Thursday, May 5, 2011

ಪಲ್ಲಟ

ಸಂಜೆ ಕಾಲೇಜಿನಿಂದ ಹೊರಟವಳನ್ನು ಅಚಾನಕ್ಕಾಗಿ ಅವಳ ಕಾಲುಗಳು ನದಿಯ ಕಡೆಗೇ ಎಳೆದವು. ಏಕೋ ಮನೆಗೆ ಹೋಗಬೇಕೆನಿಸುತ್ತಲೇ ಇಲ್ಲವಲ್ಲ..... ಮನೆ? ಯಾರ ಮನೆ ಅದು? ನನ್ನದ? ನನ್ನದು ಅಂದರೆ ಏನು? ಯೋಚನೆಗಳು ಅಸಂಬದ್ಧವಾಗುತ್ತಿವೆಯೇ? ಯಾರ ಸಹವಾಸವೂ ಬೇಡ, ಹೀಗೇ ಒಬ್ಬಳೇ ಮೌನವಾಗಿ ಜುಳುಜುಳು ಹರಿದು ಸಾಗುವ ನೀರನ್ನೇ ನೋಡುತ್ತಾ ಕೂರಬೇಕೆನಿಸುತ್ತಿದೆ. ಮಾತುಗಳು ಏಕೆ ಬೇಕು? ಆಡಿದ ನಂತರ ಅರ್ಥವನ್ನೇ ಕಳೆದುಕೊಳ್ಳುವ ಪದಪುಂಜಗಳು.....

ಆ ಹರವಾದ ಬಂಡೆಯ ಮೇಲೆ ಕುಳಿತು ಕಾಲುಗಳನ್ನು ನೀರಿನಲ್ಲಿ ಮುಳುಗಿಸಿ, ದೃಷ್ಟಿಯನ್ನು ಎತ್ತಲೋ ನೆಟ್ಟು.....ಪಾದಗಳನ್ನು ಹರಿವ ನೀರಿನ ತಣ್ಪು ತಂಪಾಗಿಸುತ್ತಿದ್ದರೂ ತಲೆಯ ಬಿಸಿ ಇಳಿದಿರಲಿಲ್ಲ. ಮೊದಲಾಗಿದ್ದರೆ ಆ ಕಾಲುಗಳು ಸುಮ್ಮನಿರುತ್ತಿದ್ದವೇ? ನೀರೊಳಗೆ ಇಳಿಬಿಟ್ಟರೆ ಸಾಕು, ದಬದಬ ಬಡಿಯುತ್ತಾ, ನೀರಹನಿ ಮೇಲೆ ಹಾರಿ ಮುಖದಮೇಲೆ ಬಿದ್ದಾಗ ಕಿಲಕಿಲನೆ ನಗುತ್ತಾ.... ಕೈಗಳಿಂದಲೂ ನೀರನ್ನು ಎರಚುತ್ತಾ.....ಆ ದಿನಗಳನ್ನು ನೆನೆದೇ ಅವಳ ತುಟಿಯ ಮೇಲೆ ಕಿರುನಗೆ ಮೂಡಿತು!

‘ಏ...ಏ...ಸುಮ್ಮನಿರು ಸುಮಾ, ಡ್ರೆಸ್ ಒದ್ದೆಯಾಗುತ್ತೆ. ಸಂಜೆಹೊತ್ತು ಒಣಗಲ್ಲ. ಮನೆಗೆ ಹೋಗೋವಾಗ ನೋಡಿದವರು ಏನಂತಾರೆ.....' ಅವನ ದನಿ ಇನ್ನೂ ಕಿವಿಯಲ್ಲಿ ಗುಯ್ ಗುಡುತ್ತಲೇ ಇದೆ. ಆಗ ಸ್ವಲ್ಪ ಬಟ್ಟೆ ಒದ್ದೆಯಾದರೆ ಜನ ಏನಂತಾರೆ ಎನ್ನುವಂತಿದ್ದ ಸಾಮಾಜಿಕ ಪ್ರಜ್ಞೆ ಈಗೆಲ್ಲಿ ಹೋಯ್ತು? ಇಷ್ಟು ವರ್ಷಗಳ ತಮ್ಮ ದಾಂಪತ್ಯ ಜೀವನವನ್ನು ಬಿಗಿಯಾಗಿ ಬಂಧಿಸಿದ್ದ ಆ ನಂಬಿಕೆ ಎಂಬ ಕೊಂಡಿ ಎಲ್ಲಿ ಕಳಚಿತು?

