Wednesday, April 4, 2012

ಮನದ ಅಂಗಳದಿ.........86. ಸಾವಿತ್ರಿ

‘ಸತ್ಯವಾನ್-ಸಾವಿತ್ರಿ’ ಎಂದೇ ಪ್ರಸಿದ್ಧವಾದ ಪುರಾಣದ ಸಾವಿತ್ರಿಯ ಕಥೆಯನ್ನು ನಾವು ಓದಿ ಅಥವಾ ಕೇಳಿ ತಿಳಿದಿದ್ದೇವೆ.
‘ಮದ್ರ ರಾಜ್ಯದ ಅರಸನಾದ ಅಶ್ವಪತಿಗೆ ಮಕ್ಕಳಿರಲಿಲ್ಲ. ಅವನು ಸಾವಿತ್ರಿ ದೇವಿಯನ್ನು ಆರಾಧಿಸಿ ಸುಮಾರು ಹದಿನೆಂಟು ವರ್ಷಗಳಕಾಲ ತಪಸ್ಸನ್ನು ಮಾಡಿ ಪಡೆದ ಮಗುವಿಗೆ ‘ಸಾವಿತ್ರಿ’ ಎಂದೇ ನಾಮಕರಣವನ್ನು ಮಾಡಲಾಗುತ್ತದೆ. ಮಗು ಬೆಳೆದಂತೆ ವೃದ್ಧಿಯಾಗುತ್ತಿರುವ ದಿವ್ಯ ತೇಜಸ್ಸು, ಅಪೂರ್ವ ಮುಖಕಾಂತಿ ಮತ್ತು ಅನುಪಮ ಸೌಂದರ್ಯದ ಮಹಾಶಕ್ತಿಯನ್ನು ನೋಡಿದವರು ಯಾರೂ ಸಹ ಆ ರಾಜಕುಮಾರಿಯ ಕೈ ಹಿಡಿಯಲು ಸಮರ್ಥರಾಗುವುದಿಲ್ಲ. ಸಾವಿತ್ರಿಯೇ ತನಗೆ ಅನುರೂಪನಾದ ಪತಿಯ ಅನ್ವೇಷಣೆಗೆ ಹೊರಡುತ್ತಾಳೆ. ಎರಡು ವರ್ಷಗಳ ನಂತರ ವಾಪಸಾಗುತ್ತಾಳೆ. ಕಣ್ಣುಗಳನ್ನೂ, ರಾಜ್ಯವನ್ನೂ ಕಳೆದುಕೊಂಡು, ಅರಣ್ಯವಾಸಿಯಾಗಿದ್ದ ದ್ಯುಮತ್ಸೇನನ ಮಗನಾದ ಸತ್ಯವಾನನನ್ನು ತನ್ನ ಪತಿಯಾಗಿ ಆಯ್ಕೆ ಮಾಡಿದ ಸಂಗತಿಯನ್ನು, ತನ್ನ ತಂದೆಯ ರಾಜಾಸ್ಥಾನದಲ್ಲಿ ಬಹಿರಂಗ ಪಡಿಸುತ್ತಾಳೆ. ಆದರೆ ಸತ್ಯವಾನನು ಅಲ್ಪಾಯು, ಇನ್ನು ಕೇವಲ ಒಂದು ವರ್ಷದಲ್ಲಿ ಸಾಯಲಿದ್ದಾನೆಂದು ಆಸ್ಥಾನದಲ್ಲಿ ಉಪಸ್ಥಿತರಿದ್ದ ನಾರದರಿಂದ ತಿಳಿಯುತ್ತದೆ. ಆದರೂ ಸಾವಿತ್ರಿಯು ಅಂಜದೆ, ತನ್ನ ನಿರ್ಧಾರವನ್ನು ಬದಲಿಸದಿದ್ದರಿಂದ ಅವನೊಂದಿಗೇ ವಿವಾಹವು ನಡೆಯುತ್ತದೆ. ಸಾವಿತ್ರಿಯು ತನ್ನ ಪತಿಯೊಡನೆ ಸರಳ ಜೀವನವನ್ನು ನಡೆಸುತ್ತಿದ್ದಂತೆ ಕಾಲವು ಉರುಳಿ ಅವನು ಮರಣಹೊಂದುವ ಸಮಯವು ಸಮೀಪಿಸುತ್ತದೆ. ಅದಕ್ಕೆ ಮೂರುದಿನ ಹಿಂದಿನಿಂದಲೇ ನಿರಂತರವಾಗಿ ಪ್ರಾರ್ಥನೆಯನ್ನು ಮಾಡಲಾರಂಭಿಸುತ್ತಾಳೆ. ಯಮ ಪ್ರತ್ಯಕ್ಷನಾಗಿ ಸತ್ಯವಾನನನ್ನು ಸೆಳೆದು ಒಯ್ಯುತ್ತಿರುವಾಗ ಸಾವಿತ್ರಿ ಅತ್ಯಂತ ಧೀರತನದಿಂದ ಯಮನೊಂದಿಗೆ ಚರ್ಚೆ ನಡೆಸಿ, ಮೃತ್ಯುವನ್ನು ತನ್ನ ಮಾತಿನ ಜಾಲದಲ್ಲಿ ಸಿಲುಕಿಸಿ, ಸೋಲಿಸಿ, ಪತಿಯನ್ನು ಮರಳಿ ಪಡೆಯುತ್ತಾಳೆ.’
ಈ ಪುರಾಣ ಕಥೆಯನ್ನು ಮಹರ್ಷಿ ಶ್ರೀ ಅರವಿಂದರು ಅಮರತ್ವ ಸಾಮ್ರಾಜ್ಯದ ಕಿರೀಟಕ್ಕಾಗಿ ತೊಡಗಿದ ಮಾನವತೆಯ ಅನ್ವೇಷಣೆಯ ಪ್ರತೀಕವನ್ನಾಗಿ ಮಾಡಿದ್ದಾರೆ. ಅರವಿಂದರ ಕಾವ್ಯ ರಚನೆಗಳಲ್ಲಿ ಅತ್ಯಂತ ಪ್ರಸಿದ್ಧವಾದ ‘ಸಾವಿತ್ರಿ'ಯು ೨೪೦೦೦ ಸಾಲುಗಳ ಒಂದು ಮಹಾಕಾವ್ಯ. ಈ ಕಾವ್ಯದಲ್ಲಿ ಜ್ಞಾನ-ಅಜ್ಞಾನ, ನಿತ್ಯತೆ-ಅನಿತ್ಯತೆಗಳ ನಡುವಿನ ಘರ್ಷಣೆ ಅತ್ಯಂತ ರಮ್ಯವಾಗಿ ನಿರೂಪಿತವಾಗಿದೆ. ಇಲ್ಲಿ ಸಾವಿತ್ರಿ ಒಬ್ಬ ಸಾಮಾನ್ಯ ಮನುಜಳಲ್ಲ. ಆಕೆ ಒಂದು ದಿವ್ಯ ಚೇತನ. ಸಾವನ್ನು ಸೋಲಿಸಿ, ಜಗತ್ತಿನ ಆತ್ಮ ರಕ್ಷಣೆಗಾಗಿ ಅವತರಿಸಿದವಳು. ಸತ್ಯವಾನ ಇಲ್ಲಿ ಸಾವಿತ್ರಿಯ ಪತಿಯಷ್ಟೇ ಅಲ್ಲ., ಜಗತ್ತಿನ ಆತ್ಮಕ್ಕೆ ಆತ ಪ್ರತೀಕ. ಈ ಕ್ಷಣಿಕ ಜಗತ್ತಿನಲ್ಲಿ ಸತ್ಯ ಸ್ಥಾಪನೆ ಮಾಡಲು ಹೊರಟಿರುವ ಆ ಸತ್ಯವಾನನಿಗೆ ಪೂರ್ವಯೋಜಿತವಾದ ಒಂದು ನಿಶ್ಚಿತ ದಿನದಂದು ಸಾವೆಂಬುದು ಎದುರಾಗುತ್ತದೆ. ಆದರೆ ದಿವ್ಯ ಕಟಾಕ್ಷವನ್ನು ಹೊಂದಿರುವ ಸಾವಿತ್ರಿಯು, ವಿನಾಶದ ಅಗ್ರೇಸರನೊಂದಿಗೆ ಸೆಣಸಾಡಿ, ತನ್ನ ಆತ್ಮ ಬಲದಿಂದ ಅವನ ಸ್ವರೂಪವನ್ನೇ ಇಲ್ಲವಾಗಿಸಿ, ಮಾನವ ಮತ್ತು ನವನಿರ್ಮಾಣವಾಗಲಿರುವ ಪ್ರಪಂಚಕ್ಕೆ ಗೆಲುವನ್ನು ತರುತ್ತಾಳೆ. ವಿಶ್ವ ಕಾವ್ಯದಲ್ಲಿ ‘ಸಾವಿತ್ರಿ?ಗೆ ಒಂದು ವಿಶೇಷವಾದ ಸ್ಥಾನವಿದೆ. ಶ್ರೀ ಅರವಿಂದರು ಈ ಪುರಾಣ ಕಥೆಯ ಭೂಮಿಕೆಗೆ, ಆಧ್ಯಾತ್ಮ ಸಂಪತ್ತನ್ನೂ ಮತ್ತು ನಿಗೂಢ ಭಾವಿಕ ರೂಪಗಳನ್ನೂ ತುಂಬುವುದರ ಜೊತೆಗೆ, ವಿವಿಧ ಪಾತ್ರಗಳಿಗೆ ಅದ್ಭುತ ವಿಕಸನದ ಲಕ್ಷಣಗಳನ್ನು ಸಂಯೋಜಿಸಿ, ಪುನೀತ ಮಾನವನ ಮೃತ್ಯುಂಜಯಕ್ಕೆ ನಾಂದಿಯಾಗುವಂತಹ, ಸರ್ವೋತ್ತಮ, ಪರಮ ಪವಿತ್ರ ಗ್ರಂಥವನ್ನಾಗಿ ಮಾಡಿ ಹೊಸ ಆಯಾಮವನ್ನು ಕೊಟ್ಟಿದ್ದಾರೆ........ ವೇದಗಳಂತೆ ಇದು ವಿವಿಧ ಮನಗಳಿಗೆ ವಿವಿಧ ಅಂತರಾರ್ಥಗಳನ್ನು ಫಲಿಸುವಂತಿದೆ.
ಜೀವನ-ಧರ್ಮ ಶುಭ ಸಂಕೇತವಾದ ಅಶ್ವಪತಿಯು, ಅಜ್ಞಾನ ವಿಮೋಚನೆಯಿಂದ ಸ್ವಾತಂತ್ರ್ಯ ಜೀವನದವರೆಗೂ, ಜೀವ ಪಾಲನೆಯಿಂದ ವಾಸ್ತವ ಜ್ಞಾನ, ದಿವ್ಯಶಕ್ತಿ, ಪರಮಾನಂದ, ಅಮರತ್ವಗಳನ್ನು ಪಡೆಯುವವರೆಗೂ, ತಪಾಸಣೆ ಮಾಡುತ್ತಿರುವ ಮಾನವನ ಚಿಹ್ನೆಯಾಗಿದ್ದಾನೆ. ವಿವಿಧ ಯೋಗ ಸಾಧನೆ, ಪ್ರಪಂಚ ಜ್ಞಾನ, ಆತ್ಮವಿದ್ಯೆ, ಪರಮಾತ್ಮ ಸಾಕ್ಷಾತ್ಕಾರಗಳಿಸುವ ಕಾರ್ಯಗಳಲ್ಲಿ ಅಶ್ವಪತಿಯು ಅವಿರತ ನಿರತನಾಗಿದ್ದಾನೆ. ಆತ್ಮಸಾಧನೆಯ ಅಂತಿಮ ಘಟ್ಟದಲ್ಲಿ ನೆಲೆಸಿರುವ ಅಶ್ವಪತಿಯು, ಈ ಮಾರಕ ಪ್ರಪಂಚವನ್ನು ಉಳಿಸಲು ಮತ್ತು ಅಸಹಾಯಕ, ದುರ್ಬಲ ಮಾನವತೆಯನ್ನು ಉದ್ಧರಿಸಲು, ಧರೆಗೆ ಇಳಿದು ಬರುವಂತೆ ಆ ವಿಶ್ವತಾಯಿಯಲ್ಲಿ ಮೊರೆಯಿಡುತ್ತಾನೆ. ಈ ಹೃದಯಂಗಮ ಕರೆಗೆ ಓಗೊಟ್ಟ, ಆ ಕರುಣಾಮಯಿಯ ಕೃಪಾಕಟಾಕ್ಷದಿಂದ, ಮಾನವ ಜನ್ಮವೆತ್ತಿ ಬಂದ ಮಹಾ ಸ್ತ್ರೀಯೇ ಆ ಸಾವಿತ್ರಿ.
ಅಶ್ವಪತಿಯ ಆಧ್ಯಾತ್ಮ ವಿಕಸನದ ನಿರಂತರ ಮನೋಪಯಣವನ್ನು ಹಂತಹಂತವಾಗಿ ರಮಣೀಯವಾಗಿ ವಿವರಿಸಿದ್ದಾರೆ. ಸಾವಿತ್ರಿ ಮತ್ತು ಯಮನ ನಡುವಿನ ವಾದ-ವಿವಾದಕ್ಕೆ ಬೇರೆಯದೇ ಆಯಾಮವನ್ನು ನೀಡಿದ್ದಾರೆ. ತನ್ನ ಆಳವಾದ ಸಮಾದಿ ಸ್ಥಿತಿಯಲ್ಲಿ ಸಾವಿತ್ರಿಯ ದಿವ್ಯ ಚೇತನವು ನಡೆಸಿದ ಹೋರಾಟವದು ಎಂದು ಅರ್ಥೈಸಿದ್ದಾರೆ. ಯಾವುದೇ ಪ್ರಲೋಭನೆಗಳನ್ನು ಮುಂದಿಟ್ಟರೂ ಒಪ್ಪದೇ ‘ಸತ್ಯ?ವನ್ನು ಭೂಮಿಗೆ ಮರುಪಡೆದು ತಂದ ಸಾಹಸಗಾಥೆಯದು. ‘ಪ್ರೇಮ ಮತ್ತು ಐಕ್ಯತೆಯೇ ಬದುಕಿನ ಸಾರ. ಇದೇ ಸುವರ್ಣ ಪರಿವರ್ತನೆಯ ಮರ್ಮ. ಇದೇ ನಾನು ಕಾಣಬಯಸುವ ಅಥವಾ ತಿಳಿದಿರುವ ಸತ್ಯ,’ ಎನ್ನುವ ಸಂದೇಶವನ್ನು ಸಾವಿತ್ರಿಯ ಮೂಲಕ ಮನುಕುಲಕ್ಕೆ ನೀಡಿದ್ದಾರೆ.
‘ಸಾವಿತ್ರಿ’ ಕಾವ್ಯದಿಂದ ಆಯ್ದ ಕೆಲವು ಉಲ್ಲೇಖಗಳು(Quotes):
*One man's perfection
Still can save the world.
*He Who Chooses The Infinite Has Been Chosen by the Infinite
*A cave of darkness guards the eternal Light.
*All our earth starts from mud and ends in sky.
(ಸಾಯಿಬಿಂದು(ಎಚ್. ವಿ. ಶ್ರೀನಿವಾಸ) ಅವರು ಶ್ರೀ ಅರೋಬಿಂದೋ ಅವರ ‘ಸಾವಿತ್ರಿ’ಯನ್ನು ಎಂ.ಪಿ. ಪಂಡಿತ್ ಅವರ `Summary of Savitri’ಗ್ರಂಥದಿಂದ ಆಯ್ದು, ಅರ್ಥೈಸಿ ಕನ್ನಡಿಸಿದ್ದಾರೆ. ಈ ಪುಸ್ತಕದಿಂದ ಹಾಗೂ ಅಂತರ್ಜಾಲದಿಂದ ಸಂಗ್ರಹಿಸಿ ಬರೆದಿದ್ದೇನೆ.)

