Monday, June 11, 2012

ಮನದ ಅಂಗಳದಿ.........೯೬. ‘ಸಾವು’ಎಂಬ ಅಮರತ್ವ

ಹದಿಮೂರು ವರ್ಷಗಳಿಂದ ನಮ್ಮ ಒಡನಾಡಿಯಾಗಿದ್ದು ಚುರುಕಾಗಿಯೇ ಇದ್ದ ಜಿಮ್ಮಿಇದ್ದಕ್ಕಿದ್ದಂತೆಯೇ ಆಹಾರ-ನೀರನ್ನು ಬಿಟ್ಟು ಅನಾರೋಗ್ಯಪೀಡಿತವಾದಾಗ ಮನೆಯಲ್ಲಿ ಎಲ್ಲರಿರೂ ಚಿಂತಿಸುವಂತಾಯಿತು. ದಿನದಿಂದ ದಿನಕ್ಕೆ  ದುರ್ಬಲವಾಗುತ್ತಿದ್ದ ಜಿಮ್ಮಿಗೆ ಗ್ಲೂಕೋಸ್ ಡ್ರಿಪ್ ಹಾಕಿಸಿ ಚಿಕಿತ್ಸೆ ಕೊಡಿಸಲಾರಂಭಿಸಿದರೂ ಫಲಕಾರಿಯಾಗಲಿಲ್ಲ. ಈಗಾಗಲೇ ಪೂರ್ಣಾಯಸ್ಸು ಕ್ರಮಿಸಿರುವುದರಿಂದ ಅದರ ಬದುಕಿನ ಬಗ್ಗೆ ಯಾವುದೇ ಆಶಾ ಭಾವನೆಯನ್ನೂ ವೈದ್ಯರು ನೀಡಲಿಲ್ಲ. ಸುಮಾರು ಹದಿನೈದು ದಿನಗಳು ಮರಣಶಯ್ಯೆಯಲ್ಲಿದ್ದ ಜಿಮ್ಮಿಯನ್ನು ನೋಡಿದಾಗಲೆಲ್ಲಾ ನನ್ನ ಮನಸ್ಸಿನಲ್ಲಿ ಸಾವಿನ ಕುರಿತಾದ ಆಲೋಚನೆಗಳೇ ಬರಲಾರಂಭಿಸಿದವು. ಚಿಕ್ಕಂದಿನಲ್ಲಿ ಸಾವು ಎಂದರೆ ಏನೋ ಭಯ. ನಂತರದ ದಿನಗಳಲ್ಲಿ ಒಂದು ರೀತಿಯ ನಿಗೂಢತೆ. ಈ ಬಗ್ಗೆ ಜಿಡ್ಡು ಕೃಷ್ಣಮೂರ್ತಿಯವರ ಚಿಂತನೆಯ ಆಯ್ದ ಭಾಗಗಳು ಹೀಗಿದೆ:
    ಸಾವುಎಂದರೆ ನಮಗೆ ಭಯ. ಸಾವಿನ ಭಯ ಕೊನೆಗಾಣಬೇಕಾದರೆ ನಮಗೆ ಸಾವಿನ ಸಂಪರ್ಕ ಬರಬೇಕು. ಅಂದರೆ ನಮ್ಮ ಆಲೋಚನೆಗಳು ಸಾವನ್ನು ಕುರಿತು ಮೂಡಿಸಿಕೊಂಡಿರುವ ಕಲ್ಪನೆಗಳನ್ನೋ, ಚಿತ್ರಗಳನ್ನೋ ಅಲ್ಲ. ಸಾವಿನ ಸ್ಥಿತಿಯನ್ನು ನಾವು ನಿಜವಾಗಿ ಅನುಭವಿಸಬೇಕು. ಇಲ್ಲದಿದ್ದರೆ ಸಾವಿನ ಭಯ ಕೊನೆಗೊಳ್ಳುವುದೇ ಇಲ್ಲ. ಸಾವು ಎಂಬ ಪದವೇ ನಮ್ಮಲ್ಲಿ ಭಯವನ್ನು ಮೂಡಿಸುತ್ತಿರುತ್ತದೆ. ಸಾವಿನ ಬಗ್ಗೆ ಮಾತನಾಡುವುದಕ್ಕೂ ನಮಗೆ ಇಷ್ಟವಿರುವುದಿಲ್ಲ. ಆರೋಗ್ಯವಂತರಾಗಿ, ಸ್ವಸ್ಥವಾಗಿ, ಸ್ಪಷ್ಟ ಆಲೋಚನೆಯ ಸಾಮರ್ಥ್ಯವಿಟ್ಟುಕೊಂಡು, ವಸ್ತಿನಿಷ್ಟವಾಗಿ ಆಲೋಚಿಸುತ್ತಾ, ಪರಿಶೀಲಿಸುತ್ತಾ, ಸಾವು ಎಂಬ ವಾಸ್ತವದ ಸಂಪರ್ಕವನ್ನು ಪಡೆಯುವುದಕ್ಕೆ ಸಾಧ್ಯವೇ? ಈ ಶರೀರ ಬಳಸಿ, ಬಳಸಿ ಅಥವಾ ರೋಗದ ಕಾರಣದಿಂದ ಸಾಯುತ್ತದೆ. ನಾವು ಆರೋಗ್ಯವಂತರೂ ಸ್ವಸ್ಥರೂ ಆಗಿದ್ದರೆ ಸಾವು ಎಂದರೇನೆಂದು ತಿಳಿದುಕೊಳ್ಳಲು ಬಯಸುತ್ತೇವೆ. ಇದು ವಿಕೃತ ಆಸೆಯಲ್ಲ. ಬಹುಷಃ ನಾವು ಸಾವಿನ ಮೂಲಕವೇ ಬದುಕನ್ನು ಅರ್ಥಮಾಡಿಕೊಳ್ಳುತ್ತೇವೆ. ಈಗಿರುವಂತೆ ಬದುಕೆಂದರೆ ಹಿಂಸೆ, ಕೊನೆಯಿಲ್ಲದ ತಳಮಳ, ವೈರುಧ್ಯಗಳ ಸಂತೆ. ಆದ್ದರಿಂದಲೇ ಬದುಕಿನಲ್ಲಿ ಸಂಘರ್ಷವಿದೆ, ಕಾರ್ಪಣ್ಯವಿದೆ, ಗೊಂದಲವಿದೆ. ದಿನವೂ ಆಫೀಸಿಗೆ ಹೋಗುವುದು, ಬರುವುದು; ನೋವು ತುಂಬಿದ ಸುಖಗಳ ಪುನರಾವರ್ತನೆ, ಕಳವಳ, ಹುಡುಕಾಟ,ಅನಿಶ್ಚಿತತೆ-ಇವನ್ನೆಲ್ಲಾ ನಾವು ಬದುಕು ಎಂದು ಕರೆಯುತ್ತೇವೆ. ಈ ರೀತಿಯ ಬದುಕು ನಮಗೆ ಅಭ್ಯಾಸವಾಗಿಬಿಟ್ಟಿದೆ. ಅದಕ್ಕೆ ಹೊಂದಿಕೊಂಡುಬಿಟ್ಟಿದ್ದೇವೆ..... ಹೀಗೆಯೇ ಬದುಕುತ್ತಾ ವಯಸ್ಸಾಗಿ ಸಾಯುತ್ತೇವೆ.
     ಬದುಕುವುದು ಎಂದರೇನು ಎಂದು ತಿಳಿಯಲು ಸಾವು ಎಂದರೇನು ಎಂದು ತಿಳಿಯಬೇಕು, ಸಾವಿನ ಸಂಪರ್ಕ  ಪಡೆಯಬೇಕು. ಅಂದರೆ ನಮಗೆ ಏನೇನು ಗೊತ್ತಿದೆಯೋ ಅದೆಲ್ಲಾ ಪ್ರತಿದಿನ ಸತ್ತುಹೋಗುತ್ತಿರಬೇಕು. ಗೊತ್ತಿರುವುದಲ್ಲದರ ಸಾವು ಸಂಭವಿಸಬೇಕು. ನಮ್ಮ ಬಗ್ಗೆ ನಾವೇ ಮೂಡಿಸಿಕೊಂಡಿರುವ ಬಿಂಬ ಸಾಯಬೇಕು. ನಮ್ಮ ಕುಟುಂಬದ ಬಗ್ಗೆ, ನಮ್ಮ ಸಂಬಂಧಗಳ ಬಗ್ಗೆ ನಾವು ಮೂಡಿಸಿಕೊಂಡಿರುವ ಬಿಂಬಗಳು ಸಾಯಬೇಕು. ನಾವು ಪಡೆದ ಸುಖಗಳ ಬಿಂಬ, ಸಮಾಜದೊಡನೆ ನಮಗೆ ಇರುವ ಸಂಬಂಧವವನ್ನು ಕುರಿತ ಬಿಂಬ ಎಲ್ಲವೂ ಸಾಯಬೇಕು. ದಿನವೂ ಸಾಯಬೇಕು. ಏಕೆಂದರೆ ಸಾವು ಸಂಭವಿಸಿದಾಗ ಆಗುವುದು ಇದೇ.

ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಕ್ಷಣ ನವೀನ ಜನನ
ನಮಗದೇಕೆ ಬಾರದೋ?’ 
     ಎನ್ನುವ ವರಕವಿ ಬೇಂದ್ರೆಯವರ ನುಡಿಯನ್ನು ಪುಷ್ಟೀಕರಿಸುವಂತಿದೆ ಜೆ.ಕೃಷ್ಣಮೂರ್ತಿಗಳ ಈ ಸಾಲುಗಳು:
     `........ದುಃಖ ಕೊನೆಗೊಳ್ಳಬೇಕಾದರೆ ಬದುಕಿರುವಾಗಲೇ ಸಾವನ್ನು ಸಂಧಿಸಬೇಕು. ನಿಮ್ಮ ಹೆಸರು, ನಿಮ್ಮ ಮನೆ, ನಿಮ್ಮ ಆಸ್ತಿ, .......ಎಲ್ಲದರ ಪಾಲಿಗೂ ದಿನದಿನವೂ ಸತ್ತು, ಇರುವುದೆಲ್ಲ ಇರುವಂತೆಯೇ ಯಾವ ವಿಕೃತಿಯೂ ಇರದೆ ಫ್ರೆಶ್ ಆಗಿ, ಸ್ಪಷ್ಟವಾಗಿ ಕಾಣುವಂತೆ ಯೌವನಭರಿತರಾಗಿ ಹುಟ್ಟುತ್ತಿರಬೇಕು. ಆದರೆ ನಾವು ಸಾವನ್ನು ಕೇವಲ ಭೌತಿಕವಾದದ್ದು ಎಂದು ಸೀಮಿತಗೊಳಿಸಿಕೊಂಡು ಬಿಟ್ಟಿದ್ದೇವೆ. ಈ ಶರೀರ ಕೊನೆಗಾಣುವುದು ಖಚಿತ ಎಂದು ತಾರ್ಕಿಕವಾಗಿ, ಸ್ವಸ್ಥವಾಗಿ ತಿಳಿದುಕೊಂಡಿದ್ದೇವೆ. ಆದರೂ ನಮಗೆ ನಮ್ಮ ಬದುಕು ಮುಂದುವರೆಯಬೇಕೆಂಬ ಆಸೆ......        
     .......ದಿನದಿನವೂ ಸಾಯುವ ಮೂಲಕವೇ ಹೊಸತಾಗುವುದಕ್ಕೆ, ಮರುಹುಟ್ಟು ಪಡೆಯುವುದಕ್ಕೆ ಸಾಧ್ಯ. ಅದು ಅಮರತ್ವ. ಸಾವಿನಲ್ಲಿ ಅಮರತ್ವವಿದೆ. ಇದು ನೀವು ಭಯಪಡುವ ಸಾವು ಅಲ್ಲ. ಪೂರ್ವ ತೀರ್ಮಾನಗಳು, ನೆನಪುಗಳು, ಅನುಭವಗಳು, ‘ನನ್ನದು? ಎಂದು ಏನೇನನ್ನು ಗುರುತಿಸಿದ್ದೀರೋ ಅವೆಲ್ಲವುಗಳ ಸಾವು. ನಾನು ಮತ್ತು ನನ್ನದು ಪ್ರತಿನಿಮಿಷವೂ ಸಾಯುತ್ತಿರುವಾಗ ಅನಂತತೆ ಇರುತ್ತದೆ, ಅಮರತ್ವವಿರುತ್ತದೆ.
     ಮಕ್ಕಳು ಪ್ರಾಥಮಿಕ ಶಾಲೆಯಲ್ಲಿದ್ದಾಗ ನಮ್ಮ ಮನೆ ಸೇರಿದ್ದ ಜಿಮ್ಮಿ ಅವರ ಬಾಲ್ಯದೊಂದಿಗೇ ತನ್ನ ಬಾಲ್ಯವನ್ನೂ ಪ್ರಾರಂಭಿಸಿ, ಅವರ ಕಾಲೇಜು ಶಿಕ್ಷಣ ಮುಗಿಯುವ ವೇಳೆಗೆ ವೃದ್ಧಾಪ್ಯವನ್ನೂ ತಲುಪಿ ತನ್ನ ಜೀವನ ಯಾತ್ರೆಯನ್ನೇ ಮುಗಿಸಿತು. ಮೂಲತಃ ಅತ್ಯಂತ ಧೈರ್ಯಶಾಲಿಯಾಗಿದ್ದ ಜಿಮ್ಮಿ ಅನೇಕ ಆಪತ್ತುಗಳಿಂದ ನಮ್ಮನ್ನು ರಕ್ಷಿಸಿತ್ತು. ಅದರ ಅಸ್ತಿತ್ವವೇ ನಮಗೆ ಧೈರ್ಯವಾಗಿತ್ತು. ಜಿಮ್ಮಿಯ ಅಂತಿಮ ಕ್ಷಣಗಳು, ಮಕ್ಕಳಲ್ಲಿರುವ ಸೇವಾ ತತ್ಪರತೆ, ಪ್ರೀತಿ, ಕರುಣೆ, ತಾದ್ಯಾತ್ಮದಂತಹ ಧನಾತ್ಮಕ ಭಾವಗಳನ್ನು ನನಗೆ ಗೋಚರಿಸುವಂತೆ ಮಾಡಿತು.   
         