ನಿನ್ನೆಯೂ ಅಷ್ಟೆ, ಬಂದು ಈ ಬಂಡೆಯ ಮೇಲೆ ಕುಳಿತವಳು ಇಡೀ ರಾತ್ರಿ ಅಲ್ಲೇ ಕಳೆದಿದ್ದಳು. ತಾನು ಓದಿದ ಒಂದು ಕಾದಂಬರಿಯಲ್ಲಿ ಅದರ ನಾಯಕಿ ಬೇಸರವಾದಾಗಲೆಲ್ಲಾ ರಾತ್ರಿ ಯಾವ ವೇಳೆಯಾದರೂ ಸರಿ, ಒಬ್ಬಳೇ ಕಾರಿನಲ್ಲಿ ಬೆಟ್ಟದ ಮೇಲೆ ಹೋಗಿ ಕುಳಿತು, ಕೈಯಲ್ಲಿ ಲೋಡ್ ಮಾಡಿದ ಪಿಸ್ತೂಲು ಹಿಡಿದು.....ಅವಳಿಗೇನು ಭಯ ಎನ್ನುವುದೇ ಇರಲಿಲ್ಲವೇ? ದೆವ್ವ-ಭೂತಗಳ ಭಯ ಬೇಡ, ಕಳ್ಳ-ಕಾಕರ ಭಯವೂ ಇರಲಿಲ್ಲವೇ? ಎನಿಸಿತ್ತು. ಆದರೆ ಈಗ? ತನ್ನ ಯೋಚನಾ ಲಹರಿಯಲ್ಲಿ ಹೊತ್ತು ತನಗೆ ತಾನೇ ಸರಿದು ಕತ್ತಲು ಕರಗಿ ಬೆಳಕು ಮೂಡಿದ್ದೇ ತಿಳಿದಿರಲಿಲ್ಲ. ಹೀಗೇ ತನ್ನ ಬಾಳಿನಲ್ಲೂ.....

ಹೊತ್ತೇರಿದಂತೆ ಕರ್ತವ್ಯಪ್ರಜ್ಞೆ ಕೂಗಿ ಕರೆದಂತಾಗಿ ಕಾಲೇಜಿನತ್ತಲೇ ಹೆಜ್ಜೆಗಳು ಸಾಗಿದ್ದವು. ನಿನ್ನಯದೇ ಉಡುಗೆ, ಕೆದರಿದ ಕೇಶ, ಮ್ಲಾನವದನ....ಎಲ್ಲರೂ ತನ್ನತ್ತಲೇ ನೋಡುತ್ತಿರುವರೇ? ತಾನು ಮಾತ್ರ ತಲೆ ತಗ್ಗಿಸಿಕೊಂಡೇ....(ತಲೆ ತಗ್ಗಿಸಿದ್ದೇಕೆ? ತಾನೇನೂ ತಪ್ಪು ಮಾಡಿಲ್ಲವಲ್ಲ. ಬಾಹ್ಯರೂಪ ವೈಪರೀತ್ಯವೂ....ಅಲ್ಲ, ಅಲಂಕಾರರಾಹಿತ್ಯವೂ ತಲೆ ತಗ್ಗಿಸುವಂತೆ ಮಾಡುತ್ತದೆಯೇ?) ಕ್ಲಾಸ್‌ರೂಂನೊಳಗೆ ಹೋಗಿ ಪಾಠ ಮಾಡಿ ಬಂದಿದ್ದಳು. ವಿದ್ಯಾರ್ಥಿಗಳೊಡನಿದ್ದ ಆ ಕೆಲವು ವೇಳೆ ಎಂದಿನಂತೆ ತನ್ನನ್ನೇ ತಾನು ಮರೆತು ಲೀನವಾಗಲು ಪ್ರಯತ್ನಿಸಿದ್ದರೂ.....ಏನೋ ಅವರ ನಡುವೆಯೇ ಗುಸು-ಗುಸು, ಪಿಸು-ಪಿಸು....ಪ್ರತಿದಿನದಂತೆ ತನ್ನ ಪಾಠವನ್ನು ಅವರು ಮನಸ್ಸಿಟ್ಟು ಕೇಳುತ್ತಿಲ್ಲ ಎನ್ನುವುದು ಬಹಳ ಬೇಗನೆ ಅರಿವಿಗೆ ಬಂದಿತ್ತು.

ಸ್ಟಾಫ್‌ರೂಂನತ್ತ ಬಂದಾಗ ಒಳಗಿನಿಂದ ಎದ್ದ ನಗೆಯ ಅಲೆಗಳು ಕಿವಿಗಪ್ಪಳಿಸಿ ಏನೋ ಸಂಶಯವಾದಂತೆನಿಸಿ ಹೊರಗೇ ನಿಂತುಬಿಟ್ಟಳು. ತಕ್ಷಣ ಜಾಗರೂಕಳಾಗಿ ಪ್ರಿನ್ಸಿಪಾಲರೂ ಒಳಗೆ ಇದ್ದಾರೆ ಎನ್ನುವುದನ್ನು ಗಮನಿಸಿ, ತನ್ನ ಬಗ್ಗೆಯೇ ಮಾತನಾಡುತ್ತಿದ್ದಾರೆ ಎನ್ನುವುದು ಸ್ಪಷ್ಟವಾದಾಗ ಅಲ್ಲೇ ಕಂಬಕ್ಕೊರಗಿದಳು. ಅವಳ ಸ್ವಭಾವಕ್ಕೆ ವ್ಯತಿರಿಕ್ತ ರೀತಿಯಲ್ಲಿ ಒಳಗಿನ ಸಂಭಾಷಣೆಯನ್ನು ಕೇಳಿಸಿಕೊಳ್ಳಲು ಕಿವಿಗಳು ಕಾತರಿಸಿದವು.

