Saturday, November 12, 2011

ಮನದ ಅಂಗಳದಿ.........೬೬. ದಾರಿ ಬೇರೆಯಾದರೂ ಗುರಿಯೊಂದೇ......

ಕನ್ನಡ ರಾಜ್ಯೋತ್ಸವದ ಸಂಭ್ರಮ-ಸಡಗರಗಳಲ್ಲಿ ತೊಡಗಿರುವ ಈ ನವೆಂಬರ್ ತಿಂಗಳಿನಲ್ಲಿ ಕನ್ನಡ ಸಾಹಿತ್ಯವನ್ನು ಸಮೃದ್ಧಿಗೊಳಿಸಿದ ಮಹನೀಯರ ಜೀವನದ ಅಮೂಲ್ಯ ಕ್ಷಣಗಳನ್ನು ಮೆಲಕು ಹಾಕುವ ಮೂಲಕ, ಅವರ ಜೀವನದಲ್ಲಿ ಅನುಕರಣಯೋಗ್ಯವೆನಿಸುವ ಉತ್ತಮಾಂಶಗಳನ್ನು ಅವಲೋಕಿಸುವ ಹಾಗೂ ನಮ್ಮದಾಗಿಸಿಕೊಳ್ಳುವ ಪ್ರಯತ್ನದಲ್ಲಿ ಈ ತಿಂಗಳು ಈ ಹಿರಿಚೇತನಗಳ ನೆನಪನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ:

ಒಂದು ಕಾಲದಲ್ಲಿ ಧಾರವಾಡ ಎಷ್ಟರಮಟ್ಟಿಗೆ ಸಾಹಿತಿಗಳಿಂದ ತುಂಬಿ ತುಳುಕುತ್ತಿತ್ತು ಎಂಬುದನ್ನು ಬೇಂದ್ರೆ ಒಮ್ಮೆ ತಮ್ಮ ಮನೆಯಲ್ಲೇ ತಂಗಿದ್ದ ಕೈಲಾಸಂ ಅವರಿಗೆ ಹೀಗೆಂದರು, ‘ನೋಡ್ರೀ ಕೈಲಾಸಂ ಅವರೇ, ನಮ್ಮೀ ಧಾರವಾಡದಾಗ ನೀವು ಎಲ್ಲೇ ನಿಂತು ಕಲ್ಲು ಒಗೆದ್ರೂನೂ ಅದು ಹೋಗಿ ಒಬ್ಬ ಸಾಹಿತೀಯ ಮನೀ ಮ್ಯಾಗ ಬೀಳ್ತದೇ ನೋಡ್ರೀಎಂದರು. ಅದಕ್ಕೆ ಕೈಲಾಸಂ ಅವರ ದೇಸೀ ಭಾಷೆಯಲ್ಲೇ, ‘ಅದೇನೋ ಖರೇ ಬಿಡ್ರಿ...... ಆದ್ರಾ ನಮ್ಮ ಮೈಸೂರಿನಾಗ ಪರಿಸ್ಥಿತಿ ಹೆಂಗದೇಂತ ಗೊತ್ತೇನ್ರಿ ನಿಮಗ? ಅಲ್ಲಿ ಯಾರೆಲ್ಲೇ ನಿಂತು ಕಲ್ಲೊಗೆದ್ರೂನೂ ಅದು ಯಾವನಾರ ಸಾಹಿತಿಯ ಮನೀ ಮ್ಯಾಗ ಹೋಗಿ ಬೀಳೂದಿಲ್ರೀ, ಬದಲಿಗೆ ಸಾಹಿತಿಯ ತಲೀಮ್ಯಾಗಾನೇ ಹೋಗಿ ಬೀಳ್ತದೆ,’ ಎಂದು ಅಂದಾಗ ಕಿಲಕಿಲನೆ ನಕ್ಕವರು ಬೇಂದ್ರೆ!

