Friday, November 12, 2010

ಮನದ ಅಂಗಳದಿ..........೧೭.ಮಕ್ಕಳ ದಿನಾಚರಣೆ

ನವೆಂಬರ್ ೨೦, ವಿಶ್ವ ಮಕ್ಕಳ ದಿನ. ನಮ್ಮ ಭಾರತದಲ್ಲಿ ಮಕ್ಕಳ ದಿನವನ್ನು ಪಂಡಿತ್ ಜವಹರಲಾಲ್ ನೆಹರೂರವರ ಜನ್ಮದಿನವಾದ ನವೆಂಬರ್೧೪ ರಂದು ಆಚರಿಸುತ್ತೇವೆ. ಮಕ್ಕಳ ಹಿತರಕ್ಷಣೆಗಾಗಿ, ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರವು ಅನೇಕ ಉಪಯುಕ್ತ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿದೆ. ಅದಕ್ಕಾಗೇ ಇರುವ ಸಂಬಂಧಿತ ಇಲಾಖೆಗಳು ಅವುಗಳನ್ನು ಕಾರ್ಯರೂಪಗೊಳಿಸುವ ಪ್ರಯತ್ನದಲ್ಲಿಯೂ ಇವೆ. ಆದರೂ ಉತ್ತಮವಾದ ಫಲ ಗೋಚರಿಸುವಲ್ಲಿ ಎಲ್ಲೋ ವಿಫಲತೆಯನ್ನು ಕಾಣುತ್ತಿದ್ದೇವೆ ಎನಿಸುತ್ತದೆ. ಅದಕ್ಕೆ ಕಾರಣವೇನು?
ಮಾನವ ಸಂಕುಲದ ಆದಿಯಿಂದಲೂ ಮನುಷ್ಯ ತನ್ನ ಸಂತಾನದ ಪ್ರಗತಿಗಾಗಿ ಶ್ರಮಿಸಿರುವುದು ಸುಳ್ಳಲ್ಲ. ಎಲ್ಲಾ ಜೀವಿಗಳಲ್ಲಿಯೂ ಇದು ಮೂಲಭೂತವಾದ ಕ್ರಿಯೆಯಾಗಿದ್ದರೂ ಮನುಷ್ಯ ಅದನ್ನು ಮತ್ತೂ ವಿಸ್ತರಿಸಿಕೊಂಡು ತನ್ನ ಮುಂದಿನ ಪೀಳಿಗೆಗಾಗಿಯೇ ಸ್ಥಿರ, ಚರಾಸ್ತಿಗಳ ಸಂಗ್ರಹದಲ್ಲಿಯೇ ತನ್ನ ಜೀವಿತಾವಧಿಯನ್ನು ಕಳೆಯುತ್ತಿದ್ದಾನೆ. ತನ್ನ ಜೀವನ ಮಟ್ಟಕ್ಕಿಂತಾ ತನ್ನ ಮಕ್ಕಳದ್ದು ಉನ್ನತದ್ದಾಗಿರಬೇಕೆಂಬುದು ಅವನ ಹಂಬಲವಾಗಿದೆ. ಅದರೂ...
