Sunday, July 3, 2011

ಮನದ ಅಂಗಳದಿ.........೪೭. ಏಕಾಕಿತನ

ಸಾಮಾನ್ಯವಾಗಿ ನಾವು ಒಬ್ಬರೇ ಇರುವ ಸಂದರ್ಭಗಳು ಉಂಟಾಗದಂತೆ ಎಚ್ಚರಿಕೆ ವಹಿಸುತ್ತೇವೆ. ಅನಿವಾರ್ಯವಾಗಿ ಒಬ್ಬರೇ ಇರಬೇಕಾದ ಸಂದರ್ಭಗಳಲ್ಲಿ ಏಕಾಕಿತನ ನಮ್ಮನ್ನು ಹಿಂಸಿಸುತ್ತದೆ. ಕ್ಷಣವೇ ದೂರವಾಣಿಯ ಮೂಲಕವಾದರೂ ನಾವು ಪರಿಸ್ಥಿತಿಯಿಂದ ಹೊರಬರಲು ಪ್ರಯತ್ನಿಸುತ್ತೇವೆ. ಏಕಾಕಿತನದ ಬಗ್ಗೆ ಸ್ವಾಮಿ ರಾಮ ಅವರು ತಮ್ಮ 'ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ' ಕೃತಿಯಲ್ಲಿ ರೀತಿಯಾಗಿ ಹೇಳುತ್ತಾರೆ,

'ನಾನು ಎಂದೂ ಒಂಟಿಯಲ್ಲ. ಯಾರು ಆಂತರಿಕ ಪರಿಪೂರ್ಣತೆಯ ಅರಿವನ್ನು ಹೊಂದಿರುವುದಿಲ್ಲವೋ ಆತ ಏಕಾಕಿ. ತನ್ನೊಳಗಿನ ಸತ್ಯದ ಅರಿವಿಲ್ಲದೆ ಬಾಹ್ಯದ ಮತ್ಯಾವುದರ ಮೇಲೋ ಅವಲಂಬಿತನಾದಾಗ ನಿಜಕ್ಕೂ ಮನುಷ್ಯನು ಏಕಾಕಿ. ಜ್ಞಾನಾರ್ಜನೆಯ ಮೂಲ ಧ್ಯೇಯವು ನೀನು ಸ್ವಯಂ ಪರಿಪೂರ್ಣನೆಂದು ತಿಳಿಯುವ, ಆಂತರ್ಯದ ಪರಿಶೋಧನೆಯೇ ಆಗಿದೆ. ನೀನು ಪರಿಪೂರ್ಣ, ಹೊರಗಿನ ಯಾವುದರ ಅವಲಂಬನೆಯೂ ನಿನಗೆ ಅಗತ್ಯವಿಲ್ಲ, ಯಾವ ಸನ್ನಿವೇಶದಲ್ಲಿ ಏನು ಘಟಿಸಿದರೂ ನೀನು ಏಕಾಕಿ ಎಂದು ಭಾವಿಸಬೇಕಾಗಿಲ್ಲ.'

