Wednesday, September 21, 2011

ಮನದ ಅಂಗಳದಿ......... ೫೮. ಈ ದೇಹವೆಂಬ.........

ದೇಹಂ ಭದ್ರಾಣಿ ಪಶ್ಯಂತಿ' ಎನ್ನುವಒಂದು ಸಂಸ್ಕೃತದಉಕ್ತಿ ಇದೆ. ‘ನಮ್ಮದೇಹವನ್ನು ನಾವು ಸುಸ್ಥಿತಿಯಲ್ಲಿಇರಿಸಿಕೊಳ್ಳಬೇಕು' ಎಂದು ಮಾತು ಅರ್ಥೈಸುತ್ತದೆ. ‘ಶರೀರಮಾಧ್ಯಂ ಖಲು ಧರ್ಮಸಾಧನಂ' ಎನ್ನುವ ಮಾತಿನ ಆಶಯವೂ ನಮ್ಮ ಯಾವುದೇ ಕಾರ್ಯ ನಿರ್ವಹಣೆಗೂ, ಸಾಧನೆಗೂ ನಮ್ಮ ಈ ಶರೀರದ ಉತ್ತಮವಾದ ಅಸ್ಥಿತ್ವ ಬಹಳ ಪ್ರಮುಖವಾಗುತ್ತದೆ ಎಂದೇ ಇದೆ.

ಹುಟ್ಟಿದ ತಕ್ಷಣವೇ ಶಿಶುವಿನ ದೇಹವು ತನ್ನ ಸ್ವತಂತ್ರ ಕ್ರಿಯೆಗಳನ್ನು ಪ್ರಾರಂಭಿಸುತ್ತದೆ. ತಾಯಿಯು ಅದರ ಎಲ್ಲಾ ದೈನಂದಿನ ದೈಹಿಕ ಚಟುವಟಿಕೆಗಳೂ ಸಮರ್ಪಕವಾಗಿ ನಡೆಯುತ್ತಿದೆಯೇ ಎನ್ನುವುದನ್ನು ಗಮನಿಸುತ್ತಾ, ಬೇಕು-ಬೇಡಗಳನ್ನು ಪ್ರೀತಿಯಿಂದ ಪೂರೈಸುತ್ತಿರುತ್ತಾಳೆ. ಇಲ್ಲಿ ಆ ‘ಪ್ರೀತಿ'ಎನ್ನುವುದು ಮಗುವಿಗೆ ಎಲ್ಲಾ ರೀತಿಯ ಭದ್ರತೆಯನ್ನೂ ನೀಡಿ ಅದು ತನ್ನ ಅಸ್ಥಿತ್ವವನ್ನು ಆನಂದಿಸಲಾರಂಭಿಸುತ್ತದೆ. ಬೆಳೆದಂತೆ ಕ್ರಮೇಣ ತನ್ನನ್ನು ತಾನು ನಿರ್ವಹಿಸಿಕೊಳ್ಳುವ ಜವಾಬ್ಧಾರಿ ತಾಯಿಯ ಹಾಗೂ ಹಿರಿಯರ ಮಾರ್ಗದರ್ಶನದೊಂದಿಗೆ ವರ್ಗಾವಣೆಯಾಗಲಾರಂಭಿಸುತ್ತದೆ. ಒಂದು ಹಂತದಲ್ಲಿ ಸಂಪೂರ್ಣವಾಗಿ ತನ್ನನ್ನು ತಾನೇ ನಿಭಾಯಿಸಿಕೊಳ್ಳಬೇಕಾಗುತ್ತದೆ. ಅಲ್ಲಿಂದಲೇ ಸಮಸ್ಯೆಗಳೂ ಪ್ರಾರಂಭವಾಗುತ್ತವೆ!

