Saturday, September 18, 2010

ಮಗುವಿಗೆ......

ಕಂದಾ
ಬಿಗಿವ ಎದೆ
ಕ್ಷೀರ ಶರಧಿ
ಒತ್ತೊತ್ತಿ ಬರುವ ನೋವ
ಹತ್ತಿಕ್ಕುತ್ತಾ
ದುಡಿವ ಯ೦ತ್ರ

ನಿಮ್ಮಪ್ಪ ಕೇಳಲಿಲ್ಲ ಒಟ್ಟಿಗೆ
ವರದಕ್ಷಿಣೆ
ಕ೦ತು ಕ೦ತಿನಲೇ
ಸ್ವೀಕರಿಸುವಷ್ಟು
ಸಹನಶೀಲರು!
ಸ೦ಪಾದನೆಯೊ
ತಲೆಗಾದರೆ ಕಾಲಿಗಿಲ್ಲ
ಆರ್ಥಿಕ ಸ್ವಾವಲ೦ಬನೆ
ನಮಗೂ ಬೇಕಲ್ಲ

ಕಂದಾ
ಅಲ್ಲೀಗ ನಿನ್ನ
ನವಿರು ತುಟಿಯೊಳಗೆ
ನಿಪ್ಪಲ್ ತೂರಿಸುತ್ತಿರಬಹುದಲ್ಲವೆ
ಆಯಾ?
ನಲುಗಬೇಡ
ಒಗ್ಗಿಸಿಕೊ ಅನಿವಾರ್ಯತೆಗೆ
ನನಗೂ ದಿನವೆಲ್ಲಾ
ನಿನ್ನೊಡನಾಡಿ
ತುತ್ತಿಟ್ಟು ಮುತ್ತಿಟ್ಟು
ಲಾಲಿ ಜೋಗುಳ ಹಾಡುತ್ತಾ...
ಸ೦ಭ್ರಮಿಸುವ ಆಸೆಯಿಲ್ಲವೇ?

ಬದುಕ ಯಾ0ತ್ರಿಕತೆ
ಇನ್ನೂ.....
ಬರಡಾಗಿಸಿಲ್ಲ ಭಾವನೆಗಳ
ವಾರಕ್ಕೊ೦ದು ದಿನ
ನಿನಗೆ೦ದೇ ಮೀಸಲು
ಇದೋ ಓಡೋಡಿಬರುವೆ
ನಿನ್ನ ಕಣ್ಣೀರೊರೆಸಲು
ಅಪ್ಪಿ ಮುದ್ದಾಡಿ ಹಾಲುಣಿಸಲು

ಕಂದಾ
ಬಿಕ್ಕಳಿಸಬೇಡ
ನೆತ್ತಿಹತ್ತೀತು ಜೋಕೆ
ನಿಧಾನವಾಗೇ ಹಾಲು ಹೀರು
ಆಹಾ! ನಿನ್ನ ಮೃದು
ಅಧರ ಸ್ಪರ್ಶದ(ನೆನಪ)ಲಿ
ಬಿಗಿತ ಕಮ್ಮಿಯಾದ೦ತಿದೆ
ರವಿಕೆ ಒದ್ದೆಯಾಗುತಿದೆ!

ಫೆಬ್ರವರಿ ೦೬,೨೦೦೫ರ 'ಕರ್ಮವೀರ' ವಾರ ಪತ್ರಿಕೆಯಲ್ಲಿ ಪ್ರಕಟವಾದ ಕವನ.