ಅವರು ಹದಿನಾರು ವರ್ಷದವರಾಗಿದ್ದಾಗ ಒಂದು ದಿನ ಹಿಮಾಲಯದಲ್ಲಿನ ತಮ್ಮ ಗುಹೆಯ ಮುಂಭಾಗದಲ್ಲಿ ನಿಂತು ತಮ್ಮ ಗುರುಗಳಿಗೆ ಏಕಾಂತ ಭಂಗವಾಗದಂತೆ ನೋಡಿಕೊಳ್ಳುತ್ತಿರುತ್ತಾರೆ. ಆಗ ಒಬ್ಬ ಅರಸನು ತನ್ನ ಅಂಗರಕ್ಷಕರೊಡನೆ ಬಂದು ಗುರುಗಳ ದರ್ಶನ ಮಾಡಬೇಕಾಗಿ ಹೇಳುತ್ತಾನೆ. ಹಿಂದೆ ಕೆಲಸಲ ಇದೇ ರೀತಿಯ ಸಂದರ್ಭಗಳಲ್ಲಿ ಗುರುಗಳನ್ನು, 'ಈ ಶ್ರೀಮಂತ ಜನ ದೂರದೂರುಗಳಿಂದ ಬರುತ್ತಾರೆ. ಅವರಿಗೆ ಭೇಟಿ ನೀಡುವುದಿಲ್ಲ ಎಂದು ಹೇಳ್ತೀರಿ. ಇದು ನ್ಯಾಯವೇ?' ಎಂದು ಕೇಳಿದಾಗ ಗುರುಗಳು, 'ನನ್ನೊಳಗಿನ ಗೆಳೆಯನ ಜೊತೆ ಆನಂದವಾಗಿದ್ದೇನೆ. ಈ ಜನಗಳನ್ನು ನಾನ್ಯಾಕೆ ಕಾಣಬೇಕು? ಅವರು ನಿಜವಾದ ಭಕ್ತರಲ್ಲ. ಅವರಿಗೆ ಪ್ರಾಪಂಚಿಕ ಲಾಭ ಬೇಕು. ಒಬ್ಬನಿಗೆ ಸಂತಾನ ಬೇಕು. ಮತ್ತೊಬ್ಬನಿಗೆ ಉನ್ನತ ಪದವಿ ಬೇಕು. ಆಧ್ಯಾತ್ಮಿಕ ವಿಚಾರ ಯಾರಿಗೂ ಬೇಕಿಲ್ಲ. ಇಂಥವರನ್ನು ಕಾಣಬೇಕೆಂದು ಏಕೆ ಕೇಳ್ತಿದೀಯ?' ಎಂದು ನಕ್ಕು ನುಡಿದಿರುತ್ತಾರೆ. ಅದರಿಂದಾಗಿ ಅರಸನಿಗೆ ಭೇಟಿಯಾಗಲು ಅವಕಾಶ ನೀಡುವುದಿಲ್ಲ. ಅರಸನು ಅನೇಕ ಸಲ ಬಂದು ಹೋದರೂ ಗುರುಗಳನ್ನು ಕಾಣಲು ಯಾರನ್ನೂ ಬಿಡುತ್ತಿರಲಿಲ್ಲವಾದ್ದರಿಂದ ಉಪಯೋಗವಾಗುವುದಿಲ್ಲ. ಆಳುವ ಅರಸನಿಗೆ ತನ್ನ ಪದವಿಯ ಪರಿಗಣನೆಗೆ ಇಲ್ಲಿ ಆಸ್ಪದವಿಲ್ಲವೆಂದು ಕೊನೆಗೆ ಮನವರಿಕೆಯಾಗಿ ಸ್ವಭಾವ ಪರಿವರ್ತನೆಯಾಗಿ ಬಂದು ವಿನಯದಿಂದ ಬೇಡಿಕೊಳ್ಳುತ್ತಾನೆ. ಆಗ ಗುರುಗಳ ಬಳಿಗೆ ಕರೆದುಕೊಂಡು ಹೋದಾಗ ಅರಸನು ತನ್ನ ವಿನಯ ಶೀಲತೆಯನ್ನೂ ಹಾಗೂ ಮೈಗೂಡಿಸಿಕೊಂಡ ಪಾಶ್ಚಾತ್ಯ ರೀತಿಯ ನಡಾವಳಿಗಳನ್ನು ಪ್ರದರ್ಶಿಸಬಯಸಿ, 'ಸ್ವಾಮೀಜಿ, ತಾವು ಏಕಾಕಿತನವನ್ನು ಅನುಭವಿಸುತ್ತಿರುವಂತೆ ತೋರುತ್ತಿದೆ ಎನ್ನುತ್ತಾನೆ.'

ಅದಕ್ಕೆ ಗುರುಗಳು ಹೀಗೆ ಹೇಳುತ್ತಾರೆ, 'ಹೌದು, ನೀನು ಬಂದಿದ್ದೀಯಲ್ಲ ಅದರಿಂದಾಗಿ ಏಕಾಕಿತನವನ್ನು ಅನುಭವಿಸುತ್ತಿದ್ದೇನೆ. ನೀನು ಬರೋದಕ್ಕೆ ಮುಂಚೆ ನನ್ನೊಳಗಿನ ಆತ್ಮಸಖನ ಸಾಹಚರ್ಯ ಸುಖವನ್ನು ಅನುಭವಿಸುತ್ತಿದ್ದೆ. ನೀನು ಬಂದಿರುವುದರಿಂದ ಈಗ ನಾನು ಏಕಾಕಿ.'