ಈ ‘ದೇಹ' ಎನ್ನುವುದು ದೇಹ ಮಾತ್ರವಲ್ಲ. ಅದರ ಆರೋಗ್ಯದ ಸ್ಥಿತಿ ಮನಸ್ಸಿನ ಏರುಪೇರುಗಳೊಂದಿಗೆ ಮಿಳಿತವಾಗಿರುತ್ತದೆ. `A sound mind in a sound body’ ಎನ್ನುವ ಸೂಕ್ತಿಯೇ ತಿಳಿಸುವಂತೆ ಆರೋಗ್ಯಕರವಾದ ದೇಹದಲ್ಲಿ ಆರೋಗ್ಯಕರವಾದ ಮನಸ್ಸು ಇರುತ್ತದೆ. ಹಾಗೆಯೇ ಆರೋಗ್ಯಕರವಾದ ಮನಸ್ಸನ್ನು ಹೊಂದಿದ್ದರೆ ಮಾತ್ರ ಆರೋಗ್ಯಕರವಾದ ದೇಹವನ್ನು ಹೊಂದಲು ಸಾಧ್ಯವೆನಿಸುತ್ತದೆ! ‘ಆರೋಗ್ಯ' ಎನ್ನುವುದೇ ದೇಹ ಹಾಗೂ ಮನಸ್ಸು ಎರಡರ ಸುಸ್ಥಿತಿಯನ್ನೂ ಒಳಗೊಂಡಿರುತ್ತದೆ.

ದೂರದ ಊರಿನಿಂದ ಬಂಧುವೊಬ್ಬರು ಗೌರಿಹಬ್ಬಕ್ಕೆ ಮಾಡಿದ್ದ ತಿಂಡಿಗಳನ್ನು ತೆಗೆದುಕೊಂಢು ಬಂದಿದ್ದರು. ಅವರು ಬರುವಾಗಲೇ ಮಂಡಿನೋವಿನಿಂದ ಹಿಂಸೆಪಡುತ್ತಿದ್ದರು. ಈ ರೀತಿಯ ಅನೇಕ ಬಗೆಯ ನೋವುಗಳನ್ನು ಅನುಭವಿಸಿ ಪಳಗಿದ್ದ ನಾನು ಅದರ ಕಾರಣ ತಿಳಿದರೂ ಅವರಿಗೆ ಹೇಗೆ ಹೇಳಬೇಕೆಂದು ತಿಳಿಯದೇ ಗೊಂದಲಕ್ಕೆ ಒಳಗಾದೆ. ಮಾರನೇ ದಿನ ಇದೇ ಊರಿನಲ್ಲಿದ್ದ ಆತ್ಮೀಯರ ಮನೆಗೆ ಎಲ್ಲರೂ ಹೋಗಿದ್ದಾಗ ಅಲ್ಲಿ ಕಣ್ಣಿಗೆಬಿದ್ದ ‘ತರಂಗ'ದಲ್ಲಿನ ಒಂದು ಲೇಖನ ನನ್ನ ಎಲ್ಲಾ ಸಮಸ್ಯೆಗಳನ್ನೂ ಪರಿಹಾರ ಮಾಡಿತು!

‘ವಾತ ವ್ಯಾಧಿ (ನ್ಯೂರೋ ಸ್ಕೆಲಿಟಲ್ ಡಿಸಾರ್ಡರ್‍ಸ್)' ಎನ್ನುವ ಈ ಲೇಖನದಲ್ಲಿ ಹೀಗಿದೆ: ‘ಶರೀರವೆಂಬ ಈ ಮಿನಿಯೇಚರ್ ಬ್ರಹ್ಮಾಂಡದಲ್ಲಿ ಏನೇ ಕಾರ್ಯವಾಗಲೀ ವಾಯು(ವಾತ) ಬೇಕು. ಶರೀರವನ್ನು ಬ್ರಹ್ಮಾಂಡವೆಂದೇಕೆ ಹೇಳಿದೆ ಎಂದರೆ ಇಲ್ಲೂ ಒಬ್ಬ ಸೂರ್ಯನಿದ್ದಾನೆ(ಪಿತ್ತ), ಇಲ್ಲೊಬ್ಬ ಚಂದ್ರನಿದ್ದಾನೆ(ಕಫ)! ಸೃಷ್ಟಿ-ಸ್ಥಿತಿ-ಲಯ ಕಾರ್ಯ ಪ್ರತಿಯೊಂದು ಅಣುವಿನಲ್ಲಿ ಪ್ರತಿಕ್ಷಣ ಆಗುತ್ತಲೇ ಇರುತ್ತದೆ. ಈ ಎಲ್ಲಾ ಕಾರ್ಯಗಳಿಗೆ ವಾಯು ಬೇಕು. ಶರೀರದೊಳಗಿನ ಪ್ರತಿ ಸಂಚಲನಕ್ಕೂ ಕಾರಣೀಭೂತವಾದದ್ದು, ಶರೀರವೆಂಬ ಯಂತ್ರದ ಎಲ್ಲಾ ತಂತ್ರ ಅಂದರೆ, ಕಾರ್ಯಗಳನ್ನು ಆಧರಿಸುವಂಥದ್ದು ಈ ವಾಯು. ......‘ವಾಯುವೇ ಶರೀರಕ್ಕೆ ಬಲ ಕೊಡುವಂಥದ್ದು, ಶರೀರವನ್ನು ಆಧರಿಸುವಂಥದ್ದು....'ಎಂದು ಚರಕ ಋಷಿಯು ವಾಯುವಿನ ಶ್ರೇಷ್ಟತೆಯನ್ನು ಹೇಳುತ್ತಾನೆ.......