ಒಂದು ಕಾಲಕ್ಕೆ ಮಕ್ಕಳಾಗಿದ್ದ ನಾವು ಆ ಸಂದರ್ಭದಲ್ಲಿ ನಮ್ಮ ಅನುಭವಗಳನ್ನು, ಎಂದರೆ ಎದುರಿಸಿದ ಸಮಸ್ಯೆಗಳು, ಗೊಂದಲಗಳು, ಕಾತರಗಳನ್ನು ನಮ್ಮ ಮಕ್ಕಳಲ್ಲಿ ಗುರುತಿಸಿ ತಿಳಿದುಕೊಳ್ಳಲು ವಿಫಲರಾಗಿದ್ದೇವೆ, ಅಥವಾ ಅದನ್ನು ನಿರ್ಲಕ್ಷಿಸಿ ನಮ್ಮದೇ ನಿರೀಕ್ಷೆಗಳನ್ನು ಮಕ್ಕಳ ಮೇಲೆ ಹೇರುವುದಷ್ಟೇ ನಮ್ಮ ಪ್ರೀತಿ ಎಂದುಕೊಂಡಿದ್ದೇವೆ. ಅವರಿಗೆ ಬೇಕು-ಬೇಡಗಳನ್ನು ಪೂರೈಸುವುದೇ ನಮ್ಮ ಜವಾಬ್ಧಾರಿ ಎಂದು ಭಾವಿಸುತ್ತೇವೆ. ಆ ಬೇಕು-ಬೇಡಗಳು ಭೌತಿಕ ವಸ್ತುಗಳಿಗಷ್ಟೇ ಸೀಮಿತವಾಗಿದ್ದು ಅವರ ನಿಜವಾದ ಬೇಡಿಕೆ ಏನು ಎಂದು ಗುರುತಿಸುವ ಪ್ರಯತ್ನವನ್ನೇ ನಡೆಸುತ್ತಿಲ್ಲ. ನಮ್ಮ ಮಕ್ಕಳೊಡನೆ ಕುಳಿತು, ಅವರ ಮನದಾಳದ ಮಾತುಗಳನ್ನು ಆಲಿಸುವ ವ್ಯವಧಾನವನ್ನು ನಾವು ತೋರಿಸುತ್ತಿಲ್ಲ. ಎಷ್ಟೋ ಸಮಯ ಹಾಗೆ ಮಾತನಾಡುವ ಸಲಿಗೆಯನ್ನೂ ಅವರಿಗೆ ಕೊಟ್ಟಿರುವುದಿಲ್ಲ. ಅವರನ್ನು ನಮ್ಮ ದಾರಿಗೆ ಎಳೆಯುವ ಸಡಗರದಲ್ಲಿ ಅವರಂತೆ ಅವರಿರಲು ಅವಕಾಶವನ್ನೇ ನೀಡುತ್ತಿಲ್ಲ. ಈ ಸಂದರ್ಭಕ್ಕೆ ಹೊಂದುವಂತಹ ಒಂದು ‘ಹನಿ?ಯನ್ನು ಇಲ್ಲಿ ಉದಾಹರಿಸಬಹುದು.

