Saturday, March 12, 2011

ಮನದ ಅಂಗಳದಿ..................೩೨. ಅನುಭವ

`Experience makes man perfct’ ಎನ್ನುವ ಒಂದು ಉಕ್ತಿ ಇದೆ. ‘ಅನುಭವವು ಮನುಷ್ಯನನ್ನು ಪರಿಪೂರ್ಣನನ್ನಾಗಿ ಮಾಡುತ್ತದೆ' ಎಂದಿರುವುದರಿಂದ ಇಲ್ಲಿ ಮನುಷ್ಯರಾದ ನಮ್ಮ ಅನುಭವದ ಬಗ್ಗಯೇ ಚಿಂತಿಸೋಣ. ಆದರೂ ಸಾಮಾನ್ಯವಾಗಿ ‘ಅನುಭವ' ಎಂದ ತಕ್ಷಣ ತೆನಾಲಿರಾಮಕೃಷ್ಣನ ಬೆಕ್ಕಿನ ಕಥೆಯ ನೆನಪಾಗುತ್ತದೆ. ಬೆಕ್ಕು ಬಿಸಿಹಾಲನ್ನು ಕುಡಿಯಲು ಹೋಗಿ ಮೂತಿಯನ್ನು ಸುಟ್ಟುಕೊಂಡಿದ್ದರಿಂದ ಮುಂದೆ ಅದು ಹಾಲನ್ನು ನೋಡಿದರೇ ‘ಸುಡುವ ವಸ್ತು' ಎಂಬ ಅನುಭವದಿಂದ ಓಡಿಹೋಗುತ್ತದೆ! ಹಾಗಾದರೆ ‘ಅನುಭವ' ಎಂದರೇನು? ಅದು ಕೇವಲ ಪಂಚೇಂದ್ರಿಯಗಳ ಮೂಲಕ ಸಿಗುವ ಜ್ಞಾನವೆ? ಅಥವಾ ಇನ್ನೂ ಹೆಚ್ಚೆ? ಒಂದು ಪ್ರಾಣಿಯ ಅನುಭವಕ್ಕೂ ಮನುಷ್ಯನ ಅನುಭವಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ. ವಿವೇಚನಾಶಾಲಿಯಾದ ಮನುಷ್ಯನು ತನ್ನ ಅನುಭವವನ್ನು ವಿವೇಚನೆಯ ಒರೆಗೆ ಹಚ್ಚಿ ನೋಡಬಲ್ಲ ಎಂದು ನಾವು ತಿಳಿದಿದ್ದೇವೆ.

ಯಾವುದಾದರೂ ಕೆಲಸಕ್ಕೆ ಅರ್ಜಿ ಹಾಕುವಾಗ ಅದರಲ್ಲಿ ‘ಅನುಭವ' ಎನ್ನುವ ಅಂಶವೂ ಇರುತ್ತದೆ. ಅನುಭವವಿರುವ ವ್ಯಕ್ತಿಯು ಆ ವೃತ್ತಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಬಲ್ಲ ಎನ್ನುವುದು ಅದರ ಉದ್ದೇಶವಿರಬಹುದು. ವೃತ್ತಿಯನ್ನು ಪ್ರವೇಶಿಸದೇ ಅನುಭವವನ್ನು ಪಡೆಯುವುದಾದರೂ ಹೇಗೆ?

ನಾವು ಓದುವ ಪುರಾಣದ ಕಥೆಗಳು, ಚರಿತ್ರೆಗಳಲ್ಲಿ ಎಷ್ಟೋ ಮಹಾನ್ ವ್ಯಕ್ತಿಗಳ ಅನುಭವಗಳಿರುತ್ತವೆ. ಅವರು ಎದುರಿಸಿದ್ದ ಕಷ್ಟಗಳು, ಸಂದಿಗ್ಧಗಳು, ಸಮಸ್ಯೆಗಳು.....ಅದಕ್ಕೆ ಕಂಡುಕೊಂಡ ಪರಿಹಾರಗಳು ಎಲ್ಲವೂ ಇರುತ್ತದೆ. ಅಂಥಾ ಪರಿಸ್ಥಿತಿ ನಮಗೆ ಬಂದರೆ ಅದನ್ನು ನಿರ್ವಹಿಸುವ ಸುಳಿವುಗಳೂ ದೊರೆಯುತ್ತವೆ. ಆದರೆ ನಾವು ಎಷ್ಟರಮಟ್ಟಿಗೆ ಅದನ್ನು ಅನುಸರಿಸುತ್ತೇವೆ?

