Monday, July 18, 2011

ಮನದ ಅಂಗಳದಿ.........೪೯. ಸರ್ಪ ಭೀತಿ

ಹಳ್ಳಿಯಲ್ಲಿಯೇ ಹುಟ್ಟಿಬೆಳೆದ ನಮಗೆ ಹಾವಿನ ಬಗೆಗಿನ ಅನುಭವಗಳು ಬಹಳವಾಗೇ ಇದ್ದವು. ಮಕ್ಕಳಾಗಿದ್ದಾಗ ನಡುಮನೆಯಲ್ಲಿ ಸಾಲಾಗಿ ಹಾಸಿದ್ದ ಹಾಸಿಗೆಯ ಮೇಲೆ ನಮ್ಮನ್ನು ಮಲಗಿಸಿದ್ದಾಗ ತಲೆಯ ಕಡೆ ಗೋಡೆಯ ಅಂಚಿನಲ್ಲಿ ನಾಗರಹಾವೊಂದು ಹರಿಯುತ್ತಾ ಹೋದ ದೃಶ್ಯದ ಬಗ್ಗೆ ಹಿರಿಯರು ಹೇಳುತ್ತಿದ್ದ ವರ್ಣನೆ ಮನದಲ್ಲಿ ಅಚ್ಚಳಿಯದಂತೆ ಉಳಿದಿದೆ!
ಚಿಕ್ಕವನಿದ್ದಾಗ ನನ್ನ ತಮ್ಮ ಕೈಯಲ್ಲಿ ಹಾವಿನ ಮರಿಯನ್ನು ಹಿಡಿದುಕೊಂಡು, ಅದು ತಲೆ ಎತ್ತಿದಾಗಲೆಲ್ಲಾ ಜೋರಾಗಿ ಕೊಡವುತ್ತಿದ್ದುದು, ಅಮ್ಮ ಹಿತ್ತಲಿನಿಂದ ಗುಲಾಬಿಹೂವನ್ನು ಕೈಯಲ್ಲಿ ಹಿಡಿದು ಅದರ ಸೌಂದರ್ಯವನ್ನು ಆಸ್ವಾಧಿಸುತ್ತಾ ಹೊಸ್ತಿಲು ದಾಟಿದಾಗ, ಹೊಸ್ತಿಲ ಕೆಳಗೇ ಉದ್ದವಾಗಿ ನಾಗರಹಾವು ಮಲಗಿದ್ದನ್ನು ಕಂಡು ಹೌಹಾರಿದ್ದು, ಅಣ್ಣ(ಅಪ್ಪ) ಪೂಜೆಮಾಡುತ್ತಾ ಕುಳಿತಿದ್ದಾಗ ಹಂಚಿನ ಸಂದಿಯಿಂದ ಹಾವು ಇಳಿಬಿದ್ದಿದ್ದನ್ನು ಕಂಡು ಮೌನಭಂಗ ಮಾಡಲಾಗದೇ ಚಪ್ಪಾಳೆ ಹೊಡೆಯಲಾರಂಭಿಸಿದ್ದು, ಅಮ್ಮ ಗದ್ದೆ ಬದುವಿನಲ್ಲಿ ಹುಲ್ಲು ಕುಯ್ಯುವಾಗ ಹುಲ್ಲಿನ ಜೊತೆಗೇ ನಾಗರಹಾವನ್ನು ಕೈಯಲ್ಲಿ ಹಿಡಿದುಕೊಂಡದ್ದು, ಗದ್ದೆಯಿಂದ ಹುಲ್ಲಿನ ಹೊರೆಯನ್ನು ತಂದು ಮನೆಯ ಮುಂದೆ ಹಾಕಿದಾಗ ಹೊರೆಯಿಂದ ಹಾವು ಹರಿಯುತ್ತಾ ಹೋದದ್ದು, ಓಡೆಯಲ್ಲಿ ಇಲಿಗೆ ಬೋನು ಇಟ್ಟಾಗ ಅದರೊಳಗೆ ನಾಗರಹಾವೊಂದು ಬಿದ್ದಿದ್ದು,......