Sunday, August 7, 2011

ಮನದ ಅಂಗಳದಿ.........೫೨. ’ಹೂ’ ಮನ

ಆ ದಿನ ಬೆಳಿಗ್ಗೆ ಮನೆಯಿಂದ ಆಚೆಗೆ ಕಾಲಿಡುವಾಗಲೇ ಗೇಟ್ ಬಳಿ ಒಬ್ಬಾಕೆ ಬಂದು,

"ಅಕ್ಕಾ, ನಂಗೊಂದು ಹೂ ಕೊಡಿ," ಎಂದು ಕೇಳಿದಳು.

"ಯಾವ ಹೂ?" ಎಂದೆ.

ನಮ್ಮ ಮನೆಯ ಮುಂಭಾಗದಲ್ಲಿ ಬೆಳೆಸಿ(ದಿ)ರುವ ಹೂಗಿಡಗಳು ಸಾಕಷ್ಟು ಹೂ ಬಿಡುತ್ತಿವೆ. ಆಕೆ ತಿಳಿನೇರಳೆ ಬಣ್ಣದ ಅನೇಕ ಹೂಗಳನ್ನು ಬಿಟ್ಟಿದ್ದ (ಸಾಮಾನ್ಯವಾಗಿ ಅದಕ್ಕೆ ಸರಸ್ವತಿಕಲರ್ ಎನ್ನುತ್ತಾರೆ!)ಬೆಟ್ಟತಾವರೆಯ ಗಿಡದ ಕಡೆ ತೋರಿಸುತ್ತಾ,

"ಆ ಹೂ ಕೊಡಿ. ಆ ಬಣ್ಣ ನಂಗೆ ತುಂಬಾ ಇಷ್ಟ." ಎಂದಳು.

"ನಾವು ಗಿಡದಿಂದ ಹೂ ಬಿಡಿಸಲ್ಲ. ಆ ಗಿಡ ಎಷ್ಟು ಚೆನ್ನಾಗಿ ಕಾಣ್ತಿದೆ ನೋಡಮ್ಮ," ಎಂದೆ. ಆಕೆ ಒಪ್ಪಲು ಸಿದ್ಧಳಿರಲಿಲ್ಲ.

"ದುಡ್ಡು ಕೊಡ್ತೀನಿ ಕೊಡಿ,"ಎಂದು ಪೀಡಿಸಲಾರಂಭಿಸಿದಳು.

"ನಾವು ಹೂ ಮಾರಲ್ಲ" ಎಂದರೂ ಕೇಳಲಿಲ್ಲ.

"ಅಷ್ಟು ದೊಡ್ಡ ಹೂ ಮುಡಿಯಲು ಆಗಲ್ಲ" ಎಂದರೂ ಒಪ್ಪುವಂತಿಲ್ಲ.

"ಆ ಹೂ ಮುಡಿದರೆ ಸಂಜೆಗೆ ತೆಗೆದು ಎಸೀತೀರಿ, ಆದರೆ ಗಿಡದಲ್ಲೇ ಇದ್ದರೆ ೪-೬ ದಿನ ಇರುತ್ತೆ," ಎನ್ನುವ ಮಾತು ಆಕೆಗೆ ರುಚಿಸಲೇ ಇಲ್ಲ. ಎದ್ದ ತಕ್ಷಣ ಉಂಟಾದ ಈ ಸಮಸ್ಯೆಯಿಂದ ಪಾರಾಗುವ ಮಾರ್ಗವೇ ತಿಳಿಯದೇ ಕಡೆಗೆ ಆಕೆ ತೋರಿಸಿದ ಹೂವನ್ನು ಭಾರವಾದ ಮನಸ್ಸಿನಿಂದ ಗಿಡದಿಂದ ಬಿಡಿಸಿ ಕೊಡಲೇಬೇಕಾಯಿತು.