ಈ ಘಟನೆಯನ್ನು ವಿವರಿಸಿ ಸ್ವಾಮಿ ರಾಮರವರು ಅದನ್ನು ಈ ರೀತಿಯಾಗಿ ವಿಶ್ಲೇಷಿಸುತ್ತಾರೆ, 'ನಿಜವಾಗಿಯೂ ಆತ್ಮಸಖ್ಯ ಎಲ್ಲ ಬಾಂಧವ್ಯಗಳಿಗಿಂತಲೂ ಮಿಗಿಲಾದದ್ದು. ತನ್ನೊಳಗಿನ ಆತ್ಮಸುಖವನ್ನು ಅನುಭವಿಸಬಲ್ಲವನು ಯಾವತ್ತೂ ಏಕಾಕಿಯಲ್ಲ. ನಮ್ಮನ್ನು ಏಕಾಕಿಯಾಗಿ ರೂಪಿಸುವವರು ಯಾರು? ನಮ್ಮನ್ನು ತಿಳಿದವರು ಹಾಗೂ ಪ್ರೀತಿಸುವವರೆಂದು ವಾದಿಸುವವರು ಅಥವಾ ನಮ್ಮಿಂದ ಪ್ರೀತಿಸಲ್ಪಡುವವರು ನಮ್ಮಲ್ಲಿ ಏಕಾಕಿತನವನ್ನು ಸೃಷ್ಟಿಸುವುದೇ ಅಲ್ಲದೇ ನಮ್ಮನ್ನು ಪರಾವಲಂಬಿಗಳನ್ನಾಗಿ ಮಾಡಿಬಿಡುತ್ತಾರೆ.ಆಂತರ್ಯದ ಶಾಶ್ವತ ಗೆಳೆಯನನ್ನು ನಾವು ಮರೆಯುತ್ತೇವೆ. ನಮ್ಮ ನೈಜ ಸ್ಥಿತಿಯನ್ನು ಅರ್ಥಮಾಡಿಕೊಂಡರೆ ನಾವು ಬಾಹ್ಯಾವಲಂಬಿಗಳಾಗುವುದಿಲ್ಲ. ಬಾಹ್ಯ ಸಂಪರ್ಕಗಳ ಅವಲಂಬನೆಯು ಅಜ್ಞಾನವಾಗಿದ್ದು ಇದನ್ನು ಹೊರದೂಡಬೇಕು. ಬಾಂಧವ್ಯ ಮತ್ತು ಜೀವನ ಪರಸ್ಪರ ಪರ್ಯಾಯವಾದವು ಹಾಗೂ ಒಂದನ್ನು ಬಿಟ್ಟು ಇನ್ನೊಂದಿಲ್ಲ. ಆಂತರ್ಯದ ಗೆಳೆಯನನ್ನು ಅರಿತವರು ಎಲ್ಲರನ್ನೂ ಪ್ರೀತಿಸುತ್ತಾರೆ ಹಾಗೂ ಪರಾವಲಂಬಿಗಳಾಗಿರುವುದಿಲ್ಲ. ಅವರು ಯಾವತ್ತೂ ಏಕಾಕಿಗಳಲ್ಲ. ಏಕಾಕಿತನ ಒಂದು ಜಾಡ್ಯ. ಒಂಟಿಯಿದ್ದು ಆನಂದವಾಗಿರುವುದೆಂದರೆ ಪರಮಸತ್ಯದ ನಿರಂತರ ಸಾನಿಧ್ಯದ ನಿರಂತರ ಅರಿವಿನ ಸುಖವನ್ನು ಅನುಭವಿಸುವುದು ಎಂದು ಅರ್ಥ.'

ಅರಸನು ಈ ಬೋಧೆಯನ್ನು ಕೇಳಿದ ನಂತರ ಅದರ ತಿರುಳನ್ನು ಮನನ ಮಾಡಿ ಧ್ಯಾನ ಸಾಧನೆಯಲ್ಲಿ ತೊಡಗಿದ. ಏಕಾಕಿತನವೆಂಬ ಸ್ವಕಲ್ಪಿತ ಸಂಕಟದಿಂದ ಪ್ರತಿಯೊಬ್ಬರೂ ಬಿಡುಗಡೆ ಪಡೆಯುವುದು ಹಾಗೂ ಜೀವನಾನಂದವನ್ನು ಅನುಭವಿಸುವುದು ಸಾಧ್ಯ ಎಂಬುದನ್ನು ಮನವರಿಕೆ ಮಾಡಿಕೊಂಡ.

