Thursday, March 3, 2011

ಮನದ ಅ೦ಗಳದಿ ..........೩೧.ಗತಾನು ಗತಿಕೋ ಲೋಕಃ.........

ಗತಾನು ಗತಿಕೋ ಲೋಕಃ ನ ಲೋಕಃ ಪಾರಮಾರ್ಥಿಕಃ|
ಗಂಗಾ ಸೈಕತಲಿಂಗೇನ ನಷ್ಟಂ ಮೇ ತಾಮ್ರ ಭಾಜನಂ||

ಒಮ್ಮೆ ಮಹಾನ್ ಜ್ಞಾನಿಗಳಾದ ಭಾಸ್ಕರಾಚಾರ್ಯರು ಕಾರ್ಯನಿಮಿತ್ತ ಕಾಶಿಗೆ ಹೋಗಿದ್ದಾಗ ಗಂಗಾ ನದೀ ತೀರದಲ್ಲಿ ತಮ್ಮ ಪ್ರಾಥರ್ವಿಧಿಗಳನ್ನು ಪೂರೈಸಲು ಕೈಲಿದ್ದ ತಾಮ್ರದ ಚೆಂಬನ್ನು ಮರಳಿನಲ್ಲಿ ಹೂತಿಟ್ಟು, ಗುರುತಿಗಾಗಿ ಅದರ ಮೇಲೆ ಒಂದು ಲಿಂಗಾಕೃತಿಯನ್ನು ಮಾಡಿ ಹೋಗುತ್ತಾರೆ. ಹಿಂತಿರುಗಿ ಬಂದು ನೋಡಿದಾಗ ಅಲ್ಲಿ ನೂರಾರು ಲಿಂಗಗಳು ಸಾಲುಸಾಲಾಗಿ ಮೈದಳೆದಿರುತ್ತವೆ! ಇವುಗಳ ನಡುವೆ ತಮ್ಮ ತಾಮ್ರದ ಚೆಂಬನ್ನು ಹುಡುಕುವುದಾದರೂ ಎಲ್ಲಿ? ಆಗ ಈ ಮೇಲ್ಕಂಡಂತೆ ಹೇಳುತ್ತಾರೆ, ‘ ಜನರು ಒಬ್ಬರು ನಡೆದುಕೊಡಂತೆಯೇ ಮತ್ತೊಬ್ಬರೂ ನಡೆದುಕೊಳ್ಳುತ್ತಾರೆ. ಯಾರೂ ಕೂಡ ಅದರ ಕಾರಣವೇನು ಎನ್ನುವುದರ ಬಗ್ಗೆ ಯೋಚಿಸುವುದೇ ಇಲ್ಲ. ಇದರಿಂದಾಗಿ ಗಂಗಾನದಿಯ ಮರಳಿನ ಲಿಂಗಗಳ ನಡುವೆ ನನ್ನ ತಾಮ್ರದ ಚೆಂಬು ಕಳೆದುಹೋಯಿತು!'

ಈ ಕಥೆಯನ್ನು ನಮ್ಮ ತಂದೆ ಹೇಳುತ್ತಿದ್ದರು. ಇದರ ಹಿನ್ನೆಲೆಯೇನೆಂದರೆ ಭಾಸ್ಕರಾಚಾರ್ಯರ ಮಗಳು ಬಾಲವಿಧವೆಯಾಗುತ್ತಾಳೆ. ಇದರಿಂದ ಮನನೊಂದ ಅವರು ಬಹಳವಾಗಿ ಚಿಂತಿಸಿ ಮಗಳಿಗೆ ಮರುಮದುವೆ ಮಾಡಬೇಕೆಂದು ಆಲೋಚಿಸುತ್ತಾರೆ. ಈ ಬಗ್ಗೆ ಕಾಶಿಗೆ ತೆರಳಿ ವಿದ್ವಾಂಸರೊಡನೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕೆಂದು ಹೋಗುತ್ತಾರೆ. ಅಲ್ಲಿ ಗಂಗಾತಟದಲ್ಲಿ ಈ ಘಟನೆ ನಡೆದಾಗ, ‘ತಾನು ಏನನ್ನಾದರೂ ಮಾಡಿದರೆ ಜನರು ಪೂರ್ವಾಪರ ಯೋಚಿಸದೇ ಅದನ್ನೇ ಅನುಸರಿಸುತ್ತಾರೆ ಹಾಗೂ ಆಚರಣೆಗೆ ತರುತ್ತಾರೆ' ಎಂದು ಬಗೆದು ಆ ಆಲೋಚನೆಯನ್ನು ಅಲ್ಲಿಗೇ ಬಿಟ್ಟು ಹಿಂದಿರುಗುತ್ತಾರೆ.

