Saturday, April 16, 2011

'ಸ೦ಯುಕ್ತ ಕರ್ನಾಟಕ' ದಲ್ಲಿ ನನ್ನ ಸ೦ದರ್ಶನದ ಲೇಖನ

ಆತ್ಮೀಯರೇ,

ದಿನಾ೦ಕ: ೦೧-೧೦-೨೦೧೦ರ 'ಸ೦ಯುಕ್ತ ಕರ್ನಾಟಕ' ಪತ್ರಿಕೆಯ ಶುಕ್ರವಾರದ 'ಅ೦ದದೂರು ಬೆ೦ಗಳೂರು' ವಿಶೇಷ ಆವೃತ್ತಿಯ 'ಆಮುಖ' ಅ೦ಕಣದಲ್ಲಿ ಭುವನೇಶ್ವರಿ. ಹೆಚ್.ಸಿ.ಯವರು ನನ್ನ ಸ೦ದರ್ಶನದ ಲೇಖನವನ್ನು ಬರೆದು ಅದರ pdf ಅನ್ನು e -mail ಮೂಲಕ ಕಳುಹಿಸಿದ್ದರು. ಆಗಿನಿ೦ದಲೂ ಇದನ್ನು ತಮ್ಮೊ೦ದಿಗೆ ಹ೦ಚಿಕೊಳ್ಳಬೇಕೆ೦ಬ ಹ೦ಬಲ ಹಾಗೂ ಬ್ಲಾಗ್ ಗೆ ಹಾಕುವುದು ನಾನಾದ್ದರಿ೦ದ ನನ್ನ ಬಗ್ಗೆ ನಾನೇ ಹೇಳಿಕೊಳ್ಳುವ೦ತಾಗುವುದೆ೦ಬ ಅಳುಕು, ಜೊತೆಗೆ ಸಮಯದ ಅಭಾವ, ಇವುಗಳ ನಡುವೆ ಮು೦ದೂಡುತ್ತಾ ಬ೦ದೆ. ಈಗ ಗಟ್ಟಿ ಮನಸ್ಸುಮಾಡಿ ನಿಮ್ಮೆದುರು ಇಟ್ಟಿದ್ದೇನೆ....

ಪರಿವೀಕ್ಷಕಿ ಸದಾಚಾರದ ನಿರೀಕ್ಷಕಿ

ಕಥೆ,ಕವನ,ಚುಟುಕು, ಲಲಿತಪ್ರಬಂಧ ಮತ್ತು ಹಾಸ್ಯಬರಹಗಳಲ್ಲಿ ಆರೋಗ್ಯಯುತ ಫಸಲನ್ನು ನೀಡಿರುವ ಈ ಕವಿ ಆಶುಕವಿ! ಬಿಡುವಿಲ್ಲದ ದುಡಿತದ ನಡುವೆ ‘ಕೀಲೆಣ್ಣೆ'ಯಾಗಿರುವ ಸಾಹಿತ್ಯಾಭಿರುಚಿ ಸಿಂಚನ ಸೇತು! ಅವರದೇ ಮಾತುಗಳಲ್ಲಿ; ‘ಸಾಗಿದಂತೆ ಬದುಕ ಯಾಂತ್ರಿಕ ಬಂಡಿ ಥಟ್ಟನೆ ಹೊಳೆವ ಚುಟುಕುಗಳೇ ಸಾಹಿತ್ಯ ಕ್ಷೇತ್ರದೊಡನೆ ಸೇರಿಸುವ ಕೊಂಡಿ!'

‘ನಾನು ಏನನ್ನಾದರೂ ಸಾಧಿಸಿದ್ದೇನೆ ಎಂದು ನಾನು ಖಂಡಿತ ಭಾವಿಸಿಲ್ಲ. ಬರೆಯುವುದು ನನಗೆ ಸಂತಸದ, ಸಮಾಧಾನ ನೀಡುವ, ಸಾರ್ಥಕ ಭಾವವನ್ನುಂಟುಮಾಡುವ ಕ್ಷಣ, ಅಷ್ಟೆ' ಎನ್ನುವ ತುಂಬು ಮನಃ ಸ್ಥಿತಿಯ ನಮ್ಮ ನಿಮ್ಮ ನಡುವಿನ ಬರಹಗಾತಿ ಪ್ರಭಾಮಣಿ ನಾಗರಾಜರ ಲೇಖನಿಯ ಕಸುವು ಈ ಸಾರಿಯ ಆ ಮುಖದಲ್ಲಿ..

