Friday, January 5, 2024

ಕವನ : ವಿಸ್ಮಯ

 ಎಲ್ಲರಿಗೂ ವಂದನೆಗಳು🙏

ನನ್ನ ಈ ಕವನ ತಮ್ಮ ಪ್ರೀತಿಯ ಓದಿಗೆ❤️🌼
ವಿಸ್ಮಯ       

ತನ್ನ ಪರ ಪೀಳಿಗೆಯ
ಉಳಿವಿಗಾಗಿ
ಕನಸುವ ಪುಟ್ಟ ಹಕ್ಕಿಗೂ
ತನ್ನದೇ ಗೂಡೊಂದ
ಕಟ್ಟುವ ಸಂಭ್ರಮ

ಅತ್ತಿತ್ತ ಅಲೆಯುತ್ತಾ
ಹೆಕ್ಕಿ ಒಂದೊಂದೇ
ಹುಲ್ಲಗರಿ ಕಸಕಡ್ಡಿ...
ಬೆಳಗಿನಿಂದ ಬೈಗವರೆಗೂ
ಒಗ್ಗೂಡಿಸುವ ಶ್ರಮ

ತೂಗು ಎಲೆಗಳ
ನಡುವೆಯೋ
ಮರದ ಪೊಟರೆಯಲೋ
ಸೂಕ್ತಸ್ಥಳವಾರಿಸಿ
ಕುಕ್ಕೆಹೆಣೆದು
ಮೊಟ್ಟೆಗಳು ಅಲುಗದಂತೆ
ಮರಿ ನಲುಗದಂತೆ
ಸಿದ್ಧಪಡಿಸುವ
ಮೃದುಹಾಸು

ಇಟ್ಟಮೊಟ್ಟೆಗೆ
ಕಾವೂಡುವ ಸಡಗರದಿ
ತನ್ನೆಲ್ಲ ಅತ್ಯಗತ್ಯವನೂ
ಕಡೆಗಣಿಸಿ
ಗೂಡುಬಂಧಿಯಾಗಿ
ಧೇನಿಸುವ
ಮಾತೃ ತಪಸ್ವಿ...

ಈ ಯಾವ
ಕರ್ಮಾನಂದವೂ
ಏಕಿಲ್ಲ
ಕರ್ಣಾನಂದಕರಿ
ಮುದ್ದು ಕೋಗಿಲೆಗೆ?

ಸಿದ್ಧ ಗೂಡಲಿ
ಮೊಟ್ಟೆ ಇಟ್ಟು
ಎದ್ದೊಡುವ
ಕಳ್ಳ ಕಾಯಕವೇ?

ಪ್ರಕೃತಿಯೊಡಲಲೂ
ಪರಪುಟ್ಟನಂಥಾ
ಪರವಂಚನೆಯ
ಜಾಲದ ಒಳಸುಳಿವ
ಬಲ್ಲಾತ - ನಿರ್ಮಿತ
ನೀನಲ್ಲವೇ ವಿಭುವೇ?
               ~ಪ್ರಭಾಮಣಿ ನಾಗರಾಜ
(ಇದು ' ಕಥಾಗುಚ್ಛ'ದ ನಿನ್ನೆಯ 'ಕಾವ್ಯಾoಗಣ'ದಲ್ಲಿ ಪ್ರಕಟವಾಗಿದೆ.)



No comments:

Post a Comment