Sunday, September 25, 2011

ಮನದ ಅಂಗಳದಿ.........೫೯. ಖಾಲಿ ಹಾಳೆ

ಸಾಮಾನ್ಯವಾಗಿ ಮಕ್ಕಳ ಮನಸ್ಸನ್ನು ‘ಖಾಲಿ ಹಾಳೆ'ಗೆ ಹೋಲಿಸುತ್ತಾರೆ. ಬಹುಷಃ ಮಕ್ಕಳ ಮನಸ್ಸು ನಿಷ್ಕಲ್ಮಶವಾಗಿದ್ದು, ಏನನ್ನಾದರೂ ಕಲಿಯಲು ಸಮರ್ಥರಾಗಿರುತ್ತಾರೆ ಎಂಬ ಕಾರಣಕ್ಕಾಗಿ ಹಾಗೆ ಹೇಳಿರಲೂಬಹುದು. ‘ಖಾಲಿ'ಯಾಗಿರುವುದು ಎಂದರೆ ಮುಂದೆ ಭರ್ತಿಯಾಗಲು ಸಿದ್ಧವಾಗಿರುವುದು ಎಂದು ತಿಳಿಯಬಹುದೇನೋ! ಖಾಲಿಯಾಗಿರುವುದು ಖಾಲಿಯಾಗೇ ಉಳಿದುಬಿಟ್ಟರೆ ನಿಷ್ಪ್ರಯೋಜಕವೆನಿಸಿಬಿಡಲೂಬಹುದು ಎನ್ನುವ ಆಶಯದ ಒಂದು ‘ಹನಿ' ಹೀಗಿದೆ:
‘ಬರೆಯಲೆಂದೇ ಭದ್ರಪಡಿಸಿದ್ದೆ
ಈ ಬಿಳಿಹಾಳೆಯ
ಸಮಯ ಸಿಕ್ಕಾಗ,
ಆದರೀಗ ಸುಕ್ಕು
ನಿಷ್ಪ್ರಯೋಜಕ
ಕಾಲ ಕೂಡಿಬಂದಾಗ!'
ಆದರೆ ಖಾಲಿಯು ಭರ್ತಿಯಾಗುವಾಗ ಯಾವುದರಿಂದ ಆಗಬೇಕು? ಎನ್ನುವುದೂ ಮುಖ್ಯವಾಗುತ್ತದೆ. ಕೇವಲ ಭರ್ತಿಗೊಳಿಸಲೆಂದು ಮನಸ್ಸಿಗೆ ಬಂದದ್ದನ್ನೆಲ್ಲಾ ಗೀಜಿದರೆ ಆಗುತ್ತದೆಯೆ? ಎಂದು ನಾವು ಅಂದುಕೊಳ್ಳಬಹುದು. ಈ ನಿಟ್ಟಿನಲ್ಲಿ ಚಿಂತಿಸುವಂತೆ ಮಾಡುವ ಸುಷ್ಮಸಿಂಧು ಅವರ ವಿಶಿಷ್ಟ ಕನಸಿನ ಒಂದು ತುಣುಕು ಈ ರೀತಿ ಇದೆ:
'ಆತ ಉನ್ನತ ಧೇಯೋದ್ದೇಶ ಹೊಂದಿರುವವನು ತಾನು ಎಂದು ಭಾವಿಸಿದ್ದ ವ್ಯಕ್ತಿ. ಆದರೆ ಅವನಿಗೆ ದೊರಕಿದ್ದು ಒಂದು 'ಪುಸ್ತಕ' ಮತ್ತು 'ಲೇಖನಿ'. ಅವನಿಗೆ ಅದರಲ್ಲಿ ಏನನ್ನೂ ಬರೆಯುವ ಅವಕಾಶವಿತ್ತು. ನಿಯಮವೆಂದರೆ 'ದಿನವೂ ಒಂದು ಪುಟ ತೆರೆಯುವುದು, ಅಲ್ಲಿ ಬರೆದ ನಂತರ ಮುಂದಿನಪುಟ. ಆತನೇನಾದರೂ ಅಂದು ಏನೂ ಬರೆಯದೇ ಇದ್ದರೂ ಮರುದಿನ ನಂತರದ ಪುಟ ತೆರೆದುಕೊಂಡುಬಿಡುವುದು. ಮತ್ತೆ ಹಿಂದೆ ಹೋಗುವುದು