Wednesday, July 13, 2011

ಮನದ ಅಂಗಳದಿ.........೪೮. ಮತ್ತೆ ಮತ್ತೆ ಕಾಡುವ 'ಅಹಂ’


ಮೊದಲಿಗೆ 'ಅಹಂಕಾರ ಬಗ್ಗೆ ಬರೆದ ಲೇಖನವನ್ನು ನನ್ನ ಬ್ಲಾಗ್ 'ಪ್ರತೀಕ್ಷೆಯಲ್ಲಿ ಹಾಕಿದಾಗ ಸಹ ಬ್ಲಾಗಿಗರೊಬ್ಬರು ಪ್ರತಿಕ್ರಿಯಿಸುತ್ತಾ ರೀತಿಯಾಗಿ ಬರೆದಿದ್ದರು,

'.............ನಮ್ಮೊಳಗಿನ ಅಹಂಕಾರ ನಮ್ಮ ವಿಶಾಲ ಅರಿವಿಗೆ ಧಕ್ಕೆ ತರುತ್ತದೆ. ಬೇರೆಯವರು ನಮ್ಮ ತಪ್ಪುಗಳನ್ನು ತಿದ್ದಿದಾಗ ನಮ್ಮ 'ಅಹಂ’ ಅದಕ್ಕೆ ಆಸ್ಪದ ಕೊಡುವುದಿಲ್ಲ. ಈ 'ಅಹಂ’ ಕಳೆದುಕೊಳ್ಳುವುದು ಸುಲಭದ ಕೆಲಸವಲ್ಲ. ಒಂದೊಮ್ಮೆ 'ಅಹಂ’ ಕಳೆದುಬಿಟ್ಟರೆ ಷಡ್ವರ್ಗಗಳಲ್ಲಿ ಅರ್ಧ ಗೆದ್ದಂತೆಯೇ ಆಗುತ್ತದೆ. ವಿಪರ್ಯಾಸವೆಂದರೆ ಸುಮಾರಾದ ಸನ್ಯಾಸಿಗಳಿಗೂ ಅಹಮಿಕೆ ಹೋಗಿರುವುದಿಲ್ಲ!.......’

ಅವರ ಅನುಭವ ಪೂರ್ಣ ಮಾತುಗಳಲ್ಲಿದ್ದ ಸತ್ಯ ಚಿಂತನಾರ್ಹವಾಗಿತ್ತು. ಅದರಲ್ಲೂ 'ಸನ್ಯಾಸಿ’ ಹಾಗೂ 'ಅಹಮಿಕೆ’ ನಿಜವಾದ ವಿಪರ್ಯಾಸವೇ ಎನಿಸಿತು! ಸರ್ವಸಂಗ ಪರಿತ್ಯಾಗಿಯಾದ ಸನ್ಯಾಸಿಯಲ್ಲಿಯೂ ಅಹಮಿಕೆ ಇರಲು ಸಾಧ್ಯವೆ? ಇದ್ದರೆ ಅದೆಂಥಾ ವಿರೋಧಾಭಾಸ ಎಂದುಕೊಂಡಿದ್ದೆ. ಈಗ ಸ್ವಾಮಿ ರಾಮ ಅವರ ಆಧ್ಯಾತ್ಮಿಕ ಅನುಭವಗಳ ಬಗ್ಗೆ ಓದುವಾಗ ಅವರು ಪ್ರಾರಂಭಿಕ ಹಂತಗಳಲ್ಲಿ ತಮ್ಮಲ್ಲಿಯೂ ನೆಲೆಯೂರುತ್ತಿದ್ದ ಅಹಂಕಾರ, ಅದನ್ನು ಮೀರಿ ನಿಲ್ಲುವಲ್ಲಿನ ಪ್ರಯತ್ನಗಳಲ್ಲಿ ವಿಶೇಷ ಮಾರ್ಗದರ್ಶನ ನೀಡಿದ ಅವರ ಗುರುಗಳ ಅಮೂಲ್ಯ ಸಲಹೆಗಳ ಬಗ್ಗೆ ತಿಳಿಸಿರುವುದು ನಮ್ಮೆಲ್ಲರಿಗೂ ದಾರಿದೀಪವಾಗಿದೆ. ಅವರ ಅನುಭವಗಳು ಹಾಗೂ ಅನುಭವಪೂರ್ಣ ಮಾತುಗಳು ಈ ರೀತಿಯಾಗಿವೆ:

