Wednesday, July 24, 2024

ಮುಗಿಯದ ಆಟ, ಆ ತುಂಟಾಟ!




 ಜುಲೈ 2024ರ 'ಅಪರಂಜಿ' ಮಾಸಪತ್ರಿಕೆಯಲ್ಲಿ ಪ್ರಕಟವಾದ ನನ್ನ ಒಂದು ಪುಟ್ಟ ಲಘು ಬರಹ ನಿಮ್ಮ ಪ್ರೀತಿಯ ಓದಿಗೆ😀


🏌️ಮುಗಿಯದ ಆಟ, ಆ ತುಂಟಾಟ!⛹️


ಅಕ್ಕಪಕ್ಕದ ಮನೆಗಳಿಲ್ಲದ ಹಳ್ಳಿಯ ನಮ್ಮ ಮನೆಯಲ್ಲಿ ನಮ್ಮ ಬಾಲ್ಯ ಚಿಕ್ಕ ಮಕ್ಕಳಾಗಿದ್ದ ನಾವು ನಾವೇ ಆಟವಾಡಿಕೊಳ್ಳುವುದರಲ್ಲೇ ಸರಿದುಹೋಯಿತು.

ನಮ್ಮ ಮನೆಯಲ್ಲಿ ಸುಂದರವಾಗಿ ಕೆತ್ತನೆ ಮಾಡಿದ್ದ ಒಂದು ಸಣ್ಣ ಮರದ ತೊಟ್ಟಿಲು ಇತ್ತು. ನಾನು ಚಿಕ್ಕವಳಾಗಿದ್ದಾಗ ಅದನ್ನು ಜಗುಲಿಯ ಮೇಲಿನ ಸೂರಿಗೆ ಕಟ್ಟಿಸಿಕೊಂಡು ತೂಗುವ ಆಟ ಅಡುತ್ತಿದ್ದೆ. ನನಗಿಂತ ಎರಡು ವರ್ಷ ಚಿಕ್ಕವನಾದ ನನ್ನ ತಮ್ಮ ಬಹಳ ಬಲಶಾಲಿಯಾಗಿದ್ದ. ದಿನದಲ್ಲಿ ಕನಿಷ್ಠ ಒಂದು ಸಾರಿಯಾದರೂ ಏನಾದರೂ ಕ್ಯಾತೆ ತೆಗೆದು ಹೊಡೆದು ನನ್ನನ್ನು ಅಳಿಸುತ್ತಿದ್ದ. ಅವತ್ತೂ ಹಾಗೇ ತನ್ಮಯತೆಯಿಂದ ತೊಟ್ಟಿಲು ತೂಗುತ್ತಿದ್ದವಳನ್ನು ಹಿಂದಿನಿಂದ ಅನಾಮತ್ತಾಗಿ ನೂಕಿಬಿಟ್ಟ! ನಾನು ಆಯತಪ್ಪಿ ಜಗುಲಿಯಿಂದ ಕೆಳಗುರುಳಿದಾಗ ನನ್ನ ತಲೆ ಜಗುಲಿಯ ಕೆಳಗೆ ದನಕಟ್ಟಲು ಹೊಡೆದಿದ್ದ ಗೂಟಕ್ಕೆ ಬಡಿದು ಬುರುಡೆ ಒಡೆದು ರಕ್ತ ಸುರಿಯಲಾರಂಭಿಸಿತು. ನನ್ನ ಕಿರುಚಾಟಕ್ಕೆ ಓಡಿಬಂದ ಹಿರಿಯರಲ್ಲಿ ಚಿಕ್ಕತ್ತೆ ನನ್ನ ಗಾಯ ತೊಳೆದು ಆ ಕಾಲದ ಪ್ರಥಮ ಚಿಕಿತ್ಸೆ ಕಾಫಿಪುಡಿ ತುಂಬಿದರೆ ದೊಡ್ಡತ್ತೆ ಹೇಗಾಯಿತು ಎಂದು ವಿಚಾರಿಸುವ ಮೊದಲೇ ನನ್ನ ತಮ್ಮನನ್ನು ಎಳೆದುಕೊಂಡು ಬಂದು ನಾಲ್ಕೇಟು ಬಾರಿಸಿ ಕೈಗಳನ್ನು ಹಿಂದಕ್ಕೆ ಕಟ್ಟಿ ಕಾಲನ್ನೂ ಕಟ್ಟಿ ಕೂರಿಸಿಯಾಗಿತ್ತು! ಅಳುತ್ತಿದ್ದ ನನ್ನ ಮುಂದೆ ಕಡಲೆಕಾಯಿ ಸುರಿದು, ಬೆಲ್ಲ ಕೊಟ್ಟು ರಮಿಸಿದರೆ ಅವನಿಗೆ ಏನನ್ನೂ ಕೊಡದೆ ಮನೆಗೆ ಬಂದವರೆಲ್ಲಾ ಬಯ್ಯುವುದೇ ಆಯಿತು. ದಿನವೂ ಅವನಿಂದ ಹೊಡೆತ ತಿಂದು ಏನೂ ಮಾಡಲಾಗದಿದ್ದ ಅಸಹಾಯಕ ಸ್ಥಿತಿಯಲ್ಲಿದ್ದ ನಾನು ಇದೇ ಸುಸಮಯವೆಂದು ಯಾರಾದರೂ ಬಂದಾಕ್ಷಣವೇ ಹೊಸದಾಗಿ ಅಳುತ್ತಾ ಅವನನ್ನು ಮತ್ತಷ್ಟು ಬೈಸಿ ಸೇಡು ತೀರಿಸಿಕೊಳ್ಳುತ್ತಿದ್ದೆ!

