Monday, February 7, 2011

ಮನದ ಅಂಗಳದಿ..................೨೮.ಆಲೋಚನೆ

ಸಾಮಾನ್ಯವಾಗಿ ನಮಗೆ ಬುದ್ದಿ ತಿಳಿದಾಗಿನಿಂದ ನಾವು ಒಂದಲ್ಲಾ ಒಂದು ಆಲೋಚನೆಯಲ್ಲಿ ತೊಡಗಿರುತ್ತೇವೆ. ನಮ್ಮ ಮನಸ್ಸು ಸದಾ ಯಾವುದಾದರೊಂದು ವಿಷಯವ ಕುರಿತು ಆಲೋಚಿಸುತ್ತಲೇ ಇರುತ್ತದೆ. ಯಾವುದಾದರೂ ಸಮಸ್ಯೆಯಲ್ಲಿ ಸಿಲುಕಿದೆವೆಂದರೆ ತೀರಿತು. ಗೋಜಲು ಗೋಜಲಾದ ಆಲೋಚನೆಗಳು ನಮ್ಮನ್ನು ಮುತ್ತಿಕೊಂಡು ಮುಕ್ಕಿಬಿಡುತ್ತವೆ. ಈ ‘ಆಲೋಚನೆ' ಎಂದರೆ ಏನು? ಹೇಗೆ ಉಂಟಾಗುತ್ತದೆ? ಕೆಟ್ಟ ಆಲೋಚನೆಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಹೇಗೆ? ಎನ್ನುವ ನಿರಂತರ ಪ್ರಶ್ನೆಗಳಿಗೆ ಉತ್ತರ ದೊರೆತದ್ದು ‘ಅನುದಿನ ಚಿಂತನ' ಎಂಬ ಜಿಡ್ಡು ಕೃಷ್ಣಮೂರ್ತಿಯವರ ಪುಸ್ತಕವನ್ನು ಚಿತ್ರದುರ್ಗದಲ್ಲಿ ನಡೆದ ಸಾಹಿತ್ಯಸಮ್ಮೇಳನದಲ್ಲಿ ತೆಗೆದುಕೊಂಡು ಸ್ವಲ್ಪ ಸ್ವಲ್ಪವೇ ಓದಲಾರಂಭಿಸಿದಾಗ. ಇದು ‘ದಿ ಬುಕ್ ಆಫ್ ಲೈಫ್: ಡೈಲಿ ಮೆಡಿಟೇಶನ್ಸ್ ವಿತ್ ಕೃಷ್ಣಮೂರ್ತಿ' ಎಂಬ ಪುಸ್ತಕದ ಕನ್ನಡ ಅನುವಾದ.(ಅನುವಾದಿಸಿದವರು-ಓ. ಎಲ್. ನಾಗಭೂಷಣಸ್ವಾಮಿ). ಈ ಪುಸ್ತಕದಲ್ಲಿ ಇಂಗ್ಲೆಂಡಿನ ಮಾರ್ಕ್ ಲೀ ಅವರು ಜೆಕೆಯವರ ಮಾತುಗಳನ್ನು ಸಂಗ್ರಹಿಸಿ ಸಂಪಾದಿಸಿದ್ದಾರೆ. ಇದರಲ್ಲಿ ಒಂದು ವಾರಕ್ಕೆ ಒಂದು ವಿಷಯ ಎಂಬಂತೆ ವರ್ಷದ ೫೨ವಾರಗಳಿಗೆ ೫೨ವಿಷಯಗಳನ್ನು, ವಾರದ ದಿನಗಳಿಗೆ ದಿನಕ್ಕೊಂದು ಎಂಬಂತೆ ವಿಷಯದ ಒಂದೊಂದು ಅಂಶವನ್ನು ಆಯ್ದು ಪೋಣಿಸಿದೆ.