ಹೇಳುತ್ತಾ ಹೋದರೆ ಕೊನೆಯಿಲ್ಲದ ಘಟನೆಗಳು! ಇವುಗಳಿಂದ ಮಕ್ಕಳಾಗಿದ್ದ ನಮ್ಮಲ್ಲಿ ನನ್ನ ತಮ್ಮ ಅಪರಿಮಿತ ಧೈರ್ಯಶಾಲಿಯಾಗಿ ಹೊರಹೊಮ್ಮಿದ. ನಾನಾದರೋ ಭೀತಿಯಲ್ಲಿ ತತ್ತರಿಸುವವಳಾಗಿಬಿಟ್ಟೆ! ಆದರೂ ತೋರ್ಪಡಿಸದೇ ಬದುಕು ಸಾಗುತ್ತಿರುವಾಗ...... ಸ್ವಾಮಿ ರಾಮ ಅವರು ?ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ? ಕೃತಿಯಲ್ಲಿ ಉರುಗ ಭೀತಿಯ ಬಗ್ಗೆ ತಿಳಿಸಿರುವ ಅನುಭವಗಳು ನನ್ನಲ್ಲಿ ಆಶಾ ಭಾವನೆಯನ್ನು ಮೂಡಿಸುತ್ತಿವೆ. ಅದನ್ನು ನಿಮ್ಮೊಂದಿಗೂ ಹಂಚಿಕೊಳ್ಳುತ್ತಿದ್ದೇನೆ:
'ನನ್ನ ಭೀತಿಯನ್ನು ಕುರಿತು ಹೇಳುತ್ತೇನೆ, ಕೇಳಿ. ಚಿಕ್ಕ ವಯಸ್ಸಿನಲ್ಲಿ ಸಹಜವಾಗೇ ನಿರ್ಭೀತ ಸ್ವಭಾವದವನಾಗಿದ್ದೆ. ಉಕ್ಕಿ ಹರಿಯುವ ಗಂಗೆಯನ್ನು ಈಜಿ, ಹುಲಿಗಳ ಬಗ್ಗೆ ಭಯವಿಲ್ಲದೇ ಕಾಡಿನೊಳಗೆ ಸುತ್ತಾಡುತ್ತಿದ್ದೆ. ಆದರೆ ಹಾವುಗಳನ್ನು ಕಂಡರೆ ತುಂಬಾ ಹೆದರುತ್ತಿದ್ದೆ. ಅನೇಕ ಸಲ ಹಾವುಗಳೊಡನೆ ಮುಖಾಮುಖಿ ಆಗಿದ್ದುಂಟು. ಆದರೆ ನನ್ನ ಭೀತ ಸ್ವಭಾವವನ್ನು ಎಲ್ಲರಿಂದಲೂ, ನನ್ನ ಗುರುಗಳಿಂದ ಕೂಡಾ, ಗೋಪ್ಯವಾಗಿಟ್ಟಿದ್ದೆ.
