Tuesday, November 4, 2014

ಕವನ -- ಒಳಗಿನೊಳಗು

ದಿನಾಂಕ೦೨-೧೦-೨೦೧೪ ರ೦ದು ನಡೆದ` ಕರ್ನಾಟಕ ಸಾಹಿತ್ಯ ಅಕಾಡಮಿ ಸುವರ್ಣ ಸ೦ಭ್ರಮ' ಜಿಲ್ಲಾ ಕವಿಗೋಷ್ಠಿಯಲ್ಲಿ ವಾಚಿಸಿದ ಕವನವನ್ನು ನಿಮ್ಮೊಡನೆ ಹ೦ಚಿಕೊಳ್ಳುತ್ತಿದ್ದೇನೆ:



ಒಳಗಿನೊಳಗು
ಅಂದು........
ಜನಜಂಗುಳಿಯ ನಡುವೆ
ಹೆಜ್ಜೆಯಿಡುವಾಗ
ಕಂಡುಬರುತ್ತಿದ್ದುದು ಇಷ್ಟೇ:
ಕಣ್ಣು, ಕಿವಿ, ಮೂಗು,ಬಾಯಿ
ಎತ್ತರ-ಗಿಡ್ಡ, ತೆಳು-ತೋರ
ಕಪ್ಪು-ಬಿಳುಪು.......
ಅಂಗಾಂಗಗಳಷ್ಟೇ ನರನೆಂಬಂಥಾ
ತಲೆ ಚಿಟ್ಟೆನಿಸುವ ಆಕಾರಗಳ ಸಾಲು ಸಾಲು,

ಮುಂದೆಮುಂದೆ ಸಾಗಿದಾಗ
ಕಂಡದ್ದೇ ಕಂಡು ರೋಸಿಹೋದಂತೆ
ಕೇಳಲಾರಂಭಿಸಿದ ಮಾತುಗಳು!
ಕೋಪ-ಆಕ್ರೋಶ, ದುಃಖ-ದುಮ್ಮಾನ
ನೋವು-ನಲಿವುಗಳ ಮೇಳ
ಮನದ ಪಿಸುಮಾತುಗಳು
ಹುಸಿಮುನಿಸುಗಳು
ಗುಜುಗುಜು, ಗಲಿಬಿಲಿ
ಎದುರಾದವರ ಭಾವಗಳ ವಿಶ್ಲೇಷಣೆಯಲೇ
ಕೊಚ್ಚಿಹೋಗುವ ಹುಚ್ಚುತನ
ನಿಶ್ಶಬ್ದವೆಂದರೇನರಿಯದ
ಅಂತ್ಯವಿಲ್ಲದ ಪಯಣ!

ಸಂತೆಯೊಳಗೆ ಸಂತನನರಸುವುದೆಲ್ಲಿ?
ದೇಹ-ಮನಸುಗಳ
ಮೀರಲಾಗದ ಬದುಕೆ?
ಇದಮಿತ್ಥಂ? ಎಂದು
ಪರಿಗಣಿಸಲಾಗದೇ
ತೊಳಲುವ ಜೀವಕೊಂದು
ಆಶಾಕಿರಣ!

ಈಗ ದೇಹಗಳ
ಸಾಲುಸಾಲೇ ಸಾಗಲಿ
ಮನಗಳೊಳಗೆ ಮಹಾ
ಸಮರವೇ ಜರುಗಲಿ
ಕಾಣಿಸದು
ಕೇಳಿಸದು!
ಆಳಆಳಕೆ ಇಳಿಯಬಯಸುತಿದೆ ಜೀವ
ಒಳಗಿನೊಳಗನು ಒಳಗೊಂಡಂತೆ
ಎಲ್ಲರೊಳಗಿನ ಚೈತನ್ಯವೊಂದೇ
ಎನಿಸುವ ಶಾಂತ ಭಾವ!                                       









 

2 comments:

  1. ಸಂತೆ ಗದ್ದಲದ ನೆಪದಲ್ಲಿ ಒಳಗಿನೊಳಗನು ಶಾಂತವಾಗಿಡುವತ್ತ ಪ್ರೇರೇಪಿಸುವ ಕವನ.

    ReplyDelete
  2. ಸಂತೆಯೊಳಗೊಬ್ಬ ಸಂತ ಸಿಕ್ಕಾಗ ಆ ಸಂತೋಷದ ಸಮಾಧಾನವೇ ಬೇರೆ

    ReplyDelete