ನಮ್ಮ ಜನಪದ ಸಾಹಿತ್ಯದಲ್ಲಿ ಓದು-ಬರಹ ತಿಳಿಯದ ಸಾಮಾನ್ಯ ಜನತೆ ತಮ್ಮ ಅನುಭವಗಳನ್ನು ಆಡುಭಾಷೆಯಲ್ಲಿಯೇ ಹಾಡಿ ತಿಳಿಸಿದರು. ಅದು ಒಬ್ಬರಿಂದ ಒಬ್ಬರಿಗೆ ಮೌಖಿಕವಾಗಿ ಪ್ರಸಾರವಾಗಿ ಹಾಡಲು ಅಂದವಾಯಿತೇ ವಿನಾ ಅಳವಡಿಸಿಕೊಂಡಂತಾಯಿತೇ?

೧೨ನೇ ಶತಮಾನದಲ್ಲಿ ಶರಣರೆಲ್ಲರೂ ಒಂದುಗೂಡಿ ‘ಅನುಭವ ಮಂಟಪ'ದ ಮೂಲಕ ತಮ್ಮ ಅನುಭವಗಳಿಗೆ ‘ವಚನ'ಗಳೆಂಬ ಸುಂದರಶೈಲಿ ಕೊಟ್ಟು ಸರಳ ಭಾಷೆಯಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ತಿಳಿಸಿದರು. ಆ ಒಂದೊಂದು ವಚನವೂ ಅನುಭವದ ಆಗರವೇ ಆಗಿದೆ. ಅದನ್ನು ಅನುಸರಿಸಿದ್ದರೆ ಇಷ್ಟೆಲ್ಲಾ ಗೊಂದಲಗಳು ಉಂಟಾಗುತ್ತಿದ್ದವೆ?

ಇವನ್ನೆಲ್ಲಾ ನೋಡಿದಾಗ ಇನ್ನೊಬ್ಬರ ಅನುಭವಗಳಿಂದ ಸಾಮಾನ್ಯರಾದ ನಮಗೆ ಕಲಿಯಲಾಗುವುದಿಲ್ಲ ಎಂಬಂತಾಗುತ್ತದೆ.

ಅನುಭವದ ಬಗ್ಗೆ ಜಿಡ್ಡು ಕೃಷ್ಣಮೂರ್ತಿಯವರು ಹೀಗೆ ಹೇಳುತ್ತಾರೆ, ‘ಅನುಭವ ಸವಾಲಿಗೆ ಪ್ರತಿಕ್ರಿಯೆ ತೋರುವ ನೆನಪುಗಳ ಮೂಟೆ. ಅದು ತನ್ನ ಹಿನ್ನೆಲೆಯಲ್ಲಿ ಏನಿದೆಯೋ ಅದರಂತೆಯೇ ಪ್ರತಿಕ್ರಿಯೆ ತೋರುತ್ತದೆ. ಆದ್ದರಿಂದ ನೀವು ಮತ್ತೊಬ್ಬರ ಅನುಭವವನ್ನಷ್ಟೇ ಅಲ್ಲ. ನಿಮ್ಮದೇ ಅನುಭವವನ್ನೂ ಪ್ರಶ್ನಿಸಬೇಕು. ಅನುಭವವನ್ನು ನೀವು ಗುರುತಿಸದಿದ್ದರೆ ಅದು ಅನುಭವವೇ ಅಲ್ಲ. ಪ್ರತಿ ಅನುಭವವೂ ಈ ಮೊದಲೇ ಅನುಭವಿಸಲ್ಪಟ್ಟಿದೆ. ಹಾಗಿಲ್ಲದಿದ್ದರೆ ನೀವು ಅದನ್ನು ಗುರುತಿಸುತ್ತಿದ್ದಿಲ್ಲ. ನೀವು ಒಂದು ಅನುಭವವನ್ನು ಒಳ್ಳೆಯದು, ಕೆಟ್ಟದ್ದು, ಸುಂದರವಾದದ್ದು, ಪವಿತ್ರವಾದುದು ಎಂದು ಮುಂತಾಗಿ ನಿಮ್ಮ ನಿರ್ಬಂಧನೆಯ ಪ್ರಕಾರವೇ ಗುರುತಿಸುವಿರಿ. ಆದ್ದರಿಂದ ಗುರುತು ಎಂದಿಗಾದರೂ ಹಳೆಯದೇ.

