Monday, January 31, 2011

ಮನದ ಅಂಗಳದಿ..................೨೭. ಸಹನಶೀಲತೆ

ರೂಢಿಯಂತೆ ಹಳೆಯ ಪುಸ್ತಕಗಳ ನಡುವೆ ಮೈಮರೆತಿದ್ದಾಗ ಒಂದು ಕಾಲೇಜು ದಿನಗಳ ಆಟೋಗ್ರಾಫ್ ಸಿಕ್ಕಿತು. ಪುಟಗಳನ್ನು ತಿರುಗಿಸುತ್ತಿರುವಾಗ, ‘ಅತ್ಯಂತ ಸಹನಶೀಲರಾದ ತಮಗೆ ಅನಂತ ವಂದನೆಗಳು.’ ಎನ್ನುವ ಕೈಬರಹ ಕಣ್ಣಿಗೆ ಬಿತ್ತು. ಅದನ್ನು ಬರೆದ ‘ಆತ’ ಯಾರು ಎನ್ನವುದು ಹೆಸರಿನಿಂದ ನೆನಪಿಸಿಕೊಳ್ಳಲೂ ಆಗುತ್ತಿಲ್ಲ. ಆತನಿಗೆ ನನ್ನ ಸಹನೆಯಬಗ್ಗೆ ಹೇಗೆ ತಿಳಿಯಿತು?...................ಇದನ್ನೇ ಆಧರಿಸಿ ಒಂದು ಹಾಸ್ಯಬರಹವನ್ನು ಬರೆದಿದ್ದೆ.

ಸಹನೆಗೆ ಹೆಸರಾದ ಪ್ರಾಣಿ ಕತ್ತೆ. ಮೈಮೇಲೆ ಎಷ್ಟೇ ಭಾರವನ್ನು ಹೇರಿದರೂ ವಿರೋಧಿಸದೇ ಹೊರುವ ಪ್ರಯತ್ನ ನಡೆಸುತ್ತದೆ. ಕೆಲವು ವರ್ಷಗಳ ಹಿಂದೆ ಒಂದು ವಿಜ್ಞಾನ ಪತ್ರಿಕೆಯಲ್ಲಿ ‘ಸಾಯಿರಾನ್’ ಎಂಬ ಉಭಯವಾಸಿ ಜೀವಿಯ ಬಗ್ಗೆ ಓದಿದ್ದೆ. ಅದು ಎರಡು ಬರಗಾಲವನ್ನಾದರೂ ತಡೆದು ಬದುಕಬಲ್ಲ ಜೀವಿ. ಆಗ ಹೊಳೆದಿದ್ದ ಒಂದು ‘ಹನಿ’ಗೆ ‘ಸಹನೆ’ ಎಂಬ ಶೀರ್ಷಿಕೆ ಕೊಟ್ಟು ಬರೆದದ್ದು ಹೀಗಿದೆ.

‘ಎರಡು ಬರವನಾದರೂ ತಾಳಬಲ್ಲ
ಸಾಯಿರಾನ್‌ನಂತೆ
ಎದುರು ನೋಡುತ್ತಿರುವೆ
ನಿನ್ನ ಬರವ
ಓ ನನ್ನ ಕಾಂತೆ!’