‘ಆಲೋಚನೆ ಪ್ರಯತ್ನವನ್ನು ಹುಟ್ಟಿಸುತ್ತದೆ' ಎನ್ನುವ ಚಿಂತನೆಯಲ್ಲಿ ಹೀಗಿದೆ:

‘ಕೆಟ್ಟ ಆಲೋಚನೆಗಳಿಂದ, ಅಸ್ತವ್ಯಸ್ತ ಚಿಂತನೆಗಳಿಂದ ಹೇಗೆ ಮುಕ್ತನಾಗಲಿ?' ಆಲೋಚನೆ, ಕೆಟ್ಟ ಆಲೋಚನೆ, ಅಸ್ತವ್ಯಸ್ತ ಆಲೋಚನೆಗಳಿಂದ ಬೇರೆಯಾದ ಆಲೋಚಕ ಒಬ್ಬನಿದ್ದಾನೆಯೇ? ದಯವಿಟ್ಟು ನಿಮ್ಮ ಮನಸ್ಸನ್ನೇ ನೋಡಿಕೊಳ್ಳಿ. ‘ಇದು ಅಸ್ತವ್ಯಸ್ತ ಆಲೋಚನೆ, ಇದು ಕೆಟ್ಟದ್ದು, ನಾನು ಹೀಗೆ ಯೋಚಿಸಬಾರದು, ಇದೆಲ್ಲಾ ಹೇಳಿಕೊಳ್ಳುವ ‘ನಾನು', ‘ನನ್ನ' ಒಂದು ಭಾಗ ಪ್ರತ್ಯೇಕವಾಗಿದೆ' ಎಂದೆನ್ನುವಿರಾ?.....ಹಾಗೆ ಬೇರೆ ಎಂದುಕೊಳ್ಳುವ ನಾನು ಸದಾ ಗೆಲ್ಲಲು, ನನ್ನನ್ನು ಪಕ್ಕಕ್ಕೆ ದಬ್ಬಲು, ಏನೋ ಆಗಲು ಪ್ರಯತ್ನಿಸುತ್ತಿರುತ್ತದೆ. ಕೆಟ್ಟ ಆಲೋಚನೆಗಳನ್ನು ಮಾಡದಿರುವ, ಅಸ್ತವ್ಯಸ್ತ ಚಿಂತನೆಗಳನ್ನು ದೂರತಳ್ಳುವ ಸಂಘರ್ಷ ಹುಟ್ಟಿಕೊಳ್ಳುತ್ತದೆ....ನಾನು ಬೇರೆ, ನಾನು ನಿಯಂತ್ರಿಸ ಬಯಸುವ ಆಲೋಚನೆ, ಭಾವನೆಗಳೆ ಬೇರೆ ಎಂದ ತಕ್ಷಣ ಪ್ರಯತ್ನ ಪಡುವುದು, ಸಂಘರ್ಷ ಎಲ್ಲವೂ ಬಂದುಬಿಡುತ್ತದೆ. ನಮ್ಮ ದಿನನಿತ್ಯ ಬದುಕಿನ ವಾಸ್ತವ ಇದೇ.

‘ಆಲೋಚನೆಗಳ ನಡುವಿನ ವಿರಾಮ'ದ ಬಗ್ಗೆ ಹೇಳುತ್ತಾ....

ಆಲೋಚನೆಗಳು ಗತ ಮತ್ತು ವರ್ತಮಾನದ ನಡುವೆ ಲೋಲಕದಂತೆ ತುಯ್ಯುತ್ತಿರುವುದನ್ನು ಮಾತ್ರವಲ್ಲ, ಆಲೋಚನೆಗಳ ನಡುವೆ ಇರುವ ವಿರಾಮವನ್ನೂ ಮನಸ್ಸು ಕಂಡು ಅರ್ಥಮಾಡಿಕೊಳ್ಳಬೇಕು.....ಎರಡು ಆಲೋಚನೆಗಳ ನಡುವೆ ಆ ಎರಡೂ ಆಲೋಚನೆಗಳಿಗೆ ಸಂಬಂಧಿಸಿರದ ಮೌನದ ಒಂದು ಅವಧಿ ಇರುತ್ತದೆ.....ಮನಸ್ಸು ತನ್ನನ್ನು ತಾನು ಆಲೋಚನೆಗಳಿಗೆ ತೆತ್ತುಕೊಳ್ಳದೆ ಇರುವಾಗ, ಹುಟ್ಟಿಸಿಕೊಂಡದ್ದೋ ಕಲ್ಪಿತವೋ ಅಲ್ಲದ ನಿಷ್ಕಾರಣ ನಿಶ್ಚಲತೆ ಇರುವಾಗ, ಆಗ ಮಾತ್ರ ಎಲ್ಲ ಹಿನ್ನೆಲೆಗಳಿಂದ ಬಿಡುಗಡೆ ಇರುತ್ತದೆ.

