Wednesday, April 20, 2011

ಮನದ ಅಂಗಳದಿ.........೩೬. ಕಾಲ

‘ಕಾಲ’ ಎನ್ನುವ ಪದಕ್ಕೆ ಅನೇಕ ಅರ್ಥಗಳಿದ್ದರೂ ನಾವು ಸಾಮಾನ್ಯವಾಗಿ ‘ಸಮಯ’ ಎನ್ನುವ ಅರ್ಥದಲ್ಲಿಯೇ ಅದನ್ನು ಬಳಸುತ್ತೇವೆ. ಸಮಯವನ್ನು ಅಳತೆಮಾಡುವ ಅತ್ಯಂತ ನವನವೀನ ಉಪಕರಣಗಳು ನಾಗರೀಕತೆಯು ಬೆಳೆದಂತೆ ರೂಢಿಗೆ ಬಂದವು. ಅತ್ಯಂತ ಸೂಕ್ಷ್ಮವಾದ ಮೈಕ್ರೋ, ನ್ಯಾನೊ ಸೆಕೆಂಡ್‌ಗಳಂತಹವನ್ನೂ ನಿಖರವಾಗಿ ತಿಳಿಯಬಲ್ಲಂತಹ ತಾಂತ್ರಿಕತೆಯೂ ಪ್ರಗತಿಹೊಂದಿತು. ಈ ಬೆಳವಣಿಗೆಯಲ್ಲಿ ನಮ್ಮನ್ನು ನಾವೇ ಗಡಿಯಾರಕ್ಕೆ ಬಿಗಿದುಕೊಂಡಂತೆ ಜೀವನದ ಯಾಂತ್ರಿಕ ಓಟ ಪ್ರಾರಂಭವಾಯಿತು. ಹಗಲು-ಇರುಳುಗಳು ಒಂದನ್ನೊಂದು ಅಟ್ಟಿಸಿಕೊಂಡು ಓಡುತ್ತಿರುವ ಮಾದರಿಯಲ್ಲಿ ದಿನಗಳು ಉರುಳಲಾರಂಭಿಸಿದವು. ಈ ಬಿಡುವಿಲ್ಲದ ಓಟದಲ್ಲಿ ನಮ್ಮ ಪಾತ್ರವೇನು? ನಮ್ಮ ಗುರಿಯೇನು? ಎನ್ನುವುದನ್ನು ವಿವೇಚಿಸಲಾರದಷ್ಟು ನಮ್ಮನ್ನು ನಾವು ಕಳೆದುಕೊಳ್ಳುತ್ತಿದ್ದೇವೆಯೇ?

ಕಳೆದ ಶತಮಾನ ಕಂಡ ಮಹಾನ್ ವಿಜ್ಞಾನಿ ಐನ್‌ಸ್ಟೈನ್ ಅವರು ಸಮಯದ ಸಾಪೇಕ್ಷತೆಯನ್ನು ಬಹಳ ಚೆನ್ನಾಗಿ ವಿವರಿಸಿದ್ದಾರೆ. ನಾವು ಯಾರನ್ನಾದರೂ ಕಾಯುತ್ತಿರುವಾಗ, ಕೆಟ್ಟ ಚಲನಚಿತ್ರವನ್ನು ವೀಕ್ಷಿಸುವಾಗ ಸಮಯವು ಬಹಳ ದೀರ್ಘವೆನಿಸುತ್ತದೆ. ಅದೇ ಪ್ರಿಯಕರನೊಡನೆಯಿರುವ ಪ್ರೇಯಸಿಗೆ ಸಮಯವು ಶೀಘ್ರಗತಿಯಲ್ಲಿ ಜಾರುತ್ತದೆ!

ಸಮಯ ಬಹು ಅಮೂಲ್ಯವಾದದ್ದು. ಕಳೆದ ಸಮಯ ಮತ್ತೆ ದೊರಕುವುದಿಲ್ಲ ಎನ್ನುವುದನ್ನು ಹಿರಿಯರಿಂದ ತಿಳಿದಿದ್ದೇವೆ. ಯಾವುದೇ ದುಃಖವನ್ನು ಮರೆಸಲೂ ಕಾಲವೇ ತಕ್ಕ ಔಷಧ ಎನ್ನುವುದನ್ನು ಅನುಭವದಿಂದ ಅರಿತಿದ್ದೇವೆ.