ಬರೆಯಬೇಕೆಂಬಾಸೆ ಮನದ ತುಂಬೆಲ್ಲಾ
ಆದರೀ ಯಾಂತ್ರಿಕತೆ ಸಮಯ ಸಿಗದಲ್ಲಾ
ಅದಕಾಗೇ ಭಾವನೆಗಳನೆಲ್ಲಾ ಮೊಟಕು ಗೊಳಿಸಿ
ಆಗಿದ್ದೇನೆ ಸಾಹಿತ್ಯ ದೇವಿಗೆ ಚುಟುಕು ದಾಸಿ!

ಎಂದು ತಾನು ಆರಿಸಿಕೊಂಡ ಅಥವಾ ತನಗೆ ಒಗ್ಗಿದ, ಒಗ್ಗಿಸಿಕೊಂಡ(!) ಸಾಹಿತ್ಯ ಪ್ರಕಾರದ ಬಗ್ಗೆ ಮುಕ್ತವಾಗಿ ತೆರೆದಿಡುವ ಹಾಸನ ನೆಲದ ಪ್ರಭಾಮಣಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮಾತ್ರವಲ್ಲದೆ ಶಿಕ್ಷಣ ಕ್ಷೇತ್ರಕ್ಕೂ ಸಲ್ಲಿಸುತ್ತಿರುವ ಸೇವೆ ಮಾದರಿ. ಗಣಿತ ವಿಷಯ ಪರಿವೀಕ್ಷಕರಾಗಿರುವ ಈಕೆಯ ನಡೆ ನುಡಿ, ಚಿಂತನೆ, ಬರಹ ಸಮಾಜ ವಿಜ್ಞಾನಕ್ಕೆ ದೊಡ್ಡಕೊಡುಗೆ.

‘ಬರೆಯುವುದರಲ್ಲಿ 'ನಿರೀಕ್ಷಿತ ಸಾಧನೆ' ಎನ್ನುವುದು ಯಾವುದೂ ನನಗೆ ತಿಳಿಯುತ್ತಿಲ್ಲ. ನಾನು ಬರೆಯುತ್ತಲೇ ಇರಬೇಕು. ನಾನು ಬರೆಯಬೇಕೆನಿಸಿದ್ದನ್ನು ಬರೆದಾಗ ಸಂತಸವಾಗುತ್ತದೆ. ನಾನು ಬರೆದದ್ದನ್ನು ಪ್ರಕಟಿಸಿ ಆಸಕ್ತರು ಓದಿ ಪ್ರತಿಕ್ರಿಯಿಸಿದಾಗ ಇನ್ನೂ ಹೆಚ್ಚು ಸಂತಸವಾಗುತ್ತದೆ' ಎನ್ನುವ ಹಮ್ಮುಬಿಮ್ಮಿಲ್ಲದ, ತಾರುಮಾರಿಲ್ಲದ ಹದಮನಸ್ಕಲೇಖಕಿಯೊಂದಿಗಿನ ಮಾತಿನ ಸಾರ....

