Thursday, March 14, 2013

ಅಜ್ಜಿಯ ಅವಾಂತರ

`ಭಾರತ ಹಳ್ಳಿಗಳ ದೇಶ, ಹಳ್ಳಿಗಳು ಭಾರತದ ಬೆನ್ನೆಲಬು’ ಎನ್ನುವುದನ್ನು ನಾನು ಚಿಕ್ಕವಳಿದ್ದಾಗಲೇ ಓದಿದ್ದೆ. ಅಂಥಾ ಒಂದು ಹಳ್ಳಿಯಲ್ಲೇ ನಾನು ಭಾರತದ ಜನಸಂಖ್ಯೆಗೆ +೧ ಆಗಿದ್ದು! ನಮ್ಮದು ಅಂತಿಂಥಾ ಹಳ್ಳಿಯಲ್ಲ. ಆ ಕಾಲಕ್ಕೆ ಭಾರತದ ಮಾದರಿ ಹಳ್ಳಿ! ಸುತ್ತಮುತ್ತ ಯಾವುದೇ ಪ್ರಾಥಮಿಕ ಶಾಲೆಯೂ ಇರಲಿಲ್ಲ. ನಮಗೆಲ್ಲಾ ಮನೆಯೇ ಮೊದಲ ಪಾಠಶಾಲೆ. ನಮ್ಮ ಅವಿಭಕ್ತ ಕುಟುಂಬದ ಹಿರಿದಿಕ್ಕಾದ ಅಜ್ಜಿಯೇ ಮೊದಲ ಗುರು! ಅಕ್ಷರ ಕಲಿಸಲಲ್ಲ. ಮಡಿ ಮೈಲಿಗೆ, ವ್ರತ ನೇಮ... .ಇನ್ನು ಬಸ್ಸು ಬರಲು ರಸ್ತೆಯೇ ಇರಲಿಲ್ಲ. ಇದ್ದದ್ದು ಕಾಲುದಾರಿ, ಬಂಡಿಜಾಡು, ಇಂಥಾ ಅಗತ್ಯ ನಿರ್ಮಿತ ಸ್ವಾಭಾವಿಕ ದಾರಿಗಳು. ಸೈಕಲ್ ಬೆಲ್ ಕೇಳಿದರೆ ಬೆಚ್ಚಿ ಬೀಳುವ ಹಸುಗಳು! ಇನ್ನು ದೂರವಾಣಿಯ ಮಾತಂತೂ ದೂರವೇ ಉಳಿಯಿತು. ಅಂಚೆಯ ಅರಿವೇಇಲ್ಲ. ಬುಡ್ಡಿಯ ದೀಪದ್ದೇ ವಿದ್ಯುತ್ ಪ್ರಭೆ! ಆಗಿನ ಸಂಪರ್ಕ ಮಾಧ್ಯಮವೆಂದರೆ ವರ್ಷಕ್ಕೆ ಎರಡೋ ಮೂರೋ (ಕಾಲನ ಕರೆಯ ಅನುಸಾರ) ಸಾರಿ ಬರುತ್ತಿದ್ದ ಟೆಲಿಗ್ರಾಮ್ಗಳದ್ದೇ! ಅದೂ ಕಂಡು ಕೇಳರಿಯದ ದೂರದ ಯಾರೋ ಸಂಬಂಧಿಗಳು