ಅಸಾದ್ಯ!' ಆತ ಪುಸ್ತಕ ಸಿಕ್ಕಿದ ತತ್ತಕ್ಷಣವೇ ಚಿಂತಿಸಲಾರಂಭಿಸಿದ. ಎಷ್ಟಾದರೂ ತನ್ನ ಪ್ರಕಾರ ಆತ ಮಹಾನ್ ವ್ಯಕ್ತಿ! ಏನೇನೋ ಬರೆಯುವುದು ಸಾಧ್ಯವಿಲ್ಲ. ಹಾಗಾಗಿ ಚಿಂತನೆ ಜಾರಿಯಲ್ಲಿತ್ತು! ಅಂದು ಪುಸ್ತಕದ ಕಡೆಯ 'ಪುಟ', ಅವನ 'ಮಸ್ತಕ'ದ ಪದಗಳಿಗಾಗಿ ಕಾದು ಕುಳಿತಿತ್ತು. ಏನೋ ಹೊಳೆದಂತಾಗಿ ಕಡೆಯ ಕ್ಷಣದ ತದನಂತರದ ಗಳಿಗೆಯಲ್ಲಿ ಲೇಖನಿಯನ್ನು ಪುಟದ ಮೇಲಿರಿಸಿದ. ಅದು ಇದ್ದಕ್ಕಿದ್ದಂತೆ ಮಾಯವಾಗಿ ಅಲ್ಲೊಬ್ಬ ಮನುಷ್ಯ ನಿಂತು ಹೀಗೆಂದ, 'ಎಷ್ಟೋ ಮಹತ್ಕಾರ್ಯಗಳು ಮಹಾನ್ ತಪ್ಪುಗಳ ನಂತರ ಘಟಿಸುತ್ತವೆ. ಸಣ್ಣ ತಪ್ಪುಗಳ ದೊಡ್ಡತನವನ್ನು, ಮಹತ್ವವನ್ನು ಅರಿತವನು ಮಾತ್ರ ಮಹತ್ಕಾರ್ಯಗಳನ್ನು ಸಾಧಿಸಲು ಸಾದ್ಯ..' ಅವನೊಡನೆ ಲೇಖನಿಯೂ ಕಣ್ಮರೆಯಾಯಿತು!' ಈ ಕಥೆಯೂ ಮುಗಿದಿತ್ತು.
ಜೀವನದ ಮಹತ್ವದ ಮೌಲ್ಯಗಳೇ ಸುಧೀರ್ಘ ಕಥಾರೂಪವಾದಂತಿರುವ ವಿಶಿಷ್ಟ ಕನಸುಗಳ ಕಥಾ ಸಂಕಲನ ‘ಪಯಣ ಸಾಗಿದಂತೆ........'ಯನ್ನು ತನ್ನ ಹದಿವಯಸ್ಸಿನಲ್ಲೇ ಪ್ರಕಟಿಸಿರುವ ಸುಷ್ಮಸಿಂಧು ಅವರ ಈ ಕನಸು ಚಿಂತನಯೋಗ್ಯವಾಗಿದೆ. ಏನೋ ಮಹತ್ತರವಾದದ್ದನ್ನೇ ಸಾಧಿಸಬೇಕು ಎಂದು ಅಪೇಕ್ಷಿಸುವ ನಾವು ನಮ್ಮ ಎಷ್ಟೋ ಅಮೂಲ್ಯ ಆಯುಷ್ಯವನ್ನು ಏನನ್ನೂ ಮಾಡದೆಯೇ ಕಳೆದೂಬಿಡಬಹುದು.
ಪರಿಶುದ್ಧರಾಗೇ ಇರಬೇಕೆಂದು ಹಂಬಲಿಸುವರಿಗೆ ಕಡೆಗೆ ‘ಖಾಲಿ'ಯಾಗಿಯೇ ಉಳಿಯುವುದು ಹೇಗೆ ಅನಿವಾರ್ಯವಾಗುತ್ತದೆ ಎನ್ನುವುದನ್ನು ಖಲೀಲ್ ಗಿಬ್ರಾನ್ ರ ‘ಮಂಜು ಬಿಳಿಯ ಹಾಳೆಯೊಂದು ಹೀಗೆ ಹೇಳಿತು........'