ಚಿಕ್ಕವಳಿದ್ದಾಗ...... ನಮ್ಮ ಹಳ್ಳಿಯ ಮನೆಯ ಹಿತ್ತಲಿನಲ್ಲಿ ಯಾವಾಗಲೂ ಹೂಗಳ ಸುಗ್ಗಿಯೋಸುಗ್ಗಿ. ಅದರಲ್ಲೂ ಬೇಸಿಗೆಯಕಾಲ ಬಂತೆಂದರೆ ಮಲ್ಲಿಗೆಗಳ ಸಂಭ್ರಮ. ದುಂಡುಮಲ್ಲಿಗೆ, ಸೂಜಿಮಲ್ಲಿಗೆ, ಇರುವಂತಿಗೆ, ಸುತ್ತುಮಲ್ಲಿಗೆ, ನಿತ್ಯಮಲ್ಲಿಗೆ(ಇದಂತೂ ಅನಿತ್ಯವೇ ಆಗಿತ್ತು, ಸಾಮಾನ್ಯವಾಗಿ ಹೂವನ್ನೇ ಬಿಡುತ್ತಿರಲಿಲ್ಲ!) ಜಾಜಿ, ಸಾಯಂಕಾಲ ಮಾತ್ರ ಹೂ ಬಿಡುವ ಸಂಜೆಮಲ್ಲಿಗೆ...ಎಲ್ಲವೂ ಇದ್ದವು. ಮಲ್ಲಿಗೆ ಹೂ ಬಿಡಲು ಪ್ರಾರಂಭಿಸುವ ವೇಳೆಗೇ ನಮಗೆ ಬೇಸಿಗೆ ರಜೆಯೂ ಬರುತ್ತಿದ್ದುದರಿಂದ, ಬೆಳಗಿನಿಂದ ರಾತ್ರಿಯವರೆಗೂ ಹೂಗಳದೇ ಒಡನಾಟ! ನಮ್ಮ ಸೋದರತ್ತೆಯ ನಿರ್ದೇಶನದಲ್ಲಿ ಸಂಜೆ ಮೊಗ್ಗನ್ನು ಬಿಡಿಸಿ, ದಂಡೆ ಕಟ್ಟಿ ಮುಡಿಯುವ ಸಡಗರ. ಇದರ ಜೊತೆಗೇ ಅಕ್ಕ ನನ್ನ ಮೇಲೆ ಮೊಗ್ಗಿನ ಜಡೆ ಹಾಕುವ ಪ್ರಯೋಗವನ್ನೂ ನಡೆಸುತ್ತಿದ್ದಳು! ಬೆಳಗಾದ ತಕ್ಷಣವೇ ಮಲ್ಲಿಗೆಗಳನ್ನು ಹಬ್ಬಿಸಿದ್ದ ಕೊಂಡಮಾವಿನ ಮರವೇರಿ ಹೂ ಬಿಡಿಸುವ ಕಾಯಕ. ಅಕ್ಕನದು ಸೂಜಿಮಲ್ಲಿಗೆ, ನನ್ನದು ದುಂಡುಮಲ್ಲಿಗೆ. ಬಿಡಿಸಿದ ಹೂಗಳನ್ನು ಹಾರಕಟ್ಟಿ ಮನೆಯಲ್ಲಿದ್ದ ದೇವರ ಪಟಗಳಿಗೆಲ್ಲಾ ಹಾಕುತ್ತಿದ್ದರು. ಅಕ್ಕಪಕ್ಕದ ಮನೆಗಳಿಗೆಲ್ಲಾ ಬುಟ್ಟಿಯಲ್ಲಿ ಹೂತುಂಬಿ ಕೊಟ್ಟು ಬರಲು ಕಳಿಸುತ್ತಿದ್ದರು. ಮನೆಯ ತುಂಬಾ ಹೂವಿನದೇ ಪರಿಮಳ.

ಚಿಕ್ಕಂದಿನಲ್ಲಿ ಸದಾ ಹೂಗಳ ಒಡನಾಟದಲ್ಲಿದ್ದು, ಹೂಗಳಿರುವುದೇ ಅಲಂಕರಿಸಿಕೊಳ್ಳಲು(ಮುಡಿಯಲು), ದೇವರಿಗೆ ಪೂಜೆಮಾಡಲು ಎಂಬಂತೆ ಬೆಳೆದಿದ್ದ ನನಗೆ ಕ್ರಮೇಣ ಗಿಡದಿಂದ ಹೂವನ್ನು ಬಿಡಿಸುವುದು ತುಂಬಾ ಹಿಂಸೆಯ, ಸ್ವಾರ್ಥ ಪೂರ್ಣ ಕಾರ್ಯ ಎನಿಸಲಾರಂಭಿಸಿತು. ಹೂವಿನ ಸಾರ್ಥಕ್ಯ ಕೇವಲ ಇಷ್ಟರಲ್ಲೇ ಅಡಗಿದೆಯೆ? ಎಂಬ ಪ್ರಶ್ನೆಗೆ ಉತ್ತರವೆಂಬಂತೆ ಈ 'ಹನಿ’ ಮೂಡಿತು:

'ಆ ಹೂವು

ಗಿಡದಲೇ ಇರಲಿ

ಬಿಡು ಗೆಳೆಯ,

ಹೆಣ್ಣಿನ ಮುಡಿಯ

ದೇವರ ಅಡಿಯ

ಸೇರಲೇ ಬೇಕೆಂಬ

ನಿಯಮವೇಕೆ?

