Saturday, August 27, 2011

ಮನದ ಅಂಗಳದಿ.........೫೫. ಬುದ್ಧಿಜೀವಿಗಳು

ಸಾಮಾನ್ಯವಾಗಿ ನಾವು ಪತ್ರಿಕೆಗಳಲ್ಲಿ ಬುದ್ಧಿಜೀವಿಗಳ ಬಗ್ಗೆ ಓದುತ್ತಲೇ ಇರುತ್ತೇವೆ. ಯಾವುದೇ ಒಂದು ಸಾಮಾಜಿಕ ಸಮಸ್ಯೆಯಾಗಲೀ, ಸಾಹಿತ್ಯಕ್ಕೆ ಅಥವಾ ಸಂಸ್ಕೃತಿಗೆ ಸಂಬಂಧಿಸಿದ ಸಮಸ್ಯೆಯಾಗಲೀ ಉದ್ಭವಿಸಿದಾಗ ಬುದ್ಧಿಜೀವಿಗಳು ಏನೆಂದು ಅಭಿಪ್ರಾಯ ಪಡುತ್ತಾರೆ ಎನ್ನುವ ಬಗ್ಗೆ ಬುದ್ಧಿಜೀವಿಗಳೆನಿಸಿಕೊಂಡವರ ಹೇಳಿಕೆಗಳನ್ನು, ಲೇಖನಗಳನ್ನು ಪ್ರಕಟಿಸುತ್ತಾರೆ. ಕೆಲವು ಸಂದರ್ಭಗಳಲ್ಲಂತೂ ಯಾವುದಾದರೊಂದು ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆ, ವಾದವಿವಾದಗಳು ಬಹಳ ಬಿರುಸಾಗಿಯೇ ನಡೆಯುತ್ತದೆ. ಅವರ ವಾಘ್ವೈಭವಕ್ಕೆ ಮನಸೋತು ಆಕರ್ಷಿತರಾದ ನಾವು, ನಮ್ಮನ್ನೂ ಆಂಥಾ ಒಬ್ಬ ಬುದ್ಧಿಜೀವಿಯೆಂದು ಕರೆಯಬೇಕೆಂಬ ಹಂಬಲದಲ್ಲಿರುತ್ತೇವೆ ಅಥವಾ ನಮ್ಮನ್ನು ನಾವೇ ಬುದ್ಧಿಜೀವಿಯೆಂದು ಪರಿಗಣಿಸಿಕೊಂಡುಬಿಟ್ಟಿರುತ್ತೇವೆ!

ಜಿಡ್ಡು ಕೃಷ್ಟಮೂರ್ತಿಯವರು ತಮ್ಮ 'ಅನುದಿನ ಚಿಂತನ’ದಲ್ಲಿ ಬುದ್ಧಿಜೀವಿಗಳ ಬಗ್ಗೆ ಈ ರೀತಿಯಾಗಿ ಹೇಳಿದ್ದಾರೆ:

