Friday, June 29, 2012

ಮನದ ಅಂಗಳದಿ.........೯೮. ‘ಆತ್ಮ’ವೆಂದರೆ.......

      ನಮ್ಮೂರಿನಲ್ಲಿ ಯಾರಾದರೂ ಮರಣಹೊಂದಿದರೆ ಸಾಯಂಕಾಲ ನಮ್ಮ ಸೋದರತ್ತೆಯೊಬ್ಬರು ಬಾಗಿಲಿನ ಹೊಸ್ತಿಲ ಕೆಳಗೆ ಬೂದಿಯಿಂದ ರಂಗೋಲಿ ಇಡುತ್ತಿದ್ದರು. ಏಕೆಂದು ಕೇಳಿದರೆ, ಸತ್ತವರ ಆತ್ಮ ಇಲ್ಲೇ ಸುತ್ತುತ್ತಿರುತ್ತದೆ. ಅದು ಮನೆಯೊಳಗೆ ಪ್ರವೇಶಿಸಬಾರದೆಂದು ಹೀಗೆ ಮಾಡುವುದೆಂದು ಹೇಳುತ್ತಿದ್ದರು. ನಮಗೆಲ್ಲಾ ಏನೋ ಭಯ. ಆ ರೀತಿಯ ಭಯ ಇತ್ತೀಚಿನವರೆಗೂ ಕಾಡುತ್ತಿತ್ತು. ನಾನು ಸಣ್ಣವಳಿದ್ದಾಗಲೇ ಆತ್ಮದ ಬಗ್ಗೆ ಒಂದು ಶ್ಲೋಕವನ್ನೇ ಬರೆದಿದ್ದೆ! ಅದು ಯಾವುದೋ ಒಂದು ಶ್ಲೋಕದ ಧಾಟಿಯಲ್ಲಿದ್ದುದರ ನೆನಪು!
      ಆತ್ಮವನ್ನು ಸೃಷ್ಟಿ ಮಾಡಲೂ ಸಾಧ್ಯವಿಲ್ಲ, ನಾಶ ಮಾಡಲೂ ಸಾಧ್ಯವಿಲ್ಲ. ಅದು ಒಂದು ರೂಪದಿಂದ ಮತ್ತೊಂದು ರೂಪಕ್ಕೆ ಬದಲಾಗುತ್ತದೆ,’ ಎಂದು ಮುಂದೆ ಶಕ್ತಿಯ ಸಂರಕ್ಷಣಾ ನಿಯಮವನ್ನು ಓದಿದಾಗ ಒಂದು ನಿಯಮವನ್ನು ರೂಪಿಸಿಕೊಂಡಿದ್ದೆ! ಎಂದರೆ ಈ ಭೂಮಿಯ ಮೇಲಿರುವ ಎಲ್ಲಾ ಜೀವಿಗಳ (ಸಸ್ಯ ಮತ್ತು ಪ್ರಾಣಿಗಳನ್ನೊಳಗೊಂಡು) ಒಟ್ಟು ಸಂಖ್ಯೆ ಯಾವಾಗಲೂ ಸ್ಥಿರವಾಗಿರುತ್ತದೆ. ಈಗ ಇರುವೆಯಾಗಿರುವುದು ಮುಂದೆ ಮರವಾಗಬಹುದು, ನಂತರ ಯಾವುದಾದರೂ ಪ್ರಾಣಿಯಾಗಬಹುದು ಎಂದೆಲ್ಲಾ ಕಲ್ಪಿಸಿಕೊಳ್ಳುತ್ತಿದ್ದೆ! ಇದಕ್ಕೆ ನಮ್ಮತ್ತೆ ತಮ್ಮ ತಂದೆಯ ಬಗ್ಗೆ ಅಭಿಮಾನದಿಂದ ಹೇಳುತ್ತಿದ್ದ ಮಾತು, ‘ನಮ್ಮಪ್ಪ ಸತ್ತು ಸಂಪಿಗೆ ಮರವಾಗಿದಾರೆಎನ್ನುವುದು ಪುಷ್ಟಿ ನೀಡುತ್ತಿತ್ತು. ಏಕೆ ಆ ವಯಸ್ಸಿನಲ್ಲಿ ಈ ಎಲ್ಲಾ ಆಲೋಚನೆಗಳು ಬರುತ್ತಿದ್ದವೋ ತಿಳಿಯದು. ಎಲ್ಲವೂ ಮನಸ್ಸಿನಲ್ಲೇ ಮಂಡಿಗೆಯಾಗುತ್ತಿದ್ದವು. ಬಾಯಿ ತೆರೆದು ಮಾತನಾಡುತ್ತಿದ್ದುದೇ ಕಡಿಮೆ.