'.....ಸಮೀಪದ ಒಂದು ಗುಹೆಯಲ್ಲಿ ಇದ್ದ ಪ್ರಭಾತಸ್ವಾಮಿಯೆಂಬ ಮಹಾನ್ ವಿರಾಗಿಯೊಬ್ಬರನ್ನು ಭೇಟಿಮಾಡಲು ಹೋದೆ. ಆ ಸಮಯದಲ್ಲಿ ಸ್ವಾಮಿಯಾಗಲು ನನಗೆ ತರಬೇತಿ ಕೊಡಲಾಗುತ್ತಿತ್ತು. ನಮ್ಮ ಪದ್ಧತಿಯ ಪ್ರಕಾರ ನಾನವರಿಗೆ ಗೌರವ ಸಲ್ಲಿಸಿದೆ. ನಾಲ್ಕುಮಡಿ ಮಡಚಿದ ಒಂದು ಜಮಖಾನದ ಮೇಲೆ ಸ್ವಾಮಿ ಕುಳಿತಿದ್ದರು. ಎದುರಿಗೆ ಒಂದಷ್ಟು ಜನ ಹಳ್ಳಿಗರು ಕುಳಿತಿದ್ದರು. ಅವರು ತಮ್ಮ ಪಕ್ಕದಲ್ಲಿ ಕುಳಿತುಕೊಳ್ಳಲು ಸ್ಥಳಾವಕಾಶ ಕೊಡುತ್ತಾರೆಂಬ ನಿರೀಕ್ಷೆ ನನ್ನದು. ನಾನಿನ್ನೂ ಅಹಂಕಾರದಿಂದ ಬೀಗುವ ತೊಳಲಾಟದಲ್ಲೇ ಇದ್ದೆ. ಭಾಗಷಃ ಕಾರಣ ಹೀಗಿದೆ: ಭಾರತದ ಹಳ್ಳಿಗರು ಸ್ವಾಮಿಯೊಬ್ಬನನ್ನು ಕಂಡಾಗ ಬಾಗಿ ನಮಸ್ಕರಿಸಿ ಗೌರವಿಸುತ್ತಾರೆ. ತರಬೇತಿಯ ಪ್ರಾರಂಭಿಕ ಸ್ಥಿತಿಯಲ್ಲಿರುವ ಸ್ವಾಮಿಗೆ ಇದು ಅಹಂಕಾರವನ್ನು ತುಂಬುವುದಲ್ಲದೇ ಹಲವು ಸಮಸ್ಯೆಗಳನ್ನು ಉಂಟುಮಾಡುತ್ತದೆ......’

ಪ್ರಭಾತಸ್ವಾಮಿಯವರು ಸ್ಥಳಾವಕಾಶಕ್ಕಾಗಿ ಇವರ ಆಗ್ರಹವನ್ನು ಕೇಳಿ ನಕ್ಕು ಇನ್ನೊಂದು ಘಟನೆಯನ್ನು ವಿವರಿಸುವುದರ ಮೂಲಕ ಅಹಂಕಾರದ ಕೆಡುಕಿನ ಬಗ್ಗೆ ಸೂಚ್ಯವಾಗಿ ತಿಳಿಸುತ್ತಾರೆ. ಈ ಘಟನೆಯನ್ನು ವಿಶ್ಲೇಷಿಸುತ್ತಾ ಸ್ವಾಮಿ ರಾಮರವರು,

