Saturday, November 26, 2011

ಮನದ ಅಂಗಳದಿ.........೬೮. ಅನುವಾದ


ಯಾವುದೇ ಭಾಷೆಯ ಸಾಹಿತ್ಯವು ಶ್ರೀಮಂತಗೊಳ್ಳಲು ಅದು ಇತರ ಭಾಷೆಗಳಲ್ಲಿ ಉತ್ಕ್ರುಷ್ಟವೆನಿಸಿರುವ ಕೃತಿಗಳನ್ನು ತನ್ನದಾಗಿಸಿಕೊಳ್ಳುವ ಹಾಗೂ ತನ್ನಲ್ಲಿರುವ ಅಮೂಲ್ಯ ರಚನೆಗಳನ್ನು ಬೇರೆ ಭಾಷೆಗಳಿಗೆ ತಮ್ಮದಾಗಿಸಿಕೊಳ್ಳಲು ಅನುವು ಮಾಡಿಕೊಡುವ ಉದಾತ್ತ ಗುಣವನ್ನು ಹೊಂದಿರಬೇಕು. ತಮಗೆ ಆಪ್ತವೆನಿಸಿದ ಬರಹಗಳನ್ನು ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಸಮರ್ಥವಾಗಿ ಭಾಷಾಂತರಿಸುವ ಹಾಗೂ ಆ ಮೂಲಕ ಭಾಷೆಯನ್ನು ಸಮೃದ್ಧಗೊಳಿಸುವ ಅನುವಾದಕರು ನಿಜಕ್ಕೂ ವಂದನಾರ್ಹರು.

ನಾನು ಎರಡನೇ ವರ್ಷದ ಪದವಿ ತರಗತಿಯಲ್ಲಿ ಓದುತ್ತಿದ್ದಾಗ ಆರ್. ಕೆ. ನಾರಾಯಣ್ ಅವರ ‘ದ ಗೈಡ್’ ಪಠ್ಯವಾಗಿತ್ತು. ಅದನ್ನು ಓದುವಾಗಲೆಲ್ಲಾ, ನಂತರದ ಕೆಲವು ವರ್ಷಗಳಲ್ಲೂ ಅದನ್ನು ಕನ್ನಡಕ್ಕೆ ಅನುವಾದಿಸಬೇಕೆಂಬ ಹಂಬಲ ತೀವ್ರವಾಗಿತ್ತು. ಅದನ್ನು ಈಗಾಗಲೇ ಅನುವಾದಿಸಿದ್ದರೋ, ಇಲ್ಲವೋ ಎನ್ನುವ ಬಗ್ಗೆ ತಿಳಿದುಕೊಳ್ಳದೇ ಅನುವಾದಿಸಿದರೆ ಹೇಗಿರುತ್ತದೆ ಎನ್ನುವ ಕಲ್ಪನೆಯಲ್ಲೇ ತೊಡಗಿರುತ್ತಿದ್ದೆ!

ಪ್ರಸಿದ್ಧ ಇಂಗ್ಲಿಷ್ ಕವಿಗಳ ಕವನಗಳನ್ನು ಕನ್ನಡದಲ್ಲಿ ಇಂಗ್ಲಿಷ್ ಗೀತಗಳುಆಗಿ ಅನುವಾದಿಸಿದ ಬಿ.ಎಂ.ಶ್ರೀಕಂಠಯ್ಯನವರು(ಬಿ.ಎಂ.ಶ್ರೀ) ಕವನ ರಚನೆಗೆ ಒಂದು ಹೊಸ ಮಾರ್ಗವನ್ನೇ ಹಾಕಿಕೊಟ್ಟರು. ಅವರ ಬಗ್ಗೆ ಹಾಗೂ ಆ ಕೃತಿಯು ಮಾಡಿದ ಪ್ರಭಾವದ ಬಗ್ಗೆ, ಲಲಿತ ಪ್ರಬಂಧಗಳ ಪ್ರಕಾರಕ್ಕೊಂದು ಗೌರವವನ್ನು ತಂದುಕೊಟ್ಟಿರುವ ಡಾ. ಎ.ಎನ್. ಮೂರ್ತಿರಾಯರು ಬಿ.ಎಮ್.ಶ್ರೀ.ಎಂಬ ಪ್ರಬಂಧದಲ್ಲಿ ಈ ರೀತಿ ಬರೆದಿದ್ದಾರೆ,

