Tuesday, January 24, 2012

ಮನದ ಅಂಗಳದಿ.........76.ಹದ್ದು

ಪ್ರಾಣಿಗಳಿಂದಲೂ ನಾವು ಕಲಿಯಬೇಕಾದ ಅನೇಕ ಗುಣಗಳ ಬಗ್ಗೆ ಸಂಸ್ಕೃ ಒಂದು ಶ್ಲೋಕದಲ್ಲಿ ಈ ರೀತಿಯಾಗಿದೆ:

‘ಸಿಂಹಾದೇಕಂ ಬಕಾದೇಕಂ ಷಟ್ ಶುನಸ್ತ್ರೀಣಿ ಗಾರ್ಧಬಾತ್|

ವಾಯಸಾತ್ ಪಂಚ ಶಿಕ್ಷೇಶ್ಚ ಚತ್ವಾರಿ ಕುಕ್ಕುಟಾದಪಿ||?

ಸಿಂಹದಿಂದ ಒಂದು ಗುಣ_ ಎದುರಾಗುವುದು ಮೊಲವಿರಲಿ, ಆನೆಯಿರಲಿ ಸಿಂಹವು ಸಮಾನ ರಭಸದಿಂದ ಮೇಲೆ ಬೀಳುತ್ತದೆ.

ಹಾಗೇ ಮನುಷ್ಯ ತಾನು ಮಾಡುವ ಕೆಲಸ ದೊಡ್ಡದು-ಚಿಕ್ಕದು ಎಂದು ತಾರತಮ್ಯ

ಮಾಡಬಾರದು.

ಕೊಕ್ಕರೆಯಿಂದ ಒಂದು ಗುಣ_ ಏಕಾಗ್ರತೆ, (ಕಾರ್ಯಪ್ರವೃತ್ತನಾಗುವ ಮನುಷ್ಯನಿಗೆ, ವಿದ್ಯಾರ್ಥಿಗೆ,)

ನಾಯಿಯಿಂದ ಆರು ಗುಣ_ ದೊರೆತದ್ದರಲ್ಲೇ ತೃಪ್ತಿ ಪಡುವುದು, ಸರಿಯಾಗಿ ನಿದ್ರಿಸುವುದು, ಚುರುಕುತನ, ಸ್ವಾಮಿಭಕ್ತಿ,

ಶೌರ್ಯ, ವಾಸನಾ ಗ್ರಹಣಶಕ್ತಿ,

ಕತ್ತೆಯಿಂದ ಮೂರು ಗುಣ_ ಕಷ್ಟಪಟ್ಟು ದುಡಿಯುವುದು, ಚಳಿಸೆಕೆಗಳನ್ನು ಲಕ್ಷಿಸದಿರುವುದು, ಸಮಾಧಾನದಿಂದ ಇರುವುದು,

ಕಾಗೆಯಿಂದ ಐದು ಗುಣ_ ಗೌಪ್ಯತೆ, ಧೈರ್ಯದಿಂದ ಮುನ್ನುಗ್ಗುವಿಕೆ, ವಾಸಕ್ಕಾಗಿ ಸಮಯಾನುಸಾರ

ಸ್ಥಾನ, ಬಳಗ, ಸಂಘಜೀವನ,

ಕೋಳಿಯಿಂದ ನಾಲ್ಕುಗುಣ_ ಶತ್ರುವಿನೊಡನೆ ಹೋರಾಡುವಾಗ ಆಕ್ರಮಣ ಮನೋಧರ್ಮ, ಬೆಳಿಗ್ಗೆ ಬೇಗ ಎದ್ದು

ಬೇರೆಯವರನ್ನು ಎಬ್ಬಿಸುವುದು, ಬಂಧುಮಿತ್ರರೊಡನೆ ಸೇರಿ ಆಹಾರ ಸೇವನೆ, ಆಪತ್ತಿನಿಂದ

ರಕ್ಷಿಸುವುದು, ಸದಾ ಕಾರ್ಯಪ್ರವೃತ್ತವಾಗಿರುವುದು.

