Sunday, December 14, 2014

ಕವನ- `ಒಂದಿಷ್ಟು ತಾವು ಕೊಡು......'


ಸುದೀರ್ಘ ಪಯಣ ಮುಗಿಸಿ
ಹೊರ ಹೊರೆಗಳನೆಲ್ಲಾ ಕಳಚಿ
ಇದೀಗಷ್ಟೇ ಒಳಗಡಿಯಿರಿಸಿದ್ದೇನೆ
ಇನ್ನೇನಿದ್ದರೂ ನನ್ನಂತೆ ನಾನಿರುವ
ಹಂಬಲದಲಿ
ಮನ ಗರಿಗೆದರಿ
ಸ್ವರವೆತ್ತಲುಪಕ್ರಮಿಸಿದಾಕ್ಷಣವೇ
ಏನಿದು ಅಪಶೃತಿ?
ನನ್ನ ಬದುಕಿನ ‘ನಿಮಿತ್ತ’ಮಾತ್ರವೇ
ನಿಯಂತ್ರಿಸದಿರು ಬಾಳ ಅಸೀಮತೆಯ

ತಂದು ತುಂಬಿದ್ದಾಗಿದೆ ಮನೆಯ ತುಂಬಾ
(ಮನದ ತುಂಬಾ.....)
ಬೇಕು ಬೇಕೆಂಬ ಹಪಹಪಿಯ
ಅಂದೊಮ್ಮೆ ಅತ್ಯಗತ್ಯವಾಗಿದ್ದು...
ಅನಿವಾರ್ಯವೆನಿಸಿದ್ದು
ಮನೆಯ ಮೂಲೆಮೂಲೆಯಲ್ಲೂ
ಪೇರಿಸಲ್ಪಟ್ಟು
ನಡುವೆಯೆಲ್ಲಾ ವಿಸ್ತರಿಸಿ
ಒಳಗಡಿಯಿಡಲೂ ಆಸ್ಪದವೀಯದಂತೆ
ಅತಿಕ್ರಮಿಸಿದೆ!
ನನ್ನ ಮನೆಗೆ ನಾನೇ
ಪರಕೀಯಳೇ?
ಅಪರಿಚಿತಳೇ?
ವಲಸೆಹೋಕಳಂತೆ ಅಲೆದಲೆದು
ಈಗ್ಗೆ ಸ್ವಲ್ಪ ಮೊದಲಷ್ಟೇ
ಆಗಮಿಸಿದ್ದೇನೆ
ಆಡಿ ಓಡಿ ಬಂದ ಕಂದ
ತಾಯ ಮಡಿಲ ಸೇರುವಂತೆ,
ಧಿಕ್ಕರಿಸುವುದು ಸರಿಯೇ?
ಹಾರಿಹಾರಿ ದಣಿದ ಹಕ್ಕಿ
ವಿರಮಿಸಲು ರೆಂಬೆಯೇರಿ ಕುಳಿತಾಗ
ಮರ ಹೊರನೂಕುವುದೆ?
ಕನಿಕರಿಸು
ಸಹಕರಿಸು
ನಿನ್ನೊಡಲಲಿ, ಗೂಡಲಿ
ನನಗಷ್ಟು ಆಸ್ಪದ ನೀಡು
ಇದೋ ತೆಗೆದೊಗೆಯಲಾರಂಭಿಸಿದ್ದೇನೆ
ಮನೆತುಂಬಿದ್ದ ‘ಬೇಕು’ ಸರಕುಗಳ
ಈಗ ಅವು ಬೇಡವೆನಿಸುತ್ತಿವೆ
ನನ್ನಾಣೆ,
ಒಂದೊಂದೇ ಎಸೆದೆಸೆದಂತೆ
ಹಗುರಾದ ಭಾವ
ಪ್ರಶಾಂತತೆಯ ಅನುಭೂತಿಯಲಿದ್ದವಳಿಗೆ
ಗಂಟಲಲೇನೋ ಸಿಕ್ಕಿದಂತೆ.........
ಹೌದು
ಅರಿವಾಗುತ್ತಿದೆ
ಬಹುದೊಡ್ಡ ಅಡ್ಡಿ ಇದೇ!
ಇಗೋ ನಾನೇರಿದೆನೆಂದು ಭ್ರಮಿಸಿದಂತೆ
ತಲೆಗೇರಿದ್ದ ‘ನಾನು’ ಈಗಷ್ಟೇ ಕೈಗೆಟುಕಿದೆ
ಬಲು ಭಾರ, ಜಿಗುಟು
ವರ್ಜಿಸಲನುವಾದೆ, ಸರಿಯೆ?
(ಕಸಾಪ ಶತಮಾನೋತ್ಸವ ವರ್ಷದ ಅಂಗವಾಗಿ ಹಾಸನ ಜಿಲ್ಲೆಯ ಹಲ್ಮಿಡಿಯಲ್ಲಿ ನಡೆದ `ಹಲ್ಮಿಡಿ ಉತ್ಸವ’ದಲ್ಲಿ ಬಿಡುಗಡೆಯಾದ ಹಾಸನ ಕಸಾಪ ದ ತ್ರೈಮಾಸಿಕ `ಹೊಯ್ಸಳ ಸಿರಿ’ಯಲ್ಲಿ ಪ್ರಕಟವಾದ ಕವನ.)

2 comments:

  1. ತುಂಬ ಅರ್ಥಪೂರ್ಣವಾದ ಕವನ.

    ReplyDelete
  2. ಇದೋ, ಅಂತೂ ನೆಲೆ ತಲುಪಿದೆವು ಎನ್ನುಷ್ಟರಲ್ಲಿ ಧುತ್ತೆಂದು ಆವರಿಸುವ ಅದೆಂತದೋ ಬೇಡದ ಬೆಳವಣೊಗೆಯನ್ನು ಮನಕುಲುಕುವಂತೆ ಕಟ್ಟಿಕೊಟ್ಟಿದ್ದೀರ.

    ReplyDelete