‘ಸಹನೆ’ ಎಂದರೆ ತಾಳ್ಮೆ, ಸೈರಣೆ ಎಂಬ ಅರ್ಥಗಳೂ ಇವೆ. ’ಆತ ಕಷ್ಟಸಹಿಷ್ಣುವಾಗಿದ್ದ.’ ಎಂದು ಕಥೆಗಳಲ್ಲಿ ಓದುತ್ತೇವೆ. (‘ಸಹಿಷ್ಣು’-ಸಹನೆಯುಳ್ಳವನು.) ಆದರೂ ಈ ಸಹನೆ ಎಂದರೆ ಏನು? ಬೇಸರವಿಲ್ಲದೆ ಕಾಯುವುದೆ? ತಪ್ಪು ಮಾಡಿದ್ದರೂ ಕ್ಷಮಿಸುವುದು ಎಂದೆ? ‘ಕ್ಷಮಯಾ ಧರಿತ್ರಿ’- ಭೂಮಿಯಷ್ಟು ಕ್ಷಮಾಗುಣವನ್ನು ಹೊಂದಿರಬೇಕು ಎನ್ನುತ್ತಾರೆ. ಭೂಮಿಯನ್ನು ತಾಯಿ ಎಂದೇ ಕರೆಯುತ್ತಾರೆ. ವಸ್ತುತಃ ನಿರ್ಜೀವವಾಗಿರುವ, ಸಂಪ್ರದಾಯಸ್ಥರು ಮತ್ತು ಕವಿಗಳಿಗಷ್ಟೇ ಸ್ತ್ರೀಯಂತೆ ಗೋಚರಿಸುವ ಭೂಮಿತಾಯಿಯ ಸಹನೆಗಿಂತ ನನ್ನ ತಾಯಿಯ ಸಹನೆ ವರ್ಣನಾತೀತ. ಹಗಲಿನಿಂದ ರಾತ್ರಿಯವರೆಗೂ ಮನೆಯಲ್ಲಿ, ಜಮೀನಿನಲ್ಲಿ ಮೂಗಿಗೆ ಕವಡೆಕಟ್ಟಿಕೊಂಡ ಪಶುವಿನಂತೆ ದುಡಿದಿದ್ದರೂ ರಾತ್ರಿ ಸೀಮೆಎಣ್ಣೆ ಬುಡ್ಡಿ ದೀಪದ ಮುಂದೆ ಕುಳಿತು ಒಂದೊಂದು ಕಾದಂಬರಿಯನ್ನು ಓದಿ ಮುಗಿಸುತ್ತಿದ್ದ ಅವರ ಪುಸ್ತಕ ಪ್ರೇಮವೂ ಅದ್ವಿತೀಯ. ಒಮ್ಮೊಮ್ಮೆ ಈಗಿನ ಪರಿಸ್ಥತಿಗೆ ಇಂಥಾ ಸಹನೆ ಸಮಂಜಸವಲ್ಲವೇನೋ ಎನಿಸುತ್ತದೆ. ಭೂಮಿಯೂ ಮಾನವನ ಮಿತಿಮೀರಿದ ವರ್ತನೆಯಿಂದ ಭೂಕಂಪ, ಸುನಾಮಿಯಂಥಾ ವಿಕೋಪಗಳನ್ನುಂಟುಮಾಡಿ ಅನಾಹುತಕ್ಕೆ ಕಾರಣವಾಗುತ್ತಿದೆ.

‘ಸಹನಾ ಗುಣ’ವು ಒಬ್ಬ ವ್ಯಕ್ತಿಯ ವ್ಯಕ್ತಿತ್ವದಲ್ಲಿನ ಹಿರಿತನದ ಸೂಚಕವಾಗಿದೆ. ಪರಿಸ್ಥಿತಿಯು ವಿಕೋಪಕ್ಕೆ ತಿರುಗದಂತೆ ತಮ್ಮ ವಶಕ್ಕೆ ತೆಗೆದುಕೊಂಡು ವಿಶಿಷ್ಟ ರೀತಿಯಲ್ಲಿ ನಿರ್ವಹಿಸುವ ಸಾಮರ್ಥ್ಯವು ಕೆಲವೇ ಕೆಲವು ಜ್ಞಾನಿಗಳಲ್ಲಿ ಮಾತ್ರ ಇರುತ್ತದೆ. ಅಂಥಾ ಒಂದು ನಿದರ್ಶನ ಇಲ್ಲಿದೆ.

ಮಹಾರಾಷ್ಟ್ರದ ಮಹಾನ್ ವಿಠ್ಠಲ ಭಕ್ತರಾದ, ಸಹನಶೀಲತೆಗೆ ಹೆಸರಾದ ಸಂತ ಏಕನಾಥ ಮಹಾರಾಜರು ಗೋದಾವರಿ ತೀರದಲ್ಲಿರುವ ಪೈಠಣವೆಂಬ ಊರಿನಲ್ಲಿ ವಾಸವಾಗಿದ್ದರು. ಇವರು ರಚಿಸಿದ ಭಕ್ತಿ ಕಾವ್ಯ ಏಕನಾಥರ ಭಾರೂಡ ಎಂಬ ಹೆಸರಿನಿಂದ ಇಂದಿಗೂ ಪ್ರಸಿದ್ಧವಾಗಿದೆ. ಸಾಮಾನ್ಯ ಜನರ ಜೀವನದ ಬಗ್ಗೆ ಹಾಸ್ಯಭರಿತವಾಗಿ ರಚಿಸಿದ ಇವರ ಭಾರೂಡವನ್ನು ಇಂದಿಗೂ ಮಹಾರಾಷ್ಟ್ರದಲ್ಲಿ ಭಕ್ತಿಭಾವದಲ್ಲಿ ಹಾಡಿ ನಲಿಯುತ್ತಾರೆ ಎಂಬ ಮಾತಿದೆ.