ನಮ್ಮ ಪ್ರಖ್ಯಾತ ಸಾಹಿತಿಗಳದ್ದು ಒಬ್ಬೊಬ್ಬರದು ಒಂದೊಂದು ರೀತಿಯ ಜೀವನ ಮಾರ್ಗ, ಆದರೆ ಅವರೆಲ್ಲರ ಗುರಿಯೂ ಒಂದೇ. ಅದು ಅವರ ಆತ್ಮಾನಂದವೂ ಆಗಿತ್ತು ಹಾಗೂ ತನ್ಮೂಲಕ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಲೂ ಸಹಕಾರಿಯಾಯಿತು ಎನ್ನುವುದನ್ನು ಅವರ ಬದುಕಿನ ಪಥವನ್ನು ಅವಲೋಕಿಸಿದಾಗ ಮನಗಾಣಬಹುದು:

೧೯೧೪ರಲ್ಲಿ ಮೊದಲನೇ ಮಹಾಯುದ್ಧ ಆರಂಭವಾಗುತ್ತಿದ್ದಂತೆಯೇ ಇಂಗ್ಲೆಂಡಿನಲ್ಲಿದ್ದ ಭಾರತೀಯರನ್ನೆಲ್ಲಾ ಭಾರತಕ್ಕೆ ಕಳಿಸಲಾಯಿತು.ಅಲ್ಲಿಯ ಜೀವನಕ್ಕೆ ಬಹಳವಾಗಿ ಹೊಂದಿಕೊಂಡಿದ್ದ ಕೈಲಾಸಂ ಬಲವಂತಕ್ಕೊಳಗಾಗಿ ಬೇರೆ ಮಾರ್ಗವೇ ಕಾಣದೇ ಭಾರತಕ್ಕೆ ಹಿದಿರುಗಿದರು. ಅಂದಿನ ಮೈಸೂರು ರಾಜ್ಯದ ಭೂಗರ್ಭ ಇಲಾಖೆಯಲ್ಲಿ ಪ್ರೊಬೇಶನರಿ ಇಂಜಿನಿಯರಾಗಿ ಒಳ್ಳೆಯ ಕೆಲಸವೂ ಸಿಕ್ಕಿತು. ಆದರೆ ಅಲ್ಲಿಯ ವಾತಾವರಣ ಅವರ ಮನೋಭಾವಕ್ಕೆ ಒಗ್ಗಿ ಬರಲಿಲ್ಲ. ಕೆಲಸಕ್ಕೆ ರಾಜೀನಾಮೆಯನ್ನಿತ್ತರು. ಪರಿಚಿತರೊಬ್ಬರು, ‘ಕೆಲಸವನ್ನೇಕೆ ಬಿಟ್ಟಿರಿ?’ ಎಂದು ಕೇಳಿದಾಗ ನಿಟ್ಟುಸಿರು ಬಿಟ್ಟ ಕೈಲಾಸಂ, ನೋಡ್ರೀ ಸರ್ಕಾರಿ ಸೇವೇಲಿದ್ಕೊಂಡು ಸೀಟು-ಕಾರುಸಿಗೋಹೊತ್ಗೆ ಆಯುಷ್ಯದ ಮುಕ್ಕಾಲು ಭಾಗವೇ ಮುಗಿದುಹೋಗಿರುತ್ತೆ. ಆಮೇಲೆ ಸ್ವಂತವಾಗಿ ಏನನ್ನೂ ಸಾದ್ಸೋಕೆ ಸಾಧ್ಯವಾಗೋಲ್ಲ. ಆದ್ರಿಂದ ಪ್ರಾಯ್ದಲ್ಲಿರೋವಾಗ್ಲೇ ಏನೇನು ಸಾಧಿಸ್ತೀವೋ ಅಷ್ಟೇ ಪ್ರಾಪ್ತಿ. ಅಲ್ದೇ ನಾವು ಸ್ವತಂತ್ರವಾಗಿ ಏನನ್ನಾದ್ರೂ ಹೊಸದಾಗಿ ಸಲ್ಸಿದ್ದೇ ಆದ್ರೆ ನಾವು ನಮಗೆ ಈ ಭೂಮೀ ಮೇಲೆ ಬದುಕೋಕ್ಬಿಟ್ಟಿರೋ ಆ ಭಗವಂತನಿಗೆ ಕೊಡೋ ಬಾಡ್ಗೆ ಅಂತ ಭಾವಿಸ್ಕೋಬೇಕು. ಈ ದೃಷ್ಟೀನಿಟ್ಕೊಂಡು ಕನ್ನಡದಲ್ಲಿ ವಿಶಿಷ್ಟ ಶೈಲಿಯಲ್ಲಿ ವಿಡಂಬನಾತ್ಮಕ ನಾಟಕಗಳನ್ನು ನೀಡುವುದರ ಮೂಲಕ ಭಗವಂತನಿಗೆ ಬಾಡಿಗೆಯನ್ನು ಸಲ್ಸೋದಕ್ಕೆ ಪ್ರಯತ್ನಪಡ್ತೀನಿ.ಎಂದರಂತೆ. ಒಗ್ಗಲಿಲ್ಲವೆಂದು ಗಣಿಕೆಲಸವನ್ನು ಬಿಟ್ಟ ನಂತರ ತಮಗಿದ್ದ ಅಪೂರ್ವ ಪದವಿಗಳ ಮೂಲಕ ಬೇರೆ ಯಾವುದಾದರೂ ವೃತ್ತಿಯನ್ನು ಹಿಡಿದು ಆರಾಮವಾದ ವೈಭವಯುತ ಜೀವನವನ್ನು ನಡೆಸಬಹುದಿತ್ತು. ಆದರೆ ಎಲ್ಲವನ್ನೂ-ಎಲ್ಲರನ್ನೂ ತೊರೆದು, ಅತ್ಯಂತ ನಿಕೃಷ್ಟವೆನಿಸುವ ದಾರುಣಮಯ ಬದುಕನ್ನೇ ಅಪ್ಪಿಕೊಂಡ, ಅಂತಹ ಹೀನಾಯ ಸ್ಥಿತಿಯಲ್ಲೂ ಕನ್ನಡ ನಾಟಕಗಳನ್ನು ರಚಿಸುವುದರ ಮೂಲಕ ಸಾಹಿತ್ಯದ ನಾಟಕ ಪ್ರಕಾರದಲ್ಲಿ ಕೀರುತಿಯ ಉತ್ತುಂಗಕ್ಕೇರಿದ ಕೈಲಾಸಂರ ಛಲ, ಸಂಕಲ್ಪ ಬಲು ದೊಡ್ಡದು. ಈ ಕಾರಣದಿಂದಲೇ ಅವರು ಇಂದಿಗೂ ಕನ್ನದಕ್ಕೊಬ್ಬನೇ ಕೈಲಾಸಂಎಂಬಂತೆ ಉಳಿದುಕೊಂಡಿದ್ದಾರೆ.