ಗಿಡದಲೇ ಇದ್ದು

ಬುಡ ಸೇರಿದರೂ

ಸಾರ್ಥಕವಾಗದೇಕೆ?’

ಹೂವನ್ನು ಮುಡಿದಿದ್ದರೂ ಒಮ್ಮೊಮ್ಮೆ ಆ ನೆನಪೇ ಇರುವುದಿಲ್ಲ!

'ಮುಡಿಗೇರಿದ

ಅಂದದ ಹೂವಿನ

ಅರಿವು

ಕಂಪು ಸೂಸಿದಾಗ ಮಾತ್ರ!’

ಸ್ವಾಮಿ ರಾಮ ಅವರು ತಮ್ಮ 'ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ’ ತಮಗೆ ಸುಂದರವೆನಿಸಿದ ಅಪರೂಪದ ಹಿಮಕಮಲದೊಡನೆ ನಡೆಸಿದ ಸಂಭಾಷಣೆ, ಅವನ್ನು ತಮ್ಮ ಗುರುಗಳಿಗೆ ಅರ್ಪಿಸಲು ತೆಗೆದುಕೊಂಡು ಹೋದ ಸಂದರ್ಭದಿಂದ ತಮಗುಂಟಾದ ಅರಿವನ್ನು ಬಹಳ ಸುಂದರವಾಗಿ ವಿವರಿಸಿದ್ದಾರೆ:

'ಹಿಮಾಲಯದ ಹೂಗಳಲ್ಲಿ ಅತಿ ಅಪರೂಪದ್ದು ಹಾಗೂ ಪುಷ್ಪರಾಜ ಎಂದು ಕರೆಯಬಹುದಾದದ್ದು ಹಿಮಕಮಲ. ಒಂದುದಿನ ಪರ್ವತಗಳ ಹಾದಿಯಲ್ಲಿ ಸಂಚರಿಸುತ್ತಾಗ ಸಾಸರಿನಷ್ಟು ಅಗಲದ ನೀಲಿ ಬಣ್ಣದ ಒಂದು ಹಿಮಕಮಲವನ್ನು ನೋಡಿದೆ. ಅದು ಎರಡು ಬಂಡೆಗಳ ಸಂದಿಯಲ್ಲಿ ಬೆಳೆದು ಅರಳಿತ್ತು. ಅದರ ಅರ್ಧಭಾಗ ಹಿಮಾವೃತವಾಗಿತ್ತು. ನಾನು ನಿಂತು ನೋಡತೊಡಗಿದೆ. ನನ್ನ ಮನಸ್ಸು ಸಂವಾದದಲ್ಲಿ ತೊಡಗಿತ್ತು, 'ಏಕಾಂಗಿಯಾಗಿ ನೀನು ಇಲ್ಲಿ ಯಾಕಿದ್ದೀಯ? ನಿನ್ನ ಸೌದರ್ಯವು ಆರಾಧನೆಗೆ ಅರ್ಹವಾದದ್ದು. ನಿನ್ನ ಸುಂದರ ದಳಗಳು ಬಿದ್ದು ಮಣ್ಣಾಗಿ ನಿರ್ನಾಮವಾಗುವ ಮುನ್ನ ನಿನ್ನನ್ನು ಯಾರಿಗಾದರೂ ಸಮರ್ಪಿಸಿಕೊಳ್ಳಬೇಕು.'