        ಬಹಳ ತುಂಟನಾಗಿದ್ದ ನನ್ನ ತಮ್ಮ ಒಮ್ಮೆ ದನೀನ ಕೊಟ್ಟಿಗೆಯಲ್ಲಿ ಒಂದು ಹಾವಿನಮರಿಯನ್ನು ಹಿಡಿದುಕೊಂಡು ಬಿಟ್ಟ. ಮನೆಯವರೆಲ್ಲರೂ ಜಮೀನು ಹಾಗೂ ಹೊರಗಿನ ಕೆಲಸಗಳಿಗೆ ಹೋಗಿದ್ದು ದೊಡ್ಡವರಾಗಿ ನಮ್ಮ ಚಿಕ್ಕತ್ತೆ ಒಬ್ಬರೇ ಮನೆಯಲ್ಲಿದ್ದದ್ದು. ನಾವೆಲ್ಲಾ ಓಡಿಹೋಗಿ ಅವರನ್ನು ಕರೆದುಕೊಂಡು ಬಂದೆವು. ಪಾಪ, ಕಣ್ಣೂ ಸರಿಯಾಗಿ ಕಾಣದ ಅವರು ಏನು ತಾನೇ ಮಾಡ್ತಾರೆ!  ಅವನು ಹಾವಿನಮರಿ ತಲೆ ಮೇಲೆತ್ತದಂತೆ ಒಂದೇ ಸಮನೆ ಕೊಡವುತ್ತಿದ್ದಾನೆ. ಏನೂ ತೋಚದೆ ಅವರು ಇನ್ನೆಲ್ಲಿ ಸ್ವಲ್ಪ ಹೆಚ್ಚುಕಮ್ಮಿಯಾದ್ರೆ ಕಚ್ಚಿಬಿಡುತ್ತೋ ಅಂತ ದೇವರನ್ನ ಪ್ರಾರ್ಥಿಸುತ್ತಾ, 'ಕಂದಾ, ದೂರಕ್ಕೆ ಎಸೆದುಬಿಡಪ್ಪ ಅಂತ ಗೋಗರೆಯಲಾರಂಭಿಸಿದರು. ಇದ್ದಕ್ಕಿದ್ದಂತೆಯೇ ಅವನು ಜೋರಾಗಿ ಬೀಸಿ ಎಸೆದುಬಿಟ್ಟ! ಅದು ಎಲ್ಲಿ ಹೋಯಿತೋ ಯಾರಿಗೂ ಕಾಣಲಿಲ್ಲ.

