Monday, April 25, 2011

ಮನದ ಅಂಗಳದಿ.........೩೭. ಹಿಂಸೆ-ಅಹಿಂಸೆ

ಪ್ರಾಥಮಿಕ ಶಾಲಾ ಶಿಕ್ಷಕರಿಗೆ ‘ಚೈತನ್ಯ’ ತರಬೇತಿ ನೀಡುವ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ನನಗೆ ‘ಮೌಲ್ಯ ಶಿಕ್ಷಣ’ದ ಒಂದು ಅವಧಿಯೂ ಇರುತ್ತಿತ್ತು. ತರಗತಿಯ ಪ್ರಾರಂಭದಲ್ಲಿ ಅವರಿಗೆ ಮೌಲ್ಯಗಳಿಗೆ ಸಂಬಂಧಿಸಿದಂತೆ ಒಂದು ಆಟವನ್ನು ಆಡಿಸುತ್ತಿದ್ದೆ. ‘ಈಗ ಕೆಲವು ಪದಗಳನ್ನು ಹೇಳುತ್ತೇನೆ. ನಿಮಗದು ಬೇಕು ಎನಿಸಿದರೆ (ಸ್ವೀಕಾರ ಯೋಗ್ಯವಾಗಿದ್ದರೆ) ‘ಜೈ ಜೈ’ ಎಂದು ಹೇಳಿರಿ. ಬೇಡ ಎನಿಸಿದರೆ ‘ಛೀ ಛೀ’ ಎನ್ನಿರಿ ಎಂದು ಸೂಚನೆಯನ್ನು ನೀಡಿ ಪ್ರಾರಂಭಿಸುತ್ತಿದ್ದೆ.........ಅಸತ್ಯ-‘ಛೀ ಛೀ’, ಅನ್ಯಾಯ-‘ಛೀ ಛೀ’, ಅಗೌರವ-‘ಛೀ ಛೀ’, ಅಧರ್ಮ-‘ಛೀ ಛೀ’, ಅನೀತಿ-‘ಛೀ ಛೀ’, ..........ಹೀಗೆ ಹೇಳುತ್ತಾ ‘ಅಹಿಂಸೆ’ ಎಂದಾಗ ಎಲ್ಲರೂ ಒಟ್ಟಾಗಿ ‘ಛೀ ಛೀ’ ಎಂದು ಬಿಡುತ್ತಿದ್ದರು! ‘ಈಗ ನಮ್ಮ ಜೀವನ ಕ್ರಮದಲ್ಲಿ ‘ಅಹಿಂಸೆ’ಯ ಸ್ಥಾನ ಹೀಗೇ ಇರುವುದು,’ ಎನ್ನಬೇಕಾಗುತ್ತಿತ್ತು.

ಯಾವುದೇ ಸಮೂಹವನ್ನು ಗಮನಿಸಿದರೂ ಬಹುತೇಕರ ಆಹಾರ ಪದ್ಧತಿ ಹಿಂಸೆಯನ್ನು ಒಳಗೊಂಡೇ ಇರುತ್ತದೆ. ನಮ್ಮ ಕೆಲವು ಹಳ್ಳಿಯ ಶಾಲೆಗಳಲ್ಲಂತೂ ತರಗತಿಗೆ ಒಂದಿಬ್ಬರು ತಮ್ಮದು ಸಸ್ಯಾಹಾರ ಎಂದು ಸಂಕೋಚದಿಂದ ಹೇಳುವ ಪರಿಸ್ಥಿತಿಯಿರುತ್ತದೆ. ಎಲ್ಲವೂ ಮೊದಲಿನಿಂದ ಬೆಳೆದು ಬಂದ ಪದ್ಧತಿಗಳು. ಅವರಿಗೆ ಅಹಿಂಸೆಯ ಬಗ್ಗೆ ಏನೆಂದು ಹೇಳುವುದು?

