Saturday, June 2, 2012

ಮನದ ಅಂಗಳದಿ.........೯೫.ಜೀವಜಲ

  ಈ ಭೂಮಿಯ ಮೇಲೆ ಜೀವಿಗಳ ಅಸ್ಥಿತ್ವಕ್ಕೆ ಅತ್ಯಗತ್ಯವಾದ ವಸ್ತುಗಳಲ್ಲಿ ನೀರೂ ಒಂದು. ನೀರಿನ ಬಳಕೆಯ ಬಗ್ಗೆ, ಅದರ ಪ್ರಾಮುಖ್ಯತೆಯ ಬಗ್ಗೆ ಅರಿವೇ ಇಲ್ಲದಂತೆ ಬೇಕಾದಂತೆ ನಾವು ನೀರನ್ನು ಉಪಯೋಗಿಸುತ್ತಿರುತ್ತೇವೆ. ಆದರೆ ನಮ್ಮ ದೇಹಕ್ಕೆ ಅಗತ್ಯ ಪ್ರಮಾಣದ ನೀರನ್ನು ಒದಗಿಸದೇ ಅದನ್ನು ಅನೇಕ ರೋಗಗಳ ಆವಾಸ ಸ್ಥಾನವನ್ನಾಗಿ ಮಾಡುತ್ತೇವೆ. ವೈದ್ಯರಾದ ಡಾ. ಬಟ್‌ಮನ್‌ಗೆಲಿಡ್ಜ್(Dr. Batmanghelidj)ರವರು ನಮ್ಮ ದೇಹದಲ್ಲಿ  ನೀರಿನ ಪಾತ್ರದ ಕುರಿತಾಗಿ ಅನೇಕ ಸಂಶೋದನೆಗಳನ್ನು ನಡೆಸಿ `Your Body's Many Cries for Water’ ಎನ್ನುವ ಪುಸ್ತಕವನ್ನು ಬರೆದು ಮಾನವ ಸಮುದಾಯಕ್ಕೇ ಕೊಡುಗೆಯನ್ನಾಗಿ ನೀಡಿದ್ದಾರೆ. ಈ ಪುಸ್ತಕವು ರೋಗಗಳನ್ನು ತಡೆದು ಉತ್ತಮ ಆರೋಗ್ಯವನ್ನು ಉಳಿಸಿಕೊಳ್ಳಲು ಒಂದು ನೈಸರ್ಗಿಕ ಕ್ರಾಂತಿಕಾರಿ ಮಾರ್ಗವಾಗಿದೆ.
     ನಾವು ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯದೇ ಇರುವುದರಿಂದ ಪ್ರಪಂಚದಾದ್ಯಂತ ಲಕ್ಷಾಂತರ ಜನರು ಅನೇಕ ರೋಗಗಳಿಂದ ನೆರಳುತ್ತಿದ್ದಾರೆ ಎನ್ನುವುದನ್ನು ಈಗ ನಾವು ಒಪ್ಪಿಕೊಳ್ಳಬೇಕಾಗಿದೆ. ದೀರ್ಘಕಾಲದ ನಿರ್ಜಲೀಕರಣವೇ ಇಂದು ವಯಸ್ಕರಲ್ಲಿ  ಆಸ್ತಮಾ, ಅಲರ್ಜಿಗಳು, ಆರ್ಥೈಟಿಸ್, ಮೈಗ್ರೇನ್ ತಲೆನೋವು, ಹೈಪರ್ ಟೆನ್ಷನ್, ಕೊಲಾಸ್ಟ್ರಾಲ್ ಹೆಚ್ಚುವಿಕೆ, ದೀರ್ಘಕಾಲದ ಸುಸ್ತು, ಡಿಪ್ರೆಶನ್, ಡಯಾಬಿಟಿಸ್ ಮುಂತಾದ ಅನೇಕ ರೀತಿಯ ಅನಾರೋಗ್ಯಕ್ಕೆ ಕಾರಣವಾಗಿದೆ.
