Sunday, August 21, 2011

ಮನದ ಅಂಗಳದಿ.........೫೪. ಬುದ್ಧಿವಂತಿಕೆ

ನಾವು ಚಿಕ್ಕವರಿದ್ದಾಗ ಪ್ರತಿದಿನ ಸಾಯಂಕಾಲ ಕೈಕಾಲುಮುಖ ತೊಳೆದುಕೊಂಡು ದೇವರಿಗೆ ನಮಸ್ಕರಿಸುವ ರೂಢಿ ಮಾಡಿಸಿದ್ದರು. ನಮಸ್ಕಾರ ಮಾಡುವಾಗ ದೇವರನ್ನು, 'ವಿದ್ಯೆ-ಬುದ್ಧಿ, ಆಯಸ್ಸು ಆರೋಗ್ಯಭಾಗ್ಯ ಕೊಟ್ಟು ಕಾಪಾಡಪ್ಪ' ಎಂದು ಬೇಡಲು ಹೇಳಿಕೊಟ್ಟಿದ್ದರು. (ಅಥವಾ ಅವರು ಬೇಡುವುದನ್ನು ಕೇಳಿ ಕಲಿತಿದ್ದೆವೋ ನೆನಪಿಲ್ಲ!) ಆದರೆ ಬುದ್ಧಿ ತಿಳಿದಂತೆ ನಮ್ಮ ಬೇಡಿಕೆಯ ಪಟ್ಟಿ ಬೆಳೆಯುತ್ತಾ ಸಾಗಿತು. ನಮಗೆ ಏನೇನು ಬೇಕೆನಿಸುತ್ತದೋ ಅದನ್ನೆಲ್ಲಾ ಕೊಡೆಂದು ಬೇಡಲಾರಂಭಿಸಿದೆವು! ನಾವೂ ಬೆಳೆದಂತೆ, ದೇವರು ಎಂದಮೇಲೆ ಎಲ್ಲವನ್ನೂ ತಿಳಿದವನು, ಅವನಿಗೆ ನಮಗೆ ಏನು ಬೇಕೆಂದು ತಿಳಿದಿರುವುದಿಲ್ಲವೇ? ಇನ್ನು ಇಷ್ಟು ದೊಡ್ಡ ಪಟ್ಟಿಯನ್ನಿಟ್ಟುಕೊಂಡು ಬೇಡುವ ಅಗತ್ಯವೇನು? ಎನಿಸಲಾರಂಭಿಸಿತು. ಕಾಲಕ್ರಮದಲ್ಲಿ 'ದೇವರು' ಎನ್ನುವ ಬಾಹ್ಯ ಅಸ್ಥಿತ್ವದ ಬಗ್ಗೆಯೇ ಗೊಂದಲವುಂಟಾಗಿ ದ್ವಂದ್ವವು ಕಾಡಲಾರಂಭಿಸಿತು. ಈ ಎಲ್ಲಾ ತಾಕಲಾಟಗಳೂ 'ಬುದ್ಧಿ'ಯು ನಮಗೆ ನೀಡಿರುವ ಕೊಡುಗೆಗಳೇ ಆಗಿವೆ.

ಶಾಲಾ-ಕಾಲೇಜುಗಳಲ್ಲಿ ಅತಿಹೆಚ್ಚು ಅಂಕಗಳನ್ನು ತೆಗೆಯುವವರನ್ನು ಬುದ್ಧಿವಂತರ ಸಾಲಿಗೆ ಸೇರಿಸುತ್ತಾರೆ. ಅವರು ತಮ್ಮ ಬುದ್ಧಿವಂತಿಕೆಯನ್ನು ಅಂಕಗಳನ್ನು ಗಳಿಸುವತ್ತಲೇ ಕೇಂದ್ರೀಕರಿಸಿ ಅತ್ತಿತ್ತ ನೋಡದಂತೆ ಕಣ್ಣಿಗೆ ಪಟ್ಟಿಕಟ್ಟಿದ ಕುದುರೆಯಂತೆ ಓಡಲಾರಂಭಿಸುತ್ತಾರೆ. ತಮ್ಮ ಮಕ್ಕಳು ಬುದ್ಧಿವಂತರಾಗಬೇಕೆನ್ನುವುದೇ ಎಲ್ಲ ತಂದೆತಾಯಿಯರ ಹಂಬಲವೂ ಆಗಿದೆ.

