Friday, June 10, 2011

ಮನದ ಅಂಗಳದಿ.........೪೩. ದೂರದಿರಿ

ಸಾಮಾನ್ಯವಾಗಿ ನಾವು ಮಾತನಾಡುವಾಗ ನಮ್ಮ ಜೀವನದಲ್ಲಿ ಎದುರಾಗುವ ಸೋಲುಗಳಿಗೆ, ಕಷ್ಟ-ನಷ್ಟಗಳಿಗೆ ಯಾವುದಾದರೂ ಒಂದು ಕಾರಣವನ್ನು ಹುಡುಕಿಕೊಂಡು (ಅದು ವ್ಯಕ್ತಿಯಾಗಿರಬಹುದು ಅಥವಾ ಸಂದರ್ಭವೇ ಆಗಿರಬಹುದು) ಅದರಿಂದಲೇ ಹೀಗಾಯಿತು ಎಂದು ಪರಿತಪಿಸುತ್ತೇವೆ. ಅದನ್ನು ನಮ್ಮ ಆಪ್ತರಿಗಷ್ಟೇ ಅಲ್ಲ ಸಂಬಂಧಿಸಿದವರು, ಸಂಬಂಧಿಸದವರು ಎಲ್ಲರ ಮುಂದೂ ಹೇಳುತ್ತಾ ಒಂದು ರೀತಿಯ ಕರುಣಾಜನಕ ವಾತಾವರಣವನ್ನು ನಿರ್ಮಿಸಿಕೊಂಡು ಅದರೊಳಗೇ ನಮ್ಮ ಅಸ್ತಿತ್ವವನ್ನು ಕಾಣಬಯಸುತ್ತೇವೆ. ಅಥವಾ ನಮ್ಮೊಳಗೇ ಕೊರಗುತ್ತಾ ಮುಂದಿನ ಹೆಜ್ಜೆಗಳನ್ನು ಇಡುವುದನ್ನೂ ಮರೆತು ಸ್ಥಗಿತ ನೀತಿಯನ್ನು ಅನುಸರಿಸುತ್ತೇವೆ. ನಮ್ಮ ನಂತರದ ವೈಫಲ್ಯಗಳಿಗೆಲ್ಲಾ ಅದನ್ನೇ ನೆಪವನ್ನಾಗಿಸಿಕೊಳ್ಳುತ್ತೇವೆ. ಈ ಪ್ರಕ್ರಿಯೆಯಲ್ಲಿ ವ್ಯರ್ಥವಾಗುವ ಅಮೂಲ್ಯವಾದ ಸಮಯ, ಶಕ್ತಿಗಳ ಪರಿವೇ ನಮಗಿರುವುದಿಲ್ಲ.

ಈ ರೀತಿಯ ನಮ್ಮ ಧೋರಣೆಯ ಬಗ್ಗೆ ರ್‍ಯಾಂಡಿ ಪಾಶ್ ತಮ್ಮ ’ದಿ ಲಾಸ್ಟ್ ಲೆಕ್ಚರ್’ ನಲ್ಲಿ ಈ ರೀತಿ ಹೇಳುತ್ತಾರೆ,

’ಬಹಳಷ್ಟು ಜನ ತಮಗೆ ಎದುರಾದ ಸಮಸ್ಯೆಗಳನ್ನು ದೂರುವುದರಲ್ಲಿಯೇ ಇಡೀ ಜೀವನವನ್ನು ಕಳೆಯುವರು. ಜೀವನದಲ್ಲಿ ಸಮಸ್ಯೆಗಳನ್ನು ದೂರುವುದಕ್ಕೆ ವಿನಿಯೋಗಿಸುವ ಶೇಕಡ ಹತ್ತರಷ್ಟು ಶಕ್ತಿ ಮತ್ತು ಸಮಯವನ್ನು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕೆ ವಿನಿಯೋಗಿಸಿದರೆ ಅದ್ಭುತ ಫಲಿತಾಂಶ ನಮ್ಮದಾಗುವುದರಲ್ಲಿ ಸಂಶಯವಿಲ್ಲ.