‘ಆಲೋಚನೆಯ ಸ್ವಾತಂತ್ರ್ಯವಿಲ್ಲ' ಎನ್ನುವುದನ್ನು ಹೀಗೆ ಸ್ಪಷ್ಟಪಡಿಸುತ್ತಾರೆ:

ನಾವು ವೈರುಧ್ಯದ ಸ್ಥಿತಿಯಲ್ಲಿದ್ದೇವೆ. ಶಾಂತಿಯ ಬಗ್ಗೆ ಮಾತನಾಡುತ್ತಾ ಯುದ್ಧಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತೇವೆ, ಅಹಿಂಸೆಯ ಬಗ್ಗೆ ನುಡಿಯುತ್ತೇವೆ ಆದರೆ ಹಿಂಸಕರಾಗಿರುತ್ತೇವೆ, ಒಳ್ಳೆಯವರಾಗಿರುವುದರ ಬಗ್ಗೆ ಹೇಳುತ್ತೇವೆ ಆದರೆ ಒಳ್ಳೆಯವರಾಗಿರುವುದಿಲ್ಲ,.....ಈ ವೈರುಧ್ಯದಿಂದ ಹುಟ್ಟುವ ಎಲ್ಲ ಕ್ರಿಯೆಗಳೂ ಹತಾಶೆಯನ್ನು, ಮತ್ತಷ್ಟು ವೈರುಧ್ಯವನ್ನು ಸೃಷ್ಟಿಸುತ್ತವೆ.....

ಎಲ್ಲ ಆಲೋಚನೆಗಳೂ ಅಂಶಿಕವೇ ಹೊರತು ಪೂರ್ಣವಲ್ಲ. ಆಲೋಚನೆ ಎಂಬುದು ನೆನಪಿನ ಪ್ರತಿಕ್ರಿಯೆ. ನೆನಪು ಯಾವಾಗಲೂ ಅಂಶಿಕವೇ. ಏಕೆಂದರೆ ಅದು ಅನುಭವದ ಫಲಿತಾಂಶ.....ಆದ್ದರಿಂದ ನಮಗಿರುವ ಸಮಸ್ಯೆಯನ್ನು ಆಲೋಚನೆ ಪರಿಹರಿಸಲಾರದು.

‘ಆಲೋಚಕನಿಲ್ಲದ ಆಲೋಚನೆ'ಯ ಕುರಿತು.....

ಮರದ ಮೇಲಿರುವ ಕೋತಿಗೆ ಹಸಿವೆಯಾಗುತ್ತದೆ. ಯಾವುದಾದರೂ ಹಣ್ಣನ್ನು ಹುಡುಕಬೇಕೆಂಬ ಒತ್ತಾಯ ಹುಟ್ಟಿಕೊಳ್ಳುತ್ತದೆ. ಮೊದಲು ಕ್ರಿಯೆ ಜರುಗುತ್ತದೆ. ಆನಂತರ ಸಿಕ್ಕಿದ ಹಣ್ಣನ್ನು ಎತ್ತಟ್ಟುಕೊಳ್ಳಬೇಕೆಂಬ ಐಡಿಯಾ ಬರುತ್ತದೆ....ಯಾವುದು ಮೊದಲು? ಕ್ರಿಯೆಯೊ? ಕತೃವೊ? ಕ್ರಿಯೆ ಇಲ್ಲದ ಕತೃ ಇರಲು ಸಾಧ್ಯವೇ?.....ನಾವು ಸದಾ ಅನ್ವೇಶಿಸುತ್ತಿರುವುದು ಇದನ್ನೇ. ನೋಡುತ್ತಿರುವವರು ಯಾರು? ಗಮನಿಸುತ್ತಿರುವವರು ಯಾರು? ತನ್ನ ಆಲೋಚನೆಗಿಂತ ಭಿನ್ನವಾದ ಆಲೋಚಕ, ನಾವು ವೀಕ್ಷಿಸುತ್ತಿರುವ ವಸ್ತುವಿಗಿಂತ ಭಿನ್ನವಾದ ವೀಕ್ಷಕ, ತನ್ನ ಅನುಭವದಿಂದ ಪ್ರತ್ಯೇಕವಾಗಿನಿಲ್ಲುವ ಅನುಭವಿಸುವಾತ, ಕ್ರಿಯೆಗಿಂತ ಭಿನ್ನನಾದ ಕತೃ ಇದ್ದಾನೆಯೇ?.....ಕ್ರಿಯೆಗೆ ಒಂದು ಗುರಿಯಿದ್ದರೆ ಆ ಗುರಿಯನ್ನು ತಲುಪುವುದರಲ್ಲಿಯೇ ಒಬ್ಬ ಕತೃ ಸೃಷ್ಟಿಗೊಳ್ಳುತ್ತಾನೆ. ನೀವು ಸ್ಪಷ್ಟವಾಗಿ ಆಲೋಚಿಸಿದರೆ, ಯಾವುದೇ ಪೂರ್ವಾಗ್ರಹವಿಲ್ಲದೇ, ಯಾವುದೇ ಹೊಂದಾಣಿಕೆಯಿಲ್ಲದೇ, ಯಾರನ್ನಾದರೂ ಒಪ್ಪಿಸಬೇಕೆಂಬ ಹಟವಿಲ್ಲದೇ ಯಾವುದೇ ಗುರಿಯನ್ನು ಎದುರಿಗಿಟ್ಟುಕೊಳ್ಳದೇ ಆಲೋಚಿಸಿದರೆ ಆ ಆಲೋಚನೆಯಲ್ಲಿ ಆಲೋಚಕ ಇರುವುದೇ ಇಲ್ಲ. ಕೇವಲ ಆಲೋಚನೆ ಮಾತ್ರ ಇರುತ್ತದೆ.