ಪ್ರಕೃತಿಯಲ್ಲಿನ ಆಹಾರ ಸರಪಣಿಯನ್ನು ಗಮನಿಸಿದಾಗ ಮೇಲ್ಮಟ್ಟಕ್ಕೆ ಹೋದಂತೆ ಒಂದು ಜೀವಿಯು ಮತ್ತೊಂದು ಜೀವಿಯನ್ನು ಆಧರಿಸಿಯೇ ಬದುಕುವುದು. ಅದನ್ನು ಅತಿಕ್ರಮಿಸಿದರೆ ಮಾಂಸಾಹಾರಿ ಜೀವಿಗಳು ಬದುಕುವುದಾದರೂ ಹೇಗೆ? ‘ಪುಣ್ಯಕೋಟಿಯ ಕಥೆ’ಯಲ್ಲಿ ಗೋವನ್ನು ತಿನ್ನುವುದಿಲ್ಲವೆಂದು ನಿರ್ಧಾರ ಮಾಡಿದ ಹುಲಿರಾಯ ಏಕೆ ಬೆಟ್ಟದಿಂದ ಹಾರಿ ಬಿದ್ದು ಪ್ರಾಣವನ್ನು ಕಳೆದುಕೊಂಡಿತು ಎಂದು ಮೊದಲು ಯೋಚಿಸುವಂತಾಗುತ್ತಿತ್ತು. ಮಾಂಸಾಹಾರಿಯಾದ ಹುಲಿಯು ಅಹಿಂಸೆಯನ್ನು ಪಾಲಿಸಲು ತೀರ್ಮಾನ ಮಾಡಿದ ನಂತರ ಅದು ತಿನ್ನುವುದಾದರೂ ಏನನ್ನು? ಎನ್ನುವುದು ಆನಂತರದ ಓದಿನಲ್ಲಿ ತಿಳಿಯಿತು. ಹಿಂಸೆ ಎಂದರೆ ಕೇವಲ ದೈಹಿಕ ಹಿಂಸೆ ಮಾತ್ರವಲ್ಲ. ಮಾನಸಿಕ ಹಿಂಸೆಯೂ ಹಿಂಸೆಯೇ.

ಈಗ ಹಿಂಸೆ-ಅಹಿಂಸೆಯ ಬಗ್ಗೆ ಜಿಡ್ಡು ಕೃಷ್ಣಮೂರ್ತಿಯವರು ಏನನ್ನು ಹೇಳುತ್ತಾರೆಂದು ತಿಳಿಯೋಣ:

‘ನೀವು ಹಿಂಸೆ ಎನ್ನುತ್ತೀರಲ್ಲ, ಆ ಮಾತಿಗೆ ನೀವು ಕೊಡುವ ಅರ್ಥವೇನು? ಈ ಲೋಕದಲ್ಲಿ ಬದುಕುತ್ತಿರುವ ಮನುಷ್ಯ ಹಿಂಸಕನಾಗದೆ ಇರಲು ಸಾಧ್ಯವೇ? ಎಂಬ ಪ್ರಶ್ನೆಯನ್ನು ಆಳವಾಗಿ ಪರಿಶೀಲಿಸತೊಡಗಿದರೆ ಅದು ನಮ್ಮ ಕುತೂಹಲವನ್ನು ಕೆರಳಿಸುತ್ತದೆ. ಸಮಾಜಗಳು, ಧಾರ್ಮಿಕ ಸಂಘಟನೆಗಳು ಪ್ರಾಣಿಗಳನ್ನು ಕೊಲ್ಲದೇ ಇರಲು ಪ್ರಯತ್ನಿಸಿವೆ. ಕೆಲವರಂತೂ ‘ಪ್ರಾಣಿಗಳನ್ನು ಕೊಲ್ಲದಿರುವುದೇನೋ ಸರಿ ತರಕಾರಿ, ಸಸ್ಯಗಳನ್ನು ಕೊಲ್ಲುವುದಾದರೂ ಹೇಗೆ? ಎಂದು ಹೇಳಿರುವುದೂ ಉಂಟು. ನಾವು ಬದುಕಿರುವುದೇ ಅಸಾಧ್ಯ ಎಂಬ ಮಟ್ಟಕ್ಕೂ ಇದನ್ನು ಒಯ್ಯುವುದು ಸಾಧ್ಯವಿದೆ. ಹಿಂಸೆ-ಅಹಿಂಸೆಗಳ ನಡುವೆ ಎಲ್ಲಿ ಗೆರೆ ಎಳೆಯುತ್ತೀರಿ ನೀವು? ವೈಯಕ್ತಿಕ ಕೋಪ, ಅಂದರೆ ವ್ಯಕ್ತಿಯೊಬ್ಬ ತೊಡಗಿಕೊಳ್ಳುವ ಹಿಂಸಕ ಕ್ರಿಯೆಗೂ ಮತ್ತೊಂದು ಸಮಾಜವನ್ನು ನಾಶಮಾಡುವ ಸಲುವಾಗಿ ಸೈನ್ಯವನ್ನು ಕಟ್ಟಿಕೊಳ್ಳಲು ಪ್ರಚೋದಿಸುವ ಸಮಾಜದ ಸಂಘಟಿತ ದ್ವೇಷಕ್ಕೂ ನಡುವೆ ವ್ಯತ್ಯಾಸವಿದೆಯೇ?.....ಮನುಷ್ಯರ ಪಾಲಿಗೆ, ಅವರ ಅಂತರಂಗಕ್ಕೆ ಮತ್ತು ಬಹಿರಂಗಕ್ಕೆ ಹಿಂಸೆ ಎಷ್ಟು ಭಯಂಕರ ಎಂದು ಕಾಣುತ್ತೇವೆ. ಈ ಹಿಂಸೆಯನ್ನು ಕೊನೆಗಾಣಿಸಲು ಸಾಧ್ಯವೇ?