ಪ್ರಕಾಂಡ ಪಾಂಡಿತ್ಯವನ್ನು ಹೊಂದಿದ್ದ ದೈತ್ಯ ಪ್ರತಿಭೆಯ ಧೀಮಂತವ್ಯಕ್ತಿಯೆಂದೇ ಹೆಸರಾಗಿದ್ದ ಜಿ. ಪಿ. ರಾಜರತ್ನಂ ಅವರು ಓದಿದ್ದು ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ. ೧೯೩೧ರಲ್ಲಿ ಕನ್ನಡ ಎಂ.. ಪರೀಕ್ಷೆ ಬರೆದು ಮೂರನೇ ದರ್ಜೆಯಲ್ಲಿ ತೇರ್ಗಡೆ ಹೊಂದಿದರು! ಬಿ.ಎಮ್.ಶ್ರೀ., ಎ.ಆರ್.ಕೃ., ಟಿ.ಎಸ್.ವೆಂ., ಇಂಥವರ ಅಚ್ಚುಮೆಚ್ಚಿನ ಶಿಷ್ಯರಾಗಿ ಎಮ್.ಎ. ಮಾಡಿದ್ದ ರಾಜರತ್ನಂ ಅವರಿಗೆ ಏಳು ವರ್ಷಗಳಾದರೂ ಯಾವುದೇ ಕೆಲಸವೂ ಸಿಗಲಿಲ್ಲ! ಈ ನಡುವೆ ಮದುವೆಯನ್ನೂ ಆಗಿದ್ದ ಅವರು ಕೈಯಲ್ಲಿ ಕಾಸಿಲ್ಲದೇ ಕಂಗಾಲಾಗಿದ್ದರು.