(Said a Sheet of Snow-white Paper.......) ಎನ್ನುವ ಕಥೆಯು ಮಾರ್ಮಿಕವಾಗಿ ತಿಳಿಸುತ್ತದೆ. ಮಹಾನ್ ದಾರ್ಶನಿಕ, ಕವಿ ಖಲೀಲ್ ಗಿಬ್ರಾನ್ ೧೯೨೦ರಲ್ಲಿ ಪ್ರಕಟಿಸಿದ ‘ಅಗ್ರಗಾಮೀ' ಅಥವಾ ‘ಮುಂದೆ ನಡೆಯುವವನು' (The Forerunner- His Parables and Poems) ಎಂಬ ಅರವತ್ನಾಲ್ಕೇ ಪುಟಗಳ ಪುಟ್ಟ ಪುಸ್ತಕದಲ್ಲಿ ಅತ್ಯಂತ ಕಿರಿದಾದದ್ದೂ, ಕಾವ್ಯಮಯವಾದದ್ದೂ ಆದ ಈ ಕಥೆ ಹೀಗಿದೆ:
‘ಮಂಜು ಬಿಳಿಯ ಹಾಳೆಯೊಂದು ಹೀಗೆ ಹೇಳಿತು: ‘ಶುದ್ಧವಾಗಿ ನಾನು ಸೃಷ್ಟಿಯಾದೆ. ಎಂದೆಂದೂ ನಾನು ಶುದ್ಧವಾಗೇ ಇರುತ್ತೇನೆ. ಕತ್ತಲು ನನ್ನನ್ನು ಮುಟ್ಟುವುದಾಗಲೀ, ಅಶುದ್ಧವಾದದ್ದು ನನ್ನನ್ನು ಸಮೀಪಿಸುವುದನ್ನಾಗಲೀ ಅನುಭವಿಸುವುದಕ್ಕಿಂತಾ ಸುಟ್ಟು ಬಿಳಿಯ ಬೂದಿಯಾದೇನು!'
ಕಾಗದ ಹೇಳುತ್ತಿದ್ದುದನ್ನು ಮಸಿಕುಡಿಕೆ ಕೇಳಿತು. ತನ್ನ ಕಪ್ಪು ಹೃದಯದಲ್ಲಿ ಅದು ನಕ್ಕಿತು. ಆದರೆ ಅದಕ್ಕೆ ಕಾಗದವನ್ನು ಸಮೀಪಿಸುವ ಧೈರ್ಯ ಬರಲಿಲ್ಲ. ಬಹು ಬಣ್ಣದ ಪೆನ್ಸಿಲ್ಲುಗಳೂ ಅದರ ಮಾತನ್ನು ಕೇಳಿದವು. ಆದರೆ ಹತ್ತಿರ ಹೋಗಲೇ ಇಲ್ಲ.
ಆ ಮಂಜು ಬಿಳಿಯ ಹಾಳೆ ಎಂದೆಂದೂ, ಉಳಿದೇ ಉಳಿಯಿತು, ಶುದ್ಧವಾಗಿ, ಶುಚಿಯಾಗಿ-ಆದರೆ ಖಾಲಿಯಾಗಿ!'
ತಮ್ಮ ‘ಖಲೀಲ್ ಗಿಬ್ರಾನ್' ಪುಸ್ತಕವನ್ನು ಪ್ರಕಟಿಸುವಾಗ ಮೊದಲ ಮಾತಿನಲ್ಲಿ ಪ್ರಭುಶಂಕರ ಅವರು ಹೀಗೆ ಹೇಳುತ್ತಾರೆ: ‘ನಾನು ಗಿಬ್ರಾನ್ನನ್ನು ಮೆಚ್ಚಿದ್ದೇನೆ ಎಂಬ ಕಾರಣದಿಂದ ಮಾತ್ರ ಅವನನ್ನು ನಾನು ಕನ್ನಡಿಗರಿಗೆ ಪರಿಚಯ ಮಾಡಿಕೊಡುತ್ತಿಲ್ಲ. ಜಗತ್ತಿನಲ್ಲಿ ಎಷ್ಟೊಂದು ವೈವಿಧ್ಯಮಯವಾದ ಚಿಂತನೆಯ ರೀತಿಗಳುಂಟು, ಗದ್ಯದ ಶೈಲಿಗಳುಂಟು ಎಂಬುದನ್ನು ನಮ್ಮ ಕನ್ನಡ ಜನ ತಿಳಿಯಬೇಕು ಎಂಬುದು ನನ್ನ ಆಶೆ....'
