Sunday, August 14, 2011

ಮನದ ಅಂಗಳದಿ.........೫೩.ಸಂಬಂಧಗಳು



ಈ ಜಗತ್ತಿನಲ್ಲಿ ಕಣ್ಣುಬಿಡುವ ಮುನ್ನವೇ ನಾವು ಸಂಬಂಧಗಳ ಬಲೆಯೊಳಗೆ ಬಂಧಿತರಾಗಿರುತ್ತೇವೆ. ಅಪ್ಪ-ಅಮ್ಮ, ಅವರಿಗೆ ಸಂಬಂಧಿಸಿದ ಎಲ್ಲಾ ಬಂಧುಗಳೂ ಆಗತಾನೇ ಕಣ್ಣುತೆರೆಯುತ್ತಿರುವ ಕಂದನ ಬಂಧುಗಳೂ ಆಗಿರುತ್ತಾರೆ. ಜೊತೆಗೆ ಅಕ್ಕ-ಅಣ್ಣ, ನಂತರ ತಮ್ಮ-ತಂಗಿ (ಈಗಿನ ಪರಿಸ್ಥಿತಿಯಲ್ಲಿ ಸಾಮಾನ್ಯವಾಗಿ ಯಾರಾದರೂ ಒಬ್ಬರು), ಬೆಳೆದಂತೆ ಗೆಳೆಯ-ಗೆಳತಿಯರು, ಜೀವನಸಂಗಾತಿ, ನಂತರ ಮಕ್ಕಳು, ಮೊಮ್ಮಕ್ಕಳು..... ಹೀಗೆ ಸಂಬಂಧಗಳ ವೃಕ್ಷ ಬೆಳೆಯುತ್ತಲೇ ಹೋಗುತ್ತದೆ. ಈ ಸಂಬಂಧಗಳ ಮಧ್ಯೆ ನಮ್ಮನ್ನು ನಾವು ಸ್ಥಾಪಿಸಿಕೊಳ್ಳುವ, ಗುರುತಿಸಿಕೊಳ್ಳುವ ಕಾರ್ಯವನ್ನು ಅವಿರತವಾಗಿ ನಡೆಸಲಾರಂಭಿಸುತ್ತೇವೆ. ಈ ನಿರಂತರ ಪ್ರಕ್ರಿಯೆಯಲ್ಲಿ ನಮ್ಮನ್ನೇ ನಾವು ಕಳೆದುಕೊಂಡು ಒಬ್ಬ ಅಪರಿಚಿತ ವ್ಯಕ್ತಿಯಾಗಿ ಈ ಜೀವನದ ಪ್ರವಾಹದಲ್ಲಿ ಬೆರೆತುಹೋಗುತ್ತೇವೆ. ಈ ಸಂಬಂಧಗಳು ಎಂದರೇನು? ಕೆಲವೊಮ್ಮೆ ಅವು ಏಕೆ ಅಷ್ಟೊಂದು ಗೋಜಲಾಗಿಬಿಡುತ್ತವೆ? ಸಂಬಂಧಗಳನ್ನು ಹೇಗೆ ನಿರ್ವಹಿಸುವುದು? ಅವುಗಳ ನಡುವೆ ನಮ್ಮನ್ನು ನಾವು ಹೇಗೆ ಉಳಿಸಿಕೊಳ್ಳುವುದು? ಎನ್ನುವ ಪ್ರಶ್ನೆಗಳಿಗೆ ಉತ್ತರವು ಜಿಡ್ಡು ಕೃಷ್ಟಮೂರ್ತಿಯವರು ತಮ್ಮ 'ಅನುದಿನ ಚಿಂತನ'ದಲ್ಲಿ ಹೇಳಿರುವ ಮಾತುಗಳಲ್ಲಿ ದೊರೆಯುವಂತಿದೆ. ಅವುಗಳ ಸಂಕ್ಷಿಪ್ತ ರೂಪ ಹೀಗಿದೆ:
'ನಾನು ಏನು ಎಂಬುದು ನನ್ನ ಸಂಬಂಧಗಳಲ್ಲಿ ವ್ಯಕ್ತವಾಗುತ್ತದೆ. ಅಲ್ಲವೇ? ಸಂಬಂಧವೆನ್ನುವುದು ನನ್ನನ್ನು ನಾನು, ನಾನು ಹೇಗಿದ್ದೇನೆಯೋ ಹಾಗೆ ನೋಡಿಕೊಳ್ಳಬಹುದಾದ ಕನ್ನಡಿಯಂತೆ ಇರುತ್ತದೆ. ಆದರೆ ಆ ಕನ್ನಡಿಯಲ್ಲಿ ಏನು ಕಾಣುವುದೋ ಅದು ನಮಗೆ ಇಷ್ಟವಾಗುವುದಿಲ್ಲ. ನಮಗೆ ಕಂಡದ್ದನ್ನು ನಮಗೆ ಹೇಗೆ ಇಷ್ಟವಿದೆಯೋ ಹಾಗೆ ಕಾಣುವಂತೆ ಮಾಡಲು, ಅಥವಾ ಅಲ್ಲಿ ಕಂಡದ್ದು ಇಷ್ಟವಾಗದಿದ್ದರೆ ಅದನ್ನು ಇಲ್ಲವಾಗುವಂತೆ ಮಾಡಲು, ಪ್ರತಿಬಿಂಬವನ್ನು ತಿದ್ದುವ ಕೆಲಸದಲ್ಲಿ ತೊಡಗುತ್ತೇವೆ. ಅಂದರೆ, ನಮ್ಮ ಸಂಬಂಧದಲ್ಲಿ ಯಾವುದೋ ಅಂಶ, ಯಾವುದೋ ಕ್ರಿಯೆ ನನಗೆ ಇಷ್ಟವಾಗುವುದಿಲ್ಲ.......ನಮಗೆ ಇಷ್ಟವಾಗುವಂತೆ ಸಂಬಂಧವನ್ನು ಶಿಸ್ತಿಗೆ ಒಳಪಡಿಸಲು ಬಯಸುತ್ತೇವೆ......ನನ್ನನ್ನು ನಾನು ಬದಲಾಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಆಗ ಸಂಬಂಧದ ಕ್ಷಣದಲ್ಲಿ ನಾನು ಏನಾಗಿರುತ್ತೇನೆಯೋ ಅದನ್ನು ಅರಿಯಲು ಸಾಧ್ಯವಾಗುವುದಿಲ್ಲ.
ಯಾವುದೇ ಸಂಬಂಧದಲ್ಲಿ ನೋವು ಇದ್ದೇ ಇರುತ್ತದೆ ಎಂದು ದಿನನಿತ್ಯದ ಅನುಭವದಿಂದ ನಾವು ತಿಳಿದಿದ್ದೇವೆ. ಯಾವುದೇ ಸಂಬಂಧದಲ್ಲಿ ಟೆನ್ಷನ್ ಇಲ್ಲದಿದ್ದರೆ ಅದು ಸಂಬಂಧವಾಗಿ ಉಳಿದಿರುವುದಿಲ್ಲ, ಸುಖವಾದ ನಿದ್ರೆಯಂತೆ, ಅಮಲಿನಂತೆ ಇರುತ್ತದೆ.....ನೀವು ಭ್ರಮೆಯನ್ನು ಅರ್ಥಮಾಡಿಕೊಂಡರೆ ಆಗ ಅದನ್ನು ಪಕ್ಕಕ್ಕೆ ಸರಿಸಿ ಸಂಬಂಧವೆಂದರೇನೆಂದು ಅರ್ಥಮಾಡಿಕೊಳ್ಳಲು ಗಮನನೀಡಲು ಸಾಧ್ಯವಾಗುತ್ತದೆ. ಆದರೆ ಸುಭದ್ರತೆಗಾಗಿ ಸಂಬಂಧವನ್ನು ಬಯಸುತ್ತಿದ್ದರೆ ಆಗ ಅದು ನೆಮ್ಮದಿಗಾಗಿ ಹೂಡಿದ ಬಂಡವಾಳವಾಗುತ್ತದೆ, ಭ್ರಮೆಯಾಗುತ್ತದೆ. ಸಂಬಂಧದ ಮಹತ್ವ ಮತ್ತು ಹಿರಿಮೆ ಇರುವುದೇ ಅದರ ಅಸ್ಥಿರತೆಯಲ್ಲಿ, ಅಭದ್ರತೆಯಲ್ಲಿ, ನೀವು ಸುರಕ್ಷಿತ ಸಂಬಂಧವನ್ನು ಬಯಸುತ್ತಾ ಸಂಬಂಧಕ್ರಿಯೆಗೆ ಅಡ್ಡಿಯನ್ನುಂಟುಮಾಡುತ್ತೀರಿ. ಇದರಿಂದ ಬೇರೆಯದೇ ರೀತಿಯ ಕ್ರಿಯೆಗಳು, ದುಃಖಗಳು ಹುಟ್ಟುತ್ತವೆ.