ಪ್ರಾಣಿಗಳಿಗೆ ಸಂಬಂಧಿಸಿದ ಕಥೆಗಳು, ಪದ್ಯಗಳು ನಮ್ಮ ‘ಪಂಚತಂತ್ರ’ದ ಕಥೆಗಳಲ್ಲಿ ಹಾಗೂ ಇತರ ಪೌರಾತ್ಯ ಹಾಗೂ ಪಾಶ್ಚಿಮಾತ್ಯ ಭಾಷೆಗಳಲ್ಲಿಯೂ ಸಮೃದ್ಧವಾಗಿವೆ. ಅವುಗಳಲ್ಲಿ ‘ಹದ್ದು’ ಪಕ್ಷಿಗೆ ಸಂಬಂಧಿಸಿದ ಅನೇಕ ಆಸಕ್ತಿಕರವಾಗ ನೀತಿ ಬೋಧಕ ಕಥೆಗಲ್ಲಿ ಕೆಲವನ್ನು ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ:

*ಮಳೆ ಬಂದಾಗ ಎಲ್ಲ ಪಕ್ಷಿಗಳೂ ತಮ್ಮ ಗೂಡು ಅಥವಾ ಇತರ ಆಸರೆಯನ್ನು ಹುಡುಕಿಕೊಂಡು ಹೋಗುತ್ತವೆ. ಆದರೆ ಹದ್ದು ಮಳೆಯನ್ನು ಸುರಿಸುವ ಮೋಡದಿಂದ ಎತ್ತರಕ್ಕೆ ಹಾರಿ ಮಳೆಯಿಂದ ಪಾರಾಗುತ್ತದೆ! ಅಂತೆಯೇ ಕಷ್ಟಗಳು ಬಂದಾಗ ಅದರಿಂದ ತಪ್ಪಿಸಿಕೊಳ್ಳಲು ಪಲಾಯನ ಮಾಡದೆ ಅದನ್ನು ಮೀರಿ ಎತ್ತರಕ್ಕೆ ಬೆಳೆಯಬೇಕು.

*ಒಂಟಿಯಾಗಿ ಸಿಕ್ಕ ಹದ್ದನ್ನು ಆಕ್ರಮಿಸಿ ಹೋರಾಡಲು ಕಾಗೆಗಳು ಧಾವಿಸುತ್ತವೆ. ಅವುಗಳಿಗಿಂತ ಬಹುಪಾಲು ಶಕ್ತಿಶಾಲಿಯಾದ ಹದ್ದು ಅವುಗಳೊಡನೆ ಹೋರಾಡಿ ಶಕ್ತಿಯನ್ನು ವ್ಯಯ ಮಾಡಿಕೊಳ್ಳದೇ ವೃತ್ತಾಕಾರವಾಗಿ ಚಲಿಸುತ್ತಾ ಸ್ವಲ್ಪಸ್ವಲ್ಪವೇ ಮೇಲೇರುತ್ತಾ ಅವುಗಳಿಗೆ ಸಿಗದಂತೆ ಅತಿ ಎತ್ತರಕ್ಕೆ ಹಾರಿಹೋಗುತ್ತದೆ! ಸಾಮಾನ್ಯ ಜನರು ನಮ್ಮನ್ನು ದೂಷಿಸಲಾರಂಭಿಸಿದಾಗ ನಾವು ಅವರಿಗೆ ಪ್ರತಿಕ್ರಿಯಿಸಿ ನಮ್ಮ ಶಕ್ತಿಯನ್ನು ನಷ್ಟ ಮಾಡಿಕೊಳ್ಳದೇ ಅವರನ್ನು ಮೀರಿ ಮೇಲೇರುವುದು ಒಳಿತು.