‘ನನ್ನಂತೆ ನೀನಾಗಬೇಕೆಂಬ
ಹಟದಲ್ಲಿ
ನಿನ್ನಂತಿರಲು ಬಿಡಲಿಲ್ಲ,
ನಿನ್ನಂತೆಯೇ ನೀನಿರು
ಎನ್ನುವಷ್ಟರಲ್ಲಿ
ನೀನು ನೀನಾಗಿರಲಿಲ್ಲ!?

ಹೀಗೆ ಮಕ್ಕಳನ್ನು ಅತಂತ್ರರಾಗಿಸುವಲ್ಲಿ ಸಫಲರಾಗುತ್ತಿದ್ದೇವೆ. ಮಕ್ಕಳನ್ನು ಸ್ವಾವಲಂಬಿಗಳನ್ನಾಗಿಸುವುದೆಂದರೆ ಆರ್ಥಿಕವಾಗಿ ಸಬಲರನ್ನಾಗಿಸುವುದಷ್ಟೇ ನಮ್ಮ ಗುರಿ ಎಂದುಕೊಂಡಿದ್ದೇವೆ ಅಥವಾ ಅವರನ್ನು ದುಡಿಯುವ ಯಂತ್ರಗಳನ್ನಾಗಿ ಮಾಡುತ್ತಿದ್ದೇವೆ. ಮಗುವಿಗೆ ತನ್ನ ನಿಜವಾದ ಹವ್ಯಾಸ ಯಾವುದು ಎಂದು ತಿಳಿದುಕೊಳ್ಳಲು ಅವಕಾಶವನ್ನೇ ನೀಡದೇ ಎಳವೆಯಲ್ಲೇ ಶಾಲೆಗೆ ಹೋಗುವುದರ ಜೊತೆಗೇ ನೃತ್ಯ, ಸಂಗೀತ, ಕರಾಟೆ, ಈಜು....ಹೀಗೆ ನಾಲ್ಕಾರು ಕಡೆಗೆ ಅವರನ್ನು ಕಳುಹಿಸಿ ಅವರ ಬಾಲ್ಯವನ್ನೇ ಯಾಂತ್ರಿಕಗೊಳಿಸಿಬಿಡುತ್ತಿದ್ದೇವೆ. ನಿಜವಾದ ತನ್ನ ಆಸಕ್ತಿ ಯಾವ ಕಡೆಗಿದೆ ಎಂದು ತಿಳಿಯಲಾಗದೇ ಮಗು ಗೊಂದಲಗೊಳ್ಳುತ್ತದೆ. ಇದರ ಜೊತೆಗೇ ಮಗು ಕಲಿತದ್ದನ್ನೆಲ್ಲಾ ಸ್ಪರ್ಧೆಗೆ ಒಡ್ಡಿ ಅದರಲ್ಲಿ ಆತಂಕವನ್ನು ಸೃಷ್ಟಿಸುತ್ತಿದ್ದೇವೆ. ಎಷ್ಟೋ ವೇಳೆ ಗೆಲುವು ಮಗುವಿನಲ್ಲಿ ಮೇಲರಿಮೆಯನ್ನೂ (ಕ್ರಮೇಣ ಇದೇ ಅಹಂಕಾರವಾಗಿ ನೈಜ ಪ್ರಗತಿಗೇ ಅಡ್ಡವಾಗುತ್ತದೆ.) ಸೋಲು ಕೀಳರಿಮೆಯನ್ನೂ ಉಂಟುಮಾಡುತ್ತದೆ. ಮಗು ತನ್ನ ಸ್ವಾಭಾವಿಕ ರೀತಿಯಲ್ಲಿ ಬೆಳೆಯಲು, ಪ್ರಗತಿಹೊಂದಲು ಇದು ಅಡ್ಡಿಯಾಗುತ್ತದೆ. ಮಗುವಿಗೆ ಒಂದು ಉತ್ತಮ ಹವ್ಯಾಸ ಬಾಲ್ಯದಿಂದಲೇ ರೂಪುಗೊಳ್ಳದಿದ್ದರೆ ಮುಂದೆ ಒತ್ತಡಗಳ ನಿವಾರಣೆಗೆ ಮಾರ್ಗವಿಲ್ಲದೇ ಅದು ಗೊಂದಲದ ಗೂಡಾಗುವ ಸಂಭವವಿರುತ್ತದೆ.

ಜಗತ್ತಿನಪ್ರಸಿದ್ಧ ಆಧ್ಯಾತ್ಮಿಕ ಸಾಹಿತಿಯಾದ ಖಲೀಲ್ ಗಿಬ್ರಾನ್ ತಮ್ಮ ಮಹೋನ್ನತ ಕೃತಿಯಾದ ‘ಪ್ರವಾದಿ?(ಪ್ರೊಫೆಟ್)ಯಲ್ಲಿ ಮಕ್ಕಳ ಬಗ್ಗೆ ಹೀಗೆ ಹೇಳಿದ್ದಾರೆ.