ಈ 'ಬುದ್ಧಿ' ಎಂದರೆ ಏನು? ಎನ್ನುವ ಪ್ರಶ್ನೆಗೆ ಸ್ವಾಮಿ ವಿವೇಕಾನಂದರ 'ವ್ಯಕ್ತಿತ್ವ ನಿರ್ಮಾಣ' ಎನ್ನುವ ಕೃತಿಯಲ್ಲಿ ದೊರೆತ ಉತ್ತರದ ಸಾರಾಂಶ ಹೀಗಿದೆ:

'ಮಾನವರ ಮನಸ್ಸಿಗೆ ನಾಲ್ಕು ಮುಖ್ಯ ಕ್ರಿಯೆಗಳಿವೆ. ಅವುಗಳನ್ನು ಸಂಸ್ಕೃತದಲ್ಲಿ ಚತುರ್ವಿಧ ಅಂತಃಕರಣವೃತ್ತಿಗಳು ಎನ್ನುತ್ತಾರೆ. ಅವುಗಳಲ್ಲಿ 'ಬುದ್ಧಿ'ಯೂ ಒಂದು.(ಉಳಿದವು: ಮನಸ್, ಚಿತ್ತ, ಮತ್ತು ಅಹಂಕಾರ) ಯಾವುದಾದರೂ ನಿರ್ಣಯಕ್ಕೆ ಬರುವುದು ಬುದ್ಧಿಯ ಕೆಲಸ. ಉದಾಹರಣೆಗೆ ಹಿಂದೆ ನೋಡಿದ ಒಬ್ಬ ವ್ಯಕ್ತಿಯನ್ನು ಸಂಧಿಸಿದಾಗ 'ಮನಸ್' ಆಲೋಚಿಸಿ ಅವನನ್ನು ಗುರುತಿಸುತ್ತದೆ, ಕೂಡಲೇ ರಾಗ ಅಥವಾ ದ್ವೇಷ ಭಾವ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಅನಂತರ ಬುದ್ಧಿಯು ಅವನನ್ನು ಪ್ರೀತಿಯಿಂದ ಮಾತನಾಡಿಸುವಂತೆಯೋ, ಕೋಪದಿಂದ ಹೊಡೆಯುವಂತೆಯೋ ಅಥವಾ ಭಯದಿಂದ ಓಡಿಹೋಗುವಂತೆಯೋ ನಮ್ಮನ್ನು ಪ್ರೇರೇಪಿಸುತ್ತದೆ. ಬುದ್ಧಿಯು ಈ ಭಾವೋದ್ವೇಗಗಳಿಗೆ ಒಳಗಾಗದಂತೆ ಸ್ವತಂತ್ರವಾಗಿ ನಿರ್ಣಯಕ್ಕೆ ಬರುವುದು ಮುಖ್ಯ. ಈ ರೀತಿ ಸ್ವತಂತ್ರ ಇಚ್ಛೆಯನ್ನು ಪಡೆಯುವುದು ನಮ್ಮ ವ್ಯಕ್ತಿತ್ವದ ಬೆಳವಣಿಗೆಗೆ ಅತ್ಯಂತ ಅವಶ್ಯಕ'

ನೆಲ್ಲೀಕೆರೆ ವಿಜಯಕುಮಾರ್ ಅವರು ತಮ್ಮ 'ಸುಮ್ಮನಿರಬಾರದೇ...?' ಪುಸ್ತಕದಲ್ಲಿ 'ಬುದ್ಧಿವಂತಿಕೆ'ಯ ಕುರಿತು ಈ ರೀತಿಯಾಗಿ ಹೇಳಿದ್ದಾರೆ:

'ನಮ್ಮ ಮಾತಿಗೆ ಮೂಲ 'ಬುದ್ಧಿವಂತಿಕೆ'. ನಾವೆಲ್ಲಾ 'ಮೇಧಾವಿ'ಗಳಾಗಿರುವುದೂ ಈ ಕಾರಣಗಳಿಂದಲೇ. ಇಂದಿನ ಬಹುತೇಕ ವಿದ್ಯಾವಂತರು ಬುದ್ಧಿವಂತಿಕೆಯಿಂದಲೇ ಎಲ್ಲವೂ ಸಾಧ್ಯವೆಂದು ತಿಳಿದುಕೊಂಡಿರುವ ಅವಿದ್ಯಾವಂತರೇ ಆಗಿದ್ದಾರೆ. ಪ್ರತಿಯೊಂದು ಆಲೋಚನೆಗಳನ್ನು ಬುದ್ಧಿಯಮಟ್ಟಕ್ಕೆ ಕೊಂಡೊಯ್ದು ಒಳ್ಳೆಯದು-ಕೆಟ್ಟದ್ದೆಂದೂ, ಬೇಕು-ಬೇಡವೆಂದೂ, ಸರಿ-ತಪ್ಪು ಎಂದೂ ನಿರ್ಣಯಿಸುವುದರಲ್ಲಿ ನಾವು ನಿಸ್ಸೀಮರಾಗಿದ್ದೇವೆ. ಬುದ್ಧಿಶಕ್ತಿಯೂ ದೇವರು ನೀಡಿದ ಭಿಕ್ಷೆಯೆಂಬುದನ್ನು ಮರೆತು ಮಾನವ ಸಹಜ ತತ್ವಗಳನ್ನು, ನೀತಿಗಳನ್ನು ನಮಗಿಷ್ಟ ಬಂದ ರೀತಿಯಲ್ಲಿ ತಿರುಚಿ, ವ್ಯಾಖ್ಯಾನಿಸಿ ವ್ಯಕ್ತಪಡಿಸುವ ಇಬ್ಬಂದಿತನವನ್ನು ಅನುಸರಿಸುತ್ತೇವೆ. ಹಾಗಾಗಿ ಬುದ್ಧಿಗೆ ನಾವು ನೀಡಿರುವುದು ಕೇವಲ ಭೇದವನ್ನುಂಟುಮಾಡುವ ಕೆಲಸವನ್ನಷ್ಟೆ. ಆದರೆ ಸರಿ-ತಪ್ಪುಗಳು, ಬೇಕು-ಬೇಡಗಳು ಮಾನವ ಬುದ್ಧಿಯಲ್ಲಿದೆಯೇ ಹೊರತು ಪ್ರಕೃತಿಯ ದೃಷ್ಟಿಯಲ್ಲಿಲ್ಲವೆಂಬುದನ್ನು ಮರೆತುಬಿಟ್ಟಿದ್ದೇವೆ. ಹಾಗೂ ಹಾಗೆ ಭೇದ ಮಾಡಿದ ಪ್ರತಿ ಸಂದರ್ಭದಲ್ಲೂ ಸ್ವತಃ ನಾವೇ ಬೇರೊಬ್ಬರಿಗೆ ಗುಲಾಮರಾಗಿರುತ್ತೇವೆಂಬುದನ್ನು ಅರಿಯಲಾಗದೇ ಹೋಗುತ್ತೇವೆ. ಬುದ್ಧಿ ಖರ್ಚು ಮಾಡಿದಷ್ಟೂ ಕಷ್ಟಗಳನ್ನು ತಂದುಕೊಂಡು ಒದ್ದಾಡುತ್ತೇವೆ. ಇದು ಹೇಗೆಂಬುದನ್ನು ನೋಡಿ:

