Monday, May 28, 2012

ಮನದ ಅಂಗಳದಿ.........೯೪. ವಿವೇಚನೆ


ಪ್ರವಾಹದಲ್ಲಿ ತೇಲುತ್ತಿರುವ ಮರದ ದಿಮ್ಮಿಯು ಗುರಿ ರಹಿತವಾಗಿ ನೀರು ಹರಿಯುವ ದಿಕ್ಕಿನಲ್ಲಿಯೇ ಸಾಗುತ್ತಿರುತ್ತದೆ. ಅದಕ್ಕೆ ತನ್ನ ಗುರಿ ಯಾವುದು ಎನ್ನುವುದಾಗಲೀ, ಅಥವಾ ತಾನು ತಲುಪಬೇಕಾದ ಸ್ಥಳ ಯಾವುದು ಎನ್ನುವುದಾಗೀ ತಿಳಿದಿರುವುದಿಲ್ಲ.  ನೀರಿನೊಂದಿಗೆ ಸಾಗುತ್ತಾ ಕೆಲವೊಮ್ಮೆ ಬಂಡೆಗಳಿಗೆ ಡಿಕ್ಕಿ ಹೊಡೆಯುತ್ತದೆ, ನೀರಿನಲ್ಲಿರುವ ಪೊದೆಗಳೊಳಗೆ ಸಿಲುಕಿಕೊಳ್ಳುತ್ತದೆ. ಅದೇ ದಿಮ್ಮಿಯನ್ನು ಒಂದು ದೋಣಿಯನ್ನಾಗಿ ಮಾಡಿ ಅದರೊಳಗೆ ಒಬ್ಬಾತ ಕುಳಿತು ಹುಟ್ಟನ್ನು ಹಾಕಲಾರಂಭಿಸಿದರೆ ಅದನ್ನು ಬೇಕಾದ ಸ್ಥಳಕ್ಕೆ ಕೊಂಡೊಯ್ಯಬಹುದು. ಹಾಗೆಯೇ ಒಂದು ಗುಂಪಿನಲ್ಲಿ ಸಿಲುಕಿರುವ ಮನುಷ್ಯರ ಸ್ಥಿತಿಯೂ ಅದೇ ಆಗಿರುತ್ತದೆ. ಗುಂಪು ಸಾಗಿದ ಕಡೆಗೆ ಅವರೂ ಸಾಗುತ್ತಾರೆ. ಗತಾನು ಗತಿಕೋ ಲೋಕಃ!' ಅವರಲ್ಲಿ ಸ್ವವಿವೇಚನಾಶಕ್ತಿಯೇ ಇರುವುದಿಲ್ಲ. ಯಾವುದಾದರೊಂದು ಮುಷ್ಕರ ನಡೆಯುತ್ತಿರುವ ಸಮೂಹವನ್ನು, ‘ಏತಕ್ಕಾಗಿ ಈ ಮುಷ್ಕರ ಮಾಡುತ್ತಿದ್ದೀರಿ?' ಎಂದು ಕೇಳಿದರೆ ಸ್ಪಷ್ಟ ಉತ್ತರ ಸಿಗುವುದು ವಿರಳ. ಬಹುತೇಕ ವಿದ್ಯಾರ್ಥಿಗಳ ಮುಷ್ಕರದಲ್ಲಿ, ‘ಅವರು ಕರೆದರು, ನಾವು ಬಂದೆವು,' ಎನ್ನುವ ಮನಃಸ್ಥಿತಿಯವರೇ ಹೆಚ್ಚಾಗಿರುತ್ತಾರೆ. ಅವರಿಗೆ ಮಾರ್ಗದರ್ಶನ ನೀಡುವವರು ಯಾರು? ಪ್ರತಿಯೊಬ್ಬರಿಗೂ ತಮ್ಮದೇ ಆದ ಸ್ವಂತ ವ್ಯಕ್ತಿತ್ವವಿರುತ್ತದೆ. ತಮ್ಮದೇ ಆದ ಆಲೋಚನಾ ಸರಣಿಯಿರುತ್ತದೆ. ಅವರಿಗೆ ತಾವು ಒಂದು ಮರದ ದಿಮ್ಮಿಯಲ್ಲ. ಸರ್ವಶಕ್ತ ಅಥವಾ ಪ್ರಕೃತಿಯು ಸುಂದರವಾಗಿ ನಿರ್ಮಿಸಿರುವ ದೋಣಿ ಎನ್ನುವುದನ್ನು ಮನವರಿಕೆ ಮಾಡಿಕೊಡಬೇಕು.