14 comments:

  1. ,ಎಲ್ಲರ ಮನಗೆದ್ದ ಜಿಮ್ಮಿಗೊಂದು ಸಲಾಂ, ಕೆಲವೊಮ್ಮೆ ಮನುಷ್ಯರಿಗಿಂತಾ ಸಾಕು ಪ್ರಾಣಿಗಳೇ ನಿಷ್ಠೆಯಿಂದ ಇದ್ದು ಎಲ್ಲರ ಮನಗೆಲ್ಲುತ್ತವೆ. ಲೇಖನ ಚೆನ್ನಾಗಿ ಮೂಡಿಬಂದಿದೆ. ನಿಮಗೆ ಜೈ ಹೋ.ಮೇಡಂ.
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
    Replies
    1. ಬಹಳ ದಿನಗಳ ನ೦ತರ ನನ್ನ ಬ್ಲಾಗ್ ಗೆ ಬ೦ದಿದ್ದೀರಿ, ನಿಮಗೆ ಸ್ವಾಗತ ಬಾಲುರವರೇ, ನಿಮ್ಮ ಮಾತು ನಿಜ.ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್. ಬರುತ್ತಿರಿ.

      Delete
  2. ಚೆನ್ನಾಗಿ ಮೂಡಿಬಂದಿದೆ

    ReplyDelete
    Replies
    1. ಪ್ರತಿಕ್ರಿಯೆಗಾಗಿ ಧನ್ಯವಾದಗಳು ಸರ್. ಬರುತ್ತಿರಿ.

      Delete
  3. ಮನೆಯ ಮುದ್ದಿನ ಸಾಕು ಪ್ರಾಣಿಗಳು ಮನೆಯ ಅವಿಭಾಜ್ಯ ಅಂಗವೇ ಆಗಿಬಿಟ್ಟಿರುತ್ತವೆ. ಅವುಗಳ ಕಣ್ಮರೆ ಮನೋ ವೇದಕ.

    ReplyDelete
  4. ಇನ್ನೂ ನಮಗೆ ಜಿಮ್ಮಿಯದೆ ನೆನಪು. ಪ್ರತಿಕ್ರಿಯೆಗಾಗಿ ಧನ್ಯವಾದಗಳು ಸರ್. ಬರುತ್ತಿರಿ.