‘ಆಲೋಚನೆಯನ್ನು ಗಮನಿಸುವುದು' ಇದರ ಪ್ರಮುಖ್ಯತೆಯನ್ನು ತಿಳಿಸುತ್ತಾ, ‘ಏನು ಇದೆಯೋ ಅದನ್ನು ಅರ್ಥಮಾಡಿಕೊಳ್ಳಲು ನಾವು ಹೇಗೆ ಆಲೋಚಿಸುತ್ತೇವೆ, ಭಾವಿಸುತ್ತೇವೆ ಎಂಬುದನ್ನು ಕ್ಷಣಕ್ಷಣವೂ ಅರ್ಥಮಾಡಿಕೊಳ್ಳಬೇಕು' ಎನ್ನುತ್ತಾರೆ. ಹಾಗೆಯೇ ‘ಆಲೋಚನೆಯ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಿ', ಎಂಬುದನ್ನು ತಿಳಿಯಪಡಿಸುವುದು ಈ ರೀತಿಯಾಗಿದೆ:

ನೀವು ಒಂದೂ ಧಾರ್ಮಿಕ ಪುಸ್ತಕ, ಒಂದೂ ಮನಃಶಾಸ್ತ್ರೀಯ ಪುಸ್ತಕವನ್ನು ಓದಿರದಿದ್ದರೆ ಆಗ ಏನು ಮಾಡುತ್ತಿದ್ದಿರಿ?.......ಗುರುಗಳಿಲ್ಲ, ಧಾರ್ಮಿಕ ಸಂಘಟನೆಗಳಿಲ್ಲ, ಬುದ್ಧನಿಲ್ಲ, ಕ್ರಿಸ್ತನಿಲ್ಲ.....ಎಂಬುದಾಗಿ ನೀವು ಎಲ್ಲವನ್ನೂ ಮೊದಲಿನಿಂದಲೇ ಅರಿಯಬೇಕಾಗಿ ಬಂದಿದ್ದರೆ ಏನು ಮಾಡುತ್ತಿದ್ದಿರಿ?......ಮೊದಲಿಗೆ ನಿಮ್ಮ ಆಲೋಚನೆಯ ವಿಧಾನ, ಪ್ರಕ್ರಿಯೆಗಳನ್ನೇ ಪರಿಶೀಲಿಸಿಕೊಳ್ಳುತ್ತಿರಿ, ಅಲ್ಲವೆ? ನಿಜವಾಗಿ ಹೊಸತಾದುದನ್ನು ಕಂಡುಕೊಳ್ಳಲು ಅದೇ ಸರಿಯಾದ ದಾರಿಯಲ್ಲವೇ?