    ಮನುಷ್ಯನು ಸ್ವವಿವೇಚನಾ ಶಕ್ತಿ ಎಂಬ ವರದಾನವನ್ನು ಹೊಂದಿದ್ದಾನೆ. ಅದು ಅವನ ಕಿವಿಯಲ್ಲಿ ಯಾವುದು ಸತ್ಯ, ಯಾವುದು ಅಸತ್ಯ, ಯಾವುದು ಸರಿ ಮತ್ತು ಯಾವುದು ತಪ್ಪು ಎನ್ನುವುದನ್ನು ಉಸುರುತ್ತಿರುತ್ತದೆ. ನಮ್ಮ ಯುವಜನತೆಯು ಈ ಸ್ವವಿವೇಚನಾ ಶಕ್ತಿಯನ್ನು ಉಪಯೋಗಿಸಿಕೊಂಡರೆ ಗುರಿಯಿಲ್ಲದವರಂತೆ ಯಾವುದೋ ಗುಂಪಿನಲ್ಲಿ ಒಂದು ಭಾಗವಾಗಿ ಸೇರಿಹೋಗುವುದಿಲ್ಲ. ಮೌಢ್ಯದಿಂದ ಕುರಿಗಳಂತೆ ವರ್ತಿಸುವುದಿಲ್ಲ.'
ಪ್ರತ್ಯೋಗಿತಾ ದರ್ಪಣ್' ಎನ್ನುವ ಸ್ಪಧಾತ್ಮಕ ಪರೀಕ್ಷೆಯ ಅಭ್ಯರ್ಥಿಗಳಿಗೆ ಮಾರ್ಗದರ್ಶಕವಾದ ಮಾಸಿಕ ಪತ್ರಿಕೆಯೊಂದರ ಸಂಪಾದಕೀಯ ಲೇಖನದಲ್ಲಿ ವಿವೇಚನೆ (Discrimination)'ಯ ಬಗ್ಗೆ ಬಹಳ ಚೆನ್ನಾಗಿ ತಿಳಿಸಿದ್ದಾರೆ.
 ನಾನು ಪ್ರೌಢಶಾಲೆಯಲ್ಲಿ ಓದಿದ್ದ ಒಂದು ಸಂಸ್ಕ್ರತದ ಶ್ಲೋಕ ಇನ್ನೂ ಆಗಾಗ ನೆನಪಾಗುತ್ತಿರುತ್ತದೆ:
ಹಂಸ ಶ್ವೇತಃ ಬಕಃ ಶ್ವೇತಃ
ಕೋ ಭೇದೋ ಬಕಹಂಸಯೋಃ|
ನೀರಕ್ಷೀರ ವಿವೇಕೇನ
ಹಂಸೋ ಹಂಸಃ ಬಕೋ ಬಕಃ||'
ಅದರ ತಾತ್ಪರ್ಯ ಹೀಗಿದೆ:
ಹಂಸ ಮತ್ತು ಬಕ(ಕೊಕ್ಕರೆ)ಗಳೆರಡೂ ಬೆಳ್ಳಗಿರುತ್ತವೆ. ಅವುಗಳಲ್ಲಿ ಯಾವುದೇ ವ್ಯತ್ಯಾಸವೂ ಕಂಡುಬರುವುದಿಲ್ಲ. ಆದರೆ ನೀರು ಮತ್ತು ಹಾಲನ್ನು ಬೇರ್ಪಡಿಸುವಲ್ಲಿ ಹಂಸವು ಹಂಸವೇ ಆಗಿರುತ್ತದೆ. ಕೊಕ್ಕರೆಯು ಕೊಕ್ಕರೆಯು ಕೊಕ್ಕರೆಯೇ ಆಗಿರುತ್ತದೆ.
    ಇದಕ್ಕೆ ವಿವರಣೆಯನ್ನು ನಮ್ಮ ಸಂಸ್ಕ್ರತ ಶಿಕ್ಷಕರು ಹೀಗೆ ಹೇಳಿದ್ದರು: ಹಂಸಕ್ಕೆ ಹಾಲನ್ನು ಕುಡಿಯಲು ಇಟ್ಟಾಗ, ಅದು ಹಾಲಿನಲ್ಲಿ ಕೊಕ್ಕನ್ನು ಅದ್ದಿದಾಕ್ಷಣವೇ ಹಾಲಿನಲ್ಲಿರುವ ಗಟ್ಟಿ ಅಂಶ ಮತ್ತು ನೀರು ಬೇರೆಬೇರೆಯಾಗುತ್ತದೆ. ಹಂಸವು ಹಾಲನ್ನು ಮಾತ್ರ ತಿನ್ನುತ್ತದೆ. ಕೊಕ್ಕರೆಗೆ ಈ ರೀತಿ ಬೇರ್ಪಡಿಸಲಾಗುವುದಿಲ್ಲ. ಇದನ್ನೇ ಹಂಸಕ್ಷೀರನ್ಯಾಯ'ಎನ್ನುತ್ತಾರೆ. ಆದ್ದರಿಂದ ಒಳಿತು ಕೆಡಕುಗಳು ಒಟ್ಟಾಗಿ ಎದುರಾದಾಗ ನಾವು ಹಂಸ ಪಕ್ಷಿಯಂತೆ ಒಳಿತನ್ನು ಮಾತ್ರ ಸ್ವೀಕರಿಸಿ ಕೆಡುಕನ್ನು ದೂರ ತಳ್ಳಬೇಕು.