* ಒಮ್ಮೆ ಒಂದು ಎತ್ತರವಾದ ಮರದ ಮೇಲೆ ಒಂದು ಹದ್ದು ಕುಳಿತುಕೊಂಡು ಆರಾಮವಾಗಿ ನಿದ್ರಿಸುತ್ತಿರುತ್ತದೆ. ನೆಲದ ಮೇಲೆ ಓಡಾಡುತ್ತಿದ್ದ ಮೊಲವೊಂದು ಅದನ್ನ ನೋಡಿ, ‘ಆಹಾ ಅದು ಎಷ್ಟು ಆರಾಮವಾಗಿ ವಿಶ್ರಾಂತಿ ಪಡೆಯುತ್ತಿದೆ! ನಾನೇಕೆ ಇಷ್ಟು ಕಷ್ಟಪಡುತ್ತಿದ್ದೇನೆ? ನಾನೂ ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆಡದುಕೊಳ್ಳೋಣ,? ಎಂದುಕೊಂಡು ಅಲ್ಲೇ ಮಲಗಿಕೊಳ್ಳುತ್ತದೆ. ಅದೇ ಮಾರ್ಗವಾಗಿ ಬಂದ ನರಿ ಅದನ್ನು ನೋಡಿ ಸಂತೋಷದಿಂದ ಕಚ್ಚಿಕೊಂಡು ಹೋಗುತ್ತದೆ. ನಾವು ವಿಶ್ರಮಿಸಿಕೊಳ್ಳಬೇಕಾದರೆ ಅಪಾಯಗಳಿಗೆ ನಿಲುಕದಂತೆ ಎತ್ತರದಲ್ಲಿರಬೇಕು. ಸುತ್ತಲೂ ಶತ್ರುಗಳಿರುವಾಗ ಮೈಮರೆತರೆ ಪ್ರಾಣಕ್ಕೇ ಸಂಚಕಾರ ಬರುತ್ತದೆ.

* ಹದ್ದು ಅತಿ ಎತ್ತರವಾದ ಪ್ರದೇಶದಲ್ಲಿರುವ ಕೋಡುಗಲ್ಲಿನ ತುದಿಯಲ್ಲಿ ಗೂಡು ಕಟ್ಟಿ ಮರಿಗಳನ್ನು ಸಾಕುತ್ತದೆ. ಅವುಗಳ ರೆಕ್ಕೆಪುಕ್ಕಗಳು ಚೆನ್ನಾಗಿ ಬಲಿತ ನಂತರ ಅವನ್ನು ಗೂಡಿನಿಂದ ಹೊರಕ್ಕೆ ನೂಕಿಬಿಡುತ್ತದೆ. ಕೆಳಕ್ಕೆ ಬೀಳಲಾರಂಭಿಸಿದ ಮರಿಗೆ ತನ್ನ ರೆಕ್ಕೆಯ ಶಕ್ತಿ ಅರಿವಾಗಿ ಅದನ್ನು ಬಳಸಿಕೊಂಡು ಹಾರಲಾರಂಭಿಸುತ್ತದೆ. `The Great Push’ ಎಂದೇ ಖ್ಯಾತಿಯಾಗಿರುವ ಈ ಕಥೆಯಿಂದ ನಮ್ಮೊಳಗಿನ ಸಾಮರ್ಥ್ಯ ನಮಗೆ ತಿಳಿಯಬೇಕಾದರೆ ಒಂದು ಇಂಥಾ `Great Push’ನ ಅಗತ್ಯವಿದೆ ಎನ್ನುವ ಅರಿವಾಗುತ್ತದೆ.

* ಖಲೀಲ್ ಗಿಬ್ರಾನ್ ಅವರ ` The Eagle and The Skylark’ (ಹದ್ದು ಮತ್ತು ಬಾನಾಡಿ) ಎಂಬ ದೃಷ್ಟಾಂತ ಕಥೆಯಲ್ಲಿ ದೊಡ್ಡವರ ಜಂಬ, ಆದರೆ ಉಪಾಯವಿಲ್ಲದಾಗ ಯಾವ ಸ್ಥಿತಿಗೂ ಹೊಂದಿಕೊಂಡು ನುಣುಚಿಕೊಳ್ಳುವ ಅವರ ಬುದ್ದಿ ಇವುಗಳನ್ನು ಈ ರೀತಿಯಾಗಿ ತಿಳಿಸಿದ್ದಾರೆ:

ಎತ್ತರದ ಬೆಟ್ಟವೊಂದರ ಬಂಡೆಯ ಮೇಲೆ ಒಂದು ಹದ್ದು, ಒಂದು ಬಾನಾಡಿ ಸಂಧಿಸಿದವು. ಬಾನಾಡಿ, ‘ನಮಸ್ಕಾರ, ಎದ್ದೆಯಾ?’ ಎಂದಿತು. ಹದ್ದು ತಿರಸ್ಕಾರ ದೃಷ್ಟಿಯಿಂದ ನೋಡುತ್ತಾ ‘ನಮಸ್ಕಾರ’ ಎಂದು ಕ್ಟೀಣಧ್ವನಿಯಲ್ಲಿ ಹೇಳಿತು.