ಶರೀರದಲ್ಲಿರುವ ದೋಷಗಳ ಪ್ರಾಧಾನ್ಯತೆಗನುಸಾರವಾಗಿ ಒಬ್ಬ ವ್ಯಕ್ತಿಯ ‘ಪ್ರಕೃತಿ'ಯನ್ನು ನಿರ್ಧರಿಸುತ್ತೇವೆ. ‘ಪ್ರಕೃತಿ'ಎನ್ನುವುದು ಪ್ರತಿ ವ್ಯಕ್ತಿಯ ಬೆರಳಚ್ಚು ಇದ್ದಹಾಗೆ. .......ಪ್ರತಿವ್ಯಕ್ತಿಯ ಪ್ರತ್ಯೇಕತೆಯನ್ನು ಸೂಚಿಸುತ್ತದೆ. ವಾತ-ಪಿತ್ತ-ಕಫ ಪ್ರಕೃತಿಗನುಸಾರವಾಗಿ ಪ್ರತಿಯೊಬ್ಬರೂ ತಮ್ಮ ಆಹಾರಕ್ರಮ, ದಿನನಿತ್ಯದ ಚಟುವಟಿಕೆಗಳನ್ನು ರೂಪಿಸಿಕೊಂಡರೆ ರೋಗ ಬಾರದು!.......‘.ವಾತ ವ್ಯಾಧಿ'ಎಂದರೆ ಪ್ರಕುಪಿತ ವಾಯು ಉಳಿದ ಧಾತುಗಳಲ್ಲಿ ಹರಡಿ ಶರೀರದ ಒಂದು ಭಾಗದಲ್ಲಿ ಅಥವಾ ಸರ್ವದೇಹದಲ್ಲಿ ನೋವನ್ನುಂಟುಮಾಡುತ್ತದೆ......?ಎಂದು ವಿವಿಧ ಉದಾಹರಣೆಗಳೊಂದಿಗೆ ಅದರ ಸಾಮಾನ್ಯ ಕಾರಣಗಳು, ಆಹಾರ ಪಥ್ಯ, ಚಿಕಿತ್ಸೆಗಳನ್ನು ವಿವರಿಸಿದ್ದಾರೆ. ಸುಮಾರು ೮೦ ವಿಧದ ವಾತ ವಿಕಾರಗಳನ್ನು ಪಟ್ಟಿ ಮಾಡಿದ್ದಾರೆ!