ನಿಧಾನವಾಗಿ ಸುಳಿದ ಗಾಳಿ ಅದರ ಕಾಂಡವನ್ನು ಸ್ಪರ್ಶಮಾಡಿತು. ಕಮಲ ಅಲುಗಾಡಿತು. ನಿಧಾನವಾಗಿ ನನ್ನತ್ತ ನಸುಬಾಗಿ ಪಿಸುಮಾತಿನಲ್ಲಿ ಹೇಳಿತು, 'ಒಬ್ಬಂಟಿಯಾಗಿರುವುದರಿಂದ ನಾನು ಏಕಾಕಿಯಾಗಿದ್ದೇನೆಂದು ಭಾವಿಸಿದ್ದೀಯೇನು? ಏಕಾಕಿ ಎಂದರೆ ಎಲ್ಲವನ್ನೂ ಒಳಗೊಂಡಿರುವುದು ಎಂದರ್ಥ. ಇಲ್ಲಿನ ಔನ್ನತ್ಯವನ್ನೂ, ನಿರ್ಮಲತೆಯನ್ನೂ,ಆಶ್ರಯವಾಗಿರುವ ಮೇಲಿನ ನೀಲಾಕಾಶದ ಕೊಡೆಯನ್ನೂ, ನಾನು ಅನುಭವಿಸಿ ಆನಂದಿಸುತ್ತೇನೆ.'

ಹೂವನ್ನು ಕೀಳಬಯಸಿ ಇಡೀ ಗಿಡವನ್ನು ಎಬ್ಬಿ ತೆಗೆದು ನನ್ನ ಸ್ವಾಮೀಜಿಯವರಲ್ಲಿಗೆ ತೆಗೆದುಕೊಂಡು ಹೋಗಲು ನಿರ್ಧರಿಸಿದೆ. ನನ್ನ ಸ್ವಂತ ಜೀವನವನ್ನು ಈ ಕಮಲ ಪುಷ್ಪದೊಡನೆ ಹೋಲಿಸಿಕೊಂಡೆ. ಬೇಜವಾಬ್ಧಾರಿಯುತ ಆನಂದೋತ್ಸಾಹದ ಹುಡುಗನಂತೆ ಹೇಳಿದೆ,'ನಿನ್ನ ಕೋಮಲದಳಗಳನ್ನು ನಾನು ಹೊಸಕಿಬಿಟ್ಟರೆ ನಿನ್ನ ಗತಿ ಏನು?'

ಕಮಲ ಉತ್ತರ ನೀಡಿತು, 'ನನ್ನ ಆಹ್ಲಾದಕರ ಪರಿಮಳ ಎಲ್ಲಾ ಕಡೆ ಹರಡುತ್ತದೆ. ನನ್ನ ಜೀವಿತದ ಉದ್ದೇಶ ಸಾರ್ಥಕವಾಗುತ್ತದೆ. ಇದರಿಂದಾಗಿ ನಾನು ಸಂತೋಷಪಡುತ್ತೇನೆ.'

ಬೇರುಗಳ ಸಮೇತ ಕಮಲಪುಷ್ಪವನ್ನು ಕಿತ್ತುಕೊಂಡು ಅದನ್ನು ನನ್ನ ಗುರುಗಳಿಗೆಂದು ತೆಗೆದುಕೊಂಡು ಹೋದೆ.ಆದರೆ ಅವರು ಇದರಿಂದ ಸಂಪ್ರೀತರಾಗಲಿಲ್ಲ. ಪೂಜೆಯ ಸಲುವಾಗಿ ಕಾಡಿನಿಂದ ಪುಷ್ಪಗಳನ್ನು ಸಂಚಯಿಸಿ ತರಲು ನನಗೆ ಸೂಚನೆ ನೀಡಿದ ಕೆಲವು ಸಂದರ್ಭಗಳ ವಿನಾ ಪುಷ್ಪಗಳನ್ನಾಗಲೀ ಅವುಗಳ ಪರಿಮಳವನ್ನಾಗಲೀ ಉಪಯೋಗಿಸುವುದನ್ನು ಅವರು ಎಂದೂ ಇಷ್ಟಪಡುತ್ತಿರಲಿಲ್ಲ.ಅದೇ ಕೊನೆ. ಆನಂತರ ನಾನು ಯಾವತ್ತೂ ಒಂದು ಹೂವನ್ನೂ ಕೀಳಲಿಲ್ಲ. ಪ್ರಕೃತಿಮಾತೆಯ ತೊಡೆಯಿಂದ ಆಕೆಯ ಕಂದಮ್ಮನನ್ನು ಅಪಹರಿಸಿ ಆಕೆಯನ್ನು ಘಾಸಿಗೊಳಿಸಿದೆ ಎಂದು ನಾನು ಪರಿತಪಿಸಿದೆ. ನಾನು ಮತ್ತೆ ಯಾವತ್ತೂ ಹೂವನ್ನು ಕೀಲಲಿಲ್ಲ. ಸೌಂದರ್ಯ ಇರುವುದು ಉಪಭೋಗಕ್ಕಾಗಿ ಅಲ್ಲ. ಸ್ವಾರ್ಥಕ್ಕಾಗಿ ಸ್ವಾಧೀನಪಡಿಸಿಕೊಳ್ಳುವುದಕ್ಕೂ ಅಲ್ಲ. ಅದು ಇರುವುದು ನೋಡಿ ಆನಂದಿಸುವುದಕ್ಕೆ. ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸತೊಡಗಿದರೆ ಸೌಂದರ್ಯಪ್ರಜ್ಞೆಯು ಬೆಳೆಯುತ್ತದೆ.’