             ನನ್ನ ತಮ್ಮನ  ತುಂಟಾಟಗಳಿಗೆ ಕೊನೆಮೊದಲೇ ಇರಲಿಲ್ಲ. ದಿನದಲ್ಲಿ ಒಂದುಸಾರಿಯಾದರೂ ಏನಾದರೂ ಒಂದು ಚೇಷ್ಟೆ ಮಾಡಿ ನಮ್ಮ ದೊಡ್ಡತ್ತೆಯಿಂದ ಹೊಡೆಸಿಕೊಳ್ಳುತ್ತಿದ್ದ. `ಮೂರ್ತಿ ಬರಲಿ ತಾಳು,’ ಎಂದು ಅವರು ತಮ್ಮ ಅಣ್ಣನಿಗೂ ಕಂಪ್ಲೇಂಟ್ ಮಾಡಲು ಹೇಳಿದರೆ ಅಮ್ಮ ರಾತ್ರಿ ಅವರು ಬರುವ ವೇಳೆಗೆ ನಮಗೆಲ್ಲಾ ಊಟಬಡಿಸಿ ಮಲಗಿಸಿಬಿಡುತ್ತಿದ್ದರು! ಎದ್ದಿದ್ದರೆ ನಾವೂ ಸಾಕ್ಷಿ ಹೇಳಬೇಕಲ್ಲ! ಮಲಗಿದ್ದ ಮಕ್ಕಳನ್ನು ಎಬ್ಬಿಸಿ ಹೊಡೆಯುತ್ತಿರಲಿಲ್ಲ ನಮ್ಮ ತಂದೆ!     

       ಹಬ್ಬಗಳು ಬಂತೆಂದರೆ ತಿನ್ನಲು ಸಿಗುತ್ತಿದ್ದ ವಿಶೇಷ ತಿಂಡಿಗಳ ಬಗ್ಗೆ ಆಸೆ ಇದ್ದರೂ, `ಪೂಜೆಯಾಗುವವರೆಗೂ ಮಕ್ಕಳು ಏನೂ ತಿನ್ನುವುದು ಬೇಡ,’ ಎನ್ನುವ ನಿಯಮವಿರುತ್ತಿದ್ದುದರಿಂದ ಸಂಕಟವೇ ಹೆಚ್ಚಾಗುತ್ತಿತ್ತು. ಅದೂ ವಿಶೇಷವಾಗಿ ಗಣಪತಿ ಹಬ್ಬದಲ್ಲಿ ಬಹಳ ಕಟ್ಟುನಿಟ್ಟು! ನನ್ನ ತಮ್ಮನಿಗೋ ಹಸಿವು ತಡೆಯಲೇ ಆಗುತ್ತಿರಲಿಲ್ಲ. ಅಮ್ಮನಿಗೂ ಮಕ್ಕಳು ಉಪವಾಸವಿರುವುದು ಇಷ್ಟವಾಗುತ್ತಿರಲಿಲ್ಲ. ಆದರೆ ಹಿರಿಯರ ಕಣ್ಣುತಪ್ಪಿಸಿ ಏನನ್ನೂ ಕೊಡಲೂ ಆಗುತ್ತಿರಲಿಲ್ಲ. ತಮ್ಮ ಪ್ರೀತಿಯ ಕಿರಿಮಗನ ಪಾಡು ನೋಡಲಾಗದೇ ಅವನಿಗೆ ಒಂದು ಚೊಂಬಿನಲ್ಲಿ ಹಿಂದಿನ ದಿನ ಗೌರಿಹಬ್ಬದ ನಾಲ್ಕು ಒಬ್ಬಟ್ಟುಗಳನ್ನು ಹಾಕಿ ಕೊಡುತ್ತಿದ್ದರು. ಅವನು ಚೊಂಬು ಹಿಡಿದುಕೊಂಡು(!) ನಮ್ಮ ಮನೆ ಹಿಂದಿನ ಬಾವಿಕಟ್ಟೆ ಮೂಲೇಲಿ ಕುಳಿತು ತಿಂದು ಬರುತ್ತಿದ್ದ! `ಅಯ್ಯೋ ಸೂರ್ಯ ನೆತ್ತೀಗೆ ಸಿಕ್ಕಿಹಾಕಿಕೊಂಡರೂ ಇನ್ನೂ ಪೂಜೆ ಆಗಿಲ್ಲ. ಬೇಗ ಮಾಡೋ ಮೂರ್ತಿ, ಪಾಪ ನಮ್ಮ ಚಿಕ್ಕದೂ ಉಪವಾಸ ಇದೆ,’ ಎಂದು ಹಲುಬುತ್ತಿದ್ದರು ನಮ್ಮತ್ತೆ!  