ಎಂತಹ ವಿಷಮ ಪರಿಸ್ಥಿತಿಯಲ್ಲೂ ಬಂದೊದಗಿದ ಕಷ್ಟ-ನಷ್ಟಗಳನ್ನು ಹೇಳಿಕೊಂಡು ಗೋಳಿಡದ ಅನೇಕ ವ್ಯಕ್ತಿಗಳು ಸಮಾಜದಲ್ಲಿರುವುದನ್ನು ನಾನು ನೋಡಿದ್ದೇನೆ. ಅಂತವರಲ್ಲಿ ಸ್ಯಾಂಡಿ ಬೋಲ್ಟ್ ಒಬ್ಬರು. ನಾನು ವ್ಯಾಸಂಗ ಮಾಡುತ್ತಿರುವಾಗ ಇದ್ದ ಬಾಡಿಗೆ ಮನೆಯ ಮಾಲೀಕರು. ಅವರು ಯೌವನದಲ್ಲಿ ಕಟ್ಟಡವೊಂದರ ಸೆಲ್ಲಾರ್‌ಗೆ ಕೆಲವು ಪೆಟ್ಟಿಗೆಗಳನ್ನು ಹೊತ್ತೊಯ್ಯುತ್ತಿರುವಾಗ ಹಿಂದಿನಿಂದ ಬಂದ ಲಾರಿಯೊಂದು ಡಿಕ್ಕಿ ಹೊಡೆಯಿತು. ಸ್ಯಾಂಡಿ ಕೂಡಲೇ ಹಿಮ್ಮುಖವಾಗಿ ಸೆಲ್ಲಾರ್ ನಲ್ಲಿ ಬಂದು ಬಿದ್ದರು. ಒಮ್ಮೆ ನಾನು ಅವರನ್ನು ಮಾತನಾಡಿಸಿ, ’ಆ ಸಮಯದಲ್ಲಿ ನೀವು ಎಷ್ಟು ಎತ್ತರದಿಂದ, ಎಷ್ಟು ದೂರ ಹೋಗಿ ಬಿದ್ದಿರಿ?’ ಎಂದು ಪ್ರಶ್ನಿಸಿದೆ. ಅದಕ್ಕೆ ಅವರು, ’ಬೇಕಾದಷ್ಟು ದೂರ,’ ಎಂದಷ್ಟೇ ಹೇಳಿದರು. ಆದರೆ ಅವರು ಬಿದ್ದ ರಭಸಕ್ಕೆ ಎರಡೂ ಕೈಕಾಲುಗಳು ಊನಗೊಂಡಿದ್ದವು. ಇಡೀ ಜೀವನ ಕೈಕಾಲುಗಳಿಲ್ಲದೇ ಬದುಕುವ ಸ್ಥಿತಿ ಬಂದೊದಗಿತ್ತು.

ಸ್ಯಾಂಡಿ ಅದ್ಭುತ ಓಟಗಾರ. ಅಪಘಾತವಾಗುವ ಮೊದಲು ಆತನಿಗೆ ಮದುವೆ ನಿಷ್ಚಿತಾರ್ಥ ನಡೆದಿತ್ತು. ಆದರೆ ಮುಂದಿನ ದಿನಗಳಲ್ಲಿ ಆತನಿಗೆ ತನ್ನ ಕೈಹಿಡಿಯುವ ಹುಡುಗಿಯೊಂದಿಗೆ ಜೀವನ ಪೂರ್ತಿ ಭಾರವಾಗಿ ಬದುಕುವುದು ಇಷ್ಟವಿರಲಿಲ್ಲ. ಸ್ಯಾಂಡಿ ಆಕೆಯನ್ನು ಕರೆದು, ’ಮದುವೆಯ ವಿಚಾರದಲ್ಲಿ ನೀನೇನೂ ನನ್ನ ಜೊತೆ ಯಾವುದೇ ಒಪ್ಪಂದವನ್ನೂ ಮಾಡಿಕೊಂಡಿಲ್ಲ. ಈಗ ನಿನ್ನ ನಿಧಾರವನ್ನು ಬದಲಿಸುವುದಾದರೆ ಅದಕ್ಕೆ ನನ್ನ ಅಭ್ಯಂತರವೇನೂ ಇಲ್ಲ.’ ಎಂದು ಹೇಳಿದ. ಆಕೆ ಅದರಂತೆಯೇ ಮಾಡಿದಳು.