        ನಮ್ಮ ತಂದೆ ಹೇಳುತ್ತಿದ್ದ ಒಂದು ಕಥೆ ಆಗಾಗ ಮನಃಪಟಲದ ಮೇಲೆ ಮೂಡುತ್ತದೆ.
        ಒಮ್ಮೆ ಶಂಕರಾಚಾರ್ಯರು ತಮ್ಮ ಶಿಷ್ಯರ ಜೊತೆ ಸಂಚರಿಸುತ್ತಿದ್ದಾಗ ದಾರಿಗೆ ಅಡ್ಡವಾಗಿ ಒಬ್ಬ ಸಮಾಜವು ಕನಿಷ್ಠವರ್ಗವೆಂದು ಪರಿಗಣಿಸಿದಾತ ಎದುರಾಗುತ್ತಾನೆ. ಆಗ ಅವರು, ‘ದೂರ ಸರಿಎನ್ನುತ್ತಾರೆ. ಆತ, ‘ಅನ್ನಮಯ ಕೋಶಗಳಿಂದಾದ ಈ ನನ್ನ, ದೇಹ ನಿಮ್ಮ ಅನ್ನಮಯ ಕೋಶಗಳಿಂದಾದ  ದೇಹದಿಂದ ದೂರ ಸರಿಯಬೇಕೋ ಅಥವಾ ಚೈತನ್ಯ ರೂಪಿಯಾದ ನನ್ನ ಆತ್ಮ, ನಿಮ್ಮ ಚೈತನ್ಯ ರೂಪಿಯಾದ  ಆತ್ಮದಿಂದ ದೂರ ಸರಿಯಬೇಕೋ?’ ಎಂದು ಕೇಳುತ್ತಾನೆ. ಇದರಿಂದ ಎಚ್ಚೆತ್ತ ಆಚಾರ್ಯರು, ‘ನೀನೇ ನನ್ನ ಗುರು,’ ಎಂದು ಅವನಿಗೆ ಸಾಷ್ಟಾಂಗ ಎರಗುತ್ತಾರೆ.
         ಈ ಒಂದು ಘಟನೆಯ ಬಗ್ಗೆ ಅನೇಕ ಚರ್ಚೆಗಳಾಗಿವೆ. ಸಮರ್ಥನೆಗಳೂ ರೂಪುಗೊಂಡಿವೆ. ಏನೇ ಆಗಲೀ ಇಲ್ಲಿ ಎರಡು ಪ್ರಬುದ್ಧ ಚೇತನಗಳ ಸಮಾಗಮವನ್ನು ಕಾಣುತ್ತೇವೆ.        
         ಈ ಕಥೆ ನೆನಪಿನಲ್ಲೇ ಇರಲು ಸಮಾಂತರವಾಗಿ ನಡೆದ ಒಂದು ಘಟನೆಯ ಕಾರಣವೂ ಇದೆ. ನಾವು ನಮ್ಮ ಶಾಲಾ ರಜದ ದಿನಗಳಲ್ಲಿ ಹೆಚ್ಚು ಸಮಯವನ್ನು ನಮ್ಮ ಗದ್ದೆಯಲ್ಲಿಯೇ ಕಳೆಯುತ್ತಿದ್ದೆವು. ಸಮೀಪದ  ಹೇಮಾವತಿ ನದಿಯ ಬಳಿಗೆ ಒಮ್ಮೆ ನಾನು ನಮ್ಮ ಅತ್ತೆ ಹೋಗಿದ್ದಾಗ ಜೋರಾಗಿ ಮಳೆ ಬಂತು. ಆಶ್ರಯಕ್ಕಾಗಿ ಹತ್ತಿರವಿದ್ದ ಪ್ರವಾಸಿ ಬಂಗಲೆಗೆ ಹೋದೆವು. ಬಾಗಿಲು ಮುಚ್ಚಿದ್ದರಿಂದ ಮುಂಬಾಗದಲ್ಲಿಯೇ ನಿಲ್ಲಬೇಕಾಯಿತು. ನಮ್ಮಂತೆಯೇ ಸುತ್ತಮುತ್ತಾ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದವರೂ ಬಂದು ನಿಂತರು. ಅತ್ತೆ, ‘ಏನು ಹಾಗೆ ಮೈಮೇಲೆ ಹೇರಿಕೋತೀರಿ. ದೂರ ನಿಲ್ಲಕ್ಕೆ ಆಗಲ್ವಾ?' ಎಂದರು. ಥಟ್ಟನೆ ಒಬ್ಬಾಕೆ, ‘ಬಿಡ್ರವ್ವ, ನಮ್ಮ ಮೈಲಿ ಹರೀತಿರೋದೂ ರಕ್ತಾನೇ,’ ಎಂದುಬಿಟ್ಟರು!   