               ಸದಾ ಆಟ, ಓಡಾಟಗಳಲ್ಲೇ ತೊಡಗಿರುತ್ತಿದ್ದ ನಮಗೆ ಅಗಾಧ ಹಸಿವು! ಇನ್ನೂ ಅಡುಗೆ ಪಾತ್ರೆ ಒಲೆಯಿಂದ ಇಳಿಯುವ ಮೊದಲೇ ತಟ್ಟೆ ಇಟ್ಟುಕೊಂಡು ಊಟಕ್ಕೆ ಕುಳಿತುಬಿಡುತ್ತಿದ್ದೆವು. ಪಲ್ಯ, ಗೊಜ್ಜುಗಳ ರುಚಿಗೆ ಇನ್ನಷ್ಟು, ಮತ್ತಷ್ಟು ಎಂದು ದುಂಬಾಲುಬೀಳುತ್ತಿದ್ದೆವು. ಅಮ್ಮ, `ಹಿಂದೆ-ಮುಂದೆ ನೋಡಿಕೊಂಡು ಊಟಮಾಡಿ ಎನ್ನುತ್ತಿದ್ದರು. ಅಮ್ಮ ಈ ಮಾತನ್ನು ನಂತರದವರಿಗೂ ಉಳಿಸಿ ಎಂಬ ಅರ್ಥದಲ್ಲಿ ಹೇಳಿದ್ದರೂ ನಾವು ಹಿಂದೆ ಮುಂದೆ ನೋಡುತ್ತಾ ಗದ್ದಲವೆಬ್ಬಿಸುತ್ತಿದ್ದೆವು! ಹುಳಿ ಮಾಡಿದರಂತೂ , `ಹೋಳು, ಹೋಳು’ ಎಂದು ಕಿರುಚಲಾರಂಭಿಸುತ್ತಿದ್ದೆವು ಅಮ್ಮ, `ಇನ್ನು ಹುಳಿಯೊಳಗೆ ಮುಳುಗಿ ತೆಗೆದು ಹಾಕಬೇಕು ಅಷ್ಟೆ,’ ಎನ್ನುತ್ತಿದ್ದರು. ಸಾರಿನ ಕಲ್ಲುಸೋರೆಯೊಳಗೆ ಘನ ಗಾತ್ರದ ಅಮ್ಮ ಮುಳುಗುವ ಕಲ್ಪನೆಯಲ್ಲಿ ನಮಗೆ ನಕ್ಕನಕ್ಕು ಸಾಕಾಗುತ್ತಿತ್ತು!  

                         ಅನುದಿನವೂ ನವನವೀನವಾಗಿರುತ್ತಿದ್ದ ಈ ಬಾಲ್ಯದಾಟಗಳಿಗೆ ಕೊನೆ ಎಂಬುದೇ ಇರುತ್ತಿರಲಿಲ್ಲ!


(ಇದು 'ಕನ್ನಡ ಕಥಾಗುಚ್ಚದಲ್ಲಿ ಪ್ರಕಟವಾಗಿದೆ.)

                                 ~ಪ್ರಭಾಮಣಿ ನಾಗರಾಜ

No comments:

Post a Comment