6 comments:

 1. ಧನ್ಯವಾದಗಳು ಮೇಡಂ,

  ಸತ್ಯವಾನ್ ಸಾವಿತ್ರಿಯ ಪಾತ್ರದ ಔನತ್ಯವನ್ನು ಶ್ರೀ ಅರವಿಂದರ ಪುಸ್ತಕದ ಮುಖೇನ ನಾವೂ ಅರಿಯುತ್ತೇವೆ.

  ನನ್ನ ಬ್ಲಾಗುಗಳಿಗೂ ಸ್ವಾಗತ:
  www.badari-poems.blogspot.com

  www.badari-notes.blogspot.com

  ReplyDelete
 2. ‘ಸಾವಿತ್ರಿ’ಯ ಸಾಲುಗಳನ್ನು ಓದಿದಾಗ ಮಿಂಚು ಹೊಡೆದಂತಾಯ್ತು. ಈ ಅದ್ಭುತ ಕಾವ್ಯದ ಪರಿಚಯಕ್ಕಾಗಿ ಧನ್ಯವಾದಗಳು.

  ReplyDelete
 3. ಸಾವಿತ್ರಿ ಮ್ಯಾಡಮ್ ಬಗ್ಗೆ ಕೇಳಿದ್ವಿ ಓದಿರ್ಲಿಲ್ಲ.......

  ReplyDelete
 4. ಮೇಡಂ;ಅರಬಿಂದೋ ಅವರ ಸಾವಿತ್ರಿ ಕಾವ್ಯದ ಬಗ್ಗೆ ಅಮೂಲ್ಯ ಮಾಹಿತಿ ಒದಗಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು.

  ReplyDelete
 5. @ಬದರಿನಾಥ್ ರವರೆ,
  @ ಸುನಾಥ್ ರವರೆ,
  @ಡಾ. ಕೃಷ್ಣ ಮೂರ್ತಿಯವರೆ,
  @ಪ್ರವರ ಕೆ ವಿ ಯವರೆ,
  ನನ್ನ ಲೇಖನವನ್ನು ಓದಿ ಆತ್ಮೀಯವಾಗಿ ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ನಿಮ್ಮೆಲ್ಲರಿಗೂ ಹೃತ್ಪೂರ್ವಕ ನಮನಗಳು.ಬರುತ್ತಿರಿ.

  ReplyDelete