14 comments:

  1. ಸರಿಯಾದ ವಿಚಾರವನ್ನು ಹೇಳಿದ್ದೀರಿ. ನಿಮ್ಮ ಎದೆಯಾಳದಿಂದ ಉದ್ಭವಿಸಿದ ಹನಿಗವನವೂ ಸೊಗಸಾಗಿದೆ. ನಮ್ಮ ಮನೆಯಲ್ಲಿ ಕೆಲವು ಹೂವಿನ ಗಿಡಗಳು/ಬಳ್ಳಿಗಳು ಇವೆ. ನಾನು ಯಾವ ಕಾರಣಕ್ಕೂ ಹೂ ಹರಿಯಲು ಇಷ್ಟಪಡುವದಿಲ್ಲ. ಆದರೆ ನಮ್ಮ ಪಕ್ಕದ ಮನೆಯವರು ‘ದೇವರ ಪೂಜೆಗೆ ಬೇಕ್ರೀ’ ಎಂದು ದಬಾಯಿಸುತ್ತ, ಎಲ್ಲ ಹೂವುಗಳನ್ನು ಕಿತ್ತುಕೊಂಡು ಹೋಗುತ್ತಾರೆ. ದಾಕ್ಷಿಣ್ಯಕ್ಕಾಗಿ ಸುಮ್ಮನಿರಬೇಕಾಗಿದೆ.

    ReplyDelete
  2. ಸರಳವಾಗಿ ನಿರೂಪಿಸುವ ಕಲೆ ನಿಮಗೆ ಸಿದ್ದಿಸಿದೆ. ಸೂಪರ್ ಮೇಡಂ

    ReplyDelete
  3. @ ಸುನಾಥ್ ರವರೆ,
    ನಿಮ್ಮ ಪಕ್ಕದ ಮನೆಯವರ ದಿಟ್ಟತನದಿ೦ದ(ಒರಟು) ಹೂವಿನ ಗಿಡಗಳು ಬರಿದಾಗುತ್ತಿರುವುದನ್ನು ತಿಳಿದು ಬೇಸರವಾಯಿತು. ನಾವು ಎಲ್ಲಿಯವರೆಗೆ ದಾಕ್ಷಿಣ್ಯ ಪರರಾಗಿರುತ್ತೆವೆಯೋ ಅಲ್ಲಿಯವರೆಗೂ ಈ ತೊ೦ದರೆ ತಪ್ಪಿದ್ದಲ್ಲ. ಲೇಖನವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete
  4. @ ಬದರಿನಾಥ್ ರವರೆ,
    ಈ ಲೇಖನಗಳಲ್ಲಿ ನನ್ನ ಪಾತ್ರ ಬಹಳ ಕಡಿಮೆ. ನಿರೂಪಣಾ ಶೈಲಿಯನ್ನು ಇಷ್ಟಪಟ್ಟಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete
  5. vaah esTu chennagide baraha.
    nanagU asTe hUgaLu giDa maragaLa mEle chenna.
    kavana antoo tumbaa isTaa aaytu
    dhanyavaadagaLu
    :-)
    malathi S

    ReplyDelete
  6. ಎಂದಿನಂತೆ ಮತ್ತೊಂದು ಸುಂದರ ಲೇಖನ!ಅಭಿನಂದನೆಗಳು ಮೇಡಂ.

    ReplyDelete
  7. @ ಮಾಲತಿಯವರೆ,
    ಹೂವುಗಳು ಮರಗಿಡಗಳ ಮೇಲೆ ಇರಲಿ ಎ೦ದು ಸಹಮತ ವ್ಯಕ್ತಪಡಿಸಿ ಇಷ್ಟಪಟ್ಟಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete
  8. @ ಕೃಷ್ಣಮೂರ್ತಿಯವರೆ,
    ಲೇಖನವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕಾಗಿ ವ೦ದನೆಗಳು. ಬರುತ್ತಿರಿ.

