Monday, April 23, 2012

ಮನದ ಅಂಗಳದಿ.........೮೯. ಅರಳುವಿಕೆ(Blossoming)

ಜೀವಜಗತ್ತಿನ ಪ್ರತಿಯೊಂದು ಜೀವಿಗೂ ಹುಟ್ಟು ಸಾವುಗಳು ಹೇಗೆ ಅನಿವಾರ್ಯವೊ ಹಾಗೆಯೇ ಬೆಳೆಯುವುದೂ ಆಗಿದೆ. ದೈಹಿಕವಾಗಿ ನಾವು ನಮ್ಮ ಅನುವಂಶೀಯತೆಗೆ ಅನುಗುಣವಾಗಿ ಬೆಳೆಯುತ್ತೇವೆ. ಪರಿಸರವೂ ತನ್ನ ಪಾಲನ್ನು ನೀಡಿರುತ್ತದೆ. ಪೋಷಕರ ಬೆಂಬಲ, ಸ್ವಪ್ರಯತ್ನಕ್ಕೆ ಅನುಗುಣವಾಗಿ ವಿದ್ಯಾಭ್ಯಾಸ ಮಾಡಿ, ನೌಕರಿ ಹಿಡಿದು, ಸಂಸಾರಸ್ಥರಾಗಿ, ಬೇಕಾದ-ಬೇಡವಾದ ಆಸ್ತಿ-ನಗ-ನಾಣ್ಯಗಳನ್ನು ಸಂಗ್ರಹಿಸುತ್ತಾ, ಮುಂದಿನ ಪೀಳಿಗೆಗೂ ಕೂಡಿಡುವ ಸಂಭ್ರಮ, ಕಷ್ಟ-ನಷ್ಟಗಳಲ್ಲಿ.......... ಜೀವನವು ಸಾಗುತ್ತದೆ. ನಮ್ಮ ಸುತ್ತಿನವರು, ಬಂಧುಬಾಂಧವರು, ಸಮಾಜವು ನಮ್ಮ ಈ ಬಾಹ್ಯ ಬೆಳವಣಿಗೆಯಲ್ಲೇ ನಮ್ಮನ್ನು ಅಳೆಯುತ್ತದೆ. ಇದನ್ನೇ ಜೀವನದ ಸಾರ್ಥಕತೆಯೆಂದು ಭ್ರಮಿಸುತ್ತಾ ನಮ್ಮ ಜೀವನ ಯಾತ್ರೆಯನ್ನು ಮುಂದುವರೆಸುತ್ತೇವೆ! ಯಾವುದೋ ಒಂದು ಘಟ್ಟದಲ್ಲಿ ನಾನು ಏನನ್ನೋ ಕಳೆದುಕೊಂಡೆ, ನನ್ನ ಜೀವನವನ್ನು ಇನ್ನೂ ಉತ್ತಮಗೊಳಿಸಿಕೊಳ್ಳಬಹುದಿತ್ತು, ನನಗಾಗಿ, ನನ್ನ ಆತ್ಮತೃಪ್ತಿಗಾಗಿ ನಾನು ಏನನ್ನು ಮಾಡಿಕೊಂಡೆ? ಎಂಬ ಪ್ರಶ್ನೆಗಳು ಎಲ್ಲೋ ಕೆಲವರಲ್ಲಿ ಉದ್ಭವಿಸಬಹುದು. ಚಿಕ್ಕಂದಿನಿಂದಲೇ ನಮ್ಮಲ್ಲಿ ಈ ಪ್ರಶ್ನೆ ಉಂಟಾಗಿದ್ದರೆ, ಅಥವಾ ನಮ್ಮ ಮಕ್ಕಳನ್ನು ಬೆಳೆಸುವ ಹಂತದಲ್ಲಾದರೂ ನಾವು ಈ ಬಗ್ಗೆ ಚಿಂತಿಸಿದ್ದರೆ ಬದುಕು ಇನ್ನೂ ಹಸನಾಗುತ್ತಿತ್ತೇನೋ? ಈ ಜಗತ್ತಿಗೆ ನಮ್ಮ ಒಂದು ಕೊಡುಗೆ ಸಾಧ್ಯವಿತ್ತೇನೋ ಎನಿಸಲೂಬಹುದು. ನಮ್ಮ ಈ ಎಲ್ಲಾ ಪ್ರಶ್ನೆಗಳಿಗೂ ತಮ್ಮ ಅನೇಕ ನಿಖರ ಪ್ರಶ್ನೆಗಳ ಮೂಲಕ ನಮ್ಮಲ್ಲೇ ನಾವು ಉತ್ತರವನ್ನು ಕಂಡುಕೊಳ್ಳುವಂತೆ ಪ್ರೇರೇಪಿಸುತ್ತಾರೆ ಮಹಾನ್ ಚಿಂತಕರಾದ ಜಿಡ್ಡು ಕೃಷ್ಣಮೂರ್ತಿಯವರು. ಬ್ರಾಕ್‌ವುಡ್ ಪಾರ್ಕಿನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರೊಂದಿಗೆ ಜಿಡ್ಡು ಕೃಷ್ಣಮೂರ್ತಿಯವರು ನಡೆಸಿದ ಒಂದು ಸಂವಾದದಲ್ಲಿ ಅಂತರ್ಮುಖ ಅರಳುವಿಕೆಯ ಬಗ್ಗೆ ವಿಶ್ಲೇಷಿಸಿದ್ದಾರೆ: ‘ಪ್ರಿತಿಯೊಬ್ಬರೂ ಆಂತರಿಕವಾಗಿ ಅರಳುತ್ತಿದೇವೆಯೋ ಮತ್ತು ಬೆಳೆಯುತ್ತಿದ್ದೇವೆಯೋ ಅಥವಾ ಒಂದು ಕಿರಿದಾದ ಸಂದುಮಾರ್ಗವನ್ನು ಅನುಸರಿಸುತ್ತಿದ್ದೇವೆಯೋ ಎನ್ನುವ ಕುರಿತು ಮಾತನಾಡಲು ಇಲ್ಲಿ ಸೇರಿದ್ದೇವೆ. ನಮ್ಮ ಜೀವಿತಾವಧಿಯ ಕಡೆಗಾಲದಲ್ಲಿ ನಾವು ಸಂಪೂರ್ಣವಾಗಿ ಅರಳುವ ಅವಕಾಶವನ್ನು ಪಡೆದುಕೊಳ್ಳಲೇ ಇಲ್ಲ ಎಂದು ಶೇಷಾಯುಷ್ಯದಲ್ಲಿ ಕೊರಗುವಂತಾಗಬಾರದು ಅಲ್ಲವೆ? ನಾವು ಕೇವಲ ದೈಹಿಕವಾಗಿ ಎತ್ತರವಾಗಿ ಮತ್ತು ದಪ್ಪವಾಗಿ ಬೆಳೆದರಷ್ಟೇ ಸಾಲದು. ಮಾನಸಿಕವಾಗಿಯೂ ಸದೃಢರಾಗಬೇಕು, ಆಂತರಿಕವಾಗಿಯೂ ಅರಳಬೇಕು. ನನ್ನ ರೀತಿದಲ್ಲಿ ‘ಅರಳುವುದು’ ಎಂದರೆ ಯಾವ ಅಡೆತಡೆಗಳೂ ಇಲ್ಲದೆ, ಯಾವ ಅಡ್ಡಿಆತಂಕಗಳೂ ಇಲ್ಲದಂತೆ, ನಾವು ಅಂತರ್ಮುಖವಾಗಿ, ಆಳವಾಗಿ, ಬೆಳೆಯುವುದು ಎಂದು ಅರ್ಥ. ನಮ್ಮಲ್ಲಿ ಬಹಳಷ್ಟು ಮಂದಿ ಎಂದಿಗೂ ಅರಳುವುದೇ ಇಲ್ಲ. ನಮ್ಮ ಜೀವಿತಾವಧಿಯಲ್ಲಿ ನಮ್ಮನ್ನು ನಿರರ್ಥಕಗೊಳಿಸುವ, ನಮ್ಮಲ್ಲಿ ಜಡತ್ವವನ್ನುಂಟುಮಾಡುವ, ಇದ್ದೂ ಸತ್ತಂತೆ ಇರುವ ಪರಿಸ್ಥಿತಿಯಲ್ಲಿಡುವ ಯಾವುದೊ ಘಟಿಸುತ್ತಿದೆ. ಅದು ನಮ್ಮಲ್ಲಿ ಆಳವಾದ ಆಂತರಿಕ ಪೋಷಣೆ ಇಲ್ಲದಂತೆ ಮಾಡುತ್ತಿದೆ. ಇದಕ್ಕೆ ಕಾರಣ ಬಹುಷಃ ನಮ್ಮ ಸುತ್ತಿನ ಪ್ರಪಂಚ ನಮ್ಮನ್ನು ಡಾಕ್ಟರ್‌ಗಳು, ಇಂಜಿನಿಯರ್‌ಗಳು, ವಿಜ್ಞಾನಿಗಳು, ಮುಂತಾದ ವಿಶೇಷ ತಜ್ಞರಾಗುವಂತೆ ನಮ್ಮ ಮೇಲೆ ಒತ್ತಡವನ್ನು ಹೇರುತ್ತಿರುವುದೇ ಆಗಿರಬಹುದು. ಅದರಿಂದಲೇ ನಮಗೆ ಮಾನಸಿಕವಾಗಿ ಬೆಳೆಯಲು ಆಗದೇ ಇರಬಹುದು. ನಾವು ನಮ್ಮ ಸಮಾಜದಿಂದ ಒತ್ತಾಯಕ್ಕೆ ಒಳಗಾಗಿದ್ದೇವೆಯೇ? ನಮ್ಮ ಪೋಷಕರಿಂದ ನಿರ್ಬಂಧಿಸಲ್ಪಟ್ಟಿದ್ದೇವೆಯೇ? ನಮ್ಮ ಧರ್ಮ ನಮ್ಮನ್ನು ತಡೆಯುತ್ತಿದೆಯೆ? ನಮ್ಮ ಬುದ್ಧಿಶಕ್ತಿಯೇ ನಮ್ಮನ್ನು ಹಿಮ್ಮೆಟ್ಟಿಸುತ್ತಿದೆಯೆ? ಈ ಎಲ್ಲಾ ಪರಿಸರದ ಅಂಶಗಳೂ ನಮ್ಮನ್ನು, ನಮ್ಮ ಅರಳುವಿಕೆಯನ್ನು ಪ್ರತಿಬಂಧಿಸುತ್ತಿವೆಯೇ? ನಾವು ಒಂದು ಧರ್ಮದ ಅನುಯಾಯಿಗಳಾಗಿದ್ದರೆ ನಮ್ಮ ಮನಸ್ಸು, ನಮ್ಮ ಮೆದುಳು, ನಮ್ಮ ಸಂಪೂರ್ಣ ಮಾನಸಿಕ ರಚನೆಯೇ ಆ ಅವಸ್ಥೆಗೆ ಒಳಪಟ್ಟಿರುತ್ತದೆ. ಹುಟ್ಟಿದಾಗಿನಿಂದಲೇ ನಮ್ಮ ಪೋಷಕರು ನಮ್ಮನ್ನು ಆ ಧರ್ಮಕ್ಕೆ ಅನುಸಾರವಾಗಿ ಬೆಳೆಸಲಾರಂಭಿಸುತ್ತಾರೆ. ನಮ್ಮನ್ನು ದೇವಸ್ಥಾನ/ಮಸೀದಿ/ಚರ್ಚ್..........ಗೆ ಹೋಗಲು ಹೇಳುತ್ತಾರೆ. ನಾವು ಅಲ್ಲಿ ಬರುವ ಇತರರನ್ನು, ಅವರ ರೀತಿನೀತಿಗಳನ್ನು ಗಮನಿಸುತ್ತೇವೆ. ಅದರಿಂದ ಪ್ರಭಾವಿತರಾಗುತ್ತೇವೆ. ನಮ್ಮ ಮನಸ್ಸು ಸಂಪೂರ್ಣವಾಗಿ ಆ ಅವಸ್ಥೆಗೇ ಒಳಪಡುತ್ತದೆ. ನಾವು ಆ ಒಂದು ವ್ಯವಸ್ಥೆಯೊಳಗಿನ ಕಿರಿದಾದ ಮಾರ್ಗದಲ್ಲಿ ಚಲಿಸಲಾರಂಭಿಸುತ್ತೇವೆ. ಆ ಒಂದು ಮಾರ್ಗ, ಆ ಒಂದು ವ್ಯವಸ್ಥೆ, ಆ ಒಂದು ಚಟುವಟಿಕೆಯೇ ಬಹಳ ಸೀಮಿತವಾಗಿರುತ್ತದೆ. ಆದ್ದರಿಂದ ಅಲ್ಲಿ ಅರಳುವಿಕೆಯು ಸಾಧ್ಯವಾಗುವುದೇ ಇಲ್ಲ. ವಿದ್ಯಾರ್ಥಿಗಳ ಮೇಲೆ ಅನೇಕ ರೀತಿಯ ಒತ್ತಡಗಳಿರುತ್ತವೆ. ಗೆಲ್ಲಲೇಬೇಕೆಂಬ ಒತ್ತಡ, ಯಾರೋ ಆಗಬೇಕೆಂಬ ಒತ್ತಡ, ಯಾರನ್ನೋ ಅನುಸರಿಸಬೇಕೆಂಬ ಒತ್ತಡ, ಸ್ಪರ್ಧಾತ್ಮಕ ಒತ್ತಡ........ ಇವುಗಳನ್ನು ಇಲ್ಲಿ ಪರಿಗಣಿಸುತ್ತಿಲ್ಲ. ಸಕಾರಾತ್ಮಕವಾದ ಒತ್ತಡವು ನಮ್ಮನ್ನು ಆಂತರಿಕವಾಗಿ ಬೆಳೆಯುವಂತೆ ಮಾಡುತ್ತದೆ, ಅರಳುವಂತೆ ಮಾಡುತ್ತದೆ. ಅರಳುವಿಕೆಯು ಇಲ್ಲದಿದ್ದರೆ ಒಬ್ಬ ವ್ಯಕ್ತಿಯು ಸಾಧಾರಣವಾದ ಪ್ರಾಪಂಚಿಕ ಜೀವನವನ್ನು ನಡೆಸಿ ಎಪ್ಪತ್ತೋ ಎಂಭತ್ತೋ ವರ್ಷಕ್ಕೆ ಸಾಯುತ್ತಾನೆ. ಒಬ್ಬ ಸಾಧಾರಣ ಮನುಷ್ಯನ ಸಾಮಾನ್ಯವಾದ ಜೀವನವದು. .......... ಈ ಅರಳುವಿಕೆಯ ಪ್ರಾಮುಖ್ಯತೆಯನ್ನು ನಾವು ಅರಿತಿದ್ದೇವೆಯೇ? ಅರಳುವಿಕೆಯ ಪ್ರಾಮುಖ್ಯತೆ, ಅರಳುವಿಕೆಯ ಸತ್ಯ, ಅರಳುವಿಕೆಯ ವಾಸ್ತವತೆ, ಅರಳುವಿಕೆಯ ಅಗತ್ಯ, ಅರಳುವಿಕೆಯ ಸೌಂದರ್ಯ್, ಇವುಗಳ ಬಗ್ಗೆ ನಮಗೆ ತಿಳುವಳಿಕೆ ಇದೆಯೆ? ಸಂಬಂಧಗಳು, ಎಂದರೆ ಇಬ್ಬರು ವ್ಯಕ್ತಿಗಳ ನಡುವಿನ ಸಂಬಂಧವು ಅರಳಲು ಸಹಕಾರಿಯಾಗುತ್ತದೆಯೆ? ಪರಸ್ಪರ ಪ್ರೀತಿಯು ಅರಳುವಿಕೆಗೆ ಪೋಷಣೆ ನೀಡುತ್ತದೆಯೆ? ಪ್ರೀತಿಯು ಮಾನವನ ಮೆದುಳಿನ, ಮಾನವನ ಮನಸ್ಸಿನ, ಮಾನವನ ಹೃದಯದ, ಮಾನವೀಯ ಗುಣಗಳ ಅರಳುವಿಕೆಗೆ ಸಹಕರಿಸುತ್ತದೆಯೆ? ಬ್ರಾಕ್ ವುಡ್ ನಲ್ಲಿನ ವಾಸ್ತವ್ಯವು ನಿಮ್ಮ ಅರಳುವಿಕೆಗೆ ಸಹಕಾರಿಯಾಗಿದೆಯೆ? ತಾಂತ್ರಿಕವಾಗಿಯಲ್ಲ, ತಜ್ಞರನ್ನಾಗಿಸುವುದರಲ್ಲಿ ಅಲ್ಲ. ಮಾನಸಿಕವಾಗಿ, ಆಂತರಿಕವಾಗಿ, ಆಂತರ್ಯದಲ್ಲಿ ಬೆಳೆಯುತ್ತಿರುವಿರ? ಒಬ್ಬ ಪರಿಪೂರ್ಣ ವ್ಯಕ್ತಿಯಾಗಿ ಅರಳಲು ಸಾಧ್ಯವಾಗುತ್ತಿದೆಯೆ? ನಿಮ್ಮನ್ನು ನಿಮ್ಮ ಪೋಷಕರು ನಿಜವಾಗಿಯೂ ಪ್ರೀತಿಸಿದ್ದರೆ ಅರಳಲು ಪೂರಕವಾಗಿ ನಿಮ್ಮ ಮೇಲೆ ಯಾವುದೇ ಒತ್ತಾಯವನ್ನೂ ಹೇರದೇ ಬೆಳೆಸುತ್ತಿದ್ದರು. ನೀವೊಬ್ಬ ಮಾನವ ಜೀವಿಯಾಗಿದ್ದೀರಿ. ನೀವೇ ಪ್ರಪಂಚ. ನೀವು ಅರಳದಿದ್ದರೆ ಈ ಪ್ರಪಂಚದಲ್ಲಿ ನೀವು ಬಂಧಿಯಾಗುತ್ತೀರಿ. ಇತರ ಮಾನವ ಜೀವಿಗಳನ್ನು ನೀವು ನಾಶಗೊಳಿಸುತ್ತೀರಿ. ನಿಮ್ಮ ಪೋಷಕರು ನಿಮ್ಮನ್ನು ನಿಜವಾಗಿಯೂ ಪ್ರೀತಿಸಿದ್ದೇ ಆದರೆ ನೀವು ಸರಿಯಾದ ಶಿಕ್ಷಣವನ್ನು ಪಡೆಯುತ್ತಿದ್ದೀರಾ ಎನ್ನುವುದನ್ನು ಗಮನಿಸುತ್ತಾರೆ. ಕೇವಲ ತಾಂತ್ರಿಕ ಶಿಕ್ಷಣವಲ್ಲ, ಉದ್ಯೋಗವನ್ನು ಪಡೆಯುವ ಶಿಕ್ಷಣವಲ್ಲ. ನಿಮ್ಮೊಳಗೆ ಯಾವುದೇ ದ್ವಂದ್ವಗಳೂ ಇಲ್ಲದಂತಹ ಶಿಕ್ಷಣ. ನಿಮ್ಮ ಆಂತರ್ಯದ ಅರಳುವಿಕೆಯ ಶಿಕ್ಷಣ......’ ನಮ್ಮ ಮಕ್ಕಳಿಗೆ ನಾವು ಆಂತರಿಕವಾಗಿ ಅರಳುವಂತೆ ಅವಕಾಶ ನೀಡಿದರೆ, ಈಗ ಜಗತ್ತಿನಲ್ಲಿ ನಡೆಯುತ್ತಿರುವ ಭಯೋತ್ಪಾದಕತೆ, ಆತ್ಮಹತ್ಯೆ ಮುಂತಾದ ಘಾತುಕಗಳನ್ನು ತಡೆಯುವಲ್ಲಿ, ವಿಶ್ವಶಾಂತಿ ನೆಲೆಸುವುದರಲ್ಲಿ ನಮ್ಮ ಪಾಲಿನ ಪುಟ್ಟ ಕೊಡುಗೆಯನ್ನು ನೀಡಿದಂತಾಗುತ್ತದೆ ಎನಿಸುತ್ತದೆ.

7 comments:

 1. ಚೆನ್ನಾಗಿದೆ ಲೇಖನ.ಆಲೋಚನೆಗೆ ನಿಲುಕುವಂತವು. ಶುಭವಾಗಲಿ.

  ReplyDelete
 2. ಅರಳುವಿಕೆಯ ಬಗ್ಗೆ ಒಳ್ಳೆಯ ಬರಹ ಕೊಟ್ಟು ನಮ್ಮ ಮನಸ್ಸನ್ನು ಅರಳಿಸಿದ್ದಕ್ಕಾಗಿ ಧನ್ಯವಾದಗಳು.

  ReplyDelete
 3. @ರವಿ ಮುರ್ನಾಡು ರವರೆ,
  ನಿಮ್ಮ ಶೀಘ್ರ ಪ್ರತಿಕ್ರಿಯೆಯಿ೦ದ ಸ೦ತಸವಾಯಿತು, ಧನ್ಯವಾದಗಳು. ಬರುತ್ತಿರಿ

  ReplyDelete
 4. @ಬದರಿನಾಥ್ ರವರೆ,
  ಒಳಿತನ್ನು ಸದಾ ತೆರೆದ ಮನದಿ೦ದ ಸ್ವೀಕರಿಸುವ ನಿಮಗೆ ನನ್ನ ನಮನಗಳು. ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ

  ReplyDelete
 5. ಚೆನ್ನಾಗಿದೆ ಲೇಖನ ಪ್ರಭಕ್ಕ :) ಅರಳುವಿಕೆಗೆ ಒಳ್ಳೆ ನುಡಿ

  ReplyDelete
  Replies
  1. @ ಈಶ್ವರ್ ಭಟ್ ರವರೆ,
   ನಿಮ್ಮ ಆತ್ಮೀಯ ಪ್ರತಿಕ್ರಿಯೆಯಿ೦ದ ಸ೦ತಸವಾಯಿತು.ಧನ್ಯವಾದಗಳು. ಬರುತ್ತಿರಿ

   Delete
 6. ಆಂತರಿಕ ಅರಳುವಿಕೆ ಇಂದಿನ ವ್ಯಕ್ತಿವಿಕಸನ ಶಿಕ್ಷಣದ ಮೂಲ ಮಂತ್ರವಾಗಬೇಕು.ಆಗ ಮಾತ್ರ ಸಮಾಜದ ಬದಲಾವಣೆ ಸಾಧ್ಯ.ಸುಂದರ ಲೇಖನ ಕೊಟ್ಟಿದ್ದಕ್ಕೆ ಧನ್ಯವಾದಗಳು ಮೇಡಂ.

  ReplyDelete