'ಅಹಂಕಾರವು ಜ್ಞಾನಾರ್ಥಿ ಹಾಗೂ ಜ್ಞಾನ ಮಾರ್ಗಗಳ ನಡುವೆ ತೆರೆಯೆಳೆಯುತ್ತದೆ. ವ್ಯಕ್ತಿಯು ಅಹಂಕಾರಿಯಾದಾಗ ಆತ ತನ್ನನ್ನೇ ತಾನು ಒಂಟಿಯಾಗಿಸಿಕೊಳ್ಳುತ್ತಾನೆ. ಹೀಗಾಗಿ ಗುರುಗಳೊಡನೆ ಹಾಗೂ ತನ್ನದೇ ಅಂತರಂಗದೊಡನೆ ಸಂವಹನೆಗೆ ಅಸಮರ್ಥನಾಗುತ್ತಾನಲ್ಲದೇ ಗುರುಬೋಧನೆಯ ಪ್ರಕಾರ ನಡೆದುಕೊಳ್ಳಲಾರ. ಇಂಥಾ ಒಂದು 'ಅಹಂ’ ತೀವ್ರವಾದ ಕಟ್ಟುನಿಟ್ಟುಗಳಿಗೆ ಒಳಗಾಗಬೇಕಾಗುತ್ತದೆ. ಇಲ್ಲದಲ್ಲಿ ಎಲ್ಲ ಜ್ಞಾನವೂ ಹಾಳಾಗಿಬಿಡುತ್ತದೆ.’ ಎನ್ನುತ್ತಾರೆ.

ಒಮ್ಮೆ ಅಹಂಕಾರದ ಪರಾಕಾಷ್ಟೆಗೆ ತಲುಪಿದಾಗ ತಾವು ಅನುಭವಿಸಬೇಕಾದ ನೋವಿನ ಬಗ್ಗೆ ಹಾಗೂ ಅದರಿಂದ ತಾವು ಕಲಿತ ಪಾಠದ ಬಗ್ಗೆ ಹೇಳುತ್ತಾ ಹೀಗೆ ತಿಳಿಸುತ್ತಾರೆ,

'......ಆಗತಾನೇ ಸ್ವಾಮಿಯಾಗಿ ದೀಕ್ಷೆ ಪಡೆದಿದ್ದರೂ ನಾನೂ ಪ್ರತಿದಿನ ಪಾಠ ಹೇಳುತ್ತಿದ್ದೆ. ವಿದ್ಯಾರ್ಥಿಗಳೂ ಆಗಾಗ ಬೋಧಕರಿಗೆ ಸಮಸ್ಯೆಯೊಡ್ಡುತ್ತಾರೆ. ಉದಾಹರಣೆಗೆ ಅವರು ಬೋಧಕರನ್ನು ತಮಗಿಂತಲೂ ಮೇಲ್ದರ್ಜೆಯಲ್ಲಿಡುತ್ತಾರಾಗಿ ಸಂವಹನೆ ಸೀಮಿತವಾಗುತ್ತದೆ. ನನ್ನ ವಿದ್ಯಾರ್ಥಿಗಳು ಎತ್ತರದ ಒಂದು ವೇದಿಕೆಯನ್ನು ನಿರ್ಮಿಸಿ ಅದರ ಮೇಲೆ ಕುಳಿತುಕೊಳ್ಳುವಂತೆ ನನಗೆ ಹೇಳಿದರು. ನನಗೆ ಇಷ್ಟೊಂದು ಅನುಯಾಯಿಗಳ ಸಮೂಹ ಇದೆಯೆಂಬ ಕಾರಣದಿಂದ ಮಿತಿಮೀರಿ ಹೆಮ್ಮೆ ಪಟ್ಟುಕೊಂಡೆ. ಅನನುಭವಿಗಳಾದ ನೀವು ಹೆಸರು ಮತ್ತು ಕೀರ್ತಿಗಾಗಿ ಹಂಬಲಿಸಿದಾಗ ಹೀಗಾಗುತ್ತದೆ. ಅನುಯಾಯಿಗಳ ಸಂಖ್ಯೆ ಹೆಚ್ಚಾದ ಹಾಗೆಲ್ಲಾ ವ್ಯಕ್ತಿಯ ಅಹಂಭಾವದ ಪ್ರಮಾಣವೂ ಬೆಳೆಯುತ್ತಾ ಹೋಗುತ್ತದೆ.’