    ReplyDelete
  5. ತುಂಬ ಹೃದಯವೇಧಕ ಚಿತ್ರಣ. ಜಿಮ್ಮಿಯ ನೆನಪು ಮಾಸಲು ಸಾಧ್ಯವಿಲ್ಲವೇನೊ?

    ReplyDelete
    Replies
    1. ಸತ್ಯವಾದ ಮಾತು ಸರ್, ಜಿಮ್ಮಿ ಇಲ್ಲೇ ಎಲ್ಲೋ ಮನೆಯ ಸುತ್ತಮುತ್ತಾ ಇರುವ೦ತೆಯೆ ಇದೆ.
      ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್. ಬರುತ್ತಿರಿ.

      Delete
  6. ಲಿಪಿ ಕನ್ನಡದಲ್ಲಿಲ್ಲ.ಕಂಪ್ಯೂಟರ್ ಲಿಪಿ ಇದೆ.ಓದಲಾಗುತ್ತಿಲ್ಲ.ಈ ಸಮಸ್ಯೆ ನನ್ನ ಕಪ್ಯೂಟರ್ ತೊಂದರೆಯಿಂದಲೇ ಎಂದು ತಿಳಿಯುತ್ತಿಲ್ಲ.ನಮಸ್ಕಾರ.

    ReplyDelete
    Replies
    1. ಬಹುಷಃ ನಿಮ್ಮ ಕ0ಪ್ಯೂಟರ್ ತೊಂದರೆಯಿಂದಲೇ ಇರಬಹುದು. ಸರಿಪಡಿಸಿದ ನ೦ತರ ಓದಿ ನಿಮ್ಮ ಅಮೂಲ್ಯವಾದ ಪ್ರತಿಕ್ರಿಯೆ ತಿಳಿಸಿ ಸರ್. ನನ್ನ ಬ್ಲಾಗ್ ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

      Delete
  7. I agree with Dr. Krishnamurthy...ಲಿಪಿ ಕನ್ನಡದಲ್ಲಿಲ್ಲ.ಕಂಪ್ಯೂಟರ್ ಲಿಪಿ ಇದೆ.ಓದಲಾಗುತ್ತಿಲ್ಲ.ಈ ಸಮಸ್ಯೆ ನನ್ನ ಕಪ್ಯೂಟರ್ ತೊಂದರೆಯಿಂದಲೇ ಎಂದು ತಿಳಿಯುತ್ತಿಲ್ಲ.

    ReplyDelete
  8. ನಿಮ್ಮಿ೦ದಲೂ ಅದೇ ಅಭಿಪ್ರಾಯ ಬ೦ದ ನ೦ತರ ಮತ್ತೊಮ್ಮೆ edit ಮಾಡಿ ಹಾಕಿದ್ದೇನೆ. ತೊ೦ದರೆಗಾಗಿ ಕ್ಷಮಿಸಿ.ಓದಿ ನಿಮ್ಮ ಅಮೂಲ್ಯವಾದ ಪ್ರತಿಕ್ರಿಯೆ ತಿಳಿಸಿ ಸರ್. ನನ್ನ ಬ್ಲಾಗ್ ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete
  9. ಈ ಲೇಖನ ಓದಿ ಮುಗಿಸಿದ ನಂತರ ಇಲ್ಲಿ ನಿಮ್ಮ ಪ್ರತಿಕ್ರಿಯೆಗಳಿಗೆ ನಿಮ್ಮ ಉತ್ತರವನ್ನು ನೋಡಿದೆ. ಅಲ್ಲೇ ವ್ಯಕ್ತವಾಯಿತು ನಿಮ್ಮ ಮನಸ್ಸು. ಜಗತ್ತನ್ನು ತುಂಬಾ ಪ್ರೀತಿಸುತ್ತೀರಿ.ದೇವರು ದೊಡ್ಡವನು.ಈ ಲೇಖನ ಮತ್ತೆಲ್ಲೋ ಮತ್ತಷ್ಟು ಮರೆಯಾದ ಜೀವಗಳನ್ನು ಕರೆದ೦ತೆನಿಸಿತು.

    ReplyDelete
  10. ದುಃಖದಾವಕವೆನಿಸಿತು..ನನಗೂ ಇ೦ತಹ ಅನುಭವವಾಗಿತ್ತು..:(

    ReplyDelete