       ಡಾ. ಬಟ್‌ಮನ್‌ಗೆಲಿಡ್ಜ್ ರವರ ಅಭಿಪ್ರಾಯದಂತೆ ಶರೀರವು ಅನೇಕ ರೀತಿಯ ಬಾಯಾರಿಕೆಯ ಸಂಕೇತಗಳನ್ನು ಹೊಂದಿದೆ. ಒಣಗಿದ ಬಾಯಿ ಮಾತ್ರ ಬಾಯಾರಿಕೆಯ ಲಕ್ಷಣವಲ್ಲ. ಅವರು ವಿವಿಧ ರೀತಿಯ, ನಂಬಲರ್ಹವಾದ ಸೂಚನೆಗಳನ್ನು ತಿಳಿಸುತ್ತಾ ದೇಹವು ಯಾವಾಗ ನೀರಿಗಾಗಿ ಅಪೇಕ್ಷಿಸುತ್ತದೆ ಎನ್ನುವುದನ್ನು ತಿಳಿಸುತ್ತಾರೆ. ಇದರಿಂದ ದೇಹದ ನೀರಿನ ಅಪೇಕ್ಷೆಯನ್ನು ಹೋಗಲಾಡಿಸಿಕೊಂಡು ಕಾಸಿನ ಖರ್ಚಿಲ್ಲದೇ ವೈವಿಧ್ಯ ರೀತಿಯ ರೋಗಗಳಿಂದ ಮುಕ್ತಿಯನ್ನು ಹೊಂದಬಹುದು. ಅವರು ನೀರನ್ನು ಪ್ರಕೃತಿಯ ಆಶ್ಚರ್ಯಕರ ಔಷಧ’ ಎಂದು ಕರೆಯುತ್ತಾರೆ. ಅವರು ಒಬ್ಬ ವ್ಯಕ್ತಿಯು ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಲು ಎಷ್ಟು ಪ್ರಮಾಣ ನೀರನ್ನು ಕುಡಿಯಬೇಕು ಎನ್ನುವುದನ್ನು ತಿಳಿಸುತ್ತಾರೆ. ಕಾಫಿ, ಟೀ, ಸೋಡಾಗಳು ನೀರಿಗೆ ಉತ್ತಮ ಪರ್ಯಾಯವಲ್ಲ ಎಂದೂ ತಿಳಿಸುತ್ತಾರೆ.
     ಡಾ. ಬಟ್‌ಮನ್‌ಗೆಲಿಡ್ಜ್ ರವರು ನೀರಿನ ಔಷಧೀಯ ಗುಣಗಳನ್ನು ಕಂಡು ಅರಿತ ಮೊದಲ ಸಂದರ್ಭ ಬಹಳ ಸ್ವಾರಸ್ಯಕರವಾಗಿದೆ.
      ಡಾ. ಫೆರಿಡೂನ್ ಬಟ್‌ಮನ್‌ಗೆಲಿಡ್ಜ್ ರವರು ೧೯೩೧ರಲ್ಲಿ ಇರಾನ್ ನಲ್ಲಿ ಹುಟ್ಟಿದರು. ಅವರು ತಮ್ಮ ವೈದ್ಯಕೀಯ ತರಬೇತಿಯನ್ನು ಲಂಡನ್‌ನ ಸೇಂಟ್ ಮೇರೀಸ್ ಹಾಸ್ಪಿಟಲ್ ಮೆಡಿಕಲ್ ಸ್ಕೂಲ್‌ನಲ್ಲಿ ಪಡೆದರು. ನಂತರ ಅಲ್ಲಿಯೇ ಹೌಸ್ ಡಾಕ್ಟರ್ ಆದರು. ಇರಾನ್‌ಗೆ ಹಿಂತಿರುಗುವ ಮೊದಲು ಇಂಗ್ಲೆಂಡ್‌ನಲ್ಲಿಯೂ ವೈದ್ಯಕೀಯ ತರಬೇತಿ ಪಡೆದರು. ೧೯೭೯ರಲ್ಲಿ ಕ್ರಾಂತಿಯಾದಾಗ ಪ್ರಸಿದ್ಧ ಕುಟುಂಬದವರಾದ  ಡಾ. ಬಟ್‌ಮನ್‌ಗೆಲಿಡ್ಜ್ ರವರನ್ನು ಬಂಧಿಸಿ ಜೈಲಿಗೆ ತಳ್ಳಿದರು. ಇವಿನ್ ಕಾರಾಗೃಹದಲ್ಲಿದ್ದಾಗಲೇ ಅವರು ನೀರಿನ ಗುಣಕಾರೀ ಶಕ್ತಿಯನ್ನು ಸಂಶೋಧಿಸಿದರು.