23 comments:

 1. ಪ್ರಭಾಮಣಿಯವರೆ,
  ಅಸಹಾಯಕ ಮಮತೆಯ ಕರುಳಿನ ಭಾವನೆಯನ್ನು ಮನತಟ್ಟುವ೦ತೆ ಬರೆದಿದ್ದೀರಿ.
  ತಾಯಿಯ ಮಮತೆಯಿ೦ದ ವ೦ಚಿತವಾಗುವ ಮಗುವಿನ ಸ್ಥಿತಿ, ಮಗುವಿಗೆ ತಾಯಿಯ ಹಾಲು ಜೊತೆಗೆ ಅಪಾರ ಪ್ರೀತಿಯನ್ನೆರೆಯಲು ಸಾಧ್ಯವಾಗದ ತಾಯಿಯ ಸ್ಥಿತಿ ಮನಸ್ಸಿಗೆ ತು೦ಬಾ ನೋವನ್ನು೦ಟುಮಾಡುತ್ತದೆ.

  ReplyDelete
 2. ಮೇಡಂ;ದುಡಿಯುವ ಮಹಿಳೆಯ ಮನಸ್ಸಿನ ತುಮುಲಗಳನ್ನು ಚಿತ್ರಿಸುವ ಮನ ಮಿಡಿಯುವ ಕವಿತೆ.

  ReplyDelete
 3. @ ಮನಮುಕ್ತಾ ಅವರೇ,
  ನಿಮ್ಮ ಭಾವ ಪೂರ್ಣ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮಗೆ ಸದಾ ಸ್ವಾಗತ.

  ReplyDelete
 4. asahaayaka tayiya novanna shabdhagalalli arthapoornavaagi serehidididdira.

  ReplyDelete
 5. @ ಡಾ. ಕೃಷ್ಣಮೂರ್ತಿಯವರೇ,
  ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು. ಆಗಾಗ ಬರುತ್ತಿರಿ.

  ReplyDelete
 6. ತಾಯಿ ಮಮತೆ ಚೆನ್ನಾಗಿ ಬಿಂಬಿಸಿರುವ ಕವನ....
  ತುಂಬಾ ಚೆನ್ನಾಗಿದೆ....

  ReplyDelete
 7. ಹೃದಯ ಸ್ಪರ್ಶಿ ಕವನ.. ಮಾತೃಭಾವವನ್ನು ಅಸಹಾಯಕತೆಯ ತುಮುಲದೊಡನೆ ಮನಮುಟ್ಟುವ೦ತೆ ನಿರೂಪಿಸಿದ್ದೀರಿ.

  ಶುಭಾಶಯಗಳು
  ಅನ೦ತ್

  ReplyDelete
 8. ಪ್ರಭಾಮಣಿಯವರೆ,
  ತಾಯ ವಾತ್ಸಲ್ಯ ಹಾಗು ಅವಳ ಅಸಹಾಯಕತೆಯ ನಿರೂಪಣೆ ಬಹು ಸುಂದರವಾಗಿ ಬಂದಿದೆ.

  ReplyDelete
 9. ಪ್ರಭಾಮಣಿ ಮೇಡಮ್,
  ಮಗುವಿನ ಬಗೆಗಿನ ಪ್ರೀತಿ, ಅಕ್ಕರೆ, ಅಗಲಿಕೆ ಎಲ್ಲವನ್ನು ಕೆಲವು ಸಾಲುಗಳಲ್ಲಿ ಹೇಳಿದ್ದು ಸೊಗಸಾಗಿತ್ತು..... ಅದರಲ್ಲೂ
  " ಕಂದಾ
  ಬಿಕ್ಕಳಿಸಬೇಡ
  ನೆತ್ತಿಹತ್ತೀತು ಜೋಕೆ
  ನಿಧಾನವಾಗೇ ಹಾಲು ಹೀರು"
  ಈ ಸಾಲುಗಳು ಮನ ತಟ್ಟಿದವು......

  nanna blog ge banni madam....

  ReplyDelete
 10. ಮೇಡಮ್ ಚೆನ್ನಾಗಿ ಬರೆದಿದ್ದೀರ.. ಹೆಣ್ಣು, ಆಕೆಯ ತಾಯ್ತನ, ವರದಕ್ಷಿಣಿಯ ಕ್ರುರತೆ, ದುಡಿಯುವ ಹೆಣ್ಣು ಮತ್ತು ತಾಯಿಯ ಮಮತೆಯನ್ನು ಚೆನ್ನಾಗಿ ಬಣ್ಣಿಸಿದ್ದೀರಾ....

  http://hitechjeeta.blogspot.com/

  ReplyDelete
 11. wow super kavana.... oLLeya bhavarta...

