Tuesday, July 10, 2012

ಮನದ ಅಂಗಳದಿ.........೧೦೦. ಒಳ್ಳೆಯತನ ಅರಳುವುದೇ ‘ಧ್ಯಾನ’

      (ಸ್ಥಳೀಯ ಪತ್ರಿಕೆ `ಹಾಸನವಾಣಿ'ಯಲ್ಲಿ  ಪ್ರಕಟವಾಗುತ್ತಿದ್ದ `ಮನದ ಅ೦ಗಳದಿ...........' ಅ೦ಕಣ ಬರಹಗಳ  ಸರಣಿಯ ೧೦೦ನೆಯ ಹಾಗೂ ಕಡೆಯ ಬರಹವಿದು. ಬರೆಯಲು ೧೦೦ವಾರಗಳು  ತಮ್ಮ ಪತ್ರಿಕೆಯಲ್ಲಿ ಅನುವು  ಮಾಡಿದ ಪತ್ರಿಕಾ ಸ೦ಪಾದಕರಿಗೆ ನನ್ನ ಧನ್ಯವಾದಗಳು.)
    ನಾವು ಯಾವುದೇ ಕ್ರಿಯೆಯನ್ನು ಮಾಡಿದರೂ ಅದರಿಂದ ನಮಗೆ ಲಭಿಸಬಹುದಾದ ಲಾಭದ ಬಗ್ಗೆ ನಿರೀಕ್ಷಿಸುವುದು ನಮ್ಮ ಸಹಜ ಗುಣ. ಅದು ಹಣದ ರೂಪದಲ್ಲಿರಬಹುದು, ಪ್ರಶಂಸೆ-ಪುರಸ್ಕಾರವಿರಬಹುದು, ಆರೋಗ್ಯವನ್ನು ಉತ್ತಮೀಕರಿಸುವುದೂ ಆಗಿರಬಹುದು. ಜೀವನದ ಪ್ರಾರಂಭಿಕ ಹಂತದಲ್ಲಿ ವಿದ್ಯೆ ಕಲಿಯುವುದರ ಮೂಲಕ ಅಗತ್ಯ ಸರ್ಟಿಫಿಕೇಟ್ ಗಳನ್ನು ಪಡೆದುಕೊಂಡು, ಉದ್ಯೋಗಕ್ಕೆ ಸೇರಿ, ಹಣ ಗಳಿಸಿ, ಸಂಸಾರಸ್ಥರಾಗಿ.......... ಒಂದು ಹಂತದಲ್ಲಿ ಯಾವುದೋ ಭಯಕ್ಕೆ ತಲ್ಲಣಿಸಿಯೋ, ಮನಸ್ಸಿನಲ್ಲಿ ಉಂಟಾಗುವ ತಾಕಲಾಟಕ್ಕೆ ಅಂಜಿಯೋ, ಒಂದು ಆಧಾರದ ಮೊರೆಹೋಗುತ್ತೇವೆ. ಅಂಥವುಗಳಲ್ಲಿ ಧ್ಯಾನವೂ ಒಂದಾಗಿದೆ. ಧ್ಯಾನವನ್ನು ಕಲಿಸುವ ಕೇಂದ್ರಗಳೂ ಇವೆ.
     ನಾನು ಇತ್ತೀಚೆಗೆ ವೀಕ್ಷಿಸಿದ `Spiritual Reality’ ಎನ್ನುವ ಒಂದು ವಿಡಿಯೋದಲ್ಲಿ ಧ್ಯಾನವನ್ನು ಮಾಡುವ ಕ್ರಮ, ಅದರಿಂದ ಉಂಟಾಗಬಹುದಾದ ಉಪಯೋಗಗಳು ಎಲ್ಲವನ್ನೂ ಬಹಳ ಆಕರ್ಷಕವಾಗಿ ತಿಳಿಸಿದ್ದರು. ಧ್ಯಾನ ಮಾಡುವ ಸಮಯದಲ್ಲಿ ಉಂಟಾಗುವ ನಿರ್ಮಲ ಸ್ಥಿತಿ?ಯಲ್ಲಿ ವಿಶ್ವದ ಮೂಲ ಶಕ್ತಿಯಾದ ಕಾಸ್ಮಿಕ್ ಎನರ್ಜಿಯು ನಮ್ಮ ದೇಹವನ್ನು ಪ್ರವೇಶಿಸುತ್ತದೆ ಹಾಗೂ ದೇಹವನ್ನು ಶಕ್ತಿಶಾಲಿಯಾಗಿಸುತ್ತದೆ ಎನ್ನುವ ಅ0ಶವೂ ಅದರಲ್ಲಿತ್ತು. ಅದರ ಸತ್ಯಾಸತ್ಯತೆಗಳು ಏನೇ ಇರಲಿ ಮೊದಲಿನಿಂದಲೂ ಈ ಬಗ್ಗೆ ಬಹಳ ಆಸಕ್ತಿಯನ್ನು ಹೊಂದಿದ್ದ ನಾನು ಪ್ರಭಾವಿತಳಾಗಿದ್ದೆ. ನಮ್ಮ ಹಳ್ಳಿಯಲ್ಲಿ ನಾವು ಚಿಕ್ಕವರಿದ್ದಾಗ ರಜೆಯ ಅವಧಿಯಲ್ಲಿ ಗದ್ದೆಯನ್ನು ಕಾಯಲು ಹೋಗಬೇಕಾಗುತ್ತಿತ್ತು. ಆಗ ಯಾವುದಾದರೊಂದು ಪುಸ್ತಕವನ್ನು ತೆಗೆದುಕೊಂಡು ಹೋಗುವುದು ಅಭ್ಯಾಸವಾಗಿತ್ತು. ಹಾಗೆಯೇ ಒಂದು ಸಾರಿ ನಾನು ರಾಜಯೋಗಎನ್ನುವ ಪುಸ್ತಕವನ್ನು ಓದುವಾಗ ಅದರಲ್ಲಿ ಧ್ಯಾನವನ್ನು ಮಾಡುವ ಕ್ರಮವನ್ನು ತಿಳಿಸಿದ್ದರು. ನಮ್ಮ ಕಬ್ಬಿನಗದ್ದೆಯ ಮಧ್ಯ ಭಾಗದ ಕರಲಿನಲ್ಲಿ( ಕಬ್ಬು ಅಥವಾ ಯಾವುದೇ ಬೆಳೆ ಬೆಳೆಯದೇ ಇರುವ ಚೌಳು ಭೂಮಿ) ನಾನು ಧ್ಯಾನ ಮಾಡುತ್ತಾ (ಹಾಗೆ ಭಾವಿಸಿಕೊಂಡು ಕಣ್ಣು ಮುಚ್ಚಿಕೊಂಡು) ಕುಳಿತುಬಿಟ್ಟಿದ್ದೆ! ನಂತರ ಬಂದ ನನ್ನ ಅಕ್ಕ ನನ್ನನ್ನು ಎಲ್ಲಾ ಕಡೆ ಹುಡುಕಿ, ಅಲ್ಲಿದ್ದುದನ್ನು ಕಂಡಳು. ಆ ಪುಸ್ತಕವು ಇನ್ನೆಂದೂ ನನಗೆ ಸಿಗದಂತೆ ಜಾಗರೂಕತೆ ವಹಿಸಿದಳು!  
   ಜಿಡ್ಡು ಕೃಷ್ಣಮೂರ್ತಿಯವರು ಧ್ಯಾನದ ಬಗ್ಗೆ ವೈವಿಧ್ಯಮಯ ರೀತಿಯಲ್ಲಿ ತಿಳಿಸಿರುವ ಅತ್ಯಮೂಲ್ಯ ಸಂಗತಿಗಳ ಸಂಕ್ಷಿಪ್ತ ರೂಪವನ್ನು ನಿಮ್ಮ ಮುಂದಿಡುತ್ತಿದ್ದೇನೆ:
   ಧ್ಯಾನವೆಂಬ ಮಾತನ್ನು ಕೇಳಿ ಮರುಳಾಗಬೇಡಿ. ಎಲ್ಲ ಆಲೋಚನೆಗಳ ಬಗ್ಗೆ ಎಚ್ಚರವನ್ನು ಹೊಂದಿರುವುದು, ಯಾವ ಮೂಲದಿಂದ ಆಲೋಚನೆ ಮೂಡುತ್ತದೆ, ಅದರ ಉದ್ದೇಶವೇನು ಎಂದು ಅರಿಯುವುದು, ಅದು ಧ್ಯಾನ. ಒಂದು ಆಲೋಚನೆಯ ತಿರುಳನ್ನು ಪೂರ್ಣವಾಗಿ ಅರಿಯುವುದೇ ಮನಸ್ಸಿನ ಇಡೀ ಪ್ರಕ್ರಿಯೆಯನ್ನು ತೆರೆದಿಡುತ್ತದೆ. 
    ಧ್ಯಾನವೆಂದರೆ ನನ್ನ ಬಗ್ಗೆ ನಾನು ನಿರಂತರವಾಗಿ ಎಚ್ಚರವಾಗಿರುವುದು ಮಾತ್ರವಲ್ಲ, ‘ನಾನುಎಂಬ ಭಾವನೆಯನ್ನೇ ಬಿಟ್ಟುಬಿಡುವುದು ಕೂಡ ಹೌದು. ಸರಿಯಾದ ಆಲೋಚನೆಯ ಮುಖಾಂತರ ಧ್ಯಾನ ಸಾಧ್ಯವಾಗುತ್ತದೆ. ಅದರಿಂದ ವಿವೇಕದ ಶಾಂತಿ ದೊರೆಯುತ್ತದೆ. ಆ ಶಾಂತಿಯಲ್ಲಿ ಅತ್ಯುನ್ನತವಾದುದರ ಸಾಕ್ಷಾತ್ಕಾರವಾಗುತ್ತದೆ.
   ನಾನು ಆಡುವ ಎಲ್ಲ ಮಾತುಗಳ ಬಗ್ಗೆ, ನಾನು ಮಾಡುವ ಎಲ್ಲ ಕೆಲಸಗಳ ಬಗ್ಗೆ, ನನ್ನ ಎಲ್ಲ ಸಂಬಂಧಗಳ ಬಗ್ಗೆ , ಎಚ್ಚರವನ್ನಿಟ್ಟುಕೊಂಡಿದ್ದು, ಕ್ಷಣದಿಂದ ಕ್ಷಣಕ್ಕೆ ಎಲ್ಲವನ್ನೂ ಅವು ಇರುವಂತೆಯೇ ಅರಿಯುತ್ತಿರುವಾಗ ಸತ್ಯ ಕಾಣುತ್ತದೆಯೋ, ನಿಜವಾಗಿ ಇದೇ ಧ್ಯಾನದ ದಾರಿ. ಅಲ್ಲವೇ? ಮನಸ್ಸು ನಿಶ್ಚಲವಾಗಿದ್ದಾಗ ಮಾತ್ರ ಗ್ರಹಿಕೆ ಇರುತ್ತದೆ. ಮನಸ್ಸು ತನ್ನನ್ನು ತಾನು ಅರಿಯದೇ ಇರುವಾಗ, ತನ್ನ ಬಗ್ಗೆ ತಾನು ಮೂಢವಾಗಿರುವಾಗ ನಿಶ್ಚಲತೆ ಇರಲು ಸಾಧ್ಯವಿಲ್ಲ. ಆ ಮೂಢತೆಯನ್ನು ಯಾವುದೇ ಬಗೆಯ ಶಿಸ್ತಿನಿಂದಲಾಗಲೀ, ಪ್ರಾಚೀನ ಅಥವಾ ಆಧುನಿಕ ಅಥಾರಿಟಿಯನ್ನು ಅನುಸರಿಸುವುದರಿಂದಲಾಗಲೀ, ದೂರಮಾಡಲು ಸಾಧ್ಯವಿಲ್ಲ. ಆ ಮೂಢತೆಯನ್ನು ಯಾವುದೇ ಬಗೆಯ ಶಿಸ್ತಿನಿಂದಾಗಲೀ, ಪ್ರಾಚೀನ ಅಥವಾ ಆಧುನಿಕ ಅಥಾರಿಟಿಯನ್ನು ಅನುಸರಿಸುವುದರಿಂದಾಗಲೀ, ದೂರಮಾಡಲು ಸಾಧ್ಯವಿಲ್ಲ. ನಂಬಿಕೆಯು ಕೇವಲ ಪ್ರತಿರೋಧ ಮತ್ತು ಪ್ರತ್ಯೇಕತೆಯನ್ನು ಮಾತ್ರ ಸೃಷ್ಟಿಸುತ್ತದೆ. ಪ್ರತ್ಯೇಕತೆಯಿರುವಾಗ ಶಾಂತಿ ಇರುವುದಿಲ್ಲ. ನನ್ನೊಳಗಿನ ಪ್ರಕ್ರಿಯೆಯನ್ನು ಅರಿತಾಗ ಮಾತ್ರ ಶಾಂತಿ ದೊರೆಯುತ್ತದೆ. ಪರಸ್ಪರ ಸಂಘರ್ಷದಲ್ಲಿ ತೊಡಗಿರುವ, ‘ನನ್ನದುಮತ್ತು ನಾನುಎಂಬುದನ್ನು ಸೃಷ್ಟಿಸಿರುವ ಎಲ್ಲಾ ಘಟಕಗಳನ್ನೂ ಅರಿಯುವುದರಿಂದ ಮಾತ್ರ ಶಾಂತಿ ಲಭಿಸುತ್ತದೆ. ಇದು ಬಹಳ ಕಷ್ಟದ ಕೆಲಸವಾದ್ದರಿಂದ ನಾವು ಧ್ಯಾನವೆಂದು ಕರೆಯಲಾಗುವ ಅನೇಕ ಬಗೆಯ ಉಪಾಯಗಳನ್ನು ಕಲಿಯಲು ತೊಡಗುತ್ತೇವೆ. ಮನಸ್ಸು ಹೂಡುವ ಉಪಾಯಗಳು ಧ್ಯಾನವಲ್ಲ. ಧ್ಯಾನವೆನ್ನುವುದು ಆತ್ಮ-ಜ್ಞಾನದ ಆರಂಭ. ಧ್ಯಾನವಿಲ್ಲದೆ ಆತ್ಮ-ಜ್ಞಾನವಿಲ್ಲ.
   ಮನಸ್ಸು ತನ್ನೊಳಗೆ ಜೋಡಿಸಿಟ್ಟುಕೊಂಡಿರುವ ಎಲ್ಲವನ್ನೂ ತೆಗೆದುಹಾಕಿ ಖಾಲಿ ಮಾಡಿಕೊಳ್ಳುವುದೇ ಧ್ಯಾನ. ನೀವು ಹಾಗೆ ಮಾಡಲಾರಿರಿ. ಆದರೂ ಪರವಾಗಿಲ್ಲ. ಹಾಗೆ ಮನಸ್ಸನ್ನು ಖಾಲಿಮಾಡಿಕೊಂಡರೆ ಏನಾಗುತ್ತದೆಂದು ಕೇಳಿ. ಹಾಗೆ ಮನಸ್ಸು ಖಾಲಿಯಾದಾಗ ಮನಸ್ಸಿನೊಳಗೆ ಅಪರಿಮಿತ, ಅತಿ ವಿಶೇಷವಾದ ಅವಕಾಶವಿರುವುದು ತಿಳಿಯುತ್ತದೆ. ಆ ಅಪರಿಮಿತ ಅವಕಾಶವೇ ಸ್ವಾತಂತ್ರ್ಯ. ಇಂಥಾ ಸ್ವಾತಂತ್ರ್ಯ, ಇಂಥಾ ಬಿಡುಗಡೆ ಕೊನೆಗೆ ಎಂದೋ ಒಂದು ದಿನ, ಒಂದು ಕ್ಷಣ ಸಿಗುತ್ತದೆ ಎಂದಲ್ಲ, ಮೊದಲಿಗೇ, ಈಗಲೇ ಇಂಥಾ ಸ್ವಾತಂತ್ರ್ಯ, ಬಿಡುಗಡೆ ಬೇಕೆಂದು ನೀವು ಡಿಮ್ಯಾಂಡ್ ಮಾಡಬೇಕು. ನಿಮ್ಮ ಕೆಲಸದಲ್ಲಿ, ನಿಮ್ಮ ಸಂಬಂಧಗಳಲ್ಲಿ, ನೀವು ಮಾಡುವ ಎಲ್ಲಾ ಕ್ರಿಯೆಗಳಲ್ಲಿ ಈ ಸ್ವಾತಂತ್ರ್ಯವನ್ನು ಹುಡುಕಿಕೊಳ್ಳಬೇಕು. ಆಗ ಧ್ಯಾನವೆಂದರೆ ಸೃಷ್ಟಿಎಂದು ನಿಮಗೆ ತಿಳಿಯುತ್ತದೆ........... ಸೃಷ್ಟಿಸ್ಥಿತಿಯಲ್ಲಿರುವ ಮನಸ್ಸಿಗೆ ಯಾವ ಕಾರಣಗಳೂ ಬೇಕಾಗಿಲ್ಲ, ಯಾವ ಕಾರಣಗಳೂ ಇಲ್ಲ. ಆ ಸ್ಥಿತಿಯಲ್ಲಿರುವ ಮನಸ್ಸು ಕ್ಷಣಕ್ಷಣವೂ ಸಾಯುತ್ತಾ, ಬದುಕುತ್ತಾ, ಪ್ರೀತಿಸುತ್ತಾ, ಇರುತ್ತಾ, ಇರುತ್ತದೆ. ಇಡೀ ಇದೆಲ್ಲವೂ ಧ್ಯಾನ.
    ಧ್ಯಾನವು ಅರಳಿ ಒಳ್ಳೆಯತನದ ಹೂವಾಗಿ ಅರಳುತ್ತದೆ. ಹೃದಯದ ಔದಾರ್ಯದಲ್ಲಿ ಧ್ಯಾನ ಆರಂಭಗೊಳ್ಳುತ್ತದೆ............ ಔದಾರ್ಯವಿಲ್ಲದೇ ಧ್ಯಾನವಿಲ್ಲ. ಅಹಂಕಾರ ಮುಕ್ತರಾಗಿರುವುದು, ಯಶಸ್ಸಿನ ಏಣಿಯನ್ನು ಏರದಿರುವುದು, ಕೀರ್ತಿ ಎಂದರೇನೆಂದು ಎಂದೂ ತಿಳಿಯದಿರುವುದು, ಸಾಧಿಸಿದ್ದಕ್ಕೆಲ್ಲಾ ಆಯಾ ಕ್ಷಣವೇ ಸಂದುಬಿಡುವುದು, ದಿನದಿನವೂ, ಪ್ರತಿಕ್ಷಣವೂ ಸಾಯುವುದು, ಇದು ಒಳ್ಳೆಯತನ. ಇಂಥಾ ಸಮೃದ್ಧ ನೆಲದಲ್ಲಿ ಮಾತ್ರ ಒಳ್ಳೆಯತನ ಬೆಳೆದೀತು, ಅರಳೀತು. ಈ ಒಳ್ಳೆಯತನ ಅರಳುವುದೇ ಧ್ಯಾನ.
     ನಮ್ಮ ದಿನನಿತ್ಯದ ಬದುಕಿಗೆ ಚೆಲುವು, ಸೌಂದರ್ಯ ಹೇಗೆ ಅನಿವಾರ್ಯವೋ ಹಾಗೆಯೇ ಧ್ಯಾನವೂ ಅನಿವಾರ್ಯ. ಧ್ಯಾನವು ಬದುಕಿನ ತಿರುಳು........... ಬದುಕಿನ ಇಡೀ ಪ್ರಕ್ರಿಯೆಯ ಬಗ್ಗೆ ಎಚ್ಚರವಾಗಿರುವುದು, ಗಮನವಿಟ್ಟು ನೋಡುವುದು, ನಿರ್ಭಾವದಿಂದ ಅದನ್ನು ಪ್ರವೇಶಿಸುವುದು, ಅದರಿಂದ ಬಿಡುಗಡೆ ಪಡೆಯುವುದು, ಇದು ಧ್ಯಾನ.        