       ಒಂದು ರಾತ್ರಿ ಡಾ. ಬಟ್‌ಮನ್‌ಗೆಲಿಡ್ಜ್ ರವರು ಪೆಪ್ಟಿಕ್‌ಅಲ್ಸರ್‌ನಿಂದ ನೋವನ್ನು ಅನುಭವಿಸುತ್ತಿದ್ದ ತಮ್ಮ ಸಹಕೈದಿಗೆ ಔಷದೊಪಚಾರ ಮಾಡಬೇಕಾಯ್ತು. ಯಾವುದೇ ಅನುಕೂಲತೆಗಳೂ ಇಲ್ಲದಿದ್ದರಿಂದ ನೋವಿನಿಂದ ತೀವ್ರವಾಗಿ ನರಳುತ್ತಿದ್ದಾತನಿಗೆ ಎರಡು ಲೋಟ ನೀರನ್ನು ಕುಡಿಸಿದರು. ಎಂಟು ನಿಮಿಷಗಳಲ್ಲಿಯೇ ಅವನ ನೋವು ಮಾಯವಾಯ್ತು! ಅವನಿಗೆ ಪ್ರತಿ ಮೂರು ಗಂಟೆಗೊಮ್ಮೆ ಎರಡು ಲೋಟ ನೀರನ್ನು ಕುಡಿಯಲು ತಿಳಿಸಿದರು. ಅವನು ಜೈಲಿನಲ್ಲಿದ್ದ ಮುಂದಿನ ನಾಲ್ಕು ತಿಂಗಳ ಕಾಲ ನೋವಿನಿಂದ ನರಳಲೇ ಇಲ್ಲ! ಯಾವುದೇ ಔಷದೋಪಚಾರವಿಲ್ಲದೇ ಅವನು ಗುಣಮುಖನಾಗಿದ್ದನು.
       ತಾವು ಜೈಲಿನಲ್ಲಿದ್ದ ೩೧ತಿಂಗಳಕಾಲ ಡಾ. ಬಟ್‌ಮನ್‌ಗೆಲಿಡ್ಜ್‌ರವರು ೩೦೦೦ಕ್ಕೂ ಅಧಿಕ ಪೆಪ್ಟಿಕ್‌ಅಲ್ಸರ್‌ನಿಂದ ನರಳುತ್ತಿದ್ದ ರೋಗಿಗಳನ್ನು ಕೇವಲ ನೀರಿನಿಂದಲೇ ಉಪಚರಿಸಿ ಗುಣಪಡಿಸಿದರು. ತಾವು ಬಂಧಿಯಾಗಿದ್ದಾಗಲೇ ನೀರಿನ ಔಷಧೀಯ ಗುಣಗಳ ಬಗ್ಗೆ ಪ್ರಶಸ್ತವಾದ ಸಂಶೋಧನೆಗಳನ್ನು ನಡೆಸಿದರು ಹಾಗೂ ನೀರು ಅನೇಕ ತೀವ್ರ ನೋವಿನ ರೋಗಗಳನ್ನು ತಡೆಯುತ್ತದೆ, ಶಮನ ಮಾಡುತ್ತದೆ ಹಾಗೂ ಗುಣಪಡಿಸುತ್ತದೆ ಎನ್ನುವುದನ್ನು ಕಂಡುಹಿಡಿದರು. ಅವರು ಇವಿನ್ ಪ್ರಿಸನ್‌ಅನ್ನು ಒಂದು "ideal stress laboratory," ಎಂದು ಪರಿಗಣಿಸಿದರು ಹಾಗೂ ತಮ್ಮ ಬಂಧನದ ಅವಧಿಯು ಪೂರೈಸಿದ ನಂತರವೂ ನಾಲ್ಕು ತಿಂಗಳು ಹೆಚ್ಚಾಗಿ ಅಲ್ಲಿಯೇ ಇದ್ದು ನಿರ್ಜಲೀಕರಣ, ಒತ್ತಡ ಮತ್ತು ರೋಗಗಳ ನಡುವಿನ ಪರಸ್ಪರ ಸಂಬಂಧದ ಕುರಿತಾದ ಸಂಶೋಧನೆಯನ್ನು ಪೂರ್ಣಗೊಳಿಸಿದರು. ೧೯೮೨ರಲ್ಲಿ ಜೈಲಿನಿಂದ ಬಿಡುಗಡೆಯಾದ ನಂತರ ಇರಾನಿನಿಂದ ತಪ್ಪಿಸಿಕೊಂಡು ಅಮೇರಿಕಾಗೆ ಹೋಗಿ ಅಲ್ಲಿ ಮಾನವನ ಶರೀರದಲ್ಲಿ ನೀರಿನ ಪಾತ್ರ’ ಮತ್ತು ಮಾನವನ ಆರೋಗ್ಯ ಮೇಲೆ ನಿರ್ಜಲೀಕರಣದ ಹಾನಿಕಾರಕ ಪರಿಣಾಮಗಳು’ ಇವುಗಳ ಬಗ್ಗೆ ತಮ್ಮ ಸಂಶೋದನೆಯನ್ನು ಮುಂದುವರೆಸಿದರು. ಅವರ ಅಧ್ಯಯನಗಳಿಂದ ತಿಳಿದು ಬಂದ ಪ್ರಮುಖ ಅಂಶವೆಂದರೆ ಕ್ರಮಾನುಸಾರ ಯತೇಚ್ಛವಾಗಿ ನೀರನ್ನು ಕುಡಿಯುವಂತಹ ಜೀವನ ಶೈಲಿಯನ್ನು ಅಳವಡಿಸಿಕೊಂಡರೆ ನಾವು ಸಂತಸದಾಯಕವಾದ ಆರೋಗ್ಯಕರ ಜೀವನವನ್ನು ನಡೆಸಬಹುದು ಹಾಗೂ ತೀವ್ರ ನೋವಿನಿಂದ ಕೂಡಿದ ರೋಗಗಳಿಂದ ನರಳುತ್ತಾ ಸೇವಿಸಬೇಕಾದ ಅಧಿಕ ವೆಚ್ಚವುಂಟುಮಾಡುವ ಔಷಧಗಳಿಂದ ದೂರವಿರಬಹುದು.
ಈಗ  ಡಾ. ಬಟ್‌ಮನ್‌ಗೆಲಿಡ್ಜ್‌ರವರು ನೀರಿನ ಗುಣಕಾರೀ ಶಕ್ತಿಯ ಬಗ್ಗೆ ಜನರಲ್ಲಿ ತಿಳುವಳಿಕೆಯನ್ನುಂಟುಮಾಡುವ  ಕಾರ್ಯಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ.  ಅವರ ಪುಸ್ತಕ `Your Body's Many Cries for Water’ ಸಾವಿರಾರು ಜನರು ಆರೋಗ್ಯಕರವಾದ ಸಂತೋಷದ ಜೀವನವನ್ನು ನಡೆಸಲು ಸಹಕಾರಿಯಾಗಿದೆ.
     ಮೊದಲು ನಮ್ಮ ಶರೀರದ ಆರೋಗ್ಯವನ್ನು ಉತ್ತಮಪಡಿಸಿಕೊಂಡರೆ ನಂತರ ಯಾವುದೇ ಸಾಧನೆಯನ್ನೂ ಮಾಡಬಹುದು ಶರೀರಮಾದ್ಯಂ ಖಲು ಧರ್ಮ ಸಾಧನಂ’. ನಮಗೆ ಸುಲಭವಾಗಿ ಸಿಗುವ ನೀರಿನಲ್ಲಿಯೇ ನಮ್ಮ ಆರೋಗ್ಯದ ಗುಟ್ಟು ಅಡಗಿದೆ ಎಂದ ಮೇಲೆ. ತಡವೇಕೆ?                                                                    