ಇದರ ಬಗ್ಗೆ ನಮ್ಮ ಮನೆಯಲ್ಲಿ ಬಿರುಸಾದ ಚರ್ಚೆ ಪ್ರಾರಂಭವಾಗಿ ಬಿಡುತ್ತಿತ್ತು. ಎಂದಿನಂತೆಯೇ ನಮ್ಮಕ್ಕನದೇ ಪ್ರಮುಖ ಪಾತ್ರವಾಗಿ ಅವರ ತೀರ್ಮಾನವನ್ನು ತೀವ್ರವಾಗಿ ವಿರೋಧಿಸುತ್ತಿದ್ದರು. ಜನ್ಮಜನ್ಮಾಂತರದ ಕರ್ಮದ ಫಲ, ವಿಧಿಲಿಖಿತ ನಮ್ಮ ತಂದೆಯವರ ಗುಂಪಿನ ವಾದಕ್ಕೆ ಹಿನ್ನೆಲೆಯ ಒತ್ತು ನೀಡುತ್ತಿದ್ದರೆ, ಒಂದು ಉತ್ತಮವಾದ ತೀರ್ಮಾನ ಅವರು ತೆಗೆದುಕೊಂಡಿದ್ದರೆ ಎಷ್ಟೊಂದು ಜನ ಹೆಣ್ಣುಮಕ್ಕಳು ವೈಧವ್ಯದಿಂದ ನೆರಳುವುದು ತಪ್ಪುತ್ತಿತ್ತು ಎನ್ನುವುದು ಅಕ್ಕನ ಗುಂಪಿನ ಎಂದರೆ ಎಳೆಯರಾದ ನಮ್ಮ ಅಭಿಮತವಾಗಿರುತ್ತಿತ್ತು. ವಿರೋಧಾಭಾಸವೆಂದರೆ ಬಾಲವಿಧವೆಯಾಗಿದ್ದ ನಮ್ಮ ಸೋದರತ್ತೆ ತಮ್ಮ ಅಣ್ಣನ ಗುಂಪಿಗೇ ಸೇರಿದವರಾಗಿದ್ದು ಚರ್ಚೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದರು!