         ಜಿಡ್ಡು ಕೃಷ್ಣಮೂರ್ತಿಯವರು ಆತ್ಮವೆಂಬುದು ಇದೆಯೇ?’ ಎನ್ನುವುದನ್ನು ಈ ರೀತಿಯಾಗಿ ವಿಶ್ಲೇಷಿಸಿದ್ದಾರೆ.
      
      ‘............... ನಾವು ಪೂರ್ವದ ಜನ್ಮ-ಪುನರ್ಜನ್ಮ ಇದೆ, ಮರುಹುಟ್ಟು ಇದೆ, ಆತ್ಮವು ತನ್ನನ್ನು ತಾನು ಸದಾ ನವೀಕರಿಸಿಕೊಳ್ಳುತ್ತದೆ ಇತ್ಯಾದಿಯಾಗಿ ಹೇಳುತ್ತಿರುತ್ತೇವೆ. ಈ ಮಾತುಗಳನ್ನು ಎಚ್ಚರದಿಂದ ಕೇಳಿ.
      ಆತ್ಮವೆಂಬುದು ಇದೆಯೇ? ಇದೆ ಎಂದು ನಂಬುವುದಕ್ಕೆ ನಮಗೆ ಇಷ್ಟ. ಈ ನಂಬಿಕೆ ನಮಗೆ ಸುಖ ಕೊಡುತ್ತದೆ. ಆತ್ಮವು ಆಲೋಚನೆಗೆ ಅತೀತವಾದದ್ದು, ಅತೀತಕ್ಕೆ ಅತೀತವಾದದ್ದು, ಶಾಶ್ವತವಾದದ್ದು, ಆಧ್ಯಾತ್ಮಿಕವಾದದ್ದು, ಅಮರವಾದದ್ದು ಎಂದು ನಂಬಿ ನಮ್ಮ ಆಲೋಚನೆ ಅದಕ್ಕೆ ಜೋತುಬಿದ್ದಿರುತ್ತದೆ. ಆದರೆ ಕಾಲಕ್ಕೆ ಅತೀತವಾದ, ಆಲೋಚನೆಗೆ ಅತೀತವಾದ, ಮನುಷ್ಯನಿಂದ ಸೃಷ್ಟಿತವಲ್ಲದ, ಮನುಷ್ಯ ಸ್ವಭಾವವನ್ನು ಮೀರಿದ, ತಂತ್ರಗಾರ ಮನಸ್ಸಿನ ಕಲ್ಪನೆಯದಲ್ಲದ ಆತ್ಮವೆಂಬುದು ಇದೆಯೇ? ಏಕೆಂದರೆ ಮನಸ್ಸು ಎಲ್ಲೆಡೆಯಲ್ಲೂ ಅಗಾಧವಾದ ಅನಿಶ್ಚಿತತೆ, ಗೊಂದಲಗಳನ್ನೇ ಬದುಕಿನಲ್ಲಿ ಅಶಾಶ್ವತವಾದುದನ್ನೇ ಕಾಣುತ್ತದೆ. ಯಾವುದೂ ಶಾಶ್ವತವಲ್ಲ- ಗಂಡ-ಹೆಂಡತಿಯ ನಡುವಿನ ಪರಸ್ಪರ ಸಂಬಂಧ, ಉದ್ಯೋಗ ಯಾವುದೂ ಶಾಶ್ವತವಲ್ಲ. ಆದ್ದರಿಂದಲೇ ಮನಸ್ಸು ಶಾಶ್ವತವಾದ ಯಾವುದೋ ಒಂದನ್ನು ಕಲ್ಪಿಸಿಕೊಳ್ಳತ್ತದೆ, ಅನ್ವೇಷಿಸಿಕೊಳ್ಳುತ್ತದೆ.  ಹಾಗೆ ಅನ್ವೇಷಿಸಿಕೊಂಡದ್ದನ್ನು ಆತ್ಮವೆಂದು ಕರೆಯುತ್ತದೆ. ಆದರೆ ಆತ್ಮವನ್ನು ಕುರಿತು ಮನಸ್ಸು ಕಲ್ಪಿಸಿಕೊಳ್ಳಬಹುದು, ಆಲೋಚನೆ ಯೋಚಿಸಿಕೊಳ್ಳಬಹುದು. ಆಲೋಚನೆ ಯೋಚಿಸಬಹುದಾದ್ದರಿಂದಲೇ ಅದು, ಆತ್ಮವೆಂಬುದು, ಸಹಜವಾಗಿಯೇ ಕಾಲದ ವಲಯಕ್ಕೆ ಸೇರಿದ್ದು. ನಾವು ಯಾವುದೇ ಸಂಗತಿಯನ್ನು ಕುರಿತು ಯೋಚಿಸಬಲ್ಲೆವು ಎಂದರೆ ಅದು ನಮ್ಮ ಆಲೋಚನೆಯ ಭಾಗವೇ ಆಗಿರುತ್ತದೆ. ನಮ್ಮ ಆಲೋಚನೆಯೆಂಬುದು ಕಾಲದ, ಅನುಭವದ, ಜ್ಞಾನದ ಫಲಿತಾಂಶವಾಗಿರುತ್ತದೆ. ಆದ್ದರಿಂದ ಆತ್ಮವೆಂಬುದು ಇನ್ನೂ ಕಾಲದ ವಲಯದಲ್ಲೇ ಇರುವಂಥದ್ದು.........
      ಆದ್ದರಿಂದಲೇ ಮತ್ತೆ ಮತ್ತೆ ಹುಟ್ಟಿಬರುವ ಆತ್ಮದ ಸಾತತ್ಯದ ಕಲ್ಪನೆಯು ಅರ್ಥಹೀನವಾದದ್ದು. ಏಕೆಂದರೆ ಅದು ಭಯಗೊಂಡ ಮನಸ್ಸಿನ, ಶಾಶ್ವತೆಯ ಹಂಬಲ ತುಂಬಿಕೊಂಡ ಮನಸ್ಸಿನ, ಖಚಿತತೆ ಮತ್ತು ಆಶೆಯ ಬಯಕೆಯುಳ್ಳ ಮನಸ್ಸಿನ ಸೃಷ್ಟಿ. 
      ಜಿಡ್ಡು ಕೃಷ್ಣಮೂರ್ತಿಯವರ ಈ ಪ್ರಬುದ್ಧ ಚಿಂತನೆಗೆ ನಮ್ಮನ್ನು ಒಗ್ಗಿಸಿಕೊಳ್ಳುವುದು ಕಠಿಣವೆನಿಸಬಹುದು. ಆದರೆ ಈ ಚಿಂತನೆಯಲ್ಲಿ ಅಡಕವಾಗಿರುವ  ಇಂದಿನ ಈ ಜೀವನವನ್ನು ಸಾರ್ಥಕಗೊಳಿಸುವುದು ಅತ್ಯಂತ ಪ್ರಮುಖವಾದದ್ದು ಎನ್ನುವ ಆಶಯವನ್ನು ಸಾಕಾರಗೊಳಿಸಲು ಪ್ರಯತ್ನಿಸೋಣ.