ಒಮ್ಮೆ ೧೯೩೯ರ ಸೆಪ್ಟೆಂಬರ್ನಲ್ಲಿ ನಾನು ಮತ್ತು ನನ್ನ ಗುರುಗಳು ಕೆಳಗಿಳಿದು ಹೃಷಿಕೇಶಕ್ಕೆ ಬಂದೆವು. ನಾವು ವೀರಭದ್ರಾಕ್ಕೆ ಹೋಗುವ ಮಾರ್ಗದ ಒಂದು ಸ್ಥಳದಲ್ಲಿ ವಾಸ್ತವ್ಯ ಹೂಡಿದೆವು. ಮುಂಜಾನೆ ಗಂಗೆಯಲ್ಲಿ ಸ್ನಾನ ಮಾಡಿ, ತಡಿಯಲ್ಲಿ ಧ್ಯಾನಕ್ಕೆ ಕುಳಿತೆವು. ಆವೇಳೆಗೆ ನಾನಾಗಲೇ ನಿರಂತರವಾಗಿ ಎರಡು ಮೂರು ಗಂಟೆಕಾಲ ಧ್ಯಾನತಲ್ಲೀನನಾಗಿ ಕುಳಿತುಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡಿದ್ದೆ. ಏಳೂವರೆ ಸಮಯವಿರಬಹುದು. ಕಣ್ಣುಬಿಟ್ಟು ನೋಡಿದಾಗ ಒಂದು ನಾಗರಹಾವಿನೊಡನೆ ನನ್ನ ಮುಖಾಮುಖಿ ನಡೆದಿದೆ. ಅದು ಸಿಂಬೆಸುತ್ತಿ, ಹೆಡೆಎತ್ತಿ, ಅಲ್ಲಾಡದೆ ಕುಳಿತಿದೆ. ಎರಡಡಿ ದೂರದಲ್ಲಿ ನನ್ನ ಮುಂದೆಯೇ ನನ್ನನ್ನೇ ನೋಡುತ್ತಿದೆ. ಭಯಾಕ್ರಾಂತನಾಗಿ ತಕ್ಷಣ ಮತ್ತೆ ಕಣ್ಣುಮುಚ್ಚಿಕೊಂಡೆ. ಏನು ಮಾಡಲೂ ತೋಚಲಿಲ್ಲ. ಕೆಲವು ಸೆಕೆಂಡುಗಳ ನಂತರ ಕಣ್ಣುಬಿಟ್ಟು ನೋಡಿದೆ. ಅಲುಗಾಡಿಲ್ಲ ಅದು! ನೆಗೆದೆದ್ದು ಮಿಂಚಿನ ವೇಗದಲ್ಲಿ ಓಟಕಿತ್ತೆ. ಕೆಲವು ಗಜಗಳಷ್ಟು ದೂರ ಹೋಗಿ ತಿರುಗಿ ನೋಡಿದೆ. ನಾಗರ ಆಗಷ್ಟೇ ಪೊದೆಯತ್ತ ತೆವಳತೊಡಗಿತ್ತು.
ಗುರುಗಳ ಬಳಿ ಹಿಂತಿರುಗಿ ನಡೆದದ್ದನ್ನು ವಿವರಿಸಿದೆ. ನಕ್ಕು ಅವರು ಹೇಳಿದ್ದೆಂದರೆ, 'ಆಳವಾದ ಧ್ಯಾನದಲ್ಲಿರುವವರ ಸಮೀಪದಲ್ಲಿ ಧ್ಯಾನಾವಸ್ಥೆಯನ್ನು ತಲುಪುವುದು ಯಾವುದೇ ಜೀವಂತ ಪ್ರಾಣಿಗೆ ಸಹಜವಾದುದು......'
