Tuesday, May 22, 2012

ಮನದ ಅಂಗಳದಿ.........೯೨. ವಿವೇಕ

ಯಾವಾಗಲೂ  ಮನುಷ್ಯನಾದವನಿಗೆ ಯುಕ್ತಾಯುಕ್ತ ವಿವೇಚನೆ ಇರಬೇಕು, ವಿವೇಕಿಯಾದವನು ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯಎಂದು ನಮ್ಮ ತಂದೆ ಆಗಾಗ ಹೇಳುತ್ತಿದ್ದರು. ಬಹಳ ಸಹನ ಶೀಲರಾದ ಅವರು ಒಮ್ಮೊಮ್ಮೆ ಕೋಪ ಬಂದಾಗ, ಆ ಕೋಪಕ್ಕೆ ಕಾರಣರಾದವರನ್ನು, ಸಾಮಾನ್ಯವಾಗಿ ಅದು ನಾವೇ ಆಗಿರುತ್ತಿದ್ದೆವಾದ್ದರಿಂದ ನಮ್ಮನ್ನು ಅವಿವೇಕಿಎಂದು ಬೈಯುತ್ತಿದ್ದರು! ಪ್ರತಿ ಭಾರಿ ಅವರಿಂದ ಅವಿವೇಕಿ ಎನಿಸಿಕೊಂಡಾಗಲೂ ವಿವೇಕ ಎಂದರೇನು?’ ಎಂಬ ಪ್ರಶ್ನೆ ಕಾಡುತ್ತಿತ್ತು. ತುಂಬಾ ಬುದ್ಧಿವಂತರಾದರೆ ವಿವೇಕಿಗಳಾಗುತ್ತಾರೇನೋ ಎಂದುಕೊಳ್ಳುತ್ತಿದ್ದೆ!
    ಜಿಡ್ಡು ಕೃಷ್ಣಮೂರ್ತಿಯವರು ಬುದ್ಧಿ ಮತ್ತು ವಿವೇಕಗಳಿಗಿರುವ ಭಿನ್ನತೆಯನ್ನು ಈ ರೀತಿಯಾಗಿ ಸ್ಪಷ್ಟಪಡಿಸಿದ್ದಾರೆ:
    ಬುದ್ಧಿಗೆ ತರಬೇತಿ ನೀಡುವುದರಿಂದ ವಿವೇಕ ಹುಟ್ಟುವುದಿಲ್ಲ. ಬುದ್ಧಿ ಮತ್ತು ಭಾವಗಳ ಪರಿಪೂರ್ಣ ಸಾಮರಸ್ಯದೊಂದಿಗೆ ಕ್ರಿಯೆಯಲ್ಲಿ ತೊಡಗಿದಾಗ ವಿವೇಕ ಹುಟ್ಟುತ್ತದೆ. ಬುದ್ಧಿಗೂ ವಿವೇಕಕ್ಕೂ ಅಗಾಧವಾದ ವ್ಯತ್ಯಾಸಗಳಿವೆ. ಭಾವವನ್ನು ಅವಲಂಭಿಸದೇ ಸ್ವತಂತ್ರವಾಗಿ ಪ್ರವೃತ್ತವಾಗುವ ಆಲೋಚನೆಯೇ ಬುದ್ಧಿ. ಭಾವದ ಹಂಗಿಲ್ಲದಂತೆ ನಿರ್ಧಿಷ್ಟ ದಿಕ್ಕಿನಲ್ಲಿ ಬುದ್ಧಿಯನ್ನು ತರಬೇತುಗೊಳಿಸುವುದರಿಂದ ಮಹಾನ್ ಬುದ್ಧಿವಂತರಾಗಬಹುದೇ ಹೊರತು ವಿವೇಕಿಗಳಾಗಲು ಸಾಧ್ಯವಿಲ್ಲ. ಭಾವಿಸುವ ಮತ್ತು ವಿಚಾರಿಸುವ ಸಾಮರ್ಥ್ಯಗಳೆರಡೂ ವಿವೇಕದಲ್ಲಿ ಅಂತರ್ಗತವಾಗಿವೆ. ವಿವೇಕದಲ್ಲಿ ಈ ಎರಡೂ ಸಾಮರ್ಥ್ಯಗಳೂ ಅಷ್ಟೇ ತೀವ್ರವಾಗಿ, ಸಾಮರಸ್ಯಪೂರ್ಣವಾಗಿ ಇರುತ್ತವೆ. ಕೇವಲ ಬುದ್ಧಿಯಿಂದಲ್ಲ, ನಮ್ಮ ವಿವೇಕದೊಡನೆ ಬದುಕನ್ನು ಕಾಣುವುದನ್ನು ಕಲಿಯಬೇಕು. ಅದು ಸಾಧ್ಯವಾಗದಿದ್ದರೆ ಜಗತ್ತಿನ ಯಾವ ವ್ಯವಸ್ಥೆಯೂ ಮನುಷ್ಯ ತನ್ನ ಹೊಟ್ಟೆಪಾಡಿಗಾಗಿ ಕೊನೆಯಿಲ್ಲದಂತೆ ದುಡಿಯುತ್ತಲೇ ಇರಬೇಕಾದುದನ್ನು ತಪ್ಪಿಸಲಾರದು.