  ReplyDelete
 12. ದುಡಿಯುವ ಮಹಿಳೆಯ ತುಡಿತ,ತಳಮಳ ವನ್ನು ಹಾಡಿನ ಮೂಲಕ ಚೆನ್ನಾಗಿ ಚಿತ್ರಿಸಿದಿರಿ..ಚೆನ್ನಾಗಿದೆ ಪ್ರಭ ಕವಿತೆ

  ReplyDelete
 13. @ ನಾಗರಾಜ್ ರವರೆ,
  @ ಮಹೇಶ್ ರವರೆ,
  @ ಅನ೦ತ್ ರಾಜ್ ರವರೆ,
  ಎಳೆ ಕ೦ದನ ತಾಯಿಯಾದ ದುಡಿಯುವ ಮಹಿಳೆಯ ಕಷ್ಟಗಳಿಗೆ ಸ್ಪ೦ದಿಸಿ ಪ್ರತಿಕ್ರಿಯಿಸಿದ ನಿಮ್ಮೆಲ್ಲರಿಗೂ ಧನ್ಯವಾದಗಳು.

  ReplyDelete
 14. @ ಸುನಾಥ್ ರವರೆ,
  @ ದಿನಕರ ಮೊಗೇರ ಅವರೇ,
  @ ತರುಣ್ ಅವರೇ,
  ಅಸಹಾಯಕ ದುಡಿಯುವ ಮಾತೆಯ ಅನಿವಾರ್ಯ ಸ೦ಕಟಗಳನ್ನು ಅರ್ಥಮಾಡಿಕೊ೦ಡು ಸ್ಪ೦ದಿಸಿ ಪ್ರತಿಕ್ರಿಯಿಸಿದುದಕ್ಕಾಗಿ ಧನ್ಯವಾದಗಳು. ಈ ದಿನ ನಾನು ತಪಾಸಣೆಗೆ ಹೋಗಿದ್ದ ಶಾಲೆಯಲ್ಲಿ ಇಬ್ಬರು ಅ೦ಥಾ ಮಾತೆಯರಿದ್ದರು. ಅವರಿಗೆ ಊಟದ ವಿರಾಮದಲ್ಲಿ ಮನೆಗೆ ಹೋಗಿ ಮಗುವಿಗೆ ಹಾಲೂಡಿಸಿ ಬರಲು ಅನುಮತಿ ನೀಡಿದ್ದರು. ಹೋಗಿ ಬರುವಷ್ಟು ಹತ್ತಿರದಲ್ಲಿರಬೇಕು ಅಷ್ಟೇ. ಬಹಳ ಹಿ೦ದೆ ೪೫ದಿನ ಮಾತೃತ್ವ ರಜೆ ನೀಡುತ್ತಿದ್ದರ೦ತೆ. ನ೦ತರ ೯೦ದಿನಗಾದವು. ಈಗ ನಾಲ್ಕೂವರೆ ತಿ೦ಗಳು ರಜೆ ನೀಡುತ್ತಾರೆ. ಎ೦ಥಾ ಉತ್ತಮ ಬದಲಾವಣೆ ಅಲ್ಲವೇ?

  ReplyDelete
 15. @ಸುಗುಣರವರೆ,
  ಆ ಕಾಲದಲ್ಲಿ ಎಳೆಕ೦ದನಿ೦ದ ದೂರವಿರಬೆಕಾದ ತಾಯಿಯ ದೈಹಿಕ ಹಾಗೂ ಮಾನಸಿಕ ಹಿ೦ಸೆಗಳ ಅರಿವು ಇರುವುದರಿಂದ ಅರ್ಥಪೂರ್ಣವಾಗಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು.

  ReplyDelete
 16. @ಶಶಿಜೋಯಿಸ್ ರವರೆ,
  ನನ್ನ ಬ್ಲಾಗ್ ಗೆ ಸ್ವಾಗತ. ದುಡಿಯುವ ತಾಯಿಯ ಮಾನಸಿಕ ತಳಮಳವನ್ನು ಅರ್ಥೈಸಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

  ReplyDelete
 17. ಪ್ರಭಾಮಣಿ ಅವರೇ... ಬದುಕಿನ ಬಂಡಿ ನಡೆಸಲು ವಾತ್ಸಲ್ಯದ ಮೂರ್ತಿಯಾದ ಹೆಣ್ಣು ಅನುಭವಿಸುವ ಯಾತನೆ ಕಣ್ಣಿಗೆ ಕಟ್ಟುವಂತಿದೆ...

  ReplyDelete
 18. ಅಮ್ಮಾ,
  ಚೆನ್ನಾಗಿದೆ.
  ಇದನ್ನು ಯಾವ ಸಂಧರ್ಭದಲ್ಲಿ ಬರೆದಿರಬಹುದು ಅಂತ ನೆನಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ :)
  - ಮಗಳು

  ReplyDelete
 19. ಕವಿತೆಯ ಪ್ರತಿ ಸಾಲಿನಲ್ಲೂ ಭಾವತೀವ್ರತೆ ಹೆಚ್ಚಿದೆ..
  ಭಾವಕವನ..

  ReplyDelete
 20. @ ಪ್ರಗತಿ ಹೆಗಡೆಯವರೇ,
  ಮಗುವೊ೦ದನ್ನು ಬೆಳೆಸುವ ಪ್ರಕ್ರಿಯೆಯಲ್ಲಿ ತಾಯಿಯು ಅದರಲ್ಲಿಯೂ ಉದ್ಯೋಗಸ್ಥ ಮಹಿಳೆಯು ಅನುಭವಿಸುವ ದೈಹಿಕ ಮತ್ತು ಮಾನಸಿಕ ಯಾತನೆಯ ಅರಿವಿದ್ದು ಉತ್ತಮ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

  ReplyDelete
 21. @ ಮನಸಿನ ಮನೆಯವರೇ,
  ಭಾವಪೂರ್ಣ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು.

  ReplyDelete
 22. @ ಮಗಳೇ,
  ನಿನ್ನ ಹಾಗೂ ನಿನ್ನ೦ತಹ ಮುದ್ದು ಮಕ್ಕಳ ನೆನಪಿಗೆ ನಿಲುಕದ ಸ೦ದರ್ಭ ಅದು! ನೀನೇ ಪ್ರಾರ೦ಭಿಸಿದ ನನ್ನ ತಾಣಕ್ಕೆ ಅಲ್ಲಿ೦ದಲೇ
  ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು.

  ReplyDelete
 23. ಚಲನಶೀಲ ಬದುಕಿನ ಆರ್ಥಿಕ ಪೂರೈಕೆಗೆ ಹೆಗಲುಗೊಟ್ಟು ಮಾತ್ರುತ್ವದಿಂದ ವಂಚಿತರಾಗುತ್ತಿರುವ ದುಡಿಯುವ ಮಹಿಳೆಯ ಮನದಾಳವನ್ನ ಮತ್ತು ಹಗಲು ರಕ್ಷಣೆಯ ಆವರಣದಲ್ಲಿ ತಾಯಿಯಿಲ್ಲದೆ ನಲುಗುವ ಪುಟ್ಟ ಕಂದಮ್ಮಗಳ ಪಾಡನ್ನು ಮನ ಕಲುಕುವಂತೆ ಚಿತ್ರಿಸಿದ್ದಿರಾ... ಮನ ಯಾಕೋ ಚಿಂತಿತವಾಯಿತು..
  ಭಾವಪೂರ್ಣ ಕವನ.

  ReplyDelete