ಯಾವುದೇ ಸಂಪ್ರದಾಯವಾಗಲೀ ತನ್ನ ಮೂಲ ಉದ್ದೇಶದಿಂದಲೇ ದೂರ ಸರಿದು ಅಂಧಾನುಕರಣೆಯಾಗಿ ಉಳಿದಿರುವುದು ದುರಂತವೇ ಆಗಿದೆ. ಯಾರೋ, ಎಂದೋ ಹಾಕಿಕೊಟ್ಟ ರೂಢಿಗಳನ್ನೇ ಅದರ ಅರ್ಥವನ್ನೂ ತಿಳಿಯದೇ, ಅರಿತುಕೊಳ್ಳಲೂ ಬಯಸದೇ, ಪಾಲಿಸುವುದಷ್ಟೇ ನಮ್ಮ ಕರ್ತವ್ಯವೆನ್ನುವಂತೆ ಅನುಸರಿಸುತ್ತಿದ್ದೇವೆ. ಹುಟ್ಟಿನಿಂದ ಸಾವಿನವರೆಗೂ ಯಾವಯಾವ ಸಂದರ್ಭಗಳಲ್ಲಿ ಹೇಗೆ ಆಚರಿಸಬೇಕೆನ್ನುವುದನ್ನಷ್ಟೇ ಪರಂಪರಾನುಗತವಾಗಿ ಕೇಳಿ ತಿಳಿದುಕೊಳ್ಳುತ್ತಾ ನಮ್ಮನ್ನೇ ನಾವು ಚೌಕಟ್ಟಿನೊಳಗೆ ಬಂಧಿಸಿಕೊಳ್ಳುತ್ತಿದ್ದೇವೆ. ಎಷ್ಟೋ ಆಚರಣೆಗಳು ಈ ಕಾಲಕ್ಕೆ ಅಪ್ರಸ್ತುತವೆನಿಸಿದರೂ ನಮ್ಮ ಮುಂದಿನ ಪೀಳಿಗೆಗಳೂ ಅದನ್ನೇ ಚಾಚೂ ತಪ್ಪದಂತೆ ನಡೆಸಬೇಕೆಂದು ಹಂಬಲಿಸುತ್ತೇವೆ. ಇವುಗಳಲ್ಲಿ ಮೌಢ್ಯದಿಂದ ಕೂಡಿದ ಅನೇಕ ಆಚರಣೆಗಳೂ ಇರುತ್ತವೆ. ಅವನ್ನು ಎಷ್ಟು ಜನ ಪ್ರೀತಿಯಿಂದ, ಸಂತಸದಿಂದ ಆಚರಿಸುತ್ತಾರೆ? ಬಹುತೇಕ ಆಚರಣೆಗಳಿಗೆ ಭಯವೇ ಚಾಲಕ ಶಕ್ತಿಯಾಗಿದೆ. ಇದನ್ನು ಮಾಡದಿದ್ದರೆ ಏನಾದರೂ ಕೆಟ್ಟದ್ದು ಆದರೆ? ದುರಂತ ಸಂಭವಿಸಿದರೆ? ಎನ್ನುವ ಆತಂಕದಿಂದಲೇ ನಾವು ‘ಗತಾನು ಗತಿಕ'ರಾಗುತ್ತಿದ್ದೇವೆ. ಎಷ್ಟೋ ಸಂದರ್ಭಗಳಲ್ಲಿ ಕಾಕತಾಳೀಯವೆನ್ನುವಂತೆ ಅಂಥಾ ಘಟನೆಗಳು ನಡೆದು ಅನಗತ್ಯ ಭಯಕ್ಕೆ ಪುಷ್ಟಿಯನ್ನೂ ನೀಡಿದೆ! ಹೀಗೆ ಹಳೆಯದಕ್ಕೇ ಜೋತುಬಿದ್ದಾಗ ನಮ್ಮ ಜೀವನವು ಜಡವಾಗುತ್ತಾ ಹೋಗುತ್ತದೆ. ಯಾರನ್ನೋ ಮೆಚ್ಚಿಸುವುದಕ್ಕಾಗಿ, ಯಾರ ಮೇಲಿನದೋ ಸ್ಪರ್ಧೆಗಾಗಿ,..... ನಮ್ಮಿಂದಲೇ ನಾವು ಪ್ರತಿಕ್ಷಣವೂ ದೂರ ಸರಿಯುತ್ತಿರುತ್ತೇವೆ.