ಇಂಥಾ ಮಹಾನ್ ಸಂತರ ಸಹನ ಶೀಲತೆಯನ್ನು ಪರೀಕ್ಷಿಸುವ ದುಃಸ್ಸಾಹಸವನ್ನು ಒಬ್ಬ ಕುಚೋದ್ಯನು ನಡೆಸಿದನು. ಏಕನಾಥರು ವಾಡಿಕೆಯಂತೆ ಗೋದಾವರಿ ನದಿಯಲ್ಲಿ ಸ್ನಾನಮಾಡಿ ದೇವಾಲಯಕ್ಕೆ ಹೋಗಲುದ್ಯುಕ್ತರಾದಾಗ ಕಟ್ಟೆಯ ಮೇಲೆ ಕುಳಿತ ಆತ ಎಲೆಅಡಿಕೆ ತಂಬಾಕು ತಿಂದ ಬಾಯಿಯಿಂದ ಇವರ ಮೈಮೇಲೆ ಉಗುಳಿದನು. ಏಕನಾಥರು ಯಾವ ಭಾವವನ್ನೂ ವ್ಯಕ್ತಪಡಿಸದೆ ಮರಳಿ ನದಿಗೆ ಹೋಗಿ ಸ್ನಾನಮಾಡಿ ದೇವಾಲಯಕ್ಕೆ ಹೊರಟಾಗ ಆತ ಅವರ ಮೈಮೇಲೆ ಪುನಃ ಉಗುಳಿದನು. ಸಂತರು ನಿರ್ವಿಕಾರ ಮನಸ್ಸಿನಿಂದ ಮತ್ತೆ ನದಿಗೆ ಹೋಗಿ ಸ್ನಾನ ಮಾಡಿ ದೇವಾಲಯಕ್ಕೆ ಹೋಗುತ್ತಿರಲು ಮತ್ತೊಮ್ಮೆ ಉಗುಳಿದನು. ಸಂತರು ಪುನಃ ಸ್ನಾನಮಾಡಿ ಹೊರಡಲುದ್ಯುಕ್ತರಾದಾಗ ಆತ ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, ‘ಮಹಾರಾಜರೇ, ನಾನು ಮಹಾ ಪಾತಕಿ, ನಿಮ್ಮನ್ನು ಮೂರುಸಲ ಅಪವಿತ್ರತ್ರಗೊಳಿಸಿದ ನನ್ನನ್ನು ಕ್ಷಮಿಸಿ.’ ಎಂದಾಗ ಅವರು, ‘ಮಹಾರಾಜರೇ, ಈ ನಿಮ್ಮ ಕೃತ್ಯದಿಂದ ನೀವು ನನಗೆ ಮೂರುಸಲ ಗೋದಾವರಿ ಸ್ನಾನದ ಪುಣ್ಯ ಒದಗಿಸಿ ಕೊಟ್ಟ ಪುಣ್ಯವಂತರು. ನಿಮಗೆ ನಾನು ಕೃತಜ್ಞನು.’ ಎಂದರು!