ಸಂಬಂಧಗಳಿಲ್ಲದೇ ಬದುಕಿಲ್ಲ. ಬದುಕು ಎಂದರೇನೇ ಸಂಬಂಧಗಳು ಎಂದರ್ಥ..... ಜಗತ್ತು ಎಂದರೇನೇ ನನ್ನ ಸಂಬಂಧ ಅಥವಾ ಸಂಬಂಧಗಳು ಎಂದು ನಮ್ಮಲ್ಲಿ ಅನೇಕರು ಈ ಸತ್ಯವನ್ನು ತಿಳಿಯುವುದೇ ಇಲ್ಲ. ನನ್ನ ಸಮಸ್ಯೆ ಎಂದರೆ ಸಂಬಂಧದ್ದೇ ಸಮಸ್ಯೆ. ನಾನು ಏನಾಗಿದ್ದೇನೆ? ನಾನು ಏನು ಕಲ್ಪಿಸಿಕೊಂಡಿದ್ದೇನೆ? ಎಂಬುದನ್ನು ಮತ್ತು ನನ್ನನ್ನು ನಾನು ಅರಿಯದಿದ್ದರೆ ಇಡೀ ಸಂಬಂಧವೇ ಬೆಳೆಯುವ ಗೊಂದಲಗಳ ವರ್ತುಲವಾಗುವ ಸಮಸ್ಯೆ. ಅಂದರೆ ಸಂಬಂಧ ಎಂದರೆ ಜನಜಂಗುಳಿಯೊಡನೆ ಇರುವ ಸಂಬಂಧವಲ್ಲ. ನನ್ನ ಕುಟುಂಬ ಮತ್ತು ಗೆಳೆಯರೊಡನೆ ಇರುವ ಸಂಬಂಧಗಳು ಅತ್ಯಂತ ಪ್ರಮುಖವಾಗುತ್ತವೆ. ಈ ಜಗತ್ತು ಎಷ್ಟೇ ಪುಟ್ಟದಾಗಿರಬಹುದು, ನನ್ನ ಹೆಂಡತಿ, ನನ್ನ ಮಕ್ಕಳು, ನನ್ನ ನೆರೆಯವರು ಇವರೊಡನೆ ಇರುವ ಸಂಬಂಧಗಳು ಸೇರಿ ನನ್ನ ಜಗತ್ತು ಆಗಿರುತ್ತದೆ. ವಿಶಾಲವಾದ ಈ ಜಗತ್ತಿನಲ್ಲಿ ಸಣ್ಣ ಪ್ರಮಾಣದಲ್ಲಿ ತೊಡಗಿರುವ, ನಮ್ಮ ಪುಟ್ಟ ಬದುಕಿಗೆ ನಾವೇ ತೇಪೆ ಹಾಕಿಕೊಳ್ಳುವ ಪುಟ್ಟ ಮನುಷ್ಯರಾಗಿರುವುದಕ್ಕೆ ನಾವು ಭಯಪಡುತ್ತೇವೆ...... ?ನಾನು? ಮತ್ತು ?