    ReplyDelete
  9. ಸೌಂದರ್ಯವನ್ನು ಆನಂದಿಸಿ..
    ಆರಾಧಿಸಿ..
    ಬಯಸಿ ಹಾಳು ಮಾಡಬಾರದು..

    ಹೂವು ಗಿಡದಲ್ಲಿದ್ದರೇ ಚಂದ.. ಸೊಗಸು..

    ಹೂವಿಗೂ ಒಂದು ಮನಸು.. ಹೃದಯವಿರಬಹುದಲ್ಲವೆ?
    ಕಿತ್ತರೆ ಅದಕ್ಕೂ ನೋವಾಗಬಹುದಲ್ಲವೆ?

    ನೀವು ಹೇಳಿದ್ದು ಜಗತ್ತಿನ ಎಲ್ಲ ಬಗೆಯ ಸ್ವೌಂದರ್ಯಕ್ಕೂ ಅನ್ವಯಿಸುತ್ತದೆ..

    ಪ್ರಕೃತಿ ಕೊಟ್ಟ ಚಂದವನ್ನು ನಾವು ಕಣ್ಣಿನಿಂದ ಅನುಭವಿಸಬೇಕು.. ಬಳ್ಳಾರಿಯನ್ನಾಗಿ ಮಾಡಬಾರದು...

    ತುಂಬ ಸುಂದರವಾಗಿ ತಿಳಿಸಿದ್ದೀರಿ... ಧನ್ಯವಾದಗಳು..

    ReplyDelete
  10. ಸುಂದರ ವಿಚಾರ. ಸಾಧಕ ಪಂ.ಚತುರ್ವೇದಿಯವರು (ಈಗ ಅವರಿಗೆ 115 ವರ್ಷಗಳು)ಹೇಳುವುದೇನೆಂದರೆ 'ಹೂವು ಕೀಳುವುದು, ಮುಡಿಯುವುದು ಪಾಪದ ಕೆಲಸ'; ಪೂರ್ಣ ಅರಳಿದ ಮತ್ತು ಇನ್ನೇನು ತೊಟ್ಟು ಕಳಚಿ ಬೀಳಲಿರುವ ಹೂವುಗಳನ್ನು ಉಪಯೋಗಿಸಬಹುದೆಂದು ನನ್ನ ವೈಯಕ್ತಿಕ ಅಭಿಪ್ರಾಯ. ಚತುರ್ವೇದಿಯವರ ವಿಚಾರಗಳನ್ನು ತಿಳಿಯಲು ನನ್ನ 'ವೇದಜೀವನ' ತಾಣಕ್ಕೆ ಭೇಟಿ ಕೊಡಬಹುದು. ನಿಮ್ಮ ಬರಹಗಳನ್ನು ನೋಡುತ್ತಿರುತ್ತೇನೆ, ತುಂಬಾ ವಿಚಾರಪರ ಬರಹಗಳಿವೆ. ಧನ್ಯವಾದಗಳು.

    ReplyDelete
  11. ಹೂವಿನ ಸೌಂದರ್ಯ ಗಿಡದಲ್ಲಿ ಇದ್ದರೇನೆ ಚೆಂದ.... ಒಳ್ಳೆಯ ಲೇಖನ ಇಷ್ಟ ಆಯಿತು ಮೇಡಂ...

    ReplyDelete
  12. ಅದ್ಭುತ ಪರಿಕಲ್ಪನೆ... ತಮ್ಮ ಲಹರಿ ಅತ್ಯುನತವಾದದ್ದು...

    ReplyDelete
  13. prabhaamaniyavare,
    hoovannu koydare,
    namma koralanne..
    koydashtu novaaguvudu. sundaravaada,hrudayangamavaada lekhana.dhanyavaadagalu.

    ReplyDelete
  14. ಒಂದು ಸರಳ ವಿಚಾರ ಮನ ಮುಟ್ಟುವಂತೆ ಹೇಳಿದ್ದೀರ..ಬಹುಶ ಹೂವಿನ ಗಿಡ ನೋಡಿದಾಗೆಲ್ಲ ಇನ್ನು ಮುಂದೆ ಈ ಬರವಣಿಗೆ ನೆನಪಾಗುತ್ತೆ..ಅಭಿನಂದನೆ..

    ReplyDelete