ಬಾನಾಡಿ: ಎಲ್ಲ ಕ್ಷೇಮವಷ್ಟೆ?

ಹದ್ದು: ಕ್ಷೇಮ, ಆದರೆ ನಿನಗೆ ತಿಳಿಯದೇ? ನಾವು ಪಕ್ಷಿರಾಜರು. ನಾವು ಮಾತನಾಡಿಸದಲ್ಲದೇ ನೀವು ಮಾತನಾಡಕೂಡದು.

ಬಾನಾಡಿ: ನನಗೆ ತಿಳಿದಂತೆ ನಾವೆಲ್ಲಾ ಒಂದೇ ಬಳಗದವರು.

ಹದ್ದು: (ಅಸಡ್ಡೆಯಿಂದ) ಯಾರೋ ನಿನಗೆ ಹಾಗೆ ಹೇಳಿದ್ದು?

ಬಾನಾಡಿ: ನಿನಗೆ ಇದನ್ನು ನಾನು ಜ್ಞಾಪಿಸಬೇಕು. ನಿನ್ನಷ್ಟೇ ಎತ್ತರಕ್ಕೆ ನಾನು ಹಾರಬಲ್ಲೆ. ಅಲ್ಲದೇ ನನ್ನ ಹಾಡಿನಿಂದ ನಾನು ಜನಕ್ಕೆ ಸುಖ ಸಂತೋಷಗಳನ್ನು ಕೊಡಬಲ್ಲೆ. ನೀನು ಅದನ್ನು ಮಾಡಲಾರೆ.

ಹದ್ದಿಗೆ ಕೋಪ ಬ0ತು: ‘ಸುಖ, ಸಂತೋಷ! ದುರಹಂಕಾರದ ಕ್ಷುದ್ರ ಹಕ್ಕಿ! ನನ್ನ ಕೊಕ್ಕಿನ ಒಂದೇ ಕುಕ್ಕಿನಿಂದ ನಿನ್ನನ್ನು ನಾಶ ಮಾಡಿಬಿಡಬಲ್ಲೆ. ನೀನಿರುವುದು ನನ್ನ ಕಾಲಿನಷ್ಟು!’

ಬಾನಾಡಿ ಹಾರಿ ಹದ್ದಿನ ಬೆನ್ನಿನ ಮೇಲೆ ಕುಳಿತು ಅದರ ಗರಿಗಳನ್ನು ಕುಕ್ಕಲಾರಂಭಿಸಿತು.ಹದ್ದಿಗೆ ಹಿಂಸೆಯಾಯಿತು. ವೇಗವಾಗಿ ಮೇಲೆ ಕೆಳಗೆ ಹಾರಿ ಬಾನಾಡಿಯನ್ನು ಕೊಡವಿ ಹಾಕಲು ಪ್ರಯತ್ನಿಸಿತು. ಆದರೆ ಆಗಲಿಲ್ಲ. ಕೊನೆಗೆ ಕೋಪ ಇನ್ನೂ ಹೆಚ್ಚಿ, ಎತ್ತರದ ಬಂಡೆಯ ಮೇಲೆ ಮತ್ತೆ ಕುಳಿತಿತು. ಬಾನಾಡಿ ಇನ್ನೂ ಅದರ ಬೆನ್ನ ಮೇಲೇ ಇತ್ತು.ಹದ್ದು ಎಂಥಾ ಕೆಟ್ಟ ಗಳಿಗೆ ಎಂದು ಶಾಪ ಹಾಕುತ್ತಿತ್ತು.