ಮತ್ತೆ ನಾನು ಸ್ಯಾಂಡಿಯನ್ನು ನೋಡಿದ್ದು ಆತನ ಮೂವತ್ತನೇ ವರ್ಷದಲ್ಲಿ. ಜೀವನದ ಬಗ್ಗೆ ಆತನ ನಿಲುವು ನಿಜಕ್ಕೂ ಆಶ್ಚರ್ಯ ತಂದಿತ್ತು. ತನ್ನ ಜೀವನದಲ್ಲಿ ನಡೆದ ದುರಂತದ ಬಗ್ಗೆ ಆತನಿಗೆ ಯಾವುದೇ ವಿಷಾದವಾಗಲೀ, ಬೇಸರವಾಗಲೀ ಇರಲಿಲ್ಲ. ಅಲ್ಲದೇ ತನ್ನ ಗೋಳನ್ನು ಯಾರ ಬಳಿಯೂ ಹಂಚಿಕೊಳ್ಳುತ್ತಿರಲಿಲ್ಲ. ಆತ ಸಾಕಷ್ಟು ಶ್ರಮವಹಿಸಿ ಒಬ್ಬ ಅಧಿಕೃತ ಮದುವೆ ಸಲಹೆಗಾರನಾಗಿ ಕಾರ್ಯನಿರ್ವಹಿಸುತ್ತಲಿದ್ದ. ಆತನಿಗೆ ಮದುವೆಯೂ ಆಗಿತ್ತು. ಮಗುವೊಂದನ್ನು ದತ್ತು ತೆಗೆದುಕೊಂಡಿದ್ದ. ಸ್ವಂತ ಮಗುವನ್ನು ಪಡೆಯಲಾಗದ ವೈದ್ಯಕೀಯ ಸಮಸ್ಯೆಯನ್ನು ಸಾಮಾನ್ಯ ವಿಷಯವಾಗಿ ಸ್ವೀಕರಿಸಿದ್ದ.

ನನ್ನ ಮತ್ತೊಬ್ಬ ಆದರ್ಶ ವ್ಯಕ್ತಿ ಜಾಕಿ ರಾಬಿನ್ ಸನ್. ಮೇಜರ್ ಲೀಗ್ ಬೇಸ್ ಬಾಲ್ ಆಟದಲ್ಲಿ ಪ್ರಚಂಡ ಯಶಸ್ಸು ಗಳಿಸಿದ್ದ ಆಫ್ರಿಕ ಮೂಲದ ಪ್ರಥಮ ಅಮೇರಿಕನ್. ಜನಾಂಗೀಯ ನಿಂದನೆಯಿಂದ ಜರ್ಝರಿತನಾದ ಕ್ರೀಡಾಪಟು. ಇಂದಿನ ಯುವಕರಿಗೆ ಆತನಿಗಾದ ಅವಮಾನದ ಪರಿಕಲ್ಪನೆಯೂ ಇರಲಾರದು. ಆತ ಶ್ವೇತ ವರ್ಣೀಯರಿಗಿಂತ ಮಿಗಿಲಾಗಿ ಆಡಬೇಕಾದ ಅನಿವಾರ್ಯತೆಯನ್ನು ಚೆನ್ನಾಗಿ ಮನಗಂಡಿದ್ದ. ಅದಕ್ಕಾಗಿ ಸಾಕಷ್ಟು ಪರಿಶ್ರಮಪಟ್ಟು ಯಶಸ್ಸು ಗಳಿಸಿದ್ದ. ಆ ಯಶಸ್ಸಿನ ಹಾದಿಯಲ್ಲಿ ಸಾಗುವಾಗ ತನ್ನ ಮೇಲಾಗುತ್ತಿದ್ದ ದೌರ್ಜನ್ಯದ ಬಗ್ಗೆ ಎಂದಿಗೂ ಯಾರ ಬಳಿಯೂ ಮಾತನಾಡುತ್ತಿರಲಿಲ್ಲ. ಆತ ಆಫ್ರಿಕ ಮೂಲದವನೆಂದು ಸ್ಟೇಡಿಯಂನಲ್ಲಿ ಪ್ರೇಕ್ಷಕರು ಉಗಿದರೂ , ಕೀಳಾಗಿ ನಿಂದಿಸಿದರೂ ವಿಚಲಿತನಾಗುತ್ತಿರಲಿಲ್ಲ. ಮತ್ತು ಯಾರನ್ನು ದೂಷಿಸುತ್ತಿರಲಿಲ್ಲ. ಆತನ ಗಮನವೆಲ್ಲಾ ಆಟದ ಮೇಲೇ ಕೇಂದ್ರೀಕೃತವಾಗಿರುತ್ತಿತ್ತು. ಹಾಗಾಗಿ ಆತ ಒಬ್ಬ ಮಹಾನ್ ಬೇಸ್‌ಬಾಲ್ ಆಟಗಾರನಾಗಿ ಹೊರಹೊಮ್ಮಿದ........

ಇದರ ಒಟ್ಟಾರೆ ಸಾರಾಂಶ ಇಷ್ಟೇ. ನೀವು ಸದಾ ಸಮಸ್ಯೆಗಳನ್ನೇ ಬಣ್ಣಿಸುತ್ತಿದ್ದರೆ ಜೀವನದಲ್ಲಿ ಏನನ್ನೂ ಸಾಧಿಸಲಾರಿರಿ. ಅದು ಎಂದಿಗೂ ಕಾರ್ಯ ನಿರ್ವಹಿಸುವ ವೈಖರಿಯಾಗಲಾರದು. ನಮಗೆಲ್ಲರಿಗೂ ಇರುವುದು ಅತ್ಯಂತ ಕಡಿಮೆ ಅವಧಿ ಮತ್ತು ಪರಿಮಿತ ಶಕ್ತಿ. ಸಮಸ್ಯೆಯನ್ನು ದೂಷಿಸಲು ಬಳಸುವ ಯಾವುದೇ ಸಮಯವೂ ಗುರಿಯನ್ನು ಮುಟ್ಟಲು ನಮಗೆ ಸಹಾಯ ಮಾಡುವುದಿಲ್ಲ. ಅದು ನಮ್ಮನ್ನು ಎಂದಿಗೂ ಆನಂದದಿಂದಿರಲು ಬಿಡದು.’

ಸಾವಿನ ಸಮ್ಮುಖದಲ್ಲಿ ನಿಂತು ಬದುಕಿನ ಸಾರ್ಥಕತೆಯನ್ನು ಸಾರಿದ ಕಂಪ್ಯೂಟರ್ ವಿಜ್ಞಾನಿ ರ್‍ಯಾಂಡಿ ಪಾಶ್ ’ದೂರು ಹೇಳುವುದನ್ನು ಬಿಟ್ಟು ಶ್ರಮದ ದುಡಿಮೆಯನ್ನು ಮಾಡಿರಿ,’ ಎನ್ನುತ್ತಾರೆ.

ದೂರುವುದು ಒಂದುರೀತಿಯ ಪಲಾಯನವಾದ. ಯಶಸ್ವಿಯಾಗಿ ಬದುಕಲು ತನ್ನದೇ ಆದ ಮಾರ್ಗಗಳಿವೆ. ಬದುಕನ್ನು ಬಂದಂತೆ ಸ್ವೀಕರಿಸುವುದು ಒಂದು ಮಾರ್ಗವಾದರೆ ಬದುಕನ್ನು ನಮಗೆ ಬೇಕಾದಂತೆ ಸ್ವಶ್ರಮದಿಂದ ರೂಪಿಸಿಕೊಳ್ಳುವುದು ಮತ್ತೊಂದು ಮಾರ್ಗ. ಈ ಬದುಕು ಪ್ರಕೃತಿ ನೀಡಿರುವ ಅಮೂಲ್ಯ ಕೊಡುಗೆ. ಇದನ್ನು ಸಾರ್ಥಕಪಡಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ.

14 comments:

  1. ಮೇಡಂ;ನಿಜಕ್ಕೂ ನಮ್ಮ ಜೀವನದ ಬಹು ಭಾಗವನ್ನು ಕೊರಗುವುದರಲ್ಲೋ,ದೂರುವುದರಲ್ಲೋ,ಕಳೆಯುತ್ತೇವೆ.ಇಂತಹ ಮಹಾನ್ ಆತ್ಮಗಳಿಂದ ಕಲಿಯುವುದು ಬಹಳಷ್ಟಿದೆ ಎನಿಸುತ್ತದೆ!ಅದ್ಭುತ ಲೇಖನ!ತುಂಬಾ ಇಷ್ಟವಾಯಿತು.

    ReplyDelete
  2. ಉತ್ತಮವಾಗಿದೆ. ದೂರುವ ಅಭ್ಯಾಸದಿಂದ ದೂರವಿರಬೇಕೆಂದು ಬಹಳ ಚೆನ್ನಾಗಿ ತಿಳಿಸಿದ್ದೀರಿ.

    ReplyDelete
  3. ಅತ್ಯಮೂಲ್ಯವಾದ ಮಾಹಿತಿ ...
    ಮೂವರು ಮಹನೀಯರ ಮನದಂಗಳಕೆ ಕರೆದುಕೊಂಡು ಹೋಗಿದ್ದಕ್ಕೆ ಧನ್ಯವಾದಗಳು ..

    ReplyDelete
  4. ಸಾರ್ಥಕ ಬದುಕಿನ ಗುಟ್ಟನ್ನು ಹೇಳಿರುವಿರಿ. ಧನ್ಯವಾದಗಳು.

    ReplyDelete
  5. ನಿಮ್ಮ್ ಸರಣಿ ಬರಹಗಳು ಉತ್ತಮ ತಿಳಿವು ನೀಡುತ್ತಿದೆ.

    ReplyDelete
  6. ಅದ್ಬುತವಾಗಿದೆ ವಿಷಯ..

    shall I share it on my facebook wall?:)

    ReplyDelete
  7. ಮೇಡಂ, ಈ ಪುಸ್ತಕವನ್ನು ಅನಾರೋಗ್ಯದಿಂದ ನಾನು ಬಳಲುತ್ತಿದ್ದಾಗಲೂ ಎರಡು ಗಂಟೆಯಲ್ಲೇ ಓದಿದೆ. ಗೆಳೆಯರಿಗೂ ಕೊಟ್ಟಿದ್ದೇನೆ. ಇವನ (ಪಾಶ್)ಮುಂದೆ ನಾವೇನು ಮಹಾ ಸಾಧಿಸಿದ್ದು ಅಲ್ಲವೇ?

    ಧನ್ಯವಾದಗಳು. ಅಂದಹಾಗೆ ನನ್ನದೊಂದು ಪುಸ್ತಕವನ್ನು ನಿಮಗೆ ತಲುಪಿಸಬೇಕು. ದಯಮಾಡಿ, ನಿಮ್ಮ ವಿಳಾಸ, ಮೊಬೈಲ್ ನಂ. sathishgbb@gmail.com ಗೆ ನೀಡುವೀರಾ? ಪ್ಲೀಸ್...

    ReplyDelete
  8. dhanaatmaka dhorane tumbuva tamma lekhanagalu odida nantara nammalli hattu aanegala bala hummassu tumbiruttave. dhanyavaadagalu.

    ReplyDelete
  9. ಮನುಷ್ಯನ ಗುಣವೇ ಇನ್ನೊಬ್ಬರನ್ನು ದೂಷಿಸುವುದು,ದುಉಶಿಸುವ ಬದಲು ಆ ಸಮಯವನ್ನು ಬೇರೆ ಕೆಲಸಕ್ಕೆ ಉಪಯೋಗಿಸಿಕೊಂಡರೆ ಅದು ನಿಜವಾಗಲು ಸಾರ್ಥಕ

    ReplyDelete
  10. ನಿಮ್ಮ ಈ ಸ್ಪೂರ್ತಿ ತುಂಬುವ ಲೇಖನ ತುಂಬಾ ಇಷ್ಟವಾಯಿತು. ಉತ್ತಮ ಸಲಹೆಗಳನ್ನು ಮನದಟ್ಟು ಮಾಡಿಕೊಳ್ಳುವೆ. ಇಂತಹ ಬರಹ ಮತ್ತಷ್ಟು ಬರಲಿ.

    ReplyDelete
  11. ನಿಮ್ಮ ಲೇಖನ ಇಷ್ಟ ಆಯಿತು. ನಾವು ಇನ್ನೊಬ್ಬರನ್ನು ಅಥಾವ ಸಮಯವನ್ನು ದೂಷಿಸುವ ಬದಲು ಬಂದ ಸದಾವಕಾಶಗಳನ್ನು ನಮಗೆ ಬೇಕಾಗುವಂತೆ ಸದುಪಯೋಗ ಮಾಡಿಕೊಂಡರೆ ನಾವು ಉತ್ತಮ ಸಾದನೆಯನ್ನು ಮಾಡಬಹುದು ಎಂದು ಚೆನ್ನಾಗಿ ಬರೆದಿದ್ದಿರಿ. ಚೆನ್ನಾಗಿದೆ
    ನನ್ನ ಭ್ಲಾಗ್ ಗೆ ನಿಮಗೆ ಸ್ವಾಗತ

    ReplyDelete
  12. ಉತ್ತಮ ಮಾಹಿತಿ .. ಧನ್ಯವಾದಗಳು ಮೇಡ೦.

    ಅನ೦ತ್

    ReplyDelete