.....ನಿಜವಾದ ಅರ್ಥದಲ್ಲಿ ಸೃಜನಶೀಲರಾಗುವುದು ಎಂದರೆ ಗತದಿಂದ ಸಂಪೂರ್ಣವಾಗಿ ಮುಕ್ತರಾಗಿ ಕ್ಷಣದಿಂದ ಕ್ಷಣಕ್ಕೆ ಬದುಕುವುದು ಎಂದು ಅರ್ಥ. ಹೊಸತನ್ನೇನಾದರೂ ಕಾಣಬೇಕಾದರೆ ಸ್ವತಃ ನೀವೇ ಕಾಣಲು ತೊಡಗಬೇಕು. ಮುಖ್ಯವಾಗಿ ಯಾವ ಜ್ಞಾನದ ಬೆಂಬಲವೂ ಇಲ್ಲದೆ ಸ್ವತಃ ನೀವೇ ನಿಮ್ಮ ಪಯಣಕ್ಕೆ ತೊಡಗಬೇಕು.

‘ಆಲೋಚನೆಯ ವಲಯದಾಚೆಗೆ' ಬದಲಾವಣೆಯನ್ನು ಆಗುಮಾಡಿಕೊಳ್ಳುವುದಕ್ಕೆ ಸಾಧ್ಯವಿದೆಯೆ? ಆಮೂಲಾಗ್ರ ಬದಲಾವಣೆ ಆಲೋಚನೆಯ ವಲಯದಾಚೆಗೆ ಸಂಭವಿಸಬಹುದೇ ಹೊರತು ಒಳಗೆ ಅಲ್ಲ. ಈ ವಲಯದ ಮಿತಿಗಳನ್ನು, ಗಡಿರೇಖೆಗಳನ್ನು ಮನಸ್ಸು ಕಂಡುಕೊಂಡಾಗ, ಈ ಮಿತಿಯೊಳಗೆ ಆಗುವ ಬದಲಾವಣೆಗಳು ನಿಜವಲ್ಲ ಎಂದು ಸಾಕ್ಷಾತ್ಕರಿಸಿಕೊಂಡಾಗ ಮಾತ್ರ ಆಲೋಚನೆಯ ವಲಯವನ್ನ್ರು ಮೀರಲು ಸಾಧ್ಯವಾಗುತ್ತದೆ. ಇದೇ ನಿಜವಾದ ಧ್ಯಾನ.

‘ಆಲೋಚನೆ'ಯ ಬಗೆಗಿನ ಜೆಕೆಯವರ ಗಹನವಾದ ಕೆಲವು ವಿಚಾರಗಳನ್ನು ಇಲ್ಲಿ ಪ್ರಸ್ತುತಪಡಿಸಿದ್ದೇನೆ. ಇದನ್ನು ಅರ್ಥಮಾಡಿಕೊಳ್ಳುವ, ಅನುಸರಿಸುವ, ಆಲೋಚನಾರಹಿತ ಸ್ಥಿತಿಗೇರುವ ಪ್ರಯತ್ನವನ್ನು ಪ್ರಾರಂಭಿಸೋಣ.

9 comments:

 1. Mind is media antha odiddene...yella alochanegalu manasina moolaka baruttave horatu moola adaralilla endaaitu. aalochanegala huttu kooda manasina moolaka aguttave emba vichaarave gattiyaaguttade. ಹೊಸತನ್ನೇನಾದರೂ ಕಾಣಬೇಕಾದರೆ ಸ್ವತಃ ನೀವೇ ಕಾಣಲು ತೊಡಗಬೇಕು. hosatenaadaroo ennalu - ellavu iddadde..allave? adu namage hosadu agirabahudu - aadare namma universe ge adu tumba haleyadu anisuvudillave? idu nanna vichaara ashte.