ಅಷ್ಟರಲ್ಲಿ ಒಂದು ಆಮೆ ಮೆಲ್ಲಗೆ ತೆವಳಿಕೊಂಡು ಬಂದು ಈ ದೃಶ್ಯ ನೋಡಿ ನಗು ತಡೆಯಲಾರದೆ ಬಿದ್ದು ಹೊರಳಾಡಿತು. ಹದ್ದಿನ ಕೋಪ ಹದ್ದುಮೀರಿತು! ತಿರಸ್ಕಾರದಿಂದ ಆಮೆಯ ಕಡೆ ನೋಡಿ ಹೇಳಿತು: ‘ನಿಧಾನವಾಗಿ ತೆವಳುವ ಕ್ಷುದ್ರ ಪ್ರಾಣಿ, ಯಾವಾಗಲೂ ಭೂಮಿಗೆ ಅಂಟಿಕೊಂಡೇ ಇರುವ ನೀನು ಏನು ನೋಡಿ ನಗುತ್ತಿದ್ದೀಯ?’

ಆಮೆ ಹೇಳಿತು: ಏಕೆ? ನೀನು ಕುದುರೆ ಆಗಿ ಹೋಗಿದ್ದೀಯ. ಒಂದು ಸಣ್ಣ ಹಕ್ಕಿ ನಿನ್ನ ಮೇಲೆ ಸವಾರಿ ಮಾಡುತ್ತಿದೆ. ಹಾಗೆ ನೋಡಿದರೆ ಆ ಹಕ್ಕಿಯೇ ಚೆನ್ನಾಗಿದೆ!’

ಹದ್ದು ಹೇಳಿತು: ನಿನ್ನ ಕೆಲಸ ನೀನು ನೋಡು ಹೋಗು, ನನ್ನ ಸೋದರ ಬಾನಾಡಿಗೂ ನನಗೂ ಸಂಬಂಧಪಟ್ಟ ಮನೆ ವಿಷಯ ಇದು!’

`The Story Of The Eagle’ ಎನ್ನುವ ಒಂದು ವಿಡಿಯೊ ಚಿತ್ರಣದಲ್ಲಿ ಈ ರೀತಿ ಇದೆ:

‘ಹದ್ದು ಇತರ ಪಕ್ಷಿಗಳಿಗಿಂತ ದೀರ್ಘವಾದ ಆಯುಷ್ಯವನ್ನು ಹೊಂದಿದೆ. ಅದು ೭೦ವರ್ಷಗಳವರೆಗೂ ಬದುಕಬಹುದು. ಆದರೆ ಅದಕ್ಕಾಗಿ ಒಂದು ಕಠಿಣ ನಿರ್ಧಾರವನ್ನು ಮಾಡಬೇಕು. ಹದ್ದಿಗೆ ೪೦ವರ್ಷಗಳಾದ ನಂತರ ಅದರ ನಖಗಳು ಬೇಟೆಯನ್ನು ಹಿಡಿಯಲು ಅಸಮರ್ಥವಾಗುತ್ತವೆ, ದೀರ್ಘ ಮತ್ತು ಹರಿತವಾದ ಕೊಕ್ಕು ಬಾಗುತ್ತದೆ. ವಯಸ್ಸಾದಂತೆ ಅದರ ಭಾರವಾದ ರೆಕ್ಕೆಗಳು ಎದೆಯ ಭಾಗಕ್ಕೆ ಅಂಟಿದಂತಾಗಿ ಹಾರಲು ಅಶಕ್ತವಾಗುತ್ತವೆ. ಆಗ ಅದಕ್ಕೆ ಎರಡು ಆಯ್ಕೆಗಳು ಉಳಿಯುತ್ತವೆ. ಸಾಯುವುದು ಇಲ್ಲವೆ ೧೫೦ದಿನಗಳ ಒಂದು ನೋವಿನಿಂದ ಕೂಡಿದ ಪರಿವರ್ತನೆಯ ಕ್ರಿಯೆಗೆ ಒಳಗಾಗುವುದು! ಹದ್ದು ಪರ್ವತದ ಎತ್ತರವಾದ ಬಂಡೆಯ ಮೇಲೆ ಕುಳಿತು ತನ್ನ ಹಳೆಯ ಕೊಕ್ಕನ್ನು ಬಿದ್ದುಹೋಗುವವರೆಗೂ ಮಸೆಯುತ್ತದೆ. ನಂತರ ಹೊಸಕೊಕ್ಕು ಬರುವವರೆಗೂ ಕಾದಿದ್ದು ತನ್ನ ಹಳೆಯ ನಖಗಳನ್ನು ವಿಸರ್ಜಿಸುತ್ತದೆ. ಹೊಸ ನಖಗಳು ಬೆಳೆದ ನಂತರ ತನ್ನ ವಯಸ್ಸಾದ ರೆಕ್ಕೆ-ಪುಕ್ಕಗಳನ್ನು ಕಿತ್ತುಕೊಳ್ಳಲಾರಂಭಿಸುತ್ತದೆ........ ಐದು ತಿಂಗಳ ನಂತರ ತನ್ನ ಹೊಸಹುಟ್ಟಿನ ಹಾರಾಟವನ್ನು ಪ್ರಾರಂಭಿಸಿ ಇನ್ನೂ ೩೦ವರ್ಷಗಳಕಾಲ ಜೀವಿಸುತ್ತದೆ!