   ಸಂವೇದನಾಶೀಲರಾದವರು ವಿವೇಕಿಗಳಾಗುತ್ತಾರೆ ಎನ್ನುವುದನ್ನು, ‘ಎಲ್ಲ ಸಮಯದಲ್ಲೂ ಎಲ್ಲ ಕಾಲದಲ್ಲೂ ನೀವು ಸಂವೇದನಾ ಶೀಲರಾಗಿರಬೇಕು. ಹಾಗೆ ಸಂಪೂರ್ಣ ಸಂವೇದನಾ ಶೀಲರಲ್ಲದಿದ್ದರೆ ನಿಮ್ಮಲ್ಲಿ ವಿವೇಕವಿರುವುದಿಲ್ಲ. ವಿವೇಕವು ಸಂವೇದನೆ ಮತ್ತು ಗಮನಗಳೊಡನೆಯೇ ಇರುತ್ತದೆ,’ ಎನ್ನುವ ಮಾತುಗಳಿಂದ ಖಚಿತಗೊಳಿಸುತ್ತಾರೆ.
   ಖಲೀಲ್ ಗಿಬ್ರಾನ್ ತಮ್ಮ ಪ್ರವಾದಿಯಲ್ಲಿ ವಿವೇಕಮತ್ತು ವಾಸನಾಗಳಿಗಿರುವ ಪರಸ್ಪರ ಸಂಬಂಧವನ್ನು ತಿಳಿಸಿರುವುದು ಹೀಗಿದೆ:
   ನಿಮ್ಮ ಅಂತರಂಗವು ಆಗಾಗ ಒಂದು ಯುದ್ಧರಂಗವಾಗಿ ಪರಿಣಮಿಸುತ್ತದೆ. ಆಗ ಅಲ್ಲಿ ನಿಮ್ಮ ವಿವೇಕ ಮತ್ತು ನಿರ್ಣಯ ಬುದ್ಧಿಗಳು, ನಿಮ್ಮ ವಾಸನಾ ಮತ್ತು ಕ್ಷುಧೆಗಳೊಂದಿಗೆ ಹೋರಾಡಲಾರಂಭಿಸುತ್ತವೆ.
  ನಿಮ್ಮ ವೃತ್ತಿಗಳೊಳಗಿನ ವಿಸಂಗತತೆ ಏರಾಟಗಳನ್ನು, ಸುಸಂಗತತೆ  ಏಕತೆಗಳನ್ನಾಗಿ ಮಾರ್ಪಾಡು ಮಾಡುವಂತೆ ನಾನೊಬ್ಬ ಶಾಂತಿ ನಿರ್ಮಾಪಕನಾಗಿ ನಿಮ್ಮ ಅಂತರಂಗದೊಳಗೆ ಇರಬೇಕಾಗಿತ್ತೆನಿಸುತ್ತದೆ. ಆದರೆ ನೀವೂ ಶಾಂತಿ ನಿರ್ಮಾಪಕರಾಗದೇ ಮತ್ತು ನಿಮ್ಮ ವೃತ್ತಿಗಳನ್ನೆಲ್ಲಾ ಪ್ರೀತಿಸುವವರಾಗದೇ, ನಾನಾದರೂ ಶಾಂತಿನಿರ್ಮಾಪಕನಾಗುವುದು ಹೇಗೆ ಸಾಧ್ಯ?
   ನಿಮ್ಮ ವಿವೇಕ ಮತ್ತು ವಾಸನಾಗಳೇ, ನಿಮ್ಮ ಜಲಪಯಣಿಗ ಆತ್ಮನ ಚುಕ್ಕಾಣಿ ಮತ್ತು ಹಾಯಿಪಟಗಳಾಗಿರುತ್ತವೆ. ನಿಮ್ಮ ಚುಕ್ಕಾಣಿ ಮತ್ತು ಹಾಯಿಪಟಗಳಲ್ಲಿ ಏನಾದರೂ ಹರಿಮುರಿಯಾದಲ್ಲಿ ಗೊತ್ತುಗುರಿಸಿಗದೇ ನೀವು ಹೊಯ್ದಾಡಿಹೋಗುತ್ತೀರಿ.; ಅಥವಾ ಎಲ್ಲಿಯೋ ಸಾಗರ ಮಧ್ಯದಲ್ಲಿ ಸ್ತಬ್ಧರಾಗಿ ನಿಂತುಬಿಡುತ್ತೀರಿ.
   ವಿವೇಕದ ಅಧಿರಾಜ್ಯ ಒಂದೇ ಇದ್ದಾಗ ಅದು ಒಂದು ಎಲ್ಲೆ ಕಟ್ಟುವ ಶಕ್ತಿಯಾಗುತ್ತದೆ. ಮತ್ತು ಆಳದೇ ಬಿಟ್ಟ ವಾಸನಾ ತನ್ನನ್ನೇ ಸುಟ್ಟು ಸೂರೆಗೊಳ್ಳುವ ಜ್ವಾಲೆಯಾಗುತ್ತದೆ. ಆದುದರಿಂದ ನಿಮ್ಮ ಆತ್ಮವು ನಿಮ್ಮ ವಿವೇಕವನ್ನು ವಾಸನಾದ ಉತ್ಕಟತೆಗೆ ಏರುವಂತೆ ಮಾಡಲಿ. ಆಗ ಅದು ಹಿತಮಿತದ ದನಿಯಿಂದ ಹಾಡುವುದು.
   ನಿಮ್ಮ ವಾಸನಾದ ಮಾರ್ಗದರ್ಶನವನ್ನು ನಿಮ್ಮ ಆತ್ಮವು ವಿವೇಕದಿಂದ ಮಾಡಲಿ; ಆಗ ನಿಮ್ಮ ವಾಸನಾ ತನ್ನ ದೈನಂದಿನ ಪುನರುತ್ಥಾನದಿಂದ ಬದುಕುವುದು ಹಾಗೂ ತನ್ನ ಚಿತಾಭಸ್ಮದಿಂದಲೇ ಬದುಕಿ ಎದ್ದ ಫೀನಿಕ್ಸ್ ಪಕ್ಷಿಯಂತೆ ಅಜರಾಮರವಾಗುವುದು.
   ನಿಮ್ಮ ನಿರ್ಣಯ ಬಿದ್ಧಿ, ಕ್ಷುಧೆಗಳು, ನಿಮ್ಮ ಮನೆಯ ಇಬ್ಬರು ಪ್ರೀತಿಯ ಅತಿಥಿಗಳಂತೆ ತಿಳಿಯಲ್ಪಡಬೇಕೆಂದು ನನಗನಿಸುತ್ತದೆ. ಇವರಿಬ್ಬರ ಅತಿಥಿ ಸತ್ಕಾರದಲ್ಲಿ, ನಿಶ್ಚಯವಾಗಿಯೂ ನೀವು ತಾರತಮ್ಯ ಮಾಡಕೂಡದು; ಏಕೆಂದರೆ, ಒಬ್ಬನನ್ನೇ ಹೆಚ್ಚು ಗಮನಿಸುವವನು ಇಬ್ಬರ ಪ್ರೀತಿ ವಿಶ್ವಾಸಗಳನ್ನೂ ಕಳೆದುಕೊಳ್ಳುತ್ತಾನೆ.