‘ನಿಮ್ಮ ಮಕ್ಕಳು ನಿಮ್ಮ ಮಕ್ಕಳೇ ಅಲ್ಲ. ಅವರು ಜೀವನೋತ್ಕಂಟಿತ ಜೀವನದ ಬಾಲಕ, ಬಾಲಿಕೆಯಾಗಿದ್ದಾರೆ. ಅವರು ನಿಮ್ಮೊಳಗಿನಿಂದ ಬಂದಿರುವರಲ್ಲದೆ ನಿಮ್ಮಿಂದ ಬಂದಿರುವುದಿಲ್ಲ. ಅವರು ನಿಮ್ಮ ಬಳಿ ಇರುತ್ತಿದ್ದಾಗ್ಯೂ ನಿಮಗಾಗಿಯೇ ಇರುವುದಿಲ್ಲ. ಅವರಿಗೆ ನೀವು ನಿಮ್ಮ ಪ್ರೀತಿಯನ್ನೀಯಬಹುದು. ಆದರೆ ನಿಮ್ಮ ವಿಚಾರಗಳನ್ನಲ್ಲ. ಏಕೆಂದರೆ ಅವರಿಗೆ ತಮ್ಮವೇ ಆದ ವಿಚಾರಗಳಿರುತ್ತವೆ. ಅವರ ಮೈಗಾಗಿ ನೀವು ಮನೆ ಮಾಡಿಕೊಡಿ; ಆದರೆ ಆತ್ಮಕ್ಕಾಗಿ ಬೇಡ. ಏಕೆಂದರೆ ಅವರ ಆತ್ಮಗಳೆ ಮುಂಬರುವ ಮನೆಯಲ್ಲಿ ವಾಸಿಸುವವು. ಆ ಮನೆಗಳನ್ನು ನೀವು ಕಾಣಲಾರಿರಿ. ನಿಮ್ಮ ಕನಸುಗಳಲ್ಲಿ ಕೂಡ ಕಾಣಲಾರಿರಿ.
ಅವರಂತಾಗಲು ನೀವು ಹವಣಿಸಿರಿ; ಆದರೆ ನಿಮ್ಮಂತೆ ಅವರನ್ನು ಮಾಡಲು ಮಾತ್ರ ಹವಣಿಸಬೇಡಿ. ಏಕೆಂದರೆ ಜೀವನವು ಹಿಂದೆ ಹೋಗದು. ಮತ್ತು ನಿನ್ನೆಯೊಂದಿಗೆ ನಿಲ್ಲದು.
ನೀವು ಬಿಲ್ಲುಗಳು; ಅವುಗಳಿಂದ ಬಿಟ್ಟ ಜೀವಂತ ಬಾಣಗಳೇ ನಿಮ್ಮ ಮಗುಗಳು. ಆ ಬಿಲ್ಲುಗಾರನು ಅನಂತ ಪಥದ ಮೇಲಿನ ತನ್ನ ಗುರಿಯನ್ನು ಲಕ್ಷಿಸಿ ನಿಮ್ಮನ್ನು ತನ್ನ ಶಕ್ತಿಯಿಂದ ಬಗ್ಗಿಸಿ ತನ್ನ ಬಾಣಗಳು ಶೀಘ್ರ ವೇಗದಿಂದ ಹೋಗುವಂತೆ ಮಾಡುತ್ತಾನೆ. ಆ ಬಿಲ್ಲುಗಾರನು ತನ್ನ ಕೈಮುಟ್ಟ ಮಣಿಸುವ ನಿಮ್ಮ ಮಣಿತವು ನಿಮಗೆ ಆನಂದದಾಯಕವೆನಿಸಲಿ. ಆದರೆ ಚಿಮ್ಮಿ ಹೋಗುವ ಬಿಲ್ಲನ್ನು ಆತನು ಪ್ರೀತಿಸುವಂತೆ ಟ್ಟಿಮುಟ್ಟಾದ ಬಿಲ್ಲನ್ನೂ ಆತನು ಪ್ರೀತಿಸುವನು.?

ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ, ಪ್ರಗತಿಗೆ ಅವರೊಂದಿಗೆ ನಾವಿದ್ದು ಸಹಕರಿಸೋಣ. ಆದರೆ ನಮ್ಮ ದಾರಿಗೆ ಅವರನ್ನು ಎಳೆದು, ನಮ್ಮಲ್ಲಿರುವ ಋಣಾತ್ಮಕ ಅಂಶಗಳನ್ನೆಲ್ಲಾ ಅವರಲ್ಲಿಯೂ ತುಂಬಿ ಅವರನ್ನು ಪಥ ಭ್ರಷ್ಟರನ್ನಾಗಿಸುವುದು ಬೇಡ. ನಮ್ಮನ್ನು ಗಮನಿಸಿದಾಗ ಕೆಲವಾದರೂ ಮೌಲ್ಯಗಳನ್ನು ತಮ್ಮಲ್ಲಿ ಮೈಗೂಡಿಸಿಕೊಳ್ಳಲು ಅನುಕೂಲವಾಗುವಂತೆ ಹಿರಿಯರೆನಿಸಿಕೊಳ್ಳಲು ಇಚ್ಛಿಸುವ ನಾವು ಹಿರಿತನದಿಂದ ನಮ್ಮನ್ನು ನಾವು ತಿದ್ದಿಕೊಳ್ಳೋಣ. ಮಕ್ಕಳ ದಿನಾಚರಣೆಯ ಈ ಸಂದರ್ಭದಲ್ಲಿ ಇದನ್ನೇ ನಮ್ಮ ಕೊಡುಗೆ ಎಂದು ಭಾವಿಸಿ ಮಕ್ಕಳೊಂದಿಗೆ ನಾವೂ ಸಕ್ರಿಯವಾಗಿ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಸಿದ್ಧರಾಗೋಣ.

14 comments:

  1. ಮಕ್ಕಳನ್ನು ಮಕ್ಕಳಂತೆ ಬೆಳೆಸುವುದಕ್ಕಿಂತಾ ದೊಡ್ಡ ಕೊಡುಗೆ ಇನ್ನೊಂದಿಲ್ಲಾ ಎನ್ನುವ ಮಾತುಗಳನ್ನು ಬಹು ಸುಂದರವಾಗಿ ತಿಳಿಸಿದ್ದೀರಿ.ಧನ್ಯವಾದಗಳು.ನಾಳೆ ವಿಶ್ವ ಮಧುಮೇಹ ದಿನಾಚರಣೆಯ ಅಂಗವಾಗಿ ಬರಹವೊಂದನ್ನು ಬ್ಲಾಗಿಸಿದ್ದೇನೆ.ಓದಿ ತಮ್ಮ ಅಭಿಪ್ರಾಯ ತಿಳಿಸಿ.ನಮಸ್ಕಾರ.

    ReplyDelete
  2. ಪ್ರಭಾವತಿಯವರೆ,
    ತು೦ಬಾ ಉಪಯುಕ್ತ ಲೇಖನ.. ಪ್ರತಿಯೊಬ್ಬರೂ ಓದಲೇ ಬೇಕಾದ೦ತಹ ಬರಹ..ಮಕ್ಕಳ ಬಗ್ಗೆ ಯಾವ ರೀತಿ ಯೋಚಿಸಬೇಕು,ಅವರಿಗೆ ಯಾವ ರೀತಿ ಭವಿಷ್ಯವನ್ನು ರೋಪಿಸಿಕೊಳ್ಳಲು ನಾವು ದೊಡ್ಡವರು ನೆರವಾಗಬೇಕು.. ನಮ್ಮನ್ನು ನಾವು ಯಾವ ರೀತಿಯಲ್ಲಿ ತಿದ್ದಿಕೊಳ್ಳಬೇಕು ಎ೦ಬುದರ ಬಗ್ಗೆ ತು೦ಬಾ ಸು೦ದರವಾಗಿ ಬರೆದಿದ್ದೀರಿ.ನಿಮ್ಮ ಹನಿ ಬಹಳ ಹಿಡಿಸಿತು.ಬರೆದಿಟ್ಟು ಕೊ೦ಡಿದ್ದೇನೆ.
    ತು೦ಬಾ ಧನ್ಯವಾದಗಳು.