ಶ್ರೀಕಂಠಯ್ಯನವರು ಮಾಡಿದ ಎಲ್ಲ ಕೆಲಸಗಳಿಗಿಂತಲೂ ಮುಖ್ಯವಾದವು ಇವು: ಅವರು ಛಂದಸ್ಸಿನಲ್ಲಿ ಸ್ವತಂತ್ರ ಮಾರ್ಗವನ್ನು ಅನುಸರಿಸಿದರು. ನಮಗೆ ಹೊಸ ಮಾದರಿಗಳನ್ನು ತೋರಿಸಿಕೊಟ್ಟರು. ಸರಳವಾದ ಭಾಷೆ ಕಾವ್ಯಕ್ಕೆ ಉತ್ತಮ ಎಂಬುದನ್ನು, ತಿಳಿಯಾದ ಅಚ್ಚ ಹೊಸಕನ್ನಡದಲ್ಲಿ ಎಷ್ಟು ಪರಿಣಾಮಕಾರಿಯಾಗಿ ಬರೆಯಬಹುದು ಎಂಬುದನ್ನು ತೋರಿಸಿಕೊಟ್ಟರು. ಇದಕ್ಕಿಂತಲೂ ಹೆಚ್ಚಿನ ಉಪಕಾರವೆಂದರೆ: ನಮ್ಮ ಸ್ವಂತ ಅನುಭವ, ನಾವು ಕಣ್ಣಲ್ಲಿ ಕಂಡದ್ದು, ಕಿವಿಯಲ್ಲಿ ಕೇಳಿದ್ದು, ಮನಸ್ಸಿನಲ್ಲಿ ಸಂಕಟಪಟ್ಟಿದ್ದು ಅಥವಾ ಸಂತೋಷಪಟ್ಟದ್ದು-ಇವೆಲ್ಲಾ ಕಾವ್ಯಕ್ಕೆ ವಿಷಯವಾಗಬಹುದು ಎಂಬುದನ್ನು ಸ್ಪಷ್ಟಪಡಿಸಿದ್ದು ಅವರಿಂದಲೇ ಇರಬೇಕು-ಯಾವತ್ತು ಅವರ ಇಂಗ್ಲಿಷ್ ಗೀತಗಳುಎಂಬ ಪುಸ್ತಕ ಪ್ರಕಟವಾಯಿತೋ, ಹೆಚ್ಚುಕಡಿಮೆ ಅದರ ಮಾರನೆಯ ದಿನದಿಂದಲೇ ಕನ್ನಡ ನಾಡಿನ ಎಲ್ಲ ಕಡೆಗಳಿಂದಲೂ ಹಾಡು ಕೇಳಿಬರುವಂತಾಯಿತು. (ಕರುಣಾಳು ಬಾ ಬೆಳಕೆ ಮಸುಕಿದೀ ಮಬ್ಬಿನಲಿ ಕೈಹಿಡಿದು ನಡೆಸೆನ್ನನು.......) ಎಲ್ಲರ ಮನಸ್ಸಿನಲ್ಲಿಯೂ ಹಿಂದಿನ ಕಾವ್ಯಗಳ ಬಗ್ಗೆ ಸ್ವಲ್ಪ ಅತೃಪ್ತಿಯಿತ್ತು ಅಂತ ಕಾಣುತ್ತೆ. ಹೊಗೆಯಾಡುತ್ತಿತ್ತು ಆ ಅತೃಪ್ತಿ. ಅದಕ್ಕೆ ಬಿ.ಎಂ.ಶ್ರೀಯವರು ಒಂದು ಜ್ಯೋತಿ ಸ್ಪರ್ಷಮಾಡಿದರು......ಎಲ್ಲ ಕಡೆಯಲ್ಲೂ ಬೆಳಕು ಹರಡಿಕೊಂಡಿತು. ಈ ಉಪಕಾರ ಅಷ್ಟಿಷ್ಟು ಅಂತ ಹೇಳಲಾಗುವುದಿಲ್ಲ......