ಎಷ್ಟೋ ವೇಳೆ ನಮ್ಮ ಉಳಿವಿಗಾಗಿ ನಾವು ಈ ಪರಿವರ್ತನೆಯ ಕ್ರಿಯೆಯಲ್ಲಿ ತೊಡಗಬೇಕಾಗುತ್ತದೆ. ಕೆಲವುವೇಳೆ ನಾವು ನಮ್ಮ ಹಳೆಯ ನೆನಪುಗಳು, ಕಂದಾಚಾರಗಳಿಂದ ಹೊರಬಂದು, ಹಳೆಯ ಹೊರೆಗಳನ್ನು ಕಳಚಿ ಹೊಸ ಜೀವನವನ್ನು ಪ್ರಾರಂಭಿಸಬೇಕಾಗುತ್ತದೆ.

ಹದ್ದುಗಳನ್ನು ಕುರಿತು ಜನಜನಿತವಾಗಿರುವ ಈ ಕಥೆಗಳ ಸತ್ಯಾಸತ್ಯತೆಗಳ ಬಗ್ಗೆ ವಿವೇಚಿಸದೇ ಇವುಗಳಿಂದ ನಾವು ಕಲಿಯಬೇಕಾದದ್ದು ಸಾಕಷ್ಟಿದೆ ಎಂದು ಭಾವಿಸೋಣ.

7 comments:

  1. ಇದು ಸಂಗ್ರಹ ಮಾಡಬೇಕಾದ ಪೋಸ್ಟ್ ಮೇಡಂ.
    ತುಂಬಾ ಚೆನ್ನಾಗಿ ತಿಳಿಸಿದ್ದಿರಿ.
    ವಂದನೆಗಳು
    ಸ್ವರ್ಣಾ

    ReplyDelete
  2. ಪ್ರಾಣಿಗಳಿಂದ ನಾವು ಕಲಿಯುವದು ಎಷ್ಟೆಲ್ಲ ಇದೆಯಲ್ಲವೆ? ಉತ್ತಮ ವಿಚಾರಗಳಿಗಾಗಿ ಧನ್ಯವಾದಗಳು.

    ReplyDelete
  3. ಚಂದದ ಬರಹ.ತುಂಬಾ ಇಷ್ಟವಾಯಿತು.

    ReplyDelete
  4. Really super article...There are lot many things to learn from animals too...And Khaleel Gibraan's stories are very good..

    ReplyDelete
  5. ಹೌದು..ಪ್ರಾಣಿ,ಪಕ್ಷಿಗಳಿಂದ ಕಲಿಯಬೇಕಾದದ್ದು ತುಂಬಾ ಇದೆ...ಉಪಯುಕ್ತ ಲೇಖನ...ಧನ್ಯವಾದಗಳು...

    ReplyDelete
  6. Nice Parables. You can send these things to Shikshana Varthe or TEACHER Monthly so that they reach thousands at a time.
    Bedre Manjunath

    ReplyDelete