ಜಿಡ್ಡು ಕೃಷ್ಣಮೂರ್ತಿಯವರು ಏಕಾಕಿತನ (ಒಂಟಿತನ) ಮತ್ತು ಏಕಾಂತಗಳ ಬಗೆಗಿನ ವ್ಯತ್ಯಾಸವನ್ನು ಬಹಳ ಚೆನ್ನಾಗಿ ಮನವರಿಕೆ ಮಾಡಿಕೊಡುತ್ತಾ ಹೀಗೆ ತಿಳಿಸುತ್ತಾರೆ, 'ಒಂಟಿತನವೆಂದರೆ ಏಕಾಂತವಲ್ಲ. ಆದರೆ ಏಕಾಂತವಾಗಿರಬೇಕಾದರೆ ಒಂಟಿತನವನ್ನು ದಾಟಿ ಹೋಗಬೇಕು. ಒಂಟಿತನವನ್ನು ಬಲ್ಲವನಿಗೆ ಏಕಾಂತದ ಅರಿವು ಇರುವುದಿಲ್ಲ. ನಿಮಗೆ ಏಕಾಂತದ ಸ್ಥಿತಿ ಗೊತ್ತೆ? ನಮ್ಮ ಮನಸ್ಸುಗಳು ಏಕಾಂತವನ್ನು ಅನುಭವಿಸುವಷ್ಟು ಒಂದುತನವನ್ನು ಪಡೆದಿಲ್ಲ. ಪ್ರತ್ಯೇಕತೆಗಳನ್ನು ಹುಟ್ಟಿಸುವುದೇ ಮನಸ್ಸಿನ ಪ್ರತಿಕ್ರಿಯೆ. ಪ್ರತ್ಯೇಕತೆಗಳನ್ನು ಹುಟ್ಟಿಸಬಲ್ಲಂತಹದ್ದು ಒಂಟಿತನವನ್ನು ಮಾತ್ರ ಅರಿಯಬಲ್ಲದು.

ಏಕಾಂತಕ್ಕೆ ಒಂದು ಸೌಂದರ್ಯವಿದ್ದರೆ ಒಂಟಿತನಕ್ಕೆ ಬೇರೆಯದೇ ಅರ್ಥವಿದೆ. ಏಕಾಂತವಾಗಿರುವುದೇ ಬೇರೆ. ಒಂಟಿಯಾಗಿರುವುದೇ ಬೇರೆ. ದುರಾಸೆ, ಮಹತ್ವಾಕಾಂಕ್ಷೆ, ಉದ್ಧಟತನ, ಸಾಧನೆ, ಅಂತಸ್ತುಗಳ ಸಾಮಾಜಿಕ ವಿನ್ಯಾಸದಿಂದ ಮನುಷ್ಯ ಬಿಡುಗಡೆಯನ್ನು ಪಡೆದಾಗ ಸಂಪೂರ್ಣವಾಗಿ ಏಕಾಂಗಿಯಾಗಿರುತ್ತಾನೆ. ಅದರ ಅರ್ಥವೇ ಬೇರೆ. ಅದು ಒಂಟಿತನವಲ್ಲ. ಏಕಾಂತದಲ್ಲಿ ಚೆಲುವಿದೆ, ಅಪಾರ ಶಕ್ತಿಯಿದೆ.'

ನಮಗೆ ಎಲ್ಲಾ ಸಂಪತ್ತುಗಳೂ, ಸೌಲಭ್ಯಗಳೂ ಇದ್ದರೂ ಕೆಲವೊಮ್ಮೆ ಏಕಾಕಿತನವು ನಮ್ಮನ್ನು ಕಾಡಬಹುದು. ನಾವು ಏನು? ನಮ್ಮ ಮೂಲ ಸತ್ವವೇನು? ಎನ್ನುವುದನ್ನು ಅರಿಯುವ ಪ್ರಯತ್ನವನ್ನು ನಡೆಸಿ ಕಾಡುವ ಏಕಾಕಿತನವನ್ನು ದಾಟಿ ಎಂದರೆ ಮೀರಿ ಬೆಳೆದು ಅಪಾರ ಶಕ್ತಿಯನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಏಕಾಂತದ ಚೆಲುವನ್ನು ಆಸ್ವಾಧಿಸುವವರಾಗೋಣ.