ಸ್ವಾಮಿ ರಾಮ ಅವರು ತಮಗೆ ಹಾವುಗಳೊಡನೆ ಉಂಟಾದ ಮತ್ತೊಂದು ಕರಾಳ ಅನುಭವವನ್ನು ಅಧ್ಯಾಯದಲ್ಲೆ ವಿವರಿಸಿದ್ದಾರೆ. ಒಮ್ಮೆ ಅವರನ್ನು ದಕ್ಷಿಣ ಭಾರತಕ್ಕೆ ಒಮ್ಮೆ ಕಳುಹಿಸುತ್ತಾರೆ. ಚಳಿ-ಮಳೆಗಳ ಒಂದು ಸಂಜೆ ದೇವಸ್ಥಾನವೊಂದರಲ್ಲಿ ಆಶ್ರಯ ಕೇಳಲು ಹೋಗುತ್ತಾರೆ. ಅಲ್ಲಿದ್ದವರು, 'ನೀನೊಬ್ಬ ಸ್ವಾಮಿಯಾಗಿದ್ದರೆ, ನಿನಗೆ ಆಶ್ರಯ ಏಕೆ ಬೇಕು?' ಎಂದು ಕೇಳುತ್ತಾರೆ. ಅಷ್ಟರಲ್ಲಿ ಒಳಗಿನಿಂದ ಬಂದ ಒಂದು ಹೆಂಗಸು ತಾನು ಜಾಗಕೊಡುವುದಾಗಿ ತಿಳಿಸಿ ಕರೆದುಕೊಂಡು ಹೋಗಿ ಒಂದು ಚಿಕ್ಕ ಗುಡಿಸಲಿಗೆ ಬಿಡುತ್ತಾರೆ. ಬೆಳಕೇ ಇಲ್ಲದ ಗುಡಿಸಲಿನಲ್ಲಿ ಬಾಗಿಲ ಸಂದಿಯಿಂದ ಬರುತ್ತಿದ್ದ ಮಬ್ಬು ಬೆಳಕಿನಲ್ಲಿ ಗಮನಿಸಿದಾಗ, ಒಂದು ನಾಗರಹಾವು ಅವರ ಮುಂದೇ ತೆವಳಿಕೊಂಡು ಬರುತ್ತಿರುತ್ತದೆ. ಇನ್ನೊಂದು ಪಕ್ಕದಲ್ಲಿದ್ದು ಕೋಣೆಯ ತುಂಬಾ ಹಲವಾರು ಹಾವುಗಳಿರುವುದು ಕಂಡುಬರುತ್ತದೆ! ತಾವು ಒಂದು ಹಾವುಗಳ ದೇವಾಲಯಕ್ಕೆ ಬಂದಿರುವುದಾಗಿ ಅವರಿಗೆ ತಿಳಿಯುತ್ತದೆ. ತನ್ನನ್ನು ಆಕೆಯು ನಿಜವಾದ ಸ್ವಾಮಿ ಹೌದೋ ಅಲ್ಲವೋ ಎಂದು ತಿಳಿಯಬಯಸಿರಬಹುದು ಎಂದುಕೊಳ್ಳುತ್ತಾರಾದರೂ ಅಪಾಯಕಾರೀ ಸನ್ನಿವೇಶದಿಂದ ವಿಪರೀತ ಭಯವಾಗುತ್ತದೆ. ತಾನೇನಾದರೂ ಇಲ್ಲಿಂದ ಓಡಿಹೋದರೆ ಆಕೆಯು ಇನ್ನು ಮುಂದೆ ಯಾವ ಸ್ವಾಮಿಗೂ ಭಿಕ್ಷೆ ಹಾಕುವುದಿಲ್ಲವೆಂದು ಯೋಚಿಸಿ ಒಂದು ವೇಳೆ ತಾನು ಸತ್ತರೂ ಕೊನೇಪಕ್ಷ ವೈರಾಗ್ಯದ ತತ್ವಗಳಿಗೆ ಕುಂದು ಉಂಟಾಗುವುದಿಲ್ಲವೆಂದು ತೀರ್ಮಾನಿಸಿಕೊಳ್ಳುತ್ತಾರೆ. ತಮ್ಮ ಗುರುಗಳು ಹೇಳಿದ್ದ ಮಾತುಗಳನ್ನು ನೆನಪುಮಾಡಿಕೊಂಡು ಇಡೀ ರಾತ್ರಿ ನಿಶ್ಚಲವಾಗಿ ನೋಡುತ್ತಾ ಕುಳಿತುಕೊಳ್ಳುತ್ತಾರೆ. ?ಧ್ಯಾನ ಮಾತ್ರ ಸಾಧ್ಯವಾಗಲಿಲ್ಲ. ಹಾವಿನ ಧ್ಯಾನ ಮಾಡಿದೆ ಅಷ್ಟೆ!' ಎಂದಿದ್ದಾರೆ.