‘ತುಂಬಿದ ಬಟ್ಟಲು' ಎಂಬ ಅತ್ಯಂತ ಪ್ರಚಲಿತದಲ್ಲಿರುವ ಝೆನ್ ಕಥೆಯಲ್ಲಿ ಈ ರೀತಿ ಇದೆ: ‘ನಾನ್ಇನ್ ಎನ್ನುವ ಒಬ್ಬ ಜಪಾನೀ ಝೆನ್ ಗುರು ಇದ್ದರು. ಇವರಲ್ಲಿ ಆಧ್ಯಾತ್ಮಿಕ ಮಾರ್ಗದರ್ಶನವನ್ನು ಪಡೆಯಲೆಂದು ದೂರದೂರದ ಊರುಗಳಿಂದ ವಿದ್ವಾಂಸರು ಬರುತ್ತಿದ್ದರು. ಒಮ್ಮೆ ಒಬ್ಬ ಪ್ರಾಧ್ಯಾಪಕರಾಗಿ ನೂರಾರು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಕೊಡುವವರಾಗಿದ್ದ ವಿದ್ವಾಂಸರು ಇವರ ಬಳಿ ಬಂದು ಝೆನ್ ಕುರಿತು ಶಿಕ್ಷಣವನ್ನು ನೀಡುವಂತೆ ವಿನಂತಿಸಿಕೊಂಡರು. ಗುರುಗಳು ಮುಗುಳ್ನಗುತ್ತಾ ಅವರಿಗೆ ಚಹಾ ಕುಡಿಯುವಂತೆ ಹೇಳಿ, ಚಹಾ ತಂದರು. ವಿದ್ವಾಂಸರ ಮುಂದೆ ಚಹಾ ಬಟ್ಟಲನ್ನು ಇಟ್ಟು, ಅದಕ್ಕೆ ಪಾತ್ರೆಯಿಂದ ಚಹಾ ಸುರಿಯಲಾರಂಭಿಸಿದರು. ಬಟ್ಟಲಿನಲ್ಲಿ ಚಹಾ ತುಂಬಿ ಸುರಿಯಲಾರಂಭಿಸಿದರೂ ಗುರುಗಳು ಚಹಾ ಸುರಿಯುವುದನ್ನು ನಿಲ್ಲಿಸಲಿಲ್ಲ. ವಿದ್ವಾಂಸರಿಗೆ ಆಶ್ಚರ್ಯವಾಯಿತು. ‘ಗುರುಗಳೇ, ಬಟ್ಟಲಿನಲ್ಲಿ ಚಹಾ ತುಂಬಿಕೊಂಡಿದೆ. ನೀವು ಮತ್ತೆ ಸುರಿಯುತ್ತಿದ್ದರೆ ಅದು ಬಟ್ಟಲಿನೊಳಗೆ ಸೇರುವ ಬದಲು ನೆಲದ ಮೇಲೆ ಚೆಲ್ಲಿಹೋಗುತ್ತದೆ,' ಎಂದರು.
‘ಈ ಬಟ್ಟಲಿನ ಹಾಗೆಯೇ ನೀನೂ ಸಹ ನಿನ್ನದೇ ಅಭಿಪ್ರಾಯಗಳಿಂದ ತುಂಬಿಹೋಗಿದ್ದೀಯ. ಅದನ್ನೆಲ್ಲಾ ನೀನು ಹೊರಹಾಕಿ ಖಾಲಿಯಾಗುವವರಗೆ ನಾನು ಏನು ಹೇಳಿದರೂ ಅದು ನಿನ್ನೊಳಗೆ ಸೇರುವ ಬದಲು ಹೊರಗೆಲ್ಲೋ ಚೆಲ್ಲಿಹೋಗುತ್ತದೆ,' ಎಂದು ಹೇಳಿದರು ಗುರುಗಳು.
ಹೊಸತನ್ನು ಕಲಿಯಲು ನಮ್ಮ ಮನಸ್ಸು ಮಗುವಿನ ಮನಸ್ಸಿನಂತೆ ‘ಖಾಲಿ'ಯಾಗಬೇಕು. ಆದರೆ ಕಡೆತನಕ 'ಖಾಲೀ ಹಾಳೆ'ಯಂತೆ ಉಳಿಯಬಾರದು ಎಂದು ತಿಳಿಯಬಹುದಲ್ಲವೆ?

