ತು ಎನ್ನುವುದನ್ನು ಹೀಗೆ ಹೇಳುತ್ತಾರೆ, ‘ದೇವರ ದೇಣಿಗೆ ರಸನೇಂದ್ರಿಯ. ಎಲ್ಲ ರಸಗಳ ರುಚಿಯಿರಬೇಕು. ಸಿಹಿ, ಕಹಿ, ಹುಳಿ, ಉಪ್ಪು, ಖಾರ ಸಮ್ಮಿಶ್ರಣವೇ ರುಚಿ. ಆ ರುಚಿ ತಿಳಿಯದೇ ಊಟ ಮಾಡುವುದು ಅನಾರೋಗ್ಯದ ಲಕ್ಷಣ. ರಸಾಸ್ವಾದನ ಮಾಡದ ಅರಸಿಕ ಪ್ರಾಣಿಗಳಿಗೂ ರುಚಿ ಗೊತ್ತದ. ಮಾಂಸದ ರುಚಿಯಿದ್ದ ಸಿಂಹ ಹುಲ್ಲು ತಿನ್ನೋದಿಲ್ಲ.’ ಧಾರವಾಡದ ವಿಶಿಷ್ಟ ತಿನಿಸುಗಳ ರುಚಿ, ವಿಶೇಷವಾಗಿ ಪೇಡೆಯ ರುಚಿ, ಹಣ್ಣು-ತರಕಾರಿಗಳ ರುಚಿ ಅಲ್ಲಿಯ ಮಣ್ಣಿನ ವೈಶಿಷ್ಟ್ಯವನ್ನು, ‘ಮನೆಮನೆಗೂ ಕವಿಗಳು, ಗಾಯಕರು, ನಾಟಕಕಾರರು, ಭಾಷಣಕಾರರು, ಕಲಾಕಾರರು,..... ಇದ್ದಾರೆ ಎಂದು ತಿಳಿಸುತ್ತಾ...ರುಚಿಯಿಂದ ಅಭಿರುಚಿಯತ್ತ ಹೆಜ್ಜೆ ಹಾಕುತ್ತಾರೆ. ‘ಲೋಕೋ ಭಿನ್ನರುಚಿಃ’ ಎನ್ನುವ ಉಕ್ತಿ ಎಂಥಾ ಅರ್ಥವೈಶಾಲ್ಯವನ್ನು ಹೊಂದಿದೆ!

‘ಚೈತನ್ಯ’ ಕಾರ್ಯಾಗಾರವನ್ನು ನಡೆಸುತ್ತಿದ್ದಾಗ ಮೊದಲು ಪರಸ್ಪರ ಪರಿಚಯವಿರುತ್ತಿತ್ತು. ‘ನಿಮ್ಮ ಅಭಿರುಚಿಯನ್ನು ತಿಳಿಸಿ’ ಎನ್ನುವುದಕ್ಕೆ ಒಬ್ಬ ಮಹಾಶಯರು ಬರೆದ ಉತ್ತರ ನನ್ನ ಒಂದು ‘ಹನಿ’ (ರುಚಿ-ಅಭಿರುಚಿ)ಗೆ ಪ್ರೇರಣೆಯಾಯಿತು!

ಆಕೆ ತಿಳಿಯಲಿಚ್ಛಿಸಿದಳು
ಆತನ ಅಭಿರುಚಿ
ಉತ್ಸುಕನಾದ ಆತ
ಹೇಳಲಾರಂಭಿಸಿದ
ಬೂಂದಿ, ಬೋ0ಡ, ಬಜಿ...
ಒಂದಲ್ಲ ನೂರಾರು
ತರತರದ ರುಚಿ,
ಪಟ್ಟಿ ಮುಗಿಯುವ ವೇಳೆಗೆ
ಬುದ್ಧಿ ಹೇಳಿದ್ದಳವಳು ಕಾಲಿಗೆ!

ಹಸಿವಾದಾಗ ಸಿಕ್ಕಿದ್ದನ್ನು ಹಸಿಹಸಿಯಾಗೇ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಲಿದ್ದ ಆದಿಮಾನವ ಕ್ರಮೇಣ ಬೇಯಿಸಿ ತಿನ್ನುವುದನ್ನು ಹೇಗೆ ಕಲಿತ ಎನ್ನುವುದಕ್ಕೂ ಒಂದು ಕಥೆ ಇದೆ.