5 comments:

  1. ನೀವು ಹೇಳುವುದು ಸರಿ. ಆತ್ಮ ಎನ್ನುವುದು ಇದೆಯೊ, ಇಲ್ಲವೊ ಎನ್ನುವುದಕ್ಕಿಂತ, ಇರುವ ಜೀವನವನ್ನು ಸಾರ್ಥಕಗೊಳಿಸುವುದು ಶ್ರೇಯಸ್ಕರವಾದದ್ದು!

    ReplyDelete
  2. ನಿಜವಾಗಲೂ ಒಳ್ಳೆಯ ಆತ್ಮದ ಕುರಿತಾದ ಲೇಖನ. ಅಸಲು ಅದರ ಅಸ್ತಿತ್ವ ನಿಜವೋ ಸುಳ್ಳೋ ಎನ್ನುವುದೇ ಪ್ರಶ್ನೆ!

    ReplyDelete
  3. ಮೇಡಂ;ಕಾರಣಾಂತರಗಳಿಂದ ನಿಮ್ಮ ಬ್ಲಾಗಿಗೆ ಮುಂಚೆಯೇ ಬರಲಾಗಲಿಲ್ಲ.ಕ್ಷಮೆ ಇರಲಿ.ನಮ್ಮ ದೇಹದಲ್ಲಿ ಚೈತನ್ಯವೊಂದಿದೆ ಎನ್ನುವುದು ಎಲ್ಲರೂ ಒಪ್ಪಲೇ ಬೇಕಾದಂತಹ ವಿಷಯ.ಚೈತನ್ಯವಿಲ್ಲದ ದೇಹ ಬರೀ ಜಡ ವಸ್ತು.ನಮ್ಮ ದೇಹ,ಮನಸ್ಸು,ಬುದ್ಧಿ ಎಲ್ಲಕ್ಕೂ ಈ ಚೈತನ್ಯವೇ ಮೂಲ.ನಮ್ಮೊಳಗಿನ ಈ ಚೈತನ್ಯ ಸೃಷ್ಟಿಯ ಚೈತನ್ಯದ ಒಂದು ಭಾಗ.ಸೃಷ್ಟಿಯ ಒಟ್ಟು ಚೈತನ್ಯವನ್ನು ಪರಮಾತ್ಮನೆಂದರು,ನಮ್ಮ ಚೈತನ್ಯವನ್ನು ಜೀವಾತ್ಮನೆಂದರು.ಜೀವಾತ್ಮವೆನ್ನುವ ಚೈತನ್ಯ ತನ್ನ ಕರ್ಮಗಳ ಉಪಾಧಿಗಳಿಂದ ಮರು ಜನ್ಮ ಪಡೆಯುತ್ತದೆ ಎನ್ನುವುದು ಎಲ್ಲಾ ದಾರ್ಶನಿಕರ ಅಭಿಮತ.ಇದು ಎಷ್ಟು ಸತ್ಯವೋ ತಿಳಿಯದು.ಮರಳಿ ಬಂದವರಿಲ್ಲ.ವರದಿ ತಂದವರಿಲ್ಲ! ಒಟ್ಟಿನಲ್ಲಿ ಸಮಾಜ ಒಳ್ಳೆಯದು,ಧರ್ಮ ಎಂದು ಒಪ್ಪುವಂತಹ ರೀತಿಯಲ್ಲಿ ಬದುಕನ್ನು ನಡೆಸಿದರೆ,ಒಳ್ಳೆಯ ಪುನರ್ಜನ್ಮ ಸಿಗುತ್ತದೆ ಎನ್ನುವುದೊಂದು ನಂಬಿಕೆ ಎಂದೇ ಇಟ್ಟು ಕೊಳ್ಳೋಣ. ಈ ನಂಬಿಕೆಯಿಂದಲಾದರೂ ವ್ಯಕ್ತಿಗಳು ಸಮಾಜದಲ್ಲಿ ಸಾತ್ವಿಕ ಬದುಕನ್ನು ನಡೆಸಿದಲ್ಲಿ ,ಅದರಿಂದ ಸಮಾಜದ ಒಟ್ಟು ಹಿತ ದೃಷ್ಟಿಯಿಂದ ಒಳ್ಳೆಯದೇ ಅಲ್ಲವೇ? ನನ್ನ ಬ್ಲಾಗಿಗೂ ಭೇಟಿ ಕೊಡಿ.ನಮಸ್ಕಾರ.

    ReplyDelete