ಹಿಂದಿನ ವಾರದ ( ಏಪ್ರಿಲ್10, 2025) 'ಸುಧಾ' ಪತ್ರಿಕೆಯ 'ಭಿನ್ನನೋಟ'ದಲ್ಲಿ ಪ್ರಕಟವಾಗಿರುವ ನನ್ನ ಲಲಿತ ಪ್ರಬಂಧ - 'ಓಟ ಓಟ ಹಿಂದೋಟ'
ನಿಮ್ಮ ಪ್ರೀತಿಯ ಓದಿಗೆ🌼
'ಸುಧಾ' ಪತ್ರಿಕಾ ಬಳಗಕ್ಕೆ ಧನ್ಯವಾದಗಳು🙏
🏃ಓಟ ಓಟ ಹಿಂದೋಟ🏃
ಓಟ ಎಂದರೆ ಮುಮ್ಮುಖ ವೇಗದ ಚಲನೆ ಎನ್ನುವುದು ಸರ್ವವೇದ್ಯ ಆದರೆ ಇದೇನಿದು ಹಿಂದೋಟ? ಹಿಂದಕ್ಕೆ ಓಡಲು ಸಾಧ್ಯವೇ? ಎಂದು ಅಚ್ಚರಿ ಪಡಲೂಬಹುದು. ನಮ್ಮ ದೇಹಕ್ಕೆ ಮುಂದಕ್ಕೆ ಮಾತ್ರ ಓಡಲು ಸಾಧ್ಯ ನಿಜ. (ಗಿನ್ನೆಸ್ ದಾಖಲೆ ಮಾಡಲು ಯಾರಾದರೂ ಹಿಮ್ಮುಖವಾಗಿ ಓಡಿರಲೂ ಬಹುದು!) ಆದರೆ ಮನಸ್ಸು? ಅದು ಮುಂದೆ ಹಿಂದೆ ಮೇಲೆ ಕೆಳಗೆ... ದಶದಿಕ್ಕುಗಳ ಯಾವ ನೇರದಲ್ಲಾದರೂ ಓಡೀತು! ಸಧ್ಯದಲ್ಲಿ ಸದಾ ಹಿಂದಕ್ಕೇ ಒಡಲಿಚ್ಚಿಸುವ ಈ ಮನದ ಬಗ್ಗೆ ನೋಡೋಣ ಎಂದೇನೂ ನಾನು ಹೇಳಲು ಹೊರಟಿಲ್ಲ. ಈಗೀಗ ವರ್ತಮಾನದ ಕಾರ್ಪಣ್ಯಗಳೇ ನಮ್ಮನ್ನು ಕಟ್ಟಿಹಾಕುತ್ತಿರುವಾಗ ಹಿಂದಿನದನ್ನೆಲ್ಲಾ ನೆನೆಸಿಕೊಂಡು ಮೆಲುಕು ಹಾಕುವ ವ್ಯವಧಾನವಾದರೂ ಎಲ್ಲಿದೆ? ಆ ಜವಾಬ್ದಾರಿಯನ್ನು ನಮ್ಮೆಲ್ಲರ ಪರಮ ಪ್ರಿಯಮಿತ್ರನಾದ ಫೇಸ್ಬುಕ್ ವಹಿಸಿಕೊಂಡುಬಿಟ್ಟಿದೆ!
ಪ್ರತಿದಿನ ರಾತ್ರಿ 12ಗಂಟೆಗೆ ನಾನು ಮಾಡುವ ಮೊದಲ ಕೆಲಸವೆಂದರೆ ಫೇಸ್ಬುಕ್ನಲ್ಲಿ ಮೆಮೋರೀಸನ್ನು ಸರ್ಚ್ ಮಾಡುವುದು. ಗತಿಸಿದ ಕಾಲದಲ್ಲಿ ಹಿಂಪಯಣ ಮಾಡಿ ಹಿಂದಿನ ವರ್ಷಗಳಲ್ಲಿ ಇದೇ ದಿನದಲ್ಲಿ ನಾವು ಮಾಡಿದ್ದ ಅಮೋಘ ಸಾಧನೆಯನ್ನು ಎತ್ತಿ(ಮತ್ತೆ) ತೋರಿಸಿ ಭೇಷ್ ಎನಿಸಿಕೊಳ್ಳುವುದರಲ್ಲಿ ಫೇಸ್ಬುಕ್ ಗೆ ಎಲ್ಲಿಲ್ಲದ ಖುಷಿ! ಅದನ್ನು ಮತ್ತೆಮತ್ತೆ ಹಂಚಿಕೊಂಡು ಬರುವ ಲೈಕ್, ಕಾಮೆಂಟ್ಗಳನ್ನು ಎಣಿಸುವುದರಲ್ಲಿ ನಮಗೆ ಖುಷಿ!