‘ಸಮಯವೇ ಸಂಪತ್ತು. ಸಹನೆಯೇ ಆರೋಗ್ಯ.’ ಎನ್ನುವ ಉಕ್ತಿ ಇದೆ. ನಾವು ಆರೋಗ್ಯವಂತರಾಗಿರಲು ಬಹಳ ಮುಖ್ಯವಾಗಿ ಸಹನಾಗುಣವನ್ನು ಹೊಂದಿರಬೇಕು. ಆತುರ, ಆತಂಕ, ಅಸಹನೆಗಳು ಅನಾರೋಗ್ಯದ ಮೂಲವಷ್ಟೇ ಅಲ್ಲ, ಎಲ್ಲಾ ಅನಾಹುತಗಳ ಮೂಲವೂ ಆಗಿದೆ. ನಮ್ಮ ರಾಜಕೀಯ ಮುತ್ಸದ್ದಿಗಳು ಸ್ವಲ್ಪ ಸಹನೆಯಿಂದ ವರ್ತಿಸಿದರೆ ಯಾವುದೇ ಅವಾಂತರಗಳೂ ಇಲ್ಲದೆ ಉತ್ತಮರೀತಿಯಲ್ಲಿ ಆಡಳಿತವನ್ನು ನಡೆಸಬಹುದು.

ಕಾಲೇಜು ದಿನಗಳಲ್ಲಿ ನಾನು ಓದಿದ್ದ E.M. Forster ಅವರ 'Tolerance' ಎಂಬ ಪ್ರಬಂಧ ನನಗೆ ಬಹಳ ಇಷ್ಟವಾಗಿ ಈಗಲೂ ಆಗಾಗ ನೆನಪಾಗುತ್ತಿರುತ್ತದೆ. ಈ ಪ್ರಬಂಧದಲ್ಲಿ ಲೇಖಕರು ಪ್ರೀತಿ ಮತ್ತು ಸಹನೆಯ ಅಳವಡಿಕೆಯ ಬಗ್ಗೆ ಬಹಳ ಚೆನ್ನಾಗಿ ತಿಳಿಸಿದ್ದಾರೆ. ಅದು ಯಥಾವತ್ತಾಗಿ ನೆನಪಾಗದೇ ಇರುವುದರಿಂದ ಅಂತರ್ಜಾಲದಲ್ಲಿ ಜಾಲಾಡಿದಾಗ ದೊರೆತ ಪ್ರಮುಖಾಂಶಗಳು ಹೀಗಿವೆ,

'There are two possible approaches toward those whom we do not like. The first is the Nazi solution to kill or punish them. The second is the democratic and civilized way of tolerating them. It is no more possible to exterminate any nation from this world. We must check fanaticism and spread tolerance if we want to rebuild this world as a peaceful and safe place.’

ಪ್ರೀತಿಯನ್ನು ನಾವು ನಮ್ಮ ವೈಯಕ್ತಿಕ ಆಚರಣೆಯಾಗಿಸಿಕೊಳ್ಳಬಹುದು ಆದರೆ ಸಾರ್ವಜನಿಕಗೊಳಿಸಲಾಗುವುದಿಲ್ಲ. ಎಲ್ಲ ರೀತಿಯ ವ್ಯಕ್ತಿಗಳನ್ನೂ ಪ್ರೀತಿಯಿಂದ ಕಾಣಲಾಗುವುದಿಲ್ಲ. ಆದ್ದರಿಂದ ಯಾರನ್ನು ಪ್ರೀತಿಸಲಾಗುವುದಿಲ್ಲವೋ ಅವರನ್ನು ಸಹಿಸಿಕೊಳ್ಳಬೇಕಾಗುತ್ತದೆ. ‘ಸಹನೆ' ಎನ್ನುವುದು ಋಣಾತ್ಮಕವಾಗಿ ತೋರಿದರೂ, ಅದು ಶುಷ್ಕವಾದ, ಕಳಪೆಯಾದ ಗುಣದಂತಿದ್ದರೂ, ವಿಶ್ವಶಾಂತಿಯನ್ನು ಕಾಪಾಡುವುದಕ್ಕಾಗಿ ಹಾಗೂ ಈ ನಮ್ಮ ಭೂಮಿಯನ್ನು ರಕ್ಷಿತ ತಾಣವನ್ನಾಗಿ ಮಾಡಿಕೊಳ್ಳಲಾದರೂ ನಾವು ಸಹನಶೀಲತೆಯನ್ನು ನಮ್ಮದನ್ನಾಗಿಸಿಕೊಳ್ಳಬೇಕಾಗುತ್ತದೆ ಎನ್ನುವ E.M. Forster ಅವರ ಚಿಂತನೆ ಪ್ರಸ್ತುತ ಸನ್ನಿವೇಶದಲ್ಲಿ ಎಷ್ಟೊಂದು ಅಗತ್ಯವೆನಿಸುತ್ತದೆ ಅಲ್ಲವೆ? ನಾಗರೀಕರೆನಿಸಿಕೊಳ್ಳುವ ನಾವು ಸಹನಶೀಲತೆಯನ್ನು ನಮ್ಮ ಸ್ವಭಾವವನ್ನಾಗಿಸಿಕೊಳ್ಳಲು ಪ್ರಯತ್ನಿಸಿ ವಿಶ್ವಶಾಂತಿಗೆ ನಮ್ಮ ಅಳಿಲು ಸೇವೆಯನ್ನು ಮಾಡಲು ಕಾರ್ಯೋನ್ಮುಖರಾಗೋಣ.