10 comments:

 1. ನಾವು ಬೇರೆ ,ಪ್ರಪಂಚದ ಜೀವಿಗಳೆಲ್ಲಾ ಬೇರೆ ಎಂದು ಕೊಂಡಿರುವುದರಿಂದ ಮತ್ತು ನಮಗೆ ಸಂತಸ ಹೊರಗಿನ ವಸ್ತುಗಳಿಂದ ಮತ್ತು ವ್ಯಕ್ತಿಗಳಿಂದ ಬರುತ್ತದೆ ಎಂದು ಬಲವಾಗಿ ನಂಬಿಕೊಂಡಿರುವುದರಿಂದ ಈ ಒಂಟಿತನ ಕಾಡುತ್ತದೆ.ಒಮ್ಮೆ ಸತ್ಯದ ಅರಿವಾದರೆ ಒಂಟಿತನ ಇರದು.ಆದರೆ ಅದಕ್ಕೆ ಸಾಧನೆ ಬೇಕು.ಒಳ್ಳೆಯ ಆಧ್ಯಾತ್ಮಿಕ ಬರಹ.ನಮಸ್ಕಾರ.

  ReplyDelete
 2. ಉತ್ತಮ ಲೇಖನ. ಏಕಾಂತಂದ ಮಹತ್ವವನ್ನು ಪಕ್ಕದಲ್ಲಿ ಕುಳಿತು ಹೇಳಿದಂತಿದೆ ನಿಮ್ಮ ಲೇಖನ.

  ReplyDelete
 3. ಏಕಾ೦ತದ ಸೌ೦ದರ್ಯವನ್ನು ಆಸ್ವಾಧಿಸುವ ಬಗೆಗಿನ ವಿಶ್ಲೇಷಣೆ ತು೦ಬಾ ಚೆನ್ನಾಗಿ ಮೂಡಿ ಬ೦ದಿದೆ. ಆಭಿನ೦ದನೆಗಳು ಮೇಡ೦.

  ಅನ೦ತ್

  ReplyDelete
 4. ಏಕಾಕಿತನ ಹಾಗು ಏಕಾಂತದ ವ್ಯತ್ಯಾಸಗಳನ್ನು ಬಹು ಸುಂದರವಾಗಿ ಬಿಡಿಸಿ ಹೇಳಿದ್ದೀರಿ. ಧನ್ಯವಾದಗಳು.

  ReplyDelete
 5. ಅದೆಷ್ಟು ಪುಸ್ತಕಗಳನ್ನು ಓದ್ತೀರಿ ಮೇಡಂ ನೀವು? ಲೇಖನ ಚೆನ್ನಾಗಿ ಮೂಡಿಬಂದಿದೆ. ಅಭಿನಂದನೆಗಳು.

  ReplyDelete
 6. ಏಕಾಂತ ಹಾಗು ಒಂಟಿತನದ ನಡುವಿನ ವ್ಯತ್ಯಾಸ ಅರಿತು ಬಹಳ ಸಂತೋಷವಾಯಿತು! ನಿಮ್ಮ ಲೇಖನಗಳನ್ನು ಓದುವುದೇ ಒಂದು ವಿಶಿಷ್ಟ ಅನುಭವ! ತುಂಬಾ ಚೆನ್ನಾಗಿದೆ.. ಮಲಗಿರುವ ಅಙ್ಞಾನದ ಅಂತರಂಗವನ್ನು ತಟ್ಟಿ ಎಬ್ಬಿಸುತ್ತದೆ ನಿಮ್ಮ ಲೇಖನಗಳು.

  ReplyDelete
 7. 'ಏಕಾಕಿತನ'ದ ಬಗ್ಗೆ ಆತ್ಮೀಯವಾಗಿ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. ಬರಹದ ಬಗೆಗಿನ ಮೆಚ್ಚುಗೆ ಎಲ್ಲವೂ ಸ್ವಾಮಿ ರಾಮ ಅವರಿಗೆ ಸಲ್ಲುತ್ತದೆ. ವ೦ದನೆಗಳು. ಬರುತ್ತಿರಿ.

  ReplyDelete
 8. ನಿಜ ಏಕಾಂತವಾಗಿರುವುದೇ ಬೇರೆ. ಒಂಟಿಯಾಗಿರುವುದೇ ಬೇರೆ, ಮಾಹಿತಿಗಾಗಿ ಧನ್ಯವಾದಗಳು ...

  ReplyDelete
 9. eಏಕಾಂತದ ಬಗ್ಗೆ ತುಂಬಾ ಅರಿವನ್ನು ಮೂಡಿಸಿತು ತಮ್ಮೀ ಲೇಖನ...

  ReplyDelete