ಬಾಲ್ಯದ ಮೌನ ಹರಹು:
ನಮ್ಮದು ಅವಿಭಕ್ತ ಕುಟುಂಬ. ನನ್ನ ತಂದೆ, ತಾಯಿ, ಸೋದರತ್ತೆ, ಅಕ್ಕ, ತಮ್ಮ ಎಲ್ಲರಿಗೂ ಓದುವುದು ಮೆಚ್ಚಿನ ಹವ್ಯಾಸವಾಗಿತ್ತು. ಶಾಲಾ ಗ್ರಂಥಾಲಯದಿಂದ ಅಕ್ಕ ತಂದ ಪುಸ್ತಕಗಳನ್ನು ಅಮ್ಮ, ಹಗಲೆಲ್ಲಾ ಕೆಲಸದ ಪರಂಪರೆ ಇರುತ್ತಿದ್ದುದರಿಂದ ರಾತ್ರಿ ವೇಳೆಯಲ್ಲಿ ಸೀಮೆಯೆಣ್ಣೆ ಬುಡ್ಡಿ ದೀಪದಲ್ಲಿ ಓದಿ ಮುಗಿಸುತ್ತಿದ್ದರು. ಸಾಮಾನ್ಯವಾಗಿ ಊಟಕ್ಕೆ ಕುಳಿತಾಗ ಇತ್ತೀಚೆಗೆ ಓದಿದ ಪುಸ್ತಕದ ಬಗ್ಗೆ ಚರ್ಚೆ ಪ್ರಾರಂಭವಾಗುತ್ತಿತ್ತು. ಊಟ ಮುಗಿದರೂ ಚರ್ಚೆ ಮುಗಿಯುತ್ತಿರಲಿಲ್ಲ. ಕೆಲವೊಮ್ಮೆ ಚರ್ಚೆಯ ಕಾವೇರಿ ಜಗಳದ ರೂಪವನ್ನೂ ಪಡೆಯುತ್ತಿತ್ತು! ಅಕ್ಕನದು ಅದರಲ್ಲಿ ಪ್ರಮುಖ ಪಾತ್ರ. ನಾನು ಮೌನ ಕೇಳುಗಳಾಗಿರುತ್ತಿದ್ದೆ. ನಾನು ಓದಿದ್ದಕ್ಕಿಂತ ಕೇಳಿ(ತಿಳಿದುಕೊಂಡ)ದ್ದೇ ಹೆಚ್ಚು(ಈಗಲೂ!) ರಾಮಾಯಣ, ಮಹಾಭಾರತ ಇವುಗಳ ಪಾತ್ರಗಳ ಬಗ್ಗೆ ವಿಫುಲವಾದ ವಾದ, ವಿವಾದಗಳು ನಡೆಯುತ್ತಿದ್ದವು. ಅತ್ತೆ ನೂರಾರು ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು..... ಹೀಗೆ ಸಾಹಿತ್ಯ, ಸಂಗೀತದ ವಾತಾವರಣದಲ್ಲಿ (ಹಳ್ಳಿಯ ಕಷ್ಟ-ಕಾರ್ಪಣ್ಯಗಳ ನಡುವೆಯೂ) ನನ್ನ ಮೌನವಾದ ಬಾಲ್ಯ ವಿಹರಿಸುತ್ತಿತ್ತೇನೋ ಎಂದು ಈಗ ಎನಿಸುತ್ತದೆ.

‘ಅಕ್ಕ...ನ ಅರಿವಿನಿಂದ ಬರಹದೆಡೆಗೆ:
ನಾನು ನನ್ನ ಮೊದಲ ಕಥೆಯಾದ ‘ಅಕ್ಕ ಬರ್ತಾಳೆ‘ಯನ್ನು ಬಹುಶಃ ಏಳನೇ ತರಗತಿಯಲ್ಲಿದ್ದಾಗ ಬರೆದ ನೆನಪು. ನಮ್ಮ ಬೀದಿಯಲ್ಲೇ ಇದ್ದ ನನ್ನ ಓರಗೆಯವಳೇ ಆಗಿದ್ದ ಹುಡುಗಿಯ ದುರಂತಮಯ ಸಾವಿನ ಬಗ್ಗೆ ವ್ಯಥಿತಳಾಗಿ, ಅವಳನ್ನೇ ಸಂಪೂರ್ಣವಾಗಿ ಅವಲಂಭಿಸಿದ್ದ ಅವಳ ತಮ್ಮನ ದೃಷ್ಟಿಕೋನದಲ್ಲಿ ಬರೆದ ಕಥೆಯದು. ಸುಮಾರು ೫-೬ ಪುಟಗಳಲ್ಲಿದ್ದ ಆ ಕಥೆಯನ್ನು ಬರೆದ ನಂತರವೇ ನನಗೆ ಒಂದು ರೀತಿಯ ಬಿಡುಗಡೆಯ ಭಾವ ದೊರೆತದ್ದು ಎನ್ನುವುದು ಈಗಲೂ ನೆನಪಿದೆ. ಆಗಿನಿಂದ ಬರೆಯುವುದೇ ನನ್ನ ಬದುಕಾಯ್ತು. ಸಂತಸವಿರಲಿ, ದುಃಖವಿರಲಿ ಆ ಕ್ಷಣದಲ್ಲಿ ಹೇಗೆ ತೋಚುವುದೋ ಹಾಗೆ ಅದರ ಮಂಥನ ನಡೆದು , (ಸಾಮಾನ್ಯವಾಗಿ ನಾನು ಯಾರಲ್ಲಿಯೂ ನನ್ನ ಭಾವನೆಗಳನ್ನು ಹೇಳಿಕೊಳ್ಳದೇ ಇರುವುದರಿಂದಲೋ ಏನೋ) ಬರೆಯಲೇ ಬೇಕೆಂಬ ತೀವ್ರತೆಯುಂಟಾದಾಗ ಒಂದು ಕಡೆ ಬರೆದಿಡುತ್ತಿದ್ದೆ. ನಾನು ಮೊದಲು ಕವನ ಬರೆದದ್ದು, ಮೊದಲು ಹಾಸ್ಯಬರಹ ಬರೆದದ್ದು ಎಲ್ಲಾ ಹೀಗೇ ನೆನಪಿದೆ. ಆ ಸಮಯದಲ್ಲೇ ನನ್ನ ಊರಿನ ಬಗ್ಗೆ ಸುಮಾರು ೨೦೦ ಪುಟಗಳ ಕಾದಂಬರಿಯನ್ನೂ ಬರೆದಿದ್ದೆ. ಆಗ ಸಾಹಿತ್ಯ ಎಂದರೆ ಏನೆಂಬ ಅರಿವು ಇಲ್ಲದಿದ್ದರೂ ಬರೆಯಬೇಕೆಂಬ ತೀವ್ರ ಹಂಬಲ ಉಂಟಾಗುತ್ತಿತ್ತು!

ಪ್ರತ್ಯೇಕತೆಗಿಂತ ಏಕತೆ ಸಾಕಲ್ಲವೆ... :
ಒಂದು ಕಾಲಕ್ಕೆ ಆರ್ಥಿಕವಾಗಿ ಸಂಪೂರ್ಣ ಪರಾವಲಂಬಿಯಾಗಿದ್ದ ಮಹಿಳೆ ಈಗ ವಿದ್ಯಾವಂತಳಾಗಿ, ದುಡಿಯುವ ಮಹಿಳೆಯಾಗಿ, ಅಥವಾ ಸ್ವಉದ್ಯೋಗ ಮಾಡಬಲ್ಲವಳಾಗಿ, ವಿವಿಧ ಕ್ಷೇತ್ರಗಳಲ್ಲಿ ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿರುವುದು ಸಂತೋಷದ ವಿಷಯವೇ. ಮಹಿಳೆಯರಾದ ನಮ್ಮ ಇಂದಿನ ಈ ಸ್ಥಿತಿಗೆ ನಾವು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಅಭಾರಿಯಾಗಿರಬೇಕು! ಆತ್ಮಸ್ಥೈರ್ಯ ಮತ್ತು ಸ್ವವಿವೇಚನೆಯಿರುವ ಎಲ್ಲರ ಜೀವನವೂ ಗಟ್ಟಿ ನೆಲೆಗಟ್ಟಿನ ಮೇಲೆಯೇ ಇರುತ್ತದೆ. 'ಮಹಿಳೆ' ಎಂಬ ಪ್ರತ್ಯೇಕತೆಯ ಅಗತ್ಯವಿಲ್ಲ ಎಂದು ನನಗನಿಸುತ್ತದೆ. ಮಹಿಳೆ ತನ್ನ ಸ್ವಸಾಮರ್ಥ್ಯದಿಂದ ಏನನ್ನಾದರೂ ಸಾಧಿಸಬಲ್ಲಳು. ಅವಳಿಗೆ ದೊರೆಯಬಹುದಾದ ಅವಕಾಶವನ್ನು ಕಸಿದುಕೊಳ್ಳದಿದ್ದರೆ ಸಾಕು. ಸುತ್ತಲಿನ ಪರಿಸರ ಪೂರಕವಾಗಿರಬೇಕು.

ಯಾವುದೂ ಹೆಚ್ಚುಗಾರಿಕೆಯಲ್ಲ:
ಮಹಿಳೆ ಮನೆ, ಉದ್ಯೋಗ, ತಾಯಿಯಾಗಿ ನಿಭಾಯಿಸುವುದು ದೊಡ್ಡ ವಿಷಯವೇ ಅಲ್ಲ. ಬದುಕಿನ ವಿವಿಧ ಹಂತಗಳ ಕೆಲ ಮಗ್ಗುಲುಗಳು ಇವು ಅಷ್ಟೆ. ಇದರಲ್ಲಿ ಯಾವುದೂ ಹೆಚ್ಚುಗಾರಿಕೆಯಿಲ್ಲ. ‘ನನ್ನ ಪಾತ್ರ ದೊಡ್ಡದು' ಎಂದುಕೊಂಡಾಕ್ಷಣ ಕುಸಿತ ಆರಂಭವಾಗುತ್ತದೆ. ಅದಾಗಬಾರದು. ಎಲ್ಲವನ್ನೂ ಮನಸ್ಸಿಗೆ ಒಪ್ಪುವಂತೆ ಪ್ರಾಮಾಣಿಕವಾಗಿ ನಿರ್ವಹಿಸಬೇಕು ಅಷ್ಟೆ.