14 comments:

  1. ಪ್ರಭಾಮಣಿಯವರೆ,
    ಸಹನೆ ನಾಗರಿಕ ಜೀವನದ ಗುರುತಾದರೂ ಸಹ ಮಿತಿ ಮೀರಿದ ಸಹನೆ ಆಪತ್ತಿಗೆ ಆಮಂತ್ರಣ ಕೊಡುವುದೇನೊ ಎನ್ನುವ ಹೆದರಿಕೆ ನನಗಿದೆ.

    ReplyDelete
  2. ನಿಮ್ಮ ಲೇಖನದ ಆಂತರ್ಯ ಇಷ್ಟವಾಗುತ್ತದೆ. ಸುನಾಥರು ಹೇಳಿದಂತೆ, ಮಿತಿಮೀರಿದಾಗ ಯಾವುದನ್ನ್ಯ್ ಸಹಿಸಿಕೊಲ್ಳುವುದು ಕಷ್ಟವೇ ಸರಿ !. ಕೊನೆಯ ವಾಕ್ಯದಂತೆ ವಿಶ್ವಶಾಂತಿಗಾಗಿ ನಮ್ಮಿಂದಾಗುವ ಅಳಿಲುಸೇವೆ ಸಲ್ಲಿಸುವುದು ಇಂದಿ ಅಗತ್ಯಗಳಲ್ಲಿ ಪ್ರಮುಖವಾದುದು.

    ReplyDelete
  3. ಪ್ರಭಾಮಣಿ ನಾಗರಾಜ , ನಿಮ್ಮ ಪ್ರಬುದ್ದ ಬರವಣಿಗೆ ಚೆನ್ನಾಗಿದೆ.
    ಸಹನಶೀಲತೆ ಬಗ್ಗೆ ಒಳ್ಳೆಯ ಲೇಖನ , ಇಷ್ಟವಾಯಿತು. ನಿಮ್ಮ ಬರಹಗಳು ಮಾಹಿತಿಪೂರ್ಣ ವಾಗಿರುತ್ತವೆ , ನಿಮಗೆ ನನ್ನ ನಮನಗಳು.

    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  4. @ ಸುನಾಥ್ ರವರೆ,
    ತಾವು ತತ್ ಕ್ಷಣ ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದಕ್ಕಾಗಿ ವ೦ದನೆಗಳು. `ಒಮ್ಮೊಮ್ಮೆ ಈಗಿನ ಪರಿಸ್ಥತಿಗೆ ಇಂಥಾ ಸಹನೆ ಸಮಂಜಸವಲ್ಲವೇನೋ' ಎನ್ನುವ ಅನಿಸಿಕೆ ನನ್ನದೂ ಆಗಿದೆ. ಆದರೆ ಕೆಲವು ನಿರ್ಣಾಯಕ ಕ್ಷಣಗಳಲ್ಲಿ & ಸ್ಥಾನಗಳಲ್ಲಿ `ಸಹನೆ' ಬಹಳ ಮುಖ್ಯವೆನಿಸುತ್ತದೆ. ಅದಕ್ಕೆ E.M. Forster ಅವರ 'Tolerance' ಬಹಳ ಇಷ್ಟವಾಗುತ್ತದೆ.