ಅದೇ ಕಾಲದಲ್ಲಿ ಮಾನವೀಯತೆಗೆ ಹೆಸರಾಗಿದ್ದ ಮಾಸ್ತಿಯವರು ಮೈಸೂರಿನಲ್ಲಿ ರೆವೆನ್ಯೂ ಕಮಿಶನರ್ ಆಗಿ ಸೇವೆ ಸಲ್ಲಿಸುತ್ತಿದ್ದರು.ಅಷ್ಟರಲ್ಲೇ ರಾಜರತ್ನಂ ಕವನಗಳನ್ನು ರಚಿಸಿದ್ದರು. ರಾಜರತ್ನಂ ಕವನಗಳನ್ನು ಅಲ್ಲಲ್ಲಿ ನೋಡಿದ್ದ ಮಾಸ್ತಿಯವರಿಗೆ ರಾಜರತ್ನಂ ಬಗ್ಗೆ ಅಭಿಮಾನ ಮೂಡಿತ್ತು. ಇಂಥಾ ಲೇಖಕ ತಮ್ಮ ಕಛೇರಿಯಲ್ಲೇ ಕಾಗದ ಪತ್ರಗಳನ್ನು ವಿಂಗಡಿಸುವ ಸಾರ್ಟರನ ಸೇವೆ ಸಲ್ಲಿಸುತ್ತಿರುವ ವಿಚಾರ ಮಾಸ್ತಿಯವರಿಗೆ ತಿಳಿಯಿತು. ಅವರಿಗೆ ಬೇಸರವಾಗಿ ಮನನೊಂದಿತು. ಕೂಡಲೇ ರಾಜರತ್ನಂರವರನ್ನು ತಮ್ಮ ಛೇಂಬರ್ ಗೆ ಕರೆಸಿಕೊಂಡು, ‘ನೋಡ್ರಿ, ಕನ್ನಡ ಎಮ್.ಎ. ಮಾಡಿರುವ ನೀವು ನನ್ನ ಕಛೇರಿಯಲ್ಲಿ ಸಾರ್ಟರನ ಕೆಲಸ ಮಾಡುವುದು ಸರಿಯಲ್ಲ. ಆದ್ದರಿಂದ ನಿಮ್ಮನ್ನು ಈ ಕೆಲಸದಿಂದ ಈ ಕ್ಷಣವೇ ತೆಗೆದುಹಾಕಿದ್ದೇನೆ.ಎಂದರು ಅಧಿಕಾರವಾಣಿಯಿಂದ, ದರ್ಪದ ಧ್ವನಿಯಲ್ಲಿ!

ತತ್ತರಿಸಿಹೋದ ರಾಜರತ್ನಂ, ತಡವರಿಸುತ್ತಲೇ ದೈನ್ಯತೆಯಿಂದ, ‘ಅಯ್ಯಯ್ಯೋ ಹಾಗ್ಮಾಡಬೇಡಿ ಸಾರ್, ನಿರುದ್ಯೋಗಿಯಾಗಿ ವರ್ಷಗಟ್ಟಲೇ ನರಳ್ತಿದ್ದ ನನಗೆ ಯಾವ ಕೆಲಸವಾದರೆ ಏನ್ಸಾರ್? ಈ ಸಾರ್ಟರನ ಕೆಲಸವನ್ನೂ ನಾನು ಸಂತೋಷದಿಂದಲೇ ಮಾಡ್ತಿದೀನಿ. ಇದರಿಂದ ಸಿಗ್ತಿರೋ ಸಂಬಳದಿಂದ ನನ್ನನ್ನ ನೆಚ್ಕೊಂಡಿರೋ ನನ್ನ ಸಂಸಾರ ಒಪ್ಪೊತ್ತಿನ ಕೂಳನ್ನಾದ್ರೂ ಕಾಣ್ತಿದೆ;ಕೆಲಸಕ್ಕೆ ಕಲ್ಲು ಹಾಕ್ಬೇಡಿ ಸ್ವಾಮಿ,’ ಎಂದು ಕೈ ಜೋಡಿಸಿ ಪ್ರಾರ್ಥಿಸಿದರು.

ಇವರ ಮಾತನ್ನು ಕೇಳಿ ಮುಗುಳ್ನಕ್ಕ ಮಾಸ್ತಿಯವರು,‘....ನಿಮ್ಮನ್ನ ಕೆಲಸದಿಂದ ತೆಗೆದುಹಾಕ್ತೀನಿ ಅನ್ನೋದಲ್ಲ ನನ್ನ ಮಾತಿನ ಅರ್ಥ. ನೀವು ಕನ್ನಡ ಎಮ್.ಎ. ಪದವೀಧರರು, ಮೇಲಾಗಿ ಒಳ್ಳೆಯ ಲೇಖಕರು. ಒಳ್ಳೊಳ್ಳೆ ಕೃತಿಗಳನ್ನು ರಚಿಸೋ ಶಕ್ತಿ ನಿಮಗಿದೆ. ನಿಮ್ಮಲ್ಲಿರುವ ಆ ಶಕ್ತಿ ಒಳ್ಳೆಯದಕ್ಕೆ ವಿನಿಯೋಗವಾಗಬೇಕು.....ಎಂದು ಹೇಳಿ ಸಾರ್ಟರ್ ಕೆಲಸಕ್ಕೆ ಬರುತ್ತಿದ್ದ ಸಂಬಳಕ್ಕಿಂತಲೂ ಹೆಚ್ಚು ಸಂಬಳ ನೀಡಿ, ಪೇಪರ್ರು, ಪೆನ್ನು ಎಲ್ಲವನ್ನೂ ಒದಗಿಸಿ, ವೇಳೆಗೆ ಸರಿಯಾಗಿ ಬಂದುಹೋಗುವ ಯಾವ ನಿರ್ಬಂಧವನ್ನೂ ಹೇರದೇ, ಪ್ರಶಾಂವಾದ ಜಾಗದಲ್ಲಿ ಕುಳಿತು ಬರೆಯುವ ವ್ಯವಸ್ಥೆಯನ್ನು ಮಾಡಿಕೊಟ್ಟರು!

ಹೀಗೆ ಮಾಸ್ತಿಯವರ ಕೃಪೆಗೆ ಪಾತ್ರರಾಗಿ, ಅವರ ಕಛೇರಿಯಲ್ಲೇ ಕುಳಿತು ಕಂತು ಕಂತಿನಲ್ಲಿ ರಾಜರತ್ನಂ ಅವರು ಬರೆದ ಕೃತಿಯೇ ನಂತರದಲ್ಲಿ ಬಹಳ ಜನಪ್ರಿಯತೆಯನ್ನು ಗಳಿಸಿದ, ‘ಚೀನಾದೇಶದ ಬೌದ್ಧ ಯಾತ್ರಿಕರುಎಂಬ ಮಹೋನ್ನತ ಕೃತಿ!

ತಮ್ಮ ದಾರಿಯನ್ನು ಸ್ಪಷ್ಟಪಡಿಸಿಕೊಂಡು, ತಮ್ಮ ಗುರಿಯತ್ತ ಸಾಗಿ, ನಮಗೆ ಮಾರ್ಗದರ್ಶಕರಾಗಿದ್ದಾರೆ ಈ ಮಹನೀಯರು.

14 comments:

  1. ನಮ್ಮ ಶ್ರೇಷ್ಠ ಸಾಹಿತಿಗಳು ಶ್ರೇಷ್ಥ ಮಾನವರೂ ಅಹುದು ಎನ್ನುವದನ್ನು ಈ ಘಟನೆಗಳು ಸಾಬೀತು ಮಾಡುತ್ತಿವೆ. ನಿಮಗೆ ಧನ್ಯವಾದಗಳು.

    ReplyDelete
  2. @ಸುನಾಥ್ ರವರೆ,
    ನಿಮ್ಮ ಮಾತು ನಿಜ ಸರ್, ಮೊದಲ ಪ್ರತಿಕ್ರಿಯೆಗಾಗಿ ಧನ್ಯವಾದಗಳು.

    ReplyDelete
  3. ಸಾಹಿತ್ಯ ರಚನೆಯ ವಿಷಯ ಬಂದಾಗ ನನ್ನದೊಂದಿಷ್ಟು ದೂರುಗಳಿವೆ. ಈಗಿನ ಕಾಲದವರಿಗೆ ಸಿಗುತ್ತಿರುವ ಪ್ರಚಾರತೆ, ಪ್ರೋತ್ಸಾಹ ಎಲ್ಲ ನೋಡಿದರೆ , ಎಲ್ಲೋ ಒಂದು ಕಡೆ ಉತ್ತಮ ಉತ್ತಮ ಸಾಹಿತ್ಯದ ರಚನೆಗಿಂತ ಎಲ್ಲರೂ ತಮ್ಮನ್ನ ಗುರುತಿಸಲಿ ಅನ್ನೋ ಆಭಿಲಾಷೆ ಇಟ್ಟುಕೊಂಡೆ ಬರವಣಿಗೆ ಮಾಡಿದ ಹಾಗೆ ಇರುತ್ತದೆ.ಎಲ್ಲರಿಗೂ ತಮ್ಮದೊಂದು ಪುಸ್ತಕ ಬಿಡುಗಡೆ ಮಾಡಬೇಕೆಂಬ ಗೀಳು ಹತ್ತಿದ ಹಾಗೆ ತೋರುತ್ತದೆ.ಸಾಹಿತ್ಯ ರಚನೆ ಒಳ್ಳೆಯದೇ, ಅದು ನಮ್ಮ ಭಾಷೆಯ ಶ್ರೀಮಂತಿಕೆಯನ್ನ ಮತ್ತಷ್ಟು ಹೆಚ್ಚಿಸುತ್ತದೆ.ಆದರೆ ಅದರ ಗುಣಮಟ್ಟ ಕೂಡ ಉತ್ತಮವಾಗಿರಬೇಕು.ಆಗಲೇ ಅದರ ಬೆಳವಣಿಗೆ ಆಗುವುದು,ಇಲ್ಲದಿದ್ದರೆ ಅದು ಅಗ್ಗದ ಆಡಂಬರ ವಷ್ಟೇ ಆಗುತ್ತದೆ