ವ್ಯಕ್ತಿತ್ವ ನಾಶ ಸಲ್ಲದು:

‘ರಿಸ್ಕ್ ಯಾಕೆ ತಿಂದುಂಡು ಹಾಯಾಗಿರೋಣ,. ಒಂದಿಷ್ಟು ಸಿಂಗರಿಸಿಕೊಂಡು, ಮೆಚ್ಚುಗೆ ಗಳಿಸೋಣ' ಎಂಬ ಮನೋಭಾವ ಹೆಣ್ಣುಗಳ ಅಂತಃಸತ್ವವನ್ನು ಕದಲಿಸುತ್ತದೆ ಒಳಗನ್ನು ಕೊಂದುಕೊಂಡು ಎನ್ನುವುದಕ್ಕಿಂತ ಒಳಗಿನ ಉಸಿರನ್ನು ಬಂಧಿಸಿ ‘ಅವನನ್ನು ಚೆನ್ನಾಗಿ ನೋಡಿಕೊಂಡು' ಬಾಳುವುದು ವ್ಯಕ್ತಿತ್ವ ನಾಶ ವಲ್ಲದೆ ಬೇರೇನೂ ಅಲ್ಲ. ಈಗ ಆರ್ಥಿಕ ಪರಾವಲಂಬನೆ ಕಡಮೆಯಾಗಿದೆ. ಮಹಿಳೆ ತನ್ನ ಅಸ್ತಿತ್ವವನ್ನು ತಾನು ಕಂಡುಕೊಳ್ಳುತ್ತಿದ್ದಾಳೆ. ಆದರೂ ಅಧಿಕ ಪ್ರಮಾಣದಲ್ಲಿ ಬದಲಾವಣೆಯಾದಾಗ ಸರಿಸಮ ಎನ್ನುವ ಪದ ಸರಿಹೋಗಬಹುದು.

‘ನಾಲಗೆ ದಾಸ'ನಾಗಿರುವ ಮನುಜ:

ನಾನೂ ಪ್ರಕೃತಿಯ ಅಂಶ ಎಂಬುದನ್ನು ಅರಿಯಬೇಕಾದ ಮನುಜ ಪ್ರಕೃತಿಯಲ್ಲಿರುವುದೆಲ್ಲಾ ನನಗಾಗಿ ಎಂಬ ದುರಾಸೆಗೆ ಬಿದ್ದ ಫಲಿತಗಳಲ್ಲಿ ಒಂದು ಮಾಂಸಾಹಾರ. ಸಾತ್ವಿಕ ಆಹಾರದಿಂದ ಚಿಂತನೆಯೂ ಸಾತ್ವಿಕವಾಗಿರುತ್ತದೆ ಅಲ್ಲವೇ. ಎಲ್ಲಾ ಜೀವಿಗಳೂ ಒಂದೇ. ಒಂದು ಕುಡಿ ಚಿವುಟೋದು, ಗಿಡ ಮುರಿಯೋದು ಕೂಡಾ ಹೃದಯ ಹಿಂಡುವಂಥ ಘಟನೆಯೇ. ನಾಲಗೆಗೆ ದಾಸನಾಗಿರುವ ಮನುಜ ಆ ಪ್ರವೃತ್ತಿ ಬಿಟ್ಟು ತಾನೂ ಬದುಕಿ ಇತರ ಜೀವಿಗಳಿಗೂ ಬದುಕಲು ಅವಕಾಶ ಮಾಡಿಕೊಟ್ಟರೆ ಚೆನ್ನ.