    ReplyDelete
  3. ಮೇಡಂ ಮಕ್ಕಳ ದಿನಾಚರಣೆಗೆ ಒಳ್ಳೆಯ ಉಡುಗೊರೆ.ದೊಡ್ಡವರೆಲ್ಲಾ ಓದಲೇಬೇಕಾದ ಲೇಖನ ,ಆದರೂ ನಾವು ಮಕ್ಕಳ ದಿನಾಚರಣೆ ಸುಮ್ಮನೆ ಕಾಟಾಚಾರಕ್ಕೆ ಆಚರಿಸುತ್ತೇವ ಅಂತಾ ಗಿಲ್ಟ್ ಕಾಡ್ತಾ ಇದೆ.ಗುಡ್ ಲೇಖನ ಚೆನ್ನಾಗಿದೆ.

    --
    ಪ್ರೀತಿಯಿಂದ ನಿಮ್ಮವ ಬಾಲು.

    ReplyDelete
  4. @ಕೃಷ್ಣಮೂರ್ತಿಯವರೇ,

    ಮಕ್ಕಳನ್ನು ಮಕ್ಕ೦ತೆಯೆ ಬೆಳೆಸಬೆಕೆ೦ಬ ಉತ್ತಮ ಅ೦ಶವನ್ನು ನೀಡಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಬ್ಲಾಗ್ ಗೆ ಹೋಗಿದ್ದೆ. ಮಧುಮೇಹದ ಬಗ್ಗೆ ತು೦ಬಾ ಉಪಯುಕ್ತ ಲೇಖನವನ್ನು ಬರೆಯುತ್ತಿದ್ದೀರಿ ಸರ್.

    ReplyDelete
  5. @ಲತಾ ರವರೇ,

    ಹಿರಿಯರ ಜವಾಬ್ದಾರಿಯ ಬಗ್ಗೆ ಮನಗ೦ಡು ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ನನ್ನ 'ಹನಿ'ಯನ್ನು ಮೆಚ್ಚಿ ಬರೆದಿಟ್ಟುಕೊ೦ಡಿದ್ದು ಬಹಳ ಸ೦ತಸವಾಯಿತು.

    ReplyDelete
  6. @ ಬಾಲುರವರೇ,

    ಹಿರಿಯರು ತಮ್ಮ ಹಿರಿತನವನ್ನು ಉಳಿಸಿಕೊ೦ಡರೆ ಕಿರಿಯರಿಗೆ ಮಾರ್ಗದರ್ಶಕರಾಗಬಹುದು ಅಲ್ಲವೇ? ನೀವು ತಿಳಿಸಿದ೦ತೆ ಎಲ್ಲಾ ಆಚರಣೆಗಳೂ ತಮ್ಮ ಅರ್ಥವನ್ನು ಕಳೆದುಕೊ೦ಡು ಯಾ೦ತ್ರಿಕವಾಗುತ್ತಿವೆ.

    ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು.

    ReplyDelete
  7. ತುಂಬಾ ಉತ್ತಮ ವಿಚಾರವೊಂದನ್ನ ಮನಕ್ಕೆ ತಟ್ಟುವ ಹಾಗೆ ಮಂಡಿಸಿದ್ದಿರಾ...ಬಿಲ್ಲು ಬಾಣಗಳ ಹೋಲಿಕೆ ಸೂಕ್ತವೆನಿಸಿತು.