ಎರಡು ಅನುಭವಗಳ ನಂತರವೂ ಅವರಿಗೆ ಹಾವಿನಭಯವು ಹಾಗೆಯೇ ಮುಂದುವರೆಯುತ್ತದೆ. ಅದರಿಂದ ಮುಕ್ತರಾಗಲು ಅವರ ಪ್ರಯತ್ನವು ಹೆಚ್ಚಾದಂತೆ ಭೀತಿಯೂ ಬಲಗೊಳ್ಳುತ್ತದೆ. ಅದು ಎಷ್ಟೊಂದು ಬಲಯುತವಾಗಿತ್ತೆಂದರೆ ಯಾವುದೇ ಶಬ್ದ ಆದ ತಕ್ಷಣ ಹಾವುಗಳ ಯೋಚನೆ ಮನಸ್ಸಿನಲ್ಲಿ ಮೂಡುವಂತಾಗುತ್ತದೆ. ಧ್ಯಾನಕ್ಕೆ ಕುಳಿತಾಗ ಆಗಾಗ ಕಣ್ಣುಬಿಟ್ಟು ಸುತ್ತಮುತ್ತ ನೋಡುವುದು, ಎಲ್ಲಿಗೆ ಹೋದರೂ ಹಾವಿದೆಯಾ ಎಂದು ಹುಡುಕುವುದನ್ನು ಪ್ರಾರಂಭಿಸುತ್ತಾರೆ. ಕೊನೆಗೆ, 'ನೀನು ಭೀತಿಯನ್ನು ಕಿತ್ತು ಒಗೆದುಬಿಡು, ಪ್ರಯತ್ನದಲ್ಲಿ ನೀನು ಸತ್ತರೂ ಸರಿ. ಇದು ನಿನ್ನ ಬೆಳವಣಿಗೆಗೆ ಒಳ್ಳೆಯದಲ್ಲ. ನಿನ್ನನ್ನು ಪ್ರೀತಿಸುವ, ಗೌರವಿಸುವ ಹಾಗೂ ಅವಲಂಬಿಸುವ ಮಂದಿಗೆ ಹೇಗೆ ಮಾರ್ಗದರ್ಶನ ನೀಡಬಲ್ಲೆ? ನೀನೇ ಭೀತನಾಗಿದ್ದೀಯೆ, ಹಾಗಿದ್ದರೂ ಜನರಿಗೆ ಮಾರ್ಗದರ್ಶನ ನೀಡುತ್ತಿದ್ದೀಯೆ-ಆಶಾಢಭೂತಿ' ಎಂದು ಮನಸ್ಸಿನಲ್ಲೇ ಹೇಳಿಕೊಂಡು ಗುರುಗಳ ಬಳಿಗೆ ಹೋಗುತ್ತಾರೆ. ಅವರ ಸಮಸ್ಯೆಯನ್ನು ಅರಿತಿದ್ದ ಗುರುಗಳು, ' ಭಯವನ್ನು ನನಗೆ ತಿಳಿಸದೆ ಮುಚ್ಚಿಟ್ಟಿದ್ದಾದರೂ ಏಕೆ?'ಎಂದು ಕೇಳಿ ತಮ್ಮೊಂದಿಗೆ ಕಾಡಿಗೆ ಕರೆದುಕೊಂಡು ಹೋಗಿ, ಬೆಳಗಿನ ಮೂರೂವರೆ ಗಂಟೆಗೆ ಎದ್ದುಹೋಗಿ ಪತ್ರೆ-ಪುಷ್ಪಗಳನ್ನು ತರಲು ಹೇಳುತ್ತಾರೆ. ಮಾರನೇ ಬೆಳಿಗ್ಗೆ ಪತ್ರೆ-ಪುಷ್ಪಗಳನ್ನು ಕಿತ್ತು ತರುವಾಗ ಅದರೊಳಗೆ ಒಂದು ನಾಗರಹಾವು ಇದ್ದದ್ದು ಗೊತ್ತಾಗುತ್ತದೆ! ತಾನು ಕೈಯಲ್ಲಿ ಹಿಡಿದಿರೋದು ಸಾವನ್ನು ಎಂದು ಮನಸ್ಸು ಹೇಳಿದಾಗ ಕೈಗಳು ನಡುಗಿ, ಹೆದರಿ ಕಂಗಾಲಾಗಿ ಕುಸಿದು ಬೀಳುವುದರಲ್ಲಿದ್ದ ಅವರ ಬಳಿ ಗುರುಗಳು ಬಂದು, 'ಅದು ನಿನ್ನನ್ನು ಕಚ್ಚುವುದಿಲ್ಲ,? ಎನ್ನುತ್ತಾರೆ. 'ನೀನು ಹಾವನ್ನು ಏಕೆ ಪ್ರೀತಿಸೋದಿಲ್ಲ?' ಎಂದು ಕೇಳುತ್ತಾರೆ.
