Tuesday, July 14, 2026

ಜುಲೈ12,2026ರ 'ಕರ್ಮವೀರ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕವನ, 'ಅದ್ವೈತ'🌼

 


https://www.facebook.com/share/p/1E8HG1eJCT/
👆ಜುಲೈ12,2026ರ 'ಕರ್ಮವೀರ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕವನ, 'ಅದ್ವೈತ'🌼


ಅದ್ವೈತ              

ಎತ್ತೆತ್ತಲೋ ಗೊತ್ತುಗುರಿಯಿಲ್ಲದೇ
ಅಂಡಲೆಯುತ್ತಿದ್ದ ಈ  ಪಶುವ
ಬಂಧಿಸಿ ಅದೃಶ್ಯ ಸೂತ್ರದಲ್ಲಿ
ಸೆಳೆದುಕೊಳ್ಳಲಾರಂಭಿಸಿದೆ ನಿನ್ನತ್ತ

ತೀವ್ರ ಸೆಣಸಾಟ
ಅನಿಯಂತ್ರಿತ ಹಗ್ಗಜಗ್ಗಾಟ
ಫಲಿತ ವೃತ್ತಾಕಾರ ಪಥದ
ನಿಲ್ಲದೋಟದಲಿ
ನಿರತ ಪಶುವಿಗೆ
ಅತ್ತಿತ್ತ ಗಮನಿಸಲೂ
ಆಸ್ಪದರಾಹಿತ್ಯ

ಸುತ್ತಿಸುತ್ತಿ ಹೈರಾಣಾದಂತೆ
ಶಿರವೆತ್ತಿ ಬೇಡಿತೇನೋ ಎನಿಸುವಾಗಲೇ
ಇಷ್ಟಿಷ್ಟೇ ತ್ರಿಜ್ಯವ ಕ್ಷೀಣಿಸುತ್ತಾ
ಪರಿಧಿಯನಲ್ಪಗೊಳಿಸಿ
ಸುತ್ತು ಪಥವ ಕಿರಿದಾಗಿಸಿದಂತೆ
ಸುಸ್ತಾದ ಜೀವಕ್ಕೇನೋ ಭರವಸೆ

ಶೂನ್ಯಗೊಳಿಸಿಬಿಡು ಈ ಅಂತರವ
ಹೇ ಪ್ರಭುವೇ
ಸೆಳೆದುಕೊಂಡುಬಿಡು ನಿನ್ನೊಳಗೇ
ಆತ್ಮವ ಪರಮಾತ್ಮನಲಿ
ಐಕ್ಯಗೊಳಿಸಿ
                      ✍️ಪ್ರಭಾಮಣಿನಾಗರಾಜ

No comments:

Post a Comment