'ನಮ್ಮಲ್ಲಿ ಅನೇಕರು ಬೌದ್ಧಿಕ ಸಾಮರ್ಥ್ಯ ಎಂದು ಕರೆಯಲಾಗುವಂಥದನ್ನು ಬೆಳೆಸಿಕೊಂಡಿದ್ದೇವೆ. ಆದರೆ ಆ ಸಾಮರ್ಥ್ಯಗಳು ಬೌದ್ಧಿಕವಲ್ಲವೇ ಅಲ್ಲ. ನಾವು ಎಷ್ಟೊಂದು ಪುಸ್ತಕಗಳನ್ನು ಓದುತ್ತೇವೆ. ಅವುಗಳ ತುಂಬಾ ಬೇರೆಯವರು ಹೇಳಿದ ಮಾತುಗಳು ಇರುತ್ತವೆ. ಬೇರೆಯವರ ಥಿಯರಿಗಳು, ಐಡಿಯಾಗಳು ಇರುತ್ತವೆ. ಅಸಂಖ್ಯಾತ ಲೇಖಕರು ಬರೆದ ಅಸಂಖ್ಯಾತ ಪುಸ್ತಕಗಳಿಂದ ಕೋಟ್ ಮಾಡಿದರೆ, ಬೇರೆಬೇರೆ ಬಗೆಯ ಪುಸ್ತಕಗಳನ್ನು ಓದಿ ಅವುಗಳನ್ನೆಲ್ಲಾ ಅನ್ವಯಮಾಡಿಕೊಳ್ಳಬಲ್ಲೆವಾದರೆ, ವಿವರಿಸಬಲ್ಲೆವಾದರೆ, ಅದನ್ನೆಲ್ಲಾ ವ್ಯಾಖ್ಯಾನಿಸಲು ಕಲಿತರೆ ನಾವು ಬುದ್ಧಿಜೀವಿಗಳಾದೆವು ಎಂದುಕೊಳ್ಳುತ್ತೇವೆ. ನಮ್ಮಲ್ಲಿ ಯಾರಿಗೂ, ಒರಿಜಿನಲ್ ಆದ ಬೌದ್ಧಿಕ ಗ್ರಹಿಕೆ ಇಲ್ಲ. ಆ ಬೌದ್ಧಿಕ ಎಂದು ಕರೆಯಲಾಗುವ ಸಾಮರ್ಥ್ಯವೊಂದನ್ನೇ ಬೆಳೆಸಿಕೊಂಡು ಉಳಿದೆಲ್ಲ ಸಾಮರ್ಥ್ಯಗಳನ್ನೂ ಭಾವಗಳನ್ನೂ ನಾವು ಕಳೆದುಕೊಂಡುಬಿಟ್ಟಿದ್ದೇವೆ. ಅತ್ಯುನ್ನತ ಬೌದ್ಧಿಕ ಸಾಮರ್ಥ್ಯವನ್ನೂ ಇಟ್ಟುಕೊಂಡು ವಸ್ತುನಿಷ್ಠವಾಗಿ ವಿಚಾರ ಮಾಡುವ ಸಮತೋಲನವನ್ನು ಸಾಧಿಸುವುದು ನಮ್ಮ ಸಮಸ್ಯೆಯಾಗಿದೆ. ಇರುವುದು ಇರುವಂತೆಯೇ ನೋಡುವುದು ಹೇಗೆ? ನಾವೇ ಸ್ವತಃ ಆಲೋಚಿಸಿ ಯಾವುದು ಸತ್ಯ, ಯಾವುದು ಸುಳ್ಳು ಎಂಬುದನ್ನು ಸ್ವತಃ ಕಂಡುಕೊಳ್ಳುವುದು ಹೇಗೆ ಎಂಬ ಸಮಸ್ಯೆ ನಮ್ಮದಾಗಿದೆ. ಕೇವಲ ಹೊರಗಿನ ವಸ್ತುಗಳನ್ನು ಮಾತ್ರವಲ್ಲ, ನಮ್ಮದೇ ಆದ ಒಳಬದುಕು ಎಂಬುದಿದ್ದರೆ ಅದನ್ನೂ ಕಾಣಲಾರದ ಅಸಾಮರ್ಥ್ಯ ನಮ್ಮದಾಗಿರುವುದೇ ನಾವೆಲ್ಲಾ ಎದುರಿಸುತ್ತಿರುವ ಬಲು ದೊಡ್ಡ ಕಷ್ಟವೆಂದು ನನಗೆ ತೋರುತ್ತದೆ.’

ಬುದ್ಧಿಜೀವಿಗಳ ಬಗ್ಗೆ ಸ್ವಾಮಿ ರಾಮ ಅವರು ತಮ್ಮ 'ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ’'ಪುಷ್ಪಕಣಿವೆಯ ಸಂತ’ ಎಂಬ ಲೇಖನದಲ್ಲಿ ಪ್ರಸ್ತಾಪಿಸಿದ್ದಾರೆ. ಅವರಿಗೆ ಹಿಮಾಲಯದಲ್ಲಿನ ಪ್ರಸಿದ್ಧವಾದ ಒಂದು ಪುಷ್ಪಕಣಿವೆಯನ್ನು ನೋಡುವ ಕುತೂಹಲವಾಗುತ್ತದೆ. ಪುಷ್ಪಕಣಿವೆಯಿರುವ ಪ್ರದೇಶದಲ್ಲಿ ಯಾವಾಗಲೂ ತಿರುಗಾಡುತ್ತಿದ್ದ ಒಬ್ಬ ಸಾಧುವಿನೊಡನೆ ಆತನ ನಿಭಂದನೆಗಳನ್ನೆಲ್ಲಾ ಒಪ್ಪಿಕೊಂಡು ನೋಡಲು ಹೋಗುತ್ತಾರೆ. ಜೊತೆಯಲ್ಲಿ ಹೋಗುತ್ತಿದ್ದಾಗ ಸಾಧು ಹೀಗೆ ಹೇಳುತ್ತಾರೆ, 'ಹೂವುಗಳೆಲ್ಲಾ ಅರಳುವ ಋತುವಿನಲ್ಲಿ ಪುಷ್ಪಕಣಿವೆಯ ಮೂಲಕ ಹಾದುಹೋದಾಗ ಯಾರೂ ತಮ್ಮ ನೆನಪಿನ ಶಕ್ತಿಯನ್ನು ಉಳಿಸಿಕೊಳ್ಳುವುದಿಲ್ಲ. ನಿನ್ನಂಥಾ ಹಠಮಾರಿ ಮಕ್ಕಳನ್ನೆಲ್ಲಾ ಇಲ್ಲಿಗೆ ತಂದು ರಿಪೇರಿ ಮಾಡಬೇಕು. ಬುದ್ಧಿಜೀವಿಗಳಾಗೋದಕ್ಕೆ ಹೆಣಗುವವರು ಹಾಗೂ ನಮ್ಮ ಜೊತೆ ವಾದ ಮಾಡುವವರನ್ನು ಇಲ್ಲಿಗೆ ಕರೆತರಬೇಕು. ಆಗ ತಮ್ಮ ಯೋಗ್ಯತೆ ಏನು ಅನ್ನೋದು ಅವರಿಗೆ ಮನವರಿಕೆಯಾಗುತ್ತದೆ.’

ತಕ್ಷಣ ಸ್ವಾಮಿ ರಾಮ ಅವರು, 'ನಾನಾದರೋ ನಿಮ್ಮನ್ನು ಅನುಸರಿಸುತ್ತಾ ಇದೀನಿ’ ಎಂದುಬಿಡುತ್ತಾರೆ.

ಆಗ ಸಾಧು, 'ಹೌದ್ಹೌದು, ಯಾವಾಗಲೂ ವಾದ ಮಾಡ್ತಾನೇ ಇರ್ತೀಯ ಮತ್ತು ಗಮನವಿಟ್ಟು ಕೇಳೋದಿಲ್ಲ. ನಿನ್ನ ಬೌದ್ಧಿಕ ಜ್ಞಾನದ ಬಗ್ಗೆ ನಿನಗೆ ಅತಿಯಾದ ಅಹಂಭಾವ ಇದೆ. ನನಗೆ ಓದೋದು, ಬರೆಯೋದು ಹೇಗೆ ಅನ್ನೋದು ಗೊತ್ತಿಲ್ಲ. ನೀನು ನನಗಿಂತಲೂ ಹೆಚ್ಚು ವಿದ್ಯಾವಂತ. ನಿನಗೆ ವಿದ್ಯೆ ಇದೆ, ಆದರೆ ನಾನು ಮನಸ್ಸಿನ ಮೇಲೆ ನಿಯಂತ್ರಣ ಹೊಂದಿದ್ದೇನೆ.’ ಎನ್ನುತ್ತಾರೆ.

'ನಾನೂ ನಿಯಂತ್ರಣ ಹೊಂದಿದ್ದೇನೆ’ ಎಂದು ಸ್ವಾಮಿ ರಾಮರವರು ಹೇಳಿದಾಗ, 'ನೋಡೋಣ ಎಂದಷ್ಟೇ ಹೇಳಿ ಮುಂದೆ ಸಾಗುತ್ತಾರೆ..... ಮಾರ್ಗಮಧ್ಯದಲ್ಲಿ ಒಬ್ಬ ಜಪಾನೀ ಸಾಧುವೂ ಇವರೊಡನೆ ಸೇರಿಕೊಳ್ಳುತ್ತಾರೆ.....