'ಭಯದ ಪ್ರಭಾವದಲ್ಲಿದ್ದಾಗ ಯಾವುದನ್ನಾದರೂ ಪ್ರೀತಿಸೋದು ಹೇಗೆ?'
'ನೋಡು ಅದು ಎಷ್ಟೊಂದು ಸುಂದರ ಪ್ರಾಣಿ. ಎಲ್ಲಾ ಕಡೆ ಹರಿದಾಡುತ್ತೆ. ಆದರೂ ಎಷ್ಟೊಂದು ಶುದ್ಧವಾಗಿ, ಅಂದವಾಗಿ ಇದೆ. ನೀನು ಪ್ರತಿದಿನ ಸ್ನಾನ ಮಾಡಿದರೂ ಅಷ್ಟು ಚೊಕ್ಕಟವಾಗಿ ಇರಲಾರೆ. ಪ್ರಪಂಚದಲ್ಲಿ ಹಾವು ಅತ್ಯಂತ ಚೊಕ್ಕಟವಾದ ಪ್ರಾಣಿ.'
'ಇದು ಶುದ್ಧವಾಗಿದೆ. ಆದರೆ ಅಪಾಯಕಾರಿ.'
'ಮನುಷ್ಯ ಅತಿಕೊಳಕ ಹಾಗೂ ಹಾವಿಗಿಂತಲೂ ಅಪಾಯಕಾರೀ ವಿಷಜಂತು. ಆತ ಬೇರೆಯವರನ್ನು ಕೊಲ್ಲಬಲ್ಲ. ಆತ ಪ್ರತಿದಿನ ಕೋಪ ಹಾಗೂ ಇನ್ನಿತರ ಭಾವನೆಗಳ ಮೂಲಕ ವಿಷವನ್ನು ತನ್ನ ಆಸುಪಾಸಿನವರ ಮೇಲೆ ಕಾರುತ್ತಾನೆ. ಹಾವು ಯಾವತ್ತೂ ಹಾಗೆ ಮಾಡುವುದಿಲ್ಲ. ಹಾವು ಸ್ವರಕ್ಷಣೆಯ ಸಂದರ್ಭಗಳಲ್ಲಿ ಮಾತ್ರ ಕಚ್ಚುತ್ತದೆ. ನೀನು ಗಾಢ ನಿದ್ರೆಯಲ್ಲಿದ್ದಾಗ ನಿನ್ನ ಬೆರಳು ಕಣ್ಣುಗಳನ್ನು ತಿವಿಯುತ್ತದೇನು? ನಿನ್ನ ಹಲ್ಲುಗಳು ನಿನ್ನ ನಾಲಿಗೆಯನ್ನು ಕಚ್ಚುತ್ತವೇನು? ಎಲ್ಲಾ ಭಾಗಗಳೂ ಒಂದು ದೇಹಕ್ಕೆ ಸಂಬಂಧಪಟ್ಟವು ಎಂಬ ಒಟ್ಟಾರೆ ಗ್ರಹಿಕೆ ಇರುತ್ತದೆ. ಎಲ್ಲ ಜೀವಜಾತಗಳೂ ಒಂದೇ ಎಂಬಂಥಾ ಗ್ರಹಿಕೆ ಮೂಡಿದ ದಿನ, ಯಾವ ಜೀವಿಗೂ ನಾವು ಹೆದರುವುದಿಲ್ಲ.'