ಆತ್ಮ ಸಂತೋಷ ಮತ್ತು ಆತ್ಮ ವಂಚನೆ:

ಯಾವೊಬ್ಬ ವ್ಯಕ್ತಿ ತನ್ನ ಆತ್ಮ ಸಂತೋಷಕ್ಕಾಗಿ ‘ಕೆಲಸ' ಮಾಡಬೇಕು. ಆ ಆತ್ಮ ಸಂತೋಷವೇ ವಿಸ್ತ್ರುತ ರೂಪ ಪಡೆದು ಸಮಾಜ ಮುಖಿಯಾಗಲು ಅವಕಾಶ ತೆರೆದುಕೊಳ್ಳುತ್ತದೆ! ಈ ಹಂತದಲ್ಲಿ ಯಾವುದೇ ಗೊಂದಲಗಳಿರುವುದಿಲ್ಲ. ಅಂದರೆ ಯಾವಾಗ ತನ್ನ ಸಂತೋಷ ಮರೆತು ಇತರರನ್ನು ಇತರ ಉದ್ದೇಶಗಳಿಗಾಗಿ ಮೆಚ್ಚಿಸಲು ‘ಕೆಲಸ'ಮಾಡಲಾರಂಭಿಸುತ್ತೇವೆಯೋ ಆಗ ‘ಆತ್ಮ ವಂಚನೆ' ತೆರೆಯ ಮೇಲೆ ಬಂದು ವಿಜೃಂಭಿಸಲಾರಂಭಿಸುತ್ತದೆ. ಈ ರೀತಿಯ ಬದುಕು ಯಾಕೆ ಬೇಕು? ‘ತನ್ನನ್ನು ತಾನು ಮೊದಲು ಮೆಚ್ಚಿಸಿಕೊಳ್ಳಲು' ಎಲ್ಲರೂ ಪ್ರಯತ್ನಿಸಬೇಕು, ರಾಜಕಾರಣಿ ಮತ್ತು ಸಾಹಿತಿ ಇದಕ್ಕೆ ಹೊರತಲ್ಲ.

15 comments:

  1. idannu illi haaki oLLeya kelasa maaDisiri madam....

    khanDita nimma bagge innU svalpa tiLiyitu...

    innu hecchige bareyiri...... namagU uNabaDisi...
    thank you very much for sharing this......

    ReplyDelete
  2. NImma saadhane, innoo hecchali, nimma sandarshana santasada vichaara

    ReplyDelete
  3. Prabhamaniyavre...Odi tumbaa santhoshavayitu...Nimma bagge innu aneka vishayagalannu tilidu kondevu...Innu hecchu hecchu bareyiri...Nimma barahagalu janapriyavaagali..Neevu namma madhye iruvudu namge hemmeya vichara....Dhanyavadagalu...

    ReplyDelete
  4. ಪ್ರಭಾಮಣಿಯವರೇ, ಇತ್ತೀಚೆಗೆ ಹಲವಾರು ಕಾರಣಗಳಿಂದ ನಿಮ್ಮ ಬ್ಲಾಗ್ ಕಡೆಗೆ ಬರಲು ಸಾಧ್ಯವಾಗಿರಲಿಲ್ಲ. ಕ್ಷಮಿಸಿ..

    ನಿಮ್ಮ ಬಗ್ಗೆ ಇದು ವರೆಗೂ ಹೆಚ್ಚು ತಿಳಿದಿರಲಿಲ್ಲ. ಈಗ ಈ ಸಂದರ್ಶನದಿಂದ ನಿಮ್ಮ ಸಂಪೂರ್ಣ ಪರಿಚಯವಾಯಿತು.

    ನಿಜವಾಗಿ ನಿಮ್ಮ ಸಾರ್ಥಕ ಮನೋಭಾವ ಕಂಡು ಅಭಿಮಾನ ಹೆಚ್ಚಾಯಿತು. ನಿಮ್ಮ ಸಾಹಿತ್ಯಾಸಕ್ತಿಯ ಬಗ್ಗೆಯ ಚುಟುಕು ಕವನ ಚೆನ್ನಾಗಿದೆ.

    ಸಂದರ್ಶನ ಪ್ರಕಟಿಸಿ ಒಳ್ಳೆ ಕೆಲಸ ಮಾಡಿದಿರಿ. ಧನ್ಯವಾದಗಳು.

    ReplyDelete
  5. ಪ್ರಭಾಮಣಿ ಮೇಡಂ;ನಿಮ್ಮಿಂದ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಸಾಧ್ಯ ವಾಗಲಿ ಎನ್ನುವುದೇ ನಮ್ಮೆಲ್ಲರ ಹಾರೈಕೆ.ಅಭಿನಂದನೆಗಳು ಮೇಡಂ.