‘ರಾತ್ರಿ ಪೂರ್ತ ನದಿ ಮಧ್ಯದ ಬಂಡೆಯ ಮೇಲೇ ಕುಳಿತಿದ್ದಳಂತೆ ಸರ್.' ಮೊದಲಿನಿಂದಲೂ ತನ್ನನ್ನು ರೈವಲ್ ಎಂದೇ ಪರಿಗಣಿಸಿದ್ದ ಸಹೋದ್ಯೋಗಿ ರೇವತಿಯ ದನಿ.

‘ಇವತ್ತು ಅಟೆಂಡೆನ್ಸ್‌ಗೆ ಸೈನ್ ಮಾಡಕ್ಕೆ ಬಂದಾಗಲೇ ಏನೋ ವಿಚಿತ್ರವಾಗಿ ಕಾಣ್ತಿದಾರೆ ಅಂದುಕೊಂಡೆ. ಪ್ರತಿದಿನದಂತೆ ವಿಷ್ ಕೂಡ ಮಾಡಲಿಲ್ಲ.' ಸ್ವಗತವೆನ್ನುವಂತೆ ಪ್ರಿನ್ಸಿಪಾಲರ ಮಾತು.

‘ಇಷ್ಟು ಸಣ್ಣ ವಿಷಯಕ್ಕೆಲ್ಲಾ ಹೀಗೆ ತಲೆ ಕೆಡಿಸಿಕೊಳ್ಳೋದಾ ಸರ್, ಹೇಮಂತ್ ಏನ್ ಕಡಿಮೆ ಮಾಡಿದಾರೆ ಅಂತ ಹೀಗಾಡ್ತಾರೋ,.....' ಪ್ರಿನ್ಸಿಪಾಲರ ಜೊತೆ ಮಾತನಾಡುತ್ತಿದ್ದೇನೆಂಬ ವಿವೇಚನೆಯೂ ಇಲ್ಲದೇ ಪಕ್ಕದ ಮನೆಯವರ ಜೊತೆ ಹರಟುವಂತೆ ಹೇಮಂತ್ ತನಗೆ ಏನೆಲ್ಲಾ ಸೌಲಭ್ಯಗಳನ್ನು ಒದಗಿಸಿದ್ದಾನೆ ಎನ್ನುವ ಲಿಸ್ಟನ್ನೇ ಕೊಡುತ್ತಿದ್ದಾಳೆ. ಪರವಾಗಿಲ್ಲ ತನ್ನ ಬಗ್ಗೆ ಬಹಳ ಚನ್ನಾಗೇ ಅಂಕಿ-ಅಂಶಗಳೊಡನೆ ಮಾಹಿತಿ ಸಂಗ್ರಹಿಸಿದ್ದಾಳೆ ಎನಿಸುವುದರೊಡನೆಯೇ ಸದಾ ತನ್ನೊಡನೆ ಸ್ಪರ್ಧೆಗಿಳಿದಂತೆ ವರ್ತಿಸುವ ಅವಳ ವರ್ತನೆಯ ಕುರಿತು ಜುಗುಪ್ಸೆಯುಂಟಾದಂತಾಗಿ...

‘ಸೆಣೆಸುವೆ ಏಕೆ ನಿರಂತರ
ನನ್ನ ಮೇಲಿನ ಜಯಕ್ಕಾಗಿ,
ಜಯ-ಅಪಜಯ ಅಪ್ರಸ್ತುತ
ನಾನೀಗ ತಟಸ್ಥ' ಎನ್ನುವ ಸಾಲುಗಳು ಅಪ್ರಯತ್ನವಾಗಿ ಮನಸ್ಸಿನಲ್ಲಿ ಮೂಡಿದವು!

‘ಸಾಕು ನಿಲ್ಲಿಸಿ ರೇವತಿ, ಸುಮಾನೂ ಆರ್ಥಿಕ ಸ್ವಾವಲಂಭಿ ಅನ್ನೋದನ್ನ ಮರೀಬೇಡಿ.' ಕನ್ನಡ ಉಪನ್ಯಾಸಕಿ ಶಾರದಾ ಮಿಸ್ ವಿರೋಧ.

‘ಮೊದಲು ವಿಷಯ ಏನು ಅನ್ನೋದನ್ನ ಸರಿಯಾಗಿ ತಿಳಿಸಿ.' ಯಾರ ಸಹವಾಸಕ್ಕೂ ಬರದ ಸಂಸ್ಕ?ತ ಲೆಕ್ಚರರ್ ಅಯ್ಯಂಗಾರರ ಕುತೂಹಲ!

