https://www.facebook.com/share/p/1BbDCpd9C3/
ಜೂನ್,2024ರ ಉತ್ಥಾನ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕವನ `ಮುಕ್ತಾ' ನಿಮ್ಮ ಓದಿಗೆ❤️ ಅಭಿಪ್ರಾಯ ತಿಳಿಸಿ🙏
ಧನ್ಯವಾದಗಳು ಉತ್ಥಾನ❤️🙏
ಮುಕ್ತ?
ಅಬ್ಬಾ
ಒಮ್ಮೆ ಆ ದಿನಗಳ
ಪರ್ಯವಲೋಕಿಸಿದಾಗ...
ಬೀಳದಂತೆ
ಬೆನ್ನಮೇಲಿನ ಹೊರೆ
ಅತ್ತಿತ್ತ ಅಲುಗದಂತೆ
ಜಾರದಂತೆ
ಜರುಗದಂತೆ
ಸಮತೋಲಿಸುತ್ತಾ...
ಮುಗ್ಗರಿಸುವ
ಕೊರಕಲೋ
ಗುದ್ದಿ ಬೀಳಿಸುವ
ಗುಡ್ಡವೋ
ಗ್ರಹಿಸಲಾಗದ
ಗಾಡಾಂಧಕಾರದ
ಅವಕಾಶದಲಿ
ತಬ್ಬರಿಸಿ
ಮುಂದಡಿಯಿಡುತ್ತಾ...
ಅತ್ತಿತ್ತ
ಹೆಜ್ಜೆಯೂರುತ್ತಿರುವವವರ
ಅಧ: ಪತನದ ಆಕ್ರಂದನ
ಏರಿ ಮೆರೆವವರ
ವಿಜಯದ ಕೇಕೆಗಳಿಗೆ
ಕಿವಿಯಾಗಿ
ಹಂಗಿಸಿ ಹಿಂದಿಕ್ಕುವವರ
ಸೈರಿಸುತ್ತಾ...
ಕಗ್ಗತ್ತಲಿನ ಭವಿಷ್ಯದೊಳಗೂ
ಆಗಾಗ ಮಿಂಚುವ
ಬೆಳಕನಾಶ್ರಯಿಸಿ
ಕಾತರಿಸುತ್ತಾ
ಕಂಗಾಲಾಗುತ್ತಿದ್ದ ಪರಿ....
ಈಗ
ಹೊರಜಗತ್ತಿಗೆ
ಹೊರೆಯೆನಿಸುವುದೂ
ಹತ್ತಿಯಷ್ಟೇ ಹಗುರ
ಏಳುಬೀಳುಗಳ
ಹಂಗಿಲ್ಲದ ಹೂಭಾವ
ಅಂಧಕಾರದಲೂ
ಶರಣಾಗತಿಯಿಂದಷ್ಟೇ
ಅನಂತದರ್ಶನವೆಂಬ
ಸಮರ್ಪಣಾ ಭಾವ
ಸಚ್ಚಿದಾನಂದದಲಿ
ಮೀಯುತ್ತಿದೆ ಜೀವ.
~ಪ್ರಭಾಮಣಿ ನಾಗರಾಜ
No comments:
Post a Comment