ಅಲ್ಲಿನ ಶಿಷ್ಯರ ನಡುವೆ ಒಬ್ಬ ಸ್ವಾಮಿಯೂ ಒಂದು ಮೂಲೆಯಲ್ಲಿ ತೆಪ್ಪಗೆ ಕುಳಿತುಕೊಳ್ಳುತ್ತಿರುತ್ತಾರೆ. ಆತನೇನೂ ಬುದ್ಧಿವಂತನಲ್ಲ ಎಂದು ಇವರು ಭಾವಿಸಿ ಇಡೀ ದಿನ ಅವರನ್ನು ಕೆಲಸಕ್ಕೆ ಹಚ್ಚುತ್ತಿರುತ್ತಾರೆ. ಒಂದು ಬೆಳಿಗ್ಗೆ ಗಂಗಾತೀರದಲ್ಲಿ ಹಲ್ಲುಜ್ಜುತ್ತಾ, 'ಹೋಗಿ ನೀರು ತೆಗೆದುಕೊಂಡು ಬಾ,’ ಎಂದು ಆಜ್ಞೆ ಮಾಡುತ್ತಾರೆ. ಇವರ ಮಿತಿಮೀರಿದ ಅಹಂಕಾರವನ್ನು ಸಾಕಷ್ಟು ಅನುಭವಿಸಿದ್ದ ಆತ, 'ಉಜ್ಜುತ್ತಲೇ ಇರು’ ಎಂದು ಹೇಳಿದಾಗ ಹೊತ್ತುಗೊತ್ತಿನ ಪರಿವೇ ಇಲ್ಲದೇ ಉಜ್ಜುತ್ತಲೇ ಇದ್ದು ತನಗೇನಾಗುತ್ತಿದೆ ಎನ್ನುವ ಅರಿವನ್ನೇ ಕಳೆದುಕೊಳ್ಳುತ್ತಾರೆ. ಎರಡು ದಿನಗಳ ನಂತರ ಅಲ್ಲೇ ಬಿದ್ದಿದ್ದ ಇವರನ್ನು ಕೆಲವರು ನೋಡಿದಾಗ ಅಪ್ರಜ್ಞಾವಸ್ಥೆಯಲ್ಲಿಯೂ ಇವರು ಹಲ್ಲನ್ನು ಉಜ್ಜುತ್ತಲೇ ಇದ್ದು ವಸಡು, ಮುಖವೆಲ್ಲಾ ಊದಿಕೊಂಡು ದವಡೆಗಳು ಅಲ್ಲಾಡಿಸಲಾಗದಂತಾಗಿರುತ್ತದೆ. ಇವರ ಗುರುಗಳು ಬಂದು ಇವರನ್ನು ಎಬ್ಬಿಸಿ ಬುದ್ದಿಮಾತುಗಳನ್ನು ಹೇಳುತ್ತಾ ಹೀಗೆ ತಿಳಿಸುತ್ತಾರೆ,

'.....ಅಹಂ ಹಾಗೂ ಹೆಮ್ಮೆ ಇವು ನಿನ್ನ ಜೀವನದಲ್ಲಿ ಎರಡು ಎಡವುಗಲ್ಲುಗಳು. ವಿನೀತನಾಗದೇ ಹೋದಲ್ಲಿ ನೀನು ಕಲಿಯಲಾರೆ. ನಿನ್ನ ಬೆಳವಣಿಗೆ ಕೇವಲ ಬೂಟಾಟಿಕೆಯಾಗುತ್ತದೆ.....’