ಕಛೇರಿಯಲ್ಲಿ ನಿಮ್ಮ ಕೈ ಕೆಳಗೆ ಕೆಲಸ ಮಾಡುವ ಸಿಬ್ಬಂದಿಯೋರ್ವರು ಅಹಿತಕರ ಘಟನೆಯೊಂದಕ್ಕೆ ಕಾರಣರಾದರೆಂದಿಟ್ಟುಕೊಳ್ಳಿ. ಸಹಜವಾಗಿಯೇ ನಿಮಗೆ ಅವರ ಮೇಲೆ ಬೇಸರವುಂಟಾಗುತ್ತದೆ. ಆದರೆ ಅದೇ ಬೇಸರ ಮನೆಗೆ ಬಂದ ಮೇಲೂ ನಿಮ್ಮ ತಲೆಯಲ್ಲಿ ಕುಳಿತಿದೆ ಎಂದಾದರೆ ನೀವು ನಿಮ್ಮ ಆಲೋಚನೆಯನ್ನು ಬುದ್ಧಿಯ ಮಟ್ಟಕ್ಕೆ ಕೊಂಡೊಯ್ದಿರೆಂದೇ ಅರ್ಥ. ಬದಲಾಗಿ ಅಂತಹ ಘಟನೆ ಕಛೇರಿಯ ದೈನಂದಿನ ಕಾರ್ಯ ಕಲಾಪಗಳ ಒಂದು ಭಾಗವೆಂದು ಪರಿಗಣಿಸಿದ್ದರೆ? ಮನಸ್ಸು ನಿರಾಳವಾಗುತ್ತಿತ್ತು. ಮನೆಗೆ ಬಂದಾಗ ಎಂದಿನಂತೆ ಗೃಹಸ್ಥನಾಗಿ ವರ್ತಿಸಬಹುದಿತ್ತು. ಆದರೆ ಬುದ್ಧಿಗೆ ಕೆಲಸ ಕೊಟ್ಟ ಕಾರಣ ತರ್ಕ ಶುರುವಾಯಿತು. ಪರಿಣಾಮ ಕಛೇರಿಯಲ್ಲೇ ಬಿಟ್ಟು ಬರಬೇಕಿದ್ದ 'ಬಾಸ್'ನನ್ನು ಮನೆಯವರೆಗೂ ಹೊತ್ತು ತಂದಿರಿ. ಅಲ್ಲಿಯೂ ಬಾಸ್ ನಂತೆ ವರ್ತಿಸಲಾರಂಭಿಸಿದಿರಿ. ವಿಪರ್ಯಾಸವೆಂದರೆ ಅತ್ತ ಬಾಸ್ ಆಗದೇ, ಇತ್ತ ಗೃಹಸ್ಥನೂ ಆಗದೇ ಎರಡರ ನಡುವೆ ತೂಗಾಡಲಾರಂಭಿಸಿದಿರಿ. ನಿಮಗೇ ಅರಿವಿಲ್ಲದೇ ಆ ಘಟನೆಗೆ ಅಥವಾ ವ್ಯಕ್ತಿಗೆ ಗುಲಾಮರಾಗಿಹೋದಿರಿ.

ಯಾವುದೇ ಸಂಗತಿಯನ್ನು ಹೀಗೆ ಬುದ್ಧಿಮಟ್ಟಕ್ಕೆ ಕೊಂಡೊಯ್ದು ಸರಿ-ತಪ್ಪು ಎಂದು ಅರ್ಥೈಸಿದಾಗ ಅಥವಾ ವ್ಯಕ್ತಿಯೋರ್ವನನ್ನು ಒಳ್ಳೆಯವನು-ಕೆಟ್ಟವನು ಎಂದು ನಿರ್ಧರಿಸಿದಾಗ ಎರಡೂ ಸಂದರ್ಭಗಳಲ್ಲೂ ನಾವು ಆ ಸಂಗತಿಯಿಂದ ಅಥವಾ ವ್ಯಕ್ತಿಯಿಂದ ನಿಯಂತ್ರಿಸಲ್ಪಡುತ್ತಿದ್ದೀರೆಂದೇ ಅರ್ಥ.....