‘ಎಂದೋ ಯಾರೋ ಹಚ್ಚಿದ ದೀಪದ ಬೆಳಕಿನಲ್ಲಿ ನಮ್ಮ ಜೀವನವು ನಡೆಯುತ್ತಾ ಇದೆ. ಆ ದೀಪವು ಈಗಾಗಲೇ ಹೊಗೆಯಿಂದ ತುಂಬಿಕೊಂಡು, ಕಿಲುಬುಗಟ್ಟಿ, ಮೊಬ್ಬು ಬೆಳಕನ್ನು ನೀಡುತ್ತಿದೆ. ಈ ಬೆಳಕಿನಲ್ಲಿ ನಮ್ಮ ಮಾರ್ಗವು ಸ್ಪಷ್ಟವಾಗಿ ಗೋಚರಿಸಲಾರದು. ನಾವು ಈಗಾಗಲೇ ಮುಂದೆ ಸಾಗುವವರನ್ನೇ ಅನುಸರಿಸುತ್ತಾ, ಒಬ್ಬರ ಹಿಂದೆ ಒಬ್ಬರಂತೆ, ಅತ್ತಿತ್ತ ನೋಡದೆ, ಮುಂದೇನಿದೆ ಎಂಬ ಅರಿವೂ ಇಲ್ಲದೇ ಯಂತ್ರಿಕವಾಗಿ ಸಾಗುತ್ತಿದ್ದೇವೆ. ನಮ್ಮ ಜೀವನವನ್ನು ಉತ್ಸಾಹಭರಿತವಾಗಿಸಿಕೊಳ್ಳಲು, ಅರ್ಥಪೂರ್ಣವನ್ನಾಗಿಸಲು ನಾವೀಗ ನಮ್ಮದೇ ಸ್ವಂತ ಬೆಳಕನ್ನು ಹೊಂದಬೇಕಾಗಿದೆ. ಆ ಬೆಳಕು ಕುಡಿ ಬೆಳಕಾದರೂ ಚಿಂತೆಯಿಲ್ಲ, ನಮ್ಮ ಮಾರ್ಗವು ಸ್ಪಷ್ಟವಾಗಿ ಗೋಚರಿಸುವಂತಿದ್ದರೆ ಸಾಕು,' ಎನ್ನುವ ಆಶಯದ ಕವನ ‘ಸ್ವಯಂ ಪ್ರಭೆ' ಯನ್ನು ಬರೆದಿದ್ದೆ.

ಹಿಂದಿನವರು ನಮ್ಮ ಒಳಿತಿಗೆಂದೇ ಒಂದು ಮಾರ್ಗವನ್ನು ರೂಪಿಸಿ, ಅದನ್ನೇ ಅನುಸರಿಸುತ್ತಾ ಯಾವುದೂ ಕಷ್ಟಕೋಟಲೆಗಳಿಲ್ಲದೇ, ಸುಖಸಂತೋಷಗಳಿಂದ ಜೀವನ ನಡೆಸಲಿ ಎಂಬ ಉದ್ದೇಶದಿಂದಲೇ ಮಾಡಿದ್ದರೂ ಅದರ ಮೂಲ ಉದ್ದೇಶವನ್ನು ತಿಳಿದುಕೊಂಡು, ಈ ಕಾಲಕ್ಕೆ ಸೂಕ್ತವಾಗಿದೆಯೇ ಎನ್ನುವುದನ್ನು ಮನಗಂಡು ಪಾಲಿಸುವುದು ಒಳಿತೇನೋ. ಬೆಕ್ಕನ್ನು ಕೂಡಿಹಾಕಿ ಶ್ರಾದ್ಧವನ್ನು ನಡೆಸಿದ ಕಥೆಯಂತೆ ಆಗಬಾರದು ಅಲ್ಲವೆ?

10 comments:

  1. ಪ್ರಭಾಮಣಿಯವರೇ.. ತುಂಬಾ ಸಂತೋಷವಾಯಿತು ನಿಮ್ಮ ಈ ಲೇಖನ ಓದಿ.. ಹಿಂದೆ ನಿಮ್ಮ ಸ್ವಯಂ ಪ್ರಭೆ ಕವನ ಅರ್ಥವಾಗಿರಲಿಲ್ಲ. ಈ ಲೇಖನ ಓದಿದ ನಂತರ ಮತ್ತೆ ಆ ಕವನವನ್ನು ಓದಿದೆ.. ಆಗ ಅರ್ಥ ಸ್ಪಷ್ಟವಾಯಿತು! ಈ ಲೇಖನವಂತೂ ತುಂಬಾ ಮೌಲ್ಯ ಉಳ್ಳದ್ದಾಗಿದೆ. ಭಟ್ಟಾಚಾರ್ಯರು ಲಿಂಗ ಮಾಡಿಟ್ಟ ಕಥೆ ಹಾಗು ಬೆಕ್ಕನ್ನು ಕೂಡಿ ಹಾಕಿ ಶ್ರಾದ್ಧ ಮಾಡಿದ ಕಥೆ ಎಂದೋ ಕೇಳಿದ್ದುದು ನೆನಪಾಗಿ ನಗೆ ತಂದಿತು. ಅಂಧಾನುಕರಣೆ ವಿರುದ್ಧ ಉತ್ತಮ ಲೇಖನ ಬರೆದಿದ್ದೀರಿ.