ಒಮ್ಮೆ ಕಾಡಿಗೆ ಬೆಂಕಿ ಬಿದ್ದು ಪ್ರಾಣಿಗಳೆಲ್ಲಾ ಸುಟ್ಟುಹೋಗಿದ್ದವು. ಹಾಗೇ ಬೆಂದ ಹಂದಿಯ ದೇಹ ಮಾತ್ರ ಪೂರ್ಣಾಕೃತಿಯಲ್ಲಿ ಅವಿಚ್ಛಿನ್ನವಾಗಿದ್ದುದನ್ನು ಕಂಡು ಒಬ್ಬ ಕಾಡುಮಾನವ ಕುತೂಹಲದಿಂದ ಅದರ ಮೇಲೆ ಬೆರಳೂರಿದ್ದಾನೆ. ಒಳಹೊದ ಬೆರಳು ಸುಟ್ಟಿದ್ದೇ ತಡ ತಕ್ಷಣ ಬಾಯಿಗಿಟ್ಟುಕೊಂಡಿದ್ದಾನೆ. ನಾಲಿಗೆಗೆ ರುಚಿ ಹತ್ತಿದೆ. ಆಗಿನಿಂದ ಬೇಯಿಸಿ ತಿನ್ನುವುದನ್ನು ಕಲಿತಿದ್ದೇ ಅಲ್ಲದೆ ಹಂದಿ ರುಚಿಕರ ಎಂದೂ ತಿಳಿದುಕೊಂಡಿದ್ದಾನೆ. ಕಲ್ಲೊಂದು, ಹಕ್ಕಿ ಎರಡು!

ನಾಗರಿಕತೆ ಬೆಳೆದಂತೆ ಆದಿಮಾನವತ್ವದ ಕಡೆಗೇ ಆಹಾರ ಪದ್ದತಿಯಲ್ಲಿ ಓಲುತ್ತಿರುವ ಮನುಷ್ಯ ಮಾಂಸಾಹಾರವನ್ನು ಗೀಳಾಗಿಸಿಕೊಳ್ಳುತ್ತಿದ್ದಾನೆ. ನಾನು ಒಮ್ಮೆ ಭಾಗವಹಿಸಿದ್ದ ಒಂದು ಜನಪದಗೋಷ್ಠಿಯಲ್ಲಿ ಜನಪದ ಅಡುಗೆ ಎಂದರೇ ಮಾಂಸಾಹಾರ ಎನ್ನುವಂತೆ ಬಿಂಬಿಸಿದ ಭಾಷಣಕಾರರು ಅದರ ಸ್ವಾದವನ್ನು ಅಕ್ಷರಶ: ಅನುಭವಿಸುತ್ತಾ (ಬಾಯಲ್ಲಿ ಲಾಲಾರಸವನ್ನು ಯಥೇಚ್ಛವಾಗಿ ಸ್ರವಿಸುತ್ತಾ!) ’ಬಾಡೆಸರು’ ಎಂದು ಪದೇ ಪದೇ ಹೇಳುವಾಗಿನ ತಾದ್ಯಾತ್ಮವು ಸಹನಾತೀತವಾಗಿತ್ತು. `ಯಾವುದು ಹೆಚ್ಚಾಗಿ ಉತ್ಪಾದನೆಯಾಗುತ್ತೋ ಅದನ್ನು ತಿನ್ನುವುದರಿಂದ ಪರಿಸರಕ್ಕೇನೂ ಹಾನಿ ಇಲ್ಲ’ ಎಂದು ಘೋಶಿಸಿದ ಅವರಲ್ಲೊಬ್ಬರು ’ಕೋಳಿ, ಹಂದಿ...... ಇವೆಲ್ಲಾ ಲೆಕ್ಕ ಇಲ್ಲದಂತೆ ಹುಟ್ತಾವೆ ಬಿಡಿ’ ಎಂದೂ ಸೇರಿಸಿದರು! ’ಹಂದಿ ಬಾಳಾ ರುಚಿ. ಮಳಲಿ ಗಿಡ್ಡಮ್ಮಂಗೆ ಹಂದೀನೇ ಬಾಳಾ ಪ್ರೀತಿ ಅಲ್ವಾ?......’ ಭೂಮಿಯ ಮೇಲಿರುವುದೆಲ್ಲಾ (ಬಾಹ್ಯಾಕಾಶದಿಂದ ಪತನವಾದರೂ ಸರಿಯೇ!) ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನಮಗೇ ಸೇರಬೇಕೆನ್ನುವುದೇ ನಮ್ಮ ತತ್ವವಲ್ಲವೇ!