ನನ್ನ ಫೇಸ್ಬುಕ್ ಅಂತೂ ʼ1-2...10ವರ್ಷಗಳ ಹಿಂದೆ...ʼ ಮುಂತಾದ ನೆನಪುಗಳ ಮೆರವಣಿಗೆಗಳಿಂದಲೇ ತುಂಬಿಹೋಗಿದೆ. ಇದೇನಿದು ಇವರ ಬದುಕು ಮುನ್ನಡೆಯುತ್ತಲೇ ಇಲ್ಲವೇ? ಯಾವಾಗ ಇವರು ದನ-ಎಮ್ಮೆಗಳಂಥಾ ಮೆಲುಕು ಹಾಕುವ ಪ್ರಾಣಿಗಳ ಗುಂಪಿಗೆ ಸೇರಿದರು? ಎಂದು ಆತ್ಮೀಯರು ಅಲವತ್ತುಕೊಳ್ಳಬಹುದು. ಆದರೂ ಗತ ಮೆಲುಕಿನಲ್ಲಿರುವ ಸುಖ ಗಬಗಬನೆ ತಿಂದು ಮುಗಿಸುವ ವಾಸ್ತವದಲ್ಲಿ ಹೇಗೆ ತಾನೇ ಇರಲು ಸಾಧ್ಯ?
ನಾವು ಚಿಕ್ಕವರಿದ್ದಾಗ ಸೈಕಲ್ ಚಕ್ರದ ಹೊರಫ್ರೇಮನ್ನು ಓಡಿಸುತ್ತಾ ಅದರ ಹಿಂದೆ ಓಡುವುದೇ ಒಂದು ಆಟವಾಗಿತ್ತು. ಊರ ಮಕ್ಕಳೆಲ್ಲಾ ಸಮಯದ ಪರಿವೆಯಿಲ್ಲದೇ ಯಾವಾಗೆಂದರೆ ಆಗ, ರಜೆ ಇದ್ದರಂತೂ ಮದ್ಯಾಹ್ನದ ರಣರಣ ಬಿಸಿಲಿನಲ್ಲಿಯೂ ಚಕ್ರ ಓಡಿಸುತ್ತಿದ್ದರು. ನನ್ನ ಜೊತೆ ಮಕ್ಕಳಲ್ಲಿ ಒಬ್ಬನಾದ ಭೀಮನೂ ಚಕ್ರ ಓಡಿಸುತ್ತಾ ನಮ್ಮ ಮನೆ ಹತ್ರ ಬಂದಾಗ ಸದಾ ಜಗಲಿ ಮೇಲೆ ಕೂತಿರ್ತಿದ್ದ ಅಜ್ಜಿ, 'ಹೇಗೆ ಓದ್ತಿದೀಯೋ ಭೀಮಾ?' ಎಂದು ಲೋಕಾಭಿರಾಮವಾಗಿ ಕೇಳಿದರೆ, 'ನಿಮ್ಮೊಮ್ಮಗಳು ಮುಂದುಮುಂದಕ್ಕೆ ಹೋಗ್ತಿದಾರೆ ಅಜ್ಜಿ, ನಾನು ಹಿಂದುಹಿಂದಕ್ಕೆ ಹೋಗ್ತಿದೀನಿ,' ಅಂತಿದ್ದ! ಒಂದೇ ಕ್ಲಾಸಲ್ಲಿ ಫೇಲಾಗಿ ಕೂರೋದು ಅಂದ್ರೆ ಅವನ ಅರ್ಥದಲ್ಲಿ ಹಿಂದಕ್ಕೆ ಹೋಗೋದು ಅಂತ! ಹಾಗೆ ಹೇಳ್ತಿದ್ದೋನು ತನ್ನ ಅತ್ಯಂತ ಪ್ರಿಯ ಸಂಸಾರವನ್ನು ನಡುನೀರಿನಲ್ಲೇ ಕೈಬಿಟ್ಟು ಎಲ್ಲರಿಗಿಂತಲೂ ಮುಂದೆಯೇ ಹೋಗಿಬಿಟ್ಟ!