'ನೋಟ ಹಾಯಬಲ್ಲ ದೂರದವರೆಗೂ ನಳನಳಿಸಿ ಅರಳಿ ಚೆಲುವುತುಂಬಿ ಬೆಳಗುವ ಹೂಗಳು. ಮೊದಲ ಕೆಲತಾಸಿನ ಅವಧಿ ಇಂದ್ರಿಯಗಳಿಗೆ ಅಪ್ಯಾಯಮಾನ ಹಾಗೂ ಮನಸ್ಸಿಗೆ ಚೈತನ್ಯದಾಯಕ ಅನುಭವ. ಆದರೆ ನಿಧಾನವಾಗಿ ನನ್ನ ಗಮನಕ್ಕೆ ಬರತೊಡಗಿದ್ದೆಂದರೆ, ನನ್ನ ನೆನಪು ಜಾರಿಹೋಗುತ್ತಿರುವುದು..... ನಾವಿಬ್ಬರೂ ಎಷ್ಟೊಂದು ನೆಲೆತಪ್ಪಿದ್ದೆವೆಂದರೆ ನಮ್ಮ ಹೆಸರುಗಳನ್ನು ನೆನಪುಮಾಡಿಕೊಳ್ಳುವುದು ನಮ್ಮಿಂದಾಗಲಿಲ್ಲ.... ಆ ಪುಷ್ಪಗಳ ಪರಿಮಳ ಎಷ್ಟೊಂದು ತೀಕ್ಷ್ಣವಾಗಿತ್ತೆಂದರೆ ನಾವು ಯುಕ್ತಾಯುಕ್ತ ವಿವೇಚನಾಶಕ್ತಿಯನ್ನೂ ಕಳೆದುಕೊಂಡಿದ್ದೆವು..... ಇಂದ್ರಿಯಗಳು ಅರಿವಳಿಕೆಗೀಡಾಗಿದ್ದವು..... ಒಂದು ವಾರ ನಾವು ಪುಷ್ಪಕಣಿವೆಯಲ್ಲಿದ್ದೆವು. ಸಾಧುಗಳು ಸದಾ ನಮ್ಮನ್ನು ತಮಾಷೆ ಮಾಡುತ್ತಾ, 'ನಿಮ್ಮ ವಿದ್ಯೆ ಹಾಗೂ ಶಕ್ತಿಗಳಿಗೆ ಏನೂ ಬೆಲೆಯಿಲ್ಲ’ ಎನ್ನುತ್ತಿದ್ದರು. ಪುಷ್ಪಕಣಿವೆಯಿಂದ ಹೊರಬಂದ ನಂತರ ಬಾಬ ಹೇಳಿದರು, '.......ನನ್ನನ್ನು ನೋಡಿ, ಆ ದೈತ್ಯ ಪುಷ್ಪಗಳ ಪರಿಮಳದಿಂದ ನಾನು ತೊಂದರೆಗಾಗಲೀ ಪ್ರಭಾವಕ್ಕಾಗಲೀ ಒಳಗಾಗಲಿಲ್ಲ. ಹ್ಹಹ್ಹಹ್ಹಾ! ನೀವು ಕಾಲೇಜಿಗೆ ಹೋಗಿ ಬೇಕಾದಷ್ಟು ಪುಸ್ತಕಗಳನ್ನು ಓದಿದ್ದೀರಿ. ಈವರೆಗೆ ಬೇರೆಯವರ ಅಭಿಪ್ರಾಯಗಳನ್ನು ಅವಲಂಭಿಸಿಯೇ ಬದುಕಿದ್ದೀರಿ. ಇವತ್ತು ನಿಮಗೆ ಸ್ವಾನುಭವದ ಜ್ಞಾನವನ್ನು ಹಾಗೂ ಜ್ಞಾನ ಎಂದು ಕರೆಯಲಾಗುವ ಆ ಅನುಕರಣೆಯಿದೆಯಲ್ಲ ಅದನ್ನ ಅರ್ಥಮಾಡಿಕೊಳ್ಳುವುದಕ್ಕೆ ಮತ್ತು ತುಲನೆಮಾಡುವುದಕ್ಕೆ ಬಹಳ ಒಳ್ಳೆಯ ಅವಕಾಶ ದೊರೆತಿದೆ. ಇಲ್ಲಿಯವರೆಗೆ ನಿಮ್ಮಲ್ಲಿರುವ ಅಭಿಪ್ರಾಯಗಳೆಲ್ಲಾ ಬೇರೆಯವರವು. ಯಾರು ಅನ್ಯರ ಅಭಿಪ್ರಾಯಗಳಮೇಲೆ ಬದುಕುತ್ತಾರೋ ಅವರು ಯಾವತ್ತೂ ತಮ್ಮ ಸ್ವಂತ ಅಭಿಪ್ರಾಯಗಳನ್ನು ರೂಪಿಸಿಕೊಳ್ಳುವ ಹಾಗೂ ವ್ಯಕ್ತಗೊಳಿಸುವ ಸಾಮರ್ಥ್ಯವನ್ನು ಪಡೆದುಕೊಳ್ಳುವುದಿಲ್ಲ. ಪ್ರಿಯ ಬಾಲಕರೇ, ಮಾಹಿತಿಜನ್ಯ ಜ್ಞಾನವನ್ನು ನಿಜವಾದ ಜ್ಞಾನವೆಂದು ನಾವು ಪರಿಗಣಿಸುವುದಿಲ್ಲ. ಅನುಭವಯುಕ್ತ ಜ್ಞಾನವು ಮೌಲಿಕವಾದುದು ಎಂಬುದನ್ನು ನೀವು ಅರ್ಥಮಾಡಿಕೊಂಡ ಪಕ್ಷದಲ್ಲೂ, ನೀವು ಮನಸ್ಸಿನ ಮೇಲೆ ನಿಯಂತ್ರಣವನ್ನು ಸಾಧಿಸಿರುವುದಿಲ್ಲ. ಆಧುನಿಕ ಮಕ್ಕಳಿಗೆ ನೀಡಲಾಗುತ್ತಿರುವ ವಿದ್ಯಾಭ್ಯಾಸವು ತೀರಾ ಮೇಲುಮೇಲಿನದು, ಆಳವಾದದ್ದಲ್ಲ. ಯಾವುದೇ ಕಟ್ಟುಕಟ್ಟಳೆಯಿಲ್ಲದೆ ಮನೋನಿಗ್ರಹ ಸಾಧ್ಯವಿಲ್ಲ. ಮನೋನಿಗ್ರಹವಿಲ್ಲದೇ ಸ್ವಾನುಭವ (ಅಪರೋಕ್ಷಾನುಭೂತಿ) ಅಸಾಧ್ಯ.’