ಎಲ್ಲೋ ಪರಲೋಕ ಸೇರಿದ ವಾರ್ತೆಯನ್ನು ಹೊತ್ತು ತರುತ್ತಿದ್ದವು.... ಅಜ್ಜಿಗೆ ನಮ್ಮ ವಂಶವೃಕ್ಷವೆಲ್ಲಾ ಬಾಯಲ್ಲೇ ಇದ್ದುದರಿಂದ ಯಾವುದೇ ಬಾದರಾಯಣ ಸಂಬಂಧವಾದರೂ ಯಾವುದೋ ಕಡೆಯಿಂದ ದಾಯಾದಿಗಳಾಗುತ್ತಾರೆಂದು ಹೇಳಿ ಹನ್ನೊಂದು ದಿನ ಸೂತಕ ಆಚರಿಸುವಂತೆ ಮಾಡುತ್ತಿದ್ದರೇನೋ! ಆದರೆ ದಯಾಳು ತಂತಿಗಳು ನಮ್ಮನ್ನು ತಲುಪುವ ವೇಳೆಗೆ ನಿಧನರಾದವರ ಮಾಸಿಕವೋ, ವರ್ಷಾಬ್ಧಿಕವೋ ಆಗುವ ಕಾಲ ಸಮೀಪಿಸುತ್ತಿದ್ದುದರಿಂದ ಶಿರಸ್ನಾನಕ್ಕೆ ಸಮಾಪ್ತಿಯಾಗುತ್ತಿತ್ತು. ಆದರೂ ?ಟೆಲಿಗ್ರಾಮ್ ಬಂದಿದೆ’ ಎಂದು ತಿಳಿದ ತಕ್ಷಣವೇ ಅದನ್ನು ಒಡೆಯಲೇಬಾರದೆಂದು ನಮ್ಮ ತಂದೆಗೆ ಕಟ್ಟಪ್ಪಣೆ ಮಾಡಿ ತಾವು ದೇವರ ಗೂಡಿನ ಬಳಿ ಹೋಗಿ (ಆಗಿನ್ನೂ ದೇವರಿಗೆ ೪?/೩’ ಮನೆ ಕಟ್ಟುವಷ್ಟು ವಿಶಾಲ ಮನೋಭಾವ ಬಂದಿರಲಿಲ್ಲ) ದೀಪ ಹಚ್ಚಿಟ್ಟು, `ಕಾಶಿ ವಿಶ್ವನಾಥ, ತಿರುಪತಿ ತಿಮ್ಮಪ್ಪ, ಧರ್ಮಸ್ಥಳದ ಮಂಜುನಾಥ...(ಇತ್ಯಾದಿ ಎಲ್ಲ ದೇವರಿಗೂ) ಕೆಟ್ಟ ಸುದ್ಧಿ ಕೇಳದಂತೆ ಮಾಡು,’ ಎಂದು ಹರಕೆ ಕಟ್ಟಿ ಬಂದು ಕವರ್ ಒಡೆಯಲು ಹುಕುಂ ಕೊಡುತ್ತಿದ್ದರು! ಇದೆಲ್ಲಾ ನೋಡುವುದೆಂದರೆ ನಮಗೆ ಭಯಾಶ್ಚರ್ಯ ಕುತೂಹಲ ಮಿಶ್ರಿತ ಮಜಾ!