‘ಜಿಹ್ವಾ ಚಾಪಲ್ಯ’ ಎನ್ನುವುದು ರುಚಿಗಾಗಿ ಹಂಬಲಿಸುವಂತೆ ಮಾಡುತ್ತದೇನೊ. ಇತ್ತೀಚೆಗೆ ಎಲ್ಲೆಲ್ಲೂ ರುಚಿಯನ್ನಷ್ಟೇ ಪ್ರಧಾನವಾಗಿ ಹೊಂದಿರುವ ವಿವಿಧ ಖಾದ್ಯಗಳನ್ನು ಎಲ್ಲೆಲ್ಲೂ ಮಾರಾಟಕ್ಕಿಟ್ಟು ಆಶೆ ತೋರಿಸಿ ಆಕರ್ಶಿಸುವ ಜಾಲ ಹೆಚ್ಚಾಗಿದೆ. ನಾವು ರುಚಿಗಷ್ಟೇ ಮಹತ್ವವನ್ನು ನೀಡಿ ನಮ್ಮ ಆರೋಗ್ಯ, ಅಭಿರುಚಿಗಳನ್ನೇ ಕಡೆಗಣಿಸುತ್ತಿದ್ದೇವೆ. ಕೇವಲ ನಾಲಿಗೆಯನ್ನು ತಣಿಸುವುದನ್ನೇ ನಮ್ಮ ಗುರಿಯಾಗಿಸಿಕೊಳ್ಳದೇ ಉದರಸ್ನೇಹಿಗಳೂ ಆಗೋಣ, ಉತ್ತಮ ಅಭಿರುಚಿಗಳನ್ನೂ ರೂಢಿಸಿಕೊಳ್ಳೋಣ.

6 comments:

 1. ತುಂಬ ವಿಚಾರಪೂರ್ಣ ಲೇಖನ.

  ReplyDelete
 2. ಉತ್ತಮ ನಿದರ್ಶನಗಳೊಂದಿಗೆ ಮನತಟ್ಟುವಂತೆ ಮೂಡಿಬಂದಿದೆ ಲೇಖನ.. ಅಭಿರುಚಿಯ ರುಚಿ ತಿಳಿಸಿದ ನಿಮ್ಮ ಲೇಖನಕ್ಕೆ ಧನ್ಯವಾದಗಳು.

  ReplyDelete
 3. ಮೇಡಂ, ಹಲವು ಉಪಕಥೆಗಳಿಂದ, ಹನಿಗವನದಿಂದ ಈ ಲೇಖನವು ವಿಶೇಷವಾಗಿ ಮೂಡಿದೆ. ಧನ್ಯವಾದಗಳು.

  ReplyDelete
 4. ಪ್ರಭಾ ಅವರೇ,
  ಉತ್ತಮ ಲೇಖನ ..
  ಅಭಿರುಚಿಯ ಚುಟುಕು ಚೆನ್ನಾಗಿತ್ತು :)

  ReplyDelete
 5. ಪ್ರತಿಕ್ರಿಯಿಸಿದ ಎಲ್ಲ್ಲಾ ಅತ್ಮೀಯರಿಗೂ ಅನೇಕಾನೇಕ ಧನ್ಯವಾದಗಳು. ಪ್ರಕಟಿಸುವುದು ತಡವಾಗಿದ್ದಕ್ಕೆ ಕ್ಷಮೆಯಿರಲಿ. ಭೇಟಿ ನೀಡುತ್ತಿರಿ

  ReplyDelete