    ReplyDelete
  2. ಪ್ರಭಾಮಣಿಯವರೆ,
    ಉತ್ತಮ ವಿಚಾರವನ್ನು ಆಪ್ತಸಲಹೆಯ ಮೂಲಕ ನೀಡಿದ್ದೀರಿ. ಧನ್ಯವಾದಗಳು.

    ReplyDelete
  3. ಪ್ರಭಾಮಣಿಯವರೇ,

    ತುಂಬಾ ಉತ್ತಮ ಲೇಖನ, ಅಜ್ಜ ನೆಟ್ಟ ಆಲದ ಮರ ಎಂದು ನೇಣು ಹಾಕಿ ಕೊಳ್ಳುವುದು ಎಷ್ಟು ಸರಿ? ಕೆಲವು ಸಂಪ್ರದಾಯಗಳನ್ನು ಆಧುನಿಕತೆಯ ರೀತಿಗೆ ಸರಿಯಾಗಿ ಮಾರ್ಪಾಡು ಮಾಡುವುದು ಯೋಗ್ಯ...

    ReplyDelete
  4. ಲೇಖನ ತು೦ಬಾ ಚೆನ್ನಾಗಿದೆ.ಹಿ೦ದಿನ ಆಚರಣೆಗಳನ್ನು ಮು೦ದುವರಿಸಿಕೊ೦ಡು ಹೋಗುವುದು ಒಳ್ಳೆಯ ವಿಚಾರವೇ .. ಆದರೆ ಆ ಎಲ್ಲಾ ಆಚರಣೆಗಳೂ ಸಧ್ಯದ ಕಾಲಮಾನಕ್ಕೆ ಸೂಕ್ತವೇ ಎ೦ದು ಆಲೋಚಿಸಿ ಆಚರಿಸುವುದು ಅತೀ ಅವಶ್ಯ..ಎ೦ಬ ವಿಚಾರ ತು೦ಬಾ ಹಿಡಿಸಿತು.

    ReplyDelete
  5. ಅರ್ಥಪೂರ್ಣ ಮಾತುಗಳು.

    ReplyDelete
  6. uttma vichaara poorita lekhana - prabhamani avare. "ಮೂಲ ಉದ್ದೇಶವನ್ನು ತಿಳಿದುಕೊಂಡು, ಈ ಕಾಲಕ್ಕೆ ಸೂಕ್ತವಾಗಿದೆಯೇ ಎನ್ನುವುದನ್ನು ಮನಗಂಡು.." oppuvanthaha maatugalu. dhanyavadgalu.

    ananth

    ReplyDelete
  7. ಪ್ರಭಾಮಣಿಯವರೇ, ಅನುಕರಣೆ ಸದ್ವಿಚಾರಗಳಿಗೆ ಸೂಕ್ತ..ಅಂಧಾನುಕರಣೆ ಲೋಕಜ್ಜಾನದ ಅಭಾವದ ಹಿನ್ನೆಲೆಯಲ್ಲಿ ಮಾನ್ಯ ಆದರೆ ವಿದ್ಯಾವಂತರು ಜ್ಜಾನಿಗಳೂ ಇದನ್ನು ಮಾಡುವುದು ಕಂಡರೆ ..ಕಸಿವಿಸಿ ಅನ್ಸಿಸುತ್ತೆ...ನನಗೆ ಚಿಕ್ಕ ಮಕ್ಕಳನ್ನು ಯಾವುದೋ ದೇವಿಯ ಜಾತ್ರೆಯಲ್ಲಿ ಮುಳ್ಳಿನ ಮೇಲೆ ಕುಳ್ಳರಿಸುವ ಶಾಸ್ತ್ರ ಮಾಡುತ್ತಿದ್ದ ಡಾಕ್ಟರೊಬ್ಬರ ಟೀವಿಯಲ್ಲಿ ಕಂಡದ್ದು ನೆನಪಾಗುತ್ತದೆ....ವೈಚಾರಿಕ ಲೇಖನ