ಆಗಂತೂ ನಮ್ಮೂರಿನಲ್ಲಿ ಯಾವುದೇ ವಾಹನಗಳ ಅಬ್ಬರ, ಧೂಮ್ರಾಟ್ಟಹಾಸಗಳಿರಲಿಲ್ಲ.

ಅಡುಗೆ ಮನೆ, ಬಚ್ಚಲುಮನೆಯ ಹೊಗೆ ನಿರ್ಗಮನಗಳನ್ನು (ಹೆಂಚಿನ ಸಂದಿ) ಬಿಟ್ಟರೆ ಹೊಗೆ ಕಾರುವ ಕಾರ್ಖಾನೆಗಳಿರಲಿಲ್ಲ. ಹೀಗಾಗಿ ನಮ್ಮ ಹಳ್ಳಿಯಲ್ಲಿ ವಾಯುಮಾಲಿನ್ಯದ ಸಮಸ್ಯೆಯೇ ಇರಲಿಲ್ಲ. ಕಾಲ ಕಳೆದಂತೆ ನಮ್ಮೂರಿನ ಸಮೀಪದಲ್ಲೇ ಒಂದು ಕಾರ್ಖಾನೆ ತಲೆ ಎತ್ತಿತು. ಜೊತೆಗೆ ವಿವಿಧ ರೀತಿ ರಿವಾಜಿನ ಜನರು ?ಶರಣಂ ಅಯ್ಯಪ್ಪಾ? ಎನ್ನುತ್ತಲೇ ಪುರಪ್ರವೇಶ ಮಾಡಿದರು! ಊರಿಗೊಂದು ಪಟ್ಟಣ ಸಂಪರ್ಕ ರಸ್ತೆಯಾಗಿ ನಾಗರಿಕ ಸಂಪರ್ಕಕ್ಕೆ ನಾಂದಿ ಹಾಡಿತು. ಅಂಚೆ, ವಿದ್ಯುತ್, ದೂರವಾಣಿ... ಒಂದರ ಹಿಂದೊಂದು ಹಳ್ಳಿಯೊಳ ಹೊಕ್ಕು ಹೊಸಕಳೆ ನೀಡಿದವು. ಕಾರ್ಖಾನೆ ಕಾರುವ ರಾಶಿ-ರಾಶಿ ಹೊಗೆ ಊರ ಮೇಲೆ ಕಾರ್ಮೋಡವನ್ನೇ ನಿರ್ಮಿಸಿತು. ಏನೇ ಬದಲಾವಣೆಯಾದರೂ ಅಜ್ಜಿ ಮಾತ್ರ ಅಚಲರಾದರು. ಈಗ ಸತ್ತದ್ದಕ್ಕೆ ಮಾತ್ರ ಟೆಲಿಗ್ರಾಮ್ ಬರುವುದಲ್ಲ. ಸಂತಸದ ಸುದ್ದಿಗೂ ಕೊಡ್ತಾರೆ. ಎಂದರೆ ಕಿವಿಗೇ ಹಾಕಿಕೊಳ್ಳಲಿಲ್ಲ.

ಅಕ್ಕನ ಮದುವೆಯನ್ನು ಪಟ್ಟಣದ ಛತ್ರವೊಂದರಲ್ಲಿ ಮಾಡಿದಾಗ ಅಜ್ಜಿ ಛತ್ರದ ಹೊರಬಾಗಿಲಲ್ಲೇ ನಿಂತು ಬರುವ ಹೋಗುವವರನ್ನು ವಿಚಾರಿಸಿಕೊಳ್ಳುತ್ತಿದ್ದರು. `ನಿಮ್ಮದು ಸ್ವಾಗತ ಸಮಿತೀನಾ ಅಜ್ಜಿ’, ಎಂದಾಗ, `ಯಾರು, ಏನು, ಯಾವ ಸಂಬಂಧ ಎನ್ನುವುದು ನನಗಲ್ಲದೇ ಈಗಿನ ಹುಡುಗು ಮುಂಡೇವು ನಿಮಗೆ ತಿಳಿಯುತ್ತಾ,’ ಎಂದು ದಬಾಯಿಸಿಬಿಟ್ಟರು! ಆಗ ಛತ್ರಕ್ಕೆ ಬಂದ ೫-೬ ಟೆಲಿಗ್ರಾಂಗಳನ್ನ ಅಜ್ಜಿಯೇ ಸ್ವೀಕರಿಸಿದ್ದು.(ಸಹಿ ಬೇರೆಯವರದ್ದು!) ಅವರು ಕಾಯ್ತಾ ಇದ್ದದ್ದು ಏನನ್ನು ಎಂದು ಆಗ ತಿಳಿಯಿತು.

`ಇದು ಶುಭಾಶಯಕ್ಕೆ ಅಜ್ಜಿ’, ಎಂದರೂ ಕೇಳದೇ, `ಇಂಥಾ ಸಮಯದಲ್ಲಿ ಯವುದೇ ಕೆಟ್ಟ ಸುದ್ದಿಯೂ ಬರದಿರಲಿ ಪರಮಾತ್ಮ,’ ಎನ್ನುತ್ತಾ ತಮ್ಮ ಹಿಂದಿನ ದೇವರುಗಳ ಲಿಸ್ಟ್ ಜೊತೆಗೆ (ವ್ರತವನ್ನು ಅತಿಕ್ರಮಿಸಿ) ಮಂತ್ರಾಲಯದ ರಾಘವೇಂದ್ರ,, ಶಬರಿಗಿರಿಯ ಅಯ್ಯಪ್ಪ ಎಲ್ಲರಿಗೂ ತಲಾ ನೂರರಂತೆ ಹರಕೆ ಹೊತ್ತರು. ನಂತರ ಟೆಲಿಗ್ರಾಂ ಓದಿಸಿ ದೇವರ ದಯೆ ಕೊಂಡಾಡಿದರು.!