ಸದಾ ಚರ್ಚೆಗಳನ್ನು ಹುಟ್ಟುಹಾಕುವ, ತಮ್ಮ ಬುದ್ಧಿವಂತಿಗೆಯನ್ನು ಪ್ರದರ್ಶಿಸಲು ವಾದವಿವಾದಗಳಲ್ಲಿ ತೊಡಗಿ ಸಾಮಾನ್ಯ ಜನತೆಯನ್ನು ದಿಕ್ಕುತಪ್ಪಿಸುವ ಬುದ್ಧಿಜೀವಿಗಳ ಗುಂಪಿನಲ್ಲಿ ನಮ್ಮನ್ನು ನಾವು ಒಂದಾಗಿಸಿಕೊಳ್ಳುವುದು ಎಷ್ಟು ಸರಿ ಎನ್ನುವುದನ್ನು ಈಗ ನಾವೇ ತಿಳಿದುಕೊಳ್ಳಬಹುದು. ಅಕ್ಷರ ಬಲ್ಲವರಾದ ಮಾತ್ರಕ್ಕೆ ನಮ್ಮನ್ನು ನಾವು ಬುದ್ಧಿವಂತರೆಂದುಕೊಳ್ಳುವ ಅಗತ್ಯವಿಲ್ಲ. 'ಸಾಕ್ಷರಾ’ ಎನ್ನುವುದನ್ನು ಹಿಂದಿನಿಂದ ಓದಿದಾಗ 'ರಾಕ್ಷಸಾ’ ಎಂದಾಗುತ್ತದೆ ಎನ್ನುವ ಅರ್ಥದ ಒಂದು ಸಂಸ್ಕೃತದ ಶ್ಲೋಕವಿದೆ! ಸ್ವವಿವೇಚನೆಯನ್ನು ರೂಢಿಸಿಕೊಂಡು ಮಾನವೀಯತೆಯಿಂದ ಬದುಕುವುದನ್ನು ಕಲಿಯೋಣ.