9 comments:

  1. ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವುದರಿಂದ, ನಮ್ಮ ಶರೀರದ ಅನೇಕ ತೊಂದರೆಗಳನ್ನು ನಿವಾರಿಸಬಹುದು ಎನ್ನುವ ಸಂದೇಶವನ್ನು ನೀಡುವ ನಿಮ್ಮ ಲೇಖನಕ್ಕಾಗಿ ಧನ್ಯವಾದಗಳು.

    ReplyDelete
    Replies
    1. @ ಸುನಾಥ್ ರವರೆ,
      ನನ್ನ ಲೇಖನಕ್ಕೆ ಮೆಚ್ಚುಗೆಯನ್ನು ತಿಳಿಸಿ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್. ಬರುತ್ತಿರಿ

      Delete
  2. oLLeya maahiti, neeru sada arogyavannu neeDutte.. thank u

    ReplyDelete
    Replies
    1. @ಸುಗುಣ ರವರೆ,
      ನನ್ನ ಲೇಖನವನ್ನು ಇಷ್ಟಪಟ್ಟು, ಮೆಚ್ಚುಗೆಯನ್ನು ತಿಳಿಸಿ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

      Delete
  3. ನೀರಿನ ಶಕ್ತಿಯನ್ನು ಈ ಬರಹ ಸಮರ್ಥವಾಗಿ ಬಿಂಬಿಸಿದೆ. ನಿಮ್ಮ ಬರಹಗಳನ್ನು ಪ್ರಿಂಟ್ ಔತ್ ತೆಗೆದು ನನ್ನ ಶಾಲೆಗೆ ಕಳುಹಿಸ ಬಹುದೆ. ಅವರು ಇದನ್ನು ನೋಟೀಸ್ ಬೋರ್ಡಿನಲ್ಲಿ ಹಾಕಿ ಮಕ್ಕಳ ಓದಿಗೆ ಅನುಕೂಲ ಮಾಡಿಕೊಡುತ್ತಾರೆ?

    ReplyDelete
    Replies
    1. @ಬದರಿನಾಥ್ ರವರೆ,
      ಲೇಖನದ ಉಪಯುಕ್ತತೆಯನ್ನು ಮನಗ೦ಡು ಆತ್ಮೀಯವಾಗಿ ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ನಿಮಗೆ ಧನ್ಯವಾದಗಳು. ಒಳಿತನ್ನು ಹ೦ಚಿಕೊಳ್ಳಬೇಕೆ೦ಬ ನಿಮ್ಮ ಕಳಕಳಿಗೆ ನನ್ನ ಹೃತ್ಪೂರ್ವಕ ನಮನಗಳು. ನಿಮ್ಮ ಅಭಿಪ್ರಾಯಕ್ಕೆ ನನ್ನ ಒಪ್ಪಿಗೆ ಇದೆ. ಬರುತ್ತಿರಿ.

      Delete
  4. ಮೇಡಂ;ಅತ್ಯುತ್ತಮ ಮಾಹಿತಿಯುಳ್ಳ ಅತಿ ಉಪಯುಕ್ತ ಲೇಖನ.ವೈದ್ಯನಾದ ನನಗೇ ಈ ಪುಸ್ತಕ ಮತ್ತು ಅದನ್ನು ಬರೆದ ವಿಜ್ಞಾನಿಯ ಬಗ್ಗೆ ಮಾಹಿತಿ ಇರಲಿಲ್ಲ.ಅಲೋಪತಿವೈದ್ಯನಾಗಿಯೂ,ನಿಧಾನವಾದ ಧೀರ್ಘ ಉಸಿರಾಟ,ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು,ಸಾಕಷ್ಟು ವ್ಯಾಯಾಮ ಮತ್ತು ಹಿತವಾದ,ಮಿತವಾದ ಆಹಾರದಿಂದ ಸಾಕಷ್ಟು ಖಾಯಿಲೆಗಳನ್ನು ಗುಣ ಪಡಿಸಬಹುದೆಂಬ ನಂಬಿಕೆ ನನ್ನದು.ಧನ್ಯವಾದಗಳು.ನನ್ನ ಬ್ಲಾಗಿನಲ್ಲಿ ಬರೆದ ಸಮಸ್ಯೆಗೂ ಇದು ಉತ್ತರವಾಗಬಹುದು.ನಮಸ್ಕಾರ.

    ReplyDelete
    Replies
    1. @ಡಾ. ಕೃಷ್ಣ ಮೂರ್ತಿಯವರೆ,

      ತೆರೆದ ಮನಸ್ಸಿನ ನಿಮ್ಮ ಅಭಿಪ್ರಾಯಕ್ಕಾಗಿ ಧನ್ಯವಾದಗಳು. ನಮ್ಮದು ಪರಸ್ಪರ ಕಲಿಕೆಯಾಗಿದೆ. ಬರುತ್ತಿರಿ ಸರ್.

      Delete
  5. ನೀರಿನ ಉಪಯೋಗತೆಯ ಬಗ್ಗೆ ತು೦ಬಾ ಒಳ್ಳೆಯ, ಅವಶ್ಯಕ ಮಾಹಿತಿ ಕೊಟ್ಟಿದ್ದೀರಿ.ಧನ್ಯವಾದಗಳು.

    ReplyDelete