    ಸಾಮಾನ್ಯವಾಗಿ ಪ್ರಾಣಿಗಳು ನೀರನ್ನು ಕುಡಿಯಲು ಕೆರೆಗೆ ಇಳಿದಾಗ, ಕಾಲಿನಿಂದ ನೆಲದ ಕೆಸರನ್ನು ತುಳಿದು ರಾಡಿಗೊಳಿಸಿ, ಮೊದಲು ತಿಳಿಯಾಗಿದ್ದ ನೀರನ್ನೂ ರಾಡಿ ಮಾಡಿಕೊಂಡು ಕುಡಿಯುತ್ತವೆ.
    ನಮ್ಮ ಯುವ ಜನತೆಯು ಹಂಸಕ್ಷೀರನ್ಯಾಯ'ದಂತೆ ವರ್ತಿಸುವುದನ್ನು ಕಲಿಯಬೇಕು. ನೀರನ್ನು ರಾಡಿ ಮಾಡಿಕೊಂಡು ಕುಡಿಯುವ ಪ್ರಾಣಿಗಳಂತೆ ಅಲ್ಲ.
    ಸ್ವಾಮಿ ವಿವೇಕಾನಂದರು, `ವಿವೇಚನೆಯು ಮನುಷ್ಯನಿಗೆ ವರದಾನವಾಗಿ ದೊರೆತಿರುವ ಅತ್ಯಂತ ಪ್ರಭಲವಾದ ಅಸ್ತ್ರ,' ಎಂದು ಹೇಳಿದ್ದಾರೆ. ಯಾರು ವಿವೇಚನೆಯನ್ನು ಸರಿಯಾದ ರೀತಿಯಲ್ಲಿ, ಸರಿಯಾದ ಸಮಯದಲ್ಲಿ ಬಳಸಿಕೊಳ್ಳುವುದಿಲ್ಲವೋ ಅವರದ್ದೂ ಪಂಚತಂತ್ರ'ದ ಸಿಂಹರಾಜನ ಗತಿಯಾಗುತ್ತದೆ. ಬಹಳ ಬಳಕೆಯಲ್ಲಿದ್ದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಈ ಕಥೆಯಲ್ಲಿ ಒಂದು ಚಿಕ್ಕ ಮೊಲವು ಕಾಡಿನ ರಾಜ ಸಿಂಹನನ್ನು ಬಾವಿಗೆ ನೆಗೆಯುವಂತೆ ಮಾಡುತ್ತದೆ. ಮೊಲದಂತಹ ಬುದ್ಧಿಯ ನಮ್ಮ ನಾಯಕರು ಸಿಂಹದಂತೆ ಅಗಾಧವಾದ ಶಕ್ತಿಯನ್ನು ಅಂತರ್ಗತವಾಗಿ ಹೊಂದಿರುವ ನಮ್ಮ ಯುವಜನತೆಯನ್ನು ಹಾದಿತಪ್ಪಿಸುತ್ತಿದ್ದಾರೆ. ಈ ನಮ್ಮ ಸಮಾಜವನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯಬಲ್ಲ ನಾಯಕರು ಯಾರು?'
    ಅಧಿಕಾರ ವರ್ಗಕ್ಕೆ ಆಯ್ಕೆಯಾಗುವ (ಐ.ಎ.ಎಸ್., ಐ.ಪಿ.ಎಸ್. ಮುಂತಾದವು) ಅಭ್ಯರ್ಥಿಗಳಿಗೆ ನೀಡಿರುವ ಮಾರ್ಗದರ್ಶನ ಸಕಾಲಿಕವಾಗಿದೆ:
  ನೀವು ನಿಯಮ ಬಾಹಿರವಾಗಿದ್ದು ನಾಯಕತ್ವಕ್ಕೆ ಒಳಪಡದ (unruled), ಗೊಂದಲಮಯವಾಗಿರುವ  ಗುಂಪುಗಳನ್ನು ಒಂದಲ್ಲಾ ಒಂದು ಸಂದರ್ಭದಲ್ಲಿ ಎದುರಿಸಿ ನಿಯಂತ್ರಿಸಬೇಕಾಗುತ್ತದೆ. ಅ೦ಥಾ ಸಂದರ್ಭಗಳಲ್ಲಿ ನೀವು ನಿಮ್ಮ ವಿವೇಚನಾ ಶಕ್ತಿಯನ್ನು ಬಳಸಿಕೊಳ್ಳಬೇಕಾಗುತ್ತದೆ. ಸೂಕ್ತವಾದ ವಿವೇಚನಾಶಕ್ತಿಯನ್ನು ಬಳಸದಿದ್ದರೆ ನೀವು ನಿಮ್ಮ ಅಧಿಕಾರ ಸ್ಥಾನಕ್ಕೇ ಅನರ್ಹರಾಗುತ್ತೀರಿ. ಆದ್ದರಿಂದ ಬಹಳ ಮುಖ್ಯವಾದ ಸಂಗತಿಯೆಂದರೆ ಅಂಥಾ ಗುಂಪನ್ನು ನಿಯಂತ್ರಿಸಬೇಕಾದರೆ ನೀವು ಆ ಗುಂಪಿ ಭಾಗವಾಗಿ ವರ್ತಿಸದೇ ಭಯಂಕರವಾಗಿ ಅಲೆಗಳೆಬ್ಬಿಸುತ್ತಿರುವ ಸಾಗರದ ನಡುವಿನಲ್ಲಿ ಸಿಲುಕಿರುವ ಹಡಗನ್ನು ನಿಯಂತ್ರಿಸುವ ಕ್ಯಾಪ್ಟನ್‌ನಂತೆ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ.
    ನೀವೆಲ್ಲರೂ ಸ್ವವಿವೇಚನಾಶಕ್ತಿಯಿಂದ ಆಶೀರ್ವದಿಸಲ್ಪಟ್ಟಿದ್ದೀರಿ. ಸಂದರ್ಭಗಳಲ್ಲಿ ಅದನ್ನು ಕಾರ್ಯರೂಪಕ್ಕೆ ತರುವುದನ್ನು ರೂಢಿಸಿಕೊಳ್ಳಬೇಕು. ಅದಕ್ಕಾಗಿ ನಿಮ್ಮಲ್ಲೇ ಒಂದು ನೀಲನಕಾಶೆಯನ್ನು (blue print) ಸಿದ್ಧಪಡಿಸಿಕೊಳ್ಳಬೇಕು. ನಿಮ್ಮ ವೃತ್ತಿಯನ್ನು ಸಾರ್ವಜನಿಕ ಸೇವೆಗಳು' ಎಂದಿದ್ದಾರೆ ಎನ್ನುವುದನ್ನು ನೀವು ಮರೆಯಬಾರದು. ನೀವು ನಿಮ್ಮ ವೃತ್ತಿಯ ಸಾರ್ಥಕ್ಯವನ್ನು ಕಾಣಬೇಕಾದರೆ ಜನತೆಯ ಒಳಿತಿಗಾಗಿ ನಿಮ್ಮ ಸಂಪೂರ್ಣ ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಂಡು ಕಾರ್ಯ ನಿರ್ವಹಿಸಬೇಕು.....'
      ಇದು ಅಧಿಕಾರ ವರ್ಗಕ್ಕಷ್ಟೇ ಅಲ್ಲ. ಮಾನವತೆಗೇ ಒಂದು ಸಂದೇಶವಾಗಿದೆ. ಮಾನವರಾಗಿ ಈ ಭೂಮಿಯ ಮೇಲೆ ಜನ್ಮ ತಳೆದ ನಾವು ಮಾನವೀಯತೆಗಾಗಿ ನಮ್ಮ ಸೇವೆಯನ್ನು ನಿರ್ವಹಿಸುವುದು ಅಗತ್ಯವಾಗಿದೆ.

3 comments:

 1. ಮನಷ್ಯನ ಬದುಕಿನಲ್ಲಿ ವಿವೇಚನೆ ಬಹಳ ಮುಖ್ಯ ಎನ್ನುವುದನ್ನು ತುಂಬಾ ಚೆನ್ನಾಗಿ ತಿಳಿಸುವ ಲೇಖನ.ಧನ್ಯವಾದಗಳು ಮೇಡಂ.ನಮಸ್ಕಾರ.

  ReplyDelete
 2. ವಿವೇಚನೆಯ ಬಗೆಗೆಗಿನ ಈ ಲೇಖನ ಎಲ್ಲಾ ವರ್ಗದ ಜನಾಂಗಕ್ಕೂ ಅನ್ವಯವಾಗುವ ಮಾನವೀಯ ಕಟ್ಟುಪಾಡು.

  ಮತ್ತೊಂದು ಒಳ್ಳೆಯ ಲೇಖನಕ್ಕಾಗಿ ಧನ್ಯವಾಗಳು.

  ReplyDelete
 3. vivechaneya praamukhyateyannu kuritaada lekhanakkaagi dhanyavaadagalu prabhaamaniyavare.

  ReplyDelete