ನಮ್ಮ ವಿಶ್ವವಿದ್ಯಾನಿಲಯದ ಒಳಗೂ ಹೊರಗೂ ಜನ ಏನಾದರೂ ಬರೆಯುವುದಕ್ಕೆ ಶುರು ಮಾಡಿದರೆಂದರೆ-ಶ್ರೀಕಂಠಯ್ಯನವರು ಇಂಗ್ಲಿಷ್ ಗೀತಗಳುಎನ್ನುವ ಪುಸ್ತಕ ಪ್ರಕಟಿಸಿದ ಮೇಲೆ.........

ಎಸ್. ದಿವಾಕರ್ ರವರು ತಾವು ಓದಿ ಮೆಚ್ಚಿಕೊಂಡ ಹಲವು ದೇಶಗಳ, ಹಲವು ಭಾಷೆಗಳ ಕತೆಗಳಲ್ಲಿ ಕೆಲವನ್ನು ಅನುವಾದಿಸಿ ಜಗತ್ತಿನ ಅತಿ ಸಣ್ಣಕತೆಗಳುಎಂಬ ಪುಸ್ತಕವನ್ನು ಹೊರತಂದಿದ್ದಾರೆ. ಇದರ ಪ್ರಸ್ತಾವನೆಯಲ್ಲಿ ಅತಿ ಸಣ್ಣ ಕಥೆಯ ಉಗಮ, ರೂಪುರೇಶೆಗಳು, ಅದರ ವಿಶಿಷ್ಟ ನಿರೂಪಣಾ ಶಕ್ತಿ ಇವುಗಳ ಬಗ್ಗೆ ಸವಿವರವಾಗಿ ತಿಳಿಸಿದ್ದಾರೆ. ನಮ್ಮ ಪಂಚತಂತ್ರ’, ‘ಕಥಾ ಸರಿತ್ಸಾಗರಗಳಲ್ಲಿಯೂ ತೀರ ಸಣ್ಣವೆನಿಸುವ ಕಥೆಗಳಿದ್ದು ಅವೂ ಸಂಸ್ಕೃತದಿಂದ ವಿವಿಧ ಭಾಷೆಗಳಿಗೆ ಅನುವಾದಗೊಂಡ ನಂತರವೇ ಎಲ್ಲರಿಗೂ ಲಭಿಸುವಂತಾದವು. ಪಾಶ್ಚಾತ್ಯ ಸಾಹಿತ್ಯದಲ್ಲಿ ಎದ್ದು ಕಾಣುವ ಈಸೋಪನ ನೀತಿ ಕಥೆಗಳು, ಝೆನ್ ಕಥೆಗಳು, ಮುಲ್ಲಾ ನಸಿರುದ್ದೀನನ ಕಥೆಗಳು ಕೂಡ ಈಗ ಜನಜನಿತವಾಗಿವೆ. ನೀತಿ ಬೋಧನೆಗೆ ಸೀಮಿತವಾಗಿರುವ ಈ ಕಥೆಗಳನ್ನು ಇವತ್ತಿನ ದೃಷ್ಟಿಯಲ್ಲಿ ಅತಿ ಸಣ್ಣಕಥೆಗಳೆನಿಸುವುದಿಲ್ಲ, ಸಾಹಿತ್ಯ ಕ್ಷೇತ್ರದ ದೃಷ್ಟಾಂತ ಕಥೆಗಳು ಎನ್ನುತ್ತಾರೆ. ಏನೇ ಆದರೂ ಇವೆಲ್ಲಾ ಮಕ್ಕಳ ಎಳೆ ಮನಸ್ಸನ್ನು ಆಕರ್ಷಿಸುತ್ತಿವೆ ಹಾಗೂ ಹಿರಿಯರೆನಿಸಿಕೊಂಡವರನ್ನು ಚಿಂತನೆಗೆ ಹಚ್ಚುವಂತಿವೆ.