‘ಸುಮಾಮಿಸ್ ಹಸ್ಬೆಂಡ್ ಹೇಮಂತ್ ಬೇರೆ ಯಾರೋ ಹುಡುಗಿ ಜೊತೆಯಲ್ಲಿ ಓಡಾಡ್ತಿದಾರೆ ಅಂತ ಸುದ್ಧಿ. ಅದಕ್ಕೆ ಇವರ ವಿರೋಧ......'ಎಂದು ತಾನು ನದಿಯ ಬಂಡೆಯ ಮೇಲೆ ಕುಳಿತಿದ್ದನ್ನು ಸ್ವತಃ ಕಂಡಂತೆ ವಿವರಿಸುತ್ತಿರುವ ರೇವತಿ.

'ಸಾರ್, ವಿಷಯ ತಿಳಿದ ಹೇಮಂತ್ ಅವಳೊಬ್ಬಳು ಹುಚ್ಚಿ, ಹಾಳಾಗಿ ಹೋಗ್ಲಿ ಅಂದ್ರಂತೆ.'

‘ಹುಚ್ಚಿ' ಎನ್ನುವ ಪದ ಕಿವಿಗೆ ಬಿದ್ದದ್ದೇ ಎಲ್ಲರೂ ಹುಚ್ಚೆದ್ದು ನಗುತ್ತಿರುವಂತೆ ಭಾಸವಾಗುತ್ತಿದೆ. ಇದು ತನ್ನ ಕಲ್ಪನೆಯೆ? ? ? ಇಲ್ಲ... ನಿಜಕ್ಕೂ ನಗುತ್ತಿದ್ದಾರೆ!

‘ಸಾಕುಮಾಡಿ ರೇವತಿ, ನೀವೂ ಒಬ್ಬ ದುಡಿಯುವ ಮಹಿಳೆಯಾಗಿ, ವಿದ್ಯಾವಂತೆಯಾಗಿ ಹೀಗಾ ಮಾತಾಡೋದು? ನಿಮಗೇ ಇಂಥಾ ಪರಿಸ್ಥಿತಿ ಬಂದಿದ್ರೆ ಏನ್ ಮಾಡ್ತಿದ್ರಿ?' ಪ್ರಿನ್ಸಿಪಾಲ್ ಎದುರಿಗಿದ್ದಾರೆನ್ನುವುದನ್ನೂ ಪರಿಗಣಿಸದೆ ಜೋರು ದನಿಯಲ್ಲೇ ಗದರಿಬಿಟ್ಟರು ಶಾರದಾಮಿಸ್! ಅವರಿಗೆ ಬಂದಂತಹ ಆವೇಶ ತನಗೇಕೋ ಬರುತ್ತಲೇ ಇಲ್ಲ! ಬದಲಿಗೆ ಈ ಸಂದರ್ಭದಲ್ಲೂ ಅವರು ಅಚ್ಚ ಕನ್ನಡದಲ್ಲೇ ಮಾತನಾಡುವ ಪರಿಗೆ ಅಚ್ಚರಿ ಮೂಡುತ್ತಿದೆ! ಹಾಗಾದರೆ ತನ್ನನ್ನು ಹಿಂಸಿಸುತ್ತಿರುವ ಈ ಭಾವ ಯಾವುದು?

‘ಓ. ಕೆ., ವಿಷಯ ಹೀಗೆ ಟರ್ನ್ ತಗೊಳ್ಳುತ್ತೆ ಅಂತ ನನಗೆ ತಿಳೀಲಿಲ್ಲ. ಐ ಫೀಲ್ ಪಿಟಿ ಫಾರ್ ಹರ್,' ಎಂದು ಪ್ರಿನ್ಸಿಪಾಲ್ ಮೇಲೆದ್ದರು. ಅವರು ಹೊರಟಿದ್ದನ್ನು ಗಮನಿಸಿದ ಸುಮಾ ಅವರಿಗೆ ಕಾಣಿಸದಂತೆ ಕಂಬದ ಹಿಂದೆ ಮರೆಯಾದಳು. ಪಿಟಿ.....ಕರುಣೆ..... ತಾನು ಯಾರಿಂದಲೂ, ಎಂದೂ ಅಪೇಕ್ಷಿಸದ ಭಾವನೆ. ಇನ್ನು ಬೆಲ್ ಆಗುವ ಸಮಯ.ಎಲ್ಲರೂ ಒಬ್ಬೊಬ್ಬರಾಗಿ ಹೊರಡುತ್ತಾರೆ ಎನಿಸಿ ತಾನೇ ಮೊದಲು ಹೊರಟು ಬೇಗಬೇಗ ಹೆಜ್ಜೆ ಹಾಕಿದಳು.

ಹಿಂದಿನ ದಿನ ತಾನೇಕೆ ಹೀಗೆ ಬಂದು ಇಲ್ಲಿ ಕುಳಿತೆ ಎನ್ನುವುದು ಪೂರ್ಣವಾಗಿ ಸ್ಪಷ್ಟವಾಗಿರಲಿಲ್ಲ. ಈಗ..... ಕುಳಿತಾಕ್ಷಣವೇ ಮನಃಪಟಲದ ಮೇಲೆ ಮೂಡುತ್ತಿರುವ.....ಮೊದಲಿನಿಂದಲೂ ತನ್ನ ಬಗ್ಗೆ ಈರ್ಷೆಯನ್ನೇ ಹೊಂದಿದ್ದ ರೇವತಿ ಏನೋ ದಿಗ್ವಿಜಯ ಸಾಧಿಸಿದಂತೆ ತನ್ನ ಬಗ್ಗೆ ಸಂಗ್ರಹಿಸಿದ ವಿಷಯಗಳ ಮಂಡನೆ, ಶಾರದಾಮಿಸ್ ತನ್ನನ್ನು ವಹಿಸಿಕೊಂಡು, ತನ್ನ ಪರವಾಗಿ ಆಡಿದ ಮಾತುಗಳು, ತನಗೆ ಸ್ಪಷ್ಟವಾಗಿ ಕಾಣದಿದ್ದರೂ ಕಲ್ಪಿಸಿಕೊಳ್ಳಬಹುದಾದ ಪ್ರಿನ್ಸಿಪಾಲ್ ಹಾಗೂ ಇತರರ ಮೊಗದ ಮೇಲಿನ ಭಾವನೆಗಳು......

ಈ ಖಾಸಗಿ ಸಂಸ್ಥೆಗಳಲ್ಲಿ ನವಯುವತಿಯರಾಗಿ ಕೆಲಸಕ್ಕೆ ಸೇರಿದವರು ಮಧ್ಯವಯಸ್ಕರಾದರೂ ಅದೇ ಸಹೋದ್ಯೋಗಿಗಳ ಮುಖಗಳನ್ನು ನೋಡುತ್ತಾ, ಅಸಮಾಧಾನವನ್ನು ವ್ಯಕ್ತಪಡಿಸುತ್ತಾ ಸುಕ್ಕುಗಳಿಗೆ ಆಹ್ವಾನಕೊಡುವುದು ಬೇಸರವೆನಿಸಿದರೂ. ಆರ್ಥಿಕವಾಗಿ ತನ್ನ ದುಡಿಮೆ ಅನಿವಾರ್ಯವಲ್ಲದಿದ್ದರೂ ತನ್ನ ವ್ಯಕ್ತಿತ್ವ ಉಳಿಸಿಕೊಳ್ಳಲು ಎನ್ನುವುದಕ್ಕಿಂತಲೂ ತನಗೆ ದೊರೆಯುತ್ತಿದ್ದ ಮಾನಸಿಕ ತೃಪ್ತಿಗಾಗಿ, ಖುಷಿಗಾಗಿ ಕೆಲಸಕ್ಕೆ ಬರಲು ಕಾತರಿಸುತ್ತಿದ್ದಳು. ಆಗೆಲ್ಲಾ ತನ್ನಂದಿಗೇ ಸ್ಪಂಧಿಸುತ್ತಿದ್ದ, ಒತ್ತಾಸೆಯಾಗಿದ್ದ ಹೇಮಂತ್ ಈಗ, ಇಷ್ಟು ವರ್ಷಗಳ ನಂತರ.....

ದೂರದ ಊರಿನಲ್ಲಿ ಮೆಡಿಕಲ್ ಓದುತ್ತಿರುವ ಮಗ, ಅವನ ಭವಿಷ್ಯ..... ಜವಾಬ್ಧಾರಿಯಿಂದಿರಬೇಕಾದ ವಯಸ್ಸಿನಲ್ಲಿ ಹೀಗೇಕಾದ? ‘ನಿಮ್ಮ ಹೇಮಂತ್.....'ಎಂಬ ಮಾತು ಕಿವಿಯ ಮೇಲೆ ಬಿದ್ದರೂ ಮುಗುಳ್ನಕ್ಕು ಅಲ್ಲಿಗೇ ತಡೆಯುತ್ತಿದ್ದ ತಾನು ನಂಬಿಯೇ ಇರಲಿಲ್ಲವಲ್ಲಾ..... ಕೆಲವು ದಿನಗಳಿಂದ ಅವನ ವರ್ತನೆಯಲ್ಲಿ ಏನೋ ಮಾರ್ಪಾಡು, ತನ್ನ ಬಗ್ಗೆ ನಿರಾಸಕ್ತಿಯ ಸುಳಿವು ಕಂಡರೂ ತಾನು ಅದನ್ನು ಅಷ್ಟಾಗಿ ಪರಿಗಣಿಸಿರಲೇ ಇಲ್ಲವೆನಿಸುತ್ತಿದೆ.