ಹಾವನ್ನು ಹಿಡಿದೇ ನಿಂತಿದ್ದ ಸ್ವಾಮಿ ರಾಮರಿಗೆ ಗುರುಗಳ ಮಾತನ್ನು ಕೇಳುತ್ತಾ ಭೀತಿಯ ಭಾವನೆ ಇಳಿಮುಖವಾಗುತ್ತಾ ಬರುತ್ತದೆ. 'ನಾನು ಹಾವುಗಳನ್ನು ಸಾಯಿಸದೇ ಹೋದರೆ, ಹಾವು ನನ್ನನ್ನು ಏಕೆ ಸಾಯಿಸುತ್ತದೆ? ಹಾವುಗಳು ಕಾರಣವಿಲ್ಲದೇ ಯಾರನ್ನೂ ಕಚ್ಚುವುದಿಲ್ಲ. ನನ್ನನ್ನು ಏಕೆ ಕಚ್ಚುತ್ತವೆ? ನಾನ್ಯಾರು? ಇತ್ಯಾದಿಯಾಗಿ ಯೋಚಿಸತೊಡಗಿದೆ. ನನ್ನ ಮನಸ್ಸು ಕ್ರಮೇಣ ಸಹಜ ಸ್ಥಿತಿಗೆ ಬರತೊಡಗಿತು. ಅನುಭವದ ನಂತರ ಹಾವುಗಳ ಭೀತಿ ಮತ್ತೆ ನನ್ನನ್ನು ಕಾಡಲಿಲ್ಲ.' ಎಂದು ಹೇಳುತ್ತಾರೆ.

***********************************************

11 comments:

  1. ನಿಮ್ಮ ಅನುಭವವನ್ನು ಓದಿ, ರೋಮಾಂಚನವಾಯಿತು!

    ReplyDelete
  2. ನಿಜ ಹಾವು ನಿಜಕ್ಕೊ ಬೇಕೆಂದು ಯಾರಿಗೂ ತೊಂದರೆ ಮಾಡುವುದಿಲ್ಲ... ಮನುಷ್ಯನಷ್ಟು ವಿಷಜಂತುವಲ್ಲ ಆದರೂ ನಾವು ಹೆದರುತ್ತೇವೆ.. ಸ್ವಾಮಿ ರಾಮರ ಬಗೆಗಿನ ಹಲವು ವಿವರ ಚೆನ್ನಾಗಿ ನೀಡಿದ್ದೀರಿ..

    ReplyDelete
  3. ನಮ್ಮ ತೋಟದಲ್ಲಿ ತುಂಬ ಬಾರಿ ಹಾವಿಗೆ ಮುಖಾ ಮುಖಿಯಾಗಿದ್ದೇನೆ...ಯಾರು ಎಷ್ಟೇ ಧೈರ್ಯ ಹೇಳಿದರು ಹಾವನ್ನು ಕಂಡರೆ ಭಯ ಇದ್ದೆ ಇದೆ...
    ಈ ಲೇಖನವನ್ನು ಓದಿದ ಮೇಲೆ ಸ್ವಲ್ಪ ಕಡಿಮೆ ಆದರೂ ಉಗ್ರ ರೂಪ ಹಾವನ್ನು ಕಂಡಾಗ ಕಿರುಚದೆ ಇರಲು ಸಾಧ್ಯವಿಲ್ಲ...

    ReplyDelete
  4. ಪ್ರಭಾ ಅವರೇ,
    ಉರಗ ಭಯ ಬಹುತೇಕ ಜನರಲ್ಲಿ ಇದ್ದೇ ಇದೆ ಅನಿಸುತ್ತೆ.
    ಬಹುಷಃ ಹಾವುಗಳ ಬಗೆಗಿನ ಅನೇಕ ಕಲ್ಪನೆಗಳು ಇದಕ್ಕೆ ಕಾರಣವಿರಬಹುದು

    ReplyDelete
  5. prabhamani yavare
    nimma anisike
    aksharashaha satya.adakke pranigalodanaatadalliruvavaru,
    hecchu nemmadiyinda jivisuttaare.abhinandanegalu.