‘ಸತ್ಯ'ದ ಅನುಭವ ನಮಗೆ ಬೇಕಾದಲ್ಲಿ (ನಮಗೆಲ್ಲರಿಗೂ ಆ ಅನುಭವ ಬೇಕಲ್ಲವೆ?) ಅದರ ಗುರುತು ನಮಗಿರಬೇಕು. ಅದನ್ನು ಗುರುತಿಸಿದ ಕ್ಷಣವೇ ಅದರ ವಿಷಯವನ್ನು ಕಲ್ಪಿಸಿರುತ್ತೇವೆ. ಆದ್ದರಿಂದ ಅದು ನಿಜವಾದುದಲ್ಲ. ಏಕೆಂದರೆ ಅದು ಸಮಯ, ಸನ್ನಿವೇಶಗಳ ಕಕ್ಷೆಯಲ್ಲಿಯೇ ಇರುತ್ತದೆ. ವಿಚಾರವು ‘ಸತ್ಯ'ದ ವಿಷಯವಾಗಿ ವಿಚಾರ ಮಾಡುತ್ತಿದ್ದರೆ ಅದು ‘ಸತ್ಯ'ವಿರಲು ಸಾಧ್ಯವಿಲ್ಲ. ನಾವು ಹೊಸ ಅನುಭವವನ್ನು ಗುರುತಿಸಲಾರೆವು. ನಾವು ಈ ಮೊದಲು ತಿಳಿದ ವಿಷಯವನ್ನು ಮಾತ್ರ ಗುರುತಿಸುತ್ತೇವೆ. ಆದ್ದರಿಂದ ನಮಗೆ ಹೊಸ ಅನುಭವವಾಗಿದೆಯೆಂದು ಹೇಳಿದರೆ, ಅದು ಹೊಸತಾಗಿರಲಾರದು.ಪ್ರಜ್ಞೆಯನ್ನು ವಿಸ್ತರಿಸಬಲ್ಲ ಮಾದಕ ವಸ್ತುಗಳನ್ನು ಸೇವಿಸಿ ಮುಂದಿನ ಅನುಭವ ಹುಡುಕುವಾಗ ಅದು ಪ್ರಜ್ಞೆಯ ಕ್ಷೇತ್ರದಲ್ಲಿಯೇ ಇರುವುದರಿಂದ ಮಿತಿಗೊಳಪಟ್ಟಿದ್ದೇ ಇರುತ್ತದೆ.

ನಾವೀಗ ಮೂಲಭೂತವಾದ ಒಂದು ಸತ್ಯವನ್ನು ಶೋಧಿಸಿದ್ದೇವೆ. ಅದೆಂದರೆ ವಿಶಾಲವಾದ, ಆಳವಾದ ಅನುಭವವನ್ನು ಹುಡುಕುವ ಬಲವಾದ ಆಶೆಯುಳ್ಳ ಮನಸ್ಸು ಆಳವಿಲ್ಲದ್ದೂ, ಮಂದವೂ ಆಗಿರುತ್ತದೆ. ಏಕೆಂದರೆ ಅದು ತನ್ನ ನೆನಪುಗಳಲ್ಲಿಯೇ ಬದುಕುತ್ತದೆ.