    ReplyDelete
  8. ಮಕ್ಕಳನ್ನು ಹೇಗೆ ಬೆಳೆಸಬೇಕೆಂಬುದನ್ನು ಅತ್ತ್ಯುತ್ತಮವಾಗಿ ತಿಳಿಸಿದ್ದೀರಿ ಮೇಡಮ್.. ತುಂಬಾ ಧನ್ಯವಾದಗಳು.. ಖಲೀಲ್ ಗಿಬ್ರಾನ್‍ರ ಮಾತು ತುಂಬ ಸತ್ಯದ ಮಾತು ಆದರೆ ಅದನ್ನು ಅರಿತು ಅದರಂತೆ ನಡೆದವದರು ನಮ್ಮ ಸಮಾಜದಲ್ಲಿ ತುಂಬಾ ಕಮ್ಮಿ.. ನಿಮ್ಮ ಲೇಖನ ಓದಿಯಾದರು ಜನರು ತಿಳಿದುಕೊಳ್ಳಲಿ ಎಂದು ಆಶಿಸುವೆ. ವಿ.ಆರ್. ಭಟ್ ಎಂಬುವವರು ಸಹ ಮಕ್ಕಳ ಬೆಳೆಸುವ ಬಗ್ಗೆ ಕೆಲವು ಅಂಶಗಳನ್ನು ತಿಳಿಸಿದ್ದಾರೆ ಈ ತಮ್ಮ ಲೇಖನದಲ್ಲಿ..
    http://nimmodanevrbhat.blogspot.com/2010/11/blog-post_14.html
    ಬಹಳ ಮನಸೆಳೆವ ಲೇಖನಗಳು. ಧನ್ಯವಾದಗಳು.

    ReplyDelete
  9. ಚಿಂತನಾಯೋಗ್ಯ ಲೇಖನ..
    ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಿ..
    ಧನ್ಯವಾದಗಳು

    ReplyDelete
  10. @ ಸೀತಾರಾಂ ರವರೆ,
    ಖಲೀಲ್ ಗಿಬ್ರಾನ್ ರವರ ಆ ಹೋಲಿಕೆ ಬಹಳ ಅರ್ಥಪೂರ್ಣವಾಗಿದೆ. ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  11. @ ಪ್ರದೀಪ್ ರಾವ್ ರವರೆ,
    @ ಸಾನ್ವಿಯ ತ೦ದೆಯವರೇ,
    ಲೇಖನವನ್ನು ಮೆಚ್ಚಿ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು.

    ReplyDelete
  12. prabhamaniyavare..

    sundara sakaalika lekhanavannu barediddeeri.
    makkalannu '' money machine'' maadalu uthsukaraadashtu naavu avaralli manushyatvavannu belesuttilla ennuvudannu kashtavaadaroo oppikollale beku.

    sundara hanigavana koodaa.

    vandanegalu.

    ReplyDelete
  13. ಗೆಳತಿ ಪ್ರಭಾಮಣಿ ಯವರೇ ಹಿರಿಯರ ಜವಾಬ್ದಾರಿ ಯನ್ನು ನೆನಪಿಸುವ ಲೇಖನ ಉತ್ತಮವಾಗಿದೆ.ಮಕ್ಕಳನ್ನು ಅವರಿಚ್ಛೆಯಂತೆಬಿಟ್ಟು,ಸಂದರ್ಭ ಕ್ಕೆ ಅನುಸಾರವಾಗಿ, ಸೂಕ್ಷ್ಮವಾಗಿ, ಸೂಕ್ತ ಮಾರ್ಗರ್ದರ್ಶನ ನೀಡಿದಾಗ, ಮಕ್ಕಳ ಭವಿತವ್ಯ ದಲ್ಲಿ ಸಿಗುವ ಆನಂದವನ್ನು ಅನುಭವಿಸಿಯೇ ಅರಿಯಬೇಕು .ಧನ್ಯವಾದಗಳು

    ReplyDelete
  14. @ ವಿಜಯಶ್ರೀ ಯವರೆ,
    ನನ್ನ ಬ್ಲಾಗ್ ಗೆ ಸ್ವಾಗತ. ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು
    @ ಗೆಳತಿ ಕಲಾವತಿಯವರೇ,
    ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete