Tuesday, June 14, 2011

ಮನದ ಅಂಗಳದಿ.........೪೪. ಕೈಝೆನ್-ವರ್ಚಸ್ವೀ ಜೀವನದ ಹತ್ತು ಪ್ರಾಚೀನ ತಂತ್ರಗಳು



ಮನದ ಅಂಗಳದಿ.........೪೪. ಕೈಝೆನ್-ವರ್ಚಸ್ವೀ ಜೀವನದ ಹತ್ತು ಪ್ರಾಚೀನ ತಂತ್ರಗಳು

ಚಿಕ್ಕಂದಿನಲ್ಲಿ 'ಅಲ್ಲಾವುದ್ದೀನನ ಅದ್ಭುತ ದೀಪ'ದ ಕಥೆ ಕೇಳಿದಾಗ ಆ ದೀಪವೇನಾದರೂ ದೊರೆತಿದ್ದರೆ ಬೇಕೆನಿಸಿದ್ದನ್ನೆಲ್ಲಾ ಪಡೆಯುತ್ತಿದ್ದೆವು ಎಂದು ಆಸೆ ಪಟ್ಟಿರುತ್ತೇವೆ. ಈಗಲೂ ನಮ್ಮನ್ನು ನಾವು ಉತ್ತಮ ಪಡಿಸಿಕೊಳ್ಳುವಂತಹ, ನಮಗೆ ಸಾಧ್ಯವಾದಷ್ಟು ಔನತ್ಯಕ್ಕೇರುವಂತಹ ಯಾವುದಾರೂ ಮಂತ್ರವೋ ತಂತ್ರವೋ ಇದ್ದಿದ್ದರೆ ಎಷ್ಟು ಚಂದವಿರುತ್ತಿತ್ತು ಎಂದು ಕೆಲವೊಮ್ಮೆ ಅಂದುಕೊಂಡಿರಬಹುದು. ಆ ಒಂದು ಸಾಮರ್ಥ್ಯ ನಮ್ಮಲ್ಲೇ ಇದೆ, ನಾವೇ ನಮ್ಮನ್ನು ಉನ್ನತೀಕರಿಸಿಕೊಳ್ಳಬಹುದು ಎನ್ನುವುದು ಕೈಝೆನ್ ನಲ್ಲಿ ಅಡಗಿದೆ. 'ಕೈಝೆನ್' ಎನ್ನುವ ಜಪಾನೀ ಪದದ ಅರ್ಥ-ನಿರಂತರ, ಅಂತ್ಯವಿಲ್ಲದ ಪ್ರಗತಿ. ಅದು ಜೀವನವನ್ನು ಅದರ ಅತ್ಯುನ್ನತ ಸ್ತರದ ಪೂರ್ಣಪ್ರಜ್ಞೆಯಲ್ಲಿ ಬದುಕುವ ವ್ಯಕ್ತಿಗಳ ಲಕ್ಷಣ. 'ಕೈಝೆನ್' ಬಗ್ಗೆ ರಾಬಿನ್ ಶರ್ಮ ಅವರು ತಮ್ಮ 'The Monk Who Sold His Ferrary'ಯಲ್ಲಿ ತಿಳಿಸಿರುವುದನ್ನು ಸಂಕ್ಷಿಪ್ತಗೊಳಿಸಿ ನಿಮ್ಮ ಮುಂದಿಡುತ್ತಿದ್ದೇನೆ.

''ಕೈಝೆನ್' ಎಂಬ ವಿಶಿಷ್ಟ ತತ್ವಜ್ಞಾನವನ್ನು ಸಾವಿರಾರು ವರ್ಷಗಳ ಹಿಂದೆ ಪೌರ್ವಾತ್ಯ ದಾರ್ಶನಿಕರು ಪಡೆದು ಪರಿಷ್ಕರಿಸಿದ್ದರು.....

ನಮ್ಮ ಆಂತರಿಕ ಯಶಸ್ಸಿನ ಮೇಲೆ ಬಾಹ್ಯ ಯಶಸ್ಸು ಅವಲಂಭಿಸಿದೆ. ಆದ್ದರಿಂದ ದೇಹದ ಆರೋಗ್ಯ, ಆರ್ಥಿಕ ಸ್ಥಿತಿ ಅಥವಾ ಮಾನವ ಸಂಬಂಧ ಮುಂತಾದ ಯಾವುದೇ ಬಾಹ್ಯ ಕ್ಷೇತ್ರಗಳಲ್ಲಿ ಯಶಸ್ವಿಯಾಗಬೇಕಾದರೆ ಮೊದಲು ನಮ್ಮ ಅಂತರಂಗದ ಪ್ರಪಂಚವನ್ನು ಸುಧಾರಿಸಬೇಕಾಗುತ್ತದೆ. ಇದಕ್ಕೆ ನಿರಂತರ ಸ್ವಯಂ ಪ್ರಗತಿಯ ಅಭ್ಯಾಸವೊಂದೇ ದಾರಿ....... ಅಂತರಂಗದ ಪ್ರಪಂಚದ ಸುಧಾರಣೆ ಎಂದರೆ ವ್ಯಕ್ತಿತ್ವದ ವಿಕಾಸ ಹಾಗೂ ವಿಸ್ತಾರ ಎಂದು ಅರ್ಥ. ಇದು ನಮಗೆ ನಾವೇ ಮಾಡಿಕೊಳ್ಳುವ ಅತ್ಯುತ್ತಮ ಸಹಾಯ.........

ಕೈಝೆನ್ ತತ್ವಗಳನ್ನು ಅನುಸರಿಸಲು ಹತ್ತು ಪರಿಣಾಮಕಾರೀ ತಂತ್ರಗಳಿವೆ. ಇವುಗಳನ್ನು ಶ್ರದ್ಧಾಪೂರ್ವಕವಾಗಿ ಅವ್ಯಾಹತವಾಗಿ ದಿನವೂ ಆಚರಿಸಿದರೆ ಒಂದು ತಿಂಗಳ ಅವಧಿಯಲ್ಲಿಯೇ ಪರಿಣಾಮಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಅನಂತರ ಅದನ್ನು ನಮ್ಮ ದಿನಚರಿಯ ಅನಿವಾರ್‍ಯ ಭಾಗವಾಗುವಂತೆ ಸಾಧನೆ ಮಾಡಿದರೆ ಅವು ಬಿಡಲಾರದ ಅಭ್ಯಾಸಗಳಾಗಿ ಬೆಳೆದು ಶಾಶ್ವತ ಆನಂದವನ್ನೂ, ಅಪಾರ ಶಕ್ತಿಯನ್ನೂ, ಉತ್ತಮ ಆರೋಗ್ಯವನ್ನೂ ನೀಡುವುದು ಖಂಡಿತ.......

ವರ್ಚಸ್ವೀ ಜೀವನದ ಹತ್ತು ಪ್ರಾಚೀನ ತಂತ್ರಗಳು ಯಾವುವೆಂದರೆ:

ಮೊದಲನೆಯ ತಂತ್ರ- ಏಕಾಂತದ ಸಾಧನೆ: ಇದರಲ್ಲಿ ಪ್ರತಿದಿನವೂ ನಿರ್ದಿಷ್ಟ ಕಾಲದಲ್ಲಿ ಶಾಂತಿಯಿಂದಿರಬೇಕು. ಆ ಅವಧಿಯಲ್ಲಿ ಮೌನದ ಗುಣಪಡಿಸುವ ಶಕ್ತಿಯನ್ನೂ ನಮ್ಮ ನಿಜ ಸ್ವರೂಪವೇನೆಂಬುದನ್ನೂ ತಿಳಿಯಬಹುದು. ಇದು ಧೀರ್ಘ ರಸ್ತೆಯಲ್ಲಿ ಓಡಿಸಿ ಕಾದಿರುವ ಎಂಜಿನ್ನಿಗೆ ಕೊಂಚ ರೆಸ್ಟ್ ನೀಡಿದಂತೆ. ಏಕಾಂತ ಸಾಧನೆಯನ್ನು ಪ್ರತಿದಿನ ಒಂದೇ ಸಮಯದಲ್ಲಿ ಮಾಡಿದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

ಎರಡನೇ ತಂತ್ರ- ಶಾರೀರಿಕತೆಯ ತಂತ್ರ: ದೇಹವೆಂಬ ದೇಗುಲಕ್ಕೆ ಶ್ರಮಭರಿತ ವ್ಯಾಯಾಮ ನೀಡಲು ದಿನವೂ ಸ್ವಲ್ಪ ಸಮಯವನ್ನು ಮೀಸಲಿಡಬೇಕು. ಅದು ಪ್ರಾಣಾಯಾಮ, ಯೋಗ, ವೇಗದ ನಡಿಗೆ, ?ಪುಶ್‌ಅಪ್? ವ್ಯಾಯಾಮ ಯಾವುದಾದರೂ ಆಗಬಹುದು. ದೇಹದ ಅಂಗಾಂಗಗಳಿಗೆ ಸಾಕಷ್ಟು ಚಲನೆ, ಶ್ವಾಸಕೋಶಗಳಲ್ಲಿ ಒಂದಿಷ್ಟು ವಾಯುಸಂಚಾರ ಆಗುವುದು ಮುಖ್ಯ.

ಮೂರನೆಯ ತಂತ್ರ-ಜೀವಂತ ಪೋಷಣೆಯ ತಂತ್ರ: ನಿಸರ್ಗದ ಅಂಗಗಳಾದ ಸೂರ್ಯ, ಗಾಳಿ, ನೀರು, ಮಣ್ಣುಗಳಿಂದ ಸೃಷ್ಟಿಯಾಗಿರುವ ಸಸ್ಯಾಹಾರವೇ ಸಜೀವ ಆಹಾರ. ನಿತ್ಯವೂ ಹಸಿತರಕಾರಿ, ಹಣ್ಣು, ಬೇಳೆಕಾಳುಗಳನ್ನಷ್ಟೇ ತಿನ್ನುತ್ತಿದ್ದರೆ ಚಿರಂಜೀವಿಗಳಾಗಬಹುದು. ಸಸ್ಯಾಹಾರವು ದೀರ್ಘಾಯುಷ್ಯದ ರಹಸ್ಯಗಳಲ್ಲೊಂದು. ಫಿನ್‌ಲ್ಯಾಂಡಿನಲ್ಲಿ ವಿಜ್ಞಾನಿಗಳು ಇತ್ತೀಚೆಗೆ ನಡೆಸಿದ ಒಂದು ಅಧ್ಯಯನದ ಪ್ರಕಾರ ಕೇವಲ ಏಳು ತಿಂಗಳಿಂದ ಸಸ್ಯಾಹಾರಿಗಳಾಗಿ ಬದಲಾದವರಲ್ಲಿ ೩೮% ಮಂದಿ ಹಿಂದಿಗಿಂತ ಹೆಚ್ಚು ಉತ್ಸಾಹವನ್ನೂ ಕಡಿಮೆ ಆಯಾಸವನ್ನೂ ಅನುಭವಿಸುತ್ತಿರುವರೆಂದು ತಿಳಿದಿದೆ. ಊಟದಲ್ಲಿ ಹೆಚ್ಚು ಸಲಾಡ್ಗಳನ್ನು ಬಳಸುವುದು ಒಳ್ಳೆಯದು.

ನಾಲ್ಕನೆಯ ತಂತ್ರ- ಸಮೃದ್ಧ ಜ್ಞಾನದ ತಂತ್ರ: ಈ ತಂತ್ರವು ನಾವು ಜೀವನದ ವಿದ್ಯಾರ್ಥಿಗಳಾಗಬೇಕೆನ್ನುವುದನ್ನು ಹೇಳುತ್ತದೆ. ಅದಕ್ಕಿಂತಲೂ ಮಿಗಿಲಾಗಿ ಜೀವನ ವಿಶ್ವವಿದ್ಯಾನಿಲಯದಲ್ಲಿ ಪಡೆದುಕೊಂಡ ಜ್ಞಾನವನ್ನು ಬಳಸಬೇಕೆಂಬುದನ್ನು ಹೇಳುತ್ತದೆ. ಪ್ರತಿದಿನವೂ, ದಿನಕ್ಕೆ ಅರ್ಧತಾಸು ಉತ್ತಮ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಮಾಡಿದರೆ ಅದರಿಂದ ಗಮನಾರ್ಹ ಪರಿಣಾಮವಾಗುತ್ತದೆ.

ಐದನೆಯ ತಂತ್ರ:-ವೈಯಕ್ತಿಕ ಆತ್ಮ ಪರೀಕ್ಷೆಯ ತಂತ್ರ: ನಮ್ಮೊಳಗೆ ನಿದ್ರಿತ ಅಥವಾ ಸುಪ್ತ ಸ್ಥಿತಿಯಲ್ಲಿರುವ ಅನೇಕ ಪ್ರತಿಭೆಗಳಿವೆ. ಅದನ್ನು ಗುರುತಿಸುವ ಮೂಲಕ ಜಾಗೃತಗೊಳಿಸಬಹುದು. ಇದು ನಮ್ಮನ್ನು ಹೆಚ್ಚು ಚೈತನ್ಯಭರಿತರನ್ನಾಗಿಯೂ, ವಿವೇಕಿಯಾಗಿಯೂ ಮಾಡುತ್ತದೆ.

ಆರನೆಯ ತಂತ್ರ-ಶೀಘ್ರಜಾಗೃತಿ: ಎಂದರೆ ಬೇಗನೇ ಏಳುವುದು. ಸೂರ್‍ಯೋದಯಕ್ಕೇ ಏಳುವುದು ಹಾಗೂ ದಿನಚರಿಯನ್ನು ಚೆನ್ನಾಗಿ ಆರಂಭಿಸುವುದು ಬಹಳ ಮುಖ್ಯ.

ಏಳನೆಯ ತಂತ್ರ-ಸಂಗೀತದ ತಂತ್ರ: ಪ್ರತಿದಿನ ಕೊಂಚ ಸಮಯವನ್ನು ಸಂಗೀತಕ್ಕೆ ಮೀಸಲಾಗಿಡುವುದು ಉತ್ತಮ. ಬೇಸರವಾದಾಗ ಸಂಗೀತ ಕೇಳುವುದು ಉತ್ಸಾಹ ನೀಡುವ ಉತ್ತಮ ಸಾಧನ.

ಎಂಟನೆಯ ತಂತ್ರ- ಮಂತ್ರ ಸಿದ್ಧಿ: 'ಮಂತ್ರ' ಎಂದರೆ ಸಕಾರಾತ್ಮಕ ಪ್ರಭಾವವನ್ನುಂಟುಮಾಡುವ ರೀತಿಯಲ್ಲಿ ರಚಿಸಿರುವ ಶಬ್ದಗಳ ಜೋಡಣೆ. ಮಂತ್ರಗಳನ್ನು ಗಟ್ಟಿಯಾಗಿಉಚ್ಚರಿಸಿದಾಗ ನಮ್ಮ ಅಂತಃಪ್ರಜ್ಞೆಯ ಮೇಲೆ ಅದ್ಭುತ ಪ್ರಭಾವವುಂಟಾಗುತ್ತದೆ.

ಒಂಭತ್ತನೆಯ ತಂತ್ರ-ಸಮಗ್ರ ಚಾರಿತ್ರ್ಯ: ನಮ್ಮ ಚಾರಿತ್ರ್ಯ ವರ್ಧನೆಗಾಗಿ ಪ್ರತಿದಿನವೂ ಹಿಂದಿನ ದಿನಕ್ಕೀತ ಸ್ವಲ್ಪ ಹೆಚ್ಚು ಪ್ರಯತ್ನ ಮಾಡುತ್ತಾ ಹೋಗಬೇಕು. ಅದಕ್ಕಾಗಿ ಸದ್ಗುಣವನ್ನು ಬೆಳೆಸುವ ಯಾವ ಅಭ್ಯಾಸವನ್ನೂ, ಯೋಚನೆಯನ್ನೂ ಮಾಡಬಹುದು.

ಹತ್ತನೆಯ ತಂತ್ರ-ಸರಳತೆಯ ತಂತ್ರ: ಮುಖ್ಯವಾದ, ಆದ್ಯತೆಗೆ ಅರ್ಹವಾದ ಕಾರ್ಯಗಳ ಕಡೆಗೇ ಗಮನವನ್ನು ಏಕಾಗ್ರಗೊಳಿಸಿ ಸರಳವಾದ ಜೀವನವನ್ನು ನಡೆಸಬೇಕು.

ಈ ಹತ್ತು ತಂತ್ರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ಜೀವನವನ್ನು ಆಂತರಿಕವಾಗಿ ಹಾಗೂ ಬಾಹ್ಯವಾಗಿ ಸಶಕ್ತಗೊಳಿಸಿ, ಚೈತನ್ಯಪೂರ್ಣ ಬದುಕಿಗೆ ನಾಂದಿಯನ್ನು ಹಾಡೋಣ.

8 comments:

  1. ಜೀವನಕ್ಕೆ ಹತ್ತು ಒಳ್ಳೆಯ ತಂತ್ರಗಳು...ಅರ್ಥ ಪೂರ್ಣವಾಗಿದೆ....

    ReplyDelete
  2. ಪ್ರಭಾಮಣಿಯವರೆ,
    ಬದುಕನ್ನು ಹಸನು ಮಾಡಬಲ್ಲ ಈ ಹತ್ತು ತಂತ್ರಗಳಿಗಾಗಿ ಧನ್ಯವಾದಗಳು.

    ReplyDelete
  3. ಸ೦ಗ್ರಹ ಯೋಗ್ಯ ವಿಚಾರಗಳಿಗೆ ಧನ್ಯವಾದಗಳು ಮೇಡ೦.

    ReplyDelete
  4. ಮೇಡಂ;ನಿಜಕ್ಕೂ ಅದ್ಭುತ ತತ್ವಗಳು!ನಮ್ಮ ಕೈಯಲ್ಲೇ ಇದೆ!!ಅದಕ್ಕೇ ಆ ಹೆಸರು ಬಂತೆ!?

    ReplyDelete
  5. ಒಳ್ಳೆಯ ವಿಚಾರ..ಚೆನ್ನಾಗಿದೆ..
    ನಿಮ್ಮವ,
    ರಾಘು.

    ReplyDelete
  6. ಮೇಡಮ್.. ನೀವು ಸೂಚಿಸಿರುವ ಈ ಹತ್ತು ತಂತ್ರಗಳು ನಿಜವಾಗಿಯೂ ಅದ್ಭುತವಾಗಿರುವಂಥವು.. ಇವುಗಳಲ್ಲಿ ಹಲವುಗಳನ್ನು ನಾನು ಈಗಾಗಲೇ ಅನುಸರಿಸಿ ಒಳ್ಳೇ ಫಲಗಳನ್ನು ಪಡೆದುಕೊಂಡಿದ್ದೇನೆ.. ಮಿಕ್ಕವುಗಳನ್ನು ಆದಷ್ಟೂ ಅನುಸರಿಸಲು ಪ್ರಯತ್ನಿಸುತ್ತೇನೆ.. ನಿಮ್ಮ ಈ ಲೇಖನ ನನಗೆ ತುಂಬಾ ಹಿಡಿಸಿತು. ಈ ಲೇಖನದ ಲಿಂಕ್ ಅನ್ನು ನನ್ನ Orkut ಹಾಗು Facebook ಗೆಳೆಯರೊಂದಿಗೆ ಹಂಚಿಕೊಂಡಿದ್ದೇನೆ. ಅವರೂ ಸಹ ಓದಲಿ ಎಂದು ಧನ್ಯವಾದಗಳು!

    ReplyDelete
  7. ನಿಮ್ಮ ಬರವಣಿಗೆ ಮತ್ತು ಅದರ ಶೈಲಿ ಚೆನ್ನಾಗಿದೆ. ಕೈಝೆನ್ ತತ್ವಗಳು ತುಂಬಾ ಸರಳ ಅವನ್ನು ಅಳವಡಿಸಿಕೊಳ್ಳುವುದು ಕೂಡ ಸುಲಭ ಅನಿಸುತ್ತದೆ....

    ReplyDelete