    ಪರ್ವತ ಪ್ರದೇಶದಲ್ಲಿ ಚಿಗಿತ ಹೂತ ಬೇವಿನ ಮರದ ಶೀತಲ ಛಾಯೆಯಲ್ಲಿ ನೀವು ಕುಳಿತುಕೊಂಡು, ಎದುರಿಗೆ ಕೆಳಗೆಲ್ಲಾ ಕಾಣಿಸುತ್ತಿರುವ ಹೊಲ-ಗದ್ದೆ-ಬಯಲುಗಳ ಪ್ರಶಾಂತತೆ-ಪ್ರಸನ್ನತೆಗಳನ್ನು ಸವಿಯುತ್ತಾ ಸೊಗಸುಗೊಳ್ಳುತ್ತಿರುವಾಗ, ಆಗ ನಿಮ್ಮ ಹೃದಯವು ಮೌನದಿಂದಲೇ ದೇವರು ವಿವೇಕದಲ್ಲಿ ವಿಶ್ರಾಂತಿಗೈಯುತ್ತಿದ್ದಾನೆ,’ ಎನ್ನಲಿ.
    ಬಿರುಗಾಳಿಯೆದ್ದು, ಅದರ ರಭಸಕ್ಕೆ ಅರಣ್ಯಕ್ಕೆ ಅರಣ್ಯವೇ ಗದಗದ ನಡುಗುತ್ತಿರುವಾಗ ಹಾಗೂ ಆಕಾಶದ ಭವ್ಯಭೀಷಣತೆಯನ್ನು ನಸಾರಿಸಾರಿ ಹೇಳುತ್ತಿರುವಂತೆ ಗುಡುಗು-ಮಿಂಚುಗಳು ಹೊಡೆಯುತ್ತಿರುವಾಗ, ಆಗ ನಿಮ್ಮ ಹೃದಯವು ಭಯಭೀತಿಯಿಂದ, ‘ದೇವರು ವಾಸನಾದಲ್ಲಿ ಸಂಚರಿಸುತ್ತಿದ್ದಾನೆ,’ಎನ್ನಲಿ.
    ನೀವು, ಆ ದೇವದೇವನ ಬ್ರಹ್ಮಾಂಡದೊಳಗಿನ ಒಂದು ಉಸಿರು ಮಾತ್ರವಾದುದರಿಂದ ಹಾಗೂ ಅವನ ಮಹಾರಣ್ಯದೊಳಗಿನ ಕೇವಲ ಒಂದು ಎಲೆಯಾಗಿರುವುದರಿಂದ ನೀವು ಕೂಡ, ‘ವಿವೇಕದಲ್ಲಿ ವಿಶ್ರಾಂತಿಯನ್ನೂ, ವಾಸನಾದಲ್ಲಿ ಸಂಚಾರವನ್ನೂಕೈಗೊಳ್ಳಿರಿ.
    ವಿವೇಕ ನಮ್ಮನ್ನು ಆರ್ಥಿಕವಾಗಿ ಶ್ರೀಮಂತಗೊಳಿಸದಿರಬಹುದು, ಏಕೆಂದರೆ ವಿವೇಕವು ಪ್ರಾಪಂಚಿಕ ವ್ಯವಹಾರಗಳಲ್ಲಿ ಎಡವಲೂ ಬಹುದು, ಆದರೆ ಹೃದಯ ಶ್ರೀಮಂತಿಕೆಯನ್ನು ನಿಶ್ಚಯವಾಗಿಯೂ ಉಂಟುಮಾಡುತ್ತದೆ. ಮಾನವರಾದ ನಮ್ಮ  ಏಕತಾನತೆಯ ಜೀವನವನ್ನು ನಿವಾರಿಸಿ ಜೀವನಕ್ಕೆ ಸೊಬಗನ್ನು ನೀಡುತ್ತದೆ, ಉತ್ತಮ ಜೀವನ ನಮ್ಮದಾಗುತ್ತದೆ

4 comments:

  1. ಉತ್ತಮ ಲೇಖನ ಅಕ್ಕ.