ರವೀಂದ್ರನಾಥ ಟಾಗೋರರ `stray birds’ ಎಂಬ ಮುಕ್ತಕಗಳ ಕಿರು ಸಂಗ್ರಹವನ್ನು ವಿ. ಶ್ರೀನಿವಾಸ್ ರವರು ದಾರಿ ತಪ್ಪಿ ಬಂದ ಹಕ್ಕಿಗಳುಎಂದು ಇಡಿಯಾಗಿ ಕನ್ನಡಕ್ಕೆ ಭಾವಾನುವಾದಮಾಡಿದ್ದಾರೆ.

ಎತ್ತರವಾಗಿದೆ ಎಂಬ ಕಾರಣಕ್ಕಾಗಿ ನಿನ್ನ

ಪ್ರೇಮವನ್ನು ಕಡಿದಾದ ಬಂಡೆಗಲ್ಲಿನ ಮೇಲೆ ಕೂರಿಸಬೇಡ.

ನಾನು ಅತ್ಯುತ್ತಮವಾದುದನ್ನು ಆರಿಸಿಕೊಳ್ಳಲಾರೆ,

ಅತ್ಯುತ್ತಮವಾದದ್ದೇ ನನ್ನನ್ನು ಆರಿಸಿಕೊಳ್ಳುತ್ತದೆ.

ರವೀಂದ್ರನಾಥ ಟಾಗೋರರ ಗೀತಾಂಜಲಿಯ ಹಾಗೂ ಇತರ ಕೃತಿಗಳ ಅನುವಾದವೂ ನಮಗೆ ಅವರ ಅಗಾಧತೆಯನ್ನು ಪರಿಚಯಿಸುತ್ತವೆ. ಅನುವಾದದಿಂದ ಸಂವಹಿಸಿದ ಸಾಹಿತ್ಯರಾಶಿಯು ಅಪಾರವಾಗಿದೆ. ವಿಜ್ಞಾನ, ತಂತ್ರಜ್ಞಾನಗಳಲ್ಲಿಯೂ ಅನುವಾದದಿಂದ ಮಹತ್ತರವಾದ ಅನುಕೂಲಗಳನ್ನು ಪಡೆಯುತ್ತಿದ್ದೇವೆ. ನಮ್ಮ ಪ್ರಾಚೀನ ಭಾರತದ ಋಷಿಮುನಿಗಳು ಕಂಡ ಸತ್ಯ, ಅವರಿಂದ ಮೌಖಿಕವಾಗಿ ಹರಿದುಬಂದದ್ದು, ಓಲೆಗರಿಗಳಲ್ಲಿ ದಾಖಲಾದದ್ದು ಈಗ ಪ್ರಪಂಚದ ಮೂಲೆಮೂಲೆಗಳಲ್ಲಿಯೂ ಆಸಕ್ತರನ್ನು ತಲುಪಿದೆ ಹಾಗೂ ಜೀವಂತವಾಗಿದ್ದು ಮುಂದಿನ ಪೀಳಿಗೆಗೂ ತಲುಪಲು ಸಶಕ್ತವಾಗಿದೆ.

ಒಳಿತು ಎಲ್ಲೇ ಇದ್ದರೂ ಅದನ್ನು ನಮ್ಮದಾಗಿಸಿಕೊಳ್ಳೋಣ. ನಮ್ಮಲ್ಲಿರಬಹುದಾದ ಒಳಿತನ್ನು ಇತರರಿಗೂ ಹಂಚಿ ನಮ್ಮನ್ನು ನಾವು ಸಮೃದ್ಧಗೊಳಿಸಿಕೊಳ್ಳುತ್ತಾ ಸಾಗಿದರೆ ಹಸನಾಗುವುದು ಬದುಕು.

5 comments:

  1. ಬಿ.ಎಮ್.ಶ್ರೀಕಂಠಯ್ಯನವರ ‘ಕರುಣಾಳು ಬಾ ಬೆಳಕೆ’ ಒಂದು ಶ್ರೇಷ್ಥ ಅನುವಾದವಾಗಿದೆ. ಕನ್ನಡ ಕಾವ್ಯಕ್ಕೆ ಹೊಸ ಮಾರ್ಗ ತೋರಿಸಿದವರಲ್ಲಿ ಶ್ರೀಯವರು ಅಗ್ರಗಣ್ಯರು.