ಆಧ್ಯಾತ್ಮಿಕ ಪಥಗಾಮಿಯಾಗಿ ಹೊರಟವರಿಗೆ ವಿನಯಶೀಲತೆ ಅತ್ಯಗತ್ಯವಾದ್ದು. ಅಹಂಕಾರವು ಪ್ರತಿಂಧಕಗಳನ್ನು ನಿರ್ಮಿಸುತ್ತದೆ. ಆಗ ತಾರತಮ್ಯಜ್ಞಾನ ಕಳೆದುಹೋಗುತ್ತದೆ. ತಾರತಮ್ಯಜ್ಞಾನವನ್ನು ತೀಕ್ಷ್ಣಗೊಳಿಸದಿದ್ದಲ್ಲಿ ವಿವೇಚನಾ ಶಕ್ತಿಯು ಕೈಕೊಡುತ್ತದಲ್ಲದೆ ಮನಸ್ಸಿಗೆ ಮೋಡ ಮುಸುಕುತ್ತದೆ.....ಪ್ರಜ್ಞಾಸ್ಥತಿಯೆಂಬ ಸಾಗರದಲ್ಲಿನ ಅಹಂ ಹುಟ್ಟಡಗಿಹೋಗಿರುವ ಬಗ್ಗೆ ಸ್ಪಷ್ಟಪಡಿಸಿಕೊಳ್ಳಿ. ಹೃದಯದ ಒಳಗಿನ ಕತ್ತಲೆಯ ಕೋಣೆಯಲ್ಲಿ ಅದು ಎಲ್ಲಾದರೂ ಅಡಗಿ ಕುಳಿತಿಲ್ಲ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಿ. ಅಹಮಿನ ದಾರಿಗಳು ಹಲವಾರು, ರೂಪಗಳು ಅಸಂಖ್ಯಾತ. ಪ್ರೇಮಪೂರಿತ ಕೃತಿಯು ಶಾಶ್ವತತೆಯ ಹಾಗೂ ನಿರಂತರ ಆನಂದದ ಮಿನುಗು ನೋಟವನ್ನು ನೀಡುತ್ತದೆ.

'ಆತ್ಮವಿಶ್ವಾಸ ನನ್ನದಾಗಲಿ ಆದರೆ ಅಹಂಕಾರ ನನ್ನ ಬಳಿ ಸುಳಿಯುವುದೂ ಬೇಡ,’ ಎನ್ನುವುದು ನನ್ನ ನಿರಂತರ ಹಂಬಲ. ನನಗೆ ಏನಾದರೂ ತೊಂದರೆಯಾದಾಗ ಅಥವಾ ಕೆಟ್ಟದಾದಾಗ, 'ಬಹುಷಃ ನನ್ನಲ್ಲಿ ಉದ್ಭವಿಸುತ್ತಿರಬಹುದಾದ 'ಅಹಂ’ಅನ್ನು ತಡೆಯಲೆಂದೇ ನನಗೆ ಈ ರೀತಿಯ ಕಷ್ಟವುಂಟಾಯಿತೇನೋ ಎಂದುಕೊಳ್ಳುತ್ತೇನೆ. ಈ ಬಗ್ಗೆ ಸ್ವಾಮಿ ರಾಮ ಅವರು ಹೀಗೆ ಹೇಳುತ್ತಾರೆ: 'ನಾನು ಅಹಂಕಾರಿಯಾದಾಲೆಲ್ಲಾ ನೆಲ ಕಚ್ಚಿದ್ದೇನೆ. ಇದು ನನ್ನ ಅನುಭವ.

'ಪ್ರಯತ್ನಶೀಲನಾಗು, ಆದರೆ ಅಹಂಭಾವವನ್ನು ಬೆಳೆಸಿಕೊಂಡಾಗ, ಸ್ವಾರ್ಥ ಸಾಧನೆಯ ಪ್ರಯತ್ನ ಮಾಡಿದಾಗ, ನೀನು ಊರ್ಜಿತನಾಗುವುದಿಲ್ಲ. ಇದು ನನ್ನ ಶಾಪ.' ಎಂದು ನನ್ನ ಗುರುಗಳು ಹೇಳಿದರು.....ಅವರೇ ಮಾತು ಮುಂದುವರೆಸಿ, 'ನಿನಗಿದು ನಾನು ಮಾಡ್ತಿರೋ ಆಶೀರ್ವಾದ. ನೀನು ನಿಸ್ವಾರ್ಥಿ, ಕರುಣಿ, ಹಾಗೂ ನಿರಹಂಕಾರಿ ಆಗುವುದನ್ನು ಬಯಸಿದಾಗಲೆಲ್ಲಾ ಒಂದು ಮಹತ್ತರ ಶಕ್ತಿ ನಿನ್ನ ಹಿಂದಿರುವುದನ್ನು ಕಾಣುತ್ತೀಯಲ್ಲದೇ ಏನಾದರೂ ಒಳಿತನ್ನು ಸಾಧಿಸುವುದರಲ್ಲಿ ಸಫಲನಾಗುತ್ತೀಯ' ಎಂದರು.