ಹಿಂದೋಟ ಎನ್ನುವುದು ಒಂದು ರೀತಿ ಹಿಂಬಡ್ತಿ ಎನ್ನುವಂತೆಯೇ ಸೌಂಡ್ ಆಗುತ್ತೆ. ಲಂಚ ಪಡೆದು ಸಿಕ್ಕಿಹಾಕಿಕೊಂಡ ಅಧಿಕಾರಿಗೆ ಹಿಂಬಡ್ತಿ ಶಿಕ್ಷೆ ನೀಡಿದ್ದನ್ನು ಪತ್ರಿಕೆಗಳಲ್ಲಿ ಆಗೀಗ ನೋಡುತ್ತಿರುತ್ತೇವೆ. ಬಡ್ತಿ ಎಂದರೆ ಪದೋನ್ನತಿ, ಮೇಲೇರಿಕೆ ಎನ್ನುವ ಅರ್ಥವಿದೆ. ಹಿಂಬಡ್ತಿ ಎಂದಾಗ ತಮ್ಮ ಸ್ಥಾನದಿಂದ ಕೆಳಗಿಳಿದರು ಎನ್ನುವುದು ಅಂಡರ್‌ಸ್ಟುಡ್!
ಹಿಂದೋಡುವ ಮನಸ್ಸು ಎಷ್ಟೊಂದು ಪ್ರಬಲವಾಗಿದೆಯೆಂದರೆ ಯಾರೇ ಆದರೂ ತಮ್ಮ ಬಾಲ್ಯ ಎಷ್ಟೊಂದು ಸುಂದರವಾಗಿತ್ತು ಎಂದೇ ಹಲುಬುತ್ತಾರೆ. ಕೈಗೆಟುಕದ ದ್ರಾಕ್ಷಿ ಹುಳಿ ಎನ್ನುವುದು ಸಾಮಾನ್ಯ ಉಕ್ತಿ. ಆದರೆ ಮರಳಿ ಪಡೆಯಲಾಗದ ಬಾಲ್ಯ ಮಧುರಾತಿ ಮಧುರ! ಹರಿವ ನದಿಗೆ ಅಣೆಕಟ್ಟನ್ನು ಅಡ್ಡಗಟ್ಟಿದಾಗ ಹಿನ್ನೀರು ಒತ್ತಡದಿಂದ ಹಿಮ್ಮುಖವಾಗಿ ನುಗ್ಗುವಂತೆ ಬದುಕು ಮುಂದಿನ ದಾರಿ ಕಾಣದೇ ತಟಸ್ಥವಾದಾಗ ಹಿಂದೋಡುವ ಮನಸ್ಸು ಹಿಂಡುಹಿಂಡು ನೆನಪುಗಳನ್ನು ಬಾಚಿಕೊಂಡು ತನ್ನದಾಗಿಸಿಕೊಳ್ಳುವ ತವಕದಲ್ಲಿ ತಬ್ಬಿ ಅವಚಿಕೊಳ್ಳುತ್ತಿರುತ್ತದೆ. ಆದರೆ ಹಿಂದೆಹಿಂದೆ ಸರಿದಂತೆ ಎಲ್ಲವೂ ಮಾಸಲುಮಾಸಲು! ನನ್ನಂಥಾ ಹಿರಿಜೀವಗಳು ಮಧ್ಯವಯ, ಯೌವನ, ಬಾಲ್ಯ ಮುಂತಾಗಿ ನೆನಪುಗಳನ್ನು ಆಯ್ದು ಹೆಕ್ಕಿಕೊಳ್ಳುತ್ತಾ ಹಿಂದೆಹಿಂದೆ ಸಾಗಬಹುದು. ಅಮ್ಮ ಅಜ್ಜಿ ಆಗಾಗ ಹೇಳಿಹೇಳಿ ಗಟ್ಟಿಗೊಳಿಸಿದ ಶೈಶವವನ್ನೂ ಕಣ್ಮುಂದೆ ಮೂರ್ತಿಕರಿಸಿಕೊಳ್ಳಲೂ ಬಹುದು. ಆದರೆ ಅದರ ಹಿಂದಿನ ಮಾತೃಗರ್ಭದೊಳಗಿನದು? ಅದಕ್ಕೂ ಹಿಂದೆ? ಇವೆಲ್ಲಾ ನಮ್ಮ ಮನೋಮಿತಿಗೂ ನಿಲುಕದ ನಿಗೂಢ ಸಂದರ್ಭಗಳು!