    ReplyDelete
  8. ಪ್ರಭಾ ಅವರೇ,

    ಮರಳಿನ ಲಿಂಗದ ಪ್ರಸಂಗದ ಮೂಲಕ ಅರ್ಥಹೀನ ಸಂಪದ್ರಾಯಗಳ ಬಗೆಗೆ ಮನದಟ್ಟುವ ವ್ಯಾಖ್ಯಾನ ನೀಡಿದ್ದಕ್ಕೆ ವಂದನೆಗಳು.

    ReplyDelete
  9. ಈ ಕಥೆಯನ್ನು ನಾನೂ ಕೇಳಿದ್ದೆ, ಮತ್ತೆ ನಿಮ್ಮ ಬಾಯಿಂದ/ಲೇಖನದಿಂದ ಕೇಳಿ ಖುಷಿಯಾಯ್ತು, ಯಾರೋ ಮಾಡುತ್ತಾರೆ ಎಂದು ಎಲ್ಲರೂ ಮಾಡುವುದು ಇಂದಿಗೂ ಕಾಣುತ್ತದೆ, ಬೆಂಗಳೂರಿನ ರಾಜಾಜಿನಗರದಲ್ಲಿ ಒಂದು ಜಾಗದಲ್ಲಿ ಎಲ್ಲರೂ ಕಸ ಹಾಕುತ್ತಿದ್ದರು, ಪಕ್ಕದ ಮನೆಯಾತನಿಗೆ ಬೇಸರವಾಯಿತು, ಯೋಚಿಸಿ ರಾತ್ರೋ ರಾತ್ರಿ ಒಂದು ಹುತ್ತದ ಭಾಗವನ್ನು ತಂದು ಅಲ್ಲಿ ನೆಟ್ಟು ಅದಕ್ಕೊಂದಷ್ಟು ಹೂವು, ಅರಿಶಿನ-ಕುಂಕುಮ ಹಾಕಿದ, ಆಮೇಲೆ ತಗೊಳಿ ಅಲ್ಲಿ ಸುತ್ತ ಮುತ್ತ ಇರುವವರೆಲ್ಲಾ ಈಗ ಅಲ್ಲಿ ನಾಗನ ಗುಡಿ ನಿರ್ಮಿಸಿ ದಿನಾಲೂ ಪೂಜೆ ನಡೆಸುತ್ತಿದ್ದಾರೆ ! ಇದು ನೀವು ನಂಬಲಾರದ ಆದರೆ ನಾನೇ ಸ್ವತಃ ನೋಡಿದ ವಿಷಯ, ಕಸ ಹಾಕಬಾರದಿತ್ತು ನಿಜ, ಆದರೆ ಕಂಡಲ್ಲೆಲ್ಲಾ ರಸ್ತೆಗಳಲ್ಲಿ ಪೂಜಾ/ಪ್ರಾರ್ಥನಾ ಮಂದಿರ ಕಟ್ಟುವುದು ಸರಿಯಲ್ಲ. ಲೇಖನ ಚೆನ್ನಾಗಿದೆ, ಶುಭಾಶಯಗಳು

    ReplyDelete
  10. ಬೆಕ್ಕನ್ನು ಕೂಡಿಹಾಕಿ ಶ್ರಾದ್ಧವನ್ನು ನಡೆಸಿದ ಕಥೆಯಂತೆ - ee kathe vivarisi. chendada baraha aaptavenisitu.

    ReplyDelete