    ಆದರೂ ಮನುಷ್ಯನ ಬುದ್ದಿ ಮಟ್ಟ ಆತನ ವಿವೇಚನೆಗೆ ಬಿಟ್ಟಿದ್ದು ಎಂದು ಎಲ್ಲೋ ಓದಿದ ನೆನಪು.

    ReplyDelete
  2. ಮನೋ ನಿಗ್ರಹ ಮತ್ತು ಸಂಯಮದಿಂದ ನಮ್ಮ ವ್ಯಕ್ತಿತ್ವ ವಿಕಸನವಾಗುತ್ತದೆ. ಈ ನಿಟ್ಟಿನಲ್ಲಿ ನಿಮ್ಮ ಈ ಬರಹ ನಮಗೆ ಸ್ಪೂರ್ತಿಯಾಗಲಿ.

    ReplyDelete
  3. ಆಲೋಚನಾ ಲಹರಿ ಚೆನ್ನಾಗಿದೆಯಾದರೂ ಎಲ್ಲರಿಗೂ ಸುಲಭವಾಗಿ ಅರ್ಥವಾಗಲಾರದು. ಆಂಗ್ಲ ಲೇಖನಗಳಿಂದ ಸ್ಫೂರ್ತಿ ಪಡೆಯುವಾಗ ಕೆಲವು ಪ್ರಯೋಗಗಳನ್ನು ಭಾಷಾಂತರಿಸುವುದಕ್ಕೆ ಬದಲಾಗಿ ಕನ್ಭಾನಡದ ಜಾಯಮಾನಕ್ಕೆ ಒಗ್ಗುವ ರೀತಿಯಲ್ಲಿ ಭಾವಾನುವಾದ ಮಾಡುವುದು ಒಳ್ಳೆಯದು

    ReplyDelete
  4. ಯಾವುದೇ ಒಂದು ಕೆಲಸ ಮಾಡಿದಾಗ,ಅಥವಾ ಮತ್ತೊಬ್ಬರೊಡನೆ ವ್ಯವಹಾರ ಮಾಡುವಾಗ,ಎಲ್ಲರ ಒಳಿತನ್ನೂ ಗಮನದಲ್ಲಿ ಇಟ್ಟುಕೊಂಡು,ಸರ್ವಸಮ್ಮತವಾದ,ಯುಕ್ತವಾದ ರೀತಿಯಲ್ಲಿ ನಡೆದುಕೊಳ್ಳುವುದು ವಿವೇಕ ಎನಿಸುತ್ತದೆ.ಸಾಮಾನ್ಯ ಭಾಷೆಯಲ್ಲಿ ಹೇಳಬೇಕೆಂದರೆ ಏನೋ ಮಾಡಲು ಹೋಗಿ ಮತ್ತೇನೋ ಎಡವಟ್ಟು ಮಾಡುವುದು.ತಾನು ಮಾಡುವ ಕೆಲಸದಿಂದ ಹಲವಾರು ಮಂದಿ ತೊಂದರೆಯಲ್ಲಿ ಸಿಕ್ಕಿಕೊಳ್ಳುವಂತೆ ಮಾಡುವುದು.ಏನೋ ಹೇಳಲು ಹೋಗಿ ಮತ್ತೇನೋ ಹೇಳಿ ಆಭಾಸ ಅಥವಾ ಅವಮಾನವಾಗುವಂತೆ ನಡೆದುಕೊಳ್ಳುವುದು.ಇವೆಲ್ಲವೂ ಅವಿವೇಕ ಎನಿಸಿ ಕೊಳ್ಳುತ್ತದೆ.ವಿವೇಕದ ಬಗ್ಗೆ ಹೆಚ್ಚಿನ ಮಾಹಿತಿಯುಳ್ಳ ಬರವಣಿಗೆ ಕೊಟ್ಟಿದ್ದಕ್ಕೆ ಧನ್ಯವಾದಗಳು ಮೇಡಂ.ಬ್ಲಾಗಿಗೆ ಭೇಟಿಕೊಡಿ.ನಮಸ್ಕಾರ.

    ReplyDelete