ಕಾಲವನ್ನು ‘ಭೌತಿಕ ಕಾಲ’ ಮತ್ತು ‘ಮಾನಸಿಕ ಕಾಲ’ ಎಂದು ವರ್ಗೀಕರಿಸುತ್ತಾ ‘ಕಾಲ’ ಎನ್ನುವುದರ ವಿಶ್ಲೇಷಣೆಯನ್ನು ಜಿಡ್ಡು ಕೃಷ್ಣಮೂರ್ತಿಯವರು ಈ ರೀತಿಯಾಗಿ ಮಾಡುತ್ತಾರೆ:

‘ನಾವು ಕಾಲದ ಬಗ್ಗೆ ಮಾತನಾಡುತ್ತಿರುವಾಗ ಗಡಿಯಾರವು ತೋರುವ, ಕ್ರಮಾಗತವಾದ, ಭೌತಿಕ ಕಾಲದ ವಿಷಯವಾಗಿ ಮಾತನಾಡುತ್ತಿಲ್ಲ. ಆ ಕಾಲ ಇರುತ್ತದೆ ಮತ್ತು ಇದ್ದೇ ಇರಬೇಕು. ಬಸ್ಸು ಹಿಡಿಯುವುದಿದ್ದರೆ, ರೈಲಿಗೆ ಸಮಯಕ್ಕೆ ಸರಿಯಾಗಿ ಹೋಗುವುದಿದ್ದರೆ, ನಾಳೆ ಯಾರನ್ನೋ ಭೇಟಿಮಾಡುವುದಿದ್ದರೆ ನಮಗೆ ಕ್ರಮಾಗತವಾದ ಕಾಲದ ಅಗತ್ಯ ಇದ್ದೇ ಇರುತ್ತದೆ. ಆದರೆ ಮಾನಸಿಕವಾಗಿ ನಾಳೆ ಎಂಬುದು ನಿಜವಾಗಲೂ ಇದೆಯೆ? ಆಂಥಾ ಮಾನಸಿಕ ಕಾಲವಿದೆಯೆ? ಅಥವಾ ಅಂಥಾ ಮಾನಸಿಕ ನಾಳೆ ನಮ್ಮ ಆಲೋಚನೆಗಳಿಂದ ಸೃಷ್ಟಿಗೊಂಡದ್ದೋ? ಏಕೆಂದರೆ ಆಲೋಚನೆಯು ನೇರವಾದ ತತ್ ಕ್ಷಣದ ಬದಲಾವಣೆಯನ್ನು ಕಾಣಲಾರದು..... ನನ್ನ ಬದುಕಿನ ರೀತಿಯಲ್ಲಿ, ನನ್ನ ಆಲೋಚನೆ, ಭಾವನೆ ಮತ್ತು ಕ್ರಿಯೆಗಳ ವಿಧಾನದಲ್ಲಿ ಆಮೂಲಾಗ್ರ ಬದಲಾವಣೆಯನ್ನು ತಂದುಕೊಳ್ಳಲು ಬಯಸಿ ‘ಹೀಗೆ ಬದಲಾಗಲು ಸಮಯ ಬೇಕು. ನಾನು ನಾಳೆಯಿಂದ ಅಥವಾ ಮುಂದಿನ ತಿಂಗಳಲ್ಲಿ ಬದಲಾಗುತ್ತನೆ.’ಎಂದುಕೊಳ್ಳುತ್ತೇನೆ. ಇಂಥಾ ಕಾಲದ ಬಗ್ಗೆ, ಕಾಲದ ಮಾನಸಿಕ ರಚನೆಯ ಬಗ್ಗೆ ನಾವೀಗ ಮಾತನಾಡುತ್ತಿದ್ದೇವೆ. ನಾಳೆ, ಮುಂದಿನ ತಿಂಗಳು, ಸುದೂರ ಭವಿಷ್ಯ ಇವನ್ನು ಕಲ್ಪಿಸಿಕೊಂಡು ನಾವು ಅದರಲ್ಲಿ ಬದುಕತೊಡಗುತ್ತೇವೆ. ಭೂತ, ವರ್ತಮಾನ,ಭವಿಷ್ಯಗಳ ಬಗ್ಗೆ ಮಾತನಾಡುತ್ತಿದ್ದೇವೆಯೇ ಹೊರತು ಗಡಿಯಾರದ ಕಾಲದ ಬಗ್ಗೆ ಅಲ್ಲ. ನಾನು ನಿನ್ನೆ ಇದ್ದವನು, ಆ ನಿನ್ನೆ ಇಂದು ಎಂಬ ವರ್ತಮಾನದಲ್ಲಿ ವ್ಯವಹರಿಸುತ್ತಾ ನಾಳೆಯನ್ನು ಸೃಷ್ಟಿಸುತ್ತದೆ. ಕಳೆದ ವರ್ಷ ನನ್ನ ಮನಸ್ಸಿನ ಮೇಲೆ ಆಳವಾದ ಪರಿಣಾಮವನ್ನು ಬೀರುವಂಥಾ ಘಟನೆಯು ನಡೆದಿತ್ತು. ಇಂದು ನನಗೆ ಆಗುವ ಅನುಭವವನ್ನು ಆ ಅನುಭವಕ್ಕೆ ತಕ್ಕಂತೆ, ಜ್ಞಾನಕ್ಕೆ ತಕ್ಕಂತೆ, ಪರಂಪರೆ ಮತ್ತು ರೂಢಿಗೆ ತಕ್ಕಂತೆ ಅನುವಾದಿಸಿಕೊಳ್ಳುತ್ತಾ ನಾಳೆಯನ್ನು ಸೃಷ್ಟಿಸಿಕೊಳ್ಳುತ್ತೇವೆ. ಹೀಗೆ ಮಾಡುತ್ತಾ ಕಾಲದ ವರ್ತುಲದಲ್ಲಿ ಸಿಕ್ಕಿಬೀಳುತ್ತೇವೆ. ಇದನ್ನೇ ನಾವು ಬದುಕು ಅಥವಾ ಕಾಲ ಎನ್ನುತ್ತೇವೆ. ನೀವು ಎಂದರೆ ಕಾಲ. ಎಲ್ಲ ನೆನಪು, ರೂಢಿ, ಐಡಿಯಾ, ಆಸೆ, ಹತಾಶೆ, ಬದುಕಿನ ಅಸಹನೀಯ ಒಂಟಿತನ ಇವೆಲ್ಲವೂ ಕಾಲವೇ..... ಇವೆಲ್ಲವೂ ಇಲ್ಲವಾಗುವ ಕಾಲಾತೀತ ಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕಾದರೆ ಮನಸ್ಸು ಅನುಭವ ಮುಕ್ತವಾಗಿರಬಲ್ಲದೇ, ಅಂದರೆ ಕಾಲ ಮುಕ್ತವಾಗಿರಬಲ್ಲದೇ ಎಂದು ಪರಿಶೀಲಿಸಬೇಕು.’

ಕಾಲವೆಂದರೆ ಆಲೋಚನೆ. ಕಾಲವೆಂಬುದು ನಮ್ಮ ಮಟ್ಟಿಗೆ ಅತ್ಯಂತ ವಿಶೇಷವಾದ ರೀತಿಯಲ್ಲಿ ಪ್ರಾಮುಖ್ಯತೆಯನ್ನು ಗಳಿಸಿಕೊಂಡಿದೆ. ಕಾಲವು ಭಯದ ಒಂದು ಅಂಶ. ಕಾಲವೆಂದರೆ ಕ್ಷಣ, ನಿಮಿಷ, ಗಂಟೆ, ದಿನ, ವರ್ಷ ಎಂಬ ಗಡಿಯಾರದ ಕಾಲ ಎಂಬರ್ಥದಲ್ಲಿ ಹೇಳುತ್ತಿಲ್ಲ. ಕಾಲವೆಂಬುದು ಅಂತರಂಗದ, ಮಾನಸಿಕವಾದ ಪ್ರಕ್ರಿಯೆಯೂ ಹೌದು. ಆ ವಾಸ್ತವವೇ ನಮ್ಮಲ್ಲಿ ಭಯವನ್ನು ಹುಟ್ಟಿಸುತ್ತದೆ. ಕಾಲವೇ ಭಯವಾದುದರಿಂದ ಕಾಲವು ಭಯವನ್ನು ಹುಟ್ಟಿಸುವುದಿಲ್ಲ. ಕಾಲವೇ ಕಸಿವಿಸಿ, ಸಂಘರ್ಷಗಳನ್ನು ಹುಟ್ಟಿಸುತ್ತದೆ. ವಾಸ್ತವದ ತತ್‌ಕ್ಷಣ ಗ್ರಹಿಕೆಯು, ವಾಸ್ತವದ ಕಾಣ್ಕೆಯು ಕಾಲಾತೀತವಾದದ್ದು.....ಆದ್ದರಿಂದ ಭಯವನ್ನು ಅರ್ಥಮಾಡಿಕೊಳ್ಳಬೇಕಾದರೆ ಕಾಲದ ಬಗ್ಗೆ ಎಚ್ಚರವಿರಬೇಕು. ಮನಸ್ಸು ಕಾಲದ ಸಂಕೀರ್ಣತೆಯನ್ನು ಅರಿಯದೇ ಭಯವನ್ನು ಇಡಿಯಾಗಿ ಅರ್ಥಮಾಡಿಕೊಳ್ಳಲಾರದು. ಕಾಲ ಮತ್ತು ಭಯ ಒಟ್ಟೊಟ್ಟಿಗೇ ಇರುವಂಥವು.

ಕಾಲವೆಂದರೆ ‘ಇರುವ ಸ್ಥಿತಿ’ಯಿಂದ `ಇರಬೇಕಾದ ಸ್ಥಿತಿ’ಯತ್ತ ಚಲಿಸುವುದು. ಉದಾಹರಣೆಗೆ ನನ್ನಲ್ಲಿ ಭಯವಿದೆ. ಒಂದಲ್ಲಾ ಒಂದು ದಿನ ನಾನು ಭಯಮುಕ್ತನಾಗುತ್ತೇನೆ. ಆದ್ದರಿಂದ ಭಯಮುಕ್ತನಾಗುವುದಕ್ಕೆ ಸಮಯ, ಕಾಲ ಅಗತ್ಯ. ನಾವು ಯೋಚಿಸುವುದೇ ಹೀಗೆ. ಇರುವ ಸ್ಥಿತಿಯಿಂದ ಇರಬೇಕಾದ ಸ್ಥಿತಿಯತ್ತ ಸಾಗುವುದು ಕಾಲವನ್ನು ಒಳಗೊಂಡಿದೆ. ಈ ಕಾಲವು ಇರುವ ಸ್ಥಿತಿಗೂ ಇರಬೇಕಾದ ಸ್ಥಿತಿಗೂ ನಡುವಿನ ಸ್ಥಿತಿಗೂ ನಡುವಿನ ಅಂತರದಲ್ಲಿ ನಾವು ಮಾಡಬೇಕಾದ ಪ್ರಯತ್ನಗಳನ್ನೆಲ್ಲಾ ಒಳಗೊಂಡಿದೆ. ಇದರಿಂದ ಸಂಘರ್ಷವನ್ನು ಅನುಭವಿಸುತ್ತಿರುತ್ತೇವೆ..... ಅಂದರೆ ಕಾಲವೇ ಅವ್ಯವಸ್ಥೆಯನ್ನು ಸೃಷ್ಟಿಸುತ್ತಿರುತ್ತದೆ.

ನಾವು ಭೌತಿಕ ಮತ್ತು ಮಾನಸಿಕ ಕಾಲಗಳ ನಡುವೆ ಸಿಕ್ಕಿಬಿದ್ದಿದ್ದೇವೆ. ನಾವು ಬಸ್ಸು ಅಥವಾ ರೈಲನ್ನು ಹಿಡಿಯಲು ಭೌತಿಕ ಕಾಲವನ್ನು ಒಪ್ಪಿಕೊಳ್ಳಲೇ ಬೇಕು. ಆದರೆ ಮಾನಸಿಕ ಕಾಲವನ್ನು ನಿರಾಕರಿಸಿದರೆ ಮಾತ್ರ ಇವೆರಡಕ್ಕೂ ಸಂಬಂಧಪಟ್ಟಿರದ ಬೇರೆಯದೇ ಬಗೆಯ ಕಾಲವನ್ನು ಪಡೆಯಬಹುದು. ಆ ಕಾಲಕ್ಕೆ ನೀವೂ ನನ್ನೊಡನೆ ಬರಬೇಕೆಂದು ಆಶಿಸುತ್ತೇನೆ! ಆಗ ಕಾಲವು ಅವ್ಯವಸ್ಥೆಯಾಗಿರುವುದಿಲ್ಲ. ಅಗಾಧವಾದ ವ್ಯವಸ್ಥೆಯಾಗಿರುತ್ತದೆ.....’