ದಾಂಪತ್ಯದಲ್ಲಿ ಬೌದ್ಧಿಕ ಸಾಹಚರ್ಯ ಬಹಳ ಪ್ರಮುಖವಾದದ್ದು ಎನ್ನುವ ತನ್ನ ಅಭಿಪ್ರಾಯಕ್ಕೆ ಮನ್ನಣೆಯಿತ್ತಿದ್ದವನು, ಪ್ರಾರಂಭದಲ್ಲಿ ತನ್ನದು ಪರ್‍ಮನೆಂಟ್ ಕೆಲಸವಾಗಿದ್ದು ಅವನದ್ದು ಕಾಂಟ್ರಾಕ್ಟ್ ಎನ್ನುವ ಕಾರಣಕ್ಕೆ ಅವನಿಗೆ ಕೀಳರಿಮೆ ಬರುವುದು ಬೇಡವೆಂದು ಪ್ರಾಮುಖ್ಯತೆ ಕೊಟ್ಟಿದ್ದು ಹೆಚ್ಚಾಗಿರಲೂ ಬಹುದು. ಕೆಲಸ ಪರ್‍ಮನೆಂಟ್ ಆದ ನಂತರ ವರುಷಗಳು ಕಳೆದಂತೆ ಅಹಮಿಕೆ ಬೆಳೆಯಲಾರಂಭಿಸಿತು. ತಾನು ಪಿಹೆಚ್.ಡಿ. ಮಾಡುವಾಗ ಮನೆಯ, ಮಗುವಿನ ಜವಾಬ್ಧಾರಿಯನ್ನು ವಹಿಸಿಕೊಂಡಿದ್ದವನು ನಂತರ ತನ್ನಿಂದಲೇ ಇವಳಿಗೆ ಪಿಹೆಚ್.ಡಿ. ಮಾಡಲು ಸಾಧ್ಯವಾಯಿತು ಎನ್ನುವಂತೆ ಸ್ನೇಹಿತರು, ಬಂಧುಗಳ ನಡುವೆ ಬಿಂಭಿಸಲಾರಂಭಿಸಿದ. ಡಾಕ್ಟರೇಟ್ ಆದ ನಂತರ ಮೊದಲಿಗಿಂತಲೂ ಹೆಚ್ಚಾಗಿ ಕಾರ್ಯಕ್ರಮಗಳಿಗೆ ಭಾಷಣಕಾರಳನ್ನಾಗಿ ಆಹ್ವಾನಿಸಲಾರಂಭಿಸಿದರು. ವೃತ್ತಿಕ್ಷೇತ್ರದಲ್ಲಿ ಹಾಗೂ ಪ್ರವೃತ್ತಿಯಲ್ಲಿ ತನ್ನ ಜವಾಬ್ಧಾರಿ ಹೆಚ್ಚಾದಂತೆ ಎಷ್ಟೋ ವೇಳೆ ಅವನನ್ನು ಗಮನಿಸಲು ತನಗೆ ಸಾಧ್ಯವಾಗುತ್ತಿಲ್ಲವೆನಿಸಿ ಕನಿಕರವುಂಟಾಗುತ್ತಿತ್ತೇ ವಿನಾ...... ತಮ್ಮಿಬ್ಬರ ನಡುವಿನ ಅಂತರ ಹೆಚ್ಚಾಗುತ್ತಾ ಹೋಯಿತೆ?

ನಿನ್ನೆ ಕಾಲೇಜಿನಿಂದ ಮನೆಗೆ ಬಂದಾಗ ಒಳಗಿನಿಂದ ಕೇಳಿದ ಅವರ ನಗು! ಓಹ್ ಅವಳನ್ನು ಮನೆಗೇ ಕರೆತಂದಿದ್ದಾನೆಯೇ? ಸೀದಾ ಒಳಗೆ ಹೋಗಿ ಯಾರವಳು? ಏಕೆ ಕರೆದುಕೊಂಡು ಬಂದಿದ್ದಾನೆ?....ವಿವರಗಳನ್ನು ಪರಿಶೀಲಿಸಿ......ಉಹುಂ, ಮನಸ್ಸು ಅಷ್ಟಕ್ಕೆಲ್ಲಾ ಅವಕಾಶ ನೀಡದೇ ನೇರ ಇಲ್ಲಿಗೇ ಎಳೆದು ತಂದದ್ದೇಕೆ?

ಬಂಡೆಯನ್ನು ಬಳಸಿ ಮುಂದೆ ಹರಿಯುವ ನೀರು ಸಮತಟ್ಟಾಗಿ ಚಾಪೆ ಹಾಸಿದಂತೆ ಕಾಣುತ್ತಿದೆ. ಅದನ್ನು ನೋಡುತ್ತಲೇ ಇದ್ದಂತೆಯೇ......

‘ಹೇಮು ಅಲ್ಲಿ ನೋಡು, ನೀರು ಹೇಗೆ ಸಮತಟ್ಟಾದ ಮೇಲ್ಮೈ ಹೊಂದಿದೆ! ಒಳ್ಳೆ ಚಾಪೆ ಹಾಸಿದಂತೆ ಕಾಣ್ತಾ ಇದೆ! ಸೂರ್ಯ ರಶ್ಮಿಗೆ ಫಳಫಳಾಂತ ಹೊಳೀತಿದೆ!'