ನಮಗೆ ಯಾವುದೇ ಅನುಭವವಿಲ್ಲದಿದ್ದರೆ ಏನಾಗುತ್ತದೆ? ನಾವು ಜಾಗರೂಕರಾಗಿರಲು ಅನುಭವಗಳನ್ನು, ಸವಾಲುಗಳನ್ನು ಅವಲಂಭಿಸುತ್ತೇವೆ. ಅವುಗಳಿಲ್ಲದಿದ್ದರೆ ನಮ್ಮ ಮನಸ್ಸು ಮಂದ ಹಾಗೂ ಜಡವಾಗುತ್ತದೆಂದು ನಮ್ಮ ವಿಚಾರ. ಆದ್ದರಿಂದ ಹೆಚ್ಚಿನ ರೋಮಾಂಚನ, ತೀವ್ರತೆ ಪಡೆಯಲೋಸುಗ ನಮ್ಮ ಮನಸ್ಸನ್ನು ಚುರುಕುಗೊಳಿಸಲು ನಾವು ಸವಾಲನ್ನು, ಅನುಭವಗಳನ್ನು ಅವಲಂಭಿಸುತ್ತೇವೆ. ಅದು ವಾಸ್ತವವಾಗಿ ನಮ್ಮನ್ನು ಜಾಗೃತವಾಗಿಡುವುದಿಲ್ಲ. ಆದುದರಿಂದ ನನ್ನನ್ನೇ ನಾನು ಪ್ರಶ್ನಿಸುವೆ, ‘ಮೇಲು ಮೇಲಷ್ಟೇ ಅಲ್ಲ, ನನ್ನ ಬದುಕಿನ ಕೆಲ ಅಂಶಗಳಲ್ಲಿ ಮಾತ್ರವಲ್ಲ, ಆದರೆ ಪೂರ್ಣವಾಗಿ, ಆಳದಲ್ಲಿ ಸವಾಲು ಹಾಗೂ ಅನುಭವಗಳಿಲ್ಲದೆಯೇ ಜಾಗೃತರಾಗಿರಲು ಸಾಧ್ಯವೇ? ಅಂದರೆ ದೈಹಿಕ ಹಾಗೂ ಮಾನಸಿಕವಾಗಿ ತುಂಬಾ ಸಂವೇದನಾಶೀಲನಾಗಬೇಕು. ಎಲ್ಲ ಬೇಡಿಕೆಗಳಿಂದ ನಾನು ಮುಕ್ತನಾಗಿರಬೇಕು. ಬೇಡಿದ ಕ್ಷಣವೇ ನಾನು ಅನುಭವಿಸುವ ಬೇಡಿಕೆಗಳಿಂದ, ತೃಪ್ತಿಯಿಂದ ಮುಕ್ತರಾಗಬೇಕಾದರೆ ನನ್ನ ಅಂತರಂಗದ ಶೋಧನೆ ಹಾಗೂ ಬೇಡಿಕೆಯ ಸ್ವರೂಪದ ಪೂರ್ಣ ತಿಳುವಳಿಕೆಯ ಅವಶ್ಯಕತೆ ಇದೆ. ........ಮನಸ್ಸು ಇನ್ನುಮುಂದೆ ಏನನ್ನೂ ಹುಡುಕದಂತೆ ನಮ್ಮನ್ನು ನಾವು ಪೂರ್ಣವಾಗಿ ತಿಳಿಯಬೇಕು. ಇಂಥಾ ಮನಸ್ಸು ಅನುಭವವನ್ನು ಬೇಡುವುದಿಲ್ಲ.'

ಅನುಭವದ ಬಗ್ಗೆ ತಿಳಿಯಲಪೇಕ್ಷಿಸುವ ಪ್ರಯತ್ನವೇ ಒಂದು ಅನುಭವ. ‘ಹೆಚ್ಚಿನದೇನನ್ನೂ ಬೇಡದೆ, ನಿರಂತರವಾದ ಹೋಲಿಕೆ ಇಲ್ಲದೆಯೇ ಈ ಜಗತ್ತಿನಲ್ಲಿ ಬಾಳುವ ಮಾರ್ಗ ಹೇಗೆಂಬುದನ್ನು ನಾವೇ ಕಂಡುಕೊಳ್ಳಬೇಕು' ಎಂಬ ಜೆ.ಕೆ.ಯವರ ಚಿಂತನೆಯನ್ನು ನಮ್ಮದಾಗಿಸಿಕೊಳ್ಳುವ ನಿಟ್ಟಿನಲ್ಲಿ ಸಾಗೋಣ.