10 comments:

  1. ಮೇಡಂ, ಲೇಖನ ಚೆನ್ನಾಗಿದೆ. ಕಥೆಯೊಂದಿಗೆ ಒಳ್ಳೆ ಮಾತುಗಳನ್ನ ಹೇಳಿದ್ದೀರಿ .

    ReplyDelete
  2. ಸ್ವಾಮಿ ರಾಮರ ಈ ಉದ್ಬೋಧಕ ಘಟನೆಯನ್ನು ತಿಳಿಸಿದ ನಿಮಗೆ ಧನ್ಯವಾದಗಳು.

    ReplyDelete
  3. ಮೇಡಂ;ಅಕ್ಷರಜ್ಞಾನವಿಲ್ಲದ ಅದ್ಭುತ ಬುದ್ಧಿಜೀವಿಗಳನ್ನು ನೋಡಿದ್ದೇನೆ.ನಿಜವಾದ ಬುದ್ಧಿ ಶಕ್ತಿ ಎಂದರೇನು ಎನ್ನುವುದರ ಬಗ್ಗೆ ಕಣ್ಣು ತೆರೆಸುವ ಲೇಖನ.ಧನ್ಯವಾದಗಳು.

    ReplyDelete
  4. ಈಗಿನ ಶಿಕ್ಷಣ ಮೇಲು ಮೇಲಿನದ್ದು,ಆಳವಾದದ್ದಲ್ಲ....ಇದು ನೂರಕ್ಕೆ ನೂರು ಸತ್ಯ... ಪ್ರತಿಯೊಬ್ಬರಿಗೂ ತಾನು ಬುದ್ಧಿಜೀವಿ ಆಗಬೇಕೆಂಬ ತುಡಿತ ಮತ್ತು ಹಂಬಲ ಇದ್ದೆ ಇರುತ್ತದೆ....ಅಂಥವರಿಗೆ ಇದು ಹೇಳಿ ಮಾಡಿಸಿದ ಲೇಖನ...

    ReplyDelete
  5. @ಈಶ್ವರ್ ಭಟ್ ರವರೆ,
    @ ಸುನಾಥ್ ರವರೆ,
    @ಡಾ. ಕೃಷ್ಣ ಮೂರ್ತಿಯವರೆ,
    @ಗಿರೀಶ್.ಎಸ್ ರವರೆ,
    @ಮನಮುಕ್ತಾ ರವರೆ,
    ಲೇಖನವನ್ನು ಓದಿ ಮೆಚ್ಚುಗೆಯನ್ನು ತಿಳಿಸಿ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಬರುತ್ತಿರಿ.

    ReplyDelete
  6. ವಿಚಾರ ವಾಸ್ತವಿಕ.

    ReplyDelete
  7. ಇಂದಿನ ಶಿಕ್ಷಣದ ಒಳ ಟೊಳ್ಳನ್ನು ಸಮರ್ಥವಾಗಿ ಬಿಂಬಿಸಿದ್ದೀರಿ. ಉತ್ತಮ ವೈಚಾರಿಕ ಬರಹ.
    ನನ್ನ ಬ್ಲಾಗಿಗೆ ಬಂದು ಕವನ ಓದಿದ್ದಕ್ಕೆ ಧನ್ಯವಾದಗಳು.
    ಅದೇ ಕವನವನ್ನು ತಿದ್ದಿ ಬರೆದಿದ್ದೇನೆ. ನಿಮಗೇನು ಅನಿಸುತ್ತದೆ ತಿಳಿಸಿದರೆ. ಧನ್ಯ.

    ReplyDelete
  8. Nija Madam..

    ತಮ್ಮ ಬುದ್ಧಿವಂತಿಗೆಯನ್ನು ಪ್ರದರ್ಶಿಸಲು ವಾದವಿವಾದಗಳಲ್ಲಿ ತೊಡಗುವ ಬುದ್ಧಿಜೀವಿಗಳೇ ಹೆಚ್ಚು

    Arthapoona Lekhana..

    Nanna blog ge bandu "GoLaatakee" bitta comment ge Dhanyavadagalu

    ReplyDelete
  9. parbhaamaniyavare, buddhijiivigala
    pravara hegiruttade embudannu
    bahala chennaagi bidisittiddira.dhanyavaadagalu.

    ReplyDelete