  dhanyavaadagalu
  ananth

  ReplyDelete
 2. ಪ್ರಭಾಮಣಿ ಮೇಡಂ;ಜಿಡ್ಡು ಕೃಷ್ಣಮೂರ್ತಿ ಯವರ ಈ ಪುಸ್ತಕ ನನ್ನಲ್ಲಿದೆ.ಆದರೆ ಒದಿ ಅರಗಿಸಿಕೊಳ್ಳಲಾಗುತ್ತಿಲ್ಲ.ಆಲೋಚನಾರಹಿತ ಸ್ಥಿತಿ ಸುಂದರ ಅನಿಸುತ್ತದೆ.ಆದರೆ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಕಷ್ಟಕರ.'ಆಸ್ಥಾ' ಚಾನೆಲ್ ನಲ್ಲಿ ಪ್ರತಿ ಸಂಜೆ ೭-೧೫ ರಿಂದ ೭-೪೦ ಯವರಗೆ ಮತ್ತೆ ಪ್ರತಿ ಭಾನುವಾರ ರಾತ್ರಿ ೯-೩೦ ರಿಂದ ೯-೪೫ ರವರೆಗೆ ಬ್ರಮ್ಹ ಕುಮಾರಿಯವರ ಸಿಸ್ಟರ್ ಶಿವಾನಿ ಎಂಬುವವರು ಒಳ್ಳೆಯ ಕಾರ್ಯಕ್ರಮ ನಡೆಸಿಕೊಡುತ್ತಾರೆ.ತಪ್ಪದೆ ನೋಡಿ .ನಮಸ್ಕಾರ.

  ReplyDelete
 3. ಜೆಕೆಯವರ ವಿಚಾರಗಳು ನಿಜವಾಗಿಯೂ ಗಹನವಾಗಿವೆ.

  ReplyDelete
 4. ನಿಮ್ಮ ಬ್ಲಾಗಿಗೆ ಬರುತ್ತಿರುತ್ತೇನೆ.ಚೆನ್ನಾಗಿದೆ. ಜಿಡ್ಡು ವಿಚಾರ ಧಾರೆ ಬಗ್ಗೆ ಬರೆದ ಈ ಲೇಖನ ಚಿ೦ತನಶೀಲವಾಗಿದೆ.

  ReplyDelete
 5. ಆಲೋಚನೆಗೆ ಒಡ್ಡುತ್ತದೆ..

  ReplyDelete
 6. ಪ್ರಭಾಮಣಿಯವರೇ..ಆಲೋಚನೆಗಳು ಆಂಶಿಕ ಪೂರ್ಣವಲ್ಲ ಎನ್ನುವುದು ನಾನು ೫೦% ಪ್ರತಿಶತ ಮಾತ್ರ ಒಪ್ಪುತ್ತೇನೆ ಏಕೆಂದರೆ ಅದು ನಮ್ಮ ಮನಸ್ಥಿತಿಯ ಆಧಾರದಮೇಲೆ ಅವಲ್ಂಬಿಸಿರುತ್ತವೆ... ನಮಗೆ ಮುಂದಿನ ಎಲ್ಲಾ ಆಗುಹೋಗುಗಳ ಪರಿವೆ ಮೂಡುವಂತಹ ಆಲೋಚನೆಯಾದರೆ ಅದು ಆಂಶಿಕ ಆಗಿರಲಾರದು...ಅಲ್ವಾ..? ಜೀವಿತಾವಧಿಯ ಒಟ್ಟಾರೆ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಆ ಕ್ಷಣದ ಆಲೋಚನೆ ಆಂಶಿಕವಾಗಿ ಮಾರ್ಪಾಡಾಗಬಹುದು.

  ReplyDelete
 7. ಆಲೋಚನೆಯ ಬಗ್ಗೆ ನಿಮ್ಮ ಲೇಖನ ಮನದಲ್ಲಿ ಬಹಳಷ್ಟು ಧೀರ್ಘಾಲೋಚನೆಗಳನ್ನು ಮೂಡಿಸಿತು.. ಧನ್ಯವಾದಗಳು!

  ReplyDelete
 8. ಪ್ರತಿಕ್ರಿಯಿಸಿದ ಎಲ್ಲ್ಲಾ ಅತ್ಮೀಯರಿಗೂ ಅನೇಕಾನೇಕ ಧನ್ಯವಾದಗಳು. ಪ್ರತ್ಯೇಕವಾಗಿ ಪ್ರತಿಕ್ರಿಯಿಸಲಾಗದ್ದಕ್ಕೆ ಹಾಗೂ ತಡವಾಗಿದ್ದಕ್ಕೆ ಕ್ಷಮೆಯಿರಲಿ. ಭೇಟಿ ನೀಡುತ್ತಿರಿ

  ReplyDelete