ದೈನಂದಿನ ಆಗುಹೋಗುಗಳಲ್ಲಿ ನಾನು ಎಷ್ಟು ಸಂಗತಿಗಳನ್ನು ಈ ರೀತಿ ಬುದ್ಧಿ ಉಪಯೋಗಿಸಿ ಹಾಗೂ ಉಪಯೋಗಿಸದೇ ನಿರ್ವಹಿಸಿದ್ದೇನೆಂಬುದನ್ನು ನೀವೇ ಲೆಕ್ಕಹಾಕಿರಿ. ಯಾವಯಾವ ಸಂಗತಿಗಳಲ್ಲಿ ನಿಮ್ಮ ಬುದ್ಧಿ ಮೂಗುತೂರಿಸಿದೆ ಎಂಬುದನ್ನು ಆ ಸಂಗತಿ ಜರುಗಿದ ಮರುಕ್ಷಣವೇ ಮನಸ್ಸು ನಿಮಗೆ ಹೇಗೋ 'ರಿಪೋರ್ಟ್' ಮಾಡಿರುತ್ತದೆಯಲ್ಲಾ! ಅಂತಹ ರಿಪೋರ್ಟ್‌ಗಳನ್ನೊಮ್ಮೆ ಓದಿ ನೋಡಿ. ನಿಮ್ಮ ಬುದ್ಧಿಯ ಸ್ವರೂಪ ಭೇದ ಮಾಡುವುದೋ ಅಲ್ಲವೋ ಎಂಬುದು ನಿಮಗೇ ತಿಳಿಯುತ್ತದೆ. ನೂರರಲ್ಲಿ ತೊಂಬತ್ತಕ್ಕೂ ಹೆಚ್ಚು ಸಂಗತಿಗಳಲ್ಲಿ ನಿಮ್ಮ ಬುದ್ಧಿ ಸುಮ್ಮನಿರದೇ ಒದ್ದಾಡಿರದಿದ್ದರೆ ಕೇಳಿ. ಎಷ್ಟು ಬಾರಿ ಹೀಗೆ ಸಿಕ್ಕಿಕೊಂಡು ಒದ್ದಾಡಿರುತ್ತೀರೋ, ನಿಮ್ಮ ಕೋಮಲ ಮನಸ್ಸು ಅಷ್ಟೇ ಯಾತನೆಯನ್ನು ಅನುಭವಿಸಿರುತ್ತದೆ. ಹಾಗೆಯೇ ಎಷ್ಟು ಬಾರಿ ನಿಮ್ಮ ಬುದ್ಧಿಯ ಬಾಯಿಗೆ ಬೀಗ ಹಾಕಿರುತ್ತೀರೋ ಅಥವಾ ಸಂಗತಿಗಳು ಅನುಭವಕ್ಕೆ ಬಂದೂ ಬಾರದಂತೆ ನಡೆದುಹೋಗುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ಸ್ವಾತಂತ್ರ್ಯವನ್ನು ಅನುಭವಿಸಿರುತ್ತದೆ. ಇಲ್ಲಿ ಗೋಚರಿಸಲ್ಪಡುವ ಕುತೂಹಲಕಾರಿ ಅಂಶವೆಂದರೆ ನಿಮಗೆ ಏನೋ ಆಗಬೇಕಿದೆ ಎಂಬ ನಿರೀಕ್ಷೆಯಲ್ಲಿದ್ದ ಸಂದರ್ಭಗಳಲ್ಲಿ ಮಾತ್ರವೇ ನಿಮ್ಮ 'ಬುದ್ಧಿಶಕ್ತಿ' ಬಳಕೆಯಾಗಲ್ಪಟ್ಟಿರುತ್ತದೆ.'

10 comments:

 1. tumbaa uttama vishayada bagge namage tiLisiddiri...dhanyavaada...

  ReplyDelete
 2. ಉತ್ತಮ ವಿಶ್ಲೇಷಣೆ. ಇದನ್ನು ಅರಿತುಕೊಂಡು ನಡೆದರೆ ವ್ಯಕ್ತಿಗತ ಸುಧಾರಣೆಯಾಗುವದರಲ್ಲಿ ಸಂಶಯವಿಲ್ಲ.