'ಮೊದಲೇ ಹೇಮಾವತಿ ನದಿ ಅಲ್ವ? ಚಿನ್ನದಂತೆ ಹೊಳೀತಿರೋದರಿಂದಲೇ ಈ ಹೆಸರು ಬಂದಿರೋದು. ಮೊದಲು ಇದನ್ನ ಸಗಣೀ ಹೊಳೆ ಅಂತಾ ಅಂತಿದ್ರಂತೆ.....' ಎಂದು ನದಿಯ ಇತಿಹಾಸದತ್ತ ಹೊರಳುತ್ತಿದ್ದ ಇತಿಹಾಸದ ಉಪನ್ಯಾಸಕ!

ಆ ಸಮತಟ್ಟಾಗಿರೋ, ಚಾಪೆ ಹಾಸಿದಂತಿರೋ ನೀರಿನ ಮೇಲೆ ನೀಳವಾಗಿ ಕಾಲು ಚಾಚಿ ಮಲಗಿ ತೇಲುತ್ತಾ ಹೋಗಬೇಕು ಎನ್ನುವ ತನ್ನ ಆಸೆಯನ್ನು ಹೇಳಿದಾಗಲೆಲ್ಲಾ ತನ್ನ ಅನಿಸಿಕೆಯನ್ನು ತೀವ್ರವಾಗಿ ವಿರೋಧಿಸುತ್ತಾ ಭಾವುಕನಾಗಿಬಿಡುತ್ತಿದ್ದ! ಈಗ ತನ್ನನ್ನು ಮಾತಿನಲ್ಲಿ, ಕ್ರಿಯೆಯಲ್ಲಿ ತಡೆಯುವವರು ಯಾರೂ ಇಲ್ಲ. ಇಲ್ಲಿಂದಲೇ ಹೇಡಿಯಂತೆ ‘ಗುಳುಂ' ಎಂದು ಮುಳುಗದೇ ಆ ಸೇತುವೆಯ ಮೇಲೆ ನಡೆದು ಬಂದು ಒಂದೇ ಸಾರಿ ಹಾರಿದರೆ....ತೇಲುತ್ತಾ.....ತೇಲುತ್ತಾ.......ಅಂದರೆ ಆತ್ಮಹತ್ಯೆಯ ಆಲೋಚನೆಯೇ? ಇವತ್ತು ಅವನು ‘ಹುಚ್ಚಿ' ಅಂದ ನಾಳೆ......

‘ಅಮ್ಮಾ.....ಅಮ್ಮಾ......'ವಿರಂಚಿಯ ಕೂಗು ಕತ್ತಲನ್ನು ಸೀಳಿ ಬರುತ್ತಿದೆ! ಏಕೆ ಬಂದ ಇವನು? ಇವನಿಗೆ ತಾನು ಇಲ್ಲಿದ್ದೇನೆ ಎಂದು ಯಾರು ಹೇಳಿದರು? ‘ಈ ಸರೀ ರಾತ್ರೀಲಿ ಇಲ್ಲೇಕೆ ಕುಳಿತಿದೀಯಮ್ಮ?' ಎಂದು ಕೇಳಿದರೆ ಏನೆಂದು ಉತ್ತರಿಸಲಿ? ಬಹುಷಃ ಅವನಿಗೆ ತನ್ನ ತಂದೆ ಈ ವಯಸ್ಸಿನಲ್ಲಿ ಒಬ್ಬ ಹುಡುಗಿಯ ಜೊತೆ ಓಡಾಡುತ್ತಿದ್ದಾರೆ ಎನ್ನುವುದಕ್ಕಿಂತಾ ಇಷ್ಟೆಲ್ಲಾ ಓದಿರುವ, ಸ್ವಂತ ವ್ಯಕ್ತಿತ್ವವನ್ನು ಹೊಂದಿರುವ ತನ್ನ ತಾಯಿ ಇಂಥಾ ಕ್ಷುಲ್ಲಕ ಕಾರಣಕ್ಕಾಗಿ ಮನೆ ಬಿಟ್ಟು ರಾತ್ರಿಯೆಲ್ಲಾ ನದೀ ಮಧ್ಯದ ಬಂಡೆಯ ಮೇಲೆ ಒಬ್ಬಳೇ ಹುಚ್ಚಿಯಂತೆ ಕುಳಿತಿದ್ದಳು ಅಥವಾ ನದಿಗೇ ಹಾರಿದಳು ಎನ್ನುವುದು ಹೆಚ್ಚು ಅವಮಾನಕರವೆನಿಸಬಹುದು. ತಾನೇಕೆ ಹೀಗೆ ಮಾಡಿದೆ? ಈ ನದಿಯ ನೀರು ತನ್ನ ಪಥಕ್ಕೆ ಅಡ್ಡವಾದ ಬಂಡೆಯನ್ನೇ ಬಳಸಿ ಮುಂದೆ ಸಾಗುತ್ತಿಲ್ಲವೆ? ತಾನೂ ಹೀಗೆಯೇ ಸಮಸ್ಯೆಯನ್ನು ಎದುರಿಸಲಾಗದಿದ್ದಾಗ ಉಪೇಕ್ಷಿಸಿ......ಛೀಛೀ, ತನ್ನ ಮನಸ್ಸೇಕೆ ಇಷ್ಟು ದುರ್ಬಲವಾಯ್ತು? ತಾನು ಪಲಾಯನವಾದಿಯಾಗುತ್ತಿದ್ದೇನೆಯೇ? ಈಗ ವಿರಂಚಿಯನ್ನು ಹೇಗೆ ಎದುರಿಸಲಿ? ಎಂದುಕೊಳ್ಳುತ್ತಿರುವಾಗಲೇ.....‘ಬಾರಮ್ಮ' ಎನ್ನುತ್ತಾ ವಿರಂಚಿ ಕೈನೀಡಿ ಎಬ್ಬಿಸಿ ಕೈಹಿಡಿದು ಮೌನವಾಗಿ ಹೆಜ್ಜೆಹಾಕಲಾರಂಭಿಸಿದ......