‘ವಾತ' ಎನ್ನುವ ಪದವನ್ನು ಉಚ್ಛರಿಸಲೇ ಅವಮಾನವೆಂದುಕೊಳ್ಳುವ ನಮಗೆ ಅದಕ್ಕೆ ಸಂಬಂಧಿಸಿದಂತೆ ಎಷ್ಟೆಲ್ಲಾ ದೈಹಿಕ ತೊಂದರೆಗಳು ಉಂಟಾಗುತ್ತವೆ ಎನ್ನುವುದು ತಿಳಿಯುವಾಗ ಅಚ್ಛರಿಯೆನಿಸುತ್ತದೆ! ಎದೆನೋವಿನಿಂದ ಒಂದು ವರ್ಷ ಹಿಂಸೆಪಟ್ಟು, ಅನೇಕ ರೀತಿಯ ಔಷದೋಪಚಾರಗಳಾದ ನಂತರ ಹೃದ್ರೋಗ ಕೇಂದ್ರದಲ್ಲಿ ಎಲ್ಲ ರೀತಿಯ ಪರೀಕ್ಷೆಗಳನ್ನೂ ಮಾಡಿಸಿದಾಗ ಅಲ್ಲಿ ಯಾವುದೇ ಹೃದಯಕ್ಕೆ ಸಂಬಂಧಿಸಿದ ತೊಂದರೆಯಿಲ್ಲ ಎಂದು ತಿಳಿಸಿ, ಮನಃಶಾಸ್ತ್ರಜ್ಞರನ್ನು ಕಾಣಲು ಬರೆದು ಕೊಟ್ಟಾಗ, ಕತ್ತಿನ ತೀವ್ರ ನೋವಿನಿಂದ ಹಾಗೂ ಕತ್ತಿನಲ್ಲಿ ಅನೇಕ ಗಂಟುಗಳುಂಟಾದಾಗ ಸಿಟಿಸ್ಕ್ಯಾನ್‌ನಂಥಾ ಅತ್ಯಾಧುನಿಕ ಪರೀಕ್ಷೆಗಳನ್ನೂ ಮಾಡಿಸಿ ಸರಿಯಾದ ಕಾರಣ ತಿಳಿಯದೇ ನಿರಾಶಳಾದಾಗ,.......ಈ ಎಲ್ಲಾ ಸಂದರ್ಭಗಳಲ್ಲೂ ಮಾನಸಿಕ ಒತ್ತಡವು ದೈಹಿಕ ವ್ಯವಸ್ಥೆಯ ಮೇಲೆ ಉಂಟುಮಾಡಿದ ಏರುಪೇರಿನಿಂದಾದ ತೊಂದರೆಗಳು ಇವು ಎಂದು ತಿಳಿಯಲು ಬಹಳ ದಿನಗಳೇ ಬೇಕಾದವು!

ನೆಲ್ಲೀಕೆರೆ ವಿಜಯಕುಮಾರ್ ಅವರ ನಿರೂಪಣೆಯ (ಮೂಲ: ಗುರೂಜಿ ಶ್ರೀ ಋಷಿ ಪ್ರಭಾಕರ್) ‘ಒಳ್ಳೆಯವರಾಗುವ ಕೆಟ್ಟ ಚಟವನ್ನು ಬಿಡಿ!'ಯಲ್ಲಿ ಹೀಗೆ ತಿಳಿಸುತ್ತಾರೆ: ‘ಮಾನವ ದೇಹಕ್ಕೆ ಮೂರು ಉನ್ನತ ಔಷಧಗಳೆಂದರೆ- ಪ್ರಾಣಾಯಾಮ, ಧ್ಯಾನ, ಹಾಗೂ ಪ್ರಕೃತ್ತಿದತ್ತ ಆಹಾರ. ನೀವು ಕಾಯಿಲೆ ಬಿದ್ದರೆ ಪ್ರಾಣಾಯಾಮವಿಲ್ಲ, ಧ್ಯಾನವಿಲ್ಲ ಹಾಗೂ ಪ್ರಕೃತ್ತಿದತ್ತ ಆಹಾರ ಸೇವಿಸುತ್ತಿಲ್ಲ ಎಂದು ತಿಳಿದುಕೊಳ್ಳಿ..... ಧ್ಯಾನವು ದೇಹದಿಂದ ಎಲ್ಲಾ ಮಾಲಿನ್ಯವನ್ನು ಹೊರದೂಡಿದರೆ ಪ್ರಾಣಾಯಾಮವು ದೇಹಕ್ಕೆ ಚೈತನ್ಯವನ್ನು ಕೊಟ್ಟು ಹೊಸ ಶಕ್ತಿಯನ್ನು ಉತ್ಪಾದಿಸುತ್ತದೆ. ನಾವು ಸಾಮಾನ್ಯವಾಗಿ ನಮ್ಮ ಶ್ವಾಸಕೋಶದ ಸಾಮರ್ಥ್ಯದಲ್ಲಿಶೇ.೨೦ರಷ್ಟನ್ನು ಮಾತ್ರವೇ ಉಪಯೋಗಿಸುತ್ತೇವೆ. ಆದರೆ ಪ್ರಾಣಾಯಾಮದಿಂದ ಶ್ವಾಸಕೋಶಗಳು ಇನ್ನೂ ಅಪಾರ ಪ್ರಮಾಣದಲ್ಲಿ ಬಳಕೆಯಾಗಲ್ಪಟ್ಟು ಮಾನವನ ಜೀವಿತಾವಧಿ ಅಧಿಕಗೊಳ್ಳುತ್ತಾ ಹೋಗುತ್ತದೆ. ಯೋಗಾಸನಗಳ ಅಭ್ಯಾಸವು ದೈಹಿಕ ಸಾಮರ್ಥ್ಯವನ್ನು ವೃದ್ಧಿಗೊಳಿಸಿದರೆ ಬದಲಾಗುವ ಆಹಾರ ಸೇವನೆ ಪದ್ಧತಿಯು ಆರೋಗ್ಯ, ಆನಂದ, ಶಾಂತಿ ಹಾಗೂ ಸಮೃದ್ಧಿಯ ಚಕ್ರವನ್ನು ಪೂರ್ಣಗೊಳಿಸುತ್ತದೆ.......'

ಪಕೃತಿಯ ಅನನ್ಯ ಕೊಡುಗೆಯಾದ ಈ ದೇಹವನ್ನು ಸದೃಢವಾಗಿ ಹಾಗೂ ಸುಸ್ಥಿತಿಯಲ್ಲಿ ಇರಿಸಿಕೊಂಡು, ‘ದೇಹದಾನ'ವನ್ನು ಮಾಡುವ ಮೂಲಕ ಸದುಪಯೋಗಪಡಿಸಿಕೊಳ್ಳುವ ಆನ೦ದದಲ್ಲಿ ನಮ್ಮ ಇರುವನ್ನು ಸಾರ್ಥಕಗೊಳಿಸಿಕೊಳ್ಳೋಣ.


12 comments:

 1. ಮೇಡಂ;ನಿಮ್ಮ ಕಂಪ್ಯೂಟರ್ ನಲ್ಲಿ ಏನೋ ತೊಂದರೆ ಇದೆ.ಕನ್ನಡ ಲಿಪಿ ಮೂಡಿಬಂದಿಲ್ಲ.ಬ್ಲಾಗಿಗೆ ಬನ್ನಿ.ನಮಸ್ಕಾರ.

  ReplyDelete
 2. Madam, looks like there is some problem withthe fonts. Unable to read this post.

  ReplyDelete
 3. ಮೇಡಂ,

  ಇದು ಒಂದು ಉತ್ತಮ ಬರಹವಾಗಿದೆ. ದೇಹವನ್ನು ಯಾವ ರೀತಿಯಲ್ಲಿ ಪೋಷಿಸಿ, ಸದುಪಯೋಗಪಡಿಸಿಕೊಳ್ಳಬೇಕೆಂಬುದನ್ನು ಸರಳವಾಗಿ ತಿಳಿಸಿಕೊಟ್ಟಿದ್ದೀರಿ. ಆದರೆ, ಇಂದಿನ ಆಧುನಿಕತೆಯಲ್ಲಿ(??) ದೇಹಾರೋಗ್ಯವನ್ನು ಅವಗಣನೆಮಾಡಿ, ನಂತರ ಅದರ ಪೋಷಣೆಗೆ ಅಥವಾ ಆರೋಗ್ಯಕ್ಕೆಂದು ಔಷಧಕ್ಕೆ ಮೊರೆ ಹೋಗುವವರೇ ಹೆಚ್ಚಾಗುತ್ತಿದ್ದಾರೆ. ನಮ್ಮ ಪ್ರಾಚೀನ ಋಷಿಮುನಿಗಳು ದೇಹಾರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆಂದು ತಿಳಿಸಿಕೊಟ್ಟಿದ್ದಾರೆ. ಅದನ್ನು ಅರಿತು, ಯೋಗ, ಧ್ಯಾನ ಇವನ್ನೆಲ್ಲ ಅಭ್ಯಸಿಸಿದರೆ, ನಿಜಕ್ಕೂ ಶಾಂತಿ, ಸಮಾಧಾನಚಿತ್ತ, ಚೈತನ್ಯ ಇವೆಲ್ಲ ಖಂಡಿತಾ ದೊರಕುತ್ತದೆ. ಎಷ್ಟು ಹಣವಿದ್ದರೇನು? ಆರೋಗ್ಯವೊಂದಿಲ್ಲದಿರೆ ಎಲ್ಲವೂ ವ್ಯರ್ಥವೇ ಅಲ್ಲವೇ?