9 comments:

 1. Very nice madam. I have read some of Sushma Sindhu's posts. They are also interesting.
  Swarna

  ReplyDelete
 2. Its ur greatness madam, you read blogs and suggest us to read worthfull one. I have to read more of Sushma Sindhu. Pl. Give us the link. :-)

  ReplyDelete
 3. ಗಿಬ್ರಾನ್ ಹಾಗು ಝೆನ್ ಗುರುಗಳ ಜ್ಞಾನಮಯ ಕತೆಗಳನ್ನು ತಿಳಿಸಿದ್ದಕ್ಕಾಗಿ ಆಭಾರಿಯಾಗಿದ್ದೇನೆ.

  ReplyDelete
 4. [‘ಬರೆಯಲೆಂದೇ ಭದ್ರಪಡಿಸಿದ್ದೆ
  ಈ ಬಿಳಿಹಾಳೆಯ
  ಸಮಯ ಸಿಕ್ಕಾಗ,
  ಆದರೀಗ ಸುಕ್ಕು
  ನಿಷ್ಪ್ರಯೋಜಕ
  ಕಾಲ ಕೂಡಿಬಂದಾಗ!']
  ಪ್ರಭಾವೀ ಮತ್ತು ಅರ್ಥಪೂರ್ಣ ಸಾಲು! ಧನ್ಯವಾದ.

  ReplyDelete
 5. ಮೇಡಂ;ಬದುಕಿನ ಖಾಲಿ ಹಾಳೆ,ಖಾಲಿ ಹಾಳೆಯಾಗಿಯೇ ಉಳಿಯಬಾರದು!ಎಂತಹ ಅರ್ಥಪೂರ್ಣ ಮಾತುಗಳು!ತಪ್ಪೋ,ಒಪ್ಪೋ!ಚಿತ್ತೋ,ಮಸಿಯೋ,ಕಾಟೋ!ಬದುಕಿನ ಹಾಳೆ ಅನುಭವವೆಂಬ ಬರಹಗಳಿಂದ ತುಂಬಿರಲಿ.ನಿಮ್ಮ ಲೇಖನ ತುಂಬಾ ಇಷ್ಟವಾಯಿತು.ನಿಮ್ಮ ಬರಹಗಳು ಬದುಕನ್ನು ಇನ್ನಷ್ಟು ಅರ್ಥ ಪೂರ್ಣವಾಗಿಸುತ್ತವೆ.

  ReplyDelete
 6. ಹೊಸದನ್ನು ಕಲಿಯಲು ಮನಸ್ಸು ಖಾಲಿ ಇರಬೇಕು..ಆದರೆ ಕೊನೆಯವರೆಗೂ ಖಾಲಿ ಹಾಳೆಯ೦ತೆ ಉಳಿದು ಹೋಗಬಾರದು..ಎಷ್ಟೊ೦ದು ಒಳ್ಳೆಯ ವಾಕ್ಯ!
  ಲೇಖನ ತು೦ಬಾ ಚೆನ್ನಾಗಿದೆ.

  ReplyDelete
 7. ನಿಜವಾಗಿಯೂ , ನಿಮ್ಮ ಲೇಖನ ಓದುವಾಗ ಬಹಳ ಆನಂದ ಆಗುತ್ತದೆ ..
  ಅತ್ಯುತ್ತಮ ಪುಸ್ತಕಗಳ ಚಿಂತನ ಮಂಥನಗಳಿಗೆ ನಿಮ್ಮ "ಪ್ರತೀಕ್ಷೆ" ಸೇತುವೆಯಾಗಿದೆ ... ಹೀಗೆ ಬರೆಯುತ್ತಿರಿ ..

  ReplyDelete