ಈ ಅಜ್ಜಿಯ ತುಡುಮುಡಿಕೆಯ ಜೀವ, (ತುಪ್ಪದ ಕುಡಿಕೇಲೂ ನಿಲ್ಲದು ಅಂತಾರೆ!) ಸದಾ ಎಲ್ಲೆಲ್ಲಿ ಏನೇನು ನಡೆಯುತ್ತೆ ಅಂತಾ ಗೂಢಚರ್ಯೆ ನಡೆಸುತ್ತಲೇ ಇರುತ್ತದೆ. ಹೀಗಾಗಿ ಅವರ ಕಣ್ಣು ತಪ್ಪಿಸಿ ಏನನ್ನೂ ಮಾಡಲು ಆಗುತ್ತಿರಲಿಲ್ಲ. ಮಡಿ ಮೈಲಿಗೆ ವಿಷಯದಲ್ಲಂತೂ ಬಹಳ ಕಟ್ಟುನಿಟ್ಟು. ಅಜ್ಜಿಯ ಈ ವಿಪರೀತ ಚಟುವಟಿಕೆಗಳನ್ನು ಮಕ್ಕಳು ಹೇಗೋ ತಡೆದುಕೊಂಡರು. ಆದರೆ ಮೊಮ್ಮಕ್ಕಳ ಕಾಲಕ್ಕೆ ಸರಿಬರಲಿಲ್ಲ. ಅಲ್ಲದೆ ಇದ್ದ ಬದ್ದ ಜಮೀನೆಲ್ಲಾ ಉಳುವವರ ಪಾಲಾದ ಮೇಲೆ (ಉಳುವವನೇ ಹೊಲದೊಡೆಯ) ಮಕ್ಕಳು ಹಳ್ಳಿ ಬಿಟ್ಟು ಪಟ್ಟಣಗಳಲ್ಲಿ ವಾಸವಿದ್ದ ತಮ್ಮ ಮಕ್ಕಳ ಮನೆ ಸೇರಿಕೊಂಡರು. ಅಜ್ಜಿ ಮಾತ, `ಈ ವಯಸ್ಸಿನಲ್ಲಿ ನಾನು ಯಾರ ಹಲ್ಲು ಸಂದಿಗೂ ಸೇರಿಕೊಂಡು ಕಷ್ಟ ಕೊಡಲ್ಲ. ನನ್ನ ವ್ರತ ನೇಮಕ್ಕೆ ಭಂಗಾನೂ ತಂದುಕೊಳ್ಳಲ್ಲ. ಇರೋವರೆಗೂ ನಮ್ಮ ತಾತ ಮುತ್ತಾತಂದಿರು ಬಾಳಿ ಬದುಕಿರೋ ಮನೇಲಿ ಇರ್ತೀನಿ,’ ಎಂದು ಘೋಷಿಸಿ ಹಳ್ಳಿಯಲ್ಲಿಯೇ ಉಳಿದುಬಿಟ್ಟರು. ಯಾರು ಎಷ್ಟೇ ಕರೆದರೂ ಹೋಗಲಿಲ್ಲ. ನಮಗೂ ರಜಗಳಲ್ಲಿ ಮಕ್ಕಳಿಗೆ ಭಾರತದೇಶದ ಬೆನ್ನೆಲುಬಿನ ಪರಿಚಯ ಮಾಡಿಸಲು ಅನುಕೂಲವಾಯ್ತು. ನನಗೆ ಅಜ್ಜಿ ಎಂದರೆ ವಿಶೇಷ ಪ್ರೀತಿ (ಮೊದಲಿದ್ದ ಹೆದರಿಕೆಯೆಲ್ಲಾ ಪ್ರೀತಿಯಾಗಿ ಪರಿವರ್ತನೆಯಾಗಿ!) ರಜ ಬಂದಾಗ ಮಕ್ಕಳೊಂದಿಗೆ ಹೋಗಿ ನಾಲ್ಕಾರು ದಿನ ಹಾಯಾಗಿ ಇದ್ದು ಅವರು ಮಾಡಿಕೊಡುತ್ತಿದ್ದ ನುಚ್ಚಿನುಂಡೆ, ಕಜ್ಜಾಯ, ಮುಚ್ಚೋರೆ ಎಲ್ಲಾ ಸವಿದು ಬರುತ್ತಿದ್ದೆವು. ಒಂದು ಸಾರಿ ನನ್ನ ಸ್ವರಚಿತ, ಪ್ರಕಟಿತ ಪುಸ್ತಕವೊಂದನ್ನು ಕೊಡಲು ಹೋದಾಗ, `ಇದೇನು ರಾಮಾಯಣವೋ, ಭಗವದ್ಗೀತೆಯೋ ಇಟ್ಟು ಪೂಜೆ ಮಾಡೋಕ್ಕೆ, ನೀನೇ ಇಟ್ಕೊ’ ಎಂದು ನನ್ನ ಮುಖಕ್ಕೆ ತಣ್ಣೀರೆರೆಚಿದಂತೆ ಹೇಳಿಬಿಟ್ಟರು ಅಕ್ಷರ ದ್ವೇಷಿ ಅಜ್ಜಿ! ಇಷ್ಟರಲ್ಲೇ ನಾನು ಅನೇಕ ಭಾರಿ ಅಜ್ಜಿಗೆ ಅಕ್ಷರ ಕಲಿಸಲು ಹೋಗಿ ಸೋತಿದ್ದೆ. ಇನ್ನೊಂದು ಪ್ರಯತ್ನ (ಮರಳಿಯತ್ನವಮಾಡು) ಎಂದುಕೊಂಡು `ಈಗ ‘ಚೈತನ್ಯ’ದ ಮೂಲಕ ಹೇಳಿಕೊಡ್ತೀನಿ ಅಜ್ಜಿ. ತುಂಬಾ ಸುಲಭ. ರ, ಗ, ಸ, ದ, ಅ ದಿಂದ ಪ್ರಾರಂಭಿಸಿ ಕಲಿಸೋದು’ ಎಂದೆ. (`ನಲಿ-ಕಲಿ’ ಆಗಿನ್ನೂ ಅಸ್ಥಿತ್ವಕ್ಕೆ ಬಂದಿರಲಿಲ್ಲ!) ಪಟ್ಟು ಬಿಡದ ಉತ್ಸಾಹದಲ್ಲಿ. ಅಜ್ಜಿ ಜೋರಾಗಿ ಬೊಚ್ಚು ಬಾಯಗಲಿಸಿ ನಕ್ಕುಬಿಟ್ಟರು. `ನಿನ್ನ ರಾಗಾನೂ ಬೇಡ, ಸಾದಾನೂ ಬೇಡ. ಎಲ್ಲಾ ನೀನೇ ಇಟ್ಕೊ. ಎರಡು ಮಕ್ಕಳ ತಾಯಾದ್ರೂ ಇನ್ನೂ ನಿನ್ನ ಹುಡುಗಾಟಾ ಬಿಟ್ಟಿಲ್ಲವಲ್ಲೇ. ನನಗೇಕೇ ಅಕ್ಷರ? ಶಂಕರಾ ಚಾರ್ಯರೇ ಹೇಳಿಲ್ವ, `ಭಜ ಗೋವಿಂದಂ, ಭಜ ಗೋವಿಂದಂ, ಗೋವಿಂದಂ ಭಜ ಮೂಢಮತೇ, ಸಂಪ್ರಾಪ್ತೇ ಸನ್ನಿಹಿತೇ ಕಾಲೇ ನಹಿ ನಹಿ ರಕ್ಷತಿ ಡುಕರಿಂಕರಣೇ...’ಅಂತ, ಎಂದರು. ಅಜ್ಜಿ ಒಂದು ರೀತಿ `ಕಲಿತೋದದೆಯಂ ಕಾವ್ಯ ಪ್ರಯೋಗ ಮತಿಗಳ್’ ಎಂಬಂತಿದ್ದವರು. ಅವರಿಗೆ ಸುಪ್ರಭಾತ, ನಳ ಚರಿತ್ರೆ, ಭಗವದ್ಗೀತೆ, ಸಾಂಪ್ರದಾಯಿಕ ಹಾಡುಗಳು ಎಲ್ಲಾ ಬಾಯಲ್ಲೇ ಇದ್ದವು. ಇದರಿಂದ ನಾನಂತೂ ಅಧೀರಳಾಗಲಿಲ್ಲ. ಈ ಮೂಲಕ ಅಜ್ಜಿಗೆ ನನ್ನ ಸಾಹಿತ್ಯದಲ್ಲಿ ಒಲವು ಮೂಡಿಸಲು ಆಗದಿದ್ದರೂ ಕೃಷಿಕರ ಮಗಳಾದ ನಾನು ಸಾಹಿತ್ಯಕೃಷಿಯಲ್ಲಿ ತೊಡಗಿ ಅದನ್ನು ಕಲುಷಿತಗೊಳಿಸುವುದನ್ನು ಮುಂದುವರಿಸೇಬಿಟ್ಟೆ!

ಅಂದಹಾಗೇ ಮಾಲಿನ್ಯ ನಿಯಂತ್ರಣಾ ಮಂಡಳಿಯವರು ವಾಯುಮಾಲಿನ್ಯ, ಜಲಮಾಲಿನ್ಯ ಭೂಮಾಲಿನ್ಯ,... ಅಂತ ಅನೇಕ ರೀತಿಯ ಮಾಲಿನ್ಯಗಳನ್ನು ಪಟ್ಟಿ ಮಾಡಿದ್ದಾರೆ. ಆದರೆ ಏಕೋ ಸಾಹಿತ್ಯಮಾಲಿನ್ಯವನ್ನು ಮಾತ್ರ ಸೇರಿಸಿಲ್ಲ! ಈ ಸಾಹಿತ್ಯಮಾಲಿನ್ಯ ಆಂತರಿಕ ಮತ್ತು ಬಾಹ್ಯವಾಗಿ ಎರಡು ರೀತಿ ಮಾಲಿನ್ಯವನ್ನು ಉಂಟುಮಾಡುತ್ತದೆ. ಆಂತರಿಕ ಸಾಹಿತ್ಯದ ಗುಣಾತ್ಮಕತೆಗೆ ಸಂಬಂಧಿಸಿದ್ದು. ಆದರೆ ಬಾಹ್ಯ ನೇರವಾಗಿ ಪರಿಸರದ ಮೇಲೇ ಪ್ರಭಾವ ಬೀರುತ್ತೆ. ಇದು ಒಂದು ರೀತಿ ಕ್ಯಾನ್ಸರ್ನಂತೆ! ನಿಧಾನವಾಗೇ ಪರಿಸರವನ್ನು ಹಾಳುಮಾಡಲಾರಂಭಿಸಿ ಕ್ಷಿಪ್ರಗತಿಯಲ್ಲಿ ಮುಂದುವರಿಸಿಬಿಡುತ್ತದೆ. ನನ್ನಂಥಾ ಮರಿಸಾಹಿತಿಗಳು ಮೊದಮೊದಲು ಪತ್ರಿಕೆಗಳಿಗೆ ಕಳಿಸಿ (ಪಾದವೂರಿ!) ಇದ್ದಕ್ಕಿದ್ದಂತೆಯೇ ವರ್ಷಕ್ಕೆ ಸಾವಿರಾರು ಪುಸ್ತಕಗಳನ್ನು (ಪ್ರತಿಗಳನ್ನು) ಪ್ರಕಟಿಸಿಬಿಟ್ಟರೆ ಎಷ್ಟೊಂದು ಕಾಗದ ಬೇಕಾಗುತ್ತದೆ..., ಕಾಗದಕ್ಕಾಗಿ ಮರದ ತಿರುಳಿನ ಬೇಡಿಕೆ ಹೆಚ್ಚಾಗುತ್ತದೆ. ಇದು ಅರಣ್ಯನಾಶಕ್ಕೆ ಕಾರಣವಾಗುತ್ತದೆ. ತತ್ಫಲವಾಗಿ ಜಲಚಕ್ರದ ಮೇಲೆ ಪರಿಣಾಮ ನೇರ. ಒಬ್ಬರನ್ನು ನೋಡಿ ಮತ್ತೊಬ್ಬರು ಹೀಗೆ ಸರಪಳಿ ಕ್ರಿಯೆ (ಬೀಜವಿದಳನ ಕ್ರಿಯೆಯಂತೆ) ಮುಂದುವರಿಯುವುದರಿಂದ ಪರಿಣಾಮ ಘೋರ!