  ಧನ್ಯವಾದಗಳು.

  ReplyDelete
 4. Some problem with font i think..... Can't read this article....

  ReplyDelete
 5. ಗಂಭೀರ ಚಿಂತನೆಗೆ ತೊಡಗಿಸುವ ಲೇಖನ. ಧನ್ಯವಾದಗಳು.

  ReplyDelete
 6. @ಡಾ. ಕೃಷ್ಣ ಮೂರ್ತಿಯವರೆ,
  @ಗಿರೀಶ್.ಎಸ್ ರವರೆ,
  @ದೀಪ್ ರವರೆ,
  ನನ್ನ ಬ್ಲಾಗ್ ಗೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು. ಏನೋ ತೊಂದರೆಯಿ೦ದ ಹೀಗೆ ಸಮಸ್ಯೆಯಾಗಿತ್ತು. ಪುನಃ ಸರಿಪಡಿಸಿ ಹಾಕಿದ್ದೇನೆ. ದಯಮಾಡಿ ಓದಿ ಪ್ರತಿಕ್ರಿಯಿಸಿ.

  ReplyDelete
 7. @ಚಂದ್ರಶೇಖರರವರೆ,
  ನಿಮ್ಮ ಸುಧೀರ್ಘ ಅನುಭವ ಪೂರ್ಣ, ವಾಸ್ತವದ ಪ್ರಜ್ಞೆಯುಳ್ಳ ಪ್ರತಿಕ್ರಿಯೆಯೊ೦ದಿಗೆ
  ನನ್ನ ಲೇಖನವನ್ನು ಇಷ್ಟಪಟ್ಟು, ಮೆಚ್ಚುಗೆಯನ್ನು ತಿಳಿಸಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

  ReplyDelete
 8. @ ಸುನಾಥ್ ರವರೆ,
  ನನ್ನ ಲೇಖನಕ್ಕೆ ಮೆಚ್ಚುಗೆಯನ್ನು ತಿಳಿಸಿ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್. ಬರುತ್ತಿರಿ.

  ReplyDelete
 9. ಕೆಲವು ಸಣ್ಣ ಪುಟ್ಟ ನೋವುಗಳನ್ನು ,ನಾವು ಮಾನಸಿಕವಾಗಿ ಯೋಚನೆ ಮಾಡುವುದನ್ನು ಕಡಿಮೆ ಮಾಡುವುದರಿಂದ ಅಂತ ನೋವುಗಳನ್ನು ನಿವಾರಿಸಿಕೊಳ್ಳಬಹುದು ಎಂಬುದು ನನಗೆ ಎಷ್ಟೋ ಬಾರಿ ಆಗಿರುವ ಅನುಭವ.... ಹೀಗೆ ನಮ್ಮ ದೈಹಿಕ ವ್ಯವಸ್ಥೆ ಮತ್ತು ಮಾನಸಿಕ ಒತ್ತಡ ಎರಡರ ನಡುವೆ ಒಂದಕ್ಕೊಂದು ನಂಟಿದೆ...

  ReplyDelete
 10. ಅಮೂಲ್ಯವಾದ ಮಾಹಿತಿ , ಧನ್ಯವಾದಗಳು

  ReplyDelete