ನೀವು? ಇವೇ ಈ ಸಣ್ಣ ಪ್ರಮಾಣಗಳು. ನನ್ನನ್ನು ನಾನು ಅರ್ಥಮಾಡಿಕೊಂಡಾಗ ನೀವೂ ನನಗೆ ಅರ್ಥವಾಗುತ್ತೀರಿ. ಈ ಅರ್ಥವಂತಿಕೆಯಿಂದ ಪ್ರೀತಿ ಹುಟ್ಟುತ್ತದೆ. ಈಗ ಬದುಕಿನಲ್ಲಿ ಪ್ರೀತಿಯ ಅಂಶ ಇಲ್ಲವಾಗಿದೆ. ನಮ್ಮ ಸಂಬಂಧಗಳಲ್ಲಿ ಪ್ರೀತಿ, ಒಲುಮೆ, ಔದಾರ್ಯ, ಕರುಣೆಗಳು ಇಲ್ಲದಿರುವುದರಿಂದ ನಾವು ಗೊಂದಲ ಮತ್ತು ದುಃಖಗಳನ್ನು ಹೆಚ್ಚಿಸುವ ಕ್ರಿಯೆಗಳಲ್ಲೇ ತೊಡಗಿ ಪಲಾಯನವಾದಿಗಳಾಗಿದ್ದೇವೆ. ಜಗತ್ತನ್ನು ಬದಲಾಯಿಸಲು ಬೇಕಾದ ನೀಲನಕ್ಷೆಗಳನ್ನೆಲ್ಲಾ ಹೊಂದಿದ್ದೂ ನಿರ್ಧಾರಕವಾಗಿ ಇರಬೇಕಾದ ಪ್ರೀತಿಯನ್ನೇ ಕಾಣದವರಾಗಿದ್ದೇವೆ.
ನೀವು ಮತ್ತೊಬ್ಬ ವ್ಯಕ್ತಿಯ ಬಗ್ಗೆ ಮನಸ್ಸಿನಲ್ಲಿ ಮೂಡಿಸಿಕೊಂಡಿರುವ ಕಾಲ್ಪನಿಕ ಬಿಂಬವನ್ನು ಮಾತ್ರ ನೋಡುತ್ತೀರಿ..... ಅಂದರೆ ನಿಮ್ಮ ಗಂಡ ಅಥವಾ ಹೆಂಡತಿಯೊಡನೆ ಇರುವ ಸಂಬಂಧ,ನಿಮ್ಮ ರಾಜಕಾರಣಿಯೊಡನೆ ಇರುವ ಸಂಬಂಧ......ನಿಜವಾಗಿ ಎರಡು ಕಾಲ್ಪನಿಕ ಬಿಂಬಗಳ ನಡುವೆ ಇರುವ ಸಂಬಂಧ, ಅಲ್ಲವೇ? ಇಬ್ಬರು ವ್ಯಕ್ತಿಗಳ ನಡುವಿನ ಸಂಬಂಧ, ಅವರು ನಿಕಟವಾಗಿರಲಿ ಅಥವಾ ದೂರದಲ್ಲಿರಲಿ, ಕೇವಲ ಕಾಲ್ಪನಿಕ ಬಿಂಬಗಳ, ಸಂಕೇತಗಳ, ನೆನಪುಗಳ ಸಂಬಂಧವಾಗಿರುತ್ತದೆ. ಇದರಲ್ಲಿ ನಿಜವಾದ ಪ್ರೀತಿ ಇರಲು ಹೇಗೆ ಸಾಧ್ಯ?