12 comments:

 1. ನೀವು ಹೇಳುತ್ತಿರುವ ವಿಷಯದಲ್ಲಿ ಆಳವಾದ ತತ್ವಜ್ಞಾನವಿದೆ. ಇದು ಮನುಷ್ಯನಿಗೆ ಅವಶ್ಯವಾದಂತಹ ಜ್ಞಾನವೇ ಹೌದು. ಪ್ರಯತ್ನದಿಂದಲೇ ಇದನ್ನು ಪಡೆಯಬೇಕೇನೊ?

  ReplyDelete
 2. ಅನುಭವದ ಬಗ್ಗೆ ಓದಿದ ಅನುಭವ ತುಂಬ ಚೆನ್ನಾಗಿತ್ತು..

  ReplyDelete
 3. you are 100% true,
  experience without job, job without experience, entha haasyaaspada alva kelavomme

  ReplyDelete
 4. ಜೀವನಕ್ಕೆ ಅವಶ್ಯವಿರುವ ವಿಚಾರಗಳು...
  ಉತ್ತಮ ವಿಚಾರಗಳನ್ನು ತಿಳಿಸಿಕೊಟ್ಟು, ಆ ನಿಟ್ಟಿನಲ್ಲಿ ವಿಚಾರ ಮಾಡಲು ತಿಳಿಸಿ ಕೊಡುವ ನಿಮ್ಮ ಲೇಖನಗಳು ತು೦ಬಾ ಸಹಕಾರಿಯಾಗಿದೆ.ಧನ್ಯವಾದಗಳು.

  ReplyDelete
 5. Prabhavani yavre,

  Sundara lekhana, kelavomme bereyavara anubhavagalu namage sahayakavaagutaave ennuvudannu allagaleyuvantilla....

  ReplyDelete
 6. ಅನುಭವದ ಬಗ್ಗೆ ಚೆನ್ನಾಗಿ ಹೇಳಿದ್ದೀರ...

  ReplyDelete
 7. in life sometimes our own experience's will only teach so many things to us...

  ReplyDelete
 8. ಲೇಖನ ತುಂಬಾ ಇಷ್ಟ ಆಯ್ತು.
  ಅನುಭದ ಪಾಠ ಅನುಭವದಿಂದಲೇ ಕಲಿಯಬೇಕು.
  ಧನ್ಯವಾದಗಳು.

  ReplyDelete
 9. ನನ್ನ .`ಮನದ ಅ೦ಗಳದಿ...........32. ಅನುಭವ 'ಕ್ಕೆ ಉತ್ತಮ ರೀತಿಯಲ್ಲಿ ಸ್ಪ೦ದಿಸಿ ಅನುಭವ ಪೂರ್ಣ ಪ್ರತಿಕ್ರಿಯೆ ನೀಡಿದ ಎಲ್ಲ್ಲಾ ಅತ್ಮೀಯರಿಗೂ ಅನೇಕಾನೇಕ ಧನ್ಯವಾದಗಳು. ನನ್ನ ಪ್ರತಿಕ್ರಿಯೆ ತಡವಾಗಿದ್ದಕ್ಕೆ ಕ್ಷಮೆಯಿರಲಿ. ಭೇಟಿ ನೀಡುತ್ತಿರಿ

  ReplyDelete
 10. ತುಂಬಾ ಉತ್ತಮ ಲೇಖನ. ನಿಮ್ಮ ಬರಹಗಳು ತುಂಬಾ ಇಷ್ಟವಾಯ್ತು. ಧನ್ಯವಾದಗಳು.

  ReplyDelete
 11. ನನ್ನ `ಅನುಭವ'ಕ್ಕೆ ನಿಮ್ಮ ಅನುಭವಗಳ ಮೂಲಕ ಉತ್ತಮ ರೀತಿಯಲ್ಲಿ ಸ್ಪ೦ದಿಸಿ,ಮೆಚ್ಚಿ ಪ್ರತಿಕ್ರಿಯಿಸಿದ ಎಲ್ಲ್ಲಾ ಅತ್ಮೀಯರಿಗೂ ಅನೇಕಾನೇಕ ಧನ್ಯವಾದಗಳು. ಬರುತ್ತಿರಿ.

  ReplyDelete