    ReplyDelete
  6. ಹಾವು ಕಡಿಯಲು ಜನ್ಮಾಂತರದ ಕಾರಣಗಳೂ ಇರುತ್ತವೆ ಎನ್ನುತ್ತಾರೆ, ಹಾವುಗಳು ಬರಿದೇ ಹಾಗೆಲ್ಲಾ ಕಚ್ಚುವುದಿಲ್ಲ, ಸ್ವಾಮಿ ರಾಮ ಕರವೀರ ಮಠದಿಂದ ಹೊರನಡೆದ ಬಳಿಕ ಹಿಮಾಲಯವನ್ನು ಆಶ್ರಯಿಸಿದಾಗ ಇಂತಹ ಹಲವಾರು ಘಟನೆಗಳನ್ನು ಬರೆದಿದ್ದಾರೆ, ಲೇಖನ ವಿನಾಕಾರಣ ಹಾವಿನ ಭೀತಿ ಸರಿಯಲ್ಲ ಎಂಬ ಬಗ್ಗೆ ತಿಳಿಸಿಕೊಡುತ್ತದೆ.

    ReplyDelete
  7. ನಾನೂ ಕೂಡಾ ಹಳ್ಳಿಯಲ್ಲಿ ಹುಟ್ಟಿ ಬೆಳೆದವಳು..ಚಿಕ್ಕವಳಿರುವಾಗ ತೋಟ ಹಾಗೂ ಹಿತ್ತಲಿನಲ್ಲಿ ಅನೇಕ ಬಾರಿ ತೀರಾ ಹತ್ತಿರದಿ೦ದ ಹಾವನ್ನು ನೋಡಿದ್ದೇನೆ. ಹಾವು ದೂರದಲ್ಲಿ ಕ೦ಡರೆ ಹೆದರಿಕೆ ಇಲ್ಲ.ಹತ್ತಿರದಲ್ಲೇನಾದರೂ ಕ೦ಡರೆ ದೂರ ಓಡುವುದು ಮಾತ್ರಾ ನಿಜ..:)

    ReplyDelete
  8. This comment has been removed by the author.

    ReplyDelete
  9. @ ಸುನಾಥ್ ರವರೆ,
    @ ಸುಗುಣ ರವರೆ,
    @ಗಿರೀಶ್.ಎಸ್ ರವರೆ,
    @ಸಾನ್ವಿ ಯ ತ೦ದೆಯವರೆ,
    @ ಕಲಾವತಿಯವರೇ,
    @ ವಿ.ಆರ್.ಭಟ್ ರವರೆ,
    @ಮನಮುಕ್ತಾರವರೆ,
    ನಮ್ಮ ಹಳ್ಳಿ ಮನೆಯಲ್ಲಿ ಹಾವಿನ ಬಗೆಗಿನ ಇ೦ಥಾ ಘಟನೆಗಳು ಅನೇಕವಿವೆ. 'ಹಾವನ್ನು ಕ೦ಡರೆ ಹರ ನಡುಗಿದ' ಎನ್ನುವ ಉಕ್ತಿ ಹಾವಿನ ಬಗ್ಗೆ ನಮ್ಮಲ್ಲಿ ಇರುವ ಭಯದ ತೀವ್ರತೆಯನ್ನು ತೋರಿಸುತ್ತದೇನೋ ಎನಿಸುತ್ತದೆ. ಸ್ವಾಮಿ ರಾಮರವರ ಅನುಭವಗಳು ನಿಜಕ್ಕೂ ಮೈ ನವಿರೇಳಿಸುವ೦ತಿವೆ! ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಬರುತ್ತಿರಿ.

    ReplyDelete
  10. @ಸೀತಾರಾಮ. ಕೆ.ರವರೆ,
    ಲೇಖನವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete