Sunday, June 26, 2011

ಮನದ ಅಂಗಳದಿ.........೪೬. 'ಆನಂದ' ಮಂತ್ರ

'ಮಂತ್ರ' ಎನ್ನುವ ಪದವೇ ಸಂಸ್ಕೃತದಲ್ಲಿರುವ ಕೆಲವು ಪದಸಮೂಹಗಳ ನೆನಪನ್ನು ತರುತ್ತದೆ. ಇದುವರಗೆ ನಮ್ಮ ತಿಳುವಳಿಕೆಗೆ ನಿಲುಕಿರುವುದು ಅದೇ ಆಗಿದೆ. ಜೊತೆಗೆ ಸ್ತ್ರೀಯರು ಹಾಗೂ ಕೆಳ(!)ವರ್ಗದವರು ಮಂತ್ರೋಚ್ಛಾರಣೆ ಮಾಡಬಾರದು ಎನ್ನುವ ಮೌಢ್ಯವು 'ಮಂತ್ರ' ಎನ್ನುವ ಪದವನ್ನೇ ನಿಗೂಢಗೊಳಿಸಿದೆ. ಆದರೆ 'ಮಂತ್ರ' ಎನ್ನುವ ಪದದ ಅರ್ಥವೈಶಾಲ್ಯ, ಅದನ್ನು ಸದಾ ನಮ್ಮದಾಗಿಸಿಕೊಳ್ಳುವುದರಿಂದ ದೊರೆಯುವ ಆನಂದ ಇವುಗಳನ್ನು ತಿಳಿದರೆ ಅದರ ಉತ್ತಮ ಪ್ರಯೋಜನವನ್ನು ಪಡೆಯಲು ಅನುಕೂಲವಾಗುತ್ತದೆ.

ಅನೇಕ ದಿನಗಳಿಂದ ಓದಲು ಕಾತರಿಸಿದ್ದ ಸ್ವಾಮಿ ರಾಮರವರ ಆಧ್ಯಾತ್ಮಿಕ ಅನುಭವಗಳ ಕೃತಿಯಾದ, 'ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ,' (ಅನುವಾದಕರು- ಡಿ. ಕೆ. ಶ್ಯಾಮಸುಂದರ ರಾವ್) ಪುಸ್ತಕವನ್ನು ಇತ್ತೀಚೆಗೆ ನನ್ನ ಮಗಳು ತಂದುಕೊಟ್ಟಳು. (ಈಗ ಆಮೆ ವೇಗದಲ್ಲಿ ಅದರ ಓದು ಸಾಗಿದೆ!) ಅದರಲ್ಲಿ 'ಮಂತ್ರ'ಗಳ ಬಗ್ಗೆ ಸ್ವಾಮಿ ರಾಮರವರ ಅನುಭವಗಳು ಬಹಳ ಕುತೂಹಲಭರಿತವೂ, ಚಿಂತನಯೋಗ್ಯವೂ ಆಗಿದ್ದು ಹೀಗೆ ಹೇಳುತ್ತಾರೆ,

'ಗಾಢವಾದ ಧ್ಯಾನಮಗ್ನ ಸ್ಥತಿಯಲ್ಲಿರುವ ಮಹರ್ಷಿಗಳ ಅನುಭೂತಿಯಿಂದ ಹೊಮ್ಮಿದ ಒಂದು ಉಚ್ಚಾರಣಾಂಶ, ಒಂದು ಶಬ್ದ, ಒಂದು ಪದ ಅಥವಾ ಒಂದು ಪದಸಮುಚ್ಚಯವನ್ನು 'ಮಂತ್ರ' ಎನ್ನುತ್ತಾರೆ. ಇದು ಮಾನವ ಜೀವಿಗಳು ಮಾತನಾಡುವ ಭಾಷೆಯಲ್ಲ. ಅತಿ ಪ್ರಜ್ಞಾವಸ್ಥೆಯಿಂದ ಪಡೆದ ಶಬ್ದಗಳು ಸಾಧಕನನ್ನು ಆತ ಪರಿಪೂರ್ಣ ಶಾಂತಸ್ಥಿತಿಯನ್ನು ಮುಟ್ಟುವ ತನ್ನ ಉನ್ನತೋನ್ನತ ಅನುಭವ ಸ್ತರಗಳಿಗೆ ಕೊಂಡೊಯ್ಯುತ್ತವೆ. ಅರಿವಿನ ಪರಿಧಿ ವಿಸ್ತಾರವಾದ ಹಾಗೆಲ್ಲಾ ಮಂತ್ರ ಹೆಚ್ಚು ಹೊಸ ಅರ್ಥಗಳನ್ನು ಹೊರಗೆಡಹುತ್ತದೆ. ಅದು ಪ್ರಜ್ಞಾವಸ್ಥೆಯ ಉನ್ನತ ಸ್ತರದ ಅರಿವನ್ನು ಮೂಡಿಸುತ್ತದೆ. ಜನಜಂಗುಳಿಯ ಸ್ಥಳದಲ್ಲಿ ಮಂತ್ರಗಳನ್ನು ಮಾರಾಟಕ್ಕಿಟ್ಟು ಉಜ್ವಲ ಪರಂಪರೆಯನ್ನು ಸ್ವಾರ್ಥಸಾಧನೆಗೆ ಬಳಸಿಕೊಳ್ಳುವುದು ಅವಿವೇಕದ ಸಂಗತಿ.

ಮಂತ್ರವು ಮಾನವ ಜೀವಿಯ ಹಾಗೆಯೇ ಸ್ಥೂಲ, ಸೂಕ್ಷ್ಮ, ಅತಿ ಸೂಕ್ಷ್ಮ, ಸೂಕ್ಷ್ಮಾತಿಸೂಕ್ಷ್ಮವಾದ ಹಲವು ಕೋಶಗಳನ್ನು ಹೊಂದಿದೆ. ಉದಾಹರಣೆಗೆ 'ಓಂಕಾರ' ನಾದ.........

ಜನರು ಪ್ರಾಪಂಚಿಕ ವಸ್ತುಗಳನ್ನು ಸಂಗ್ರಹಿಸುವಂತೆ ನಾನು ಮಂತ್ರಗಳನ್ನು ಸಂಗ್ರಹಿಸುವ ಪರಿಪಾಠವನ್ನು ಹೊಂದಿದ್ದೆ. ನನಗೆ ಸಿಗಬಹುದಾದ ಯಾವುದಾದರೂ ಹೊಸ ಮಂತ್ರ ಈಗಾಗಲೇ ನನ್ನಲಿರೋ ಮಂತ್ರಕ್ಕಿಂತಲೂ ಉಪಯುಕ್ತವಾದದ್ದು ಇದ್ದೀತು ಎಂಬ ನಿರೀಕ್ಷೆ ನನ್ನದು. ಕೆಲಸಲ ನನನ್ನು ಸಹಪಾಠಿಗಳಿಗೆ ಹೋಲಿಸಿಕೊಂಡು 'ನನ್ನ ಮಂತ್ರ ಅವನ ಮಂತ್ರಕ್ಕಿಂತ ಉತ್ತಮವಾದದ್ದು,' ಎಂದು ಆಲೋಚಿಸುತ್ತಿದ್ದೆ. ನಾನಾಗ ತೀರಾ ಅಪಕ್ವಸ್ಥಿತಿಯಲ್ಲಿದ್ದೆ. ಅದನ್ನು 'ಗೀಳಿನ ಆಧ್ಯಾತ್ಮಿಕತೆ' ಎನ್ನುತ್ತೇನೆ ನಾನು.

ಹಿಮಾಲಯದ ದಟ್ಟವಾದ ಕಾಡಿನಲ್ಲಿ ಉತ್ತರಕಾಶಿ ಮತ್ತು ಹರ್ ಸಿಲ್ ಪ್ರದೇಶಗಳ ನಡುವಿನ ಪ್ರದೇಶದಲ್ಲಿ ಒಬ್ಬ ಸಾಧು ಶಾಂತವಾಗಿ ವಾಸಿಸುತ್ತಿದ್ದರು. ನಾನು ಅವರನ್ನು ನೋಡುವುದಕ್ಕೆ ಹೋದೆ. ಆಗ ಅವರು, 'ನೀನು ಬಂದ ಉದ್ದೇಶ ಏನು?' ಎಂದು ವಿಚಾರಿಸಿದರು.

'ಒಂದು ಮಂತ್ರವನ್ನು ಪಡೆಯಲು ಬಂದೆ,' ನಾನು ಸ್ಪಷ್ಟಪಡಿಸಿದೆ.

'ನೀನು ಸ್ವಲ್ಪ ಕಾಲ ಕಾಯಬೇಕಾಗುತ್ತೆ.' ಹೇಳಿದರವರು.

ಪಾಶ್ಚಾತ್ಯರು ಒಂದು ಮಂತ್ರ ಕಲಿಯಲು ಹೋದರೆ ಎಷ್ಟಾದರೂ ಹಣ ಖರ್ಚು ಮಾಡಲು ತಯಾರಿರುತ್ತಾರೆ. ಆದರೆ ಕಾಯೋದಕ್ಕೆ ತಯಾರಿರೋದಿಲ್ಲ. ನಾನೂ ಹಾಗೇ ಹೇಳಿದೆ, 'ಸ್ವಾಮೀಜಿ, ನನಗೆ ಸಮಯವಿಲ್ಲ.'

'ಹಾಗಾದರೆ ಮುಂದಿನ ವರ್ಷ ಬಾ.'

'ನಾನು ಈಗ ಇಲ್ಲೇ ಉಳಿದರೆ ಎಷ್ಟು ದಿನ ಕಾಯಬೇಕಾಗುತ್ತದೆ?'

'ಎಷ್ಟು ದಿನ ನೀನಿಲ್ಲಿರಬೇಕು ಅಂತಾ ನನಗನಿಸುತ್ತದೋ ಅಷ್ಟು ದಿನ ನೀನು ಇರಬೇಕಾಗುತ್ತದೆ.' ಸ್ವಾಮಿ ಖಂಡಿತವಾಗಿ ಹೇಳಿದರು.

ಸಮಾಧಾನದಿಂದ ನಿರೀಕ್ಷಣೆ ಮಾಡಿದೆ. ಒಂದು ದಿನ, ಎರಡು ದಿನ, ಮೂರು ದಿನ.. ಆದರೂ ಸ್ವಾಮಿ ಮಂತ್ರ ನೀಡಲಿಲ್ಲ. ನಾಲ್ಕನೇ ದಿನ, 'ನಿನಗೆ ಒಂದು ಮಂತ್ರವನ್ನು ಹೇಳಿಕೊಡಬೇಕು ಅಂತಾ ತೀರ್ಮಾನಿಸಿದ್ದೇನೆ. ಆದರೆ ಸದಾ ಅದನ್ನು ನೆನಪಿಟ್ಟುಕೊಂಡೇ ಇರ್‍ತೀನಿ ಅನ್ನೋ ಪ್ರಮಾಣ ಮಾಡ್ಬೇಕು ನೀನು.' ಎಂದರು. ಪ್ರಮಾಣ ಮಾಡಿದೆ.........

ಗಂಗೆಯ ತೀರಕ್ಕೆ ಕರೆದೊಯ್ದರು. 'ನಾನು ಈ ಮಂತ್ರವನ್ನು ಮರೆಯುವುದಿಲ್ಲ'ವೆಂದು ಅನೇಕ ಭಾರಿ ಪ್ರಮಾಣಮಾಡಿ ಪುನರುಚ್ಛರಿಸಿದೆ. ಆದರೂ ಅವರು ವಿಳಂಬ ಮಾಡುತ್ತಾ ಇದ್ದರು. ಕೊನೆಗೆ, 'ಎಲ್ಲಾದರೂ ಇರು, ಹರ್ಷಚಿತ್ತನಾಗಿರು. ಇದೇನೇ ಮಂತ್ರ. ಸದಾ ಕಾಲ, ಒಂದು ವೇಳೆ ಜೈಲಿಗೆ ಹಾಕಲ್ಪಟ್ಟರೂ ಗೆಲುವಾಗಿರು. ನೀನು ಎಲ್ಲಿಯೇ ಇದ್ದರೂ, ನರಕ ಸದೃಶ ಸ್ಥಳವಾದರೂ ಸರಿ. ಅಲ್ಲೇ ಒಂದು ಸ್ವರ್ಗವನ್ನು ಸೃಷ್ಟಿಮಾಡು. ಮಗೂ ನೆನಪಿಡು, ಹರ್ಷಚಿತ್ತತೆಯನ್ನು ನೀನು ನಿನಗಾಗಿಯೇ ಸೃಜಿಸಬೇಕು. ನನ್ನ ಈ ಮಂತ್ರವನ್ನು ನೆನಪಿಟ್ಟುಕೊ.'

ನನಗೆ ತುಂಬಾ ಸಂತೋಷ, ಬಹಳಾ ಬೇಸರ, ಎರಡೂ ಆದದ್ದುಂಟು. ಬೇಸರಕ್ಕೆ ಕಾರಣವೆಂದರೆ, ಯಾವುದಾದರೂ ವಿಶಿಷ್ಟವಾದ ಶಬ್ದ ಸಮುಚ್ಚಯವನ್ನು ಜಪಿಸಬೇಕಾಗುತ್ತದೆ ಎಂದು ನಾನು ನಿರೀಕ್ಷೆ ಮಾಡಿಕೊಂಡಿದ್ದು. ಈ ಮಂತ್ರವನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ ಮಾತ್ರವಲ್ಲ ಇದು ಯಾವಾಗಲೂ ಯಶಸ್ವಿಯಾಗಿರುವುದನ್ನು ಕಂಡಿದ್ದೇನೆ. ತನ್ನನ್ನು ತಾನೇ ಗುಣಪಡಿಸಿಕೊಳ್ಳಲು ರಾಮಬಾಣ ಈ ಮಂತ್ರ.'

ಇದಲ್ಲದೆ ಜೇನುನೊಣಗಳೊಡನೆ ಮಾತನಾಡ ಬಲ್ಲ 'ಮಧುಕರ ಮಂತ್ರ' ಕಲಿತು ಆದ ಅನುಭವದ ಬಗ್ಗೆ ತಿಳಿಸುತ್ತಾರೆ. ತಮ್ಮ ಗುರುಗಳು ಎಷ್ಟೇ ಬೇಡವೆಂದಿದ್ದರೂ ಕೇಳದೆ 'ಪ್ರಯೋಗಶಾಸ್ತ್ರ'ವೊಂದನ್ನು ರಹಸ್ಯವಾಗಿ ಓದಿ ಮಂತ್ರವನ್ನು ಪಠಿಸುತ್ತಾ ಭ್ರಾಂತಿಗೆ ಒಳಗಾಗಿ ಅಪಾಯಕ್ಕೆ ಗುರಿಯಾದದ್ದನ್ನು ವಿವರಿಸುತ್ತಾ, 'ಭ್ರಮೆಗಳೇನಿದ್ದರೂ ಅಶುದ್ಧ ಹಾಗೂ ಅಪಕ್ವ ಮನಸ್ಸಿನ ಉತ್ಪನ್ನಗಳು. ಮನಸ್ಸು ಶುದ್ಧವಾಗಿದ್ದಾಗ ಮತ್ತು ಅಂತರ್ಮುಖಿಯಾದಾಗ ಮಂತ್ರ ಸಹಕಾರಿಯಾಗುತ್ತದೆ. ಮಂತ್ರದ ಅರ್ಥವನ್ನು ತಿಳಿಯದ ಹೊರತು, ಉಚಿತವಾದ ಭಾವ ಮೂಡುವುದಿಲ್ಲ. ತೀವ್ರವಾದ ಭಾವ ಇಲ್ಲದೆ ಹೋದಲ್ಲಿ ಮಂತ್ರ ಹಾಗೂ ಅದರ ಮಾಂತ್ರಿಕ ಪಠಣ ಹೆಚ್ಚು ಪರಿಣಾಮಕಾರಿ ಅಲ್ಲ.' ಎನ್ನುತ್ತಾರೆ.

'ಕೈಝೆನ್' ತತ್ವಗಳನ್ನು ಅನುಸರಿಸಲು ಪಾಲಿಸಬೇಕಾದ ಹತ್ತು ಪರಿಣಾಮಕಾರೀ ತಂತ್ರಗಳಲ್ಲಿ ಒಂದಾದ 'ಮಂತ್ರ ಸಿದ್ಧಿ'ಯ ಕುರಿತು ಸ್ಪಷ್ಟಪಡಿಸುತ್ತಾ The Monk Who Sold His Ferraryಯಲ್ಲಿಯ ಜೂಲಿಯನ್, 'ವಿಶ್ವದಲ್ಲಿ ಶುಭವಾಗಿರುವುದೆಲ್ಲವನ್ನೂ ನಾನು ಮಂತ್ರಗಳ ಮೂಲಕ ಮನನ ಮಾಡುತ್ತಿರುತ್ತೇನೆ......ಲಿಖಿತ ಮಂತ್ರಗಳೂ ಪರಿಣಾಮಕಾರಿಯಾಗಿರುತ್ತವೆ. ಆದರೆ ಮಂತ್ರಗಳನ್ನು ಸಾಕಷ್ಟು ಗಟ್ಟಿಯಾಗಿ ಉಚ್ಛರಿಸಿದಾಗ ನಮ್ಮ ಅಂತಃಪ್ರಜ್ಞೆಯ ಮೇಲೆ ಅದ್ಭುತ ಪ್ರಭಾವ ಬೀರುವುದನ್ನು ಅನುಭವಿಸಿದ್ದೇನೆ. ನನಗೆ ಯಾವ ಕಾರ್ಯಕ್ಕಾದರೂ ಸ್ಫೂರ್ತಿ ಅಗತ್ಯವೆನಿಸಿದಾಗ, 'ನಾನು ಸ್ಪೂರ್ತನಾಗಿದ್ದೇನೆ, ಸ್ವನಿಯಂತ್ರಿತನಾಗಿದ್ದೇನೆ, ಚೈತನ್ಯಭರಿತನಾಗಿದ್ದೇನೆ,'(I am inspired, disciplined, energized) ಎಂದೂ, ಆತ್ಮವಿಶ್ವಾಸವನ್ನು ಉನ್ನತ ಮಟ್ಟದಲ್ಲಿ ಉಳಿಸಿಕೊಳ್ಳಲು, 'ನಾನು ಶಕ್ತಿಶಾಲಿಯೂ, ಸಮರ್ಥನೂ, ಶಾಂತನೂ(I am strong, able, calm) ಆಗಿದ್ದೇನೆ,' ಎಂದೂ ಆರೋಗ್ಯಕ್ಕಾಗಿ 'I am healthy, dynamic, fully ಅಳಿವೆ',ಎಂದೂ ಮಂತ್ರವನ್ನು ಪಠಿಸುತ್ತೇನೆ.....'ಎನ್ನುತ್ತಾನೆ.

'ಸರ್ವೇ ಜನಾಃ ಸುಖಿನೋ ಭವಂತು, ಸಮಸ್ತ ಸನ್ಮಂಗಳಾನಿ ಭವಂತು,'ಎನ್ನುವುದು, 'ಶಾಂತಿಮಂತ್ರ' ಮುಂತಾಗಿ ನಮ್ಮ ಪುರಾತನ ಋಷಿಮುನಿಗಳು ಅನೇಕ ಮಂತ್ರಗಳ ಭಂಡಾರವನ್ನೇ ವಿಶ್ವದ ಒಳಿತಿಗಾಗಿ ಇರಿಸಿದ್ದಾರೆ. ಸಕಾರಾತ್ಮಕ ಪ್ರಭಾವವನ್ನುಂಟುಮಾಡುವ ಮಂತ್ರಗಳನ್ನು (ಭಾಷಾತೀತವಾಗಿ) ನಮ್ಮದಾಗಿಸಿಕೊಂಡು ಜೀವನವನ್ನು 'ಆನಂದ'ದಿಂದ ಕೂಡಿರುವಂತೆ ರೂಪಿಸುವುದು ಒಳಿತು.