ಸದಾ ಹಿಂದೋಡಲೇ ಹವಣಿಸುತ್ತಿರುವ ಮನವನ್ನು ತಡೆಹಿಡಿಯದೆ ಒಮ್ಮೆ ನೆನಪೆಂಬ ತಾಂಬೂಲವನ್ನು ಜಗಿಯಲಾರಂಭಿಸಿದೆವೆಂದರೆ…
'ಜಗಿಜಗಿದು
ಸ್ವಾದರಹಿತವಾಗಿದ್ದರೂ
ಈ ತಾಂಬೂಲವ
ಉಗಿಯಲಾಗದ
ವಿಚಿತ್ರ ಮೋಹ'ಎನ್ನುವಂತೆ ಮೋಹಪಾಶಕ್ಕೆ ಬಂಧಿಯಾಗಿ ಆ ನೆನಪಿನ ಸುಳಿಯೊಳಗೇ ಸಿಲುಕಿಬಿಡುತ್ತೇವೆ!
ಹಾಗೆ ನೋಡಿದರೆ ಮನೆಯಲ್ಲಿರುವ ಅಜ್ಜಿಯರಿಂದಲೇ ಹಿಂದಿನ ಪೀಳಿಗೆಗಳ ರೋಚಕ ಕಥೆಗಳು ವಂಶಪಾರಂಪರ್ಯವಾಗಿ ಹರಿದು ಸಾಗುವುದು ಎನಿಸುತ್ತದೆ. ಈಗೀಗ ಟಿವಿ, ಮೊಬೈಲ್ ...ಗಳ ಸಾಂಗತ್ಯದಲ್ಲಿ ಹೇಳಲೂ ಕೇಳಲೂ ಸಮಯವೇ ಇಲ್ಲದಂತಾಗಿಬಿಟ್ಟಿದೆ. ನಾವು ಚಿಕ್ಕವರಿದ್ದಾಗ ನಮ್ಮ ಮುತ್ತಜ್ಜಿ ಸದಾ ಕಾಲ ತಮ್ಮ ಹಿಂದಿನ ತಲೆಮಾರಿನವರ ಬಗ್ಗೆ ಹೇಳುತ್ತಲೇ ಇರುತ್ತಿದ್ದರು. ಅವರ ಮುತ್ತಜ್ಜಿಗೆ ಮೂಗು ಚುಚ್ಚಿದ್ದು (ಆಗ ಏಳೆಂಟು ವರ್ಷಕ್ಕೆಲ್ಲಾ ಮದುವೆ ಮಾಡ್ತಿದ್ದರಲ್ಲ. ಅದಕ್ಕೂ ಮೊದಲೇ ಮೂಗು ಬಲಿತರೆ ಚುಚ್ಚಕ್ಕಾಗಲ್ಲ ಅಂತ ಹೆದರಿ ಓಡಿ ಹೋಗ್ತಿದ್ದ ಮಗೂನ ಬೆಲ್ಲದ ಆಸೆ ತೋರಿಸಿ ಎತ್ತಿಕೊಂಡು ಬಂದು ಮೂಗು ಚುಚ್ಚಿಸಿದ್ದಂತೆ!), ಕೋಪ ಬಂದಾಗಲೆಲ್ಲಾ ಅವರ ಮುತ್ತಾತ ತೆಂಗಿನ ಮರ ಹತ್ತಿ ಕೂರ್ತಿದ್ದದ್ದು, ಅವರ ತಾತನ ಬಾಲಲೀಲೆಗಳು, ಮಹಾನ್ ಸಿದ್ಧಾಂತಿಗಳಾಗಿದ್ದ ಅವರ ಮರಿತಾತನ ಮಾತೇ ಊರಿನಲ್ಲಿ ನಡೀತಿದ್ದದ್ದು... ಕೊನೆಮೊದಲೇ ಇಲ್ಲ. ಯಾರು ಕೇಳಲಿ ಬಿಡಲಿ ʼಮಾತಾಡುವುದೆ ಅನಿವಾರ್ಯ ಕರ್ಮ ನನಗೆʼ ಎನ್ನುವಂತೆ ಅವರ ವಾಕ್ಪ್ರವಾಹ ಅಡೆತಡೆ ಇಲ್ಲದಂತೆ ಹರಿಯುತ್ತಿತ್ತು. ನಮಗೋ ಸದಾ ತಲೆ ನಡುಗಿಸುತ್ತಿದ್ದ ನೂರರ ಸಮೀಪದ ಮುತ್ತಜ್ಜಿ ತಮ್ಮ ತಾತನ ಬಾಲಲೀಲೆಗಳನ್ನು ಹೇಳುವಾಗ ನಗುವನ್ನೇ ತಡೆಯಲಾಗುತ್ತಿರಲಿಲ್ಲ.