ನಿಸ್ವಾರ್ಥತೆಯನ್ನು ರೂಢಿಸಿಕೊಳ್ಳುವುದರಿಂದ ಅಹಂಭಾವವನ್ನೂ ಶುದ್ಧಿಗೊಳಿಸಬಹುದು. ದುರಹಂಕಾರವು ಆತ್ಮಘಾತುಕವಾದ ಒಂದು ಅನಿಷ್ಟ.....ಅಹಂಕಾರಿಯಾದ ಯಾರೊಬ್ಬರೂ ಪ್ರಜ್ಞೆಯನ್ನು ರೂಢಿಸಿಕೊಳ್ಳಲಾರರು. ತಮ್ಮ ಅಹಮಿಕೆಯ ಕಾರಣದಿಂದಾಗಿ ತಮ್ಮ ಸುತ್ತಲೂ ಸೀಮಾಬಂಧನವನ್ನು ರೂಪಿಸಿಕೊಳ್ಳುವವರು ನಿಶ್ಚಿತವಾಗಿಯೂ ಸಂಕಷ್ಟಗಳಿಗೆ ಒಳಗಾಗುತ್ತಾರೆ. ಆದರೆ ಬೇರೆಯವರೊಂದಿಗಿನ ಅಖಂಡತ್ವದ ಅರಿವನ್ನು ಸದಾ ಹೊಂದಿರಲು ಪ್ರಯತ್ನಿಸುವವರು ಜೀವನದ ಪ್ರತಿಕ್ಷಣವನ್ನೂ ಆನಂದದಿಂದಲೂ ನಿರ್ಭೀತಿಯಿಂದಲೂ ಅನುಭವಿಸುತ್ತಾ ಇರಬಲ್ಲರು. ಪ್ರೀತಿ, ವಿನಯ, ನಿಸ್ವಾರ್ಥತೆ ಈ ಗುಣಸ್ವಭಾವಗಳವರೇ ಮನುಕುಲಕ್ಕೆ ನಿಜವಾದ ಉಪಕಾರಿಗಳು.’

ಅಸಂಖ್ಯಾತ ರೂಪಗಳನ್ನು ಹೊತ್ತು, ಹಲವಾರು ಮಾರ್ಗಗಳಿಂದ ನಮ್ಮನ್ನಾಕ್ರಮಿಸಲು ಹೊಂಚುಹಾಕುತ್ತಿರುವ 'ಅಹಂ’ಅನ್ನು ನಮ್ಮಲ್ಲಿ ನಾವೇ ಗುರುತಿಸಿಕೊಂಡು ನಿವಾರಿಸಿಕೊಳ್ಳುವ ಸತತ ಪ್ರಯತ್ನ ನಮ್ಮದಾಗಲಿ.

6 comments:

  1. ಸಾಧನೆಯ ಮಾರ್ಗದಲ್ಲಿ ಕೈದೀವಿಗೆಯಂತಿದೆ ನಿಮ್ಮ ಲೇಖನ. ತುಂಬ ಉಪಯುಕ್ತವಾಗಿದೆ.

    ReplyDelete
  2. ಅಹ೦ಕಾರದ ಬಗ್ಗೆ ಉತ್ತಮವಾಗಿ ತಿಳಿಸಿಕೊಟ್ಟಿದ್ದೀರಿ. ವ೦ದನೆಗಳು.

    ReplyDelete
  3. tumbaa uttama baraha

    swaamy Ram avara baraha naanu oduttiddene, adbhuta vyaktitva avaradu

    ReplyDelete
  4. ಅಹಂಕಾರದ ಬಗ್ಗೆ ಒಳ್ಳೆಯ ಮಾಹಿತಿ .. ಬಹಳ ದಿನದ ನಂತರ ಬ್ಲಾಗ್ ಓದುತ್ತ ಇದ್ದೀನಿ .. ನಿಮ್ಮ ಎಲ್ಲ ೪ ಪೋಸ್ಟ್ ಸುಂದರವಾಗಿ ಮೂಡಿಬಂದಿದೆ

    ReplyDelete
  5. ಅಹಮಿಕೆ ಬಗ್ಗೆ ಚೆನ್ನಾಗಿ ಬರೆದಿದ್ದಿರಾ...

    ReplyDelete