8 comments:

  1. ಸದಾ ಹರ್ಷಚಿತ್ತನಾಗಿರುವದೇ ನಿಜವಾದ ಮಂತ್ರ. ಸ್ವಾಮಿ ರಾಮರ ಅನುಭವವನ್ನು ನಮಗೆ ತಿಳಿಸಿದ್ದಕ್ಕಾಗಿ ಧನ್ಯವಾದಗಳು.

    ReplyDelete
  2. ಆನ೦ದ ಮ೦ತ್ರ.. ಬದುಕಿಗೆ ಅವಶ್ಯವಿರುವ ಮ೦ತ್ರ..ಒಳ್ಳೆಯ ಬರಹ..

    ReplyDelete
  3. 'ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ’ ತು೦ಬಾ ಉತ್ತಮವಾದ ಪುಸ್ತಕ. ಸ್ವಾಮಿ ರಾಮ ಅವರ ಅನುಭವಗಳನ್ನು ಓದುವುದೇ ಒ೦ದು ರೋಚಕ ಅನುಭವ. ತಮ್ಮ ಪುಸ್ತಕ ಪರಿಚಯದ ಪ್ರಸ್ತುತಿಗೆ ಅಭಿನ೦ದನೆಗಳು.

    ಅನ೦ತ್

    ReplyDelete
  4. ಮಂತ್ರಗಳ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ. ಎಲ್ಲಕಿಂತ ಮುಖ್ಯವಾಗಿ ಮಂತ್ರ ಅನ್ನೊ ಪದದ ಅರ್ಥವೇ ತಿಳಿಯದೆ ಹಲವರು ಎಷ್ಟೋ ಮಂತ್ರಗಳನ್ನು ಕಲಿತಿರುತ್ತಾರೆ. ಗೀಳಿನ ಆಧ್ಯಾತ್ಮದ ವಿಷಯ ಹಿಡಿಸಿತು.

    ReplyDelete
  5. ನಿಜ. ಸರಿಯಾದ ರೀತಿಯಲ್ಲಿ ಮಂತ್ರೋಚ್ಛಾರಣೆ ಮಾಡಿದರೆ ದೇಹ, ಮತ್ತು ಮನಸ್ಸಿನ ಮೇಲೆ ಉತ್ತಮ ಪರಿಣಾಮವಾಗುತ್ತದೆ ಎಂಬುದು ವೈಜ್ಞಾನಿಕವಾಗಿ ಧೃಡಪಟ್ಟಿದೆ

    ReplyDelete
  6. ಸ್ವಾಮಿ ರಾಮರು ಬರೆದ ಒಂದೆರಡು ಪುಸ್ತಕಗಳನ್ನು ಓದಿದ್ದೆ, ಜೀವನವನ್ನು ನಾವು ನೋಡುವ ರೀತಿಯಲ್ಲಿ- ಆ ಕ್ರಮದಲ್ಲಿ ಆನಂದವನ್ನು ಅನುಭವಿಸಬೇಕು.ಭಾರತೀಯ ಮೂಲದ ಹಲವು ವಿದ್ಯೆಗಳು ಋಷಿಮೂಲದವಾಗಿರುತ್ತವೆ. ಋಷಿಗಳು ವಿಜ್ಞಾನವನ್ನೂ ಮೀರಿದವರು-ಅವರ ಹೇಳಿದ್ದರಲ್ಲಿ ಸತ್ಯವೇ ಅಡಗಿರುತ್ತದೆ. ಲೇಖನ ಅರ್ಥಪೂರ್ಣ, ಧನ್ಯವಾದಗಳು

    ReplyDelete
  7. prabhaamaniyavare, nimma uttama vichaaravulla lekhanakkaagi dhanyavaadagalu.

    ReplyDelete