    ReplyDelete
  5. @ ಸುಬ್ರಹ್ಮಣ್ಯರವರೆ,
    ಅನೇಕ ದಿನಗಳ ನ೦ತರ ನನ್ನ ಬ್ಲಾಗ್ ಗೆ ಬ೦ದು ಈ ಲೇಖನಕ್ಕೆ ಶೀಘ್ರವೇ ಪ್ರೋತ್ಸಾಹಕರ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು. `ಅತಿ ಸರ್ವತ್ರ ವರ್ಜಯೇತ್ ' ಎನ್ನುವ ಉಕ್ತಿಯನ್ನು ನೆನಪಿಸಿದ್ದೀರಿ. ಬರುತ್ತಿರಿ.

    ReplyDelete
  6. @ ದಿನಕರರವರೆ,
    ನಿಮ್ಮ ಶೀಘ್ರ ಪ್ರತಿಕ್ರಿಯೆಗೆ ವ೦ದನೆಗಳು.

    ReplyDelete
  7. Today's generation want everything in seconds. When they don't have patience to wait, tolerance should not even be expected.

    Hope we put efforts in getting back to our ancestors lifestyle and be patient and tolerant. :)

    ReplyDelete
  8. ಮೇಡಂ
    ಸಹನೆಯ ಬಗೆಗೆ ತುಂಬಾ ಸುಂದರ ಲೇಖನ
    ನಿಮ್ಮ ಬರಹದ ಶೈಲಿ ಬಹ ಚೆನ್ನಾಗಿದೆ
    ಇನ್ನಷ್ಟು ಬರಹಗಲ್ ನೀರೀಕ್ಷೆಯಲ್ಲಿ

    ReplyDelete
  9. ಪ್ರಭಾ ಮೇಡಂ ಸಹನೆ ಎನ್ನುವುದಕ್ಕೆ ಮಿತಿಯಿದೆ ಎನ್ನುವುದೂ ಸತ್ಯವಲ್ಲವೇ...ಅಂತಹಾ ಶ್ರೀ ಕೃಷ್ಣನೇ ಶಿಶುಪಾಲನ ನೂರು ತಪ್ಪು ಮಾತ್ರ ಸಹಿಸಬಲ್ಲೆ ಎನ್ನುವ ಮಾತನ್ನು ಹೇಳಿ ಸಹನೆಯ ಸೀಮೆಯೆಲಿದೆ ಎಂದು ತಿಳಿಸಿಕೊಟ್ಟ..ಬಹಳ ವಿವಿಧತೆಗಳ ನಿದರ್ಶನಗಳೊಂದಿಗೆ ಸಹನೆಯ ವ್ಯಾಖ್ಯಾನ ನೀಡಿದ್ದೀರಿ...ಅಭಿನಂದನೆಗಳು.

    ReplyDelete
  10. ಸಹನೆಯ ಬಗ್ಗೆ ಒಳ್ಳೆಯ ಬರಹವನ್ನು ಕೊಟ್ಟಿದ್ದೀರಿ..ಚೆನ್ನಾಗಿದೆ.

    ReplyDelete
  11. ಪ್ರಭಾಮಣಿ ಮೇಡಂ; ಸಹನೆ ಎಲ್ಲಿ ಬೇಕು,ಎಲ್ಲಿ ದೌರ್ಜನ್ಯವನ್ನು ಸಹಿಸಿಕೊಳ್ಳಬಾರದು ಎನ್ನುವುದನ್ನು ತಿಳಿಯುವುದಕ್ಕೆ ಮುಖ್ಯವಾಗಿ ವಿವೇಚನೆ ಬೇಕು ಎನ್ನುವುದು ನನ್ನ ಅಭಿಪ್ರಾಯ.ಲೇಖನ ಇಷ್ಟವಾಯಿತು.ಬ್ಲಾಗಿಗೆ ಭೇಟಿಕೊಡಿ.ನಮಸ್ಕಾರ.

    ReplyDelete
  12. ತುಂಬಾ ಒಳ್ಳೆಯ ಲೇಖನ. ನಾನು ಚಿಕ್ಕವಳಿದ್ದಾಗ ಇಷ್ಟ ಪಟ್ಟು ಹೇಳುತ್ತಿದ್ದ ಗಾದೆ ಮಾತು " ತಾಳಿದವನು ಬಾಳಿಯಾನು" ನೆನಪಾಯ್ತು.

    ReplyDelete