    ReplyDelete
  4. ಡಿಫರೆಂಟ್ಲೀ ಏಬಲ್ಡ್ ಪರ್ಸನ್ಸ್ ಅಂತ ಹೇಳ್ತಾರಲ್ಲ ಮೇಡಂ, ಒಬ್ಬೊಬ್ಬರಿಗೆ ಒಂದೊಂದು ರೀತಿಯ ಆಸಕ್ತಿ, ಒಂದೊಂದು ರಂಗದಲ್ಲಿ ಪ್ರತಿಭೆ. ಉಂಡಾಡಿಗಳ ಹೊರತು ಮಿಕ್ಕುಳಿದವರು ತಮ್ಮದೇ ಆದ ಯಾವುದೋ ಸುಪ್ತ ಪ್ರತಿಭೆಯನ್ನು ಹೊಂದಿರುತ್ತಾರೆ, ಸಮಷ್ಟಿಯಲ್ಲಿ ನೋಡಿದರೆ ಈ ಜಗದಲ್ಲಿ ಯಾರೂ ಕೆಲಸಕ್ಕೆ ಬಾರದವರು ಎಂಬುದಿಲ್ಲ. ಕವಿಯೊಬ್ಬ ಪದವೀಧರನಾಗಿಯೂ ಸಾರ್ಟರ್ ಕೆಲಸ ಮಾಡುತ್ತಿರುವುದು ಮಾಸ್ತಿಯವರ ಗಮನಕ್ಕೆ ಬಂತು ! ಇಂತಹ ಹಲವು ಪ್ರತಿಭೆಗಳು ಈಗಲೂ ಇವೆ, ಆದರೆ ಗುರುತಿಸುವ ದೊಡ್ಡ ಮನಸ್ಸು ಬಹುತೇಕರಿಗೆ ಇಲ್ಲ. ಕವಿ-ಸಾಹಿತಿಯಾದ ಮಾತ್ರಕ್ಕೆ ಹೊರೆಕಾಣಿಕೆ ಮನೆಗೆ ಬರುವುದಿಲ್ಲ, ಉಪಜೀವನಕ್ಕಾಗಿ ಅವರು ಪಡಬೇಕಾದ ಪಾಡು ಬೇರೇಯದೇ ಇರುತ್ತದೆ ಯಾಕೆಂದರೆ ಸಮಯವನ್ನು ಕೆಲಕಾಲ ಸಾಹಿತ್ಯ ಚಿಂತನೆಗೆ ತೊಡಗಿಸುತ್ತಾರಲ್ಲಾ. ಅಂದಹಾಗೇ ಬೇಂದ್ರೆ ಕೂಡ ಒಮ್ಮೆ ಉದ್ಯೋಗರಹಿತರಾಗಿ ಪರದಾಡಿದ್ದರಂತೆ, ಆಗಲೂ ಇದೇ ಮಾಸ್ತಿಯವರ ಕೃಪೆ ಅವರಮೇಲಾಗಿದೆ! ಹೀಗಾಗಿ ಮನುಷ್ಯ ಮನುಷ್ಯನಾಗಿಯೂ ಕವಿ-ಸಾಹಿತಿಯಾಗಿರಬೇಕಾಗುತ್ತದೆಯೇ ಹೊರತು ಸಾಮಾಜಿಕ ಜವಾಬ್ದಾರಿ ನನಗೇಕೆ ಎಂದೋ ಅಥವಾ ಇನ್ನೊಬ್ಬರ ಪ್ರತಿಭೆಗೆ ಅಸೂಯೆಪಟ್ಟೋ ಬದುಕಿದರೆ ಆತ/ಆಕೆ ಕವಿ-ಸಾಹಿತಿಯೇ ಆಗಲಾರ/ಳು. ಲೇಖನ ಋಜುಮಾರ್ಗದವರ ಹೃದಯವಂತಿಕೆಗೆ ಸಾಕ್ಷಿಯಾಗಿದೆ, ಧನ್ಯವಾದಗಳು.

    ReplyDelete
  5. ಬದುಕಿಗೆ ಸ್ಪಂದಿಸುವವರೇ ನಿಜವಾದ ಸಾಹಿತಿಗಳು. ಮಾಸ್ತಿ, ರಾಜರತ್ನಂರ ಉದಾಹರಣೆ ಇದಕ್ಕೆ ಸಮರ್ಥನೆ!

    ReplyDelete
  6. ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ ಮಹನೀಯರ ಜೀವನದ ಉತ್ತಮ ಅ೦ಶಗಳ ಬಗ್ಗೆ ಮಾಹಿತಿಗಳನ್ನೊಳಗೊ೦ಡ ಒಳ್ಳೆಯ ಲೇಖನ..ಧನ್ಯವಾದಗಳು.

    ReplyDelete
  7. ಉತ್ತಮ ಸ೦ಗ್ರಹಯೋಗ್ಯ ಲೇಖನ ಪ್ರಭಾಮಣಿ ಮೇಡ೦. ಅಭಿನ೦ದನೆಗಳು.

    ಅನ೦ತ್

    ReplyDelete
  8. ಮಾಸ್ತಿ ಅವರ ದೊಡ್ಡ ಗುಣ,ಕೈಲಾಸಂ ಅವರ ಛಲ,... ನಿಜಕ್ಕೂ ಮೆಚ್ಚಬೇಕಾದ್ದು... ಅಂಥ ಕಠಿಣ ಪರಿಸ್ಥಿತಿಯಲ್ಲೂ ಅವರು ಕನ್ನಡಕ್ಕೆ ನೀಡಿದು ಬಹಳ ದೊಡ್ಡ ಕಾಣಿಕೆ...