ಪ್ರಾಣಿಗಳು ಹಿಂಸಕವಾಗಿರುತ್ತವೆ. ಪ್ರಾಣಿಗಳ ಫಲಿತವಾದ ಮನುಷ್ಯರೂ ಹಿಂಸಕರೇ. ಕೋಪಗೊಳ್ಳುವುದು, ಅಸೂಯೆಪಡುವುದು, ಅಧಿಕಾರವನ್ನು ಅರಸುವುದು, ಅಂತಸ್ತು ಮತ್ತು ಗೌರವಗಳಿಗಾಗಿ ಹಂಬಲಿಸುವುದು, ಆಳುವುದು, ಉಗ್ರರಾಗಿರುವುದು ಇವೆಲ್ಲಾ ಮನುಷ್ಯಜೀವಕ್ಕೇ ಸೇರಿದವು.ಮನುಷ್ಯ ಹಿಂಸಕನೆನ್ನುವುದನ್ನು ಸಾವಿರ ವರ್ಷಗಳಿಂದ ಯುದ್ಧಗಳು ತೋರಿಸಿವೆ.ಜೊತೆಗೇ ಮನುಷ್ಯ ‘ಅಹಿಂಸೆ’ ಎಂದು ಕರೆಯಲಾಗುವ ಐಡಿಯಾಲಜಿಯನ್ನೂ ಬೆಳೆಸಿಕೊಂಡಿದ್ದಾನೆ......ನಾವು ವಾಸ್ತವವಾಗಿ ಹಿಂಸಕರಾಗಿದ್ದು ಅಹಿಂಸೆಯ ಐಡಿಯಾಲಜಿಯನ್ನೂ ಇಟ್ಟುಕೊಂಡಿದ್ದರೆ ಸಂಘರ್ಷ ಹುಟ್ಟುತ್ತದೆ. ನಾವು ಸದಾ ಅಹಿಂಸಾತ್ಮಕವಾಗಿರಲು ಬಯಸುತ್ತೇವೆ. ಅದು ಸಂಘರ್ಷದ ಒಂದು ಭಾಗ......ಹಿಂಸೆಯ ವಾಸ್ತವವನ್ನು ನೋಡುವ ಕ್ರಿಯೆ ಅಂತರವನ್ನು ಸೃಷ್ಟಿಸುತ್ತದೆ. ಹೀಗೆ ಕಾಲಕ್ಕೆ ಅವಕಾಶಮಾಡಿಕೊಟ್ಟಾಗ ಹಿಂಸೆಗೆ ಕೊನೆಯೇ ಇರುವುದಿಲ್ಲ. ಅಹಿಂಸೆಯನ್ನು ಬೋಧಿಸುತ್ತಾ ಹಿಂಸೆಯಲ್ಲಯೇ ತೊಡಗಿರುತ್ತೇವೆ......