    ReplyDelete
  6. ಓದಿ ಖುಶಿಯಾಯಿತು. ಮೆಚ್ಚತಕ್ಕಂತಹ ಸಾಧನೆಯನ್ನು ಮಾಡಿದ್ದೀರಿ.

    ReplyDelete
  7. Innu hechhu barahagalu nimminda baruvantagali...:)

    ReplyDelete
  8. ಪ್ರತ್ಯೇಕತೆಗಿಂತ ಏಕತೆ ಸಾಕಲ್ಲವೆ... ಮತ್ತು ಆತ್ಮ ಸಂತೋಷ ಮತ್ತು ಆತ್ಮ ವಂಚನೆ: ತುಂಬ ಇಷ್ಟ ಆಯಿತು ......
    ನಿಜವಾಗಲು ನಿಮ್ಮ ಸಾಧನೆ ಈಗಿನ ಹೆಣ್ಣು ಮಕ್ಕಳಿಗೆ ಮಾದರಿ.

    ReplyDelete
  9. ಧನ್ಯವಾದಗಳು ನಿಮ್ಮ ಸಂದರ್ಶನವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಹೀಗೆ ನಿಮ್ಮ ಸಾಧನೆ ಎಲ್ಲಾ ಕ್ಷೇತ್ರಗಳಲ್ಲಿ ಮುಂದುವರಿಯಲಿ.... ನಿಮ್ಮ ಪ್ರತಿಭೆ ಅಮೋಘವಾದದ್ದು ನಿಮ್ಮಂತೆ ನಿಮ್ಮ ಮಗಳೂ ಕೂಡ..

    ReplyDelete
  10. ಪ್ರಭಾಮಣೀಯವರೆ,

    ನಿಮ್ಮ ಚೆ೦ದದ ವ್ಯಕ್ತಿತ್ವ ಪರಿಚಯ ಓದಿ ಖುಷಿಯಾಯ್ತು.ನಿಮ್ಮ ಸಾಧನೆಗಳು ನಿರ೦ತರವಾಗಿ ಸಾಗುತ್ತಿರಲಿ.

    ReplyDelete
  11. ಅಮ್ಮಾ, ಬ್ಲಾಗಿನಲ್ಲಿ ಮತ್ತೊಮ್ಮೆ ಸಂದರ್ಶನ ಓದಿ ಖುಷಿಯಾಯಿತು. ನನ್ನಮ್ಮ ಎ೦ದು ಹೇಳಿಕೊಳ್ಳೋಣವೆ೦ದು ಎನ್ನಿಸಿದರಿ೦ದಲೇ ಬರೆಯುತ್ತಿದ್ದೇನೆ :) :) :)
    ಹ ಹ :)

    ReplyDelete
  12. ಬಹಳ ಸ೦ಕೊಚದಿ೦ದಲೆ ಹ೦ಚಿಕೊ೦ಡ ನನ್ನ ಸ೦ದರ್ಶನಕ್ಕೆ ಉತ್ತಮ ರೀತಿಯ ಪ್ರೋತ್ಸಾಹಕರ ಪ್ರತಿಕ್ರಿಯೆ ನೀಡಿ ಹುರಿದು೦ಬಿಸಿದ ಎಲ್ಲ್ಲಾ ಅತ್ಮೀಯರಿಗೂ ಅನೇಕಾನೇಕ ವ೦ದನೆಗಳು. ನಿಮ್ಮ ಸದಾಶಯ ನನ್ನಲ್ಲಿ ಬರೆಯುವುದರಲ್ಲಿನ ಸ೦ತಸವನ್ನು ಹೆಚ್ಚಿಸಿದೆ.ನನ್ನ ಬ್ಲಾಗ್ ಗೆ ನಿಮ್ಮೆಲ್ಲರಿಗೂ ಸದಾ ಸ್ವಾಗತ.

    ReplyDelete
  13. prabhaamaniyavare, nimma sandarshana odi tumbaa khushiyayitu.nimage nanna aatmiya abhinandanegalu.magaligondu goodu hudukuvudaralli kaleduhogiddene.haagaagi nimma blog ge bheti nidalu saadhyavaagiralilla kshamisi.

    ReplyDelete