    ReplyDelete
  2. ಕನ್ನಡದ ಕಣ್ವ ಎಂದು ಹೆಗ್ಗುರುತು ಪಡೆದ ಸಜ್ಜನ ಬಿ.ಎಂ ಶ್ರೀಕಂಠಯ್ಯನವರು. ಕುವೆಂಪುರವರಂಥಾ ವ್ಯಕ್ತಿಗಳಿಗೇ ಗುರುವಾಗಿದ್ದರೆಂದಮೇಲೆ ಅದನ್ನು ಚಿಂತಿಸಬಹುದು. ಅನುವಾದ ಸಾಹಿತ್ಯ ಬಹಳ ಕಡೆ ಎಡವಿಬಿಡುತ್ತದೆ. ಇತ್ತೀಚಿನ ಲೇಖಕರು ಎನಿಸಿಕೊಂಡ ಪತ್ರಕರ್ತರಲ್ಲಿ ರವಿ ಬೆಳಗೆರೆ ಮತ್ತು ವಿಶ್ವೇಶ್ವರ ಭಟ್ಟರು ಸಾಕಷ್ಟು ಬರೆಯುತ್ತೇವೆ ಎನ್ನುತ್ತಾ ಓದಲು ಕಷ್ಟವಾಗುವಂತೇ ಕೆಲವನ್ನು ಅನುವಾದಿಸಿದ್ದಾರೆ. ಉದಾಹರಣೆಗೆ: ’ಬಾನಯಾನ’ ! ನಿದ್ದೆ ಬರುವ ಸಾಧ್ಯತೆಯೇ ಕಾಣದಿದ್ದರೆ ಮಾತ್ರೆ ಬೇಡ ಬದಲಿಗೆ ಬಾನಯಾನ ಓದಲು ಆರಂಭಿಸಿ. ಹಳೆಯ ಲೇಖಕರಂತೇ ಆದರ್ಶರಾಗುವವರು ತೀರಾ ಕಮ್ಮಿ ಇದ್ದಾರೆ. ಲೇಖನ ಬಿ.ಎಂ.ಶ್ರೀಯವರ ಬಗ್ಗೆ ಚಿಕ್ಕದಾಗಿಯಾದರೊ ತನ್ನ ಹೊಳಹನ್ನು ನೀಡಿದೆ.ಧನ್ಯವಾದಗಳು ಪ್ರಭಾಮಣಿ ಮೇಡಂ.

    ReplyDelete
  3. ಚೆಂದದ ಲೇಖನ... "ಇಂಗ್ಲೀಷ್ ಗೀತೆಗಳು" ಓದಬೇಕೆನಿಸುತ್ತಿದೆ.

    ReplyDelete
  4. ಬಾರಿಸು ಕನ್ನಡ ಡಿಂಡಿಮವಾ ಓ ಕರ್ನಾಟಕ ಹೃದಯ ಶಿವಾ! ಸಮುದ್ರಕೆ ಅಲೆಯೆ ಶೃಂಗಾರ,ನಾರಿಗೆ ಗುಣವೇ ಶೃಂಗಾರ,ಕೂಡಲಸಂಗಮಗೆ ಬಸವಣ್ಣನ ವಚನವೇ ಶೃಂಗಾರ,ಕರ್ನಾಟಕಕೆ ಕನ್ನಡವೇ ಶೃಂಗಾರ ತನು ಕನ್ನಡ ನುಡಿ ಕನ್ನಡ ಮನ ಕನ್ನಡವಾಗಿರು ಎಂದೆಂದಿಗೂ ನೀ ಕನ್ನಡವನಾಗಿರು ಜೈ ಕರ್ನಾಟಕ ಕನ್ನಡಾಂಬೆ
    ಇಂತಿ ನಿಮ್ಮವ
    ಉಮಾಪತಿ, ಸಿಂಧುವಳ್ಳಿ ಮೈಸೂರು ತಾಲ್ಲೂಕು ಮೈಸೂರು ಜಿಲ್ಲೆ ಮೊಬೈಲ್ 8050403749

    ReplyDelete