ಕೇವಲ ಈ ರೀತಿಯ ಕಪೋಲ ಕಲ್ಪಿತವೇನೋ ಎನಿಸುವಂಥಾ ಆಕರ್ಷಕ ಕಥಾನಕಗಳಷ್ಟೇ ಅಲ್ಲ. ಅವರ ಅಮೂಲ್ಯ ಅನುಭವಗಳು, ಮನೆಮದ್ದುಗಳು ಎಷ್ಟೊವೇಳೆ ಉಪಯುಕ್ತವೂ ಆಗಿರುತ್ತಿದ್ದವು. ಈಗೆಲ್ಲಾ ನ್ಯೂಕ್ಲಿಯರ್ ಫ್ಯಾಮಿಲಿಗಳೇ ಹೆಚ್ಚಾಗಿ ಮಕ್ಕಳಿಗೆ ಅಜ್ಜಿ-ಅಜ್ಜನ ಸಾಂಗತ್ಯವೇ ಇಲ್ಲದಂತಾಗಿದೆ. ಅದರಲ್ಲೂ ಅತ್ತಿತ್ತ ಕತ್ತನೂ ಹೊರಳಿಸಲಾಗದಂತೆ ಕಾರ್ಯತತ್ಪರರಾದ ಯುವಜನತೆಗೆ ನೆಟ್ಟ ದೃಷ್ಟಿಗೆ ದಕ್ಕುವಷ್ಟೇ ಇಹಬಂಧೀ ತಾಂತ್ರಿಕತೆಯಾಗಿ ನೆನಪುಗಳೂ ಯಾಂತ್ರಿಕವಾಗುತ್ತಿವೆ. ನಮ್ಮ ನೆನಪುಗಳ ವ್ಯಾಪ್ತಿ ಎಷ್ಟೆಷ್ಟೋ ಗತಜನ್ಮದ ಸ್ಮೃತಿಗಳ ಹಂದರವಾದರೂ ಅರಿವಿಲ್ಲದೇ ಇಷ್ಟೇ ಬದುಕೆಂಬಂತೆ ಇಲ್ಲಿಗೇ ಅಂಟಿ ಹೊರಳುವ ಹುಳುವಾಗಿರುವ ನಮಗೆ ಪೂರ್ವ ಸ್ಮರಣೆಯದೇ ಅಭಾವವಾಗಿದೆ.
ಹಿಂದೆ ಹಿಂದೆ ಸಾಗುತ್ತಾ ಓಡಲಾರಂಭಿಸಿದ ಈ ಓಟ ಎತ್ತೆತ್ತಲೋ ಎಲ್ಲೆಲ್ಲೋ ನಮ್ಮನ್ನು ಕೊಂಡೊಯ್ಯಲಾರಂಭಿಸಿದೆ. 'ಎಷ್ಟಾದರೂ ಓಡಲಿ, ಕಾಸು ಖರ್ಚಿಲ್ಲದ ಓಟ,' ಎಂದು ಸುಮ್ಮನಿದ್ದುಬಿಡಲಾಗುವುದೇ? ಮುಂದಿನ ಮಹೋನ್ನತದತ್ತ ಅದನ್ನು ಕೇಂದ್ರೀಕರಿಸಿದರೆ ಹೇಗೋ ʼಇಹಕ್ಕೆ ಸುಖ, ಪರಕ್ಕೆ ಗತಿʼ ಅಂದುಕೊಳ್ಳೊಣವೇ?
~ಪ್ರಭಾಮಣಿ ನಾಗರಾಜ