ಹಿಂಸೆಯನ್ನು ಕೊನೆಗಾಣಿಸುವ ಮಹತ್ವವನ್ನು ನಾವೆಲ್ಲಾ ಅರಿತಿದ್ದೇವೆ. ಅಹಿಂಸೆಯ ಆದರ್ಶ ನಮ್ಮನ್ನು ಹಿಂಸೆಯಿಂದ ಪಾರುಮಾಡಲಾರದು. ಹಿಂಸೆಯ ವಿಶ್ಲೇಷಣೆಯೂ ನಮ್ಮೊಳಗಿನ ಹಿಂಸೆಯನ್ನು ಲಯಗೊಳಿಸಲಾರದು. ಹಾಗಾದರೆ ನಾವೇನು ಮಾಡಬೇಕು? ಇದು ನಮ್ಮ ಮುಖ್ಯ ಸಮಸ್ಯೆಗಳಲ್ಲಿ ಒಂದಲ್ಲವೇ? ಇಡೀ ಜಗತ್ತು ಹಿಂಸೆಯಲ್ಲಿ, ಯುದ್ಧಗಳಲ್ಲಿ ಸಿಲುಕಿದೆ. ನಮ್ಮ ಸಂಗ್ರಹಶೀಲ ಸಮಾಜದ ರಚನೆಯೇ ಮೂಲಭೂತವಾಗಿ ಹಿಂಸಾತ್ಮಕವಾದದ್ದು....... ಸ್ವಕೇಂದ್ರ್ರಿತರಾಗದೇ ನಾವು ಮಾಡಬೇಕಾದದ್ದು ಏನು? .......‘ಹಿಂಸಕನಾಗದಿರುವುದು ಹೇಗೆ?’ ಎಂದು ಕೇಳಿಕೊಂಡು ಸುಮ್ಮಸುಮ್ಮನೆ ಅಹಿಂಸೆಯ ಆದರ್ಶವನ್ನು ಕಟ್ಟಿಕೊಳ್ಳುವುದು ವ್ಯರ್ಥವೆಂದೇ ನಾನು ತಿಳಿದಿದ್ದೇನೆ. ಹಿಂಸೆಯನ್ನು ನೋಡಿ ಅರ್ಥಮಾಡಿಕೊಳ್ಳಲು ಸಾಧ್ಯವಾದರೆ ಹಿಂಸೆಯನ್ನು ಲಯಗೊಳಿಸುವ ಸಾಧ್ಯತೆ ಬಹುಷಃ ಕಂಡೀತು.’

‘ಅಹಿಂಸಾ ಪರಮೋ ಧರ್ಮಃ’ ಎಂಬ ಅತ್ಯಮೂಲ್ಯವಾದ ಸಂದೇಶವನ್ನು ಜಗತ್ತಿಗೆ ಸಾರಿದ ಮಹಾವೀರರ ಜಯಂತಿಯನ್ನು ಏಪ್ರಿಲ್ ೧೬ರಂದು ಆಚರಿಸಿದ್ದೇವೆ. ನಮ್ಮಲ್ಲಿರುವ ಹಿಂಸೆಯ ಅಂಶವನ್ನು ಲಯಗೊಳಿಸುವಲ್ಲಿ ಪ್ರವೃತ್ತರಾಗೋಣ. ಆಗ ಅಹಿಂಸೆಯು ತಾನೇತಾನಾಗಿ ನಮ್ಮ ಒಂದು ಭಾಗವಾಗುತ್ತದೆ.

5 comments:

 1. ಈಗಿನ ಪರಿಸ್ಥಿತಿಯಲ್ಲಿ ಅಹಿಂಸಾ ಪರಮೋಧರ್ಮ ಸ್ವೀಕರಿಸಿದರೆ ಬದುಕುವುದು ಕಷ್ಟ ಎಂಬುದು ನನ್ನ ಅನಿಸಿಕೆ...ಆಹಾರ ಸರಪಳಿ ಇರಬಹುದು ಅಥವಾ ಈಗಿನ ಸಾಮಾಜಿಕ ಧೋರಣೆ ಇರಬಹುದು...
  "Struggle for Existence " theory ಪ್ರಕಾರ ಪ್ರತಿಯೊಂದು ಜೀವಿಯು ಇನ್ನೊಂದು ಜೀವಿಯ ಮೇಲೆ ಅವಲಂಬಿತ ವಾಗಲೇ ಬೇಕು..ಮನುಷ್ಯ ಕೂಡ..ಅವನು ಸಹ್ಯಹಾರಿ ಆದರು ಕೂಡ ಎಲ್ಲೋ ಒಂದು ಕಡೆ ಒಂದು ಜೀವಿಯನ್ನು ಹಿಂಸೆ ಮಾಡಲೇಬೇಕಾಗುತ್ತದೆ...
  ನಿಮ್ಮ ಲೇಖನಗಳಲ್ಲಿ ಜಿಡ್ಡು ಕೃಷ್ಣಮೂರ್ತಿ ಅವರ ವಾಕ್ಯಗಳನ್ನು ತೆಗೆದುಕೊಳ್ಳುವುದು ತುಂಬ ಒಳ್ಳೆಯ ವಿಚಾರ...ಅವರ "ಪ್ರೀತಿ ನದಿಯಂತೆ "ಎಂಬ ಪುಸ್ತಕ ಬಹಳ ಚೆನ್ನಾಗಿದೆ..

  ReplyDelete
 2. Helikegalannu gamanisidare pratikriyisalu gondalavaaguttade..

  ReplyDelete
 3. ಹಿಂಸೆ-ಅಹಿಂಸೆಯ ಮೀಮಾಂಸೆ ಚೆನ್ನಾಗಿದೆ.

  ReplyDelete
 4. ಒಳೇ ಲೇಖನ. ಧನ್ಯವಾದಗಳು.

  ReplyDelete