ಹೀಗೆ ‘ಕಾಲ’ದ ಬಗ್ಗೆ ಹೊಸ ಆಯಾಮವನ್ನು ನೀಡಿ ತಮ್ಮ ವಿಶಿಷ್ಟವಾದ ವೈಚಾರಿಕ ತೀಕ್ಷ್ಣತೆಯಿಂದ ನಮ್ಮ ಅರಿವಿನ ಪರಿಧಿಯನ್ನು ವಿಸ್ತರಿಸುವ ಪ್ರಯತ್ನವನ್ನು ನಡೆಸುತ್ತಾರೆ ಜಿಡ್ಡು ಕೃಷ್ಣಮೂರ್ತಿಯವರು. ಕಡೆಯಪಕ್ಷ ‘ತರಣಿ ದರುಶನಕಿಂತ ಕಿರಣಾನುಭವ ಲೇಸು’ ಎನ್ನುವ ಸಾಲಿನಂತೆ ನಮ್ಮ ನಮ್ಮ ಶಕ್ತ್ಯಾನುಸಾರ ಈ ವಿಚಾರಗಳನ್ನು ನಮ್ಮದಾಗಿಸಿಕೊಳ್ಳುವ ಪ್ರಯತ್ನ ನಡೆಸೋಣ.

9 comments:

  1. ಭೌತಿಕ ಕಾಲ ಹಾಗು ಮಾನಸಿಕ ಕಾಲಗಳ ಬಗೆಗೆ ಉತ್ತಮವಾದ ವಿವರಣೆ ನೀಡಿದ್ದೀರಿ.
    ತುಂಬ ಉತ್ತಮವಾದ ಆಲೋಚನೆಗಳಿಗಾಗಿ ಧನ್ಯವಾದಗಳು.

    ReplyDelete
  2. oLLeya aalochanegaLannu namage nIDiddakkaagi nimage vaMdane...

    ReplyDelete
  3. ‘ತರಣಿ ದರುಶನಕಿಂತ ಕಿರಣಾನುಭವ ಲೇಸು’-nija ee maatu namage saadhyavadastu naavu nammadaagisikoLLabeku...

    oLLeya lekhana kaalada vishesha tiLisiddeeri... thank you

    ReplyDelete
  4. ಕಾಲವನ್ನು ‘ಭೌತಿಕ ಕಾಲ’ ಮತ್ತು ‘ಮಾನಸಿಕ ಕಾಲ’ ಎಂದು ವರ್ಗೀಕರಿಸಿದ ರೀತಿ ಚೆನ್ನಾಗಿದೆ.. " ಕಾಲವೇ ಅವ್ಯವಸ್ಥೆಯನ್ನು ಸೃಷ್ಟಿಸುತ್ತಿರುತ್ತದೆ" ಎಂಬ ಮಾತು ನನಗೇ ಹಲವು ಬಾರಿ ಅನುಭವವಾಗಿದೆ.. ಕಾಲವೆಂಬ ಅವ್ಯವಸ್ಥೆಯನ್ನು ಅಗಾಧವಾದ ವ್ಯವಸ್ಥೆ ಮಾಡಿಕೊಳ್ಳುವ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.

    ReplyDelete
  5. ಕಾಲದ ಬಗೆಗಿನ ಉತ್ತಮ ಲೇಖನ ಪ್ರಭಾಮಣಿಯವರೇ...

    ReplyDelete
  6. 'KAALAvu pratiyobbarigoo uttara needutte' embudu mahaa satya.
    Lekhana chennagide..

    ReplyDelete
  7. ನನ್ನ ಬರಹಕ್ಕೆ ಉತ್ತಮ ರೀತಿಯ ವೈಚಾರಿಕ ಪ್ರತಿಕ್ರಿಯೆ ನೀಡಿ ಪ್ರೋತ್ಸಾಹಿಸಿದ ಎಲ್ಲ್ಲಾ ಅತ್ಮೀಯರಿಗೂ ಅನೇಕಾನೇಕ ವ೦ದನೆಗಳು. ಈ ಮೊದಲು ಭೌತಿಕ ಕಾಲ ಹಾಗು ಮಾನಸಿಕ ಕಾಲಗಳ ಬಗೆಗೆ ನನಗೆ ತಿಳಿದಿರಲಿಲ್ಲ. ಜೆ.ಕೆ.ಯವರ `ಅನುದಿನ ಚಿ೦ತನ' ದಲ್ಲಿದ್ದ ೫ಲೇಖನಗಳನ್ನು ಆಧರಿಸಿ ಬರೆದದ್ದಾದ್ದರಿ೦ದ ಇದರ ಎಲ್ಲಾ ಒಳಿತೂ ಅವರಿಗೆ ಸಲ್ಲುತ್ತದೆ. ಬರುತ್ತಿರಿ.

    ReplyDelete
  8. prabhaamaniyavare,samayada bagge vicharaatmaka vishleshanegaagi dhanyavaadagalu.

    ReplyDelete