ನನ್ನ ಸಾಹಿತ್ಯದ ಬಗ್ಗೆ ಅಜ್ಜಿಯ ಜೊತೆ ಮತ್ತೆ ಯಾವತ್ತೂ ಮಾತನಾಡಲಿಲ್ಲ. ಆದರೆ ಪ್ರಭಾವಶಾಲಿಯಾಗಿ ನನ್ನ ಸಾಹಿತ್ಯವೇ ಅಜ್ಜಿಯನ್ನು ಬಿಡದೇ ನನ್ನ ಬಳಿಗೆ ಸೆಳೆದು ತಂದಿತು!

ಆ ದಿನ ರಾತ್ರಿ ಮಲಗಿ ಇನ್ನೇನು ನಿದ್ದೆಯ ಆಳಕ್ಕೆ ಜಾರುತ್ತಿದ್ದೆ. ಯಾರೋ ದಬದಬ ಬಾಗಿಲು ಬಡೀತಿದಾರೆ! ಇದ್ಯಾರಪ್ಪ ಇಷ್ಟೊತ್ತಿನಲ್ಲಿ ಕಾಲಿಂಗ್ ಬೆಲ್ ಇದ್ದರೂ ಬಾಗಿಲು ಬಡೀತಿರೋದು ಎನಿಸಿತು. ಆದರೆ ಹೊಲಿದಂತಿದ್ದ ಕಣ್ಣುಗಳನ್ನು ಬಿಡಿಸಲು ಆಗದೇ ಯಥಾ ಪ್ರಕಾರ ಕಿವಿಯನ್ನು ಚುರುಕುಗೊಳಿಸಿದೆ. ನನ್ನವರು ಬಾಗಿಲು ತೆರೆದಾಕ್ಷಣ `ಹೋ...’ ಎಂದು ಗೃಹಪ್ರವೇಶ ಮಾಡಿದ ಅಜ್ಜಿಯ ದ್ವನಿ! `ಏನಾಯ್ತಜ್ಜಿ’ ಎಂದು ಇವರು ಕೇಳುತ್ತಿದ್ದರೂ, `ಹೀಗಾಗಬಾರದಿತ್ತು ಕಣೋ ರಂಗಾ!’ಎಂದು ಗೋಳಾಡಿದರು. ಇವರು ಎತ್ತಲಿಂದಲೋ ಸಂಬಂಧವೇ ಆಗಬೇಕೆಂದು (ಬಾದರಾಯಣ...) ಕಂಡುಹಿಡಿದು ಮದುವೆಯ ದಿನವೇ ಏಕವಚನ ಪ್ರಯೋಗಕ್ಕಿಳಿದಿದ್ದರು ಅಜ್ಜಿ. (ನಮ್ಮ ಕಡೆ ಅಳಿಯ ಎಷ್ಟೇ ಚಿಕ್ಕವನಾದರೂ ಬಹುವಚನ ಪ್ರಯೋಗ ಮಾಡುವುದು ಸಂಪ್ರದಾಯ!)

