Thursday, October 13, 2011

ಸಾಪೇಕ್ಷ

ಗರಗರ
ತಿರುಗು ಚಕ್ರದ
ಅಂಚಿಗೆ
ಒಗೆಯಲ್ಪಟ್ಟ ಕಾಯ
ವಿರಮಿಸಲು ಬೆಂಬಿಡದ ಭಯ
ಸ್ವಲ್ಪ ತಂಗುವೆನೆಂದರೂ
ತಪ್ಪದ ಅಪಾಯ!

ಪಯಣ ಸಾಗಿದಂತೆ
ಪರ್ಯಾಯ
ಗರಿಷ್ಠ-ಕನಿಷ್ಠ
ಗಮನಿಸುವವರೇ ಇಲ್ಲ
ತನ್ನಿಷ್ಟ

ಒಮ್ಮೆ...
ಒಮ್ಮೆಯಾದರೂ
ಮಧ್ಯಂತರದಲಿ
ಸ್ಥಿರವಾಗಲೂ
ಆಗದಂಥಾ
ಆವರ್ತಕ ಚಲನೆ
ಆಗಾಗ ಮೀರುವುದಾಗಿದೆ
ಘರ್ಷಣೆ

ಪರಿಧಿ ಮೀರಿದರಂತೂ
ಸ್ಪರ್ಶಕದ ನೇರದಲೇ ಒಗೆತ
ಬಿಟ್ಟುಹೋಗಲೇ ಬೇಕಾಗ
ಈ ಆತ್ಮೀಯ ವೃತ್ತ

ಇದ್ದಷ್ಟು ದಿನವೂ
ತಿರುಗುತ್ತಲೇ ಇರುವುದೋ
ತಿರುಗುವುದರಲೇ
ಸಾರ್ಥಕ್ಯ ಕಾಣುವುದೋ?..?..?

ಕಾಯಕವೇ
ತಾನೆಂದೆಣಿಸಿದಾಕ್ಷಣವೇ
ಕೇಂದ್ರದತ್ತ ಪಯಣ
ಏಳು ಬೀಳುಗಳಿಲ್ಲದ
ನಿಶ್ಚಿಂತ ತಾಣ
ನಿರ್ಲಿಪ್ತ ಕಾಯಕೀಗ
ಸಮಸ್ಯೆಗಳೇ ಗೌಣ!

13 comments:

  1. ಮೇಡಂ;ಅಧ್ಯಾತ್ಮಿಕ ಅನುಭೂತಿಯುಳ್ಳ ಅದ್ಭುತ ಕವನ!!!ನಿಮ್ಮಿಂದ ಇಂತಹ ಇನ್ನಷ್ಟು ಕವನಗಳು ಬರಲಿ ಎನ್ನುವ ಹಾರೈಕೆ.ಅಭಿನಂದನೆಗಳು.ನಮಸ್ಕಾರ.

    ReplyDelete
  2. ಇತಿ ವೃತ್ತಾಂತಕ್ಕೆ ಸಿಕ್ಕು ತಿರುಗೋ ಕಾಯ! ಒಳ್ಳೆಯ ಪ್ರತಿಮೆ ಇಟ್ಟುಕೊಂಡು ಸಮರ್ಥವಾಗಿ ವಿಶ್ಲೇಷಿಸಿದ್ದೀರ ಮೇಡಂ.

    ನಿಮ್ಮ ಬೌದ್ಧಿಕ ಉನ್ನತಿಯನ್ನೂ ಕವನ ಎತ್ತಿತೋರಿಸುತ್ತಿದೆ.

    ReplyDelete
  3. ತುಂಬಾ ಇಷ್ಟವಾಯಿತು ಸಾಲುಗಳು....

    "ನಿರ್ಲಿಪ್ತ ಕಾಯಕೀಗ
    ಸಮಸ್ಯೆಗಳೇ ಗೌಣ!"

    "ನಿರ್ಲಿಪ್ತತೆ ಅಂದರೆ ನಿರುತ್ಸಾಹ" ಅಲ್ಲವೆ?

    ಸಮಸ್ಯೆಗಳನ್ನು ನಿರ್ಲಿಪ್ತವಾಗಿ ತೆಗೆದುಕೊಂಡರೆ "ಸಮಸ್ಯೆಗಳೇ.. ಗೌಣ’ !!

    ವಾಹ್ !!

    ReplyDelete
  4. ಪ್ರಕಾಶಣ್ಣ;ನನಗೆ ತಿಳಿದಂತೆ 'ನಿರ್ಲಿಪ್ತತೆ'ಎಂದರೆ ಅಂಟಿಕೊಳ್ಳದಿರುವುದು.ನಿರುತ್ಸಾಹ ಬೇರೆಯೇ ಅರ್ಥ ಕೊಡುತ್ತದೆ.ಮಧ್ಯೆ ಮೂಗು ತೋರಿಸಿದ್ದಕ್ಕೆ ಕ್ಷಮೆ ಕೋರುತ್ತೇನೆ.ಮೇಡಂ;ಮತ್ತೊಮ್ಮೆ ಕವಿತೆ ಓದಲು ನಿಮ್ಮ ಬ್ಲಾಗಿಗೆ ಬಂದೆ.ಕವಿತೆ ಅಷ್ಟು ಇಷ್ಟವಾಗಿದೆ.ನನ್ನ ಬ್ಲಾಗಿಗೊಮ್ಮೆ ಭೇಟಿ ಕೊಡಿ .ನಮಸ್ಕಾರ.

    ReplyDelete
  5. ನನಗಂತೂ ಅರ್ಥವಾಗದ ಕವನ ಇದು....ಏನಿದರ ಮರ್ಮ? ತಿಳಿಯುತ್ತಿಲ್ಲ..
    ಡಾಕ್ಟ್ರ ಕಾಮೆಂಟ್ ನಿಂದ ಅಧ್ಯಾತ್ಮಿಕ ಕವನವೆಂದಷ್ಟೇ ತಿಳಿಯಿತು..

    ReplyDelete
  6. ವಾಹ್! ವೇಗ ಮೀರಿದರೆ ಸ್ಪರ್ಶಕದಂತೆ ಪರಿಧಿ ದಾಟಿ ಹೋಗಬೇಕು. ವೇಗ ಕಡಿಮೆಯಾದರೆ ಕೇಂದ್ರದತ್ತ ಪತನಗೊಳ್ಳಬೇಕು. ಅಲ್ಲಿದೆ ವಿರಾಮ! ನವೀನ ಪ್ರತೀಕಗಳನ್ನು ಬಳಸಿಕೊಂಡು ಚಿರಂತನ ಚಿಂತನೆಯನ್ನು ಪ್ರತಿಪಾದಿಸಿದ್ದೀರಿ.

    ReplyDelete
  7. @ಡಾ. ಕೃಷ್ಣ ಮೂರ್ತಿಯವರೆ,
    ನನ್ನ ಬ್ಲಾಗ್ ಗೆ ಎರಡು ಭಾರಿ ಭೇಟಿನೀಡಿ, ಕವನವನ್ನು ಇಷ್ಟಪಟ್ಟು, ಮೆಚ್ಚುಗೆಯನ್ನು ತಿಳಿಸಿ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್. ಬರುತ್ತಿರಿ.

    ReplyDelete
  8. @ಬದರಿನಾಥ್ ಪಳವಳ್ಳಿಯವರೆ,
    ಜೀವನದ ಸ೦ಕಷ್ಟ ಕಾಲದಲ್ಲಿ ಉ೦ಟಾದ ಭಾವವನ್ನು ಮನಸ್ಸು ಮಥಿಸಿ ಮೂಡಿದ ಕವನ ಇದು. ನಿಮ್ಮ ಪ್ರೋತ್ಸಾಹಕರ ಪ್ರತಿಕ್ರಿಯೆಗಾಗಿ ಧನ್ಯವಾದಗಳು ಸರ್. ಬರುತ್ತಿರಿ.

    ReplyDelete
  9. @ಪ್ರಕಾಶ್ ರವರೆ,
    ಕವನವನ್ನು ಮೆಚ್ಚಿ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್. ಡಾ. ಕೃಷ್ಣ ಮೂರ್ತಿಯವರು ತಿಳಿಸಿರುವ೦ತೆ 'ನಿರ್ಲಿಪ್ತತೆ'ಎಂದರೆ ಯಾವುದಕ್ಕೂ (ಜೀವನಕ್ಕೆ) ಅಂಟಿಕೊಳ್ಳದಿರುವುದು,`ನಿರುತ್ಸಾಹ' ಎ೦ದರೆ ಯಾವುದರಲ್ಲಿಯೂ ಉತ್ಸಾಹ ಇಲ್ಲದೆ ಇರುವುದು. ಜ್ಞಾನಿಗಳು ನಿರ್ಲಿಪ್ತವಾಗಿದ್ದೂ ಆನ೦ದದಿ೦ದ ಇರುತ್ತಾರೆ. ಮತ್ತೊಮ್ಮೆ ವ೦ದನೆಗಳು . ಬರುತ್ತಿರಿ.

    ReplyDelete
  10. @ಸುಷ್ಮಾ ರವರೆ,
    ನನ್ನ ಕವನದಲ್ಲಿ ಅರ್ಥವಾಗದ೦ತಹದ್ದು ಏನೂ ಇಲ್ಲ! ಡಾ. ಕೃಷ್ಣ ಮೂರ್ತಿಯವರು ಅಧ್ಯಾತ್ಮಿಕ ಕವನ ಎ೦ದು ಬರೆದಿದ್ದರಿ೦ದ ಸ೦ತಸವಾಯ್ತು ಆದರೆ ೪ವರ್ಷಗಳ ಹಿ೦ದೆ ಈ ಕವನ ಬರೆದಾಗ ನನಗೆ ತಿಳಿದಿರಲೇ ಇಲ್ಲ. ಪ್ರತಿಕ್ರಿಯೆಗಾಗಿ ಧನ್ಯವಾದಗಳು, ಬರುತ್ತಿರಿ

    ReplyDelete
  11. @ ಸುನಾಥ್ ರವರೆ,
    ನನ್ನ ಕವನದ ಅ೦ತರ೦ಗವನ್ನು ಪ್ರವೇಶಿಸಿ, ಆಸ್ವಾದಿಸಿ, ಮೆಚ್ಚುಗೆಯನ್ನು ತಿಳಿಸಿ ಪ್ರೋತ್ಸಾಹಕರ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್. ಬರುತ್ತಿರಿ.

    ReplyDelete
  12. ಮೇಡಂ.. ತುಂಬಾ ಸಲ ಓದಿದಮೇಲೆ ಅರ್ಥ ಆಯಿತು.
    ನಾನು ಇಲ್ಲಿ ತುಂಬಾ ಫಿಸಿಕ್ಸನ ಸಿದ್ಧಾಂತ ಗಳನ್ನೂ ಕಂಡೆ.
    ನಿಮ್ಮ ಕವನದಲ್ಲಿ ಫಿಸಿಕ್ಸು, ಐನ್ ಸ್ಟೀನು, ನ್ಯೂಟನ್ ಎಲ್ಲರ ದರ್ಶನ ಮಾಡಿಸುತ್ತ
    ಅಧ್ಯಾತ್ಮದೆಡೆಗೆ ಕೊಂಡೊಯ್ದಿದ್ದಿರಿ

    ReplyDelete