    ReplyDelete
  9. ಮಹಾನ್ ಲೇಖಕ, ಭಾವುಕ್ ಜೀವಗಳ ಬಗ್ಗೆ, ಸ್ವಾರಸ್ಯಕರವಾಗಿ ಲೇಖನ ಚೆನ್ನಾಗಿದೆ ಮೇಡಂ. ಉತ್ತಮ ಮಾಹಿತಿ.

    ReplyDelete
  10. ತುಂಬಾ ಉಪಯುಕ್ತ ಮಾಹಿತಿ ತಿಳಿಸಿದ್ದೀರಿ. ಈ ಮಹನೀಯರ ಬದುಕೊಳಗಿನ ಹೋರಾಟ, ಸಾಧನೆಗಳು ಸ್ಫೂರ್ತಿದಾಯಕವಾಗಿವೆ. ಧನ್ಯವಾದಗಳು.

    ReplyDelete
  11. ನಮ್ಮ ಅಚ್ಚುಮೆಚ್ಚಿನ ಸಾಹಿತಿಗಳ ಉದಾತ್ತ ಗುಣಗಳ ಬಗ್ಗೆ ಮಾಹಿತಿ ನೀಡಿದ ಲೇಖನಕ್ಕಾಗಿ ನಿಮಗೆ ಅಭಿನಂದನೆಗಳು

    ReplyDelete
  12. ನಿಮ್ಮ ಬ್ಲಾಗ್ ಓದಿದೆ; ಚೆನ್ನಾಗಿದೆ.ನಿಮ್ಮ ಪ್ರಯತ್ನ ಮುಂದುವರಿಯಲಿ.

    ReplyDelete
  13. ಮೇಡಂ ಬಹಳ ಒಳ್ಳೆಯ ಮಾಹಿತಿ ನೀಡಿದ್ದೀರಾ , ಕನ್ನಡ ಸಾಹಿತ್ಯ ದಿಗ್ಗಜರ ಬಗ್ಗೆ ಸಂಗ್ರಹ ಯೋಗ್ಯ ವಿವರಣೆ ನೀಡಿದ್ದೀರಾ ಅಭಿನಂದನೆಗಳು.ಬಹಳ ದಿನಗಳ ನಂತರ ಒಂದು ಒಳ್ಳೆಯ ವಿಚಾರ ನಿಮ್ಮ ಬ್ಲಾಗ್ ಮೂಲಕ ತಿಳಿಯಿತು.ನಿಮ್ಮ ಬಗ್ಗೆ ಹೆಮ್ಮೆಯಾಯಿತು.
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  14. @ ಆರ್ಯರವರೆ,
    @ವಿ.ಆರ್.ಭಟ್ ರವರೆ,
    @ಅನಂತ್ ರಾಜ್ ರವರೆ,
    @ಗಿರೀಶ್.ಎಸ್ ರವರೆ,
    @ಕವಿ ನಾಗರಾಜ್ರವರೆ,
    @ಮನಮುಕ್ತಾ ರವರೆ,
    @ಪ್ರತಾಪ್ ಬ್ರಹ್ಮಾವರ್ ರವರೆ,
    @ತೇಜಸ್ವಿನಿ ಹೆಗಡೆಯವರೇ,
    @ಮಂಜುಳಾದೇವಿಯವರೇ,
    @Dr. ವಸಂತಕುಮಾರ್ ಪೆರ್ಲ ರವರೆ,
    @ಬಾಲು ರವರೆ,]
    ನನ್ನ ಲೇಖನದ ಬಗ್ಗೆ ನಿಮ್ಮ ಅಮೂಲ್ಯವಾದ ಅನಿಸಿಕೆಗಳನ್ನು ಸವಿಸ್ತಾರವಾಗಿ ಹ೦ಚಿಕೊ೦ಡು, ಲೇಖನವನ್ನು ಇಷ್ಟಪಟ್ಟು, ಮೆಚ್ಚುಗೆಯನ್ನು ತಿಳಿಸಿ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಬರುತ್ತಿರಿ.

    ReplyDelete