  ReplyDelete
 3. ಮೇಡಂ;ನಮ್ಮ ಮನಸ್ಸಿನ ಅನುಭವದಿಂದ ನಿಯಂತ್ರಿಸಲ್ಪಟ್ಟ ನಮ್ಮ ಬುದ್ಧಿ ಶಕ್ತಿಗಿಂತ ಮಿಗಿಲಾದ ಶಕ್ತಿಯೊಂದು ನಮ್ಮ ದೇಹದ ಮತ್ತು ಜಗತ್ತಿನ ಎಲ್ಲಾ ಕಾರ್ಯಗಳನ್ನೂ ಸದ್ದಿಲ್ಲದೇ ನಡೆಸುತ್ತಿದೆ ಎಂದು ಅರ್ಥಮಾಡಿಕೊಂಡು ಮನಸ್ಸನ್ನು ಮೌನವಾಗಿರಿಸುವುದೇ ನಿಜವಾದ ಬುದ್ಧಿವಂತಿಕೆ ಎನಿಸುತ್ತದೆ.ಅರ್ಥಪೂರ್ಣ ಲೇಖನ.

  ReplyDelete
 4. ನಾವು ಮಾಡುವ ಯಾವುದೇ ಕೆಲಸಗಳು ನಮ್ಮ ಮನಸ್ಸಿನ ನಿಯಂತ್ರಣದಲ್ಲಿ ಇರುತ್ತದೆ..... ನಮ್ಮ ಬುದ್ಧಿವಂತಿಕೆ ಕೂಡ ನಮ್ಮ ಹತೋಟಿಯಲ್ಲಿರುತ್ತದೆ... ಉತ್ತಮ ಲೇಖನ...

  ReplyDelete
 5. ತರ್ಕಬದ್ಧ ಮತ್ತು ಅರ್ಥಪೂರ್ಣ ಲೇಖನ. ಭಾವಜೀವಿಗಳಿಗೇ ಇಂತಹ ಎಲ್ಲಾ ಸಮಸ್ಯೆಗಳು, ಭಾವವಿಲ್ಲದವರಿಗೆ -ಇವರಲ್ಲೂ ಎರಡು ವಿಧ: ಭಾವರಹಿತರು(ಜಡ್ಡುಗಟ್ಟಿದವರು) ಮತ್ತು ಭಾವಾತೀತರು(ಸಾಧಕರು)- ಈ ಸಮಸ್ಯೆ ಕಡಿಮೆ.

  ReplyDelete
 6. ನಮ್ಮ ಹತೋಟಿಯು ನಮ್ಮಲ್ಲೇ ಇರಬೇಕು, ನಿಜ.

  ಒಳ್ಳೆಯ ಲೇಖನ ಧನ್ಯವಾದಗಳು.

  ReplyDelete
 7. ಉತ್ತಮ ಲೇಖನ..


  _ನನ್ನ ಬ್ಲಾಗಿಗೂ ಬನ್ನಿ:ಚಿಂತನಾ ಕೂಟ

  ReplyDelete
 8. buddivantikeya ....hinneleyannittukonda ee lekhana uttamavaagide...haage...vivekanandara krutiyallina ulekha mattashtu pushti kottide...abhinandanegalu..

  ReplyDelete
 9. @ ಸುನಾಥ್ ರವರೆ,
  @ಡಾ. ಕೃಷ್ಣ ಮೂರ್ತಿಯವರೆ,
  @ದಿನಕರ ಮೊಗೇರ ರವರೆ,
  @ಗಿರೀಶ್.ಎಸ್ ರವರೆ,
  @ಕವಿ ನಾಗರಾಜ್ರವರೆ,
  @ಗುರುರವರೆ,
  @ಬದರಿನಾಥ್ ರವರೆ,
  ನನ್ನ ಲೇಖನವನ್ನು ಇಷ್ಟಪಟ್ಟು, ಮೆಚ್ಚುಗೆಯನ್ನು ತಿಳಿಸಿ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಬರುತ್ತಿರಿ.

  ReplyDelete
 10. @ಪ್ರಭಾಕರ್ರವರೆ,
  ನನ್ನ ಬ್ಲಾಗ್ ಗೆ ಸ್ವಾಗತ. ನನ್ನ ಲೇಖನವನ್ನು ಮೆಚ್ಚಿ ಆತ್ಮೀಯವಾಗಿ ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ನಿಮಗೆ ಹೃತ್ಪೂರ್ವಕ ನಮನಗಳು. ಬರುತ್ತಿರಿ.

  ReplyDelete