ಸಂಬಂಧವು ಅರ್ಥವಾಗಬೇಕಾದರೆ ಸಂಬಂಧವನ್ನು ನಾಶಮಾಡದ ಸುಮ್ಮನಿರುವ ಎಚ್ಚರ, ನಿಷ್ಕ್ರಿಯ ಎಚ್ಚರ ಇರಬೇಕು. ಇದರಿಂದ ಸಂಬಂಧವು ಹೆಚ್ಚು ಶಕ್ತಿಪೂರ್ಣವಾಗುತ್ತದೆ, ಹೆಚ್ಚು ಅರ್ಥಪೂರ್ಣವಾಗುತ್ತದೆ. ಆ ಸಂಬಂಧದಲ್ಲಿ ಬೆಚ್ಚನೆಯ ಪ್ರೀತಿಯ ಸಾಧ್ಯತೆ ಇರುತ್ತದೆ, ನಿಕಟತೆಯ ಸಾಧ್ಯತೆ ಇರುತ್ತದೆ. ಇವು ಕೇವಲ ಭಾವುಕತೆಯೋ ಸಂವೇದನೆಗಳೋ ಆಗಿರದೇ ನಿಜವಾಗಿರುತ್ತವೆ. ನಾವು ಪ್ರತಿಯೊಂದರೊಡನೆಯೂ ಈ ರೀತಿಯ ಸಂಬಂಧವನ್ನು ಬೆಳೆಸಿಕೊಂಡರೆ ಆಗ ನಮ್ಮ ಆಸ್ತಿಯ ಸಮಸ್ಯೆಗಳು, ಹಕ್ಕಿನ ಸಮಸ್ಯೆಗಳು ಪರಿಹಾರವಾಗುತ್ತವೆ. ಮನುಷ್ಯ ಏನನ್ನು ಹೊಂದಿರುತ್ತಾನೋ ಅದೇ ಆಗಿರುತ್ತಾನೆ. ಹಣವನ್ನು ಹೊಂದಿರುವ ಮನುಷ್ಯ ಹಣವೇ ಆಗಿರುತ್ತಾನೆ. ತನ್ನನ್ನು ಆಸ್ತಿ, ಮನೆ, ಪೀಠೋಪಕರಣಗಳೊಂದಿಗೆ ಗುರುತಿಸಿಕೊಳ್ಳುವವ ಅವುಗಳೇ ಆಗಿರುತ್ತಾನೆ......ಯಾವಾಗ ನನ್ನದು ಎಂಬ ಹಕ್ಕುಗಾರಿಕೆ ಇರುತ್ತದೆಯೋ ಆಗ ಸಂಬಂಧ ಇರುವುದಿಲ್ಲ......ಕ್ರಿಯೆಯೇ ಸಂಬಂಧದ ಅಂತಃಸತ್ವ ಎಂಬ ಎಚ್ಚರವನ್ನು ಇಟ್ಟುಕೊಳ್ಳಿರಿ. ಆ ಕ್ರಿಯೆಯ ಮೂಲಕ ನಿಜವಾದ ಸಂಬಂಧವನ್ನು, ಗಹನತೆಯನ್ನು, ಮಹತ್ತನ್ನು, ನಿಜವಾದ ಪ್ರೀತಿಯ ಸಾಧ್ಯತೆಯನ್ನು ಕಾಣಿರಿ.'

4 comments:

  1. ಪ್ರಭಾಮಣಿ ಮೇಡಂ; ಸಂಬಂಧಗಳ ಬಗೆಗಿನ ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ.ನಾನು ಹೇಗಿರುತ್ತೇನೋ ನನ್ನ ಸಂಬಂಧಗಳೂ ಹಾಗೆ ಇರುತ್ತವೆ.ನನ್ನ ಸಂಬಂಧಗಳು ಸರಿ ಹೋಗಬೇಕಾದರೆ ಮೊದಲು ನಾನು ಸರಿಹೋಗಬೇಕು.ಅಲ್ಲವೇ?
    ನನ್ನ ಬ್ಲಾಗಿಗೆ ಭೇಟಿಕೊಡಿ.ಓಶೋ ಅವರ ವಿಚಾರ ನಿಮಗೂ ಇಷ್ಟವಾಗಬಹುದು.ನಮಸ್ಕಾರ.

    ReplyDelete
  2. khandita nimma lekhana
    vicharapoornavaagide.
    prabhamaniyavare.

    ReplyDelete
  3. ಲೇಖನ ತು೦ಬಾ ಚೆನ್ನಾಗಿದೆ..

    ReplyDelete