5 comments:

 1. ೧೦೦ ಬರಹಗಳು!!!

  ಮೇಡಂ, ನಾಲ್ಕು ಸಾಲು ಗೀಚಲು ತಿಣಕಾಡೋ ನನ್ನಂತಹ ಎಳೆ ನಿಂಬೆಕಾಯಿಗಳಿಗೆ ನೀವು ಆದರ್ಶಪ್ರಾಯ. ನಿಮ್ಮ ನಿರಂತರತೆ, ತೂಕವುಳ್ಳ ಬರಹಗಳು ಮತ್ತು ತಿಳುವಳಿಕೆಯ ಹಂಚುವಿಕೆ ಸದಾ ಇರಲಿ.

  ಧ್ಯಾನ ಮನೋ ವಿಕಾಸನ ಪ್ರಕ್ರಿಯೇ. ಒಳ್ಳೆಯ ಬರಹಕ್ಕಾಗಿ ಧನ್ಯವಾದಗಳು.

  ReplyDelete
 2. ಲೌಕಿಕ ಜೀವನದಿಂದ ಮುಕ್ತಿ ಬಯಸುವವರು ಮಾತ್ರ ಧ್ಯಾನ ಮಾಡಬೇಕು, ಆಧ್ಯಾತ್ಮಿಕತೆಯ ಪಥದಲ್ಲಿ ಪಯಣಿಸಬಯಸುವವರು ಮಾತ್ರ ಧ್ಯಾನದಲ್ಲಿ ತೊಡಗಿಸಿಕೊಳ್ಳಬೇಕು ---- ಹೀಗೆ ಇನ್ನೂ ಏನೇನೋ ಅನೇಕ ತಪ್ಪು ಕಲ್ಪನೆಗಳಿವೆ. ಇತ್ತೀಚೆಗೆ ಲೌಕಿಕ ಜೀವನದ ಜಂಜಾಟದಲ್ಲಿ ಮುಳುಗಿರುವವರಿಗೂ ಧ್ಯಾನದಿಂದ ಅನೇಕ ಲಾಭಗಳಾಗುತ್ತವೆ ಎಂಬ ಅರಿವು ಮೂಡಿರುವುದರಿಂದಲೋ ಏನೋ ನಾನಾ ರೂಪಗಳಲ್ಲಿ 'ಧ್ಯಾನ' ಮಾಡುವಿಕೆಯ ಕುರಿತು ತರಬೇತಿ ನೀಡುವ ಪ್ರಯತ್ನಗಳಾಗುತ್ತಿವೆ. ಲೇಖನ ಚೆನ್ನಾಗಿದೆ.

  ReplyDelete
 3. ಮೇಡಂ;ಧ್ಯಾನ ಎನ್ನುವುದು,ಮನಸ್ಸಿಗೆ ಅತೀತವಾದ ಕ್ರಿಯೆ.ನಮ್ಮ ಮಾತು,ಆಲೋಚನೆಗಳು ಇವೆಲ್ಲಾ ಮನಸ್ಸಿನ ಕ್ರಿಯೆ.ಜಿಡ್ಡು ಅವರ ಬರಹಗಳು ವಿಪರೀತ ಆಲೋಚನೆಗಳಿಂದ,ತರ್ಕದಿಂದ ಕೂಡಿರುತ್ತವೆ.ಮನಸ್ಸಿಗೆ ಅತೀತವಾದುದನ್ನು ಮನಸ್ಸಿನ ಆಲೋಚನೆಗಳಿಂದ,ಶಬ್ಧಗಳಿಂದ ಹಿಡಿದಿಡುವುದು ಕಷ್ಟ.ಅದಕ್ಕೇ ಜಿಡ್ಡು ಅವರ ವಿಚಾರ ಧಾರೆಗಳು ಧ್ಯಾನದಂತಹ ಸೂಕ್ಷ್ಮವಾದ ವಿಷಯದ ಬಗ್ಗೆ ಹೇಳುವಾಗ ಅವರ ವಿಪರೀತ'ಮಾತುಗಾರಿಕೆ'ಸ್ವಲ್ಪ ಮಟ್ಟಿಗೆ ಗೊಂದಲವನ್ನು ಉಂಟುಮಾಡುತ್ತವೆ.ಧ್ಯಾನದಂತಹ ಸೂಕ್ಷ್ಮ ವಿಶಯವನ್ನು'ಮನಸ್ಸು ಇಲ್ಲದ'ಸ್ಥಿತಿಯಲ್ಲಿ ಸ್ವತಹ ಅನುಭವಕ್ಕೆ ತಂದುಕೊಳ್ಳಬೇಕೇ ಹೊರತು ಮನಸ್ಸಿನಿಂದ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ನನ್ನ ಅನಿಸಿಕೆ.'ಮನದ ಅಂಗಳದಿ'ನೂರು ವೈಚಾರಿಕ ಬರಹಗಳನ್ನು ಪೂರೈಸಿದ್ದಕ್ಕೆ ಅಭಿನಂದನೆಗಳು.ನಮಸ್ಕಾರ.

  ReplyDelete
 4. ಬಹಳ ದಿನಗಳಾಗಿದ್ದವು ಬ್ಲಾಗ್ ಓದಿ, ನಿಮ ೧೦೦ ನೆ ಸಂಚಿಕೆಯನ್ನು ಓದಿ ಬಹಳ ಕುಷಿ ಆಯ್ತು.
  ನಿಮ್ಮ ಈ ಎಲ್ಲ ಬರಹಗಳು ಪುಸ್ತಕವಾಗಲಿ.
  ಬರಹಕ್ಕಾಗಿ ದನ್ಯವಾದ .

  ReplyDelete
 5. tumbaa olleya baraha... kushiyaytu nimma blog manege betikottu. samparka nirantharavagirali...

  ReplyDelete