`ಗೃಹಲಕ್ಷ್ಮಿ ಇದ್ದಿದ್ದರೆ ಮನೆ ಹೀಗಿರ್ತಿತ್ತೇನೋ, (ನನ್ನ ಮನಸ್ಸಿನಂತೆಯೇ ನನ್ನ ಮನೆಯೂ ಅಸ್ತವ್ಯಸ್ತ!) ಏನಾಗಿತ್ತೋ ನನ್ನ ಕಂದಂಮಂಗೆ, ಮುತ್ತಿನಂಥಾ ಮಕ್ಕಳನ್ನು ಬಿಟ್ಟು ಹೋದಳಲ್ಲೋ....,’ ಅಜ್ಜಿ ಪ್ರಲಾಪಿಸುತ್ತಾ ಗಳಗಳನೆ ಅಳುತ್ತಿದ್ದಾರೆ. ನನ್ನ ಮಕ್ಕಳೂ ಆಗಲೇ ಅವರ ಮುಂದೆ ಹೋಗಿ ನಿಂತಿವೆ ಎನ್ನುವುದೂ ಖಚಿತವಾಯ್ತು ಇವರಿಗಂತೂ ತಲೆ ಬುಡ ತಿಳಿಯದೇ ಒಳಗೆ ಬಂದು ನನ್ನ ಮುಸುಕೆಳೆದು, `ಅಜ್ಜಿ ಬಂದು ಅಷ್ಟೊಂದು ಅಳ್ತಿದಾರೆ, ಮಕ್ಕಳೂ ಎದ್ದಿವೆ, ನಿಂಗೆ ಏಳಕ್ಕೆ ಆಗಲ್ವಾ ಇನ್ನೂ,’ ಎಂದು ನನ್ನನ್ನು ಎಳೆದುಕೊಂಡು ಹೋಗಿ ಅವರ ಮುಂದೆ ನಿಲ್ಲಿಸಿದರು.

`ಅಯ್ಯೋ ಇದೇನೇ ಅವಲಕ್ಷಣಾ...!!!’(ಅಜ್ಜಿಯ ದುಃಖವೆಲ್ಲಾ ಈಗ ಆಶ್ಚರ್ಯವಾಗಿತ್ತು.) ಎಂದು ನನ್ನಮುಂದೆ ಒಂದು ಕಾರ್ಡ್ ಹಿಡಿದರು. ಹೌದು ನನ್ನದೇ ಭಾವಚಿತ್ರವಿರುವ ಆಹ್ವಾನ ಪತ್ರಿಕೆ! ನನ್ನ ಒಂದು ಪುಸ್ತಕ ಸಾಹಿತ್ಯ ಕ್ಷೇತ್ರವನ್ನು ಕಡಿಮೆ ಕಲುಷಿತಗೊಳಿಸಿದ್ದಕ್ಕಾಗಿ ಅಕಸ್ಮಾತ್ ಪ್ರಶಸ್ತಿ ಪಡೆದುಕೊಂಡಿತ್ತು. ಅದಕ್ಕಾಗಿ ಸ್ಥಳೀಯ ಸಾಹಿತ್ಯಾಭಿಮಾನಿಗಳು ಒಂದು ಸನ್ಮಾನ ಸಮಾರಂಭ ಇಟ್ಟುಕೊಂಡಿದ್ದರು. ಅದರ ಆಹ್ವಾನಪತ್ರಿಕೆಯಲ್ಲಿ ನನ್ನ ಪರಿಚಯದೊಡನೆ ಭಾವಚಿತ್ರವನ್ನೂ ಹಾಕಿಸಿದ್ದರು. ನನ್ನವರು ಅವರಿಗೆ ನಮ್ಮ ಬಂಧುಗಳ ವಿಳಾಸ ಕೊಡುವ ಸಂಭ್ರಮದಲ್ಲಿ ಅಜ್ಜಿಯ ವಿಳಾಸವನ್ನೂ ಕೊಟ್ಟಿದ್ದರು. ಅಜ್ಜಿ ಅದನ್ನು ನೋಡಿ ನನ್ನ ಉ...ತ...ರ...ಕ್ರಿ...ಯಾ...ದಿ... ಆ...ಹ್ವಾ...ನ ಪತ್ರಿಕೆ ಎಂದು ಭಾವಿಸಿ.....

`ನನ್ನ ಕಂದಾ ನೂರು ವರ್ಷ ಸುಖವಾಗಿ ಬಾಳು,’ ಅಜ್ಜಿಯ ಸುಕ್ಕು ಕೈಗಳು ನನ್ನ ಕೆನ್ನೆ ನೇವರಿಸಿದವು.

                           *************************************************No comments:

Post a Comment