ಅಂದರೆ ಒಂದು ಆಸರೆ ಕಳಚಿತೆನ್ನುವಾಗ ಮತ್ತೊಂದು ಆಸರೆಗೆ ಕೈಚಾಚುವುದೆ? ಅರ್ಧ ಶತಮಾನ ಸಮೀಪಿಸುತ್ತಿದ್ದರೂ ತನ್ನನ್ನೇ ತಾನು ನಿಭಾಯಿಸಿಕೊಳ್ಳಲಾಗದ ಪರಿಸ್ಥಿತಿಯೇ? ಹೇಡಿ ಮನದ ಕಲ್ಪನೆಗಳಿಗೆ ಪೂರ್ಣವಿರಾಮ ನೀಡಿ ಆಂತರ್ಯದ ಕರೆಗೆ ಓಗೊಟ್ಟು ಮೇಲೆದ್ದು ನಡೆಯಲಾರಂಭಿಸಿದವಳಿಗೆ ಅಂಧಕಾರದಲ್ಲೂ ಮಾರ್ಗ ಸ್ಪಷ್ಟವೆನಿಸಿತು.
************************************************
(ಬ್ಲಾಗ್ ನಲ್ಲಿ ಪ್ರಕಟಿಸುತ್ತಿರುವ ಈ ನನ್ನ ಮೊದಲ ಕಥೆಯು ಮೇ ೦೮,೨೦೧೧ರ 'ಕರ್ಮವೀರ' ಪತ್ರಿಕೆಯಲ್ಲಿ ಪ್ರಕಟವಾಗಿದೆ. ಅದನ್ನೂ ಸ್ಕ್ಯಾನ್ ಮಾಡಿ ಹಾಕಿದ್ದೇನೆ. ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ.)


5 comments:

  1. ಉತ್ತಮ ಕತೆ. ಅಭಿನಂದನೆಗಳು.

    ReplyDelete
  2. prabhamaniyavare katechennaagide.abhinandanegalu.

    ReplyDelete
  3. ಬಹಳ ಚೆನ್ನಾಗಿದೆ.. ಇದು ನಿಮ್ಮ ಮೊದಲ ಕಥೆಯೆ? ಹಾಗೆ ಅನಿಸಲೇ ಇಲ್ಲ.. ನಿರೂಪಣೆ ಉತ್ತಮವಾಗಿದೆ.
    ಕಥೆಯು ದೊಡ್ಡದಾಗಿದ್ದು ಕಂಪ್ಯೂಟರ್ ಪರದೆಯ ಮೇಲೆ ಓದಲು ಬೇಸರವಾಯಿತಾದರೂ ನಿಮ್ಮ ಕಥೆ ಓದುವುದು ತಪ್ಪಿಸಬಾರದು ಎಂದು Print-out ತೆಗೆಸಿ ಓದಿದೆ.. ತುಂಬಾ ಚೆನ್ನಾಗಿದೆ. ಧನ್ಯವಾದಗಳು!

    ReplyDelete
  4. ನನ್ನ ಕಥೆಯನ್ನು ಮೆಚ್ಚಿ ಅಭಿನಂದನೆಗಳನ್ನು ತಿಳಿಸಿದ ಎಲ್ಲ ಆತ್ಮೀಯರಿಗೂ ಅನೇಕ ಧನ್ಯವಾದಗಳು.
    .ಪ್ರದೀಪ್ ರವರೆ ಇದು ನನ್ನ ಮೊದಲ ಕಥೆಯಲ್ಲ. ಈ ಬ್ಲಾಗ್ ನಲ್ಲಿ ಪ್ರಕಟಿಸುತ್ತಿರುವ ನನ್ನ ಮೊದಲ ಕಥೆ ಇದು. ಈಗಾಗಲೇ 'ನಾವೀಗ ಹೊಸಬರಾಗಬೇಕು' ಕಥಾ ಸ೦ಕಲನವನ್ನು 2007ರಲ್ಲಿ ಪ್ರಕಟಿಸಿದ್ದೇನೆ. Print-out ತೆಗೆಸಿ ಓದಿ ಮೆಚ್ಚಿದ್ದಕ್ಕಾಗಿ ವ೦ದನೆಗಳು.

    ReplyDelete